Tag: celebration

  • ನಾನು ದೇವರನ್ನು ನಂಬಲು ಅವಳೇ ಕಾರಣ, ಅವಳು ಸ್ವರ್ಗದಿಂದ ಸಿಕ್ಕಿರೋ ಉಡುಗೊರೆ: ಸನ್ನಿ ಲಿಯೋನ್

    ನಾನು ದೇವರನ್ನು ನಂಬಲು ಅವಳೇ ಕಾರಣ, ಅವಳು ಸ್ವರ್ಗದಿಂದ ಸಿಕ್ಕಿರೋ ಉಡುಗೊರೆ: ಸನ್ನಿ ಲಿಯೋನ್

    ಮುಂಬೈ: ನಾನು ದೇವರನ್ನು ನಂಬುತ್ತೇನೆ ಎಂದರೆ ಅದಕ್ಕೆ ಅವಳೇ ಕಾರಣ. ನಮಗೆ ಆಕೆ ಸ್ವರ್ಗದಿಂದ ಸಿಕ್ಕಿರುವ ಉಡುಗೊರೆ ಎಂದು ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ತಮ್ಮ ಮಗಳ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಸನ್ನಿ ಲಿಯೋನ್ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಸನ್ನಿ ಅವರ ಮಗಳು ನಿಶಾ ಕೌರ್ ವೆಬ್ಬರ್ ತನ್ನ ತಂದೆ ತಾಯಿಯ ಹಣೆಗೆ ಕುಂಕುಮ ಹಚ್ಚುವ ಫೋಟೋವನ್ನು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ತಮ್ಮ ಮಗಳು ಹಣೆಗೆ ಕುಂಕುಮ ಹಚ್ಚುತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಅದಕ್ಕೆ, “ನಾನು ದೇವರನ್ನು ನಂಬುತ್ತೇನೆ ಎಂದರೆ ಅದಕ್ಕೆ ಆಕೆಯೇ ಕಾರಣ. ನಮ್ಮ ಜೀವನದಲ್ಲಿ ಆಕೆಯನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ. ಆಕೆ ನಮಗೆ ಮುಟ್ಟಿದ್ದರೆ ಸ್ವತಃ ದೇವರೇ ತಮ್ಮ ಕೈಯಿಂದ ನಮ್ಮ ತಲೆ ಮುಟ್ಟಿ ಆಶೀರ್ವಾದ ಮಾಡಿದಂತೆ ಆಗುತ್ತದೆ. ನಿಶಾ ಕೌರ್ ವೆಬ್ಬರ್ ನಮಗೆ ಸ್ವರ್ಗದಿಂದ ಸಿಕ್ಕಿರುವ ಉಡುಗೊರೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸನ್ನಿ ಲಿಯೋನ್ ಹಾಗೂ ಅವರ ಕುಟುಂಬದವರು ಇತ್ತೀಚೆಗೆ ಮುಂಬೈನಲ್ಲಿರುವ ತನ್ನ ಹೊಸ ಮನೆಗೆ ಶಿಫ್ಟ್ ಆಗಿದ್ದರು. ತಮ್ಮ ಹೊಸ ಮನೆಯಲ್ಲಿ ಸನ್ನಿ ಲಿಯೋನ್ ಮೊದಲ ಗಣೇಶ ಹಬ್ಬವನ್ನು ಕುಟುಂಬದ ಜೊತೆ ಆಚರಿಸಿದ್ದಾರೆ. ಗಣೇಶ ಹಬ್ಬದಲ್ಲಿ ಸನ್ನಿ ಲಿಯೋನ್ ಹಾಗೂ ಅವರ ಮಗಳು ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಅಲ್ಲದೇ ಈ ಪೋಸ್ಟ್ ನಲ್ಲಿ ಸನ್ನಿ ಲಿಯೋನ್ ಅವರ ಅವಳಿ ಮಕ್ಕಳಲ್ಲಿ ಒಂದು ಮಗು ಕೂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/SunnyLeone/status/1040584783666049025

  • ಗಣಪತಿಯ ಆಕಾರದಲ್ಲಿದೆ ಅದ್ಭುತ ಕಲ್ಪನೆ! – ದೇಹ ಯಾವ ಸಂಕೇತಕ್ಕೆ ಸೂಚಕವಾಗಿದೆ?

    ಗಣಪತಿಯ ಆಕಾರದಲ್ಲಿದೆ ಅದ್ಭುತ ಕಲ್ಪನೆ! – ದೇಹ ಯಾವ ಸಂಕೇತಕ್ಕೆ ಸೂಚಕವಾಗಿದೆ?

    ಗಣಪತಿ ಆಕಾರದಲ್ಲಿ ಅನೇಕ ಅದ್ಭುತ ಕಲ್ಪನೆ ಅಡಗಿಕೊಂಡಿವೆ. ಅವನ ಮುಖ, ದೇಹ, ಆಕೃತಿ ಹಾಗೂ ವಾಹನ ವಿಶೇಷ ನಾಮಗಳನ್ನು ತಂದುಕೊಟ್ಟಿದೆ. ಅಲ್ಲದೆ ಅವು ಅನೇಕ ಸಂಕೇತಗಳ ಸೂಚಕವಾಗಿವೆ. ಅವನ ದೇಹವನ್ನು ಏಕದಂತ, ವಕ್ರತುಂಡ, ಶೂರ್ಪಕರ್ಣ, ಮಹಾಕಾಯ, ಮೊದಕ ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ.

    ದೊಡ್ಡ ತಲೆಯುಳ್ಳ ಗಣಪತಿಯನ್ನು ಪೂಜಿಸುವವರು ಬುದ್ಧಿವಂತರಾಗುತ್ತಾರೆ. ಆನೆಯ ತಲೆಯಲ್ಲಿ ಜ್ಞಾನೇಂದ್ರಿಯಗಳ ಜೊತೆಗೆ ಕರ್ಮೇಂದ್ರಿಯ ಸೂಚಿಸುವ ಸೊಂಡಿಲು ಕೂಡಾ ಇದೆ. ಗಣಪತಿಯ ಏಕದಂತವು ಏಕಾಗ್ರತೆಯ ಹಾಗೂ ಅದ್ವೈತದ ಸಂಕೇತವಾಗಿದೆ. ಆನೆಯ ಮುಖವಿರುವ ಗಣಪತಿ, ಡೊಂಕಾದ ಸೊಂಡಿಲನ್ನು ಹೊಂದಿದ್ದಾನೆ. ಇದು ಓಂಕಾರ ಪ್ರತೀಕವಾಗಿದ್ದು, ಅವನಿಗೆ `ವಕ್ರತುಂಡ’ ಎನ್ನುವ ಹೆಸರು ಬಂದಿದೆ. ಜೊತೆಗೆ ಆನೆಯ ಕಿವಿಗಳನ್ನು ಗಣಪತಿ ಹೊಂದಿದ್ದು ಹೀಗಾಗಿ `ಶೂರ್ಪಕರ್ಣ’ ಎನ್ನಲಾಗುತ್ತದೆ. ಶೂರ್ಪಕರ್ಣ ಎಂದರೆ ಮೊರದಂತಹಾ ಕಿವಿ ಹೊಂದಿರುವವ. ಇವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿರು ಸತ್ಯಾಂಶವನ್ನು ಮಾತ್ರ ಗ್ರಹಿಸುತ್ತಾರೆ. ಹೀಗೆ ಪ್ರತಿಯೊಬ್ಬರು ಇರಬೇಕು ಎನ್ನುವುದು ಗಣಪನ ಕಿವಿಗಳು ಸೂಚಿಸುತ್ತವೆ.

    ಸಮಾಜದ ಆಗು ಹೋಗುಗಳನ್ನು ನಾವು ಸೂಕ್ಷ್ಮ ಗಮನಿಸಬೇಕು. ಬಳಿಕ ಅದನ್ನು ಪರಿಶೀಲಿಸಿ ಮುಂದುವರಿಯಬೇಕು ಎಂಬುದನ್ನು ಗಣಪತಿಯ ಚಿಕ್ಕಕಣ್ಣು ತಿಳಿ ಹೇಳುತ್ತವೆ. `ಮಹಾಕಾಯ’ ಅಂದರೆ ದೊಡ್ಡ ಹೊಟ್ಟೆಯವ. ಗಣಪತಿಯ ದೊಡ್ಡ ಹೊಟ್ಟೆ ಬ್ರಹ್ಮಾಂಡ ಸಂಕೇತ. ಇನ್ನು ಅವನ ಹೊಟ್ಟೆಗೆ ಸುತ್ತಿಕೊಂಡಿರುವ ಸರ್ಪವು ಬ್ರಹ್ಮಾಂಡವನ್ನು ಹೊತ್ತಿರುವ ಆದಿಶೇಷ, ಅಲ್ಲದೇ ಇದನ್ನು ಕುಂಡಲಿನಿ ಶಕ್ತಿಯ ಎಂತಲೂ ಕರೆಯುತ್ತಾರೆ. ಗಣಪತಿ ಕೈಯಲ್ಲಿರುವ ಪಾಶ, ಅಂಕುಶಗಳು ಮನುಷ್ಯನ ರಾಗ ದ್ವೇಷಗಳನ್ನು ನಿಯಂತ್ರಿಸುವ ಸಾಧನಗಳೆಂದು ಪುರಾಣದಲ್ಲಿ ತಿಳಿಸಲಾಗಿದೆ.

    ಗಣಪತಿಗೆ ಮೋದಕ ಪ್ರಿಯ ಭಕ್ಷ, ಮೋದ, ಪ್ರಮೋದ ಹಾಗೂ ಆನಂದ ಇವು ಪರ್ಯಾಯ ಪದಗಳು. ಅವನ ವಾಹನವಾದ ಇಲಿಯು ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳ ಸಂಕೇತವಾಗಿದೆ. ಇವುಗಳ ಮೇಲೆ ಹಿಡಿತ ಸಾಧಿಸಿದ್ದೇನೆ ಎಂದು ಇಲಿಯನ್ನು ಏರಿ ಕುಳಿತಿರುತ್ತಾನೆ. ಇನ್ನು ಗಣಪತಿಗೆ ಸಿದ್ಧಿ-ಬುದ್ಧಿ ಎಂಬವರು ಪತ್ನಿಯರು. ಇನ್ನು ಲಾಭ, ಕ್ಷೇಮ ಮಕ್ಕಳು. ಬುದ್ಧಿ ಸರಿಯಾಗಿದ್ದರೆ ಎಲ್ಲ ಕ್ಷೇತ್ರದಲ್ಲೂ ಸಿದ್ಧಿ ಖಚಿತ ಎಂದು ಸಿದ್ಧಿ ವಿನಾಯಕ ತಿಳಿಸುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕರ್ನಾಟಕದಲ್ಲಿರೋ 7 ಪ್ರಸಿದ್ಧ ಗಣಪತಿ ದೇವಾಲಯಗಳು – ಸ್ಥಳದ ಹಿನ್ನೆಲೆ ಏನು?

    ಕರ್ನಾಟಕದಲ್ಲಿರೋ 7 ಪ್ರಸಿದ್ಧ ಗಣಪತಿ ದೇವಾಲಯಗಳು – ಸ್ಥಳದ ಹಿನ್ನೆಲೆ ಏನು?

    ನಾಗರಪಂಚಮಿಯ ಬಳಿಕ ದೇಶದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಯಾವುದೇ ಶುಭ ಕಾರ್ಯ ಆಗಲಿ, ಅದು ಗಣೇಶನ ಪೂಜೆಯೊಂದಿಗೆ ಆರಂಭವಾಗುತ್ತದೆ. ಗಣೇಶನ ಪೂಜೆ ಮಾಡದೇ ಅದು ಸಫಲವಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಹೀಗಾಗಿ ಗಣೇಶನ ಧಾರ್ಮಿಕ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ. ಹೀಗಾಗಿ ಕರ್ನಾಟಕದ ಪ್ರಮುಖ ಗಣಪತಿ ದೇವಾಲಯಗಳ ಮಾಹಿತಿ ಇಲ್ಲಿದೆ.

    ದೊಡ್ಡ ಗಣಪತಿ: ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿಯಲ್ಲಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆ. ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂ ಉದ್ಭವ ಗಣಪ ಎಂತಲೂ ಹೇಳುತ್ತಾರೆ.

    ಹಿನ್ನೆಲೆ: ಸುಮಾರು 450 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು 1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ, ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ನಿರ್ಮಿಸಿದ್ದ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ದೇವಾಲಯವನ್ನು ತನ್ನ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಸೇರಿಸಿದೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

    ಶರವು ಮಹಾಗಣಪತಿ: ಮಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಶರವು ಗಣಪತಿ ದೇವಾಲಯವು ಒಂದಾಗಿದೆ. ಈ ದೇವಾಲಯವನ್ನು ತುಳುನಾಡಿನ ರಾಜ ವೀರಬಾಹು ಕಟ್ಟಿಸಿದ್ದಾನೆ. ಈ ದೇವಾಲಯ ನಿರ್ಮಾಣದ ಹಿಂದೆ ಒಂದು ಕಥೆಯಿದೆ. ಇಲ್ಲಿರುವ ಗಣೇಶ ಸ್ವಯಂ ಉದ್ಭವವಾಗಿದೆ ಹಾಗೂ ಈ ಗಣೇಶ ಶಕ್ತಿಶಾಲಿ ಎಂದು ಹೇಳಲಾಗುತ್ತದೆ.

    ಹಿನ್ನೆಲೆ: 800 ವರ್ಷಗಳ ಹಿಂದೆ ಈ ಭಾಗವನ್ನು ಆಳುತ್ತಿದ್ದ ದೊರೆ ವೀರಬಾಹು ಜನ, ಜಾನುವಾರು ಹಾಗೂ ಬೆಳೆ ರಕ್ಷಣೆಗಾಗಿ ಒಮ್ಮೆ ಬೇಟೆಗೆ ಬಂದಾಗ ಹಸುವಿನ ಬಳಿ ಹುಲಿ ನಿಂತಿರುವುದನ್ನು ಕಂಡು ಹುಲಿಯನ್ನು ಕೊಲ್ಲಲು ಬಾಣ ಬಿಡುತ್ತಾನೆ. ಆದರೆ ಅದು ತಪ್ಪಿ ಹಸುವಿಗೆ ತಾಗಿ ಹಸು ಪ್ರಾಣ ಬಿಡುತ್ತದೆ. ಮೊದಲೇ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ಆ ವೀರಬಾಹು ತನ್ನಿಂದ ಗೋಹತ್ಯೆಯೂ ಆಯಿತಲ್ಲ ಎಂದು ಚಿಂತಿಸುತ್ತಾನೆ. ಆಗ ಭರದ್ವಾಜ ಮಹಾಮುನಿಗಳು, ರಾಜ ನೀನು ಉದ್ದೇಶಪೂರ್ವಕವಾಗಿ ಗೋಹತ್ಯೆ ಮಾಡಿಲ್ಲ, ನಿನಗರಿವಿಲ್ಲದೆ ಈ ದುರ್ಘಟನೆ ನಡೆದಿದೆ. ಹೀಗಾಗಿ ನೀನು ನಿನ್ನ ಶರ ಬಿದ್ದ ಜಾಗದಲ್ಲಿ ಶಿವಾಲಯ ಕಟ್ಟಿ ಪೂಜಿಸು, ನಿನ್ನ ಪಾಪ ಪರಿಹಾರವಾಗುತ್ತದೆ ಎಂದು ಸೂಚಿಸಿದರು. ನಾಲ್ಕು ಮೈಲಿ ಚದರಳತೆಯ ವನ ಪ್ರದೇಶದಲ್ಲಿ ರಾಜನ ಶರ ಅಥವಾ ಬಾಣ ಬಿದ್ದ ಕಾರಣ ಈ ಜಾಗಕ್ಕೆ ಶರಪತ್ತು ಅಥವಾ ಶರವು ಎಂಬ ಹೆಸರು ಬಂತು. ಋಷಿಗಳ ಆದೇಶದಂತೆ ರಾಜ, ಅದೇ ಸ್ಥಳದಲ್ಲಿ ಒಂದು ಕೆರೆಯನ್ನು ಹಾಗೂ ಶಿವಾಲಯ ನಿರ್ಮಿಸಿದ.

    ಆನೆಗುಡ್ಡೆ ಶ್ರೀ ವಿನಾಯಕ: ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯ ಈ ದೇವಸ್ಥಾನ ಉಡುಪಿಯ ಕುಂದಾಪುರದಲ್ಲಿ ಇದೆ. ಪುರಾಣದಲ್ಲಿ ಈ ದೇಗುಲವನ್ನು ಕುಂಬಾಶಿ ದೇವಾಲಯವೆಂದು ಕರೆಯಲಾಗಿತ್ತು. ಈಗಲೂ ಕೂಡ ಆನೆಗುಡ್ಡೆ ದೇವಾಲಯವನ್ನು ಕುಂಬಾಶಿ ದೇವಾಲಯವೆಂದು ಕರೆಯುತ್ತಾರೆ. ಈ ದೇಗುಲದಲ್ಲಿರುವ ಗಣೇಶ ಸ್ವಯಂಬು ಎಂದು ಹೇಳಲಾಗಿದ್ದು, ಗಣೇಶನ ವಿಗ್ರಹವನ್ನು ಕಲ್ಲಿನಿಂದ ಕೆತ್ತೆನೆ ಮಾಡಲಾಗಿದೆ.

    ಹಿನ್ನೆಲೆ: ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲ ಬಂದಾಗ ಅಗಸ್ತ್ಯಮುನಿಗಳು ವರುಣನ ಮನವೂಲಿಸಲು ಯಜ್ಞವೂಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ಞವನ್ನು ಭಂಗಗೊಳಿಸಲು `ಕುಂಭಾಸುರ’ ನೆಂಬ ರಾಕ್ಷಸನು ಋಷಿ ಮುನಿಗಳಿಗೆ ಕಿರುಕುಳ ನೀಡುತ್ತಿದ್ದನು. ಋಷಿಗಳನ್ನು ಕಾಪಾಡಲು ಭೀಮ ಗಣೇಶನಿಂದ ವರವಾಗಿ ಪಡೆದಿದ್ದ ಗದೆಯಿಂದ ಕುಂಭಾಸುರನನ್ನು ಸಂಹಾರ ಮಾಡಿದ್ದನು. ಹೀಗಾಗಿ ಈ ಸ್ಥಳಕ್ಕೆ ಕುಂಭಾಶಿ ಎನ್ನುವ ಹೆಸರು ಬಂದಿದೆ.

    ಹಟ್ಟಿಯಂಗಡಿ ಸಿದ್ಧಿ ವಿನಾಯಕ: ಹಟ್ಟಿಯಂಗಡಿ ದೇವಾಲಯವೂ ಉಡುಪಿಯಲ್ಲಿದೆ. ಈ ದೇವಾಲಯವೂ ಅಲೂಪ ರಾಜರ ಕಾಲದಲ್ಲಿ ನಿರ್ಮಿಸಲಾಗಿತ್ತು. ಆ ಕಾಲದಲ್ಲೇ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದರು. ಹಟ್ಟಿಯಂಗಡಿ ದೇವಾಲಯ ವರಾಹಿ ನದಿ ದಡದ ಬಳಿ ಇದೆ.

    ಹಿನ್ನೆಲೆ: ಈ ದೇವಾಲಯ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಈಗಿರುವ ದೇವಾಲಯವನ್ನು ಮೊದಲಿಗೆ 1924ರಲ್ಲಿ ಗಣಪಯ್ಯ ಭಟ್ಟರು ಜೀರ್ಣೋದ್ಧಾರ ಮಾಡಿದ ದಾಖಲೆಗಳಿವೆ. ಕಳೆದ 50 ವರ್ಷಗಳಲ್ಲಿ ದೇವಾಲಯ ಪ್ರಸಿದ್ಧಿಗೆ ಬಂದು ಇಲ್ಲಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ. ಹಟ್ಟಿಯಂಗಡಿ ಗಣೇಶ ದೇವಾಲಯ ಪುನರ್ ನಿರ್ಮಾಣಕ್ಕಾಗಿ 1972ರಲ್ಲಿ ರಚಿಸಿದ ಸಮಿತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತು.

    ಇಡಗುಂಜಿ ವಿನಾಯಕ ದೇವಾಲಯ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ದೇವಾಲಯವಿದ್ದು, ಈ ಗ್ರಾಮದಲ್ಲಿ ಸಾಕಷ್ಟು ಪವಾಡಗಳು ಕೂಡ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಗ್ರಾಮದವರು ಹಾಗೂ ಅಕ್ಕಪಕ್ಕದ ಗ್ರಾಮದವರು ಈ ಗಣೇಶ ಸಾಕಷ್ಟು ಶಕ್ತಿಶಾಲಿ ಎಂದು ನಂಬುತ್ತಾರೆ.

    ಹಿನ್ನೆಲೆ: ವಿನಾಯಕನನ್ನು ಇಲ್ಲಿ `ಮಹೋತಭಾರ ಶ್ರೀ ವಿನಾಯಕ’ ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ ‘ದ್ವಿ ಭುಜ’ ಭಂಗಿಯಲ್ಲಿ ಸುಮಾರು 88 ಸೆ.ಮೀ ಎತ್ತರ ಮತ್ತು 59ಸೆ.ಮೀ ಅಗಲವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

    ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಪ್ರಾರಂಭಕ್ಕೆ ನಾಂದಿಯಾದ ದೇವಾಲಯ ಎನ್ನುವ ಪ್ರಸಿದ್ಧ ಇಲ್ಲಿಗೆ ಇದೆ. ಪುರಾಣ ಕಥೆಯ ಪ್ರಕಾರ, ಅವತಾರದ ನಂತರ ಕೃಷ್ಣನು ತನ್ನ ದೈವಿಕ ಮನೆಗೆ ಹಿಂದಿರುಗಲು ಕಲಿಯುಗದ ಪ್ರಾರಂಭದಲ್ಲಿ ಭೂಮಿಯನ್ನು ಬಿಡುವ ಸಂದರ್ಭದಲ್ಲಿ ಜನರು ಹೆದರಿಕೊಳ್ಳುತ್ತಾರೆ. ಹೀಗಾಗಿ ಹೆದರಿದ ಜನರಿಗೆ ಸಾಂತ್ವಾನ ನೀಡಲು ವಾಖಿಲ್ಯರ ನೇತೃತ್ವದಲ್ಲಿ ಋಷಿಮುನಿಗಳು ಗಣೇಶನನ್ನು ಕುರಿತು ಅಡೆತಡೆಗಳನ್ನು ಹೋಗಲಾಡಿಸುವವನು ಎಂಬ ನಿಟ್ಟಿನಲ್ಲಿ ಹೋಮ ಹವನಗಳನ್ನು ಕೈಗೊಳ್ಳುತ್ತಾರೆ. ಇವರ ಭಕ್ತಿ ಮೆಚ್ಚಿ ಸಂತೋಷಗೊಂಡ ಗಣೇಶನು ಅವರಿಗೆ ಮುಂದೆ ಯಾವುದೇ ತೊಂದರೆ ಇಲ್ಲದೆ, ಯಾವುದೇ ಅಡೆತಡೆಗಳು ಬಾರದಂತೆ ಸಹಾಯ ಮಾಡಲು ಈ ಸ್ಥಳದಲ್ಲಿ ನೆಲೆಯೂರಿದನು ಎಂಬ ನಂಬಿಕೆ ಇದೆ.

    ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ: ಈ ದೇವಾಲಯವೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರದ ವಿಶೇಷತೆವೆಂದರೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ ಇಲ್ಲ. ಈ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ, ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಭಕ್ತರು ಈ ದೇವಾಲಯಕ್ಕೆ ಹರಕೆ ರೂಪದಲ್ಲಿ ಗಂಟೆಗಳನ್ನು ನೀಡುವುದು ಇಲ್ಲಿಯ ವಿಶೇಷತೆ.

    ಹಿನ್ನೆಲೆ: ಈ ಸ್ಥಳ ಪುರಾಣದ ಪ್ರಕಾರ ಹಿಂದೆ ಈ ಪ್ರಾಂತ್ಯವನ್ನು ಆಳುತ್ತಿದ್ದ ರಾಜಮನೆತನದವರ ಆರಾಧ್ಯ ದೈವವಾದ ಈ ಗಣೇಶನ ದೇವಸ್ಥಾನವು ರಾಜಮನೆತನದವರಿಗೆ ಮಾತ್ರ ಮೀಸಲಾಗಿತ್ತು. ನಂತರ ಈ ಪ್ರಾಂತ್ಯವನ್ನು ಆಕ್ರಮಿಸಿದ ಶತ್ರುಗಳು ಇಡೀ ಪ್ರಾಂತ್ಯ ಹಾಗೂ ರಾಜಮನೆತನವನ್ನೇ ನಾಶ ಮಾಡಿದರು. ಬಹುದಿನಗಳ ಕಾಲ ಕಾಡಿನ ಮಧ್ಯೆ ಮುಚ್ಚಿ ಹೋಗಿದ್ದ ಈ ಗಣಪನ ವಿಗ್ರಹವು ಕೆಲ ದನಗಾಹಿಗಳಿಗೆ ಸಿಕ್ಕಿತು. ಅವರು ಅತ್ಯಂತ ಭಕ್ತಿ ಭಾವದಿಂದ ಆ ಗಣಪತಿಯನ್ನು ತಂದು ಒಂದು ಪ್ರಾಶಸ್ತ್ಯವಾದ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಆ ಗಣಪತಿಗೆ ನೈವೇದ್ಯವಾಗಿ ತಮ್ಮಲ್ಲಿ ಬೆಳೆಯುವ ಸೌತೇಕಾಯಿಯನ್ನು ನಿತ್ಯವೂ ಅರ್ಪಿಸುತ್ತಿದ್ದರು. ಆ ಕಾರಣದಿಂದ ಸ್ಥಳಕ್ಕೆ ಸೌತಡ್ಕ(ಸೌತೆ+ ಅಡ್ಕ: ಅಡ್ಕ ಎಂದರೆ ಬಯಲು ಎಂದರ್ಥ) ಎನ್ನುವ ಹೆಸರು ಬಂದಿದೆ. ಒಂದು ವೇಳೆ ದೇವಾಲಯಕ್ಕೆ ಗರ್ಭಗುಡಿ ಕಟ್ಟಿದರೆ ನಿರ್ಮಾಣ ಕಾರ್ಯ ಒಂದೇ ದಿನದಲ್ಲಿ ಮುಗಿಯಬೇಕು ಮತ್ತು ದೇವಾಲಯ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿ ಕಟ್ಟಿಸಬೇಕೆಂದು ಶಿವ ತನ್ನ ಭಕ್ತರೊಬ್ಬರ ಕನಸಿನಲ್ಲಿ ಹೇಳಿದ ಕಾರಣ ಈ ದೇವಾಲಯಕ್ಕೆ ಗರ್ಭಗುಡಿ ನಿರ್ಮಾಣವಾಗಿಲ್ಲ ಎನ್ನುವ ಕಥೆ ಪ್ರಚಾರದಲ್ಲಿದೆ.

    ಮಧೂರು ದೇವಸ್ಥಾನ: ಕಾಸರಗೋಡು ಜಿಲ್ಲೆಯ ಮಧೂರು ಊರಿನಲ್ಲಿ ಗಣಪತಿ ಬಹಳ ಪ್ರಸಿದ್ಧ. ಮಂಗಳೂರಿನಿಂದ ಕಾಸರಗೋಡಿಗೆ ಹೋಗಿ ಅಲ್ಲಿಂದ ಮಧೂರಿಗೆ ಹೋಗಬಹುದು. ಮಳೆಗಾಲದಲ್ಲಿ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ. ಧರ್ಮಗುಪ್ತನೆಂಬ ದೊರೆ, ಕೈಗೊಂಡಿದ್ದ ಅತಿರುದ್ರ ಮಹಾಯಾಗಕ್ಕೆ ಯಾವುದೇ ವಿಘ್ನ ಬಾರಬಾರದೆಂದು ಈ ಗಣೇಶನ ದೇವಾಲಯದಲ್ಲಿ ಮದನಂತೇಶ್ವರ ಲಿಂಗವನ್ನೂ ಪ್ರತಿಷ್ಠಾಪಿಸಿದ್ದ ಎನ್ನುವ ಕಥೆಯಿದೆ. ಹಾಗಾಗಿ ಈ ದೇವಾಲಯವನ್ನು ಮದನಂತೇಶ್ವರ ಸಿದ್ಧಿ ವಿನಾಯಕ ದೇವಾಲಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಾಲಯವನ್ನು ಗಜ ಪೃಷ್ಠ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

    ಹಿನ್ನೆಲೆ: ಈ ದೇವಾಲಯದಲ್ಲಿ ಮೊದಲು ಹುಲಿ ಹಾಗೂ ಹಸು ಎರಡೂ ಸ್ನೇಹಿತರಾಗಿದ್ದು. ಈ ಪವಾಡ ಕಂಡು ರಾಜ ಇಲ್ಲಿ ದೇವಾಲಯ ನಿರ್ಮಿಸಿದನೆಂಬ ಕಥೆಯೂ ಇದೆ. ಇವರ ಸ್ನೇಹಕ್ಕೆ ಸಾಕ್ಷಿಯಾಗಿ ಹುಲಿ ಕಲ್ಲು ದೇವಾಲಯದಲ್ಲಿದೆ. ಈ ದೇವಾಲಯದಲ್ಲಿ ವಿಶಾಲವಾದ ವಿನ್ಯಾಸವೇ ಆಕರ್ಷಕವಾಗಿದ್ದು, ಸುಂದರ ಕೆತ್ತನೆಗಳನ್ನು ಮಾಡಲಾಗಿದೆ. ಅಲ್ಲದೇ ಈ ದೇವಾಲಯದ ಮೇಲ್ಛಾವಣಿಯಲ್ಲಿ ರಾಮಾಯಣದ ಕೆಲವು ಪ್ರಸಂಗಗಳು ಕೂಡ ಇದೆ. ಸುಮಾರು 650 ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಎರಡು ಕಡೆ ಮಾದರಿಯುತವಾಗಿ ಗೌರಿ, ಗಣೇಶ ಹಬ್ಬ ಆಚರಣೆ

    ಮೈಸೂರಿನಲ್ಲಿ ಎರಡು ಕಡೆ ಮಾದರಿಯುತವಾಗಿ ಗೌರಿ, ಗಣೇಶ ಹಬ್ಬ ಆಚರಣೆ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇಂದು ಎರಡು ಕಡೆಗಳಲ್ಲಿ ಮಾದರಿಯುತವಾಗಿ ಗೌರಿ – ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು.

    ಇಂದು ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ. ಮನೆಗಳಲ್ಲಿ ವಿಜೃಂಭಣೆಯಿಂದ ಹೆಣ್ಣು ಮಕ್ಕಳ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಎಲ್ಲರಿಗೂ ಮಾದರಿ ಆಗುವ ರೀತಿಯಲ್ಲಿ ಹಬ್ಬ ಆಚರಿಸಲಾಗಿದೆ. ಪ್ರತಿ ನಿತ್ಯ ಮೈಸೂರಿನ ರಸ್ತೆಗಳ ಸ್ವಚ್ಛ ಮಾಡುವ ಮಹಿಳೆಯರಿಗೆ ಬಾಗಿನ ಅರ್ಪಿಸಿ ಹಬ್ಬ ಮಾಡಲಾಯಿತು. ಮತ್ತೊಂದು ಕಡೆ ಮುಸ್ಲಿಂ ಯುವಕರು ಹಿಂದೂ ಯುವಕರ ಜೊತೆಯಾಗಿ ಹಬ್ಬ ಆಚರಿಸಿ ಭಾವೈಕ್ಯಕ್ಕೆ ಸಂದೇಶ ಸಾರಿದರು.

    ಮೈಸೂರಿನ ಚಾಮುಂಡಿಪುರಂನ ಪಾರ್ಕ್ ನಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿದರು. ಸೀರೆ, ಹಣ್ಣು, ಎಲೆ, ಕಾಯಿ ಇಟ್ಟು ಪೌರಕಾರ್ಮಿಕರ ಮಹಿಳೆಯರಿಗೆ ಹಬ್ಬದ ಸಂಭ್ರಮ ಹಂಚಲಾಯಿತು.

    ಮೈಸೂರಿನ ಪ್ರಜ್ವಾವಂತ ಯುವಕರ ಒಕ್ಕೂಟದಿಂದ ಭಾವೈಕ್ಯತಾ ಹಬ್ಬ ಆಚರಿಸಲಾಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಿಂದೂ- ಮುಸ್ಲಿಂ ಯುವಕರು ಜೊತೆಯಾಗಿ ಗೌರಿ- ಗಣೇಶನಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದರು.

    ಒಟ್ಟಾರೆ ಮೈಸೂರಿನಲ್ಲಿ ನಡೆದ ಈ ಎರಡು ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಿದವು. ಇಂತಹ ಆಚರಣೆಗಳು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕಿದೆ. ಆಗ ಮಾತ್ರ ಪೌರಕಾರ್ಮಿಕರನ್ನು ಕೀಳಾಗಿ ನೋಡುವ ಮನೋಭವ ನಿವಾರಣೆ ಆಗುತ್ತೆ. ಜೊತೆಗೆ ಧರ್ಮ ಧರ್ಮಗಳ ನಡುವಿನ ಸಂಘರ್ಷ ಕಡಮೆ ಆಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೋವಿನ ನಡುವೆಯೂ ಜೋಡುಪಾಲದ ಸಂತ್ರಸ್ತರಲ್ಲಿ ಸಂಭ್ರಮ- ಜಾತಿ, ಧರ್ಮ ಬೇಧವಿಲ್ಲದೆ ಮದುವೆಯಲ್ಲಿ ಭಾಗಿ

    ನೋವಿನ ನಡುವೆಯೂ ಜೋಡುಪಾಲದ ಸಂತ್ರಸ್ತರಲ್ಲಿ ಸಂಭ್ರಮ- ಜಾತಿ, ಧರ್ಮ ಬೇಧವಿಲ್ಲದೆ ಮದುವೆಯಲ್ಲಿ ಭಾಗಿ

    ಮಂಗಳೂರು: ನೋವಿನ ನಡುವೆಯೂ ಜೋಡುಪಾಲದ ಸಂತ್ರಸ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಸುಳ್ಯದ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆದಿದ್ದು, ಜಾತಿ, ಧರ್ಮ ಬೇಧವಿಲ್ಲದೆ ಜೊತೆಗೂಡಿ ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

    2ನೇ ಮೊಣ್ಣಂಗೇರಿ ನಿವಾಸಿ ವಾರಿಜಾ(26) ಹಾಗೂ ಪುಣೆಯ ರುದ್ರೇಶ್‍ಗೆ (32) ಮದುವೆ ಸಂಭ್ರಮವಿದ್ದು, ಇಂದು ಮಡಿಕೇರಿಯ ಗಣಪತಿ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆಗೇರಲಿದೆ. ದಿ. ಕೃಷ್ಣಪ್ಪ ನಾಯ್ಕರ ಕುಟುಂಬ ದುರಂತದಲ್ಲಿ ಮನೆ ಹಾಗೂ ಆಸ್ತಿ ಕಳೆದುಕೊಂಡಿದ್ದರು.

    ಮೊಣ್ಣಂಗೇರಿಯಲ್ಲಿ ತಾಯಿ ರೋಹಿಣಿ ಜೊತೆ ವಾರಿಜಾ ಬದುಕುತ್ತಿದ್ದರು. ಸದ್ಯ ಸಂಪಾಜೆ ನಿವಾಸಿಗಳು ಸೇರಿ ಹಣ ಒಟ್ಟುಗೂಡಿಸಿ ಶುಭಕಾರ್ಯಕ್ಕೆ ಹೆಗಲು ಕೊಟ್ಟಿದ್ದಾರೆ. ನವ ವಧುವಿಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಂತ್ರಸ್ತರು ಸೇರಿ ಶುಭಕೋರಿದ್ದಾರೆ.

    ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆದಿದೆ. ಸದ್ಯ ವಾರಿಜಾ ಅವರ ಮದುವೆ ಸಂಭ್ರಮ ಆಸ್ತಿ- ಪಾಸ್ತಿ ಕಳೆದುಕೊಂಡ ಸಂತ್ರಸ್ತರ ನೋವನ್ನು ಮರೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ 5 ಲಕ್ಷ ರೂ. ನೋಟುಗಳಿಂದ ದೇವಿಗೆ ಸಿಂಗಾರ- ಇತ್ತ ಕೋಲಾರದಲ್ಲಿ ನೆರೆಸಂತ್ರಸ್ತರ ಕಷ್ಟ ನಿವಾರಣೆಗೆ ವಿಶೇಷ ಪೂಜೆ

    ಮಂಡ್ಯದಲ್ಲಿ 5 ಲಕ್ಷ ರೂ. ನೋಟುಗಳಿಂದ ದೇವಿಗೆ ಸಿಂಗಾರ- ಇತ್ತ ಕೋಲಾರದಲ್ಲಿ ನೆರೆಸಂತ್ರಸ್ತರ ಕಷ್ಟ ನಿವಾರಣೆಗೆ ವಿಶೇಷ ಪೂಜೆ

    ಮಂಡ್ಯ/ಕೋಲಾರ: ಶ್ರೀವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀಚಾಮುಂಡೇಶ್ವರಿ ತಾಯಿ ದೇವಾಲಯವನ್ನು ವಿಶೇಷವಾಗಿ ನೋಟುಗಳಿಂದ ಸಿಂಗರಿಸಿ ಪೂಜೆ ನೆರವೇರಿಸಲಾಯಿತು. ಇತ್ತ ಕೋಲಾರದಲ್ಲಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲೆಂದು ವಿಶೇಷ ಪೂಜೆ ನಡೆಸಲಾಯಿತು.

    ಅರ್ಚಕ ಲಕ್ಷ್ಮೀಶ್ ಅವರು, ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು. 2,000, 500, 200, 100, 50, 20, 10 ಹಾಗೂ 5 ರೂ.ಗಳ ನೋಟುಗಳ ಸಿಂಗಾರ ಭಕ್ತರ ಮನಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು.

    ಇತ್ತ ಕೋಲಾರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗಿನಿಂದಲೇ ಹೆಂಗಳೆಯರು ಮನೆಗಳಲ್ಲಿ ವರ ಕೊಡೋ ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಸಂಭ್ರಮಿಸುತ್ತಿದ್ದಾರೆ. ಕೆಲವರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಲಕ್ಷ್ಮಿ ಕೃಪಕಟಾಕ್ಷೆಗೆ ಪಾತ್ರರಾಗುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಆದಿಪರಾಶಕ್ತಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ- ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಕಳೆದ 21 ವರ್ಷಗಳಿಂದ ಈ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು 108 ಬಗೆಯ ಸಿಹಿ ತಿಂಡಿಗಳನ್ನು ಮಾಡಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ವಿಶೇಷವಾಗಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲಿ ಎಂದು ವಿವಿಧ ಬಗೆಯ ಸಿಹಿ ಹಾಗೂ ಖಾರದ ನೈವೇಧ್ಯ ಸಿದ್ಧಪಡಿಸಿ ದೇವರ ಪೂಜೆ ಸಲ್ಲಿಸಲಾಗುತ್ತಿದೆ.

    ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ದೇವರ ದರ್ಶನಕ್ಕೆ ಬರುವ ನೂರಾರು ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ವಿಶೇಷವಾಗಿ ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ. ದೇವರಿಗೆ ಬೇಕಾದ ಸಿಹಿ ತಿಂಡಿಗಳನ್ನು ಮಾಡೋದ್ರಿಂದ ವರಮಹಾಲಕ್ಷ್ಮಿ ಜನರಿಗೆ ತಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸಲಿದೆ ಎನ್ನುವ ನಂಬಿಕೆ ಇಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: `ಡಾಲಿ ಡೇ’ ಆಚರಿಸಲು ಇದು ಸರಿಯಾದ ಸಮಯವಲ್ಲ: ಧನಂಜಯ್

    ವಿಡಿಯೋ: `ಡಾಲಿ ಡೇ’ ಆಚರಿಸಲು ಇದು ಸರಿಯಾದ ಸಮಯವಲ್ಲ: ಧನಂಜಯ್

    ಬೆಂಗಳೂರು:‘ಟಗರು’ ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತಿಗೊಂಡಿರುವ ಧನಂಜಯ್ ಅವರಿಗೆ ಇದೇ 23ರಂದು ಹುಟ್ಟುಹಬ್ಬವಿದ್ದು, ಆದ್ರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ ಅಂತ ನಟ ಧನಂಜಯ್ ಹೇಳಿದ್ದಾರೆ.

    ಈ ಕುರಿತು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದಾರೆ.

    `ನನಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಾವುದೇ ಆಸಕ್ತಿ ಇಲ್ಲ. ನಿಮಗೆ ನಾನು ಸಿಗಲೇ ಬೇಕೆಂದರೆ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ. ಆದರೆ ಆ ದಿನದಂದು ನೀವು ಕೇಕ್, ಹೂವಿನ ಹಾರ, ಪಟಾಕಿ ಸಂಭ್ರಮಗಳಿಲ್ಲದೇ ಬಂದು, ಆ ದಿನ ಹಣವನ್ನು ಸಂಗ್ರಹಿಸಿ. ಆ ಹಣವನ್ನು ನೀವು ಕೇರಳ ಹಾಗೂ ಕೊಡಗು ಸಂತ್ರಸ್ತರಿಗೆ ತಲುಪಿಸುವುದಾದರೆ, ನೀವು ಕರೆದ ಜಾಗಕ್ಕೆ ಬಂದು ನಿಮ್ಮ ಜೊತೆ ಮಾತನಾಡಿ, ಫೋಟೋ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

    `ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ

    ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಡಾಲಿ ಡೇ ಆಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಡಾಲಿ ಡೇಯನ್ನು ಸಾರ್ಥಕವಾಗಿ ಆಚರಿಸಲು ಧನಂಜಯ್ ಅವರ ಅಭಿಮಾನಿ ಬಳಗ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆಚರಣೆಯ ರೂಪುರೇಷೆ ಏನು ಎಂಬುದನ್ನು ಅಭಿಮಾನಿಗಳು ಗೌಪ್ಯವಾಗಿಟ್ಟಿದ್ದು, ಖುದ್ದು ಧನಂಜಯ್ ಕೂಡಾ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವಣಗಿತ್ತಿಯಂತೆ ಶೃಂಗಾರ, ಕೇಕ್ ಕಟ್ ಮಾಡಿ ರೈಲಿಗೆ ಬರ್ತ್ ಡೇ!

    ಮದುವಣಗಿತ್ತಿಯಂತೆ ಶೃಂಗಾರ, ಕೇಕ್ ಕಟ್ ಮಾಡಿ ರೈಲಿಗೆ ಬರ್ತ್ ಡೇ!

    ತುಮಕೂರು: ತುಮಕೂರು ಹಾಗೂ ಬೆಂಗಳೂರು ನಡುವೆ ಫಾಸ್ಟ್ ಪ್ಯಾಸೆಂಜರ್ ರೈಲು ಪ್ರಯಾಣ ಆರಂಭವಾಗಿ ಇಂದಿಗೆ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆಯಿಂದ 5ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಲಾಯಿತು.

    ತುಮಕೂರು ರೈಲು ನಿಲ್ದಾಣದಲ್ಲಿ ರೈಲಿಗೆ ಮದುವಣಗಿತ್ತಿಯಂತೆ ಶೃಂಗಾರ ಮಾಡಿ ಲೋಕೋಪೈಲೆಟ್ ನಿಂದ ಕೇಕ್ ಕಟ್ ಮಾಡಿಸಲಾಗಿದೆ. ಪ್ರತಿ ವರ್ಷ ಆಗಸ್ಟ್ 3ರಂದು ವೇದಿಕೆಯಿಂದ ಈ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಗುತ್ತದೆ.

    ಪ್ರತಿದಿನ ಬೆಳಗ್ಗೆ 8.15 ಹೊರಡುವ ರೈಲಿನಲ್ಲಿ ಸಾವಿರಾರು ಜನ ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗಳು ತುಮಕೂರಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ವೇದಿಕೆಯ ಹೋರಾಟದ ಫಲವಾಗಿ ಈ ರೈಲು ಓಡಾಟ ಆರಂಭವಾಗಿತ್ತು. ಹಾಗಾಗಿ ಪ್ರತಿವರ್ಷ ಬರ್ತ್ ಡೇ ಸೆಲೆಬ್ರೆಷನ್ ಮಾಡಿಕೊಂಡು ಬರಲಾಗುತ್ತಿದೆ.

  • ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ಮೈಸೂರು: ರಾಜ್ಯ ಹಲವು ಡ್ಯಾಂಗಳು ಭರ್ತಿಯಾಗಿ ನಾಡು ಸಮೃದ್ಧಿಯಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

    ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿಎಂ ಹೆಚ್‍ಡಿಕೆ, ರಾಜ್ಯದ ಹಲವು ಜಲಾಶಯಗಳು ಭರ್ತಿಯಿಂದ ನಾಡು ಸಮೃದ್ಧಿಯಾಗಿದೆ. ಈ ಬಾರಿ ಉತ್ತಮ ಮಳೆ ಬಿದ್ದಿರುವುದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆ ಆಗಿದೆ. 12 ವರ್ಷಗಳ ನಂತರ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಕಾರಣವಾಗಿದ್ದು, ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡುತ್ತೇವೆ. ನಾವು ಮಾಡುವ ದಸರಾ ಆಚರಣೆ ರಾಜ್ಯಕ್ಕೆ ಮಾದರಿಯಾಗುತ್ತದೆ. ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಸಭೆ ಕರೆದು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

    ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ ಸಿಎಂ ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಇಂದು ನನ್ನ ಜೊತೆ ಹಲವು ಸಚಿವರು ಜೊತೆಗಿದ್ದು ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವ ಶುಭಕಾರ್ಯವನ್ನು ಇಟ್ಟುಕೊಂಡಿದ್ದೇವೆ. ಈ ಎಲ್ಲ ಕಾರಣದಿಂದ ಆಷಾಢ ಶುಕ್ರವಾರದಂದು ಪೂಜೆಗೆ ಬಂದಿದ್ದೇವೆ ಎಂದು ಹೇಳಿದರು.

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಹೆಚ್‍ಡಿಕೆ ಹೇಳಿಕೆ ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • ಉನ್ನತ ಹುದ್ದೆಯಲ್ಲಿದ್ದು, ಜ್ಞಾನವಂತನಾಗಿ ತಪ್ಪು ಮಾಡಿದೆ- ಕ್ಷಮೆಯಾಚಿಸಿದ ವಿಧಾನಸಭೆ ಕಾರ್ಯದರ್ಶಿ

    ಉನ್ನತ ಹುದ್ದೆಯಲ್ಲಿದ್ದು, ಜ್ಞಾನವಂತನಾಗಿ ತಪ್ಪು ಮಾಡಿದೆ- ಕ್ಷಮೆಯಾಚಿಸಿದ ವಿಧಾನಸಭೆ ಕಾರ್ಯದರ್ಶಿ

    ಬೆಂಗಳೂರು: ವಿಧಾಸಭೆಯ ಮೊಗಸಾಲೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಘಟನೆಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಎಸ್ ಮೂರ್ತಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಧಿವೇಶನ ಇಲ್ಲದ ಸಂದರ್ಭದಲ್ಲಿ ಮೊಗಸಾಲೆಯನ್ನು ನೌಕರರು ಬಳಸಿಕೊಳ್ಳುತ್ತಾರೆ. ತಿಳುವಳಿಕೆ ಇಲ್ಲದೇ ಅವರು ಅಲ್ಲಿ ಕೇಕ್ ತಂದು ಇಟ್ಟಿದ್ದರು. ಅಲ್ಲದೇ ಅದಾಗಲೇ ಸುಮಾರು 200 ಮಂದಿ ನೌಕರರು ಸೇರಿದ್ದು, ಭಾವನಾತ್ಮಕವಾಗಿ ನಾನು ಆಚರಿಸಿಕೊಂಡು ತಪ್ಪು ಮಾಡಿದೆ ಅಂತ ಹೇಳಿದ್ರು.

    30 ವರ್ಷದಿಂದ ಇಲ್ಲೇ ದುಡಿತಾ ಇದ್ದೀನಿ. ಅವರು ಕೂಡ ನನ್ನ ಜೊತೆ ಬಹಳಷ್ಟು ಕಾಲ ದುಡಿದಿದ್ದಾರೆ. ನನ್ನ ಕರ್ಮ ಭೂಮಿಯಾಗಿರೋ ವಿಧಾನಸಭೆಗೆ ನಾನು ನನ್ನ ತಾಯಿಯ ಸ್ಥಾನ ನೀಡಿದ್ದೇನೆ. ಭಾವನಾತ್ಮಕವಾಗಿ ನಾನು ಅಲ್ಲಿಗೆ ಹೋದೆ ಅಂತ ಅವರು ಹೇಳಿದ್ರು.

    ವಿಧಾನಸಭೆಯ ಮೊಗಸಾಲೆಯಲ್ಲಿ ಬರ್ತ್ ಡೇ ಆಚರಣೆ ಬೇಡ ಅಂತ ಹೇಳದ್ದು ನನ್ನಿಂದ ತಪ್ಪಾಗಿದೆ. ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು ಪವಿತ್ರ ಸ್ಥಳದ ಬಗ್ಗೆ ಜ್ಞಾನ, ಮಾಹಿತಿ ಹೊಂದಿದ್ದು, ತಿಳಿದು ತಪ್ಪು ಮಾಡಿದೆ. ಆದ್ರೆ ನೌಕರರು ಅಲ್ಲಿ ನೆರೆದಿದ್ದನ್ನು ಕಂಡು ಭಾವನಾತ್ಮಕವಾಗಿ ನಾನು ಅದೇ ಜಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡೆ. 10 ನಿಮಿಷ ಅವರ ಜೊತೆ ಇದ್ದು ನಾನು ಈ ಕಡೆ ಬಂದಿದ್ದೇನೆ. ಏನೇ ಆಗಲಿ ನಾನು ಆ ಸ್ಥಳದಲ್ಲಿ ಇಂತಹ ತಪ್ಪು ಮಾಡಬಾರದು ಅಂತ ತನ್ನ ತಪ್ಪನ್ನು ಒಪ್ಪಿಕೊಂಡರು.

    ಇದೇ ವೇಳೆ ತಾರಾ ಅವರು ಕೂಡ ಪಬ್ಲಿಕ್ ಟಿವಿ ಜೊತೆ ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ಯಾವುದೋ ಒಂದು ಕೆಲಸದ ನಿಮಿತ್ತ ನಾನು ವಿಧಾನಸಭೆಗೆ ತೆರಳಿದ್ದೆ. ಈ ವೇಳೆ ಮೂರ್ತಿಯವರ ಹುಟ್ಟು ಹಬ್ಬ ಅಂತ ಹೇಳಿದ್ರು. ಹೀಗಾಗಿ ನಾನು ಅವರಿಗೆ ವಿಶ್ ಮಾತಾನಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ನೌಕರರೆಲ್ಲರೂ ಅಲ್ಲಿಗೆ ಬಂದು ಮೂರ್ತಿಯವರನ್ನು ಕರೆದ್ರು. ಅಲ್ಲದೇ ನನ್ನನ್ನೂ ಕೂಡ ಬರುವಂತೆ ಪ್ರೀತಿಯಿಂದ ಕೇಳಿಕೊಂಡರು. ನಾನೇನು ಕೇಕ್ ತಗೆದುಕೊಂಡು ಹೋಗಿರಲಿಲ್ಲ. ಅಲ್ಲದೇ ನನಗೂ ಅದಕ್ಕೂ ಸಂಬಂಧವಿಲ್ಲ. ಬನ್ನಿ ಅಂತ ಕರೆದಾಗ ಹೋದೆ ಅಷ್ಟೆ ಅಂತ ಅವರು ಹೇಳಿದ್ರು.

    ಏನಿದು ಘಟನೆ?:
    ಜುಲೈ 17ರಂದು ವಿಧಾನಸಭೆಯ ಮೊಗಸಾಲೆಯಲ್ಲಿಯೇ ಕಾರ್ಯದರ್ಶಿ ಮೂರ್ತಿಯವರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಚಿತ್ರ ನಟಿ ಕಮ್ ಮೇಲ್ಮನೆ ಸದಸ್ಯೆ ತಾರಾ ಸೇರಿ ಹಲವರು ಭಾಗಿಯಾಗಿದ್ದರು. ಪಾರ್ಟಿಯಲ್ಲಿದ್ದ ಅರ್ಧದಷ್ಟು ಮಂದಿ ವಿಧಾನಸೌಧ ಸಿಬ್ಬಂದಿಯೇ ಅಲ್ಲ. ಪಾಸ್ ಇಲ್ಲದೇ ಇವರೆಲ್ಲ ನಿಬರ್ಂಧಿತ ಸ್ಥಳಕ್ಕೆ ಹೇಗೆ ಪ್ರವೇಶ ಪಡೆದ್ರು? ವಿಧಾನಸಭೆ ಸಭಾಂಗಣದ ಮೊಗಸಾಲೆಯಲ್ಲಿ ಬರ್ತ್ ಡೇ ಪಾರ್ಟಿ ಮಾಡಬಹುದಾ? ನಿರ್ಬಂಧಿತ ಸ್ಥಳದಲ್ಲಿ ಬರ್ತ್ ಡೇ ಪಾರ್ಟಿಗೆ ಅನುಮತಿ ಕೊಟ್ಟಿದ್ದು ಯಾರು? ಎಲ್ಲರಿಗೂ ಇದೇ ರೀತಿ ಪಾರ್ಟಿಗೆ ಅವಕಾಶ ಕೊಡುತ್ತೀರಾ? ಅನ್ನೋ ಹಲವಾರು ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿತ್ತು.