Tag: cc camera

  • ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮರ ಕೃತ್ಯ

    ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮರ ಕೃತ್ಯ

    ಶಿವಮೊಗ್ಗ: ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ನಗರದ ಕುವೆಂಪು ನಗರದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿದ್ದು, ಕಳ್ಳರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಕುವೆಂಪು ನಗರದ ಮನೆಯೊಂದರಲ್ಲಿ ಮೂವರು ಖದೀಮರ ತಂಡವೊಂದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ್ದಾರೆ. ಮನೆಯ ಗೇಟ್ ತೆಗೆದುಕೊಂಡು ಒಳಗೆ ಪ್ರವೇಶಿಸಿ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಆದರೆ ಬಾಗಿಲು ತೆಗೆಯಲು ಸಾಧ್ಯವಾಗದ ಕಾರಣ, ಹಗಲು ಹೊತ್ತು ಆಗಿದ್ದರಿಂದ ವಿಫಲ ಯತ್ನ ನಡೆಸಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಅಡಿಕೆಗೆ ಬಂಪರ್ ಬೆಲೆ- ತೋಟದಲ್ಲಿಯೇ ಕಳ್ಳತನವಾಗುತ್ತಿದೆ ಅಡಿಕೆ

    ಮನೆಯ ಮಾಲೀಕರು ಮನೆಗೆ ವಾಪಾಸ್ ಬಂದ ನಂತರ ಸಿಸಿ ಕ್ಯಾಮರಾ ಪರಿಶೀಲಿಸಿದ ನಂತರ ಕಳ್ಳರು ಹೊಂಚು ಹಾಕಿದ ದೃಶ್ಯ ಬಹಿರಂಗವಾಗಿದೆ. ಈ ವಿಷಯ ಹೊರಗೆ ಬರುತ್ತಿದ್ದಂತೆ ಕುವೆಂಪು ನಗರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಗಲು ಸಮಯದಲ್ಲಿಯೇ ಈ ರೀತಿ ಆದರೆ ಇನ್ನು ರಾತ್ರಿಯ ಸಮಯದಲ್ಲಿ ಹೇಗೆ ಎಂಬ ಭಯಭೀತಿಗೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಹಗಲಿನಲ್ಲಿಯೇ ಹಲವು ಕಳ್ಳತನ ಪ್ರಕರಣ ನಡೆದಿರುವ ಘಟನೆ ವರದಿಯಾಗಿವೆ. ಇಂತಹ ಬಡಾವಣೆಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

  • ಬೇಗೂರಿನಲ್ಲಿ ಚಿರತೆ ಭಯ – ಸಿಸಿಟಿವಿ, ಡ್ರೋಣ್ ಬಳಸಿ 6 ದಿನಗಳಿಂದ ಹುಡುಕಾಟ

    ಬೇಗೂರಿನಲ್ಲಿ ಚಿರತೆ ಭಯ – ಸಿಸಿಟಿವಿ, ಡ್ರೋಣ್ ಬಳಸಿ 6 ದಿನಗಳಿಂದ ಹುಡುಕಾಟ

    ಆನೇಕಲ್: ಬೇಗೂರು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಬಳಿ ಚಿರತೆ ಪ್ರತ್ಯಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಅಪಾರ್ಟ್ ಮೆಂಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

    ನಿನ್ನೆ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಮಾಡಿದ್ದರು. ಡ್ರೋನ್ ಕ್ಯಾಮ್ ನಿಂದ ಐಡೆಂಟಿಫಿಕೇಷನ್ ಕಷ್ಟ ಅನ್ನೋ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಬೋನ್ ಗಳನ್ನು ನಿರ್ಮಿಸಿದ್ದಾರೆ. ನಾಲ್ಕು ದಿನಗಳಿಂದ ಸಿಸಿಟಿವಿಗೂ ಕಾಣಿಸಿಕೊಂಡಿಲ್ಲ, ಬೋನ್ ಗಳ ಕಡೆ ಕೂಡ ಬಂದಿಲ್ಲ. ಹೀಗಾಗಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಬೋನ್ ಗಳನ್ನು ತೆರವು ಮಾಡುವ ಸಾಧ್ಯತೆ ಇದೆ.

    ಸತತ ಆರನೇ ದಿನವೂ ಚಿರತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮುಂಜಾನೆ ಕಾಣಿಸಿಕೊಂಡಿದ್ದ ಚಿರತೆ ಇಲ್ಲಿವರೆಗೂ ನಾಪತ್ತೆಯಾಗಿದೆ. ಅರಣ್ಯ ಇಲಾಖೆಯಿಂದ ಸತತ ಮೂರನೇ ದಿನವೂ ಬೋನ್ ಇಟ್ಟು ಸಿಬ್ಬಂದಿ ಕಾಯುತ್ತಿದ್ದಾರೆ. ಬೋನ್ ಒಳಗಡೆ ಮೇಕೆ ಮರಿಯನ್ನು ಇಡಲಾಗಿದ್ದು ಚಿರತೆಗಾಗಿ ಕಾದುಕುಳಿತಿದ್ದಾರೆ. ನಿನ್ನೆ ರಾತ್ರಿ ಪೂರ್ತಿ ಐದು ಮಂದಿ ಅರಣ್ಯ ಸಿಬ್ಬಂದಿಯಿಂದ ಚಿರತೆಗಾಗಿ ಹುಡುಕಾಟ ನಡೆಯಿತು.

    ಚಿರತೆ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದರಿಂದ ಹತ್ತಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಹಾಕಲಾಗಿದೆ. ಚಿರತೆ ಚಲನವಲನಗಳ ಬಗ್ಗೆ ನಿಗಾ ಇಡಲು ತಜ್ಞರು ಸೂಚನೆ ನೀಡಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಚಿರತೆ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಲ್ಲು ಕ್ವಾರಿಯಲ್ಲಿ ಚಿರತೆ ಅಡಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಬಿಟಿಎಂ ಬಡಾವಣೆಯ ಜನ ಯಾರು ಸಹ ಸಂಜೆ ಮತ್ತು ಬೆಳಗ್ಗಿನ ಜಾವ ಹೊರಗಡೆ ಬರಬಾರದು ಅಂತ ಅರಣ್ಯ ಇಲಾಖೆ ಸೂಚನೆ ನೀಡಿದೆ.

  • SSLC ಪರೀಕ್ಷೆಗೆ ಸಿದ್ಧತೆ ಪೂರ್ಣ – ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್

    SSLC ಪರೀಕ್ಷೆಗೆ ಸಿದ್ಧತೆ ಪೂರ್ಣ – ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್

    ಬೆಂಗಳೂರು: ಪ್ರಸಕ್ತ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಬೋರ್ಡ್ ಸಿದ್ಧತೆ ಪೂರ್ಣಗೊಳಿಸಿದೆ. ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿದ್ಧತೆಗೆ ಬಗ್ಗೆ ಇವತ್ತು ಸಭೆ ನಡೆಸಿ, ಪರಿಶೀಲನೆ ನಡೆಸಿದರು.

    ಮಾರ್ಚ್ 27 ರಿಂದ ಏಪ್ರಿಲ್ 9 ವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 8,48,192 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ 2,879 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷ ಅಂದರೆ ಎಲ್ಲಾ 2,879 ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಿ ಅಕ್ರಮ ತಡೆಗೆ ಕ್ರಮವಹಿಸಲಾಗುತ್ತಿದೆ.

    ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಎಪ್ರಿಲ್ 19 ರಿಂದ ನಡೆಯಲಿದ್ದು ಮೇ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮೌಲ್ಯಮಾಪನ ರಾಜ್ಯಾದ್ಯಂತ 228 ಕೇಂದ್ರಗಳಲ್ಲಿ ನಡೆಯಲಿದೆ. ಈ ವರ್ಷ 79 ಸಾವಿರ ಶಿಕ್ಷಕರು ಮೌಲ್ಯಮಾಪನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದು, ಅಗತ್ಯ 64 ಸಾವಿರ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

    ಮಕ್ಕಳ ಆಂತರಿಕ ಅಂಕ ಆನ್ ಲೈನ್ ಮೂಲಕವೇ ಫೆಬ್ರವರಿ 3ನೇ ವಾರದಲ್ಲಿ ನಮೂದು ಮಾಡಲು ಅವಕಾಶ ನೀಡಲು ಬೋರ್ಡ್ ನಿರ್ಧರಿಸಿದೆ. ಓಎಂಆರ್ ಬದಲು ಆನ್ ಲೈನ್ ಮೂಲಕ ಅಂಕ ನಮೂದು ಮಾಡುವ ಹೊಸ ಪದ್ದತಿ ಇಲಾಖೆ ತರುತ್ತಿದೆ. ಪರೀಕ್ಷಾ ಅಕ್ರಮ ತಡೆಗೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

  • ಸಿಸಿ ಕ್ಯಾಮೆರಾದ ವೈರ್ ಕತ್ತರಿಸಿ ಬರೋಬ್ಬರಿ 30ಲಕ್ಷ ರೂ. ಮೌಲ್ಯದ ಸಿಗರೇಟ್ ಕದ್ರು!

    ಸಿಸಿ ಕ್ಯಾಮೆರಾದ ವೈರ್ ಕತ್ತರಿಸಿ ಬರೋಬ್ಬರಿ 30ಲಕ್ಷ ರೂ. ಮೌಲ್ಯದ ಸಿಗರೇಟ್ ಕದ್ರು!

    ರಾಯಚೂರು: ನಗರದಲ್ಲಿ ಸಿಸಿ ಕ್ಯಾಮೆರಾದ ವೈರ್ ಕತ್ತರಿಸಿ 30 ಲಕ್ಷ ರೂ. ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿದೆ.

    ನಗರದ ಯರಗೇರಾ ಲೇಔಟ್‍ನ ಜಿ.ಅಬ್ದುಲ್ ಅಂಡ್ ಸನ್ಸ್ ಐಟಿಸಿ ಏಜೆನ್ಸಿಯ ಗೋದಾಮುನಲ್ಲಿ ಈ ಘಟನೆ ನಡೆದಿದೆ. ಸುಮಾರು 2 ಲಕ್ಷ 50 ಸಾವಿರ ರೂಪಾಯಿ ನಗದು ಹಾಗೂ ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಸಿಗರೇಟನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

    ಖದೀಮರು ಗುರುತು ಪತ್ತೆಯಾಗ ಬಾರದು ಎಂದು ಶಾಪ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ವೈರನ್ನು ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಶೆಟರ್ ಮುರಿದು ಗೋದಾಮಿನಲ್ಲಿದ್ದ ಸಿಗರೇಟ್ ಪ್ಯಾಕ್ ಗಳನ್ನ ರಾತ್ರೋರಾತ್ರಿ ಕದ್ದು ಸಾಗಿಸಿದ್ದಾರೆ.

    ಈ ಘಟನೆ ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಂಚಾರಿ ಪೊಲೀಸರ ಲಂಚಕ್ಕೆ ಬ್ರೇಕ್: ಇಲಾಖೆಗೆ ಬಾಡಿ ಕ್ಯಾಮೆರಾಗಳು ಎಂಟ್ರಿ!

    ಸಂಚಾರಿ ಪೊಲೀಸರ ಲಂಚಕ್ಕೆ ಬ್ರೇಕ್: ಇಲಾಖೆಗೆ ಬಾಡಿ ಕ್ಯಾಮೆರಾಗಳು ಎಂಟ್ರಿ!

    ಬೆಂಗಳೂರು: ಪೊಲೀಸರು ಅಂದ್ರೆ ಲಂಚಬಾಕರು ಅನ್ನೋ ಅಪವಾದ ಸಹಜ. ಅದಕ್ಕೆ ತಕ್ಕಂತೆ ಎಷ್ಟೋ ಸಮಯಗಳಿಂದ ಸಂಚಾರಿ ಪೊಲೀಸರು ಲಂಚಕ್ಕೆ ಕೈ ಒಡ್ಡುತ್ತಿದ್ರು. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಬ್ರೇಕ್ ಬೀಳಲಿದೆ. ಜೊತೆಗೆ ರಾತ್ರಿ ವೇಳೆ ಪೊಲೀಸರ ಗಸ್ತಿಗೂ ಸಹಕರಿಸಲಿದೆ.

    ಹೌದು. ಇಷ್ಟು ದಿನ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ನೋಡಿದ್ವಿ. ಏನೇ ಅಪರಾಧಗಳಾದ್ರೂ ಅದ್ರಲ್ಲಿ ಇಂಚಿಂಚೂ ರೆಕಾರ್ಡ್ ಆಗ್ತಿತ್ತು. ಆದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಟ್ರಾಫಿಕ್ ಪೊಲೀಸರೇ ಲಂಚಕ್ಕೆ ಕೈ ಚಾಚುತ್ತಿದ್ದಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ಆದ್ರೆ ಇನ್ಮುಂದೆ ಇದಕ್ಕೆಲ್ಲಾ ಬ್ರೇಕ್ ಬೀಳಲಿದೆ. ಯಾಕಂದ್ರೆ ಪೊಲೀಸರ ಲಂಚಾವತಾರ ಇನ್ಮುಂದೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಲಿದೆ. ಅದು ಹೇಗಂದ್ರೆ ಇದಕ್ಕಾಗಿಯೇ ಬಾಡಿ ಕ್ಯಾಮೆರಾಗಳು ಇದೀಗ ಸಂಚಾರಿ ಪೊಲೀಸ್ ಇಲಾಖೆಗೆ ಎಂಟ್ರಿಯಾಗಿದೆ. ಹೀಗಾಗಿ ಸಂಚಾರಿ ಪೊಲೀಸರು ತಮ್ಮ ಕೆಲಸದ ಅವಧಿಯಲ್ಲಿ ಈ ಕ್ಯಾಮೆರಾವನ್ನು ಧರಿಸಿಯೇ ಕೆಲಸ ನಿರ್ವಹಿಸಬೇಕಾಗಿದೆ.

    ಚಿಕ್ಕ ಗಾತ್ರದ ಈ ಕ್ಯಾಮೆರಾವನ್ನು ಸಂಚಾರಿ ಪೊಲೀಸರು ಟ್ಯಾಗ್ ಮೂಲಕ ಎದೆ ಭಾಗದಲ್ಲಿ ಧರಿಸ್ತಾರೆ. ಇದ್ರಲ್ಲಿ ಪೊಲೀಸರ ಎದುರು ನಡೆಯುವ ಎಲ್ಲಾ ಘಟನೆಗಳು ಇಂಚಿಂಚಾಗಿ ರೆಕಾರ್ಡ್ ಆಗಲಿದೆ. ಈ ವೇಳೆ ಒಂದೊಮ್ಮೆ ಪೊಲೀಸರು ಸಾರ್ವಜನಿಕರಿಂದ ಲಂಚ ಪಡೆದ್ರೆ ಅವ್ರ ಲಂಚಾವತಾರ ಕ್ಯಾಮೆರಾ ಮೂಲಕ ಬಟಾಬಯಲಾಗಲಿದೆ. ಹೀಗಾಗಿ ಒಂದು ಹಂತಕ್ಕೆ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ಭರವಸೆಯನ್ನೂ ಈ ಬಾಡಿ ಕ್ಯಾಮೆರಾ ಮೂಡಿಸಿದೆ. ಹಾಗೆ ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ಪೊಲೀಸರ ಮೇಲೆ ಆಗುವ ಹಲ್ಲೆಗಳ ಬಗ್ಗೆಯೂ ಈ ಬಾಡಿ ಕ್ಯಾಮೆರಾ ವಾಸ್ತವತೆಯನ್ನು ತೆರಿದಿಡಲಿವೆ.

    ಈಗಾಗಲೇ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಬಾಡಿ ಕ್ಯಾಮೆರಾದ ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿಗೆ ಇದೀಗ ತಾನೆ ಎಂಟ್ರಿ ಕೊಟ್ಟಿದ್ದು, ಪ್ರಾಯೋಗಿಕವಾಗಿ 50 ಕ್ಯಾಮೆರಾಗಳನ್ನು ತರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕ್ಯಾಮೆರಾ ಮೂಲಕವಾದ್ರು ಪೊಲೀಸರ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳುತ್ತಾ? ಮತ್ತು ತಪ್ಪು ಮಾಡಿ ಪೊಲೀಸರ ಮೇಲೆ ಗೂಬೆ ಕೂರಿಸೋರಿಗೆ ಬುದ್ಧಿ ಬರುತ್ತಾ ಕಾದು ನೋಡಬೇಕಿದೆ.