Tag: CCB police

  • ಐ10 ಕಾರಿನಲ್ಲಿ ಮದ್ಯ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ

    ಐ10 ಕಾರಿನಲ್ಲಿ ಮದ್ಯ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ

    ಬೆಂಗಳೂರು: ಅಕ್ರವಾಗಿ ವಿದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೆಂಗಳೂರಿನ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ.

    ರೋಹನ್ ಬತೇಜ್ (31) ಬಂಧಿತ ಆರೋಪಿ. ಬಂಧಿತನಿಂದ ವಿವಿಧ ಬ್ರಾಂಡ್‍ನ 22 ಲೀಟರ್ ವಿದೇಶಿ ಮದ್ಯ, ಐ10 ಕಾರು, ಒಂದು ಐ ಪೋನ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಆರೋಪಿ ರೋಹನ್ ಐ10 ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ವಿದೇಶಿ ಮದ್ಯ ಮಾರುತ್ತಿದ್ದ. ಈ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ರೋಹನ್‍ಗೆ ಬಲೆ ಬೀಸಿದ್ದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

  • ನಕಲಿ ಸ್ಯಾನಿಟೈಸರ್‌ಗಳ ಹಾವಳಿ – ಬೆಂಗ್ಳೂರು ಸಿಸಿಬಿ ಪೊಲೀಸರಿಂದ 56 ಲಕ್ಷ ಮೌಲ್ಯದ ವಸ್ತುಗಳು ವಶ

    ನಕಲಿ ಸ್ಯಾನಿಟೈಸರ್‌ಗಳ ಹಾವಳಿ – ಬೆಂಗ್ಳೂರು ಸಿಸಿಬಿ ಪೊಲೀಸರಿಂದ 56 ಲಕ್ಷ ಮೌಲ್ಯದ ವಸ್ತುಗಳು ವಶ

    ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಲಕ್ಷಾಂತರ ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳನ್ನು ತಯಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳ ತಯಾರಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು, ನಗರದ ಚಾಮರಾಜಪೇಟೆ ಮತ್ತು ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಗೊಡೌನ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 56 ಲಕ್ಷ ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಜ್ಯೋತಿ ಕೆಮಿಕಲ್ಸ್ ಮತ್ತು ಸ್ವಾತಿ ಗೌಡಾನ್ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಸಿದ್ಧಪಡಿಸಿದ್ದ 100, 120, 200, 500 ಎಮ್‍ಎಲ್‍ನ ಒಟ್ಟು 8,500 ನಕಲಿ ಸ್ಯಾನಿಟೈಸರ್ ಬಾಟಲಿಗಳು, 4,500 ಖಾಲಿ ಪ್ಲಾಸ್ಟಿಕ್ ಬಾಟಲಿಗಳು, 4,500 ಸ್ಟಿಕ್ಕರ್‌ಗಳು ವಶಕ್ಕೆ ಪಡೆದು ರಾಜು ಮತ್ತು ಚಂದನ್ ಎಂಬ ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ.

    ಹೇಗೆ ತಯಾರಾಗ್ತಿತ್ತು ನಕಲಿ ಸ್ಯಾನಿಟೈಸರ್‌ಗಳು?
    ಈ ನಕಲಿ ಸ್ಯಾನಿಟೈಸರ್‌ಗಳನ್ನು ಹೇಗೆ ತಯಾರು ಮಾಡ್ತಿದ್ದರು ಅನ್ನೋದನ್ನ ಕೇಳಿದರೆ ಅಚ್ಚರಿ ಆಗುತ್ತೆ. 50 ಲೀಟರ್ Isopropyl alcohol ಗೆ, 20 ಎಮ್‍ಎಲ್ brilliant blue colour, 15 ಎಮ್‍ಎಲ್ perfume ಮಿಶ್ರಣ ಮಾಡಿ 50 ಲೀಟರ್ ಸ್ಯಾನಿಟೈಸರ್ ರೆಡಿ ಮಾಡಲಾಗಿತ್ತು. ಇದಕ್ಕೆ ಒಂದು ಲೀಟರ್‌ಗೆ 80 ರೂಪಾಯಿ ಎಮ್‌ಆರ್‌ಪಿ ಬೆಲೆ ಇದೆ. ಆದ್ರೆ ಈ ನಕಲಿ ಸ್ಯಾನಿಟೈಸರ್‌ಗಳನ್ನು ಲೀಟರ್‌ಗೆ 800 ರೂಪಾಯಿಗೆ ಮಾರಾಟ ಮಾಡ್ತಿರೋದು ಬೆಳಕಿಗೆ ಬಂದಿದೆ.

    ನಗರದಲ್ಲಿ ಇನ್ನಷ್ಟು ಇಂತಹ ನಕಲಿ ಸ್ಯಾನಿಟೈಸರ್ ತಯಾರಿಸೋ ಕಂಪನಿಗಳು ಹುಟ್ಟಿಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಸಾರ್ವಜನಿಕರು ಅಧಿಕೃತ ತಯಾರಿಕಾ ಕಂಪನಿಗಳ ಬ್ರ್ಯಾಂಡೆಡ್ ಸ್ಯಾನಿಟೈಸರ್‌ಗಳನ್ನೇ ಕೊಳ್ಳಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಮಿನಿಸ್ಟರ್ ಆಗ್ತಿದ್ದಂತೆ ರೌಡಿ ಬೋರ್ಡಿನಿಂದ ಗೋಪಾಲಯ್ಯನ ಫೋಟೋ ಔಟ್

    ಮಿನಿಸ್ಟರ್ ಆಗ್ತಿದ್ದಂತೆ ರೌಡಿ ಬೋರ್ಡಿನಿಂದ ಗೋಪಾಲಯ್ಯನ ಫೋಟೋ ಔಟ್

    ಬೆಂಗಳೂರು: ಮಿನಿಸ್ಟರ್ ಆಗುತ್ತಿದ್ದಂತೆ ರೌಡಿ ಬೋರ್ಡಿನಲ್ಲಿದ್ದ ಸಚಿವ ಗೋಪಾಲಯ್ಯನ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ.

    ಹೌದು. ಎರಡು ಬಾರಿ ಶಾಸಕರಾಗಿ ಅವಧಿ ಪೂರ್ಣಗೊಳಿಸಿದರೂ ರೌಡಿಗಳ ಬೋರ್ಡಿನಿಂದ ಆಹಾರ ನಾಗರಿಕ ಪೂರೈಕೆ ಸಚಿವ ಕೆ ಗೋಪಾಲಯ್ಯ ಅವರ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದಿರಲಿಲ್ಲ. ಆದರೆ ಈಗ ಮಂತ್ರಿಯಾಗುತ್ತಿದ್ದಂತೆ ಅವರ ಫೋಟೋವನ್ನು ಅಲ್ಲಿಂದ ತೆಗೆದು ಹಾಕಲಾಗಿದೆ.

    ಕಾಮಕ್ಷಿಪಾಳ್ಯದ ಮಾಜಿ ರೌಡಿ ಶೀಟರ್ ಆಗಿದ್ದ ಗೋಪಾಲಯ್ಯ ಸಿಸಿಬಿಯ ರೌಡಿ ಲಿಸ್ಟ್ ನಲ್ಲಿ ಇದ್ದರು. ಇಷ್ಟು ದಿನ ಅಲ್ಲೇ ಇದ್ದ ಫೋಟೋವನ್ನು ನಿನ್ನೆ ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗೋಪಾಲಯ್ಯ ಫೋಟೋ ಇತ್ತು. ಜೇಡರಹಳ್ಳಿ ಕೃಷ್ಣಪ್ಪ, ಮುಲಾಮ, ಹೆಬ್ಬೆಟ್ಟು ಮಂಜ, ಧರಣಿ ಮತ್ತು ಬಸವ, ರಾಮನ ಫೋಟೋ ಇರುವ ಲಿಸ್ಟ್‍ನಲ್ಲಿ ಗೋಪಾಲಯ್ಯನ ಫೋಟೋ ಇತ್ತು.

    ಈಗ ಅವರ ಫೋಟೋವನ್ನು ತೆಗೆದು ಹಾಕಲಾಗಿದ್ದು, ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹಳೆ ಬೋರ್ಡ್ ಮತ್ತು ಹೊಸ ಎಡಿಟೆಡ್ ಬೋರ್ಡ್ ಎರಡೂ ಫೋಟೋಗಳು ಲಭ್ಯವಾಗಿದ್ದು, ಹೊಸ ಬೋರ್ಡ್ ನಲ್ಲಿ ಫೋಟೋ ಕಾಣಿಸುತ್ತಿಲ್ಲ. ಮುತ್ತಪ್ಪ ರೈ, ಅಗ್ನಿ ಶ್ರೀಧರ್, ಬಚ್ಚನ್ ಸೇರಿ ಹಲವರ ಫೋಟೋಗಳು ಇನ್ನೂ ಹಾಗೆ ಇವೆ. ಆದರೆ ಏಕಾಏಕಿ ಗೋಪಾಲಯ್ಯ ಫೋಟೋವನ್ನು ಕಣ್ಮರೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

    ಈ ಬಗ್ಗೆ ಸ್ಪಷ್ಟನೆ ಕೊಡಬೇಕಾದ ಸಿಸಿಬಿ ಅಧಿಕಾರಿಗಳು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಸಿಸಿಬಿ ಗೋಡೆ ಮೇಲೆ ಇರುತ್ತಿದ್ದ ಫೋಟೋ ಇನ್ನು ಮಂದೆ ಎಲ್ ಇಡಿ ಟಿವಿಯಲ್ಲಿ ಕಾಣಿಸಿಕೊಳ್ಳಲಿವೆ. ರೌಡಿಗಳ ಫೋಟೋ ಟಿವಿ ಪರದೆಯಲ್ಲಿ ಡಿಸ್‍ಪ್ಲೇ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

  • ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವನ ಬಂಧನ

    ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವನ ಬಂಧನ

    ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರೋಷನ್ ಕುಮಾರ್ ಬಂಧಿತ ಆರೋಪಿ. ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ್ದಾರೆ. ಈ ವೇಳೆ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಆರೋಪಿ ರೋಷನ್ ಕುಮಾರ್ ನನ್ನು ಬಂಧಿಸಿದ್ದಾರೆ.

    ಸಿಸಿಬಿ ಪೊಲೀಸರು ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಸಿಟಿ ಮಾರ್ಕೆಟ್‍ನ ಕವಿತಾ ಮ್ಯಾಚಿಂಗ್ ಸೆಂಟರ್ ಅಂಗಡಿಯಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ರೋಷನ್ ಕುಮಾರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಆರೋಪಿ ರೋಷನ್ ಜನರಿಂದ ಹಣವನ್ನು ಕಟ್ಟಿಸಿಕೊಂಡು ಬೆಟ್ಟಿಂಗ್ ನಡೆಸುತ್ತಿದ್ದನು. ಸದ್ಯ ಪೊಲೀಸರು ಆರೋಪಿ ಬೆಟ್ಟಿಂಗ್‍ಗೆ ಬಳಸಿದ್ದ 67.500 ರೂ. ಹಣವನ್ನು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ.

    ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬೆಟ್ಟಿಂಗ್ ದಂಧೆಯಲ್ಲಿ ಯಾರೆಲ್ಲಾ ಆರೋಪಿ ರೋಷನ್‍ನೊಂದಿಗೆ ಭಾಗಿಯಗಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ- ನಾಲ್ವರು ಪಿಂಪ್‍ಗಳ ಬಂಧನ

    ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ- ನಾಲ್ವರು ಪಿಂಪ್‍ಗಳ ಬಂಧನ

    – 10 ಮಂದಿ ಯುವತಿಯರ ರಕ್ಷಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಬದಿಯಲ್ಲಿದ್ದ ವೇಶ್ಯಾವಾಟಿಕೆ ದಂಧೆ ಹೈಟೆಕ್ ರೂಪ ಪಡೆದುಕೊಂಡಿದೆ. ವೆಬ್ ಸೈಟ್‍ಗಳ ಮೂಲಕ ಹೈಟೆಕ್ ವೇಶ್ಯಾವಾಟಿಕೆ ಶುರುವಾಗಿದ್ದು, ಹೈಫೈ ಏರಿಯಾಗಳಲ್ಲಿ ಯಾವುದೇ ಪೊಲೀಸರ ಭಯವಿಲ್ಲದೇ ನಡೆಯುತ್ತಿದೆ.

    ರಘು, ಪ್ರಜ್ವಲ್, ಕುಮಾರ್ ಮತ್ತು ಭರತ್ ಬಂಧಿತ ಆರೋಪಿಗಳು. ಉತ್ತರ ಭಾರತ ಮೂಲದಿಂದ ಯುವತಿಯರನ್ನು ಹೆಚ್ಚಿನ ಹಣದ ಆಸೆ ಹುಟ್ಟಿಸಿ ಬೆಂಗಳೂರಿಗೆ ಕರೆತರುತ್ತಾರೆ. ಪಿಂಪ್‍ಗಳು ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆ ಮಾಡಿಕೊಂಡು ಅಕ್ಕಪಕ್ಕದ ಮನೆಯವರಿಗೆ ಯಾವುದೇ ಡೌಟ್ ಬರದಂತೆ ವೇಶ್ಯಾವಾಟಿಕೆ ನಡೆಸುತ್ತಾರೆ. ಕೆಲವೊಂದು ವೆಬ್ ಸೈಟ್‍ಗಳ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ 10,000-20,000 ಸಾವಿರದ ವರೆಗೆ ಹಣ ಕಟ್ಟಿಸಿಕೊಂಡು ದಂಧೆ ನಡೆಸುತ್ತಾರೆ.

    ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದರು. ಈ ವೇಳೆ ನಾಲ್ಕು ಜನ ಪ್ರಮುಖ ಪಿಂಪ್‍ಗಳನ್ನು ಬಂಧಿಸಿ 10 ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದು ವಿಚಾರ ಅಂದರೆ ನಗರದ ಕೆಲವೊಂದು ಪ್ರತಿಷ್ಠಿತ ಏರಿಯಾಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು ವೇಶ್ಯಾವಾಟಿಕೆ ನಡೆಸುತ್ತಿರೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

    ವೆಬ್ ಸೈಟ್‍ಗಳ ಮೂಲಕವೇ ಹಣದ ವ್ಯವಹಾರ ಸೇರಿದಂತೆ ಎಲ್ಲಾ ಡೀಲ್‍ಗಳನ್ನು ಆನ್‍ಲೈನ್‍ನಲ್ಲೇ ಮುಗಿಸಿಕೊಳ್ಳುತ್ತಾರೆ. ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದರೂ ದಂಧೆಕೋರರು ಮಾತ್ರ ಸೈಲೆಂಟ್ ಆಗಿ  ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ. ನಗರದ ಮತ್ತಷ್ಟು ಏರಿಯಾಗಳ ಆನ್‍ಲೈನ್ ವೇಶ್ಯಾವಾಟಿಕೆ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಮತ್ತಷ್ಟು ಅಡ್ಡೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

  • ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    – ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ದೋಷಾರೋಪ ಸಲ್ಲಿಕೆ

    ಬೆಂಗಳೂರು: ಕೋಟಿ ಕೋಟಿ ಹಣ ಸಂಪಾದನೆಗಾಗಿ ಕ್ರಿಕೆಟ್ ಆಟವನ್ನೇ ಪಣಕ್ಕಿಟ್ಟಿದವರು ಅಂದರ್ ಆಗಿದ್ದು ಆಯ್ತು, ಬೇಲ್‍ನ ಮೇಲೆ ಬಿಡುಗಡೆಯೂ ಆದರು. ಆದ್ರೀಗ ಆ ಎಲ್ಲಾ ಖತರ್ನಾಕ್ ಟೀಂ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರಕರಣಕ್ಕೆ ಕೈ ಜೋಡಿಸಿದ್ದರು ಎನ್ನುವುದನ್ನು ಸಾಕ್ಷ್ಯ ಸಮೇತ ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.

    ಕೆಪಿಎಲ್‍ನ ಎರಡು ಟೀಂಗಳ ಮಾಲೀಕರಾದ ಆಲಿ, ಅರವಿಂದ ರೆಡ್ಡಿ, ಆಟಗಾರರಾದ ಗೌತಮ್, ಖಾಜಿ ವಿರುದ್ಧ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳ ಪ್ರಕಾರ, ಮೊದಲು ಅಂತರರಾಷ್ಟ್ರೀಯ ಮಟ್ಟದ ಬುಕ್ಕಿಗಳಿಂದ ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕವಾಗಿತ್ತು. ಬಳಿಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದುರಾಲೋಚನೆಯುಳ್ಳ ಮಾಲೀಕರು ತಮ್ಮ ತಂಡದ ಕೆಲ ಆಟಗಾರರನ್ನು ಸಂಪರ್ಕಿಸಿದ್ದರು. ನಂತರ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ನಡೆದಿತ್ತು ಎಂದು ತಿಳಿಸಲಾಗಿದೆ.

    ಮ್ಯಾಚ್ ಫಿಕ್ಸಿಂಗ್ ಟ್ರಿಕ್ಸ್:
    * ಒಂದು ಓವರಿನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್
    * ಅತಿ ಹೆಚ್ಚು ಬಾಲ್‍ಗಳಲ್ಲಿ ಕಡಿಮೆ ರನ್ ಗಳಿಸುವಂತೆ ಫಿಕ್ಸ್
    * ಫುಲ್ ಸ್ಲೀವ್ ಶರ್ಟ್ ಅನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್
    * ಪದೇ ಪದೇ ಬ್ಯಾಟ್‍ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿದ್ದ ಫಿಕ್ಸರ್ಸ್

  • ಮಾಂಸದ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ- ಇಬ್ಬರ ಬಂಧನ

    ಮಾಂಸದ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ- ಇಬ್ಬರ ಬಂಧನ

    ಬೆಂಗಳೂರು: ಹೊರ ರಾಜ್ಯಗಳಿಂದ ಅಮಾಯಕ ಯುವತಿಯರನ್ನು ಕರೆ ತಂದು ಮಾಂಸದ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ದಾಳಿಯ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಹೊರ ರಾಜ್ಯದ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿ ಅವರ ಮನೆಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಿದ್ದಾರೆ. ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಬೇರೆ ಬೇರೆ ರಾಜ್ಯದಿಂದ ಕರೆ ತಂದು ಶ್ರೀರಾಂಪುರದಲ್ಲಿ ಮನೆ ಮಾಡಿ ಇರಿಸಿಕೊಳ್ಳುತ್ತಿದ್ದರು.

    ಮಾಂಸದ ದಂಧೆಯಲ್ಲಿ ತೊಡಗಿಕೊಂಡರೆ ಕಡಿಮೆ ಅವಧಿಯಲ್ಲಿ ಕೈ ತುಂಬಾ ಹಣ ಮಾಡಬಹುದೆಂದು ಆರೋಪಿಗಳು ಯುವತಿಯರಿಗೆ ಹಣದ ಆಮೀಷ ತೋರುತ್ತಿದ್ದರು. ಅಲ್ಲದೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಳ್ಳುವಂತೆ ಯುವತಿಯರಿಗೆ ಪ್ರೇರಣೆ ನೀಡುತ್ತಿದ್ದರು.

    ಆರೋಪಿಗಳಾದ ಪ್ರಜ್ವಲ್, ಸುಭೇಂದ್ರ ಫೋನ್ ಮೂಲಕ ಗಿರಾಕಿಗಳನ್ನು ಸಂಪರ್ಕ ಮಾಡಿ ಯುವತಿಯರ ಫೋಟೋ ಕಳುಹಿಸುತ್ತಿದ್ದರು. ಗಿರಾಕಿಗಳು ಯುವತಿಯರ ಫೋಟೋ ನೋಡಿ ಓಕೆ ಮಾಡಿದ ಮೇಲೆ ಆರೋಪಿಗಳು 2 ಸಾವಿರದಿಂದ 3 ಸಾವಿರ ಹಣ ಫಿಕ್ಸ್ ಮಾಡಿ ಯುವತಿಯರನ್ನು ಗಿರಾಕಿ ಬಳಿ ಕಳುಹಿಸಿಕೊಡುತ್ತಿದ್ದರು.

    ಆರೋಪಿಗಳು ಯುವತಿಯರನ್ನು ಹೊರ ರಾಜ್ಯದಿಂದ ಕರೆ ತಂದು ಮಾಂಸದ ದಂಧೆಗೆ ದೂಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

    ಸದ್ಯ ಬಂಧಿತ ಆರೋಪಿ ಸುಭೇಂದ್ರ ಹಾಗೂ ಪ್ರಜ್ವಲ್‍ನಿಂದ 35 ಸಾವಿರ ನಗದು ಹಾಗೂ ಮೊಬೈಲ್ ವಶಪಡಿಕೊಂಡಿದ್ದಾರೆ. ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಸಿಸಿಬಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ – ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

    ಸಿಸಿಬಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ – ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿ ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

    ಮೊದಲಿಗೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂಟೋನ್ಮೆಂಟ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಇಳಿದ ಸಿಸಿಬಿ ಪೊಲೀಸರು, ಒರಿಸ್ಸಾ ಮೂಲದ ಮಿಥುನ್ ದಿಗಲ್ ಅನ್ನೋ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು ಎರಡು ಲಕ್ಷ ಬೆಲೆ ಬಾಳುವ ಡ್ರಗ್ಸ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದಾದ ನಂತರ ಇದೇ ಪೊಲೀಸ್ ತಂಡ ಮತ್ತೊಂದು ಕಾರ್ಯಾಚರಣೆ ನಡೆಸಿ ಡಿಜೆ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರ ಬಳಿ ನೈಜೀರಿಯಾ ಮೂಲದ ವೈಟ್ ಅನ್ನೋ ವ್ಯಕ್ತಿಯನ್ನು ವಶಕ್ಕೆ ಪಡೆದು ವಿವಿಧ ಮಾದರಿಯ ಡ್ರಗ್ಸ್ ಮತ್ತು ಗಾಂಜಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರತ ಮೂಲದಿಂದ ರೈಲುಗಳ ಮೂಲಕ ಡ್ರಗ್ಸ್ ಗಳನ್ನು ತಂದು ಹೋಲ್‍ಸೇಲ್ ರೂಪದಲ್ಲಿ ಇಲ್ಲಿನ ಸ್ಥಳೀಯ ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಸ್ಥಳೀಯ ಮಾರಾಟಗಾರರು, ನಗರದ ಹೈ-ಫೈ ಕಾಲೇಜುಗಳು, ಪಬ್‍ಗಳು, ಸೇರಿದಂತೆ ನಗರದ ಐಷಾರಾಮಿ ಜನರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

  • ಶಂಕಿತ ನಾಲ್ವರು ಉಗ್ರರು 10 ದಿನ ಸಿಸಿಬಿ ಕಸ್ಟಡಿಗೆ

    ಶಂಕಿತ ನಾಲ್ವರು ಉಗ್ರರು 10 ದಿನ ಸಿಸಿಬಿ ಕಸ್ಟಡಿಗೆ

    – ತನಿಖೆ ವೇಳೆ ಮತ್ತಷ್ಟು ಸಂಚುಗಳ ಮಾಹಿತಿ ಬಹಿರಂಗ ಸಾಧ್ಯತೆ

    ಬೆಂಗಳೂರು: ದಾಳಿಗೆ ಸಂಚು ರೂಪಿಸುತ್ತಿದ್ದ ನಾಲ್ವರು ಶಂಕಿತ ಉಗ್ರರನ್ನು 52ನೇ ಸಿಸಿಎಚ್ ವಿಶೇಷ ನ್ಯಾಯಾಲಯ 10 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿದೆ.

    ಶಂಕಿತ ಉಗ್ರರಾದ ಎ1 ಮೆಹಬೂಬ್ ಪಾಷಾ, ಎ10 ಮೊಹಮದ್ ಮನ್ಸೂರ್, ಎ16 ಜಬಿವುಲ್ಲಾ ಹಾಗೂ ಎ18 ಸಯ್ಯದ್ ಅಜ್ಮತ್ತುಲ್ಲಾರನ್ನು ಸಿಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ನಿನ್ನೆ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರಪ್ಪನ ಪಾಳ್ಯದಲ್ಲಿ ನಾಲ್ವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಹೆಚ್ಚಿನ ತನಿಗೆ ಒಳಪಡಿಸುವ ಅವಶ್ಯಕತೆ ಇರುವುದರಿಂದ 52ನೇ ಸಿಸಿಹೆಚ್ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

    ನ್ಯಾಯಾಲಯದ ಆದೇಶದಂತೆ ಜನವರಿ 27ರ ವರೆಗೆ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿ ಆರೋಪಿಗಳು ಇರಲಿದ್ದಾರೆ. ಶಂಕಿತ ಉಗ್ರರು ಬೆಂಗಳೂರು ಸೇರಿದಂತೆ ಹಲವಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.

    ಸಿಸಿಬಿ ಎಸಿಬಿಗಳಾದ ವೇಣುಗೋಪಾಲ್ ಹಾಗೂ ಎಸಿಪಿ ನಾಗರಾಜ್ ನೇತೃತ್ವದಲ್ಲಿ ಆರೋಪಿಗಳನ್ನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳು ಕೋಮು ಗಲಭೆ ಸೃಷ್ಟಿಸಲು ಹಾಗೂ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಆರೋಪಿಗಳಿಗೆ ಕೆಲವು ಅಂತರ್ ರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖಾ ತಂಡ ಮುಂದಾಗಿದೆ. ಶಂಕಿತ ಉಗ್ರರ ತನಿಖೆ ವೇಳೆ ಮತ್ತಷ್ಟು ಮಹತ್ವದ ಮಾಹಿತಿ ಲಭಿಸುವ ಸಾಧ್ಯತೆ ಇದೆ.

  • ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರಿಂದ ಫೈರಿಂಗ್ – ಇಬ್ಬರು ರೌಡಿಶೀಟರ್ ಗಳಿಗೆ ಗುಂಡೇಟು

    ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರಿಂದ ಫೈರಿಂಗ್ – ಇಬ್ಬರು ರೌಡಿಶೀಟರ್ ಗಳಿಗೆ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ರೌಡಿಶೀಟರ್ ಗಳ ಕಾಲಿಗೆ ಸಿಸಿಬಿ ಪೊಲೀಸರ ಗುಂಡೇಟು ಬಿದ್ದಿದೆ.

    ಸತೀಶ್ ಮತ್ತು ಮಹೇಶ್ ಅಲಿಯಾಸ್ ಹಂದಿ ಮಹೇಶ್ ಗುಂಡೇಟು ತಿಂದ ರೌಡಿಶೀಟರ್ ಗಳು. ರೌಡಿಶೀಟರ್ ಸತೀಶ್ ಮೇಲೆ ಐದು ಪ್ರಕರಣಗಳು, ಹಂದಿ ಮಹೇಶ್ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ನಗರ ಮೈಕೋ ಲೇಔಟ್ ಬಳಿಯ ರಂಕಾ ಕಾಲೋನಿಯಲ್ಲಿ ಇಬ್ಬರು ಇರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಸಿಸಿಬಿ ಇನ್‍ಸ್ಪೆಕ್ಟರ್ ಗಳಾದ ಪುನೀತ್, ಕೇಶವಮೂರ್ತಿ ಮತ್ತವರ ತಂಡ ಇಬ್ಬರನ್ನು ಸೆರೆಹಿಡಿಯಲು ಯತ್ನಿಸಿದ್ದರು.

    ಈ ವೇಳೆ ಪೊಲೀಸ್ ಪೇದೆ ಹನುಮೇಶ್ ಎಂಬವರಿಗೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಇಬ್ಬರು ಯತ್ನಿಸಿದ್ದರು. ತಕ್ಷಣ ಅಲರ್ಟ್ ಆದ ಇಬ್ಬರು ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಇಬ್ಬರು ರೌಡಿಶೀಟರ್ ಗಳ ಕಾಲಿಗೆ ಗುಂಡೇಟು ಹೊಡೆದು ಖೆಡ್ಡಾಗೆ ಬೀಳಿಸಿದ್ದಾರೆ. ಪೇದೆ ಮತ್ತು ಇಬ್ಬರು ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ತನಿಖೆ ಮುಂದುವರೆದಿದೆ.