Tag: CCB police

  • ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ಮಹಾಲಕ್ಷ್ಮಿ ಲೇಔಟ್ ಶ್ರೀ ವೆಂಕಟೇಶ್ವರ ಇನ್‍ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.

    ಮಂಗಳವಾರ ಸಂಜೆಯಿಂದ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ಆಂಧ್ರ ಮೂಲದ ಶ್ರೀನಿವಾಸ್ ರೆಡ್ಡಿಗೆ ಸೇರಿದ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಈ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಹಣ ನೀಡಿದರೆ ಬೇಕಾದ ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಿದ್ರು. ಎಗ್ಗಿಲ್ಲದೇ ಮಾರ್ಕ್ಸ್ ಕಾರ್ಡ್ ಮಾರಾಟ ದಂಧೆ ನಡೆಯುತ್ತಿತ್ತು. ಒಂದು ಮಾರ್ಕ್ಸ್ ಕಾರ್ಡಿಗೆ 80 ಸಾವಿರದಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು. ಅದೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಾರ್ಕ್ಸ್ ಕಾರ್ಡ್ ದಂಧೆ ಎಗ್ಗಿಲ್ಲದೆ ನಡೆಯುತಿತ್ತು.

    ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಸೇರಿ ಎಲ್ಲಾ ಡಿಗ್ರಿಗಳ ನಕಲಿ ಅಂಕ ಪಟ್ಟಿಯನ್ನು ಇಲ್ಲಿ ಮಾಡಿಕೊಡಲಾಗುತಿತ್ತು. ಒಂದು ವಿಷಯಕ್ಕೆ 15 ಸಾವಿರ ದಿಂದ 3 ಲಕ್ಷದವರೆಗೂ ಚಾರ್ಜ್ ಮಾಡಲಾಗುತಿತ್ತು. ನಾಮಾಕಾವಸ್ಥೆಗೆ ಪರೀಕ್ಷೆ ಬರೆಸುತ್ತಿದ್ದ ಆರೋಪಿಗಳು ಎಕ್ಸಾಮ್ ಅಟೆಂಡ್ ಮಾಡಿ ಬಂದರೆ ಸಾಕು ಇಲ್ಲಿ ಸುಲಭವಾಗಿ ಡಿಗ್ರಿ ಸಿಗುತಿತ್ತು. ಎಲ್.ಎಲ್.ಬಿ ಪದವಿಗಾಗಿ 3 ಲಕ್ಷ ಕೊಟ್ಟರೆ ಸರ್ಟಿಫಿಕೇಟ್ ಮಾಡಿಸಿ ಕೊಡುತ್ತಿದ್ದರು.

    ಈ ಆರೋಪಿಗಳು ಕೊಡುತ್ತಿದ್ದ ಮಾರ್ಕ್ಸ್ ಕಾರ್ಡ್ ಆಂಧ್ರ ಹಾಗೂ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳದ್ದಾಗಿತ್ತು. ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಮಾರ್ಕ್ಸ್ ಕಾರ್ಡ್ ಗಳನ್ನು ಲಕ್ಷ ಲಕ್ಷ ದುಡ್ಡು ತಗೊಂಡು ಕೊಡಿಸುತ್ತಿದ್ದರು.

    ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ತಂಡಕ್ಕೆ ಸಾವಿರಾರು ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ದಾಳಿ ವೇಳೆ ಇನ್‍ಸ್ಟಿಟ್ಯೂಟ್ ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹನಿಟ್ರ್ಯಾಪ್ ಪ್ರಕರಣದಲ್ಲಿ ಮಗನಿಗೆ ಸಾಥ್ ಕೊಟ್ರಾ ತಾಯಿ?

    ಹನಿಟ್ರ್ಯಾಪ್ ಪ್ರಕರಣದಲ್ಲಿ ಮಗನಿಗೆ ಸಾಥ್ ಕೊಟ್ರಾ ತಾಯಿ?

    – ಬಗೆದಷ್ಟು ತೆರೆದುಕೊಳ್ತಿದೆ `ಹನಿ’ ಕಹಾನಿ

    ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಸಿಸಿಬಿ ಪೊಲೀಸರಿಗೆ ಮತ್ತೊಂದು ಮಜಲಿನ ಸ್ಫೋಟಕ ಮಾಹಿತಿ ಸಿಕ್ಕಿದೆ. ಆರೋಪಿ ರಾಘವೇಂದ್ರ ಅಕ್ರಮ ದಂಧೆಯಲ್ಲಿ ಅವರ ತಾಯಿ ಪಾತ್ರ ಇರುವ ಬಗ್ಗೆ ಸಿಸಿಬಿಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದೆ.

    ಸಿಸಿಬಿ ಪೊಲೀಸರು ರಾಘವೇಂದ್ರ ತಾಯಿ ಜ್ಯೋತಿ ಮೇಲೆ ಕೂಡ ಒಂದು ಕಣ್ಣಿರಿಸಿದ್ದಾರೆ. ಪಬ್ಲಿಕ್ ಟಿವಿ ಕ್ಯಾಮೆರಾದ ಮುಂದೆ ನಾನು ಮತ್ತು ನನ್ನ ಮಗ ರಾಘವೇಂದ್ರ ಅಮಾಯಕರು. ವಿನಾಕಾರಣ ನಮ್ಮನ್ನ ಬೆದರಿಸುತ್ತಿದ್ದಾರೆಂದು ಹನಿಟ್ರ್ಯಾಪ್ ಕಿಂಗ್‍ಪಿನ್ ರಾಘವೇಂದ್ರನ ತಾಯಿ ಜ್ಯೋತಿ ಕಣ್ಣಿರಿಟ್ಟಿದ್ದರು. ಆದರೆ ಇದೀಗ ಸಿಸಿಬಿ ಪೊಲೀಸರಿಗೆ ಸಿಕ್ಕ ಮಹಿತಿ ಆಕೆಯ ಅಸಲಿಯತ್ತಿನ ಬಗ್ಗೆ ಸಂಶಯ ಮೂಡಿಸಿದೆ. ರಾಘವೇಂದ್ರನ ಅಕ್ರಮ ದಂಧೆಯ ವಿಡಿಯೋ ಸೇರಿದಂತೆ ಹಲವು ದಾಖಲೆಗಳನ್ನ ಲಾಕರ್ ನಲ್ಲಿ ಇಟ್ಟಿದ್ದ ಬಗ್ಗೆ ಮಾಹಿತಿ ಸಿಕ್ಕಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ- ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ

    ಈ ರಾಘವೇಂದ್ರ ಮತ್ತು ಟೀಂ ಸಾಮಾನ್ಯದವರಲ್ಲ. ಬ್ಲಾಕ್ ಮೇಲ್ ಮಾಡಿ ಹಣ ಪಿಕೋದ್ರಲ್ಲಿ ನಿಸ್ಸೀಮರು. ಅರೆಬರೆ ವಿಡಿಯೋ ತೋರಿಸಿ ಇಬ್ಬರು ಶಾಸಕರ ಬಳಿ ಹಣ ಪಿಕುತ್ತಿದ್ದರು. ಆ ಇಬ್ಬರು ಶಾಸಕರ ಹನಿಟ್ರ್ಯಾಪ್ ವಿಡಿಯೋ ಕ್ಲಿಯಾರಿಟಿ ಇಲ್ಲದೇ ಇದ್ದರೂ ಬ್ಲಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಗೆದಷ್ಟು ಈ ಹನಿ ಕಹಾನಿ ತೆರೆದುಕೊಳ್ಳುತ್ತಿದೆ. ಇನ್ನೂ ಯಾರೆಲ್ಲಾ ಈ ಕೇಸ್‍ನಲ್ಲಿದ್ದಾರೋ? ಯಾರ‍್ಯಾರ ಬಂಡವಾಳ ಬಯಲಾಗುತ್ತೋ ಕಾದು ನೋಡಬೇಕು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ

    ರಾಘವೇಂದ್ರ ತಾಯಿ ಜ್ಯೋತಿ ಹೇಳಿದ್ದೇನು?
    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ರಾಘವೇಂದ್ರ ತಾಯಿ, ನನ್ನ ಮಗ ಅಂಥವನಲ್ಲ. ಮೊದಲಿಗೆ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿ ಕೆಲಸದಿಂದ ಹೊರಬಂದು ಬೇರೆ ಕಡೆ ಉದ್ಯೋಗ ಹುಡುಕುತ್ತಿದ್ದಾನೆ. ರಾತ್ರಿ ಮನೆಗೆ ಬಂದ ಪೊಲೀಸರು, ಮನೆ ಪರಿಶೀಲನೆ ನಡೆಸಿದರು. ರಾತ್ರಿಯೆಲ್ಲ ಮನೆಯಲ್ಲಿಯೇ ಕುಳಿತಿದ್ದರೂ, ನಮಗೆ ಏನೂ ಹೇಳಲಿಲ್ಲ. ಮೊಬೈಲ್ ಕಿತ್ತುಕೊಂಡು ಮಗನಿಗೆ ಬರುವಂತೆ ಹೇಳುವಂತೆ ಹೇಳಿದ್ದರು.

    ಮತ್ತೆ ಬಂದು ಮನೆಯಲ್ಲಿದ್ದ ಮೆಮೊರಿ ಕಾರ್ಡ್, ಪೆನ್‍ಡ್ರೈವ್ ರೀತಿಯಲ್ಲಿರುವ ಒಂದು ವಸ್ತು, ಚಿಕಿತ್ಸೆಗಾಗಿ ತೆಗೆದಿಟ್ಟಿದ್ದ 50 ಸಾವಿರ ರೂ. ಮತ್ತು ದೇವರ ಮನೆಯಲ್ಲಿಟ್ಟಿದ್ದ ಕಿವಿಯೋಲೆಯನ್ನು ಮಹಿಳಾ ಪೇದೆ ತೆಗೆದುಕೊಂಡು ಹೋಗಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮಗನ ಬಂಧನದ ಸುದ್ದಿ ತಿಳಿಯಿತು. ಮನೆಯಲ್ಲಿ ವಯಸ್ಸಾದ ತಾಯಿಯೊಂದಿಗೆ ಇದ್ದೇನೆ. ನಾವಿಬ್ಬರೂ ಹೆಣ್ಣು ಮಕ್ಕಳೇ ಮನೆಯಲ್ಲಿದ್ದೇವೆ. ನಾವು ಅಮಾಯಕ. ಬೇರೆಯವರ ಸಂಚಿಗೆ ಮಗ ಬಲಿಯಾಗಿರಬೇಕು ಎಂದು ರಾಘವೇಂದ್ರ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ

    ಆತ ಯಾರೊಂದಿಗೆ ಹೆಚ್ಚು ಸೇರಲ್ಲ. ನಮಗೆ ಇಲ್ಲಿ ಯಾರೂ ಸಂಬಂಧಿಕರಿಲ್ಲ. ಎಲ್ಲಿ ಹೋಗಬೇಕು ಮತ್ತು ಯಾರನ್ನ ಸಂಪರ್ಕಿಸಬೇಕು ಎಂಬುವುದು ನಮಗೆ ಗೊತ್ತಿಲ್ಲ. ಇರೋ ಒಬ್ಬ ಮಗ ಯಾರ ತಂಟೆಗೂ ಹೋಗದವನು. ಆತ ತಪ್ಪು ಮಾಡಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಪೊಲೀಸ್ ತನಿಖೆ ವೇಳೆ ತಪ್ಪಿತಸ್ಥ ಎಂದು ಸಾಬೀತಾದ್ರೆ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಂಡು, ಅನಾಥಳಂತೆ ಮುಂದಿನ ಜೀವನ ನಡೆಸುತ್ತೇನೆ ಎಂದಿದ್ದರು.

  • ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ

    ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ

    – ಹನಿಟ್ರ್ಯಾಪ್ ಪ್ರಕರಣದಲ್ಲಿ ಎದುರಾಳಿಗಳ ಕೈವಾಡ

    ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿದ ಹಾಲಿ ಶಾಸಕ ರಾಸಲೀಲೆ ವಿಡಿಯೋಗೆ ಹೆದರಿ ಬರೋಬ್ಬರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ ಎನ್ನುವುದು ಸಿಸಿಬಿ ತನಿಖೆ ವೇಳೆ ಬಹಿರಂಗವಾಗಿದೆ.

    ಹನಿ ಹನಿ ಎಂದು ಆಸೆಗೆ ಬಿದ್ದು ಹಾಲಿ ಶಾಸಕ ಬರೋಬ್ಬರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಮೊದಲು 50 ಕೋಟಿ ರೂ. ಕೊಡದಿದ್ದರೆ ವಿಡಿಯೋ ಲೀಕ್ ಮಾಡ್ತೀವಿ ಎಂದಿದ್ದ ಆರೋಪಿಗಳು, ಕೊನೆಗೆ 50 ಕೋಟಿ ಕೊಡಲು ಆಗಲ್ಲ ಎಂದಾಗ 10 ಕೋಟಿಗೆ ಡೀಲ್ ಫಿಕ್ಸ್ ಮಾಡಿದ್ದರು. ಈ 10 ಕೋಟಿ ಹಣವನ್ನು ಇನ್‍ಸ್ಟಾಲ್‍ಮೆಂಟ್‍ನಲ್ಲಿ ಕೊಡುವುದಾಗಿ ಶಾಸಕ ಒಪ್ಕೊಂಡಿದ್ದರು. 1 ಕೋಟಿ ರೂ. ಹಣವನ್ನ ಆರೋಪಿಗಳಿಗೆ ಎಂಎಲ್‍ಎ ತಲುಪಿಸಿದ್ದರು. ಇದಲ್ಲದೇ ಮತ್ತಿಬ್ಬರು ಶಾಸಕರು ಕೂಡ ಆರೋಪಿಗಳಿಗೆ ಹಣ ನೀಡಿದ್ದರು. ವಿಡಿಯೋ ಎಲ್ಲಿ ಹೊರಬರುತ್ತೋ ಎಂದು ಭಯಬಿದ್ದು ಶಾಸಕರು ಹಣ ನೀಡಿದ್ದರು ಎನ್ನುವುದು ಸಿಸಿಬಿ ತನಿಖೆ ವೇಳೆ ಬಟಾಬಯಲಾಗಿದೆ. ಇದನ್ನೂ ಓದಿ:ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ

    ರಾಜಕೀಯ ನೌಟಂಕಿ ಆಟವನ್ನು ಯಾರು ಊಹೆನೂ ಮಾಡೋದಕ್ಕೆ ಆಗೋದಿಲ್ಲ. ಲಾಭಕ್ಕಾಗಿ ರಾಜಕೀಯ ನಾಯಕರ ಕೈಯಲ್ಲಿ ಏನು ಬೇಕಾದರೂ ಮಾಡಿಸಿ ಬಿಡುತ್ತೆ. ಹೌದು ಹನಿಟ್ರ್ಯಾಪ್ ಪ್ರಕರಣದಲ್ಲಿ ಶಾಸಕನನ್ನು ಸಿಲುಕಿಸಿರೋದರಲ್ಲಿ ಆತನ ಎದುರಾಳಿಗಳ ಕೈವಾಡವಿದೆ ಎನ್ನುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಶಾಸಕರಿಗೆ ಹೆಣ್ಣಿನ ಮೋಹವಿದೆ ಎಂದು ತಿಳಿದಿದ್ದ ಎದುರಾಳಿಗಳು ರಾಘವೇಂದ್ರನ ಗ್ಯಾಂಗ್ ಬಳಸಿಕೊಂಡು ಡೀಲ್ ಮಾಡಿಕೊಳ್ಳುತ್ತಿದ್ದರು. ಶಾಸಕರನ್ನು ಹೇಗೆ ಖೆಡ್ಡಾಕ್ಕೆ ಕೆಡವಿಕೊಳ್ಳೋದು ಅನ್ನೊದನ್ನು ಕೂಡ ಹೇಳಿ ಕೊಡುತ್ತಿದ್ದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ

    ಅಷ್ಟೇ ಅಲ್ಲ ಶಾಸಕರ ರಾಸಲೀಲೆ ಸೆರೆ ಹಿಡಿಯೋದಕ್ಕೆ ಕ್ಯಾಮೆರಾಗಳನ್ನು ಕೂಡ ಎದುರಾಳಿಗಳೇ ಗ್ಯಾಂಗ್‍ಗೆ ತೆಗೆದುಕೊಟ್ಟಿದ್ದರು ಎನ್ನಲಾಗಿದೆ. ಸಿಸಿಬಿ ಅಧಿಕಾರಿಗಳ ತನಿಖೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿಯೇ ಇರುವ ರಾಘವೇಂದ್ರ ಇದೆಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಕ್ಯಾಮೆರಾ ತೆಗೆದುಕೊಟ್ಟವರು ಮುಂಗಡ ಹಣವನ್ನೂ ಪಾವತಿ ಮಾಡಿದ್ದಾರೆ. ಈ ಎಲ್ಲಾ ಹೇಳಿಕೆಗಳ ಬಳಿಕ ರಾಘವೇಂದ್ರ ಸ್ವ-ಇಚ್ಚಾ ಹೇಳಿಕೆ ನೀಡಿದ್ದು, ಹಣ ಕೊಟ್ಟವರು ರಾಘವೇಂದ್ರನ ಭೇಟಿ ನಡೆದಿದ್ದಕ್ಕೆ ಸಾಕ್ಷ್ಯವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶಾಸಕನ ಎದುರಾಳಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿಸಲಿದ್ದಾರೆ ಎನ್ನಲಾಗಿದೆ.

    ಯಾರು ಈ ರಾಘವೇಂದ್ರ?
    ಆರೋಪಿ ರಾಘವೇಂದ್ರ ಶಿವಮೊಗ್ಗ ಮೂಲದ ನಿವಾಸಿಯಾಗಿದ್ದು, ತಾಯಿಯೊಂದಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ಸೈಬರ್ ಕ್ರೈಂಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪರಿಣಿತಿ ಹೊಂದಿದ್ದನು ಎಂಬುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಸಣ್ಣ ಪುಟ್ಟ ಕ್ರೈಂ ಮಾಡಿದ್ರೆ ಸ್ವಲ್ಪ ಹಣ ಸಿಗುತ್ತದೆ. ಹೆಚ್ಚು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದನು. ತನ್ನ ಗೆಳತಿ ಮೂಲಕ ಶಾಸಕರ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದನು ಎಂಬ ಆರೋಪ ಕೇಳಿ ಬಂದಿದೆ.

  • ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿ- ನಾಲ್ವರ ಬಂಧನ

    ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿ- ನಾಲ್ವರ ಬಂಧನ

    ಬೆಂಗಳೂರು: ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದು ಪತ್ತೆಯಾಗಿದೆ.

    ಜಾಮೀನು ಕೊಡಿಸಲು ಇವರು ಎಲ್ಲ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು, ಈ ಮೂಲಕ ಆರೋಪಿಗಳಿಗೆ ಶೀಘ್ರವೇ ಜಾಮೀನು ಸಿಗಬೇಕು ಆ ರೀತಿ ಪಕ್ಕಾ ದಾಖಲೆಗಳನ್ನು ನೀಡುತ್ತಿದ್ದು. ಇಂತಹ ಖತರ್ನಾಕ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಸವಕುಮಾರ್, ರಮಾದೇವಿ, ಮದುಕರ್, ರತ್ನಮ್ಮ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುವುದೇ ಇವರ ಕಾಯಕವಾಗಿತ್ತು. ಎಂತಹದ್ದೇ ಪ್ರಕರಣವಾದರೂ ಅದಕ್ಕೆ ಸೂಕ್ತ ಜಾಮೀನು ಪತ್ರದ ದಾಖಲೆಗಳನ್ನು ಈ ಗ್ಯಾಂಗ್ ತಯಾರು ಮಾಡಿ ಕೊಡುತ್ತಿತ್ತು.

    ಪ್ರಕರಣದ ಕಿಂಗ್ ಫಿನ್ ರತ್ನಮ್ಮ ಮೂಲತಃ ಆಂಧ್ರ ಪ್ರದೇಶದವಳಾಗಿದ್ದು, ನಕಲಿ ವಿಲೇಜ್ ಅಕೌಂಟೆಂಟ್ ಗಳ ಮೂಲಕ ನಕಲಿ ಸೀಲ್ ಇಟ್ಟುಕೊಂಡು ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚಿಸಿದ್ದಾರೆ. ಸದ್ಯ ಆರೋಪಿಗಳಿಂದ ಎರಡು ನಕಲಿ ಸೀಲ್, ಆಧಾರ್ ಕಾರ್ಡ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ತಗೆದುಕೊಳ್ಳಲಾಗಿದೆ.

  • ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಬಂಧನಕ್ಕೊಳಗಾದ ಆಟಗಾರರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ. ಹಣ ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

  • ನೈಸ್ ರಸ್ತೆಯಲ್ಲಿ ಗಾಡಿ ಸೈಡಿಗೆ ಹಾಕಿ ಗೆಳತಿ ಜೊತೆ ಹರಟೆ ಹೊಡಿತೀರಾ?

    ನೈಸ್ ರಸ್ತೆಯಲ್ಲಿ ಗಾಡಿ ಸೈಡಿಗೆ ಹಾಕಿ ಗೆಳತಿ ಜೊತೆ ಹರಟೆ ಹೊಡಿತೀರಾ?

    ರಾಮನಗರ: ನೈಸ್ ರಸ್ತೆಯಲ್ಲಿ ಸಿಸಿಬಿ ಪೊಲೀಸರು ಎಂದು ವಾಹನ ಸವಾರರು ಮತ್ತು ಜೋಡಿ ಬಳಿ ಹಣ ದೋಚುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು – ಮೈಸೂರು ಹೆದ್ದಾರಿ ಹಾಗೂ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವವರನ್ನ ತಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ವಸೂಲಿ ಮಾಡ್ತಿದ್ದ ಇಬ್ಬರು ಖತರ್ನಾಕ್ ವ್ಯಕ್ತಿಗಳನ್ನು ರಾಮನಗರ ಗ್ರಾಮಾಂತರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನರಸಿಂಹಯ್ಯನದೊಡ್ಡಿ ಗ್ರಾಮದ ನಿವಾಸಿ ರಘು (33) ಹಾಗೂ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ ರವೀಶ್ ಬಂಧಿತ ಆರೋಪಿಗಳು. ಬಂಧಿತ ರಘು ತನ್ನ ಸಂಗಡಿಗರಾದ ರವೀಶ್ ಹಾಗೂ ವೆಂಕಟಗಿರಿಗೌಡ ಜೊತೆ ಹೆದ್ದಾರಿ ಹಾಗೂ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡಿರುತ್ತಿದ್ದ ವಾಹನಗಳ ಬಳಿ ತೆರಳಿ, ಅದರಲ್ಲೂ ಜೋಡಿಗಳು ಇರುವ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದರು. ತಾವು ಸಿಸಿಬಿ ಪೊಲೀಸರು ಎಂದು ವಾಹನ ಸವಾರರು, ಜೋಡಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.

    ಇನ್ನೂ ಯಾವಾಗಲೂ ತನ್ನ ಜೊತೆ ಕೈಕೋಳವನ್ನು ಇಟ್ಟುಕೊಂಡು ಇರ್ತಿದ್ದ ರಘು ಹಾಗೂ ಸಂಗಡಿಗರು ವಾಹನ ಸವಾರರಿಗೆ ಹೆದರಿಸುತ್ತಿದ್ರು. ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಸ್ವಲ್ಪ ದೂರ ಕರೆದೊಯ್ದು ಬಳಿಕ ಅವರ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ. ನಿಮ್ಮ ಮನೆಯವರಿಗೆ ಕಳುಹಿಸುತ್ತೇವೆ ಎಂದು ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ರಾಮನಗರ ಪೊಲೀಸರು ದಾಳಿ ನಡೆಸಿ ಮೊದಲಿಗೆ ರಘು ಮತ್ತು ರವೀಶ್ ನನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಾಗಿದ್ದಾನೆ.

    ಪೊಲೀಸರ ಮನವಿ:
    ಯಾರೇ ವ್ಯಕ್ತಿಗಳಾಗಲೀ, ಇಲ್ಲವೇ ಪೊಲೀಸರಾಗಲೀ ತಾವು ಪೊಲೀಸರು ಎಂದು ಹೇಳಿಕೊಂಡು ಹಣ ಕೇಳಿದ್ದಲ್ಲಿ ಯಾವುದಕ್ಕೂ ಹೆದರದೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

  • ಬೆಂಗಳೂರು ಡಾನ್ ಹತ್ಯೆಗೆ ಸುಪಾರಿ?

    ಬೆಂಗಳೂರು ಡಾನ್ ಹತ್ಯೆಗೆ ಸುಪಾರಿ?

    ಬೆಂಗಳೂರು: ಸಿಲಿಕಾನ್ ಸಿಟಿಯ ಡಾನ್ ತೌಸಿಫ್ ಹತ್ಯೆ ಮಾಡಲು ಮುಂಬೈ ಶಾರ್ಪ್ ಶೂಟರ್ಸ್ ಕಣ್ಣು ಹಾಕಿದ್ದಾರೆ.

    ತೌಸಿಫ್ ಹತ್ಯೆಗೆ ಭೂಗತ ಜಗತ್ತಿನ ದೊರೆ ರಶೀದ್ ಮಲಬಾರಿ ಸುಪಾರಿ ಕೊಟ್ಟಿದ್ದಾನೆ. ಜೈಲಲ್ಲಿದ್ದಾಗ ರಶೀದ್ ಮಲಬಾರಿ ಮತ್ತು ತೌಸಿಫ್ ನಡುವೆ ವಾಗ್ವಾದ ನಡೆದಿತ್ತು. ಏನು ಬೆಂಗಳೂರು ಡಾನ್ ಆಗಲು ಹೊರಟಿದ್ಯಾ ಅಂತ ತೌಸಿಫ್‍ಗೆ ಮಲಬಾರಿ ಗದರಿದ್ದನು. ಈ ವೇಳೆ ತೌಸಿಫ್, ನನಗೆ ತಾಕತ್ ಇದೆ. ಡಾನ್ ಆಗಿಯೇ ಆಗ್ತೀನಿ, ನೀನ್ಯಾರು ಎಂದಿದ್ದನಂತೆ. ಈ ನಡುವೆ ಎದುರಾಳಿಗಳನ್ನ ಮುಗಿಸಿ ಮುಸ್ಲಿಂ ಡಾನ್ ಆಗಲು ತೌಸಿಫ್ ಹೊರಟಿದ್ದನು ಎನ್ನಲಾಗಿದೆ.

    ಇದಕ್ಕಾಗಿ ರೌಡಿ ಡೈನಾಮಿಕ್ ಖಲೀಲ್‍ನನ್ನ ಮುಗಿಸಲು ತೌಸಿಫ್ ಪ್ಲಾನ್ ಮಾಡಿದ್ದನು. ಇತ್ತ ರಶೀದ್ ಮಲಬಾರ್ ಕಡೆಯ ಶಾರ್ಪ್ ಶೂಟರ್‍ಗಳು ತೌಸಿಫ್ ಹತ್ಯೆಗೆ ಪ್ಲಾನ್ ಮಾಡುತ್ತಿದ್ದರು. ಇದೀಗ ಈ ಬಗ್ಗೆ ಪಕ್ಕಾ ಮಾಹಿತಿಯ ಮೇಲೆ ತೌಸಿಫ್ ಹಾಗೂ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನಡೆಯಬಹುದಾದ ಬಹುದೊಡ್ಡ ಅವಘಡವನ್ನು ಸಿಸಿಬಿ ಪೊಲೀಸರು ತಪ್ಪಿಸಿದಂತಾಗಿದೆ.

  • ಅಕ್ರಮ ರೇವ್ ಪಾರ್ಟಿಗಳಿಗೆ ಸಿಸಿಬಿ ಶಾಕ್- 150 ಮಂದಿ ಅರೆಸ್ಟ್

    ಅಕ್ರಮ ರೇವ್ ಪಾರ್ಟಿಗಳಿಗೆ ಸಿಸಿಬಿ ಶಾಕ್- 150 ಮಂದಿ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ಶನಿವಾರ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

    ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಂದಿ ಪೊಲೀಸರು ನಗರದ ಮಹಾಲಕ್ಷ್ಮೀ ಲೇಔಟ್ ಬಳಿಯ ಆರ್.ಜೆ ರಾಯಲ್ಸ್ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 50 ಮಂದಿ ವಿದೇಶೀಯರು ಸೇರಿ 150 ಜನರನ್ನು ಬಂಧಿಸಲಾಗಿದೆ.

    ಬೆಳಗ್ಗಿನ ಜಾವ 4 ಗಂಟೆಯವರೆಗೂ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ವೇಳೆ ಮಾದಕ ದ್ರವ್ಯಗಳ ಬಳಕೆ ಬಗ್ಗೆ ಸಿಸಿಬಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಹಾಡುಗಳನ್ನ ಹಾಕಿ ಗ್ರಾಹಕರಿಗೆ ನೃತ್ಯ ಮಾಡಲು ಅವಕಾಶ ನೀಡಿದ ಆರೋಪ ಸಂಬಂಧ ಅಶೋಕ ನಗರದ ಬೈಚಾನ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೂ ದಾಳಿ ಮಾಡಲಾಗಿದೆ. ಧ್ವನಿವರ್ಧಕ ಬಳಸಿ ಮಿತಿ ಮೀರಿದ ಸದ್ದಿನಲ್ಲಿ ಕುಣಿತಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೋಟೆಲ್ ಮಾಲೀಕ, ಮ್ಯಾನೇಜರ್ ಸೇರಿ 25ಕ್ಕೂ ಹೆಚ್ಚು ಮಂದಿ ಗ್ರಾಹಕರನ್ನು ಬಂಧಿಸಲಾಗಿದೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10 ಲಕ್ಷ ರೂ. ಮೌಲ್ಯದ ನಶೆ ಮಾತ್ರೆಗಳು ವಶ- ಓರ್ವ ಅರೆಸ್ಟ್

    10 ಲಕ್ಷ ರೂ. ಮೌಲ್ಯದ ನಶೆ ಮಾತ್ರೆಗಳು ವಶ- ಓರ್ವ ಅರೆಸ್ಟ್

    – ಒಂದು ಮಾತ್ರೆಯ ಬೆಲೆ 900 ರೂ.
    – ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್

    ಬೆಂಗಳೂರು: 10 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ಮಾತ್ರೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವನನ್ನು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಜಹಾಂಗೀರ್ ಬಂಧಿತ ಆರೋಪಿ. ನಗರದ ಪರಪ್ಪನ ಅಗ್ರಹಾರ ಬಳಿಯ ಈರಪ್ಪ ಲೇಔಟ್‍ನಲ್ಲಿ ಆರೋಪಿಯನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಜಹಾಂಗೀರ್ ನಿಷೇಧಿತ ಮಾತ್ರೆಗಳಾದ ಯಾಬಾ, ಮೆಥಾ ಹಾಗೂ ಅಂಫಟಮೈನ್ ಹೆಸರಿನ ಮಾತ್ರೆಗಳನ್ನು ಮುಂಬೈನಿಂದ ಬೆಂಗಳೂರಿಗೆ ತರುತ್ತಿದ್ದ. ಬಳಿಕ ಒಂದು ಮಾತ್ರೆಗೆ 900 ರೂ. ನಂತೆ ಮಾರಾಟ ಮಾಡುತ್ತಿದ್ದ. ಕಾಲೇಜು ವಿದ್ಯಾರ್ಥಿಗಳನ್ನೇ ಆರೋಪಿ ಟಾರ್ಗೆಟ್ ಮಾಡಿಕೊಂಡಿದ್ದನು. ಒಂದು ಮಾತ್ರೆಯನ್ನು ತಗೆದುಕೊಂಡರೆ ಇಡೀ ದಿನ ಮತ್ತಿನಲ್ಲಿ ಇರುತ್ತಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನಿಷೇಧಿತ ಮಾತ್ರೆಗಳಾದ ಯಾಬಾ, ಮೆಥಾ ಹಾಗೂ ಅಂಫಟಮೈನ್ ಹೆಸರಿನ ಒಟ್ಟು 1,000 ಸಾವಿರ ಮಾತ್ರೆಗಳು ಆರೋಪಿಯ ಬಳಿ ಸಿಕ್ಕಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಹಾಂಗೀರ್ ಹಿಂದೆ ದೊಡ್ಡ ತಂಡವೇ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    – ಬರ್ತ್‍ಡೇ ಗುಂಗಲ್ಲಿದ್ದ ರೌಡಿಶೀಟರ್ ಎಸ್ಕೇಪ್

    ಬೆಂಗಳೂರು: ಶುಕ್ರವಾರ ತಡ ರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಏಕಕಾಲದಲ್ಲಿ ಐದು ಪಬ್ ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 5 ಲಕ್ಷ ನಗದು ವಶಕ್ಕೆ ಪಡೆದು, 250 ಡ್ಯಾನ್ಸ್ ಗರ್ಲ್ಸ್ ಗಳನ್ನು ರಕ್ಷಣೆ ಮಾಡಿದ್ದಾರೆ.

    ನಗರದ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್ ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್ ನಲ್ಲಿ ನಟೋರಿಯಸ್ ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕುಣಿಗಲ್ ಗಿರಿ ಅಸೋಸಿಯಟ್ಸ್ ವತಿಯಿಂದ ಬರೋಬ್ಬರಿ 250 ಮಹಿಳಾ ಡ್ಯಾನ್ಸರ್ಸ್ ಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ವೇದಿಕೆ ರೆಡಿಯಾಗಿತ್ತು.

    ರೌಡಿಶೀಟರ್ ಕುಣಿಗಲ್ ಗಿರಿಯ ಆಡಂಭರದ ಬರ್ತ್ ಡೇ ಸಂಭ್ರಮಾಚರಣೆಯ ವಿಚಾರ ತಿಳಿದು ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ಮಾಡಿದೆ. ದಾಳಿಯ ವೇಳೆ 250 ಡ್ಯಾನ್ಸ್ ಗರ್ಲ್ಸ್ ಗಳನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತ್ಯೇಕ ಪ್ರಕರಣ ದಾಖಲಿಸಿ ಒಟ್ಟು 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಸಿಸಿಬಿ ದಾಳಿ ಮಾಡುತ್ತಿದ್ದಂತೆಯೇ ಬರ್ತ್ ಡೇ ಬಾಯ್ ರೌಡಿಶೀಟರ್ ಕುಣಿಗಲ್ ಗಿರಿ ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ.

    ಕೆ.ಎ 05 ,5656 ನಂಬರ್ ಇನೋವಾ ಕಾರ್ ಬಿಟ್ಟು ಗಿರಿ ಪರಾರಿಯಾಗಿದ್ದಾನೆ. ಸದ್ಯ ಬರ್ತ್ ಡೇ ಪಾರ್ಟಿಗೆ ತಂದಿದ್ದ ಗಿರೀಶ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿಯ ವೇಳೆ ಒಟ್ಟು ಐದು ಲಕ್ಷ ಹಣವನ್ನೂ ಸಿಸಿಬಿಯವರು ವಶಪಡಿಸಿಕೊಂಡಿದ್ದಾರೆ.

    ಪ್ರಕರಣದ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೌಡಿಶೀಟರ್ ಕುಣಿಗಲ್ ಗಿರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.