Tag: CCB police

  • ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ- ಪ್ರಮುಖ ಸಚಿವರ ಬಯೋಡೆಟಾ, ಲೆಟರ್ ಹೆಡ್ ಪತ್ತೆ

    ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ- ಪ್ರಮುಖ ಸಚಿವರ ಬಯೋಡೆಟಾ, ಲೆಟರ್ ಹೆಡ್ ಪತ್ತೆ

    ಬೆಂಗಳೂರು: ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಮುಖ ಸಚಿವರ ಬಯೋಡೆಟಾ ಹಾಗೂ ಲೆಟರ್‍ಹೆಡ್ ಪತ್ತೆಯಾಗಿವೆ. ಅಲ್ಲದೆ ಆರೋಪಿ ಹೇಗೆ ವಂಚನೆ ಮಾಡಿದ್ದಾನೆ ಎಂಬುದರ ವಿವರವನ್ನು ಸಹ ಇದರಲ್ಲಿ ತಿಳಿಸಲಾಗಿದೆ.

    ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ಮಾಡಿದ್ದ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ ನ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿತ್ತು. ಇದೀಗ ಎಲ್ಲ ಪಿನ್ ಟು ಪಿನ್ ದಾಖಲೆಗಳನ್ನು ಪೊಲೀಸರು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಮುಖ ದಾಖಲೆಗಳು
    ಚಾರ್ಜ್ ಶೀಟ್ ನಲ್ಲಿ ಹೇಳಿರುವ ಕೆಲವು ಪ್ರಮುಖ ದಾಖಲೆಗಳ ಲಭ್ಯವಾಗಿದ್ದು, ಇದರಲ್ಲಿ ಸಚಿವ ಮುರಗೇಶ್ ನಿರಾಣಿ ಲೇಟರ್ ಹೆಡ್ ಮತ್ತು ಬಯೋಡೆಟಾ, ಪ್ರಮೋದ್ ಮಧ್ವರಾಜ್ ಲೇಟರ್ ಹೆಡ್, ಬಯೋಡೆಟಾ, ಉಮೇಶ್ ಕತ್ತಿಯವರ ಲೇಟರ್ ಹೆಡ್, ಬಯೋಡೆಟಾ ಹಾಗೂ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಕೆಲ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿದೆ. ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ಪತ್ರ ಬರೆದಿರುವುದು ಸಹ ಸಿಕ್ಕಿದೆ. ಶ್ರೀರಾಮುಲು ಅವರ ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.

    ಬಿಜೆಪಿ ಪಕ್ಷದ ಹೆಸರಿನ ಅನೇಕ ಲೇಟರ್ ಹೆಡ್ ಸಮೇತ ಪತ್ರಗಳು, ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೆಟ್ ಕೋರಿಕೆ ಪತ್ರ. ಟಿ.ಶ್ಯಾಮ್ ಭಟ್ ವಯಕ್ತಿಕ ಸೇವಾ ವಿವರ ಇರುವ ದಾಖಲೆಗಳು, ನಿವೃತ್ತ ಜಡ್ಜ್ ಇಂದ್ರಕಲಾ ಅವರ ಪರ್ಸನಲ್ ಪ್ರೋಫೈಲ್ ಗಳು ಲಭ್ಯವಾಗಿವೆ. 9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವರಾಜ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿ ಚಾರ್ಜ್ ಸಲ್ಲಿಸಲಾಗಿದೆ. ಮಾಡಿದ ಕೃತ್ಯವನ್ನು ಯುವರಾಜ್ ಸ್ವಾಮಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಕೇಸ್ ನಂಬರ್ 12/2021 ಜ್ಞಾನಭಾರತಿ ಪೊಲೀಸ್ ಠಾಣೆ:
    ಎಇಇ ಹುದ್ದೆ ಕೊಡಿಸುವುದಾಗಿ ರಾಜಾಜಿನಗರ ನಿವಾಸಿ ಜಿ.ನರಸಿಂಹ ಮೂರ್ತಿಯವರಿಗೆ ಲಕ್ಷಾಂತರ ಹಣ ಪಡೆದು ವಂಚನೆ ಮಾಡಲಾಗಿದೆ. ವಾಪಸ್ ಹಣ ಕೇಳಿದಾಗ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟ ಹಣದಿಂದಲೇ ನಿನ್ನ ಕೊಲೆಗೆ ಸುಪಾರಿ ಕೊಡುತ್ತೇನೆ. ನಿನ್ನ ಹಣದಿಂದಲೇ ರೌಡಿಗಳಿಂದ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಯುವರಾಜ್ ಸ್ವಾಮಿ ದೂರುದಾರರಿಗೆ ಜೀವ ಬೆದರಿಕೆ ಹಾಕಿದ್ದಾನೆ.

    ಕೇಸ್ ನಲ್ಲಿ ಯುವರಾಜ್ ಮೇಲೆ ಬಂದಿದ್ದ ಆರೋಪ:
    ರಾಜಾಜಿನಗರ ಡಾಕ್ಟರ್ ನರಸಿಂಹ ಸ್ವಾಮಿಯ ಪುತ್ರ ರವೀಂದ್ರ ಎಂ.ಟೆಕ್ ಮುಗಿಸಿದ್ದ. ಅವರಿಗೆ ಲೋಕೇಶ್ ಎಂಬಾತನ ಮೂಲಕ ಈ ಯುವರಾಜ್ ಪರಿಚಯವಾಗಿದ್ದನಂತೆ. ಆದರಂತೆ ಅಕ್ಟೋಬರ್ 20, 2019 ರಲ್ಲಿ ಭೇಟಿಯಾಗಿ, ನಾನು ಆರ್‍ಎಸ್‍ಎಸ್ ಮುಖಂಡ, ಬಿಜೆಪಿ ಮುಖಂಡರು ನನಗೆ ಪರಿಚಯ ಅದರಲ್ಲೂ ಕೇಂದ್ರದ ನಾಯಕರು ಪರಿಚಯ ಎಂದು ಹೇಳಿದ್ದನಂತೆ. ನಾನು ನನಗೆ ಗೊತ್ತಿರುವ ಮಂತ್ರಿಯ ಬಳಿ ಮಾತನಾಡಿ ಎಇಇ ಕೆಲಸ ಕೊಡಿಸುವುದಾಗಿ ಹೇಳಿದ್ದನಂತೆ. ಇದಕ್ಕಾಗಿ 75 ಲಕ್ಷ ರೂ. ಲಂಚ ಕೇಳಿದ್ದನಂತೆ. ಅದನ್ನು ಕ್ಯಾಶ್ ಮೂಲಕವೇ ಕೊಡಬೇಕು ಅಂದಿದ್ದ. ಇದಕ್ಕೆ ಒಪ್ಪಿ 30 ಲಕ್ಷ ರೂ.ಗಳನ್ನು ನೀಡಿದ್ದಾರೆ. ಖುದ್ದು ಯುವರಾಜ್ ಮನೆಗೆ ಹೋಗಿ ಆತನಿಗೆ ಹಣವನ್ನ ನೀಡಿದ್ದಾರೆ. ಆದರೆ ಈ ವರೆಗೆ ಆತ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸ್ ನೀಡಿಲ್ಲವಂತೆ. ಈ ಬಗ್ಗೆ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟಿರುವ ಹಣವನ್ನು ರೌಡಿಗಳಿಗೆ ಕೊಟ್ಟು ಸುಪಾರಿ ನೀಡುತ್ತೇನೆ. ನೀನು ಕೊಟ್ಟ ಹಣದಿಂದಲೇ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನಂತೆ.

    ಯುವರಾಜ್ ಸ್ವಾಮಿಯಿಂದ ತಪ್ಪೊಪ್ಪಿಗೆ:
    2019ರ ಮಾರ್ಚ್ ನಲ್ಲಿ ಏರ್‍ಪೋರ್ಟ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಲೋಕೇಶ್ ಕಾರನ್ನು ಬುಕ್ ಮಾಡಿಕೊಂಡಿದ್ದೆ. ಈ ವೇಳೆ ಆತನ ಜೊತೆ ಪರಿಚಯವಾಗಿ ನಂತರ ಆತನ ಮೂಲಕ ಪಿಕ್ ಅಪ್ ಡ್ರಾಪ್ ಮಾಡಿಸಿಕೊಳ್ಳುತ್ತಿದೆ. 2019 ರಲ್ಲಿ ಆತನ ಮೂಲಕ ನರಸಿಂಹಸ್ವಾಮಿ ಅವರು ತಮ್ಮ ಮಗನಿಗೆ ಎಇಇ ಕೆಲಸ ಕೊಡಿಸಿ ಎಂದು ಬಂದಿದ್ದು ನಿಜ. ಈ ಬಗ್ಗೆ ನನ್ನ ಮನೆಯ ನೆಲಮಡಿಯಲ್ಲಿ ಕುಳಿತು ಮಾತನಾಡಿ, 75 ಲಕ್ಷ ಹಣವನ್ನು ಕ್ಯಾಶ್ ಕೇಳಿದ್ದೆ. ಅದಕ್ಕೆ ಒಪ್ಪಿದ ಅವರು, 30 ಲಕ್ಷ ಹಣವನ್ನು ಕ್ಯಾಶ್‍ನಲ್ಲಿ ಕೊಟ್ಟಿದ್ದರು. ಅದನ್ನು ನನ್ನ ಮತ್ತು ಕುಟುಂಬದ ಖರ್ಚಿಗಾಗಿ ಬಳಸಿಕೊಂಡಿದ್ದೇನೆ. ಅವರಿಗೆ ಇಲ್ಲಿತನಕ ಯಾವುದೇ ಕಲಸವನ್ನು ಸಹ ಕೊಡಿಸಿಲ್ಲ. ಕೇಳಲು ಬಂದಾಗಿ ಜೀವ ಬೆದರಿಕೆ ಹಾಕಿದ್ದು ನಿಜ. ಜಾಮೀನು ಪಡೆದು ಹೊರ ಬಂದ ತಕ್ಷಣ ಹಣ ವಾಪಸ್ ನೀಡುತ್ತೇನೆ ಎಂದಿದ್ದಾನೆ.

    ಕೇಸ್ ನಂಬರ್ 38/2020 ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ:
    ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ ಗೂ ಯುವರಾಜ್ ವಂಚಿಸಿದ್ದು, ಅಮಾಯಕ ಕೆಲಸಗಾರನ ಬ್ಯಾಂಕ್ ಅಕೌಂಟ್ ನ್ನು ದುರ್ಬಳಕೆ ಮಾಡಿಕೊಂಡು, ತಾನು ವಂಚಿಸಿ ಪಡೆದ ಹಣವನ್ನು ಡೆಪಾಸಿಟ್ ಮಾಡುತ್ತಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಯಾಗಿದ್ದ. ಈ ಕುರಿತು ಯುವರಾಜ್ ನ ಪ್ರಶ್ನೆ ಮಾಡಿದಾಗ ಹೊಡೆದು ಮನೆಯಿಂದ ಆಚೆ ಹಾಕಿದ್ದ.

    ಕೇಸ್ ನಂಬರ್ 40/2020 ಸೆನ್ ಪೊಲೀಸ್ ಠಾಣೆ:
    ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿ ರೈತ ಹಾಗೂ ಉದ್ಯಮಿ ಸುಧೀಂದ್ರ ರೆಡ್ಡಿಗೆ 1 ಕೋಟಿ ರೂಪಾಯಿ ಉಂಡೆನಾಮ ಹಾಕಿದ್ದಾನೆ. ಬರೋಬ್ಬರಿ 1 ಕೋಟಿ ರೂ.ಗಳನ್ನು ಪಡೆದು ಸ್ವಾಮಿ ವಂಚಿಸಿದ್ದಾನೆ. ಚೆಕ್ ಮೂಲಕ ಯುವರಾಜ್ ಸ್ವಾಮಿ ಹಣ ಪಡೆದಿದ್ದು, ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆ ಬಂದು ವಂಚನೆ ಮಾಡಿದ್ದಾನೆ. 10 ದಿನಗಳಲ್ಲಿ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ. ಈ ಕುರಿತು ಯುವರಾಜ್ ಮತ್ತು ಮಧುರಾಜ್ ವಿರುದ್ಧ ಸೆನ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

    ಮೇ 2020ರಲ್ಲಿ ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆಯಲ್ಲಿ ಯುವರಾಜ್ ನ ಕರೆದುಕೊಂಡು ಸುಧೀಂದ್ರ ರೆಡ್ಡಿ ಮನೆಗೆ ಹೋಗಿದ್ದನಂತೆ. ನಿಮಗೆ ಕೆಎಸ್‍ಆರ್‍ಟಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿದ್ದರಂತೆ. ಅದಕ್ಕಾಗಿ 1 ಕೋಟಿ ಹಣವನ್ನು ಪಡೆದು, ಹುದ್ದೆ ಕೊಡಿಸದೇ ವಂಚನೆ ಮಾಡಿದ್ದಾನಂತೆ. ಬಳಿಕ ಮೊದಲು ಪೋನ್ ರಿಸಿವ್ ಮಾಡದೇ ತಪ್ಪಿಸಿಕೊಳ್ಳುತ್ತಿದ್ದನಂತೆ. ನಂತರ ನಿನಗೆ ಹಣ ವಾಪಸ್ ಕೊಡಲ್ಲ. ಹಣ ಕೇಳಿದರೆ ನಿನಗೊಂದು ಗತಿ ಕಾಣಿಸುತ್ತೆನೆಂದು ಬೆದರಿಕೆ. ಈ ಬಗ್ಗೆ ಯಾರ ಬಳಿಯಾದರೂ ಚರ್ಚೆ ಮಾಡಿದರೆ ಹುಷಾರ್ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

    ನನಗೆ ಗೋವಿಂದರಾಜನಗರದ ಬಿಜೆಪಿ ಕಾರ್ಯಕರ್ತ ಮಧುರಾಜ್ ಮೂಲಕ ಸುಧೀಂದ್ರ ರೆಡ್ಡಿ 2020ರ ಮೇ ತಿಂಗಳಲ್ಲಿ ಪರಿಚಯವಾದರು. ಅವರಿಗೆ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ನಾನು ಹೇಳಿದ್ದು ನಿಜ. ಅದಕ್ಕೆ ಅವರ ಬ್ಯಾಂಕ್ ಖಾತೆಯಿಂದ ಹಾಗೂ ಕ್ಯಾಷ್ ಮೂಲಕ 1 ಕೋಟಿ ರೂಪಾಯಿ ಪಡೆದುಕೊಂಡಿದ್ದೇನೆ. ಆದರೆ ಅವರಿಗೆ ನಾನು ಕೆಲಸವನ್ನು ಕೊಡಿಸಿಲ್ಲ. ಅವರಿಂದ ಪಡೆದ ಹಣವನ್ನು ನನ್ನ ಮನೆಯಲ್ಲಿ ಇಟ್ಟಾಗ 26 ಲಕ್ಷ ರೂ.ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಉಳಿದ ಹಣವನ್ನು ಕಾಡುಕೊತ್ತನಹಳ್ಳಿ ಗ್ರಾಮದ ತೋಟದ ಮನೆಯ ಬೆಡ್ ರೂಂ ನ ಬೀರುವಿನಲ್ಲಿ ಇಟ್ಟಿದ್ದೇನೆ. ನೀವು ಕರೆದುಕೊಂಡು ಹೋದರೆ ಅದನ್ನು ನೀಡುತ್ತೇನೆ. ಮತ್ತಷ್ಟು ಹಣವನ್ನು ಕಾರುಗಳ ಖರೀದಿಗೆ ಬಳಸಿಕೊಂಡಿದ್ದೇನೆ ಎಂದು ಯುವರಾಜ್ ಹೇಳಿದ್ದಾನೆ.

  • 4.5 ಕೋಟಿ ಮೌಲ್ಯದ 9 ಟನ್ ರಕ್ತ ಚಂದನ ಜಪ್ತಿ

    4.5 ಕೋಟಿ ಮೌಲ್ಯದ 9 ಟನ್ ರಕ್ತ ಚಂದನ ಜಪ್ತಿ

    ಬೆಂಗಳೂರು: ಲಾಕ್‍ಡೌನ್ ವೇಳೆ ವಿದೇಶಕ್ಕೆ ರಪ್ತು ಮಾಡಲು ರಕ್ತ ಚಂದನ ಶೇಖರಿಸಿಟ್ಟಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದೆ.

    ಹುಳಿಮಾವು ಬಳಿಯ ಗೋಡೌನ್ ಬಳಿ ಅಕ್ರಮವಾಗಿ ರಕ್ತ ಚಂದನವನ್ನು ಶೇಖರಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ದಾಳಿ ನಡೆಸಿತ್ತು.

     

    ದಾಳಿ ವೇಳೆ ಆರೋಪಿಗಳಾದ ಆನಂದ್ ಕುಮಾರ್, ಅನಿಲ್ ಎಂಬುವರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿದೇಶಕ್ಕೆ ಸರಬರಾಜು ಮಾಡಲು ಬನ್ನೇರುಘಟ್ಟ ಹೊಮ್ಮದೇವನಹಳ್ಳಿ ಗೋಡನ್ ನಲ್ಲಿ ಇಟ್ಟಿರುವುದಾಗಿ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಗೋವಾದಿಂದ ಕೊರೊನಾ ನೆಗೆಟಿವ್ ವರದಿ ಇಲ್ಲದೆ ರಾಜ್ಯಕ್ಕೆ ಬಂದ ವರ- ಪೊಲೀಸರಿಂದ ನಿಶ್ಚಿತಾರ್ಥಕ್ಕೆ ಅವಕಾಶ

    ವಿದೇಶದಲ್ಲಿ ಸರಬಾರಾಜು ಮಾಡಲು ಬೆಂಗಳೂರಿನಲ್ಲಿ ಡೀಲರ್ ಗಳನ್ನು ಹುಡುಕುತ್ತಿದ್ದಾಗಿ ಬಾಯಿಬಿಟ್ಟಿದ್ದಾರೆ. ವಿದೇಶದಲ್ಲಿ ರಕ್ತಚಂದನಕ್ಕೆ ಬಹು ಬೇಡಿಕೆ ಇದೆ. ಅದ್ದರಿಂದ ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆ ಅರಣ್ಯ ಪ್ರದೇಶದಿಂದ ಕಳ್ಳಸಾಗಣಿಕೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಶೇಖರಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

    ಚೀನಾದಲ್ಲಿ ಸುಗಂಧ ದ್ರವ್ಯ ವಸ್ತುಗಳು, ಗೃಹ ಬಳಕೆ ವಸ್ತುಗಳ ಬಳಕೆಗೆ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

  • ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಉದ್ಯಮಿಗಳನ್ನು ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಸಿಸಿಬಿ ಪೊಲೀಸರು ಎದುರಿಸುತ್ತಿದ್ದಾರೆ.

    ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಹಣವನ್ನು ಪಡೆದ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ಸಿಸಿಬಿ ದಾಳಿ ಮಾಡಿದ್ದರು. ಆಗ ಸಿಸಿಬಿ ಪಿಎಸ್‍ಐ ಕಬ್ಬಾಳ್ ರಾಜ್ 55 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಕದೇ ನನ್ನ ಮುಂಬೈ ಹೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿದ್ದಾರೆ. ಸುಳ್ಳು ಕೇಸ್ ಹಾಕಿ ಮಾನಮರ್ಯಾದೆ ತೆಗೆಯೋದಾಗಿ ಬೆದರಿಸಿದ್ದಾರೆ. ಒಬ್ಬರಿಂದ 35 ಲಕ್ಷ ಹಣ ಇನ್ನೊಬ್ಬರಿಂದ 25 ಲಕ್ಷ ಹಣವನ್ನು ಪಡೆದಿದ್ದಾರೆ. ಹರೀಶ್ ಮತ್ತು ವಿಶ್ವಾಸ್ ಎಂಬವರಿಗೆ ಬೆದರಿಸಿ ಲಕ್ಷ ಲಕ್ಷ ಹಣವನ್ನು ಪಡೆದಿದ್ದಾರೆ. ಎಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಹೆದರಿ ಹಣವನ್ನು ನೀಡಿದ್ದಾರೆ. ಇವರೆಲ್ಲ ಸಿಐಡಿ ಪೊಲೀಸರ ಎದುರು ಬಂದು ಮಾಹಿತಿ ಕೊಡಲು ಸಿದ್ಧರಿದ್ದಾರೆ ಎಂದು ಲಕ್ಷ್ಮೀಶ್ ಹೇಳಿದ್ದಾರೆ.

  • ರಾಗಿಣಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

    ರಾಗಿಣಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ಪ್ರಕರಣ ನಂಬರ್ 1 ಆರೋಪಿ ಶಿವಪ್ರಕಾಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಒಗ್ಗೂಡಿಸಿ ನ್ಯಾ.ನಾಗೇಶ್ವರಾವ್ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆಗೂ ಮುನ್ನ ಅನಾರೋಗ್ಯ ಹಿನ್ನಲೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಆರೋಪಿ ಶಿವಪ್ರಕಾಶ್ ಮನವಿ ಮಾಡಿದ ಹಿನ್ನಲೆ ವಿಚಾರಣೆ ಮುಂದೂಡಲಾಯಿತು. ಸೋಮವಾರ ಬದಲಿ ಪೀಠದಲ್ಲಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.

    ಈ ಹಿಂದೆ ಸಹ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಸಹ ನಟಿ ಜೈಲಿನಲ್ಲೇ ಬರಮಾಡಿಕೊಳ್ಳುವಂತಾಗಿತ್ತು.

    ಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಸಿಬಿ ಪೊಲೀಸರಿಗೂ ನೋಟಿಸ್ ನೀಡಲಾಗಿತ್ತು. ಅಲ್ಲದೆ ಅರ್ಜಿ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು. ಆದರೆ ಇಂದು ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಆರೋಪಿ ಶಿವಪ್ರಕಾಶ್ ಅನಾರೋಗ್ಯದ ಹಿನ್ನೆಲೆ ಮನವಿ ಮಾಡಿದ್ದಕ್ಕೆ ಮತ್ತೆ ವಿಚಾರಣೆಯನ್ನು ಮುಂದೂಡಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 4ರಂದು ತುಪ್ಪದ ಬೆಡಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ, ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

  • ಸರ್ಕಾರಿ ಮುದ್ರೆ ಬಳಸಿ ಬೃಹತ್ ವಂಚನೆ – ಬೆಂಗಳೂರಲ್ಲಿ ಸಿಕ್ಕಿಬಿತ್ತು ನಕಲಿ ಗ್ಯಾಂಗ್

    ಸರ್ಕಾರಿ ಮುದ್ರೆ ಬಳಸಿ ಬೃಹತ್ ವಂಚನೆ – ಬೆಂಗಳೂರಲ್ಲಿ ಸಿಕ್ಕಿಬಿತ್ತು ನಕಲಿ ಗ್ಯಾಂಗ್

    ಬೆಂಗಳೂರು: ಸರ್ಕಾರದ ಮುದ್ರೆಯನ್ನು ಬಳಸಿಕೊಂಡು ನಕಲಿ ಐಡಿ ಕಾರ್ಡ್‍ಗಳನ್ನು ಮಾಡಿ ಜನಸಾಮಾನ್ಯರಿಗೆ ಟೋಪಿ ಹಾಕುತ್ತಿದ್ದ 10 ಜನರ ಗ್ಯಾಂಗ್ ಸದಸ್ಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಕನಕಪುರ ರೋಡ್‍ನಲ್ಲಿರುವ ಹೆರಿಟೇಜ್ ಅಪಾರ್ಟ್‍ಮೆಂಟ್‍ನಲ್ಲಿ ನಕಲಿ ಐಡಿ ಜಾಲ ನಡೆಯುತ್ತಿತ್ತು. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಖಾಸಗಿ ಕಂಪನಿಯ ಉದ್ಯೋಗಿಗಳು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಈ ಕತರ್‍ನಾಕ್ ಗ್ಯಾಂಗ್ ಸರ್ಕಾರದ ಐಡಿ ಕಾರ್ಡ್‍ಗಳಂತೆ ಕಾಣುವ ವೋಟರ್ ಐಡಿ, ಪ್ಯಾನ್ ಕಾರ್ಡ್, ಆರ್‍ಸಿ ಬುಕ್ ಹಾಗೂ ಇನ್ನಿತರ ಪ್ರಮುಖ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿಕೊಟ್ಟು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿತ್ತು.

    ಈ ನಕಲಿ ಐಡಿ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಹೆಸರು ವಿಳಾಸವಿಲ್ಲದ 28 ಸಾವಿರ ವೋಟರ್ ಐಡಿ, 9 ಸಾವಿರ ಆಧಾರ್ ಕಾರ್ಡ್, 9 ಸಾವಿರ ಪ್ಯಾನ್ ಕಾರ್ಡ್‍ಗಳು 12,200 ಆರ್ ಸಿ ಕಾರ್ಡ್‍ಗಳು, 6,240 ಹೆಸರು ವಿಳಾಸವಿರುವ ನಕಲಿ ಎಲೆಕ್ಷನ್ ಐಡಿ ಪತ್ತೆಯಾಗಿದೆ. ಐಡಿ ಕಾರ್ಡ್ ಜಾಲದ ಪ್ರಮುಖ ಆರೋಪಿ ರಾಜಸ್ಥಾನದ ಕಮಲೇಶ್ ಮತ್ತು ತಂಡವನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರೋಸ್ ಮಾರ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ನಕಲಿ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರ್‍ಟಿಒ ಕಚೇರಿಯ ಕಾರ್ಡ್‍ಗಳನ್ನ ಪ್ರಿಂಟಿಂಗ್ ಮಾಡಲು ರೋಸ್ ಮಾರ್ಟ್ ಕಂಪನಿ ಗುತ್ತಿಗೆ ಪಡೆದಿತ್ತು. ಇದನ್ನೇ ಲಾಭವನ್ನಾಗಿಸಿದ ಕಂಪನಿಯ ಇಬ್ಬರು ಮಾಜಿ ಮತ್ತು ಕೆಲ ಹಾಲಿ ನೌಕರರಿಂದ ಸರ್ಕಾರಕ್ಕೆ ವಂಚನೆಮಾಡಿರುವುದು ಬೆಳಕಿಗೆ ಬಂದಿದೆ.

    ಬಂಧಿತರನ್ನು ಕಮಲೇಶ್, ಲೋಕೇಶ್, ಸುದರ್ಶನ್, ದರ್ಶನ್, ಶ್ರೀಧರ್, ಚಂದ್ರಪ್ಪ, ಅಭಿನಾಶ್, ತೇಜಸ್ ಹಾಗೂ ಶ್ರೀಧರ್ ದೇಶಪಾಂಡೆ ಎಂದು ಗುರುತಿಸಲಾಗಿದೆ. ಶ್ರೀಧರ್ ಖಾಸಗಿ ಚಾನೆಲ್‍ನ ನೌಕರನಾಗಿದ್ದು, ಶ್ರೀಧರ್, ಲೋಕೇಶ್, ರೋಸ್ ಮಾರ್ಟ್ ಕಂಪನಿಯ ನೌಕರಾಗಿದ್ದಾರೆ. ಇನ್ನೂ ಈ ಜಾಲದ ಹಿಂದೆ ಇನ್ನೆಷ್ಟೂ ಕಾಣದ ಕೈಗಳಿವೆ ಎಂದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

    </p>

  • ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ –  ಹ್ಯಾಕರ್‌ ಶ್ರೀಕಿ

    ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    – ಭಗವದ್ಗೀತೆ ಪುಸ್ತಕದೊಂದಿಗೆ ಸಿಸಿಬಿ ಕಚೇರಿಗೆ ಆಗಮನ
    – ಮುಂದೆ ಚೀನಿ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತೇನೆ

    ಬೆಂಗಳೂರು: “ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತೇನೆ” ಇದು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಪೊಲೀಸ್‌ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.

    ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಭಗವದ್ಗೀತೆ ಬೇಕೇಬೇಕು:
    ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.

    ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್‌ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.

    ಆಧ್ಯಾತ್ಮದ ಬಗ್ಗೆ ಎಷ್ಟು ಒಲವು ಹೊಂದಿದ್ದಾನೆ ಎಂದರೆ ಪ್ರತಿ ಗಂಟೆಗೆ ಭಗವದ್ಗೀತೆ ಓದಿ ಬಳಿಕ ಧ್ಯಾನ ಮಾಡುತ್ತಿದ್ದಾನೆ. ವಿಚಾರಣೆಯ ಸಂದರ್ಭದಲ್ಲೂ ಶ್ರೀಕಿ ಭಗವದ್ಗೀತೆಯಲ್ಲಿ ಬರುವ ಕೃಷ್ಣನ  ಉಪದೇಶವನ್ನು ಹೇಳುತ್ತಿದ್ದಾನೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್‌, ಸರ್ಕಾರಿ ಟೆಂಡರ್‌ ವೆಬ್‌ಸೈಟ್‌ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅರೆಸ್ಟ್

    ಹ್ಯಾಕಿಂಗ್‌ ನಿಲ್ಲಿಸಲ್ಲ:
    ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಹ್ಯಾಕಿಂಗ್‌ ಹೇಗೆ?
    ಹ್ಯಾಕರ್ ಶ್ರೀಕಿ ವೆಬ್‌ಸೈಟ್‌ ಹ್ಯಾಕ್‌ ಮಾಡಲು Hak5 WIFI pineapple ಡಿವೈಸ್‌ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್‌ ಕೋಡ್‌ನಲ್ಲಿ ಬಗ್‌ ಪತ್ತೆ ಮಾಡಿ ಸರ್ವರ್‌ ಹ್ಯಾಕ್‌ ಮಾಡುತ್ತಿದ್ದ. ನಂತರ ವೆಬ್‌ಸೈಟ್‌ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್‌ ವೆಬ್‌ಸೈಟ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದ.

  • ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    – ಹ್ಯಾಕ್ ಮಾಡಿ ಎದುರಾಳಿ ಆಟಗಾರರ ಕಾರ್ಡ್ ತಿಳಿಯುತ್ತಿದ್ದ
    – ಬೇಕಾದ ವ್ಯಕ್ತಿಗಳಿಗೆ ಸರ್ಕಾರಿ ಟೆಂಡರ್
    – ಚೀನಾ ಪೋಕರ್ ವೆಬ್‍ಸೈಟ್ ಮೇಲೆ ಕಣ್ಣು
    – ಸಿಸಿಬಿ ಪೊಲೀಸರಿಂದ ಶ್ರೀಕೃಷ್ಣ ಅರೆಸ್ಟ್

    ಬೆಂಗಳೂರು: ಸರ್ಕಾರದ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಹಣ ಮಾಡುತ್ತಿದ್ದ ಕುಖ್ಯಾತ ಹ್ಯಾಕರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(25) ಬಂಧಿತ ಆರೋಪಿ. ಮಂಗಳವಾರ ಈತನನ್ನು ಬಂಧಿಸಿದ್ದು ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ ಪಂತ್‌ ಈತನ ಬಗ್ಗೆ ವಿವರಣೆ ನೀಡಿದ್ದಾರೆ.

    ಶ್ರೀಕೃಷ್ಣ ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ.

    ಹಣ ಹೇಗೆ?
    ಹ್ಯಾಕಿಂಗ್‍ನಲ್ಲಿ ಎಷ್ಟು ತಜ್ಞ ಆಗಿದ್ದ ಪೋಕರ್ ಗೇಮ್ ವೇಳೆ ಉಳಿದ ಆಟಗಾರರ ಬಳಿ ಯಾವ ಕಾರ್ಡ್ ಇದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುತ್ತಿದ್ದ. ಈ ಮೂಲಕ ತನಗೆ ಬೇಕಾದಂತೆ ಕಾರ್ಡ್ ಹಾಕಿ ಆಟವನ್ನು ಆಡಿ ದುಡ್ಡು ಮಾಡುತ್ತಿದ್ದ. ಈ ಸಂಬಂಧ 2018ರಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯನ್ನು ಅನಾಮಿಕ ವ್ಯಕ್ತಿಗಳ ವಿರುದ್ಧ ಪೋಕರ್‌ ಕಂಪನಿಯೊಂದು ದೂರು ನೀಡಿ ಪ್ರಕರಣ ದಾಖಲಾಗಿತ್ತು. ಇಷ್ಟೇ ಅಲ್ಲದೇ ಆನ್‍ಲೈನ್ ಗೇಮಿಂಗ್ ಆಪ್‍ಗಳನ್ನೇ ಹ್ಯಾಕ್ ಮಾಡಿ ಕೊನೆಗೆ ಡೆವಲಪರ್‌ಗಳ ಜೊತೆ ಸಂವಹನ ನಡೆಸಿ ಬೇಕಾದಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ. ಸದ್ಯದ ಪ್ರಾಥಮಿಕ ತನಿಖೆಯ ವೇಳೆ ಹ್ಯಾಕ್ ಮಾಡಿ 350 ಕೋಟಿ ರೂ. ಹಣವನ್ನು ಶ್ರೀಕೃಷ್ಣ ಪಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪ್ಲಾಸ್ಟಿಕ್ ಕುರ್ಚಿ ಒಡೆದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಸಹೋದರರು

    ಟೆಂಡರ್ ಹ್ಯಾಕ್ ಹೇಗೆ?
    ಸರ್ಕಾರಗಳು ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಆನ್‍ಲೈನ್‍ನಲ್ಲಿ ಟೆಂಡರ್ ಕರೆಯುವ ವ್ಯವಸ್ಥೆ ಮಾಡಿಕೊಂಡಿವೆ. ಈತ ಈ ಟೆಂಡರ್ ನಡೆಯುವ ವೆಬ್‍ಸೈಟ್‍ಗಳನ್ನೇ ಹ್ಯಾಕ್ ಮಾಡುತ್ತಿದ್ದ. ಟೆಂಡರ್ ವೇಳೆ ಬೇಕಾದ ವ್ಯಕ್ತಿಗಳಿಗೆ ಟೆಂಡರ್ ಸಿಗುವಂತೆ ಮಾಡುತ್ತಿದ್ದ. ಹೀಗಾಗಿ ಬಹಳಷ್ಟು ದೊಡ್ಡ ವ್ಯಕ್ತಿಗಳ ಈತನ ಹಿಂದೆ ಇರುವ ಅನುಮಾನ ವ್ಯಕ್ತವಾಗಿದೆ.

    ಬಿಟ್‍ಕಾಯಿನ್ ಬಳಕೆ:
    ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ.

     

    ಪತ್ತೆಯಾಗಿದ್ದು ಹೇಗೆ?
    ಹೆಚ್ಚು ಸುದ್ದಿಯಾಗುತ್ತಿರುವ ಡ್ರಗ್ಸ್ ಪ್ರಕರಣವನ್ನು ಸಿಸಿಬಿ ಮತ್ತು ಎನ್‍ಸಿಬಿ ತನಿಖೆ ನಡೆಸುತ್ತಿದೆ. ಈ ತನಿಖೆಯಿಂದಾಗಿ ಕಳೆದ ವಾರ ಸಿಸಿಬಿ ಪೊಲೀಸರು ಸದಾಶಿವ ನಗರದಿಂದ ಸಂಜಯ್, ಸುನೀಶ್ ಹೆಗ್ಡೆ, ಹೇಮಂತ್ ಅವರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆಯ ಸಮಯದಲ್ಲಿ ಶ್ರೀಕೃಷ್ಣನನ್ನು ಬಳಸಿಕೊಂಡು ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ತರಿಸುತ್ತಿದ್ದ ವಿವರವನ್ನು ತಿಳಿಸಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಈಗ ಬಂಧನವಾಗಿದೆ.

    ಜಾಮೀನು ತರುತ್ತಿದ್ದ:
    ಈತನ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಬಂಧನ ಮಾಡದ ಕಾರಣ ಈತ ಈ ಕೃತ್ಯ ಎಸಗಿದ್ದು ಇದಕ್ಕೆ ಪೊಲೀಸರ ಲೋಪವೇ ಕಾರಣ ಎಂಬ ಪ್ರಶ್ನೆಗೆ ಕಮಲ್ ಪಂತ್, ಬಂಧನಕ್ಕೂ ಮೊದಲೇ ಶ್ರೀಕೃಷ್ಣ ನ್ಯಾಯಾಲಯದಿಂದ ಜಾಮೀನು ತರುತ್ತಿದ್ದ. ಹೀಗಾಗಿ ಈತನ ಬಂಧನ ಸಾಧ್ಯವಾಗುತ್ತಿರಲಿಲ್ಲ. ಸದ್ಯಕ್ಕೆ ಈತನ ಮೇಲೆ ಮೂರು ಪ್ರಕರಣಗಳಿವೆ. ಮುಂದೆ ತನಿಖೆ ಮಾಡುತ್ತೇವೆ. ಈತ ಅತಿ ದೊಡ್ಡ ಹ್ಯಾಕರ್ ಎಂಬ ಕಾರಣಕ್ಕೆ ನಾನು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದ್ದೇನೆ. ಇಲ್ಲದಿದ್ದರೆ ಈತನ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಅಗತ್ಯವೇ ಇರಲಿಲ್ಲ. ಈಗ ಈತನನ್ನು ಬಂಧಿಸಿದ್ದಕ್ಕೆ ಸಿಸಿಬಿ ಪೊಲೀಸರನ್ನು ಅಭಿನಂದಿಸಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ. ಎಲ್ಲವನ್ನು ಸಮಗ್ರವಾಗಿ ತನಿಖೆ ನಡೆಸುತ್ತೇವೆ ಎಂದು ಉತ್ತರಿಸಿದರು.

    ಚೀನಾ ಸೈಟ್ ಮೇಲೆ ಕಣ್ಣು:
    ಪೋಕರ್ ಅಪ್ಲಿಕೇಶನ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಶ್ರೀಕೃಷ್ಣ ಚೀನಾದ ಗುಡ್ ಗೇಮ್ ಪೋಕರ್ ವೆಬ್‍ಸೈಟ್ ಹ್ಯಾಕ್ ಮಾಡಲು ಪ್ರಯತ್ನ ನಡೆಸುತ್ತಿದ್ದ. ಕಳೆದ ಜುಲೈ ತಿಂಗಳಿನಿಂದ ಈತ ನಿರಂತರ ಪ್ರಯತ್ನ ನಡೆಸುತ್ತಿದ್ದ. ಈತನ ಎಲ್ಲ ಖರ್ಚುಗಳನ್ನು ಬೇರೆಯವರು ನೋಡಿಕೊಳ್ಳುತ್ತಿದ್ದರು. ಚಿಕ್ಕಮಗಳೂರು, ಕಬಿನಿ, ಗೋವಾಗಳಿಗೆ ಈತ ತೆರಳಿದ್ದ. ಹೋದ ಕಡೆ ಎಲ್ಲ ಹ್ಯಾಕಿಂಗ್ ಮಾಡುತ್ತಿದ್ದ. ಒಂದು ವೇಳೆ ಈತ ಚೀನಾದ ವೆಬ್‍ಸೈಟ್ ಹ್ಯಾಕ್ ಮಾಡಿದ್ದರೆ ಭಾರೀ ಹಣವನ್ನು ಗಳಿಸುವ ಸಾಧ್ಯತೆ ಇತ್ತು.

    ಪ್ರಭಾವಿಗಳ ನಂಟು:
    ಯುಬಿ ಸಿಟಿಯಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಆದರೆ ಪ್ರಭಾವಿ ವ್ಯಕ್ತಿಗಳಿಂದಾಗಿ ಈತ ಪಾರಾಗಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಶ್ರೀಕೃಷ್ಣ ಹೋದ ಕಡೆಯೆಲ್ಲ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ತಂಗುತ್ತಿದ್ದು ಖರ್ಚುಗಳನ್ನು ಬೇರೆ ವ್ಯಕ್ತಿಗಳು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಈತನನ್ನು ಬಳಸಿಕೊಂಡು ರಾಜಕೀಯದ ಪ್ರಭಾವಿ ವ್ಯಕ್ತಿಗಳು ಹ್ಯಾಕಿಂಗ್ ನಡೆಸುತ್ತಿರಬಹುದು ಎಂಬ ಅನುಮಾನ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

  • ಡಿಜೆ, ಕೆಜಿ ಹಳ್ಳಿ ಪ್ರಕರಣ – ಮಾಜಿ ಮೇಯರ್ ಸಂಪತ್‍ರಾಜ್ ಪರಾರಿ

    ಡಿಜೆ, ಕೆಜಿ ಹಳ್ಳಿ ಪ್ರಕರಣ – ಮಾಜಿ ಮೇಯರ್ ಸಂಪತ್‍ರಾಜ್ ಪರಾರಿ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಯಗಿರುವ ಮಾಜಿ ಮೇಯರ್ ಸಂಪತ್‍ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿ ಪರಾರಿ ಆಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಗಿದೆ.

    ಕೊರೊನಾ ಸೋಂಕು ತಗುಲಿದೆ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡೋ ಭಯದಲ್ಲಿ ಸಿನಿಮಾ ಶೈಲಿಯಲ್ಲಿ ರಾತ್ರೋರಾತ್ರಿ ಪರಾರಿಯಾಗಿದ್ದು, ಗುರುವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಸಿಬಿ ತಂಡಕ್ಕೆ ಶಾಕ್ ಆಗಿದೆ. ಬುಧವಾರ ಮಧ್ಯರಾತ್ರಿಯೇ ಡಿಸ್‍ಚಾರ್ಜ್ ಆಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸೋದರಳಿಯನ್ನ ಬಿಟ್ಟು ಆಟ ಆಡಲು ಹೋಗಿ ತಗ್ಲಾಕೊಂಡ್ರಾ ಕಾರ್ಪೋರೇಟರ್ ಸಂಪತ್‍ರಾಜ್?

    ಸಂಪತ್ ರಾಜ್ ಡಿಸ್ಚಾರ್ಜ್ ಮಾಡುವಾಗ ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸಿಸಿಬಿ ಗಮನಕ್ಕೆ ತರದೇ ರಾತ್ರೋರಾತ್ರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿದ್ದು, ಪರಾರಿಯಾಗಿದ್ದಾರೆ. ಕಾಕ್ಸ್ ಟೌನ್ ನಲ್ಲಿರುವ ಸಂಪತ್ ರಾಜ್ ಮನೆ ಸಹ ಬೀಗ ಹಾಕಿದ್ದು, ಸಿಸಿಬಿ ತಂಡ ಸಂಪತ್ ರಾಜ್ ಗಾಗಿ ಹುಡುಕಾಟ ನಡೆಸಿದೆ. ಅಲ್ಲದೆ ಡಿಸ್ಚಾರ್ಜ್ ಮಾಡಿದ್ದರ ಕುರಿತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರು ಗಲಭೆ – ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್​ಗಳಿಗೆ ನೋಟಿಸ್

    ಸಂಪತ್ ರಾಜ್ ಕೇರಳ ಕಡೆ ಪರಾರಿಯಾಗಿರುವ ಶಂಕೆ ಹಿನ್ನಲೆ ಸಿಸಿಬಿ ತಂಡ ಹುಡುಕಾಟ ನಡೆಸಿದೆ. ನಾಳೆ ವಿಚಾರಣೆಗೆ ಹಾಜರಾಗಲು ಬ್ಯಾಪಿಸ್ಟ್ ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡಿ ಸಿಸಿಬಿ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಸಂಪತ್ ರಾಜ್ ಮೆಡಿಕಲ್ ರಿಪೋರ್ಟ್ ನೋಡಿ ಸಿಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಸೆಪ್ಟೆಂಬರ್ 14 ರಂದು ಅಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್, ಒಂದೇ ತಿಂಗಳಲ್ಲಿ 4 ಬಾರಿ ಅಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಮೆಡಿಕಲ್ ರಿಪೋರ್ಟ್ ಸೀಜ್ ಮಾಡಿ ಸಿಸಿಬಿ ತಂಡ ಪರಿಶೀಲನೆ ನಡೆಸಿದೆ. ಸಂಪತ್ ರಾಜ್‍ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

    sಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ 50 ಪುಟಗಳ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.

    ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿತ್ತು.

  • ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ಬೆಂಗಳೂರು: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಾರ್ಥಕ್ ಆರ್ಯ ಬಂಧಿತ ಟೆಕ್ಕಿಯಾಗಿದ್ದು, ಫಾರಿನರ್ಸ್ ಪೋಸ್ಟ್ ಮೂಲಕ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇತ್ತೀಚಿಗೆ ಬೆಲ್ಜಿಯಂನಿಂದ ನಗರಕ್ಕೆ ಬಂದ ಕೊರಿಯರ್ ಮೂಲಕ ಆರೋಪಿ ಡ್ರಗ್ಸ್ ತರಿಸಿದ್ದ. ಅನುಮಾನದಿಂದ ಪೊಲೀಸರು ಈ ಕೊರಿಯರ್ ಯನ್ನು ಟ್ರ್ಯಾಕ್ ಮಾಡಿ ನಗರದ ಚಾಮರಾಜಪೇಟೆ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ನಡೆಸಿದ್ದರು.

    ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್ ನಲ್ಲಿ ಸಿಸಿಬಿ ಪರಿಶೀಲನೆ ನಡೆಸಿದ ಬಳಿಕ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್‍ಎಸ್‍ಆರ್ ಲೇಔಟ್‍ನ ಟೆಕ್ಕಿ ಮನೆಯಲ್ಲಿಪೊಲೀಸರು ಶೋಧ ನಡೆಸಿದ್ದರು. ಸಿಸಿಬಿ ವಿಶೇಷ ವಿಚಾರಣಾ ದಳದಿಂದ ಟೆಕ್ಕಿ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಟೆಕ್ಕಿ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

    ಸಿಸಿಬಿ ಪೊಲೀಸರ ದಾಳಿಯ ಸಂದರ್ಭದಲ್ಲಿ 4.99 ಗ್ರಾಂ ಎಲ್‍ಎಸ್‍ಡಿ, ಎಂಎಚ್ ಸೀರಿಸ್ ಪಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿ ಸಾರ್ಥಕ್ ಆರ್ಯ ನಗರದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

  • ಆಸ್ತಿಗಾಗಿ ಸಂಜನಾ, ರಾಗಿಣಿ ಜಾಮೀನಿಗಾಗಿ ಬೆದರಿಕೆ ಪತ್ರ – ಇಬ್ಬರ ಬಂಧನ

    ಆಸ್ತಿಗಾಗಿ ಸಂಜನಾ, ರಾಗಿಣಿ ಜಾಮೀನಿಗಾಗಿ ಬೆದರಿಕೆ ಪತ್ರ – ಇಬ್ಬರ ಬಂಧನ

    ತುಮಕೂರು: ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟಿನ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರರಕಣದಲ್ಲಿ ಟ್ವಿಸ್ಟ್ ಲಭಿಸಿದ್ದು, ಕೌಟುಂಬಿಕ ಕಲಹದ ದ್ವೇಷದ ಕಾರಣದಿಂದ ಬಾಂಬ್ ಬೆದರಿಕೆ ಹಾಕಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ ಎಂಬವರನ್ನು ಬಂಧಿಸಲಾಗಿದೆ. ಕೌಟುಂಬ ಕಲಹದ ದ್ವೇಷ ಕಾರಣದಿಂದ ರಾಜಶೇಖರ್ ಪತ್ರವನ್ನು ಕಳುಹಿಸಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ.

    ಕೌಟುಂಬಿಕ ಕಲಹ: ಸದ್ಯ ಬಂಧನವಾಗಿರುವ ರಾಜಶೇಖರ್, ರಮೇಶ್ ಎಂಬಾತನ ಮೇಲೆ ದ್ವೇಷ ಸಾಧಿಸಲು ಪತ್ರ ಕಳುಹಿಸಿದ್ದ ಎನ್ನಲಾಗಿದೆ. ಈ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಕೆಲ ಸಮಯದಿಂದ ರಾಜಶೇಖರ್ ಹಾಗೂ ರಮೇಶ್ ನಡುವೆ ಆಸ್ತಿ ವಿಚಾರವಾಗಿ ಜಗಳವಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರಮೇಶ್‍ನನ್ನು ಸಿಲುಕಿಸಲು ಪ್ಲಾನ್ ಮಾಡಿದ್ದ ರಾಜಶೇಖರ್, ವೇದಾಂತನ ಸಹಾಯ ಪಡೆದು ಪತ್ರ ಬರೆಯಿಸಿದ್ದ. ಆ ಬಳಿಕ ಚೇಳೂರು ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದ.

    ರಾಜಶೇಖರ್ ಮಾವನ ಮನೆಯ ಆಸ್ತಿಗಾಗಿ ಅವರ ಇಬ್ಬರು ಮಕ್ಕಳನ್ನು ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫಲಕಾರಿ ಆಗಿರಲಿಲ್ಲ. ಕಳೆದ 9 ತಿಂಗಳ ಹಿಂದೆ ರಮೇಶ್ ಅದೇ ಮನೆಯಲ್ಲಿ ಮದುವೆಯಾಗಿದ್ದ, ಪರಿಣಾಮ ಆತನ ವಿರುದ್ಧ ಪಿತೂರಿ ಮಾಡಿದ್ದ ರಾಜಶೇಖರ್ ಪತ್ರ ಬರೆದಿದ್ದ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

    ರಾಜಶೇಖರ್ ಆಸ್ತಿಗಾಗಿ ಕಳೆದ ವರ್ಷಗಳಿಂದ ನಾಟಕ ಮಾಡುತ್ತಿದ್ದ. ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ಈ ಹಿಂದೆ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿ ಮಾಡಿ ರಮೇಶ್ ಹಾಗೂ ಮಾವನ ಮೇಲೆ ಆರೋಪ ಮಾಡಿದ್ದ. ಛಾಪಾಕಾಗದಲ್ಲಿ ಒಂದೂವರೆ ಲಕ್ಷಕ್ಕೆ ಮಗಳನ್ನೇ ಮಾರಾಟ ಮಾಡಿದ್ದಾರೆ ಎಂದು ಸೃಷ್ಟಿಸಿ ಆರೋಪಿಸಿದ್ದ. ಈ ವೇಳೆ ನಕಲಿ ಛಾಪಾಕಾಗದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಚೇಳೂರು ಪೊಲೀಸರು ರಾಜಶೇಖರನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪೊಲೀಸರ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿದ ರಾಜಶೇಖರ್ ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ಎರಡು ಪ್ರಮುಖ ಪ್ರಕರಣಗಳ ಹೆಸರು ಬಳಿಸಿಕೊಂಡು ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಆ ಆರೋಪವನ್ನು ರಮೇಶ್ ಮೇಲೆ ಹೋಗುವಂತೆ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.