Tag: celebration

  • ಹೋಳಿ ಹುಣ್ಣಿಮೆಯ ಕಾಮಣ್ಣ ಸುಡುವ ಆಚರಣೆ- 2 ಗುಂಪುಗಳ ನಡುವೆ ಘರ್ಷಣೆ

    ಹೋಳಿ ಹುಣ್ಣಿಮೆಯ ಕಾಮಣ್ಣ ಸುಡುವ ಆಚರಣೆ- 2 ಗುಂಪುಗಳ ನಡುವೆ ಘರ್ಷಣೆ

    ಗದಗ: ಹೋಳಿ ಹುಣ್ಣಿಮೆ ನಿಮಿತ್ಯ ಕಾಮಣ್ಣ ಸುಡುವ ಆಚರಣೆ ವಿಚಾರದಲ್ಲಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಗಲಾಟೆಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.

    ಈ ಬಾರಿ ಯಳವತ್ತಿ ಗ್ರಾಮದ ಎಸ್.ಸಿ. ಒಂದೇ ಕಾಲೋನಿಯಲ್ಲಿ ಎರಡು ಕಡೆ ಕಾಮಣ್ಣ ಸುಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ತಡರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು. ಇದಕ್ಕೆ ಮತ್ತೊಂದು ಬಲವಾದ ಕಾರಣ 2017 ಡಿಸೆಂಬರ್ 26 ರಂದು ನಡೆದ ಬೈ ಎಲೆಕ್ಷನ್‍ನ ಹಳೆ ವೈಷ್ಯಮ್ಯವೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ.

    ಪಕೀರಪ್ಪ ಜಿನಗಿ ಹಾಗೂ ಬಸವಣ್ಣೆಪ್ಪ ಜಿನಗಿ ನಡುವೆ ಗ್ರಾ.ಪಂ ಸದಸ್ಯತ್ವದ ಚುನಾವಣೆ ನಡೆದಿತ್ತು. ಇದರಲ್ಲಿ ಪಕೀರಪ್ಪ ಕೇವಲ ಆರು ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಈ ಹಳೆ ವೈಷ್ಯಮ್ಯದಿಂದ ಇಂದು ಕಾಮಣ್ಣನ ನೆಪದಲ್ಲಿ ಪಕೀರಪ್ಪ ಜಿನಗಿ ಎಂಬ ಗ್ರಾ.ಪಂ ಸದಸ್ಯನ ಕುಟುಂಬದ ಮೇಲೆ ಸ್ಥಳೀಯ ಬಸವಣ್ಣೆಪ್ಪ ಬೆಂಬಲಿಗರು ಹಲ್ಲೆ ಮಾಡಿರೊದಾಗಿ ಆರೋಪ ಕೇಳಿಬರುತ್ತಿದೆ.

    ಈ ಗಲಾಟೆಯಲ್ಲಿ ನಾಲ್ವರಿಗೆ ಗಾಯ ಹಾಗೂ ಸಾವಕ್ಕೆ ಎಂಬ ಓರ್ವ ಮಹಿಳೆಗೆ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊರ್ವ ವಿಕಲಾಂಗ ಚೇತನ ಮಹಿಳೆ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನ ಯಳವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿರಹಟ್ಟಿ ತಾಲೂಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಣ್ಣಪ್ಪ, ಚಂದ್ರು, ಮೈಲಾರಪ್ಪ ನಿಂಗಪ್ಪ, ಬಂಡೆಪ್ಪ, ಯಲ್ಲಪ್ಪ ಹೀಗೆ ಸುಮಾರು 10ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದೆ. ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಧಾರವಾಡದಲ್ಲಿ ಶಿವಾಜಿ ಜಯಂತಿ ಸಂಭ್ರಮಾಚರಣೆ – ಗಾಳಿಯಲ್ಲಿ ಗುಂಡು ಹಾರಿಸಿದ ಮುಖಂಡ

    ಧಾರವಾಡದಲ್ಲಿ ಶಿವಾಜಿ ಜಯಂತಿ ಸಂಭ್ರಮಾಚರಣೆ – ಗಾಳಿಯಲ್ಲಿ ಗುಂಡು ಹಾರಿಸಿದ ಮುಖಂಡ

    ಧಾರವಾಡ: ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಮರಾಠಾ ಸಮಾಜದ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಮರಾಠಾ ಕಾಲೋನಿಯ ಶಿವಾಜಿ ಪುತ್ಥಳಿ ಬಳಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ ಕದಂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮರಾಠಾ ಸಮಾಜದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಾಮನಿರ್ದೇಶಿತ ಪಾಲಿಕೆ ಸದಸ್ಯರಾಗಿರುವ ಮಂಜುನಾಥ್ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ತಮ್ಮ ರಿವಾಲ್ವರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

    ಈ ವೇಳೆ ಪಾಲಿಕೆ ಸದಸ್ಯರಾದ ರಾಜು ಅಂಬೋರೆ ಹಾಗೂ ಅಲ್ತಾಫ್ ಕಿತ್ತೂರ ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಮಾಧ್ಯಮಗಳು ಪ್ರಶ್ನಿಸಿದರೆ, ಮರಾಠಾ ಮಂಡಳಿಯವರು ಪ್ರತಿ ವರ್ಷ ಶಿವಾಜಿ ಜಯಂತಿಗೆ ಈ ರೀತಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಅವರು ಇಂದು ಕೂಡಾ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಉತ್ತರಿಸಿದ್ದಾರೆ.

  • ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ಹುಬ್ಬಳ್ಳಿ: ನಮ್ಮ ದೇಶ ಹಾಗೂ ಸಂಸ್ಕೃತಿಗೆ ವಿರುದ್ಧವಾಗಿರುವ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲು ಬಿಡುವುದಿಲ್ಲ ಎಂದು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಎಚ್ವರಿಕೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪ್ರೇಮಿಗಳ ದಿನದ ನೆಪದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರೇಮಿಗಳ ದಿನಾಚರಣೆ ಭಾರತೀಯ ಸಂಸ್ಕೃತಿ ವಿರೋಧಿಯಾಗಿದೆ ಎಂದು ಹೇಳಿದರು.

    ನಮ್ಮ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಮಾರು ಹೋಗಬಾರದು ಎಂದ ಅವರು ಪ್ರೇಮಿ ದಿನಾಚರಣೆ ನೆಪದಲ್ಲಿ ಪಾರ್ಕ್, ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್ ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಂತವುಗಳು ಕಂಡು ಬಂದರೆ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನ ನೀಡಿದರು.

    ಪೊಲೀಸ್ ಇಲಾಖೆ ಇಂತಹಗಳಿಗೆ ಅವಕಾಶ ನೀಡಬಾರದು ಎಂದು ವಿಠಲ್ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಅವರ ಪೋಷಕರಿಗೆ ಮಾಹಿತಿ ನೀಡಿ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.

     

  • ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ಚಿಕ್ಕಬಳ್ಳಾಪುರ: ಜಿಲ್ಲೆಗೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ದಶಮಾನೋತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ವೇತನದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಲು ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿದೆ.

    ಫೆಬ್ರವರಿ 2, 3 ಹಾಗೂ 4 ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್.ಎಂ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ದಶಮಾನೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಆದರೆ ಈ ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಿಕೊಳ್ಳುತ್ತಿರುವುದರಿಂದ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಕಾರ್ಯಕ್ರಮ ಮಾಡೋಕೆ ಹಣದ ಕೊರತೆ ಇದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ.

    ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷಗಳಾಗಿವೆ. ದಶಮಾನೋತ್ಸವ ಆಚರಣೆಗೆ ಸ್ವತಃ ರಾಜ್ಯ ಸರ್ಕಾರ ಸೂಕ್ತ ಅನುದಾನ ನೀಡಬೇಕಿತ್ತು. ಆದರೆ ಜಿಲ್ಲೆಯಲ್ಲಿ ಪ್ರಭಾವಿ ಮೂರು ಜನ ಕಾಂಗ್ರೆಸ್ ಶಾಸಕರಿದ್ದರೂ ಅನುದಾನ ತರಲು ಸಾಧ್ಯವಾಗಿಲ್ಲ. ಹೀಗಾಗಿ ದಶಮಾನೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ, ಎಲ್ಲಾ ರೀತಿಯ ಸರ್ಕಾರಿ ನೌಕರರ ವೇತನದಲ್ಲಿ ತಲಾ 1000-2000 ರೂ. ಕೊಡಿ ಎಂದು ನೌಕರರ ಸಂಘಗಳ ಜೊತೆ ಸಭೆಗಳನ್ನು ನಡೆಸಿದ್ದಾರೆ.

    ಜಿಲ್ಲೆಯ ಸರ್ಕಾರಿ ನೌಕರರು ಮೊದಲೇ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಇಂಥದೊಂದು ವಿವಾದಾತ್ಮಕ ನಿರ್ಧಾರವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾಧಿಕಾರಿಯ ಒತ್ತಡಕ್ಕೆ ಮಣಿದ ನೌಕರರು ಕೊನೆಗೆ ಒಲ್ಲದ ಮನಸ್ಸಿನಿಂದಲೇ 500 ರೂಪಾಯಿ ನೀಡಲು ಒಪ್ಪಿದ್ದಾರೆ.

    ದಶಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅನುದಾನ ಮಂಜೂರು ಮಾಡಿಸಿಕೊಳ್ಳೊದನ್ನು ಬಿಟ್ಟು ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಿಕೊಳ್ಳಲು ಮುಂದಾಗಿದೆ.

  • ವಿವಾದಕ್ಕೆ ಕಾರಣವಾಯ್ತು ಮಂಗ್ಳೂರು ಕಾಲೇಜು ವಿದ್ಯಾರ್ಥಿನಿಯರ ಡ್ಯಾನ್ಸ್: ವಿಡಿಯೋ ನೋಡಿ

    ವಿವಾದಕ್ಕೆ ಕಾರಣವಾಯ್ತು ಮಂಗ್ಳೂರು ಕಾಲೇಜು ವಿದ್ಯಾರ್ಥಿನಿಯರ ಡ್ಯಾನ್ಸ್: ವಿಡಿಯೋ ನೋಡಿ

    ಮಂಗಳೂರು: ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಸ್ತೆ ತಡೆದು ಕಾಲೇಜು ಹುಡುಗಿಯರು ಕುಣಿದು ಕುಪ್ಪಳಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಶುಕ್ರವಾರ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜಿನ ವಾರ್ಷಿಕೋತ್ಸವ ನಡೆದಿತ್ತು. ಈ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿನಿಯರು ಪೂರ್ತಿಯಾಗಿ ರಸ್ತೆ ಮಧ್ಯೆ ಬಸ್, ಇನ್ನಿತರ ವಾಹನಗಳ ಸಂಚಾರ ತಡೆದು ನೃತ್ಯ ಮಾಡಿದ್ದಾರೆ.

    ಸಾಮಾನ್ಯವಾಗಿ ರಸ್ತೆ ತಡೆದು ಪ್ರತಿಭಟಿಸುವುದಕ್ಕೆ ಅವಕಾಶ ಇಲ್ಲ. 10 ನಿಮಿಷ ಹೆಚ್ಚು ಕಾಲ ರಸ್ತೆ ತಡೆದರೆ ಪೊಲೀಸರು ಬಂಧಿಸುತ್ತಾರೆ. ಅಂಥದ್ರಲ್ಲಿ ಕಾಲೇಜು ಹುಡುಗಿಯರ ಫ್ಲಾಶ್ ಮಾಬ್ ಗೆ ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಅದರಲ್ಲಿಯೂ ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಈ ಕಾಲೇಜು ಕನ್ಯೆಯರ ಡಿಜೆ ಕುಣಿತ ಸಂಜೆವರೆಗೂ ಮುಂದುವರಿದಿತ್ತು. ಕಾಲೇಜು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕ ಜೆ.ಆರ್ ಲೋಬೊ ಕೃಪೆಯಿಂದ ಕಾಲೇಜಿಗೆ ಈ ಅವಕಾಶ ಸಿಕ್ಕಿದ್ದಿರಬೇಕು ಎನ್ನುವ ಮಾತು ಕೇಳಿಬರುತ್ತಿದೆ.

    ರಸ್ತೆ ಮಧ್ಯೆ ಡ್ಯಾನ್ಸ್ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    https://youtu.be/EnTUX8hOkvo

  • ನೋ ಪ್ಯಾಂಟ್ಸ್ ಡೇ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಫೋಟೋಗಳು

    ನೋ ಪ್ಯಾಂಟ್ಸ್ ಡೇ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಫೋಟೋಗಳು

    ನ್ಯೂಯಾರ್ಕ್: ಜಗತ್ತಿನಲ್ಲಿ ಯಾವ ಯಾವ ದಿನಗಳನ್ನು ಆಚರಣೆ ಮಾಡುತ್ತಾರೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ನ್ಯೂಯಾರ್ಕ್‍ನಲ್ಲಿ ಆಚರಿಸುವ `ನೋ ಪ್ಯಾಂಟ್ಸ್ ಡೇ’ ಆಗಿದೆ. ಈಗ ಈ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಈ ದೇಶದಲ್ಲಿ ಪ್ರತಿವರ್ಷ ಜನವರಿ 7 ರಂದು ನೋ ಪ್ಯಾಂಟ್ಸ್ ಡೇಯನ್ನು ಆಚರಣೆ ಮಾಡುತ್ತಾರೆ. ಅಂದರೆ ಜನವರಿ 7 ಭಾನುವಾರದಂದು ಯಾರೋಬ್ಬರು ಪ್ಯಾಂಟ್  ಧರಿಸದೇ ಮೆಟ್ರೋಗಳಲ್ಲಿ ಓಡಾಡಬೇಕು. ಸಾವಿರಾರು ಜನರು ಇಲ್ಲಿ 17 ಡಿಗ್ರಿ ಉಷ್ಣಾಂಶ ಇದ್ದರೂ ಪ್ಯಾಂಟ್ ಧರಿಸದೆ ಓಡಾಡುತ್ತಾರೆ.

    2018 ಕ್ಕೆ ಈ ಆಚರಣೆಗೆ 17ನೇ ವಾರ್ಷಿಕೋತ್ಸವಾಗಿದ್ದು, ಇಂತಹದೊಂದು ಆಚರಣೆ 2002ರಲ್ಲಿ ಪ್ರಾರಂಭವಾಗಿತ್ತು. 2002 ರಲ್ಲಿ ಕೇವಲ ಏಳು ಜನರು ಈ ಆಚರಣೆಯಲ್ಲಿ ಭಾಗಿಯಾಗಿದ್ದರು. ಇಂದು ವಿಶ್ವದಾದ್ಯಂತ 60 ನಗರಗಳಲ್ಲಿ ಈ ದಿನವನ್ನು ಗುರುತಿಸಲಾಗಿದೆ. ನ್ಯೂಯಾರ್ಕ್ ನಗರದಲ್ಲಿ ಪ್ರತಿ ಜನವರಿ ತಿಂಗಳಿನಲ್ಲಿ ಮಾಡುವ ವಾರ್ಷಿಕ ಕಾರ್ಯಕ್ರಮವಾಗಿದೆ. ದಿನಾಂಕವು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ ಹಾಗೂ ಡಿಸೆಂಬರ್ ಆರಂಭದಲ್ಲಿ ಆಚರಿಸುವ ದಿನಾಂಕವನ್ನು ತಿಳಿಸಲಾಗುತ್ತದೆ.

    ಪ್ಯಾಂಟ್ ಧರಿಸದೆ ಇರುವವರಿಗೆ ಮೆಟ್ರೋ ನಿಲ್ದಾಣಗಳಲ್ಲಿ ಪ್ರತ್ಯೇಕವಾಗಿ ಮಾರ್ಗವನ್ನು ನಿಯೋಜನೆ ಮಾಡಲಾಗಿರುತ್ತದೆ. ಚಳಿಗಾಲದ ಕೋಟ್, ಟೋಪಿ, ಇತರೆ ವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಪ್ಯಾಂಟ್ ಮಾತ್ರ ಧರಿಸುವುದಿಲ್ಲ.


    ಇತಿಹಾಸ?
    ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಕ್ಲಬ್‍ವೊಂದರಲ್ಲಿ ನೈಟ್‍ವುಡ್ ಆಫ್ ಬುಹ್ ಎಂಬ ಹೆಸರಿನ ಮೂಲಕ ಈ ಆಚರಣೆಯನ್ನು ಮೇ ಮೊದಲ ಶುಕ್ರವಾರದಂದು ಆರಂಭಿಸಲಾಗಿತ್ತು. ಈ ಆಚರಣೆಯನ್ನು ಒಂದು ಹಾಸ್ಯಮಯ ಸಾಹಸ ಎಂದು ಭಾವಿಸಲಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಈ ಆಚರಣೆ ಮಾಡುವವರ ಪ್ರಮಾಣ ಹೆಚ್ಚಾಗಿದ್ದು, ಈಗ ಕೆನಡಾ, ಫ್ರಾನ್ಸ್, ಸ್ವೀಡನ್, ಆಸ್ಟ್ರೇಲಿಯಾ, ಫಿನ್ಲೆಂಡ್ ಮತ್ತು ಇಂಗ್ಲೆಂಡ್‍ನಲ್ಲಿ ಆಚರಿಸಲಾಗುತ್ತದೆ.

  • ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

    ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

    ಬೆಂಗಳೂರು: ಶಾಂತಿ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಆಚರಿಸಲು ರಾಜ್ಯ ಸರ್ಕಾರ ಮರೆತಿದೆ ಅಂತ ಬಿಜೆಪಿ ನಾಯಕ ಸಿಟಿ ರವಿ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಎಲ್ಲೂ ಅಧಿಕೃತವಾಗಿ ವಿವೇಕಾನಂದ ಹುಟ್ಟುಹಬ್ಬ ಆಚರಣೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಯಾವ ಇಲಾಖೆಗಳಿಂದಲೂ ವಿವೇಕಾನಂದರ ಜಯಂತಿ ಆಚರಣೆ ಇಲ್ಲ. ಟಿಪ್ಪು ಜಯಂತಿ ಹಠ ಮಾಡಿ ಮಾಡೋ ಸರ್ಕಾರಕ್ಕೆ ವಿವೇಕಾನಂದರ ಜಯಂತಿ ಮಾಡೋದಕ್ಕೆ ಅಸಡ್ಡೆನಾ? ಕಾಂಗ್ರೆಸ್ ಸರ್ಕಾರ ವಿವೇಕಾನಂದರ ವಿಚಾರದಲ್ಲೂ ರಾಜಕೀಯ ಮಾಡ್ತಿದೆಯಾ ಅಂತ ಪ್ರಶ್ನಿಸಿದ್ದಾರೆ.

    ಎಲ್ಲಾ ಜಯಂತಿಗಳನ್ನ ಘೋಷಣೆ ಮಾಡೋ ಸಿಎಂ ಸಿದ್ದರಾಮಯ್ಯಗೆ ವಿವೇಕಾನಂದರ ಜಯಂತಿ ಮಾಡೋಕೆ ಕಷ್ಟವಾಯ್ತು. ಒಟ್ಟಿನಲ್ಲಿ ರಾಜ್ಯ ಸರ್ಕಾರ ವಿವೇಕನಂದರನ್ನ ಮರೆತು ಹೋಯ್ತು ಅಂತ ಬಿಜೆಪಿ ಕಿಡಿಕಾರಿದೆ.

    ಬಿಜೆಪಿ ವತಿಯಿಂದ ವಿವೇಕಾನಂದ ಪಾರ್ಕ್ ಗಿರಿನಗರ ವಾರ್ಡ್ ನಂಬರ್ 162ರ ವಿವೇಕಾನಂದ ಪಾರ್ಕಿನಲ್ಲಿ ಸ್ವಾಮಿ ವಿವೇಕಾನಂದರ 155ನೇ ಜಯಂತೋತ್ಸವ ಆಚರಣೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹಾಗೂ ಬಸವನಗುಡಿ ಕ್ಷೇತ್ರ ಶಾಸಕ ರವಿಸುಬ್ರಮಣ್ಯ ಸಹ ಭಾಗಿಯಾಗಿದ್ದಾರೆ.

  • ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಚಂಢೀಘಢ: ಮದುವೆ ಮನೆಯಲ್ಲಿ ಸಂಭ್ರಮಾಚರಣೆ ನಡೆಸುವಾಗ ಗಾಳಿಯಲ್ಲಿ ಹಾರಿಸಿದ ಗುಂಡು ಅಚಾನಕ್ ಆಗಿ ಮಧುಮಗನಿಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವರ ಸಾವನ್ನಪ್ಪಿದ್ದ ಘಟನೆ ಶನಿವಾರ ಹರಿಯಾಣಾದ ಕೈತಲ್ ನಲ್ಲಿ ನಡೆದಿದೆ.

    ವಿಕ್ರಮ್ ವೋಹರಾ (36) ಸಾವನ್ನಪ್ಪಿದ್ದ ವರ. ವಿಕ್ರಮ್ 12 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ವಿಕ್ರಮ್ ಸಂಗೀತ್ ಕಾರ್ಯಕ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ಕುಣಿಯುತ್ತಿದ್ದರು. ಆಗ ಆತನ ಕುಟುಂಬದವರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ವರನಿಗೆ ತಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಿಕ್ರಮ್ ಸಾವನ್ನಪ್ಪಿದ್ದಾರೆ.

    ವರನ ಸಂಬಂಧಿ ನವತೇಜ್ ಸಿಂಗ್ ಗೆ ಕೂಡ ಗಾಯವಾಗಿದ್ದು ಅವರನ್ನು ಚಂಢೀಘಢ್‍ನ ಪಿಜಿಐಗೆ ರವಾನಿಸಲಾಗಿದೆ.

    ಘಟನೆ ಬಗ್ಗೆ ಮಾತನಾಡಿದ ಕೈತಲ್ ನ ಎಸ್‍ಪಿ ಅಸ್ತಾ ಮೋದಿ, ನಾವು ಈ ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದೇವೆ ಹಾಗೂ ಗುಂಡು ಹಾರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರ್ಯಕ್ರಮದ ವಿಡಿಯೋಗಳನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 304 ಹಾಗೂ ಸೆಕ್ಷನ್ 308 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ವರನ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ

    ಭಾನುವಾರದಂದು ವಿಕ್ರಮ್ ಮದುವೆ ನಡೆಯಬೇಕಿತ್ತು.

  • ಗದಗದಲ್ಲಿ ಹೊಸ ವರ್ಷಕ್ಕೆ ಪಟಾಕಿ- ಚೆಲ್ಲಾಪಿಲ್ಲಿಯಾಗಿ ಓಡಿದ ಜನ

    ಗದಗದಲ್ಲಿ ಹೊಸ ವರ್ಷಕ್ಕೆ ಪಟಾಕಿ- ಚೆಲ್ಲಾಪಿಲ್ಲಿಯಾಗಿ ಓಡಿದ ಜನ

    ಗದಗ: ಈ ಬಾರಿ ಬಹಳ ಅದ್ಧೂರಿಯಾಗಿ ಹೊಸವರ್ಷವನ್ನು ಆಚರಿಸಲಾಯಿತು. ಆದರೆ 2017 ಕಳೆದು 2018 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಜನರಲ್ಲಿ ಭಯ ಮೂಡಿತ್ತು.

    ನಗರದ ಶಿವರತ್ನ ಪ್ಯಾಲೇಸ್ ಹೋಟೆಲ್ ಒಂದರಲ್ಲಿ ನ್ಯೂ ಇಯರ್ ಆಚರಣೆ ಹಮ್ಮಿಕೊಳ್ಳಲಾಗಿತ್ತು. ವೈಭವದ ಹೊಸ ವರ್ಷ ಗಂಟೆ 12 ಆಗುತ್ತಿದ್ದಂತೆ ಪಟಾಕಿ ಸಿಡಿಸುವ ವೇಳೆ ಆ ಕಲರ್ 120 ರ ಸರದಿ ಪಟಾಕಿಗಳು ಮೇಲೆ ಸಿಡಿಯುವ ಬದಲು ಜನರ ಮಧ್ಯೆ ಸಿಡಿಯಲಾರಂಭಿಸಿದವು. ಇದರಿಂದ ಜನ ಕಂಗಾಲಾಗಿ ಅಲ್ಲಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ.

    ನೂರಾರು ಜನ ಎದ್ನೋ ಬಿದ್ನೋ ಅಂತ ಒಡಲಾರಂಭಿಸಿದ್ದು, ಹೊಸ ವರ್ಷದ ಆರಂಭದಲ್ಲೇ ಕೆಲವರು ಆತಂಕ, ಭಯಕ್ಕೆ ಒಳಗಾಗಿರುವುದು ಮರೆಯದ ನೆನಪಾಗಿದೆ. ಕೆಲವರಿಗೆ ವರ್ಷದ ಆರಂಭದ ಕ್ಷಣದಲ್ಲೇ ಹೀಗಾದರೆ ವರ್ಷದ ಪೂರ್ತಿ ಹೆಗಪ್ಪ ಎಂಬ ಚಿಂತೆ ಮನೆಮಾಡಿದೆ. ಮ್ಯೂಜಿಕ್ ಗೆ ತಕ್ಕಂತೆ ಸ್ಟೆಪ್ ಹಾಕುವವರ ಹೆಜ್ಜೆ ತಪ್ಪುವಂತೆ ಪಟಾಕಿ ಮಾಡಿರುವುದು ವಿಪರ್ಯಾಸ ಸಂಗತಿಯಾಗಿದೆ.

  • ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    – ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ 2018ಕ್ಕೆ ಸ್ವಾಗತ

    ಬೆಂಗಳೂರು: ಇಂದು ಹೊಸ ವರ್ಷಕ್ಕೆ ಇಡೀ ಭಾರತ ಕಾಲಿಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದಿಂದಲೇ ಜನ 2018ನ್ನು ಬರಮಾಡಿಕೊಂಡಿದ್ದಾರೆ.

    ನಗರದ ಪ್ರಮುಖ ರಸ್ತೆಗಳಾದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಸಂಭ್ರಮ ಮನೆಮಾಡಿತ್ತು. ರಾತ್ರಿ ಸುಮಾರು 10.30 ಯಿಂದಲೇ ಜನ ಬ್ರಿಗೇಡ್ ರೋಡ್, ಎಂಜಿ ರೋಡ್‍ಗೆ ಆಗಮಿಸಿ ಭರ್ಜರಿ ಡ್ಯಾನ್ಸ್ ನಲ್ಲಿ ತೊಡಗಿದ್ದರು. ಡಿಜೆ ಸಾಂಗ್‍ಗಳಿಗೆ ಮಸ್ತಿ ಮಾಡಿದ ಜನ 2017ಕ್ಕೆ ವಿದಾಯ ಹೇಳಿ 2018ನ್ನು ಸ್ವಾಗತಿಸಿದರು. ಸಾವಿರಾರು ಜನ ಹೊಸ ವರ್ಷದ ಅಲೆಯಲ್ಲಿ ತೇಲಿಹೋಗಿದ್ದರು.

    ಸಿಲಿಕಾನ್ ಸಿಟಿಯ ಸೆಂಟರ್ ಪ್ಲೇಸ್‍ನಲ್ಲೊಂದಾದ ಕೆ.ಆರ್ ಮಾರ್ಕೆಟ್‍ನಲ್ಲಿ ಹೊಸವರ್ಷವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಭಾರತ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಯುವ ಜನತೆಗೆ ಮಾದರಿಯಾಗೋ ರೀತಿಯಲ್ಲಿ ಹೊಸವರ್ಷವನ್ನು ಆಚರಿಸಿದ್ದಾರೆ. ಕೆ.ಆರ್ ಮಾರ್ಕೆಟ್, ವಿವಿ ಪುರ, ಜೆಪಿ ನಗರದಲ್ಲಿ ನಿರಾಶ್ರಿತರಿಗೆ ತಿಂಡಿ ಹಾಗೂ ಹೊದಿಕೆಯನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಚಳಿಯಲ್ಲಿ ಬೀದಿಯಲ್ಲೇ ಮಲಗಿರುವವರಿಗೆ ಹೊದಿಕೆ, ತಿಂಡಿ ನೀಡಿ ಹೊಸ ವರ್ಷಾಚರಣೆಯಲ್ಲೂ ಮಾನವೀಯತೆ ಮೆರೆದಿದ್ದಾರೆ.

    ಇನ್ನೂ ಮಂಡ್ಯ, ರಾಯಚೂರು, ಚಿತ್ರದುರ್ಗ, ಉಡುಪಿ, ಧಾರವಾಡ ಸೇರಿದಂತೆ ವಯೋಮಿತಿ ಇಲ್ಲದೆ ಕುಣಿದು, ಕುಪ್ಪಳಿಸಿ ರಾಜ್ಯದೆಲ್ಲೆಡೆ ವಿವಿಧ ರೀತಿಯಲ್ಲಿ ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರ ಮಾಡಿಕೊಂಡಿದ್ದಾರೆ.