Tag: celebration

  • ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ (Naga Panchami). ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ. ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ.

    ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ (Naga Panchami In India) ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ (Naga Panchami In Pakistan) ಆಚರಿಸುವುದುಂಟು. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ.

    ಮಧ್ಯಭಾರತ:
    ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಆಚರಣೆಗೆ ಹೆಚ್ಚು ಮಹತ್ವವಿದೆ. ಹೆಸರೇ ಸೂಚಿಸುವಂತೆ ನಾಗಪುರವು ‘ನಾಗ’ ಜನರ ತಾಯ್ನಾಡು. ಕಾಲಾನಂತರದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಲ್‌ನಲ್ಲಿರುವ ನಾಗೋಬಾ ದೇವಸ್ತರವಾಡುಲ್ಲಿ ನಾಗ ಪಂಚಮಿ ದಿನದಂದು ಪೂಜೆ ಸಲ್ಲಿಸಲಾಗುತ್ತದೆ. ‘ನಾಗದ್ವಾರ ಯಾತ್ರೆ’ ಕೂಡ ಮಾಡಲಾಗುತ್ತದೆ. ಯಾತ್ರಗಾಗಿ ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸುತ್ತಾರೆ.

    ವರ್ಷದಲ್ಲಿ ಒಂದು ದಿನ ಮಾತ್ರೆ ದೇಗುಲ ಓಪನ್
    ಮಹಾಕಾಳೇಶ್ವರ ಜೋತಿರ್ಲಿಂಗ ದೇವಾಲಯದ ಮೂರನೇ ಮಹಡಿಯಲ್ಲಿ ನಾಗ ಚಂದ್ರೇಶ್ವರ ಉಜ್ಜಯಿನಿ ಎಂಬ ಉಪದೇವಾಲಯವಿದೆ. ಇದು ವರ್ಷದಲ್ಲಿ ಒಂದೇ ದಿನ, ನಾಗಪಂಚಮಿಯಂದು ಮಾತ್ರ ತೆರೆದಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಮುಚ್ಚಿರುತ್ತದೆ. 10 ಹೆಡೆಯ ಹಾವಿನ ಮೇಲೆ ಶಿವ ಮತ್ತು ಪಾರ್ವತಿ ಕುಳಿತಿರುವ ನಾಗಚಂದ್ರೇಶ್ವರ ಮೂರ್ತಿ (Nagchandreshwar Statue) ಇಲ್ಲಿದೆ. ಸುತ್ತ ನಂದಿ ಗಣೇಶ, ಇತರೆ ಮೂರ್ತಿಗಳು ಇದರ ಸುತ್ತ ಇವೆ. ನಾಗ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ನಾಗದೋಷ, ಸರ್ಪದೋಷ ಸೇರಿ ಯಾವುದೇ ತೊಂದರೆಗಳಿಂದ ಭಕ್ತ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ.

    ಉತ್ತರ ಮತ್ತು ವಾಯುವ್ಯ ಭಾರತ
    ಉತ್ತರ ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಕಾಶ್ಮೀರದಲ್ಲಿ ಐತಿಹಾಸಿಕ ಕಾಲದಿಂದಲೂ ಹಿಂದೂಗಳು ಹಾವುಗಳನ್ನು ಪೂಜಿಸುತ್ತಿದ್ದಾರೆ. ವಾಯುವ್ಯ ಭಾರತದಲ್ಲಿ ಬನಾರಸ್‌ನಂತಹ ನಗರಗಳಲ್ಲಿ ನಾಗ ಪಂಚಮಿ ಆಚರಣೆಯ ಭಾಗವಾಗಿ ಅಖಾರಾಗಳನ್ನು (ಕುಸ್ತಿ ಅಖಾಡ) ಅಲಂಕರಿಸುತ್ತಾರೆ. ಅಖಾರಾಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಾವುಗಳ ಚಿತ್ರಗಳಿಂದ ಗೋಡೆಗಳನ್ನು ಚಿತ್ರಿಸಲಾಗುತ್ತದೆ. ಹಾವುಗಳು ಹಾಲು ಕುಡಿಯುವುದನ್ನು ತೋರಿಸುವ ಹಾವಿನ ಚಿತ್ರಗಳಿಂದ ಅಖಾಡಗಳನ್ನು ಅಲಂಕರಿಸಲಾಗುತ್ತದೆ.

    ವಾರಣಾಸಿಯ ನರಸಿಂಗ್‌ಗಢ್ ಅಖಾರಾದಲ್ಲಿ ನಾಗ ರಾಜನಿಗೆ (ನಾಗರ ರಾಜ) ಮೀಸಲಾಗಿರುವ ವಿಶೇಷ ದೇವಾಲಯವಿದೆ. ಅಲ್ಲಿ ಹಾವಿನ ಚಿತ್ರದ ಮೇಲೆ ಒಂದು ಬಟ್ಟಲನ್ನು ತೂಗುಹಾಕಲಾಗುತ್ತದೆ. ಅದರಲ್ಲಿ ಹಾಲನ್ನು ಸುರಿಯಲಾಗುತ್ತದೆ. ಹಾಲು ಹಾವಿನ ದೇವರ ಮೇಲೆ ನೈವೇದ್ಯದ ರೂಪದಲ್ಲಿ ಹರಿಯುತ್ತದೆ. ನಾಗರ ಪಂಚಮಿಯಂದು ಹಾವಾಡಿಗರು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಎಲ್ಲೆಡೆ ಹಾವುಗಳನ್ನು ತಮ್ಮ ಬುಟ್ಟಿಗಳಲ್ಲಿ ತಂದು ಪ್ರದರ್ಶಿಸುತ್ತಾರೆ. ಇದನ್ನು ವೀಕ್ಷಿಸಲು ಜನರು ಸೇರುತ್ತಾರೆ. ಈ ಸಂದರ್ಭದಲ್ಲಿ ಬುಟ್ಟಿಯಲ್ಲಿರುವ ಹಾವುಗಳನ್ನೂ ಪೂಜಿಸಲಾಗುತ್ತದೆ.

    ಪಂಜಾಬ್‌ನಲ್ಲಿ ಈ ಹಬ್ಬವನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಮತ್ತು ವಿಭಿನ್ನ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಇದನ್ನು ಗುಗಾ ನೌವಮಿ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಿಟ್ಟಿನಿಂದ ಹಾವಿನ ಮೂರ್ತಿ ತಯಾರಿಸಲಾಗುತ್ತದೆ. ಅದನ್ನು ಒಂದು ಬುಟ್ಟಿಯಲ್ಲಿಟ್ಟು ಊರಲ್ಲೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಜನರು ಹಿಟ್ಟು ಮತ್ತು ಬೆಣ್ಣೆಯನ್ನು ಅದಕ್ಕೆ ಅರ್ಪಿಸುತ್ತಾರೆ. ಮೆರವಣಿಗೆ ಬಳಿಕ ಅದನ್ನು ಹೂಳಲಾಗುತ್ತದೆ. ಮಹಿಳೆಯರು ಒಂಬತ್ತು ದಿನಗಳ ಕಾಲ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಮೊಸರು ನೈವೇದ್ಯ ನೀಡುತ್ತಾರೆ.

    ಪಶ್ಚಿಮ ಭಾರತ
    ಪಶ್ಚಿಮ ಭಾರತದಲ್ಲಿ ನಾಗ ಪಂಚಮಿಯನ್ನು ಕೇತರ್ಪಾಲ್ ಅಥವಾ ಕ್ಷೇತ್ರಪಾಲ್ ಎಂದು ಕರೆಯಲಾಗುತ್ತದೆ. ಕಚ್ ಪ್ರದೇಶದಲ್ಲಿ (ಗುಜರಾತ್) ಭುಜಿಯಾ ಎಂಬ ಕೋಟೆಯಲ್ಲಿ ನಾಗದೇವರ ದೇವಾಲಯವಿದೆ. ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ನಾಗ ಪಂಚಮಿಯಂದು ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತದೆ. ಸಿಂಧಿ ಸಮುದಾಯದಲ್ಲಿ ನಾಗ ಪಂಚಮಿಯನ್ನು ಗೊಗ್ರೋ ಗೌರವಾರ್ಥವಾಗಿ ಆಚರಿಸಲಾಗುತ್ತದೆ.

    ಪೂರ್ವ ಮತ್ತು ಈಶಾನ್ಯ ಭಾರತ
    ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್, ಒರಿಸ್ಸಾ ಮತ್ತು ಅಸ್ಸಾಂನಲ್ಲಿ ದೇವಿಯನ್ನು ಮಾನಸ ಎಂದು ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಮಾನಸ ನಾಗದೇವತೆಯಾಗಿದ್ದು, ಇದನ್ನು ಜರತ್ಕಾರು ಎಂದೂ ಕರೆಯುತ್ತಾರೆ. ಬ್ರಾಹ್ಮಣ ಋಷಿಯ ಪತ್ನಿ ಜರತ್ಕಾರು ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಾನಸ ದೇವಿಯ ಪ್ರತೀಕವಾದ ಮಾನಸ ಸೊ ಸೇಲ್ ಗಿಡದ (ಯೂಫೋರ್ಬಿಯಾ ಲಿಂಗುಲಾರಮ್) ರೆಂಬೆಯನ್ನು ನೆಲದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಶ್ರಾವಣ ಮಾಸದಲ್ಲಿ ಮಾತ್ರವಲ್ಲದೆ, ಭಾದ್ರ ಮಾಸದಲ್ಲಿಯೂ ಸಹ ಹಬ್ಬವನ್ನು ಮನೆಗಳಲ್ಲಿ ಆಚರಿಸಲಾಗುತ್ತದೆ.

    ದಕ್ಷಿಣ ಭಾರತ
    ನಾಗರ ಪಂಚಮಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಈ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಸುಪ್ರಿಸಿದ್ಧ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕರಾವಳಿ-ಮಲೆನಾಡಿನ ಭಾಗಗಳಲ್ಲಿ ನಾಗನಿಗೆ ಇರುವ ಪ್ರಮುಖ ಸ್ಥಾನ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಎಲ್ಲ ಸೇರಿ ಕುಟುಂಬದ ನಾಗಬನಕ್ಕೆ ಹೋಗುವುದು ಸಂಪ್ರದಾಯ. ಬೆಲ್ಲ-ಕಾಯಿ ತುರಿಯಿಂದ ತಯಾರಿಸುವ ಅರಿಶಿನ ಎಲೆಯ ಗಟ್ಟಿಯನ್ನು (ಕಡುಬು) ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿ ತಿನ್ನುವುದು ಪದ್ಧತಿ. ಉತ್ತರ ಕರ್ನಾಟಕ ಕಡೆ ಇದೊಂದು ಸಾಂಸ್ಕೃತಿಕ ಹಬ್ಬ. ಸಹೋದರ ಸಹೋದರಿಯರು ಒಂದೆಡೆ ಸೇರಿ ಪ್ರೀತಿ, ವಾತ್ಸಲ್ಯದಿಂದ ಸಹೋದರರನ್ನು ಹಾರೈಸುವುದು, ಆಶೀರ್ವಾದ ಪಡೆಯುವುದು ನಡೆಯುತ್ತದೆ. ಮನೆಯ ಹೆಣ್ಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಎಲ್ಲವನ್ನೂ ಕೊಬ್ಬರಿ ಜೊತೆಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗೀನ ನೀಡಲಾಗುತ್ತದೆ.

    ಹಳೇ ಮೈಸೂರು ಭಾಗದಲ್ಲಿ ಇದು ಅಣ್ಣ-ತಮ್ಮಂದಿರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆ ಮಾಡುವುದು ಈ ಹಬ್ಬದ ವಿಶೇಷ. ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಹಾಗೂ ಹುತ್ತಕ್ಕೆ ಎಳನೀರು, ಹಾಲಿನಿಂದ ಅಭಿಷೇಕ (ತನಿ ಎರೆಯುವುದು) ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ನಾಗನಿಗೆ ಉಪ್ಪು ಹಾಕದ ಸಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಹಾಗೂ ಕ್ಷೀರಾಭಿಷೇಕ ಮಾಡಲಾಗುತ್ತದೆ.

    ಕೇರಳದಲ್ಲಿ ಈಳವರು ಮತ್ತು ನಾಯರ್‌ಗಳು ಸರ್ಪ ಆರಾಧಕರು. ಮನೆಯ ನೈರುತ್ಯ ಮೂಲೆಯಲ್ಲಿ ನಾಗದೇವತೆಗಾಗಿ ಒಂದು ದೇವರ ಕೋಣೆ ಮಾಡಿರುತ್ತಾರೆ. ನಾಗ ಪಂಚಮಿ ಹಿಂದಿನ ದಿನ ಮಹಿಳೆಯರು ಉಪವಾಸ ಮಾಡುತ್ತಾರೆ. ನಾಗ ಪಂಚಮಿ ದಿನ ಮುಂಜಾನೆ ಸ್ನಾನ ಮಾಡಿ ತರವಾಡು ಸರ್ಪ ಕಾವುನಲ್ಲಿ ಪ್ರಾರ್ಥಿಸುತ್ತಾರೆ. ತೀರ್ಥಂ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಚೆಂಬರತಿ (ದಾಸವಾಳ) ಹೂವನ್ನು ಹಾಲಿನಲ್ಲಿ ಅದ್ದಿ ಸಹೋದರನ ಬೆನ್ನಿನ ಮೇಲೆ ಚಿಮುಕಿಸಿ ನಂತರ ಆರತಿ ಮಾಡುತ್ತಾರೆ. ಅರಿಶಿನದಲ್ಲಿ ಅದ್ದಿದ ದಾರವನ್ನು ಸಹೋದರನ ಬಲ ಮಣಿಕಟ್ಟಿನ ಮೇಲೆ ಕಟ್ಟಲಾಗುತ್ತದೆ. ಕೊನೆಗೆ ಹಬ್ಬದೂಟ ನೀಡುತ್ತಾರೆ.

  • ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಸರಾ ಹಿಂದೂಗಳು ಆಚರಿಸುವ ವಿಶಿಷ್ಟ ಹಬ್ಬಗಳಲ್ಲಿ ಒಂದು. ಇದು ವಿಜಯದ ಸಂಕೇತ ಹಾಗೂ ಸಂಭ್ರಮವನ್ನು ಎತ್ತಿ ಹಿಡಿಯುತ್ತದೆ. ಒಂದೇ ಹಬ್ಬವನ್ನು ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುವ ಹಬ್ಬ ಎಂದರೆ ತಪ್ಪಾಗಲಾರದು. ಕೆಲವು ಕಡೆ 9 ದಿನಗಳ ಉಪವಾಸದಿಂದ ಅಂತ್ಯವಾದರೆ, ಇನ್ನೊಂದು ಕಡೆ ದೊಡ್ಡ ಆಚರಣೆಗಳಿಂದ ಅಂತ್ಯವಾಗುತ್ತದೆ. ಈ ಹಬ್ಬವನ್ನು ರಾಮನಿಂದ ರಾವಣನನ್ನು ಸೋಲಿಸಿದ ದಿನವಾಗಿಯೂ, ದುರ್ಗಾದೇವಿ ಮಹಿಸಾಸುರ ನಾಶ ಮಾಡಿದ ದಿನವಾಗಿಯೂ ಆಚರಿಸುತ್ತಾರೆ.

    ಭಾರತದ ರಾಜ್ಯಗಳಲ್ಲಿ ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಈ ಕುರಿತು ಕೆಲವು ರಾಜ್ಯಗಳಲ್ಲಿ ಆಚರಿಸುವ ವಿಧಾನ ಇಲ್ಲಿದೆ.
    ಪಶ್ಚಿಮ ಬಂಗಾಳ:
    ಪಶ್ಚಿಮ ಬಂಗಾಳದ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಗಣೇಶ, ಲಕ್ಷ್ಮಿ ಮತ್ತು ಸರಸ್ವತಿ ಸೇರಿದಂತೆ ಇತರ ದೇವತೆಗಳ ಜೊತೆಗೆ ದುರ್ಗಾದೇವಿಯ ಅದ್ಭುತ ವಿಗ್ರಹಗಳನ್ನು 5 ದಿನಗಳವರೆಗೆ ಪೂಜಿಸಲಾಗುತ್ತದೆ. ದಸರಾ ಸಂದರ್ಭದಲ್ಲಿ ದುರ್ಗಾಪೂಜೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದುರ್ಗಾಮಾತೆಯನ್ನು ಪೂಜಿಸುವ ಉತ್ಸುಕತೆ ಭಾರತದಲ್ಲಿ ಎಲ್ಲಿಯೂ ಕಾಣುವುದಿಲ್ಲ.

    ಗುಜರಾತ್:
    ಗುಜರಾತ್‌ನಲ್ಲಿ ದಸರಾವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ಇಲ್ಲಿನ ಪ್ರಸಿದ್ಧ ಜಾನಪದ ನೃತ್ಯವಾಗಿರುವ ಗರ್ಬಾ ಈ ಹಬ್ಬದ ಪ್ರಧಾನ ಅಂಶವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಗರ್ಬಾ ಹಾಗೂ ಬಣ್ಣ ಬಣ್ಣದ ಕೋಲಾಟದೊಂದಿಗೆ ಜನರನ್ನು ಆಕರ್ಷಿಸುತ್ತದೆ. ದುರ್ಗಾದೇವಿಯನ್ನು ಪೂಜಿಸಿದ ನಂತರ ರಾತ್ರಿಯಿಡೀ ಗರ್ಬಾವನ್ನು ನೃತ್ಯ ಮಾಡಲಾಗುತ್ತದೆ. ಈ ಸಮಯದಲ್ಲಿ ಗರ್ಬಾ ನೃತ್ಯಕ್ಕಾಗಿ ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ.

    ಹಿಮಾಚಲ ಪ್ರದೇಶ:
    ರಾಜ್ಯದ ಕುಲು ಪ್ರದೇಶದಲ್ಲಿ ಭಗವಾನ್ ರಘುನಾಥನ ಭವ್ಯ ಮೆರವಣಿಗೆಯೊಂದಿಗೆ ದಸರಾ ಆಚರಿಸಲಾಗುತ್ತದೆ. ಕುಲು ಪಟ್ಟಣದಲ್ಲಿ ದಸರಾ ವಿಶೇಷ ಮಹತ್ವವನ್ನು ಹೊಂದಿದ್ದು, ಇದನ್ನು ಬಹಳ ಉತ್ಸಾಹದಿಂದ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಒಟ್ಟು 7 ದಿನಗಳ ಕಾಲ ನಡೆಯುತ್ತದೆ. ಕುಲುವಿನ ಜನರು ಧಾಲ್ಪುರ್ ಮೈದಾನದ ಜಾತ್ರೆಯ ಮೈದಾನದಲ್ಲಿ ಭಗವಾನ್ ರಘುನಾಥನನ್ನು ಪೂಜಿಸುತ್ತಾರೆ. ಈ ಮೆರವಣಿಗೆ ಸಮಯದಲ್ಲಿ ಸ್ಥಳೀಯರು ದೇವತೆಗಳ ಪ್ರತಿಮೆಯನ್ನು ತಂದು ಪೂಜಿಸುತ್ತಾರೆ.

    ದೆಹಲಿ:
    ದೆಹಲಿಯಲ್ಲಿ ದಸರಾವನ್ನು ರಾಮ್ ಲೀಲಾದೊಂದಿಗೆ ಹಾಗೂ ರಾಮನಿಂದ ರಾವಣನನ್ನು ಸೋಲಿಸಿದ ದಿನವೆಂದು ಆಚರಿಸುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಅದ್ಭುತವಾಗಿ ಅಲಂಕರಿಸಲಾಗುತ್ತದೆ. ರಾಮ್ ಲೀಲಾವು ನಗರದಲ್ಲಿ ಇದನ್ನು ಅದ್ಭುತವಾಗಿ ಆಚರಿಸಲಾಗುತ್ತದೆ. ರಾವಣ, ಮೇಘನಾದ ಮತ್ತು ಕುಂಭಕರನ್ ಸೇರಿದಂತೆ ಎಲ್ಲಾ ಮೂರು ರಾಕ್ಷಸರ ವಿಗ್ರಹಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಬೆಂಕಿ ಹಚ್ಚಲಾಗುತ್ತದೆ. ಈ ನಗರದಲ್ಲಿ ಹೆಚ್ಚಿನ ಜನರು 9 ದಿನಗಳ ಉಪವಾಸವನ್ನು ಮಾಡುತ್ತಾರೆ. ದೆಹಲಿಯಲ್ಲಿ ರಾಮಲೀಲಾ – ರಾಮಾಯಣದ ನಾಟಕೀಯ ಆವೃತ್ತಿಯನ್ನು ನೋಡುವುದು ಒಂದು ಸುಂದರ ಅನುಭವವಾಗಿದೆ.

    ಪಂಜಾಬ್:
    ಪಂಜಾಬ್‌ದಲ್ಲಿ 9 ದಿನದ ಉಪವಾಸ ಹಾಗೂ ಶಕ್ತಿಯ ಆರಾಧನೆಯೊಂದಿಗೆವ ದಸರಾ ಆಚರಿಸಲಾಗುತ್ತದೆ. ಇಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ 7 ದಿನಗಳ ಉಪವಾಸವನ್ನು ಆಚರಿಸುತ್ತಾರೆ. ಜಾಗ್ರತಾ ಎಂದು ಕರೆಯಲ್ಪಡುವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಇಡೀ ರಾತ್ರಿ ಎಚ್ಚರಗೊಂಡಿರುತ್ತಾರೆ. 8ನೇ ದಿನ ಕಂಜಿಕಾ ಎಂದು ಕರೆಯಲ್ಪಡುವ 9 ಬಾಲಕಿಯರಿಗೆ ಭಂಡಾರವನ್ನು ಆಯೋಜಿಸುವುದರ ಜೊತೆಗೆ ತಮ್ಮ ಉಪವಾಸವನ್ನು ಮುಗಿಸುತ್ತಾರೆ.

    ತಮಿಳುನಾಡು:
    ತಮಿಳುನಾಡಿನಲ್ಲಿ ದೇವತೆಗಳ ಆರಾಧನೆಯೊಂದಿಗೆ ಹಾಗೂ ಇಲ್ಲಿ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರನ್ನು ಪೂಜಿಸುವ ಮೂಲಕ ಈ ಹಬ್ಬದಲ್ಲಿ ವಿಶೇಷ ಧಾರ್ಮಿಕ ಭಾವನೆಯನ್ನು ತರುತ್ತಾರೆ. ಈ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಜನಪ್ರಿಯ ಗೊಂಬೆ ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಕುಲಶೇಖರಪಟ್ಟಿನಂನಲ್ಲಿ ಆಚರಿಸುವ ದಸರಾ ವಿಭಿನ್ನ ವಿಧಾನವಾಗಿದೆ. 10 ದಿನಗಳ ಕಾಲ ಆಚರಿಸಲಾಗುತ್ತದೆ. ಮುತ್ತರಮ್ಮನ್ ದೇವಾಲಯದ ಸುತ್ತಲೂ ಅದ್ಭುತವಾದ ರೋಮಾಂಚಕ ವೇಷಭೂಷಣಗಳನ್ನು ಪ್ರದರ್ಶಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸಂಜೆಯ ಸಮಯದಲ್ಲಿ ಪ್ರತಿಯೊಬ್ಬರನ್ನು ತಮ್ಮ ಮನೆಗೆ ಆಹ್ವಾನಿಸುವ ಮೂಲಕ ವೈವಾಹಿಕ ಚಿಹ್ನೆಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಪರಸ್ಪರ ತೆಂಗಿನಕಾಯಿ, ವೀಳ್ಯದೆಲೆ ಹಾಗೂ ಹಣವನ್ನೂ ಅರ್ಪಿಸುತ್ತಾರೆ.

    ಉತ್ತರಪ್ರದೇಶ:
    ಉತ್ತರಪ್ರದೇಶದಲ್ಲಿ ರಾವಣನ ಪ್ರತಿಮೆಗೆ ರಾಮನು ಬೆಂಕಿಯಿಡುವ ಮೂಲಕ ದಸರಾವನ್ನು ಆಚರಿಸಲಾಗುತ್ತದೆ. ಇದು ವಿಜಯದ ಸಂಕೇತವನ್ನು ಸೂಚಿಸುತ್ತದೆ. ವಾರಣಾಸಿ, ಲಕ್ನೋ ಮತ್ತು ಕಾನ್ಪುರದಂತಹ ನಗರಗಳಲ್ಲಿ ರಾಮ್ ಲೀಲಾವನ್ನು ಭವ್ಯವಾದ ಮಟ್ಟದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ ರಾಮ, ಲಕ್ಷ್ಮಣ ಮತ್ತು ಹನುಮಾನ್ ಅವರ ವೇಷಭೂಷಣದಲ್ಲಿರುವ ನಟರು ಆಡಿಯೊ, ದೃಶ್ಯ ಸಾಧನಗಳನ್ನು ಬಳಸಿಕೊಂಡು ಮಹಾಕಾವ್ಯದ ಸಾಹಸವನ್ನು ಪ್ರದರ್ಶಿಸುತ್ತಾರೆ. ರಾವಣ, ಕುಂಭಕರನ್ ಮತ್ತು ಮೇಘನಾಥನ ವಿಗ್ರಹಗಳನ್ನು ವಧಿಸುವಾಗ ಪ್ರೇಕ್ಷಕರು ಅವರನ್ನು ನೋಡಲು ರೋಮಾಂಚನಗೊಳ್ಳುತ್ತಾರೆ.

    ಛತ್ತೀಸ್‌ಗಢ
    ಛತ್ತೀಸ್‌ಗಢದಲ್ಲಿ ವಿಶಿಷ್ಟ ರೀತಿಯ ದಸರಾವನ್ನು ಆಚರಿಸಲಾಗುತ್ತದೆ. ಅದು ಪ್ರಕೃತಿ, ಆಧ್ಯಾತ್ಮಿಕತೆ ಮತ್ತು ರಾಜ್ಯದ ಪ್ರಧಾನ ದೇವತೆಯನ್ನು ಸಂತೋಷಪಡಿಸುವ ಅಂಶವನ್ನು ಒಳಗೊಂಡಿದೆ. ಅವರು ಬಸ್ತರ್‌ನ ಪ್ರಧಾನ ದೇವತೆಯಾದ ದಂತೇಶ್ವರಿಯನ್ನು ಪೂಜಿಸುತ್ತಾರೆ. ಈ ರಾಜ್ಯದಲ್ಲಿ ದಸರಾದಂದು ಆಚರಿಸುವ ವಿಶಿಷ್ಟ ಆಚರಣೆಗಳೆಂದರೆ ಪಟ ಜಾತ್ರೆ (ಮರದ ಪೂಜೆ), ದೇರಿ ಗಧೈ (ಕಲಶ ಸ್ಥಾಪನೆ), ಕಚನ್ ಗಾಡಿ (ದೇವಿ ಕಚನ ಸಿಂಹಾಸನದ ಪ್ರತಿಷ್ಠಾಪನೆ), ನಿಶಾ ಜಾತ್ರಾ (ರಾತ್ರಿಯ ಉತ್ಸವ), ಮುರಿಯಾ ದರ್ಬಾರ್ (ಸಮ್ಮೇಳನ). ಬುಡಕಟ್ಟು ಮುಖ್ಯಸ್ಥರ) ಮತ್ತು ಓಹಡಿ (ದೇವತೆಗಳಿಗೆ ವಿದಾಯ) ಎಂದು ಆಚರಿಸಲಾಗುತ್ತದೆ.

    ಕರ್ನಾಟಕ:
    ಮೈಸೂರಿನಲ್ಲಿ ಆನೆಯು ಅಂಬಾರಿಯನ್ನು ಹೊತ್ತುಕೊಂಡು ಹೋಗುವ ಮೂಲಕ ಭವ್ಯವಾದ ಮೆರವಣಿಗೆ ಸಾಗುತ್ತದೆ. ಜೊತೆಗೆ ಕರ್ನಾಟಕದಾದ್ಯಂತ ದೇವಿಯ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮೈಸೂರು ಸೇರಿದಂತೆ ಮಡಿಕೇರಿ, ಮಂಗಳೂರು ಹೀಗೆ ಹಲವಾರು ಕಡೆ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ಕೆಲವು ಕಡೆ 9 ದಿನದ ಉಪವಾಸ ಮಾಡುತ್ತಾರೆ. ಆಯುಧ ಪೂಜೆಯ ದಿನ ಬನ್ನಿಯನ್ನು ನೀಡಲಾಗುತ್ತದೆ. ಜೊತೆಗೆ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವು ಇಲ್ಲಿದೆ. ಕೂರ್ಗ್ನ ಶಾಂತಿಯುತ ಪರಿಸರದ ಮಧ್ಯೆ, ಮಡಿಕೇರಿಯ ದಸರಾವನ್ನು ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದು ಹಾಲೇರಿ ರಾಜರ ಆಳ್ವಿಕೆಗೆ ಸೇರಿದ ಸುದೀರ್ಘ ಮತ್ತು ಆಕರ್ಷಕ ಇತಿಹಾಸವನ್ನು ಹೊಂದಿದೆ. ಈ ರೋಮಾಂಚಕ ಹಬ್ಬವನ್ನು ಮಾರಿಯಮ್ಮ ಹಬ್ಬ ಎಂದೂ ಕರೆಯಲಾಗುತ್ತದೆ. ಜನರು ದ್ರೌಪದಿಗೆ ಮೀಸಲಾಗಿರುವ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ಇದು ದಸರಾ ಆಚರಿಸುವ ವಿಭಿನ್ನ ವಿಧಾನವಾಗಿದೆ.

  • ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ- ಇಬ್ಬರಿಗೆ ಚಾಕು ಇರಿತ

    ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ- ಇಬ್ಬರಿಗೆ ಚಾಕು ಇರಿತ

    ಮಂಗಳೂರು: ಬಿಜೆಪಿ ವಿಜಯೋತ್ಸವ (BJP Celebration) ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬೋಳಿಯಾರು ಎಂಬಲ್ಲಿ ನಡೆದಿದೆ.

    ಹರೀಶ್ ಮತ್ತು ನಂದಕುಮಾರ್ ಚಾಕು ಇರಿತಕ್ಕೊಳಗಾದವರಾಗಿದ್ದು, ಇವರಿಬ್ಬರೂ ಬೋಳಿಯಾರು ನಿವಾಸಿಗಳು. ಭಾನುವಾರ ನರೇಂದ್ರ ಮೋದಿಯವರು (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು.

    ವಿಜಯೋತ್ಸವ ಮುಗಿಸಿ ಹರೀಶ್ ಮತ್ತು ನಂದಕುಮಾರ್ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡವು ಏಕಾಏಕಿ ಇಬ್ಬರಿಗೆ ಚಾಕುವಿನಿಂದ ಇರಿದಿದೆ. ಸದ್ಯ ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಪಾರಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕಮರಿಗೆ ಉರುಳಿದ ಬಸ್ – 10 ಯಾತ್ರಾರ್ಥಿಗಳ ಸಾವು, 33 ಮಂದಿಗೆ ಗಾಯ

  • ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

    ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದ ಕೆರೆಬೇಟೆ (Kerebete) ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟಗಳು ಒಂದೆರಡಲ್ಲ. ಇಲ್ಲಿ ನೋಡಿದವರಿಗೆಲ್ಲ ಇಷ್ಟವಾದ ಚಿತ್ರವೊಂದನ್ನು ಉಳಿಸಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದಕ್ಕೆ ಈ ಸಿನಿಮಾ ಕಣ್ಣೆದುರಿನ ಉದಾಹರಣೆ. ಬಹುಶಃ ಬೇರೆ ಯಾರೇ ಆಗಿದ್ದರೂ ಕೆರೆಬೇಟೆ ಬಿಡುಗಡೆಗೊಂಡ ಎರಡನೇ ವಾರದ ಹೊತ್ತಿಗೆಲ್ಲ ಕಣ್ಮರೆಯಾಗುತ್ತಿತ್ತು. ಆದರೆ ನಾಯಕ ನಟ ಗೌರಿಶಂಕರ್, ನಿರ್ಮಾಪಕ ಜೈಶಂಕರ್ ಹಾಗೂ ನಿರ್ದೇಶಕ ರಾಜ್ ಗುರು ಅವಿರತವಾಗಿ ಪ್ರಯತ್ನಿಸಿದ್ದಾರೆ. ಜಿದ್ದಿಗೆ ಬಿದ್ದಂತೆ ಪ್ರೇಕ್ಷಕರನ್ನು ತಲುಪುತ್ತಾ, ಸಿನಿಮಾ ಮಂದಿರಗಳಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿಯೇ ಇದೀಗ ಕೆರೆಬೇಟೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿಕೊಂಡಿದೆ.

    ಒಂದು ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಐವತ್ತು ದಿನ ದಾಟಿದ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಭಾಗವಾಗಿ ಕಾರ್ಯನಿರ್ವಹಿಸಿದವರಿಗೆಲ್ಲ ನೆನಪಿನ ಕಾಣಿಕೆ ಕೊಡುವ ಮೂಲಕ ಅರ್ಥವತ್ತಾದ ನಡೆ ಅನುಸರಿಸಲಾಗಿದೆ. ಇದೇ ವೇದಿಕೆಯಲ್ಲಿ ಗೌರಿಶಂಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಅಂದಿದ್ದಾರೆ. ಈ ಅವಧಿಯಲ್ಲಿ ಒಳ್ಳೆ ನಿರ್ದೇಶನ, ಕಥೆ, ಒಂದೊಳ್ಳೆ ಬ್ಯಾನರ್ ಸಿಕ್ಕರೆ ನಾಯಕ ನಟನಾಗಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ರಾಜಹಂಸದಿಂದ ಇಲ್ಲೀವರೆಗೆ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮಾಸೆಯಂತೆ ನಟನಾಗಿ ಮುಂದುವರೆಯಲು ಅವರು ತೀರ್ಮಾನಿಸಿದ್ದಾರೆ. ಈ ಐವತ್ತು ದಿನಗಳ ಮೈಲಿಗಲ್ಲು ತಲುಪಿಕೊಂಡ ಯಾನ ಸಾಮಾನ್ಯದ್ದೇನಲ್ಲ. ಗೌರಿಶಂಕರ್ ಕೆರೆಬೇಟೆಯನ್ನು ಸೋಲಲು ಬಿಡದಂತೆ ಶಕ್ತಿ ಮೀರಿ ಶ್ರಮಿಸಿದ್ದರು. ಅವರ ಒಂದೊಂದು ಪಟ್ಟುಗಳೂ ಕೂಡಾ ಪ್ರೇಕ್ಷಕರನ್ನು ಮುಟ್ಟಿ ಮೋಡಿ ಮಾಡಿದ್ದು ಸತ್ಯ. ಒಂದು ಸಮಸ್ಯೆ ಬಗೆಹರಿದಾಕ್ಷಣವೇ ಮತ್ತೊಂದು ಸವಾಲೆದುರಾಗೋ ಸ್ಥಿತಿಯನ್ನೆಲ್ಲ ಚಿತ್ರತಂಡ ಒಗ್ಗಟ್ಟಿನಿಂದ ಎದುರಿಸಿದೆ. ಈ ಕಾರಣದಿಂದಲೇ ಐವತ್ತರ ಸಂಭ್ರಮ ಸಾಧ್ಯವಾಗಿದೆ.

    ಕನ್ನಡ ಚಿತ್ರರಂಗದಲ್ಲೀಗ ಪ್ರತಿಕೂಲ ವಾತಾವರಣವಿದೆ. ಅದೆಲ್ಲವನ್ನೂ ಹೇಗೆ ಅವುಡುಗಚ್ಚಿ ಎದುರಿಸಬೇಕು, ಜೈಸಿಕೊಳ್ಳಬೇಕೆಂಬುದಕ್ಕೆ ಕೆರೆಬೇಟೆ ಚಿತ್ರತಂಡ ತಾಜಾ ಉದಾಹರಣೆಯಾಗಿ ಕಾಣಿಸುತ್ತದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದಿರೋದು ಈ ಸಿನಿಮಾದೊಳಗಿರುವ ಗಟ್ಟಿ ಕಂಟೆಂಟಿನ ಕಾರಣದಿಂದಲೇ. ಮಲೆನಾಡಿನ ಅಸ್ಮಿತೆಯಂತಿರೋ ಕೆರೆಬೇಟೆಯೆಂಬ ಆಚರಣೆಯ ಸುತ್ತ ರೂಪುಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಡೆಗೂ ಸೋಲು ಗೆಲುವಿನಾಚೆಗೆ ಒಂದೊಳ್ಳೆ ಚಿತ್ರವಾಗಿ ಕೆರೆಬೇಟೆ ದಾಖಲಾಗಿದೆ. ಕಷ್ಟಪಟ್ಟು ಇದೆಲ್ಲವನ್ನೂ ಸಾಧ್ಯವಾಗಿಸಿಕೊಂಡ ಚಿತ್ರತಂಡವನ್ನು ಅಭಿನಂದಿಸದಿರಲು ಸಾಧ್ಯವೇ?

     

    ಜನಮನ ಟಾಕೀಸ್ ಮೂಲಕ ಜೈಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಘಶಕರಾಗಿ ಬರವಸೆ ಮೂಡಿಸಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ತನ್ನೊಳಗಿನ ಕಸುವು, ಕೊಂಚವೂ ಆಚೀಚೆ ಕದಲದ ಶತಪ್ರಯತ್ನಗಳಿಂದಲೇ ಕೆರೆಬೇಟೆ ಐವತ್ತು ದಿನಗಳನ್ನು ದಾಟಿಕೊಂಡಿದೆ.

  • ರಾಮನವಮಿಯ ಹಿನ್ನೆಲೆ ಏನು?- ಆಚರಣೆ ಹೇಗೆ?

    ರಾಮನವಮಿಯ ಹಿನ್ನೆಲೆ ಏನು?- ಆಚರಣೆ ಹೇಗೆ?

    ಚೈತ್ರಮಾಸದಲ್ಲಿ ಯುಗಾದಿಯ ನಂತರ ಬರುವ ಅತಿಮುಖ್ಯ ಹಬ್ಬವೆಂದರೆ ಅದು ಶ್ರೀರಾಮನವಮಿ. ಭಾರತ ದೇಶದಲ್ಲಿ ಆರ್ಯ ಸಂಸ್ಕೃತಿಗೆ ಸೇರಿದ ಎಲ್ಲಾ ಜನರು ಆತ್ಮೀಯತೆಯಿಂದ ಆಚರಿಸುವ ಹಬ್ಬ ಇದಾಗಿದೆ. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ (Ram Navami) ಹಬ್ಬವೆಂದು ಆಚರಣೆ ಮಾಡಲಾಗುತ್ತದೆ.

    ಪೌರಾಣಿಕ ಹಿನ್ನೆಲೆ:
    ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಎಂಬ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

    ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ ಎಂಬ ನಂಬಿಕೆಯಿದೆ.

    ಆಚರಣೆ ಹೇಗೆ?
    ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ. ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.

    ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ. ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ.

    ಅಯೋಧ್ಯೆಯಲ್ಲಿ ರಾಮನವಮಿ ಆಚರಣೆ:
    ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ.

    ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ, ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ.

  • ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಆಚರಣೆಗೆ (Celebration) ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಗಣೇಶೋತ್ಸವ (Ganesh Chaturthi) ಎರಡೆರಡು ದಿನದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 18 ಅಂತಾ ಕೆಲವೆಡೆ ಇದ್ದರೆ ಇನ್ನೂ ಕೆಲವು ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 19 ಅಂತಾ ಇದೆ. ಹಾಗಿದ್ದರೆ ಪಂಚಾಂಗದ ಪ್ರಕಾರ ಯಾವಾಗ ಗಣೇಶ ಹಬ್ಬ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಸಾಮಾನ್ಯವಾಗಿ ಗೌರಿ ಹಬ್ಬದ ಬಳಿಕ ಗಣೇಶನ ಮೆರವಣಿಗೆ ಹಬ್ಬ ಆಚರಿಸುವುದು ರೂಢಿ. ಆದರೆ ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದೆ. ಹೀಗಾಗಿ ಹಬ್ಬ ಸೆಪ್ಟೆಂಬರ್ 18ಕ್ಕಾ ಅಥವಾ 19ಕ್ಕಾ ಎಂಬ ಗೊಂದಲ ಇದೆ. ಕ್ಯಾಲೆಂಡರ್‌ನಲ್ಲಿಯೂ ಈ ಬಗ್ಗೆ ಗೊಂದಲ ಇದೆ. ಸೆಪ್ಟೆಂಬರ್ 18ರಂದು ತದಿಗೆ ಚತುರ್ಥಿ ಹಾಗೂ ಸೆಪ್ಟೆಂಬರ್ 19ರಂದು ಪಂಚಮಿ ಚತುರ್ಥಿ ಇದೆ. ತದಿಗೆ ಚತುರ್ಥಿಯಂದೇ ಗೌರಿ ಗಣೇಶ ಹಬ್ಬ ಆಚರಣೆಗೆ ಸೂಕ್ತ. ಒಟ್ಟಿಗೆ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡಬಹುದು ಎಂಬುದು ಕೆಲವರ ವಾದ. ಇದನ್ನೂ ಓದಿ: ವರ್ಗಾವಣೆ ಮಾಡಿದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ!

    ಜೋತಿಷ್ಯರ (Astrologer) ಪ್ರಕಾರ ಚಂದ್ರಮಾನವನ್ನು ಉತ್ತರ ಕರ್ನಾಟಕ, ಆಂಧ್ರದವರು ಚಂದ್ರಮಾನ ರೀತಿ ಆಚರಿಸುತ್ತಾರೆ. ಚಂದ್ರಮಾನ ರೀತಿ ಆಚರಣೆ ಮಾಡುವವರು ಗೌರಿ ಗಣೇಶ ಒಂದೇ ದಿನ ಆಚರಣೆ ಮಾಡುತ್ತಾರೆ. ಸೆಪ್ಟೆಂಬರ್ 18ರ ಸೋಮವಾರವೇ ಗೌರಿ, ಗಣೇಶ ಹಬ್ಬ ಆಚರಣೆ ಮಾಡುವುದು ಸೂಕ್ತ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಸೋಮವಾರ ಬೆಳಗ್ಗೆ 9:56ರಿಂದ ಮಂಗಳವಾರ ಬೆಳಗ್ಗೆ 10:20 ನಿಮಿಷದವರಿಗೆ ಹಬ್ಬ ಆಚರಿಸಬಹುದು. ಸೌರಮಾನ ಪದ್ಧತಿ ಪ್ರಕಾರ ಹಬ್ಬ ಆಚರಿಸುವವರು ಮಂಗಳವಾರ ಆಚರಣೆ ಮಾಡುವುದು ಸೂಕ್ತ. ಚಂದ್ರಮಾನ ಪದ್ಧತಿಯಲ್ಲಿ ಆಚರಿಸುವವರು ಸೋಮವಾರವೇ ಗೌರಿ ಗಣೇಶ ಹಬ್ಬ ಮಾಡಬಹುದು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    ನಾಗರಪಂಚಮಿ (Nagara Panchami) ಹಬ್ಬವನ್ನು ಭಾರತದ ಬಹುತೇಕ ಭಾಗಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ (Maharashtra) ಈ ಹಬ್ಬವನ್ನು ಮಳೆಗಾಲದ ಸಮಯದಲ್ಲಿ ಅಂದರೆ ಶ್ರಾವಣ ಮಾಸದ 5ನೇ ದಿನದಂದು ಆಚರಿಸಲಾಗುತ್ತದೆ. ಹಾವುಗಳನ್ನು ಪೂಜಿಸುವ ಮೂಲಕ ಅವುಗಳಿಂದ ರಕ್ಷಣೆ ಪಡೆಯುವುದೇ ಈ ಹಬ್ಬದ ಮಹತ್ವ. ಹಾಗಿದ್ರೆ ಮಹಾರಾಷ್ಟ್ರದಲ್ಲಿ ಇದನ್ನು ಯಾವ ರೀತಿ ಆಚರಿಸುತ್ತಾರೆ ಎಂಬುದರ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಹಾರಾಷ್ಟ್ರದಲ್ಲಿ ನಾಗರಪಂಚಮಿಗೆ ತನ್ನದೇ ಆದ ಐತಿಹ್ಯವಿದೆ. ದ್ವಾಪರಯುಗದಲ್ಲಿ ಭಗವಾನ್ ಕೃಷ್ಣ ಐದು ತಲೆಯನ್ನು ಹೊಂದಿದ್ದ ಅತ್ಯಂತ ವಿಷಕಾರಿ ಕಾಳಿಂಗ ಹಾವನ್ನು ಸೋಲಿಸಿ, ಆ ಗ್ರಾಮದ ಜನರಿಗೆ ಅದರ ಕಾಟದಿಂದ ಮುಕ್ತಿ ಕೊಡಿಸಿದ ಬಳಿಕ ನಾಗರ ಪಂಚಮಿ ಹಬ್ಬವನ್ನು ಪ್ರಾರಂಭಿಸಲಾಯಿತು ಎಂದು ಪುರಾಣಗಳು ಹೇಳುತ್ತವೆ. ಇದನ್ನೂ ಓದಿ: Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    ನಾಗರ ಪಂಚಮಿ ಹಬ್ಬದ ದಿನದಂದು ಮಹಾರಾಷ್ಟ್ರದ ಜನರು ಹಾವುಗಳಿಗೆ ಜೇನುತುಪ್ಪ ಮತ್ತು ಕುಂಕುಮವನ್ನು ಬೆರೆಸಿದ ಹಾಲನ್ನು ಎರೆದು ಪೂಜೆ ಮಾಡುತ್ತಾರೆ. ಶಿರಾಲೆ (Shirale) ಎಂಬ ಸ್ಥಳದಲ್ಲಿ ನಾಗರಪಂಚಮಿ ಹಬ್ಬ ಪ್ರಾರಂಭವಾಗುವ ಒಂದು ವಾರದ ಮೊದಲೇ ಜನರು ಕಾಡಿನಿಂದ ಹಾವುಗಳನ್ನು ಹಿಡಿದು ತಂದು ಹಬ್ಬದ ದಿನದಂದು ಹಾವುಗಳಿಗೆ ಹಾಲೆರೆಯುತ್ತಾರೆ. ಇನ್ನೊಂದು ವಿಶೇಷವೇನೆಂದರೆ ನಾಗರಪಂಚಮಿ ದಿನದಂದು ಜನರು ಹಾವಿನೊಂದಿಗೆ ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಾರೆ.

    ನಾಗರಪಂಚಮಿ ಹಬ್ಬವನ್ನು ಮುಖ್ಯವಾಗಿ ಎರಡು ಕಾರಣಗಳಿಗೆ ಆಚರಿಸಲಾಗುತ್ತದೆ. ಮೊದಲನೆಯದಾಗಿ ಕುಟುಂಬದ ಯೋಗಕ್ಷೇಮಕ್ಕಾಗಿ ನಾಗದೇವರ ಆಶೀರ್ವಾದವನ್ನು ಪಡೆಯಲಾಗುತ್ತದೆ. ಎರಡನೆಯದಾಗಿ ನಾಗಗಳು ರೈತರು ಬೆಳೆದ ಬೆಳೆಗಳನ್ನು ಕ್ರಿಮಿ, ಕೀಟಗಳು ಹಾಗೂ ಇಲಿಗಳಿಂದ ರಕ್ಷಿಸುತ್ತವೆ. ಆದ್ದರಿಂದ ರೈತರು ನಾಗದೇವರನ್ನು ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸುವ ದಿನವೇ ಈ ನಾಗರಪಂಚಮಿ ಹಬ್ಬ. ಈ ದಿನದಂದು ಹಾವಾಡಿಗರು ತಮ್ಮ ಬುಟ್ಟಿಗಳಲ್ಲಿ ಹಾವುಗಳನ್ನು ಕೊಂಡೊಯ್ದು ಬೀದಿ ಬದಿಯಲ್ಲಿ ಹಾವನ್ನು ಕುಣಿಸುವುದರ ಮೂಲಕ ಜನರಿಂದ ಹಣವನ್ನು ಗಳಿಸುತ್ತಾರೆ. ನಾಗದೇವರು ಶಿವನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ನಾಗರಪಂಚಮಿ ದಿನದಂದು ನಾಗದೇವಾಲಯಗಳು ಹಾಗೂ ಶಿವನ ದೇವಸ್ಥಾನಗಳಿಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

    ಶಿರಾಲೆಯಲ್ಲಿ ಹಬ್ಬಕ್ಕೂ ಮೊದಲೇ ಹಾವನ್ನು ಹಿಡಿದು ತಂದು ಅವುಗಳಿಗೆ ಆಹಾರವನ್ನು ನೀಡಿ ಪೋಷಿಸುತ್ತಾರೆ. ನಾಗರಪಂಚಮಿಯ ಮುನ್ನಾ ದಿನದಂದು ಗ್ರಾಮದ ಯುವಕರು ತಮ್ಮ ತಲೆಯ ಮೇಲೆ ಮಡಕೆಗಳನ್ನು ಹೊತ್ತುಕೊಂಡು ಅಂಬಾ ದೇವಸ್ಥಾನಕ್ಕೆ ತೆರಳುತ್ತಾರೆ. ಬಳಿಕ ಹಾವುಗಳನ್ನು ದೇವಾಲಯದ ಅಂಗಳಕ್ಕೆ ಬಿಡುವ ಮೊದಲು ಅವುಗಳಿಗೆ ಪೂಜೆ ಸಲ್ಲಿಸಿ, ಅರಶಿನ ಸಿಂಪಡಿಸಿ, ಜೇನುತುಪ್ಪ ಮತ್ತು ಹಾಲನ್ನು ಅರ್ಪಿಸಲಾಗುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    ದೇವಾಲಯದಲ್ಲಿ ಉತ್ಸವ ಅಥವಾ ಪೂಜೆ ಮುಗಿದ ಬಳಿಕ ಮತ್ತೆ ಹಾವುಗಳನ್ನು ಹಿಡಿದು ಮೆರವಣಿಗೆ ಹೊರಡುತ್ತಾರೆ. ಈ ಉತ್ಸವವನ್ನು ನೋಡಲು ಮಹಿಳೆಯರು ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಮೆರವಣಿಗೆ ಸಂದರ್ಭದಲ್ಲಿಯೇ ಅನೇಕರು ಹಾವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಹಬ್ಬದ ಮರುದಿನ ಹಾವುಗಳನ್ನು ಕಾಡಿಗೆ ಬಿಡಲಾಗುತ್ತದೆ.

    ಬತ್ತೀಸ್ ಶಿರಾಲೆ ಕೊಲ್ಲಾಪುರ ಜಿಲ್ಲೆಯಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದ್ದು, ನಾಗರಪಂಚಮಿಯನ್ನು ಆಚರಿಸುವ ಜನಪ್ರಿಯ ಸ್ಥಳವಾಗಿದೆ. ಈ ಗ್ರಾಮವು ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು, ವಿಭಿನ್ನ ಮತ್ತು ದೊಡ್ಡ ಜಾತಿಯ ಸರ್ಪಸಂಕುಲವನ್ನು ಹೊಂದಿದೆ. ಈ ಗ್ರಾಮದಲ್ಲಿ ನಾಗರಪಂಚಮಿ ಹಬ್ಬವನ್ನು 8ರಿಂದ 10 ದಿನಗಳ ಕಾಲ ಆಚರಿಸುತ್ತಾರೆ. ಮಳೆಗಾಲದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಹಾವಿನ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೇ ಹಾವುಗಳನ್ನು ತಮ್ಮ ಸ್ನೇಹಿತ ಎಂದು ಅಲ್ಲಿನ ರೈತರು ನಂಬುತ್ತಾರೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..? ಮಹತ್ವವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

    ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..? ಮಹತ್ವವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

    ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

    ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ.

    ಹೋಳಿಯ ಇತಿಹಾಸ?
    ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.

    ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.

    ಮತ್ತೊಂದು ಕಥೆ:
    ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.

    ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ.

  • ಹುಟ್ಟುಹಬ್ಬದ ನಿಮಿತ್ತ 14 ರೈತರಿಗೆ ಉಚಿತ ಟ್ರ್ಯಾಕ್ಟರ್ ವಿತರಿಸಿದ ಬಿಎಸ್‌ವೈ

    ಹುಟ್ಟುಹಬ್ಬದ ನಿಮಿತ್ತ 14 ರೈತರಿಗೆ ಉಚಿತ ಟ್ರ್ಯಾಕ್ಟರ್ ವಿತರಿಸಿದ ಬಿಎಸ್‌ವೈ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜಯ ನಗರದ ರಾಧಾಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.

    ಬಿಎಸ್‍ವೈ ಆರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಎಸ್‍ವೈ ಜೊತೆಯಲ್ಲೇ ದೇವಸ್ಥಾನಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ವಿಶೇಷ ಪೂಜೆ, ಆರ್ಚನೆ ಮಾಡಿಸಿದ್ದಾರೆ. ನಂತರ ಕಾವೇರಿ ನಿವಾಸದಲ್ಲಿ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ ಯಡಿಯೂರಪ್ಪ, ಅಭಿಮಾನಿಗಳು ತಂದಿದ್ದ ದೊಡ್ಡ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅಮಿತ್ ಷಾ ದೂರವಾಣಿ ಕರೆ ಮಾಡಿ ಶುಭಕೋರಿದ್ದಾರೆ. ಇದನ್ನೂ ಓದಿ:‌ ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

    ಹುಟ್ಟುಹಬ್ಬ ಹಿನ್ನೆಲೆ ಕಾವೇರಿ ನಿವಾಸದಲ್ಲಿ 14 ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ವಿತರಿಸಿದ ಬಿಎಸ್‌ವೈ, ಉಳಿದ ಟ್ರ್ಯಾಕ್ಟರ್ ಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ರೈತರಿಗೆ ಹಂಚಿಕೆ ಮಾಡಲು ಸೂಚನೆ ನೀಡಿದ್ದಾರೆ. ಈ ವೇಳೆ ಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಆರ್.ವಿಶ್ವನಾಥ್ ಉಪಸ್ಥಿತಿ

    ಬೆಂಗಳೂರಿನಲ್ಲಿ ಕಾವೇರಿ ನಿವಾಸದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮಾತನಾಡಿ,ಯಡಿಯೂರಪ್ಪ ಅಂದರೆ ಚೈತನ್ಯದ ಚಿಲುಮೆ ಅವರನ್ನು ನೋಡಿದರೆ ನಮಗೆ ನೂರು ಪಟ್ಟು ಶಕ್ತಿ ತುಂಬಿದಂತಾಗುತ್ತದೆ. ರಾಜ್ಯದಲ್ಲಿ ಮುಂದಿನ ಚುನಾವಣೆಗಳು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಬೇಕು. ನಮ್ಮೆಲ್ಲರಿಗೆ ಶಕ್ತಿ ತುಂಬಲು ಅವರು ಮತ್ತೊಮ್ಮೆ ಜನತೆಯ ಸೇವೆ ಮಾಡುವಂತಾಗಬೇಕು.

  • ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

    ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಹುಟ್ಟುಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜ.21ರಂದು ನಿಖಿಲ್ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್

    ಕೋವಿಡ್ ಸಂಕಷ್ಟದ ಸಮಯದಲ್ಲಿ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಕೋವಿಡ್ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ ಎಂದು ಸೋಶಿಯಲ್‍ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್

    ನಿಖಿಲ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೇ ಎಲ್ಲರೂ ಮುಂಚಿತವಾಗಿ ವಿಶ್ ಮಾಡುತ್ತಿದ್ದಾರೆ. ಬರ್ತ್‍ಡೇ ಪ್ರಯುಕ್ತ ಅಭಿಮಾನಿಗಳಿಗೆ ಗಿಫ್ಟ್ ಆಗಿ ನಿಖಿಲ್ ಕುಮಾರಸ್ವಾಮಿ ನಟಿಸಲಿರುವ ಹೊಸ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಇದನ್ನೂ ಓದಿ:  ಇನ್‍ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟ ಮೀರಾ ಜಾಸ್ಮಿನ್