Tag: CCB police

  • ಇಂದ್ರಜಿತ್ ಲಂಕೇಶ್ ವಿರುದ್ಧ ಬೆಂಗಳೂರು ಪೊಲೀಸರು ಗರಂ

    ಇಂದ್ರಜಿತ್ ಲಂಕೇಶ್ ವಿರುದ್ಧ ಬೆಂಗಳೂರು ಪೊಲೀಸರು ಗರಂ

    ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ ಆಗಿದ್ದಾರೆ.

    ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್‍ವುಡ್ ಕೆಲ ಯುವ ನಟಿ-ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಇಂದ್ರಜಿತ್‍ಗೆ ನೋಟಿಸ್ ನೀಡಿದ್ದರು. ಆದರೆ ಇಂದ್ರಜಿತ್ ಅವರು ಮಾಹಿತಿ ಮಾತ್ರ ನೀಡಿ ಸೂಕ್ತ ದಾಖಲೆಗಳನ್ನು ನೀಡರಲಿಲ್ಲ. ಈಗ ವಿಚಾರಣೆಗೆ ಮತ್ತೆ ಹಾಜರಾಗಿರುವ ಇಂದ್ರಜಿತ್ ಇಂದು ಕೂಡ ಕೇವಲ ಮಾಹಿತಿ ನೀಡಿ ದಾಖಲೆ ನೀಡಿಲ್ಲ.

    ಇಂದರಿಂದ ಬೇಸರಗೊಂಡ ಸಿಸಿಬಿ ಪೊಲೀಸರು, ಇಂದ್ರಜಿತ್ ಡ್ರಗ್ಸ್ ಮಾಫಿಯಾ ಬಗ್ಗೆ ನೀವು ಸೂಕ್ತ ದಾಖಲೆ ಕೊಟ್ಟಿಲ್ಲ. ಸುಮ್ಮನೆ ಪ್ರಚಾರ ಗಿಟ್ಟಿಸೋಕೆ ಈ ರೀತಿ ಮಾಡ್ತಿದ್ದಾರೆ ಅನ್ನಿಸುತ್ತಿದೆ. ಮಾಧ್ಯಮಗಳ ಮುಂದೆ ಹೋಗಿ ಎಲ್ಲ ದಾಖಲೆ ಸಮೇತ ಸಾಕ್ಷಿ ಕೊಟ್ಟಿದ್ದೀನಿ ಅಂತ ಹೇಳುತ್ತಿದ್ದೀರಾ. ಆದರೆ ಆ ರೀತಿಯ ಪ್ರತ್ಯಕ್ಷ ಹಾಗೂ ತನಿಖೆಗೆ ಸಹಕಾರಿಯಾಗುವ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ ಎಂದು ವಿಚಾರಣೆ ವೇಳೆ ಅಧಿಕಾರಿಗಳು ಗರಂ ಆಗಿದ್ದಾರೆ.

    ಇದೇ ವೇಳೆ ಇಂದ್ರಜಿತ್ ಅವರು, ನೀವು ಮಾಹಿತಿ ಶೇರ್ ಮಾಡುವಂತೆ ಕರೆದಿದ್ದೀರಿ, ನನ್ನ ಬಳಿ ಇರೋ ಎಲ್ಲ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಮೊನ್ನೆಯೂ ಕೂಡ ನನಗೆ ಗೊತ್ತಿರುವ ಕೆಲ ವಿಚಾರಗಳನ್ನು ಹೇಳಿಕೊಂಡಿದ್ದೇನೆ. ಇಂದು ಕೂಡ ಪ್ರಕರಣ ಸಂಬಂಧ ಏನೇ ಪ್ರಶ್ನೆಗಳಿದ್ದರೂ ಕೇಳಿ ಉತ್ತರ ನೀಡುತ್ತೇನೆ. ಮುಂದಿನದ್ದು ನಿಮಗೆ ಬಿಟ್ಟ ವಿಚಾರ. ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಎಷ್ಟು ಬಾರಿಯಾದರೂ ಎಲ್ಲಿಗೆ ಬೇಕಾದರೂ ಕರೀರಿ ಬಂದು ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ: ಇಂದ್ರಜಿತ್

    ಇಂದ್ರಜಿತ್ ಎರಡು ಬಾರಿಯ ವಿಚಾರಣೆ ವೇಳೆ ಯಾವುದೇ ಫೋಟೋ, ವಿಡಿಯೋ ರೀತಿಯ ಪೂರಕ ಸಾಕ್ಷಿ ನೀಡಿಲ್ಲ. ಆದರೆ ಕೆಲ ತೂಕದ ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಮೇಲೆ ನಾವು ನಮ್ಮ ಕೆಲಸ ಮಾಡುತ್ತೇವೆ. ಒಂದಷ್ಟು ಗಂಭೀರ ಅಂಶಗಳು ಇಂದು ಹೇಳಿದ್ದಾರೆ. ಅದು ಕೇಸ್‍ನ ಮುಂದಿನ ತನಿಖೆಗೆ ಸಹಕಾರಿಯಾಗಲಿದೆ. ಈ ಮಾಹಿತಿಯಿಂದ ತನಿಖೆಗೆ ಒಳ್ಳೆಯ ಲೀಡ್ ಸೀಗುವ ಸಾಧ್ಯತೆ ಇದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

  • ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ನಗರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಸಿಸಿಬಿ ಅಧಿಕಾರಿಗಳ ಕಂಡ ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

    ಗಲಭೆಯಲ್ಲಿ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಈಗಾಗಲೇ 32 ಮಂದಿ ಕಾರ್ಯಕರ್ತರ ಬಂಧನವಾಗಿದೆ. ಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಲಸೂರು ಗೇಟ್‍ನ ಎಸ್‍ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನ್ಯಾಯಾಲಯದಿಂದ ಸರ್ಚ್  ವಾರೆಂಟ್ ಪಡೆದು ಪೊಲೀಸರ ತಂಡ ಪರಿಶೀಲನೆ ನಡೆಸಿದೆ.

    ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂಬಂಧ ಮೂರು ಪ್ರಕರಣಗಳ ಸಿಸಿಬಿ ವರ್ಗಾವಣೆ ಆಗಿದ್ದವು. ಅದರ ಸಂಬಂಧ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಭಾಗವಾಗಿ ಮೂರು ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ದಾಳಿ ಮುಂದುವರಿದಿದ್ದು, ಈಗ ತನಿಖಾ ಹಂತದಲ್ಲಿದ್ದು ಹೆಚ್ಚಿನ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏಕಕಾಲಕ್ಕೆ ಮೂರು ಕಡೆಗಳಲ್ಲೂ ದಾಳಿಯಾಗಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳಿಂದ ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಲಸೂರು ಗೇಟ್‍ನ ಎಸ್‍ಡಿಪಿಐನ ಮುಖ್ಯ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

  • ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ: ಇಂದ್ರಜಿತ್ ಲಂಕೇಶ್

    ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ: ಇಂದ್ರಜಿತ್ ಲಂಕೇಶ್

    – ಯಾರ ಮನಸ್ಸಿಗೂ ನೋವು ಮಾಡಲು ಹೇಳಿಲ್ಲ

    ಬೆಂಗಳೂರು: ಯುವ ನಟ ಚಿರಂಜೀವು ಸರ್ಜಾ ಅವರ ಮರಣೋತ್ತರ ಪರೀಕ್ಷೆ ಕುರಿತು ನಾನು ಹೇಳಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಸಿಸಿಬಿ ವಿಚಾರಣೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ಈಗಾಗಲೇ ನಾನು ಚಿರಂಜೀವಿ ಸರ್ಜಾ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಬಗ್ಗೆ ನೀಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದರು. ಇದನ್ನೂ ಓದಿ: 10, 15 ಮಂದಿ ಹೆಸರನ್ನು ಹೇಳಿದ್ದೇನೆ: ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ

    ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದರು.

    ಇಂದ್ರಜಿತ್ ಹೇಳಿದ್ದು ಏನು?
    ಪಬ್ಲಿಕ್ ಟಿವಿಯೊಂದಿಗೆ ಈ ಹಿಂದೆ ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ಅವರು, ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು. ನಾವು, ಹಿರಿಯ ನಟರು ಮತ್ತು ನಿರ್ಮಾಪಕರ ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ. ಆದರೆ ಇತ್ತೀಚಿಗೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದರು.

  • 10, 15 ಮಂದಿ ಹೆಸರನ್ನು ಹೇಳಿದ್ದೇನೆ: ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ

    10, 15 ಮಂದಿ ಹೆಸರನ್ನು ಹೇಳಿದ್ದೇನೆ: ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ

    – ಡ್ರಗ್ಸ್ ದಾಸರಿಗೆ ಶಿಕ್ಷೆ ಆಗಲೇಬೇಕು
    – ಯುವ ನಟ, ನಟಿಯರು ಡ್ರಗ್ಸ್ ರಾಯಭಾರಿಗಳು

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಕೇಳಿ ಬಂದಿದ್ದ ಡ್ರಗ್ಸ್ ದಂಧೆಯ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ಸಿಸಿಬಿ ಪೊಲೀಸರ ಎದುರು ಹಾಜರಾಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ನನಗೆ ತಿಳಿದಿದ್ದ ಮಾಹಿತಿಯ ಬಗ್ಗೆ ಸಾಕ್ಷಿ ಸಮೇತ ಅವರಿಗೆ ಹೇಳಿದ್ದೇನೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದರು.

    ನಿನ್ನೆ ಮೊನ್ನೆ ಬಂದ ಕೆಲ ನಟ, ನಟಿಯರು ಡ್ರಗ್ಸ್ ಗೆ ರಾಯಭಾರಿಗಳಾಗಿದ್ದಾರೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆ ಹಾನಿಯಾಗಲಿದೆ. ಆದ್ದರಿಂದ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಮಾಹಿತಿ ನೀಡಿದ್ದೇನೆ. ಇದರಿಂದ ಇಂಡಸ್ಟ್ರಿಗೆ ಬರುವ ಮುಂಬರುವ ಯುವ ಪೀಳಿಗೆಗೆ ಕೂಡ ಸಂದೇಶ ರವಾನೆಯಾಗಲಿದೆ ಎಂದರು.

    ವಿಚಾರಣೆ ಸಂದರ್ಭದಲ್ಲಿ ಒಟ್ಟು 10 ರಿಂದ 15 ಮಂದಿ ಹೆಸರು, ಕೆಲ ಸ್ಥಳಗಳ ಮಾಹಿತಿ, ಆ ಬಗ್ಗೆ ಬೇಕಾದ ದಾಖಲೆಗಳನ್ನು ನೀಡಿದ್ದೇನೆ. ಈಗಾಗಲೇ ಪೊಲೀಸರ ಬಳಿಯೂ ಸಾಕಷ್ಟು ಮಾಹಿತಿ ಇದೆ. ಆದರೆ ನಾನು ಈಗ ಅವರ ಹೆಸರು ಬಹಿರಂಗ ಪಡಿಸಿದರೆ ತನಿಖೆಗೆ ತೊಂದರೆ ಆಗಲಿದೆ. ಸುಮಾರು ಐದೂವರೆ ಗಂಟೆ ಅವಧಿಯಲ್ಲಿ ಹಲವು ಸಾಕ್ಷಿ, ದಾಖಲೆ, ವಿಡಿಯೋಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.

    ತಮ್ಮ ಹೇಳಿಕೆಗಳ ವಿರುದ್ಧ ಕೇಳಿ ಬಂದ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ಇಂದ್ರಜಿತ್ ಲಂಕೇಶ್ ಅವರು, ಸಮಾಜದಲ್ಲಿ ಹೆಸರು ಮಾಡಿದ ಸಾಹಿತಿಗಳು, ಗಣ್ಯರನ್ನು ಕರೆಯಿಸಿ ಮಾಧ್ಯಮಗಳು ವರದಿ ಮಾಡಬೇಕು. ಅದನ್ನು ಬಿಟ್ಟು ಸುಪಾರಿ ಕೊಟ್ಟ ವ್ಯಕ್ತಿಗಳ ಹೇಳಿಕೆ ಕೇಳಬೇಡಿ ಎಂದು ಸಲಹೆ ನೀಡಿದರು.

    ನಾನು ರಕ್ಷಣೆ ಬೇಕು ಎಂದು ಕೇಳಿಲ್ಲ. ಬೆಂಬಲ ಬೇಕು ಎಂದು ಕೇಳಿದ್ದೇನೆ. ನಾನು ಈಗ ಪೊಲೀಸರಿಗೆ ಮಾಹಿತಿ ನೀಡಿರುವುದರಿಂದ ಅವರಿಗೆ ಖುಷಿ ಆಗಿದೆ. ಶೀಘ್ರವೇ ಅಧಿಕಾರಿಗಳು ಈ ಬಗ್ಗೆ ತನಿಖೆ ಸಮೇತ ಹೆಸರು ಬಹಿರಂಗಪಡಿಸಲಿದ್ದಾರೆ. ನನಗೆ ಯಾವುದೇ ನಟರು, ರಾಜಕಾರಣಿಗಳ ಮಕ್ಕಳ ಬಗ್ಗೆ ಹೆದರಿಕೆ ಇಲ್ಲ. ನಾನು ಈ ಬಗ್ಗೆ ಸಾಕಷ್ಟು ತನಿಖೆ ನಡೆಸಿದ್ದು, ಆ ವೇಳೆ ಲಭ್ಯವಾದ ಕೆಲ ವಿಡಿಯೋ, ದಾಖಲೆಗಳನ್ನು ನೀಡಿದ್ದೇನೆ. ನನಗೆ ಯಾರು ಒತ್ತಡ ಹಾಕುತ್ತಿಲ್ಲ. ಹಲವು ನಿರ್ಮಾಪಕರು, ನಟರು, ರಾಜಕಾರಣಿಗಳು, ಸಾಮಾನ್ಯ ಜನರು ನನಗೆ ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದ ಎಂದರು.

  • ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ವಶ- ಇಬ್ಬರ ಬಂಧನ

    ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ವಶ- ಇಬ್ಬರ ಬಂಧನ

    – ಬೆಂಗಳೂರು ಬಳಿಕ ಮಂಗಳೂರಿನಲ್ಲಿ ಗಾಂಜಾ ಸೀಜ್

    ಮಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಗಿ ಹಾಗೂ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಜೋರಾಗಿ ನಡೆಯುತ್ತಿದೆ ಎಂಬ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ನಗರದಲ್ಲಿ 132 ಕೆ.ಜಿ.ಗಾಂಜಾ ಪತ್ತೆಯಾಗುವ ಮೂಲಕ ಭಯ ಗುಟ್ಟಿಸಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ 2 ಕ್ವಿಂಟಾಲ್ ಗಾಂಜಾ ವಶ – ಮೈಸೂರಿನ ಜೆಡಿಎಸ್ ಮುಖಂಡ ಅರೆಸ್ಟ್

    ಮಂಗಳೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಪತ್ತೆಯಾಗಿದ್ದು, ಆರೋಪಿಗಳಾದ ಕಾಸರಗೋಡು ನಿವಾಸಿಗಳಾದ ಕಲಂದರ್ ಮಹಮ್ಮದ್(35) ಮತ್ತು ಮೊಯಿದ್ದೀನ್ ಅನ್ಸಾರ್(27) ಬಂಧಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 132 ಕೆ.ಜಿ. ಗಾಂಜಾ, ಮಹೇಂದ್ರ ಬೊಲೆರೋ, ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.

    ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಮಹೀಂದ್ರ ಪಿಕಪ್ ವಾಹನದಲ್ಲಿ ಇಬ್ಬರು ಆರೋಪಿಗಳು ಗಾಂಜಾ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ.

  • ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ

    ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ

    – ಡ್ರಗ್ಸ್‌ ಮಾರಾಟದ ಕಿಂಗ್‌ಪಿನ್‌ ಅನಿಕಾ ಅರೆಸ್ಟ್‌
    – ಒಂದು ಮಾತ್ರೆ 1500 ರೂ.ಗೆ ಮಾರಾಟ
    – ಗ್ರಾಹಕರಾಗಿದ್ದಾರೆ ಸ್ಟಾರ್‌ ನಟ, ನಟಿಯರು

    ಬೆಂಗಳೂರು: ಸ್ಯಾಂಡಲ್‌ವುಡ್‌ ಸ್ಟಾರ್‌ ನಟ, ನಟಿಯರು, ಸಂಗೀತಗಾರರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ ವಿತರಿಸುತ್ತಿರುವ ಬೃಹತ್‌ ಜಾಲ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಇದೇ 21 ರಂದು ಕಲ್ಯಾಣನಗರದ ರಾಯಲ್ ಸೂಟ್ಸ್ ಅಪಾರ್ಟ್ ಮೆಂಟ್ ಮೇಲೆ ಸಿಸಿಬಿಯ ನಾರ್ಕೋಟಿಕ್ಸ್ ಬ್ಯೂರೋ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಾಗಿರುವ ಅನಿಕಾ, ಅನೂಪ್‌, ರವೀಂದ್ರನ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಯಾಂಡಲ್‌ವುಡ್‌ ತಾರೆಯರು ಇವರ ನಿತ್ಯದ ಗ್ರಾಹಕರಾಗಿದ್ದ ವಿಚಾರ ತಿಳಿದು ಬಂದಿದೆ.

    ಏನು ಸಿಕ್ಕಿದೆ?
    ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ನಿಕೊ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಿರುತರೆಯ ನಂಟು ಹೇಗೆ?
    ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಆಗಿದ್ದು ಆಕೆಗೆ ಕಿರುತೆರೆಯ ನಂಟು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಾರಣೆಯ ಸಂದರ್ಭದಲ್ಲಿ ಅನಿಕಾ ಕಿರುತೆರೆಯ ನಟರೊಂದಿಗೂ ಸಂಪರ್ಕ ಬೆಳೆಸಿದ್ದ ವಿಚಾರ ತಿಳಿದು ಬಂದಿದೆ. ಆಕೆ ಕೆಲ ಧಾರಾವಹಿಯಲ್ಲೂ ನಟಿಸಿದ್ದು ಹಲವು ನಟ, ನಟಿಯರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದಳು.

    ರಾಜೇಶ್‌ ಮತ್ತು ಅನೂಪ್‌ ಮೊಬೈಲ್‌ ಪರಿಶೀಲಿಸಿದ ವೇಳೆ ಒಂದು ತಿಂಗಳಿಗೆ 2 ಸಾವಿರ ಗ್ರಾಹಕರನ್ನು ಸಂಪರ್ಕಿಸಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಅನಿಕಾ ಜರ್ಮನಿ ಮತ್ತು ಬೆಲ್ಜಿಯಂನಿಂದ ಅರ್ಡರ್ ಮಾಡಿ ಡ್ರಗ್ಸ್‌ ತರಿಸುತ್ತಿದ್ದಳು. ಡಾರ್ಕ್ ವೆಬ್ ನ ಮೂಲಕ ಅನಿಕಾ ಡೀಲ್ ಮಾಡುತ್ತಿದ್ದಳು.

    ಕೋವಿಡ್‌ 19 ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ಸಮಯದಲ್ಲಿ ಡ್ರಗ್ಸ್‌ಗೆ ಬೇಡಿಕೆ ಹೆಚ್ಚಾಗಿತ್ತು. ಈ ತಂಡ ಭಾರೀ ವ್ಯವಹಾರ ನಡೆಸಿದ್ದು ಇಲ್ಲಿಯವರೆಗೆ ಒಟ್ಟು 3 ಕೋಟಿಗೂ ಹೆಚ್ಚು ವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅನಿಕಾ ಹೇಳಿಕೆ ಆಧಾರಿಸಿ ನಟ, ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.

    ಪಾರ್ಟಿಯಲ್ಲಿ ಬಳಕೆ:
    ಎಂಡಿಎಂಎ ಮಾದಕ ವಸ್ತಗಳನ್ನು ನಟ, ನಟಿಯರ ಪಾರ್ಟಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಪ್ರತಿ ಎಂಡಿಎಂ ಮಾತ್ರೆಗಳನ್ನು ಆರೋಪಿಗಳನ್ನು ೧,೫೦೦ ರಿಂದ ೨,೫೦೦ ರೂ.ಗೆ ಮಾರಾಟ ಮಾಡುತ್ತಿದ್ದರು.

    ಕಸ್ಟಮ್ ಅಧಿಕಾರಿಗಳು ಭಾಗಿ
    ಎಲ್‌ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಡೆನ್ಮಾರ್ಕ್‌, ಬೆಲ್ಜಿಯಂ, ಜರ್ಮನಿಯಲ್ಲಿ ಈ ವ್ಯವಹಾರ ಹಚ್ಚು.ಈ ಎಲ್‌ಎಸ್‌ಡಿಯನ್ನು ಡಾರ್ಕ್‌ ವೆಬ್‌ ಮೂಲಕ ಬುಕ್‌ ಮಾಡಲಾಗುತ್ತಿತ್ತು. ಬೆಲ್ಜಿಯಂ, ಡೆನ್ಮಾರ್ಕ್‌ ಮೂಲಕ ಕೊರಿಯರ್‌ ಬರುತ್ತಿತ್ತು. ದೇಶಕ್ಕೆ ವಿಮಾನದಲ್ಲಿ ಬರುವ ಕೊರಿಯರ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ. ಆದರೆ ಸರಿಯಾಗಿ ಪರಿಶೀಲನೆ ನಡೆಸದೇ ಒಳಗಡೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಮೇಲೆಯೇ ಈಗ ಶಂಕೆ ವ್ಯಕ್ತವಾಗಿದೆ.

    ಅಂಚೆ ಇಲಾಖೆಯಲ್ಲೂ ಚೋರರು:
    ಡೆನ್ಮಾರ್ಕ್, ಬೆಲ್ಜಿಯಂನಿಂದ ಬಂದ ಬಾಕ್ಸ್‌ಗಳು ಅಂಚೆ ಇಲಾಖೆಯಿಂದಲೂ ವಿಲೇವಾರಿಯಾಗುತ್ತದೆ. ಯಾರಿಗೆ ಸೇರಬೇಕೋ ಅವರಿಗೆ ಅಂಚೆ ಇಲಾಖೆಯಿಂದ ಫೋನ್‌ ಹೋಗುತ್ತದೆ. ಫೋನ್ ಮಾಡಿ ಬಾಕ್ಸ್ ಸಂಗ್ರಹಿಸಲು ಗ್ರಾಹಕರನ್ನು ಕರೆಯುತ್ತಾರೆ. ಬಾಕ್ಸ್‌ನಲ್ಲಿ ಬಂದ ವಸ್ತುಗಳನ್ನು ಸ್ಕ್ಯಾನ್‌ ಮಾಡಬೇಕಾಗುತ್ತದೆ. ಆದರೆ ಸ್ಕ್ಯಾನ್‌ ಮಾಡದೇ ಅಂಚೆ ಇಲಾಖೆಯ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗ ಅವರ ಮೇಲೂ ಅನುಮಾನ ಕಾಣಿಸಿದೆ.

    ಏನಿದು ಎಲ್ಎಸ್‌ಡಿ?
    ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್( ಎಲ್ಎಸ್‌ಡಿ) ಮತ್ತು ಬರುವ ಮಾದಕ ವಸ್ತು ಆಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ದೇಹದ ಉಷ್ಣಾಂಶ ಏರುತ್ತದೆ. ಅರ್ಧ ಗಂಟೆಯಲ್ಲಿ ಕಿಕ್ ಕೊಡಲು ಆರಂಭಿಸುತ್ತದೆ. ಈ ಮಾದಕ ವಸ್ತು 12 ಗಂಟೆಗಳ ಮನುಷ್ಯ ದೇಹದಲ್ಲಿರುತ್ತದೆ. ನಾಲಿಗೆ ಮೂಲಕ ಎಲ್‌ಎಸ್‌ಡಿಯನ್ನು ಸೇವಿಸಬಹುದು. ಹಲವು ದೇಶಗಳಲ್ಲಿ ಎಲ್‌ಎಸ್ ಡಿ ಮಾದಕ ದ್ರವ್ಯವನ್ನು ನಿಷೇಧ ಮಾಡಲಾಗಿದೆ.

  • ಬೆಂಗ್ಳೂರಿನಲ್ಲಿ 2 ಕ್ವಿಂಟಾಲ್ ಗಾಂಜಾ ವಶ – ಮೈಸೂರಿನ ಜೆಡಿಎಸ್ ಮುಖಂಡ ಅರೆಸ್ಟ್

    ಬೆಂಗ್ಳೂರಿನಲ್ಲಿ 2 ಕ್ವಿಂಟಾಲ್ ಗಾಂಜಾ ವಶ – ಮೈಸೂರಿನ ಜೆಡಿಎಸ್ ಮುಖಂಡ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಏಕಕಾಲದಲ್ಲಿ 204 ಕೆಜಿ ಗಾಂಜಾ ಸಿಸಿಬಿ ಪೊಲೀಸರು ಬೇಟೆಯಾಡಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.

    ಜೊತೆಗೆ ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, ಮೂರು ಮೊಬೈಲ್ ಸೇರಿದಂತೆ 204 ಕೆಜಿ ಗಾಂಜಾ ವಶ ಪಡೆಯಲಾಗಿದೆ. ಈ ಗ್ಯಾಂಗ್ ಸದಸ್ಯರು ರಾಜಾರೋಷವಾಗಿ ಲಾರಿಯಲ್ಲೇ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಬೊಳೆತ್ತಿನ್ ಹಾಗೂ ವಿರುಪಾಕ್ಷ ನೇತೃತ್ವದ ತಂಡ ದಾಳಿ ಮಾಡಿ ಅರೆಸ್ಟ್ ಮಾಡಿದೆ.

    ಗಾಂಜಾ ಸಾಗಾಟದಲ್ಲಿ ರಾಜಕಾರಣಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಬಂಧಿಸಿರುವ ಮೂವರಲ್ಲಿ ಕೈಸರ್ ಪಾಷಾ ಮೈಸೂರಿನ ಜೆಡಿಎಸ್ ಪಕ್ಷದ ಮುಖಂಡನಾಗಿದ್ದಾನೆ. ಈತನೇ ಈ ಗಾಂಜಾ ಗ್ಯಾಂಗಿನ ಕಿಂಗ್‍ಪಿನ್ ಎನ್ನಲಾಗಿದ್ದು, ಈತ ಮೈಸೂರಿನ ಶಾಂತಿನಗರ ನಗರಸಭೆ ವಾರ್ಡಿನಿಂದ ಕೌನ್ಸಲರ್ ಚುನಾವಣೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ. ಆದರೆ ಕೇವಲ 150 ಮತಗಳಿಂದ ಪರಾಜಿತ ಹೊಂದಿದ್ದ. ಈತ ಲಾರಿಯಲ್ಲಿ ಗಾಂಜಾವನ್ನು ವಿಶಾಖಪಟ್ಟಣದಿಂದ ದೇವನಹಳ್ಳಿಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.

  • ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ಗ್ಯಾಂಗ್ ಬಂಧನ

    ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ಗ್ಯಾಂಗ್ ಬಂಧನ

    ಬೆಂಗಳೂರು: ಕಿಂಡಿ ಕೊರೆದು ಚಿನ್ನದಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಆಭರಣ ದೋಚಿದ್ದ ನೇಪಾಳಿ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಿಸಿಬಿ ಪೊಲೀಸರು ನೇಪಾಳಿ ಗ್ಯಾಂಗಿನ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ್ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್ ಸಿಂಗ್, ಸಲೀಂ ಪಾಷ ಮತ್ತು ಶಾಹಿದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗ್ಯಾಸ್ ಕಟರ್ ಬಳಸಿ ಚಿನ್ನದಂಗಡಿಗೆ ಕಿಂಡಿ ಕೊರೆದಿದ್ದರು. ನಂತರ ಚಿನ್ನಾಭರಣ ದೋಚಲು ವಿಫಲ ಯತ್ನ ನಡೆಸಿ, ಬೆಳ್ಳಿ ದೋಚಿ ಅದೇ ಕಿಂಡಿಯಿಂದ ಎಸ್ಕೇಪ್ ಆಗಿದ್ದರು.

    ಆಗಸ್ಟ್ 5 ರಂದು ವೈಟ್ ಫೀಲ್ಡ್‌ನ ಮಾತಾಜಿ ಜ್ಯುವೆಲ್ಲರಿ ಶಾಪ್‍ಗೆ ಕನ್ನ ಹಾಕಿದ್ದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ಬೆಳಗ್ಗೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ಆದರೆ ರಾತ್ರಿ ಎಲ್ಲಿ ಕಳ್ಳತನ ಮಾಡೋದು ಅಂತ ಸ್ಕೆಚ್ ಹಾಕುತ್ತಿದ್ದರು. ಬಂಧಿತ ಆರೋಪಿಗಳು ಸುಮಾರು ಮೂರುರಿಂದ ಆರು ತಿಂಗಳು ಒಂದೊಂದು ರಾಜ್ಯದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ನಂತರ ದೊಡ್ಡಮಟ್ಟದಲ್ಲಿ ಕನ್ನ ಹಾಕಿ ರಾಜ್ಯ ಬಿಟ್ಟು ಎಸ್ಕೇಪ್ ಆಗುತ್ತಿದ್ದರು.

    ಮಾತಾಜಿ ಜ್ಯುವೆಲ್ಲರಿ ಶಾಪ್‍ನಲ್ಲಿ ಖತರ್ನಾಕ್ ಗ್ಯಾಂಗ್ ಬರೋಬ್ಬರಿ 50 ಕೆ.ಜಿ.ಬೆಳ್ಳಿ ದೋಚಿದ್ದರು. ಈ ತಂಡದ ಬಂಧನದಿಂದ ಬೆಂಗಳೂರಿನ ಹಲವು ಕೇಸ್‍ಗಳು ಪತ್ತೆಯಾಗಿವೆ. ಬಂಧಿತರಿಂದ 360 ಗ್ರಾಂ ಚಿನ್ನ, 25 ಕೆ.ಜಿ ಬೆಳ್ಳಿ, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟ್ಟರ್ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ವೈಟ್ ಫೀಲ್ಡ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಬಳಿಕ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ನೇಪಾಳಿ ಗ್ಯಾಂಗನ್ನು ಬಂಧಿಸಿದ್ದಾರೆ.

  • ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್- ಇಬ್ಬರು ಟೆಕ್ಕಿಗಳ ಬಂಧನ

    ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್- ಇಬ್ಬರು ಟೆಕ್ಕಿಗಳ ಬಂಧನ

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕ ಸಿಬ್ಬಂದಿಯ ಫೋಟೋಗಳನ್ನು ಕದ್ದು ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್ಲೋಡ್ ಮಾಡಿದ್ದ ಪ್ರರಕರಣದಲ್ಲಿ ಇಬ್ಬರು ಟೆಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಟೆಕ್ಕಿಗಳನ್ನು ಅಜಯ್ ತನಿಕಾಂಚಲಂ, ವಿಶ್ವಕ್ ಸೇನ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿತ್ತು. ಸರಿ ಸುಮಾರು 30ಕ್ಕೂ ಹೆಚ್ಚು ಯುವತಿಯರ ಫೋಟೋಗಳನ್ನು ಆರೋಪಿಗಳು ಅಶ್ಲೀಲ ವೆಬ್‍ಸೈಟ್‍ಗಳಿಗೆ ಅಪ್ಲೋಡ್ ಮಾಡಿದ್ದರು.

    ಕಾಲೇಜು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಕದ್ದು ಕೃತ್ಯ ಎಸಲಾಗಿತ್ತು. ನಕಲಿ ಖಾತೆ ಸೃಷ್ಟಿಸಿ ಫೇಸ್‍ಬುಕ್ ಹಾಗೂ ಇನ್ಸ್‍ಸ್ಟಾದಲ್ಲಿ ವಿದ್ಯಾರ್ಥಿನಿಯರಿಗೆ ರಿಕ್ವೆಸ್ಟ್ ಕಳಿಸಿ ಬಳಿಕ ಫೋಟೋಗನ್ನು ಆರೋಪಿಗಳು ಶೇರ್ ಮಾಡಿಕೊಂಡಿದ್ದರು. ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಫೋಟೋಗಳು ಪತ್ತೆಯಾಗುತ್ತಿದಂತೆ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರು.

    ವಿದ್ಯಾರ್ಥಿನಿಯರ ಫೋಟೋವನ್ನು ಕದ್ದು ಫೋಟೋಗೆ ಅಶ್ಲೀಲ ದೇಹದ ಫೋಟೋಗಳನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿತ್ತು. ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚು ಫೋಟೋ ಅಪ್ಲೋಡ್ ಮಾಡದಂತೆ ಮನವಿ ಮಾಡಿದ್ದರು.

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ- 27 ಯುವತಿಯರ ರಕ್ಷಣೆ

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ- 27 ಯುವತಿಯರ ರಕ್ಷಣೆ

    – ಪ್ರಮುಖ ಆರೋಪಿ ಸೇರಿ ಮೂವರ ಬಂಧನ

    ಬೆಂಗಳೂರು: ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

    ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಂಸದ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿಪಿ ನೇತೃತ್ವದ ಸಿಸಿಬಿ ಮಹಿಳಾ ವಿಭಾಗದ ತಂಡ ವೇಶ್ಯಾವಾಟಿಕೆ ಅಡ್ಡೆ ದಾಳಿ ಮಾಡಿದೆ.

    ದಾಳಿ ವೇಳೆ ವಿವಿಧ ರಾಜ್ಯದ ಒಟ್ಟು 27 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ನೇಪಾಳದ 9 ಯುವತಿಯರು, ಪಂಜಾಬ್ ನಾಲ್ಕು, ದೆಹಲಿ ಒಂದು, ಜಮ್ಮು ಕಾಶ್ಮೀರ್ 2, ಮಹಾರಾಷ್ಟ್ರ ಒಂದು ಸೇರಿದಂತೆ ವಿವಿದ ರಾಜ್ಯಗಳ ಒಟ್ಟು 27 ಯುವತಿಯರ ರಕ್ಷಣೆ ಮಾಡಲಾಗಿದೆ.

    ಇನ್ನೂ ಮಾಂಸದ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ಯೋಗೇಶ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.