Tag: CDPO

  • ಮೂವರು ಸಿಡಿಪಿಓಗಳು ಜೈಲು ಪಾಲು

    ಮೂವರು ಸಿಡಿಪಿಓಗಳು ಜೈಲು ಪಾಲು

    ವಿಜಯಪುರ: ಇಬ್ಬರು ಮಹಿಳಾ ಸಿಡಿಪಿಓ ಹಾಗೂ ಬಾಗಲಕೋಟೆ ಜಿಲ್ಲೆ ಬೀಳಗಿಯ ಓರ್ವ ಸಿಡಿಪಿಓ ಅಂದರ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಈ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಜಮಖಂಡಿಯ ಗೋಪಾಲ್ ತೇಲಿ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಗಿರೀಶ್ ತೇಲಿ, ಮಹಾದೇವ ತೇಲಿ ಎಂಬವರು ಬಡ ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಕೆಎಂಎಫ್ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕಳೆದ 2020 ಅಕ್ಟೋಬರ್ 21 ರಂದು ಜಮಖಂಡಿ ಪೊಲೀಸರು ದಾಳಿ ನಡೆಸಿ ಹಾಲಿನ ಪ್ಯಾಕೆಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದರು.

    ಪೊಲೀಸರ ತನಿಖೆ ವೇಳೆ ಈ ಮೂವರು ಸಿಡಿಪಿಓಗಳ ಅಕ್ರಮ ಎಸಗಿದ್ದು ಬಯಲಾಗಿದೆ. ಕಾರಣ ವಿಜಯಪುರ ನಗರ ಸಿಡಿಪಿಓ ನಿರ್ಮಲಾ ಸುರಪೂರ, ಗ್ರಾಮೀಣ ಸಿಡಿಪಿಓ ಗೀತಾ ಗುತ್ತರಗಿಮಠ, ಬಾಗಲಕೋಟೆ ಜಿಲ್ಲೆ ಬೀಳಗಿ ಸಿಡಿಪಿಓ ಮಹಾದೇವಪ್ಪ ಇರನಾಳರನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಐಪಿಸಿ ಸೆಕ್ಷನ್ 218, 403, 406, 420, 465, 466, 477 (o) ಅಡಿಯಲ್ಲಿ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಕು ಮಗಳನ್ನು ಅಮಾನವೀಯವಾಗಿ ಸುಟ್ಟು ಹಿಂಸೆ ನೀಡಿದ ತಾಯಿ

    ಸಾಕು ಮಗಳನ್ನು ಅಮಾನವೀಯವಾಗಿ ಸುಟ್ಟು ಹಿಂಸೆ ನೀಡಿದ ತಾಯಿ

    ತುಮಕೂರು: ಸಾಕು ತಾಯಿಯಿಂದ ಅಮಾನವೀಯವಾಗಿ ದೈಹಿಕ ಹಿಂಸೆಗೊಳಗಾಗಿ ನರಕಯಾತನೆ ಅನುಭವಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕುಣಿಗಲ್ ತಾಲೂಕಿನ ಸಿಡಿಪಿಒ ಅನುಷಾ ಅವರು ರಕ್ಷಣೆ ಮಾಡಿ ಬಾಲಕಿಯರ ಬಾಲ ಭವನದ ವಶಕ್ಕೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

    6ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಸಾಕು ತಾಯಿಯ ಶೋಷಣೆಗೆ ಒಳಗಾಗಿದ್ದಾಳೆ. ಎರಡೂವರೆ ವರ್ಷವಿದ್ದಾಗ ಬಾಲಕಿಯ ಪೋಷಕರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಬಸ್ ನಿಲ್ದಾಣದಲ್ಲೇ ಬೊಂಡ ಬಜ್ಜಿ ಹಾಕುವ ರತ್ನಮ್ಮ ಅನಾಥ ಮಗುವನ್ನು ತಂದು ಸಾಕಿಕೊಂಡಿದ್ದರು.

    ರತ್ನಮ್ಮನ ಪತಿ 4 ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಮೃತಪಟ್ಟಿದ್ದರು. ಪತಿ ಮೃತಪಟ್ಟ ನಂತರ ರತ್ನಮ್ಮ ಬಾಲಕಿಗೆ ಪ್ರತಿದಿನ ಚಿತ್ರ ಹಿಂಸೆ ಕೊಡಲು ಆರಂಭಿಸಿದ್ದಳು. ಬೊಂಡ ಬಜ್ಜಿಗೆ ಸಿದ್ಧತೆ ಮಾಡಿಕೊಳ್ಳಲು ಬಾಲಕಿಯನ್ನು ಬಳಕೆ ಮಾಡಿಕೊಂಡು ದುಡಿಸಿಕೊಳ್ಳತ್ತಾಳೆ. ಜೊತೆಗೆ ಕೆಲಸ ಮಾಡುವಂತೆ ಹಲ್ಲೆ ಮಾಡುವ ಮೂಲಕ ಹಿಂಸೆ ನೀಡುತ್ತಿದ್ದಳು.

    ಜ. 17ರಂದು ರತ್ನಮ್ಮ ಬಾಲಕಿಯ ಎರಡು ತೊಡೆಗಳಿಗೆ ಕಾದ ಕಬ್ಬಿಣದ ಜಾಲರಿಯಿಂದ ಅಮಾನವೀಯವಾಗಿ ಸುಟ್ಟಿದ್ದಳು. ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಕೊಡಿಸುವ ಗೋಜಿಗೂ ರತ್ನಮ್ಮ ಮುಂದಾಗುವುದಿಲ್ಲ. ಶಾಲೆಯಲ್ಲಿ ಸಹ ಪಾಠಿಗಳು ನೀಡಿದ ಮಾಹಿತಿ ಮೆರೆಗೆ ಮುಖ್ಯ ಶಿಕ್ಷಕ ರಾಜಣ್ಣ ವಿದ್ಯಾರ್ಥಿನಿಯನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಅದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿದ್ದರು.

    ಈ ವಿಚಾರವನ್ನು ಆಶಾ ಕಾರ್ಯಕರ್ತೆಯ ಮೂಲಕ ಸಿಡಿಪಿಒ ಅನುಷಾ ಅವರು ತಿಳಿದುಕೊಂಡು ಗುರುವಾರ ಬಾಲಕಿಯನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ತುಮಕೂರಿನ ಬಾಲಕಿಯರ ಬಾಲಭವನದ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣಿಯಲ್ಲಿ ಸಾಕು ತಾಯಿ ರತ್ನಮ್ಮ ಹಾಗೂ ಆಕೆಯ ಮಗ ಸಾಗರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

  • ನನಗೆ ಶಾಸಕರೇ ದೇವರು, ಅವ್ರು ಹೇಳಿದ್ರೆ ಹೋಗ್ತಿನಿ: ಸಿಡಿಪಿಓ ಉದ್ಧಟತನ

    ನನಗೆ ಶಾಸಕರೇ ದೇವರು, ಅವ್ರು ಹೇಳಿದ್ರೆ ಹೋಗ್ತಿನಿ: ಸಿಡಿಪಿಓ ಉದ್ಧಟತನ

    ಕೊಪ್ಪಳ: ಜಿಲ್ಲೆಯ ಕನಕಗಿರಿಯ ಮಕ್ಕಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ(ಸಿಡಿಪಿಓ)ಯೊಬ್ಬ ನನಗೆ ಶಾಸಕರೇ ದೇವರು, ಅವರು ಹೇಳಿದರೇ ಮಾತ್ರ ಇಲ್ಲಿಂದ ಹೋಗುತ್ತೇನೆಂದು ದರ್ಪ ಮೆರೆಯುತ್ತಿದ್ದಾರೆ.

    ಹೌದು, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕನಕಗಿರಿ ಶಾಸಕ ಬಸವರಾಜ್ ದಡೇಸುಗುರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇವರ ಹೆಸರನ್ನು ಹೇಳಿಕೊಂಡು ಸಿಡಿಪಿಓ ಅಧಿಕಾರಿಯೊಬ್ಬ ದರ್ಪ ಮೆರೆಯುತ್ತಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಕನಕಗಿರಿ ಸಿಡಿಪಿಓ ಆಗಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಅವರನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ವೆಂಕಟ್ ರಾಜು ವರ್ಗಾವಣೆ ಮಾಡಿದ್ದರು. ಅಲ್ಲದೆ ಆ ಜಾಗಕ್ಕೆ ವಿನಾಯಕ ಅಗಸಿಯವರನ್ನು ನೇಮಕ ಮಾಡಿದ್ದರು. ಆದರೆ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಮಾತ್ರ ಸಿಇಓ ಆದೇಶವನ್ನು ಧಿಕ್ಕರಿಸಿ ವಿನಾಯಕ್‍ಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. 1 ತಿಂಗಳಿಂದ ವಿನಾಯಕ್‍ಗೆ ಯಾವುದೇ ರಿಜಿಸ್ಟರ್ ನೀಡದೆ ಸಿಡಿಪಿಓ ಕಚೇರಿಯ ಬೀಗ ಹಾಕಿಕೊಂಡು ತಿರುಗಾಡುತ್ತಿದ್ದಾರೆ.

    ರೌಡಿಗಳ ಮೂಲಕವೂ ಬೆದರಿಕೆ ಹಾಕುವ ಕೆಲಸಕ್ಕೆ ವಿರೂಪಾಕ್ಷಿ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ವ್ಯಕ್ತಿಯೊಬ್ಬರ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಬೇಕಾದರೆ, ನನಗೆ ಶಾಸಕರ ಬೆಂಬಲವಿದೆ. ಅವರು ಹೇಳಿದರೆ ಮಾತ್ರ ನಾನು ಇಲ್ಲಿಂದ ಹೋಗುತ್ತೀನಿ ಎಂದು ದರ್ಪದಿಂದ ಮಾತನಾಡಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಬಸವರಾಜ್ ದಡೇಸುಗೂರು ಮಾತ್ರ ವಿರೂಪಾಕ್ಷಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ.

    ಆಡಿಯೋ ಸಂಭಾಷಣೆಯಲ್ಲಿ ಏನಿದೆ?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೆನ್ ಸಿಎಮ್ಮಾ? ಇಲ್ಲಾ ವರ್ಲ್ಡ್ ಫೇಮಸ್ಸಾ? ಏನ್ ಹೇಳ್ರಿ, ಅವರೇನ್ ಹೇಳ್ರಿ? ನನಗೇನು ಗೊತ್ತಿಲ್ಲ. ನಮ್ಮ ಮನ್ಯಾಗ ಯಾರು ರಾಜಕೀಯದವ್ರಿಲ್ಲ, ಯಾರು ಲಾಯರ್ ಇಲ್ಲ. ನಮ್ಮ ಮನೇಲಿ ಸಿಬಿಐ ಆಫೀಸರ್ ಆಗಿ ರಿಟೈರ್ಡ್‍ಮೆಂಟ್ ಆಗ್ಯಾರಾ. ಸಿಬಿಐ ಇಲಾಖೆದಾಗ.
    ಬಸವರಾಜ್ ಪೊನ್ನಾಪುರ: ಹ..ಹ..
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೇನ್ ಹುಲಿ ಕಟ್ಯಾರ. ಕರಡಿ ಕಟ್ಯಾರ. ಏನ್ರೀ ಏನ್ಮಾಡ್ತಾರ್ ಹೇಳ್ರಿ.
    ಬಸವರಾಜ್ ಪೊನ್ನಾಪುರ: ಇವಾಗ ನಾವ್ ಬೆಂಬಲ ಮಾಡ್ಬೇಕಲ್ಲ. ನಾನ್ ಯಾರಾದ್ರೂ ಒಬ್ರು ಹೊಂದಾಣಿಕೆ ಮಾಡಿಕೊಂಡಿ ಹೋಗ್ರಿ ಅಂತಾ ಹೇಳಿದ್ನ ಅಥವಾ ನಿನ್ ಬಿಟ್ಟು ಹೋಗು ಅಂತಾ ಹೇಳಿದ್ನ.? ಸರಿ ನಂದ್ ಬಿಡು ನೀನ್ಯಾರ್ ಫಾರ್(ಪರವಾಗಿ) ಅದಿ ಹೇಳ್..
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ನಾನ್ ಎಂ.ಎಲ್.ಎ ಫಾರ್ ಅದೀನಿ.
    ಬಸವರಾಜ್ ಪೊನ್ನಾಪುರ: ನಿನ್ ಎಂ.ಎಲ್.ಎ ಫಾರ್ ಅದಿ ಏನ್?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಹೌದು ನೂರಕ್ಕೆ ನೂರು ಎಂ.ಎಲ್.ಎ ಫಾರ್ ನಾನು..
    ಬಸವರಾಜ್ ಪೊನ್ನಾಪುರ: ಓಕೆ ಅಂದ್ರೆ ಉಳಿದವ್ರು ಸಂಬಂಧ ಇಲ್ಲ ನಿಂಗೆ. ಎಂಎಲ್‍ಎ ಇದ್ರ ಸಾಕು.. ಜಿಲ್ಲಾಪಂಚಾಯಿತಿ ಅವರು ಏನ್ ಲೆಕ್ಕಕ್ಕೆ ಇಲ್ಲ ಹಂಗಾರ?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಜಿಲ್ಲಾಪಂಚಾಯಿತಿ ಅವರು ಏರಿಯಾದಾಗ ಅಷ್ಟೇ. ಎಂಎಲ್‍ಎ ಎಲ್ಲಾ ಕಡೆ ಬರ್ತಾರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv