Tag: CBSE

  • ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು

    ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು

    ನವದೆಹಲಿ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ನಿರ್ಧಾರ ಕೈಗೊಳ್ಳಲಾಗಿದೆ.

    ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ರಾಜ್‍ನಾಥ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಪರೀಕ್ಷೆ ನಡೆಸುವ ಬಗ್ಗೆ ಸಾಧ್ಯಾಸಾಧ್ಯತೆ ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ಪ್ರಧಾನಿ ಮೋದಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಕೊರೊನಾದ ಕಠಿಣ ಪರಿಸ್ಥಿತಿ ಸಮಯದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಜೂನ್ 3ರೊಳಗೆ ಸುಪ್ರೀಂ ಕೋರ್ಟ್‍ಗೆ ಪ್ರತಿಕ್ರಿಯೆ ನೀಡಲಿದೆ. ಹೀಗಾಗಿ ಇಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರೀಕ್ಷೆ ನಡೆಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಸಧ್ಯದ ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ರದ್ದುಪಡಿಸಲಾಗಿದೆ.

    ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸಹ ಕೊರೊನಾ ನಂತರದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿಲ್ಲ.

    ಪರೀಕ್ಷೆ ರದ್ದುಗೊಳಿಸುವ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 3ರಂದು ವಿಚಾರಣೆ ನಡೆಸಲಿದೆ. ಈ ವೇಳೆ ಪರೀಕ್ಷೆ ರದ್ದು ಕುರಿತು ಕೇಂದ್ರ ಸರ್ಕಾರ ತನ್ನ ನಿರ್ಧಾರ ತಿಳಿಸಬೇಕಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿದ್ದಾರೆ.

    ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಸಭೆಯಲ್ಲಿ ಮಾಹಿತಿ ನೀಡಿದ್ದು, ಹಲವು ರಾಜ್ಯಗಳು ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಇಂಗಿತ ವ್ಯಕ್ತಪಡಿಸಿವೆ. ಇನ್ನೂ ಹಲವು ರಾಜ್ಯಗಳು ರದ್ದುಗೊಳಿಸಲು ಮನವಿ ಮಾಡಿವೆ. ಕೆಲ ರಾಜ್ಯಗಳು ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಬಳಿಕ ಪರೀಕ್ಷೆ ನಡೆಸುವಂತೆ ಹೇಳಿವೆ ಎಂದು ರಾಜನಾಥ್ ಸಿಂಗ್ ಸಭೆಯಲ್ಲಿ ವಿವರಿಸಿದರು. ಅಲ್ಲದೆ ಬಹುಪಾಲು ಜನ ಪರೀಕ್ಷೆ ನಡೆಸುವುದರ ಪರವಾಗಿದ್ದು, ಜುಲೈ 15 ಹಾಗೂ ಆಗಸ್ಟ್ 26ರ ನಡುವೆ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‍ಇ ಸೂಚಿಸಿತ್ತು.

  • CBSE 12ನೇ ಕ್ಲಾಸ್ ಪರೀಕ್ಷೆ – 30 ನಿಮಿಷ ಅವಧಿ, ಶೀಘ್ರದಲ್ಲೇ ದಿನಾಂಕ ಪ್ರಕಟ!

    CBSE 12ನೇ ಕ್ಲಾಸ್ ಪರೀಕ್ಷೆ – 30 ನಿಮಿಷ ಅವಧಿ, ಶೀಘ್ರದಲ್ಲೇ ದಿನಾಂಕ ಪ್ರಕಟ!

    ನವದೆಹಲಿ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷಾವಧಿ ಎರಡೂವರೆ ಗಂಟೆ ಬದಲಾಗಿ 30 ನಿಮಿಷಕ್ಕೆ ತರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಜೂನ್ 1ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಪರೀಕ್ಷೆಯ ದಿನಾಂಕ ಮತ್ತು ಸಮಯದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.

    ಈ ಮೊದಲು ವಿದ್ಯಾರ್ಥಿಗಳು ಎರಡೂವರೆ ಗಂಟೆ ಪರೀಕ್ಷೆ ಬರೆಯುತ್ತಿದ್ದರು. ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷಾ ಅವಧಿಯನ್ನು 30 ನಿಮಿಷಕ್ಕೆ ಇಳಿಸಲು ಮುಂದಾಗಿದ್ದು, ಎಲ್ಲವೂ ವಸ್ತುನಿಷ್ಠ (ಬಹುಆಯ್ಕೆ) ಪ್ರಶ್ನೆಗಳಿರಲಿವೆ ಎಂದು ಹೇಳಲಾಗುತ್ತಿದೆ.

    ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳಿಗೂ ಮೇ 25ರಂದು ಪರೀಕ್ಷೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿತ್ತು. ಭಾನುವಾರದ ಸಭೆಯಲ್ಲಿ ಬಹುತೇಕ ರಾಜ್ಯಗಳು ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದವು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ – ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?

    ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮಾತ್ರ ಪರೀಕ್ಷೆ ಇಲ್ಲದೇ ಮಕ್ಕಳನ್ನು ಪಾಸ್ ಮಾಡುವ ಪ್ರಸ್ತಾವವನ್ನ ಸರ್ಕಾರದ ಮುಂದಿಟ್ಟಿದ್ದವು. ಈ ರಾಜ್ಯಗಳು ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡುವಂತೆ ಮನವಿಯನ್ನ ಮಾಡಿಕೊಂಡಿದ್ದವು. 32ರಲ್ಲಿ 29 ರಾಜ್ಯಗಳು ಕಡಿಮೆ ಅವಧಿ ಪರೀಕ್ಷೆಗೆ ಸಮ್ಮತಿ ನೀಡಿದ್ರೆ, ರಾಜಸ್ಥಾನ, ತ್ರಿಪುರ ಮತ್ತು ತೆಲಂಗಾಣ ಮಾತ್ರ ಮೊದಲಿನ ಪದ್ಧತಿಯಂತೆ ಪರೀಕ್ಷೆ ನಡೆಸುವಂತೆ ಕೇಳಿದ್ದವು.

  • ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ

    ಬೆಂಗಳೂರು: ಎಸ್‍ಎಸ್‍ಎಲ್ ಪರೀಕ್ಷೆ ರದ್ದು ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪರೀಕ್ಷೆ ರದ್ದತಿಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೋಹ ಏಳತೊಡಗಿದೆ. ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು ಜೂನ್ 21ರಿಂದ. ಹೀಗಾಗಿ ಸಿಬಿಎಸ್‍ಇ ರೀತಿಯ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು, 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸಹ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

  • ಸಿಬಿಎಸ್‍ಇ ಪರೀಕ್ಷೆ ಕುರಿತು ಪ್ರಧಾನಿ ಮೋದಿ ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

    ಸಿಬಿಎಸ್‍ಇ ಪರೀಕ್ಷೆ ಕುರಿತು ಪ್ರಧಾನಿ ಮೋದಿ ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

    ನವದೆಹಲಿ: ದೇಶದಲ್ಲಿ ಮುಂದೆ ನಡೆಯಲಿರುವ ಸಿಬಿಎಸ್‍ಇ ಪರೀಕ್ಷೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಸಚಿವರಾದ ರಮೇಶ್ ಪೋಕ್ರಿಯಲ್ ಮತ್ತು ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

    ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದಂತೆ ಮುಂದೆ ನಡೆಯಲಿರುವ 10ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗ ಸಿಬಿಎಸ್‍ಇ ಪರೀಕ್ಷೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.

    ಕೆಲದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಿಬಿಎಸ್‍ಸಿ ಪರೀಕ್ಷೆಗಳನ್ನು ರದ್ದು ಮಾಡಬೇಕಾಗಿ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಕುರಿತು ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

    ಸಿಬಿಎಸ್‍ಇ ಪರೀಕ್ಷೆಗಳು ಮೇ 4 ರಿಂದ ಪ್ರಾರಂಭವಾಗಿ 10ನೇ ತರಗತಿಯವರಿಗೆ ಜೂನ್ 7 ರಂದು ಮತ್ತು 12ನೇ ತರಗತಿಯವರಿಗೆ ಜೂನ್ 12 ರಂದು ಮುಕ್ತಾಯವಾಗುವಂತೆ ಈಗಾಗಲೇ ನಿಗದಿಯಾಗಿದೆ.

    ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಾಗಿ ಈ ಬಾರಿಯ ಪರೀಕ್ಷೆಗಳನ್ನು ಆನ್‍ಲೈನ್ ಮೂಲಕ ನಡೆಸಲು ಸಭೆಯಲ್ಲಿ ಚಿಂತನೆ ಮಾಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

  • 19 ವರ್ಷದ ಸಿಬಿಎಸ್‍ಇ ಟಾಪರ್ ಅಪಘಾತದಲ್ಲಿ ಸಾವು

    19 ವರ್ಷದ ಸಿಬಿಎಸ್‍ಇ ಟಾಪರ್ ಅಪಘಾತದಲ್ಲಿ ಸಾವು

    -3.8 ಕೋಟಿ ಸ್ಕಾಲರ್ ಶಿಪ್ ಪಡೆದಿದ್ದ ವಿದ್ಯಾರ್ಥಿನಿ

    ನವದೆಹಲಿ: 19 ವರ್ಷದ ಸಿಬಿಎಸ್‍ಇ ಟಾಪರ್ ಸುದೀಕ್ಷಾ ಭಾಟಿ ಬುಲಂದಶಹರ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದಾದ್ರಿ ಜಿಲ್ಲೆಯ ಗ್ರೇಟರ್ ನೋಯ್ಡಾದ ಸುದೀಕ್ಷಾ 12ನೇ ತರಗತಿಯಲ್ಲಿ ಶೇ.98 ಅಂಕಗಳನ್ನು ಪಡೆದು, ಟಾಪರ್ ಆಗಿ ಹೊರಹೊಮ್ಮಿದ್ದರು.

    ಮ್ಯಾಸಚೂಸೆಟ್ಸ್ ಬಾಬ್ಸನ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಸುದೀಕ್ಷಾ ಬರೋಬ್ಬರಿ 3.8 ಕೋಟಿ ರೂ. ಶಿಷ್ಯವೇತನ ಸಹ ಪಡೆದುಕೊಂಡಿದ್ದರು. ಸುದೀಕ್ಷಾ ಸೋದರ ಮತ್ತು ಪೊಲೀಸರ ಪ್ರಕಾರ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ನಾನು ಮತ್ತು ಸುದೀಕ್ಷಾ ನಮ್ಮ ಬೈಕಿನಲ್ಲಿ 30 ಕಿಲೋ ಮೀಟರ್ ಸ್ಪೀಡ್ ನಲ್ಲಿ ಔರಾಂಗಬಾದ್ ನಿಂದ ಹೋಗ್ತಿದ್ದೀವಿ. ಮೊದಲು ಮನೆಗೆ ಅಥವಾ ಮಾವನ ಬಳಿ ಹೋಗೋಣ ಅಂತ ಕೇಳಿದೆ. ಆಗ ಸುದೀಕ್ಷಾ ಮನೆಗೆ ತೆರಳೋಣ ಅಂತ ಹೇಳಿದಳು. ನಮ್ಮ ಮುಂದೆ ಹೋದ ಬುಲೆಟ್ ಬೈಕ್ ಸವಾರ ದಿಢೀರ್ ಅಂತ ಬ್ರೇಕ್ ಹಾಕಿದ. ನಾನು ನಿಧಾನವಾಗಿ ಹೋಗ್ತಿದ್ದರಿಂದ ಬೈಕ್ ನಿಲ್ಲಿಸಿದೆ. ಬೈಕ್ ಬ್ಯಾಲೆನ್ಸ್ ತಪ್ಪಿದ್ದರಿಂದ ಅಕ್ಕ ಕೆಳಗೆ ಬಿದ್ದಿದ್ದಳು ಎಂದು ಸುದೀಕ್ಷಾ ಸೋದರ ನಿಗಮ್ ಭಾಟಿ ಹೇಳಿದ್ದಾನೆ. ಕೂಡಲೇ ಸುದೀಕ್ಷಾರನ್ನ ಆಸ್ಪತ್ರೆಗೆ ಸಾಗಿಸಿದಾಗ ವಿದ್ಯಾರ್ಥಿನಿ ಮೃತಪಟ್ಟಿರೋದನ್ನು ವೈದ್ಯರು ದೃಢಪಡಿಸಿದರು ಎಂದು ಬುಲಂದಶಹರ್ ಪೊಲೀಸರು ಮಾಹಿತಿ ನೀಡಿದ್ದಾರೆ.

    ಔರಂಗಾಬಾದ್ ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಸಹ ನಡೆಸಲಾಗಿದೆ. ಹಾಗೆ ಮೃತ ವಿದ್ಯಾರ್ಥಿನಿಯ ಸೋದರನ ಹೇಳಿಕೆ ಸಹ ದಾಖಲಿಸಿಕೊಳ್ಳಲಾಗಿದೆ. ದಿಢೀರ್ ಅಂತ ವಾಹನದ ಬ್ರೇಕ್ ಹಾಕಿದ್ದರಿಂದ ವಿದ್ಯಾರ್ಥಿನಿ ಕೆಳಗೆ ಸಾವನ್ನಪ್ಪಿರೋದ ಪ್ರಾಥಮಿಕ ತನಿಕೆಯಲ್ಲಿ ತಿಳಿದು ಬಂದಿದೆ. ಮರಣೋತ್ತರ ಶವ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಬುಲಂದಶಹರ್ ಠಾಣೆಯ ಎಸ್.ಪಿ. ಅತುಲ್ ಕುಮಾರ್ ಶ್ರೀವಾತ್ಸವ್ ಹೇಳಿದ್ದಾರೆ.

    ಬುಲಂದಶಹರ್ ನಗರದ ವಿದ್ಯಾ ಜ್ಞಾನ ಶಾಲೆಯಲ್ಲಿ ಸುದೀಕ್ಷಾ 12ನೇ ತರಗತಿಯಲ್ಲಿ ಶೇ.98 ಅಂಕ ಪಡೆಯುವ ಮೂಲಕ ಜಿಲ್ಲೆಯ ಟಾಪರ್ ಆಗಿದ್ದರು. ಸುದೀಕ್ಷಾ ತಂದೆ ಶೇಖರ್ ಭಾಟಿ ಓರ್ವ ರೈತರಾಗಿದ್ದರು. ಸುದೀಕ್ಷಾ ಯುಎಸ್ ಯುನಿವರ್ಸಿಟಿಯಿಂದ ನಾಲ್ಕು ವರ್ಷದ ವ್ಯಾಸಂಗಕ್ಕಾಗಿ 3.8 ಕೋಟಿ ರೂ. ಶಿಷ್ಯವೇತನ ಪಡೆದಿದ್ದರು.

  • ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷೆ ರದ್ದು

    ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷೆ ರದ್ದು

    ನವದೆಹಲಿ: 10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯನ್ನು ರದ್ದು ಮಾಡಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

    ದೇಶದಲ್ಲಿ ದಿನೇ ದಿನೇ ಕೋವಿಡ್‌–19 ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಪೋಷಕರಲ್ಲಿ ಆತಂಕ ಉಂಟಾಗಿತ್ತು. ಹೀಗಾಗಿ 12ನೇ ತರಗತಿಯ ಬಾಕಿ ಇರುವ ವಿಷಯಗಳ ಪರೀಕ್ಷೆಗಳನ್ನು ರದ್ದುಪಡಿಸಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧಾರ ತಿಳಿಸುವಂತೆ ಕೋರ್ಟ್‌ ಕೇಂದ್ರಕ್ಕೆ ಸೂಚಿಸಿತ್ತು.

    ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಎಂ.ಖಾನ್ವಿಕರ್‌ ಅವರ ನೇತೃತ್ವದ ಪೀಠಕ್ಕೆ 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿರುವ ವಿಚಾರವನ್ನು ತಿಳಿಸಿದರು. ಅಷ್ಟೇ ಅಲ್ಲದೇ ಕೊನೆಯ ಮೂರು ಪರೀಕ್ಷೆಯ ಆಧಾರದ ಮೇಲೆ ಅಂಕಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೋರ್ಟ್‌ ಗಮನಕ್ಕೆ ತಂದರು.

    ಈಗಾಗಲೇ ಹಲವು ವಿಷಯಗಳ ಪರೀಕ್ಷೆ ಮುಗಿದಿದ್ದು, ಬಾಕಿ ವಿಷಯಗಳ ಪರೀಕ್ಷೆಯನ್ನು ಜುಲೈ ಒಂದರಿಂದ 15ರವರೆಗೆ ನಡೆಸಲು ಸಿಬಿಎಸ್‌ಇ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.

  • ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್‍ಗೆ ಹೋಗಬಹುದು, ಪರೀಕ್ಷೆ ನಡೆಸಬೇಡಿ: ಎನ್‍ಎಸ್‍ಯುಐ ಆಗ್ರಹ

    ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್‍ಗೆ ಹೋಗಬಹುದು, ಪರೀಕ್ಷೆ ನಡೆಸಬೇಡಿ: ಎನ್‍ಎಸ್‍ಯುಐ ಆಗ್ರಹ

    ನವದೆಹಲಿ: ಸಿಬಿಎಸ್‍ಇ ಮತ್ತು ಯುಜಿಸಿ ನಡೆಸುತ್ತಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡವಂತೆ ಆಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್ ನಿವಾಸದೆದರು ಎನ್‍ಎಸ್‍ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಎನ್‍ಎಸ್‍ಯುಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಲಾಯಿತು.

    ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಿಬಿಎಸ್‍ಇ ಬೋರ್ಡ್ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ ಜೊತೆಗೆ ಜೆಇಇ ಮುಖ್ಯ ಪರೀಕ್ಷೆ, ನೀಟ್, ಸಿಎಸ್, ಡಿಬಿಟಿ-ನೆಟ್ ಮತ್ತು ಇತರ ಪರೀಕ್ಷೆಗಳ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದು ಆರೋಪಿಸಿದರು.

    ಕೊರೊನಾ ವೇಗವಾಗಿ ಹರಡುವ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ. ಪರೀಕ್ಷೆಗಳಿಗಾಗಿ ಮಕ್ಕಳು ಕಂಟೈನ್ಮೆಂಟ್ ಝೋನ್‍ಗೆ ಬರಬೇಕಾಗಬಹುದು ಅಲ್ಲದೆ ಪ್ರಯಾಣ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಸೋಂಕು ಹರಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ತಾತ್ಕಾಲಿಕವಾಗಿ ಪರೀಕ್ಷೆಗಳನ್ನು ಮುಂದೂಡಬೇಕು, ಪದವಿ ವಿದ್ಯಾರ್ಥಿಗಳನ್ನು ಹಿಂದಿನ ಫಲಿತಾಂಶ ಮತ್ತು ಆತಂರಿಕ ಮೌಲ್ಯಮಾಪನ ಆಧಾರದಡಿ ಉತ್ತೀರ್ಣಗೊಳಿಸುವಂತೆ ಮನವಿ ಮಾಡಿದರು.

  • ಕೊರೊನಾ ಭೀತಿ- ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ

    ಕೊರೊನಾ ಭೀತಿ- ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ

    ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ)ಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ.

    ಕೇಂದ್ರ ಉನ್ನತ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಪರೀಕ್ಷಾ ದಿನಾಂಕವನ್ನು ಬದಲಿಸಿದೆ. ಸಿಬಿಎಸ್‍ಇಯಿಂದ ನಡೆಯುತ್ತಿರುವ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಾರ್ಚ್ 19 ರಿಂದ 31ರ ವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮಾರ್ಚ್ 31ರ ನಂತರ ನಡೆಸಲು ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    ಪರಿಷ್ಕೃತ ವೇಳಾ ಪಟ್ಟಿಯನ್ನು ಮಾರ್ಚ್ 31ರ ನಂತರ ಘೋಷಿಸಲಾಗುವುದು, ಪರೀಕ್ಷೆಗಳು ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮೌಲ್ಯಮಾಪನಾ ಪ್ರಕ್ರಿಯೆಯನ್ನೂ ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಲಾಗಿದೆ. ಮಂಡಳಿಯಿಂದ ಯಾವುದೇ ಆದೇಶ ಪ್ರಕಟವಾಗದಿದ್ದಲ್ಲಿ ಎಲ್ಲ ಮೌಲ್ಯಮಾಪನ ಕೇಂದ್ರಗಳ ಮೇಲ್ವಿಚಾರಕರು ಏಪ್ರಿಲ್ 1ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ತಿಳಿಸಲಾಗಿದೆ.

    ಕೇಂದ್ರ ಮಾನವಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆ ಸಿಬಿಎಸ್‍ಇ ಈ ಸುತ್ತೋಲೆ ಹೊರಡಿಸಿದ್ದು, ಪರೀಕ್ಷೆಗಳು ಮುಖ್ಯ. ಅದೇ ರೀತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭದ್ರತೆ ಸಹ ಅಷ್ಟೇ ಮುಖ್ಯ ಎಂದು ಸಿಬಿಎಸ್‍ಇ ತಿಳಿಸಿದೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎಟಿಎ) ಸಹ ಐಐಟಿಯ ಜೆಇಇ, ಎಂಜಿನಿಯರಿಂಗ್ ಕಾಲೇಜ್ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಿದೆ. ವೇಳಾಪಟ್ಟಿಗೆ ಅನುಗುಣವಾಗಿ ಜೆಇಇ ಹೊಸ ದಿನಾಂಕವನ್ನು ನಿರ್ಧರಿಸಲಿದೆ. ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಹ ಮಾಹಿತಿ ನೀಡಲಿದೆ ಎಂದು ಎನ್‍ಟಿಎ ತಿಳಿಸಿದೆ.

    ದೇಶದಲ್ಲಿ ಕೊರೊನಾ ವೈರಸ್‍ನಿಂದಾಗಿ 3ಜನ ಸಾವನ್ನಪ್ಪಿದ್ದು, 151 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ 8ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

  • CBSE ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಮಗಳ ಸಾಧನೆ

    CBSE ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಮಗಳ ಸಾಧನೆ

    ಬೆಂಗಳೂರು: ಇತ್ತೀಚಿಗಷ್ಟೇ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಇದರ ಬೆನ್ನಲ್ಲೆ ಈಗ ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ಕೂಡ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಪುತ್ರಿ ಅತಿಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಸುಧಾರಾಣಿ ಮಗಳು ನಿಧಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.4% ಮಾರ್ಕ್ಸ್ ಪಡೆದಿದ್ದು, ಈ ಮೂಲಕ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಈ ಸಂತೋಷವನ್ನು ನಟಿ ಸುಧಾರಾಣಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

    “ಇದು ನಮ್ಮ ಜೀವನದಲ್ಲಿ ತುಂಬಾ ಸಂತೋಷದ ಸಮಯವಾಗಿದೆ. ನಮ್ಮ ಸುಬ್ಬಿಕುಟ್ಟಿ ತನ್ನ 12ನೇ ತರಗತಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.4% ಅಂಕ ಪಡೆದುಕೊಂಡಿದ್ದಾಳೆ. ಈ ಮೂಲಕ ಅವಳು ಶಾಲೆಗೆ ಎರಡನೇ ಟಾಪರ್ ಆಗಿದ್ದಾಳೆ. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಹೀಗೆ ಇರಲಿ, ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

    ಜೊತೆಗೆ ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರೂ ನಿಧಿಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಮಗಳು ಶಾಲೆ ಮುಗಿಸಿದ ನಂತರ ಕುಟುಂಬವೂ ವಿದೇಶಿ ಪ್ರವಾಸ ತೆರಳಿದ್ದರು.

    https://www.instagram.com/p/Bw9kzZVnV_l/

  • ಬ್ಲಡ್  ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ನವದೆಹಲಿ: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ 16 ವರ್ಷದ ವಿದ್ಯಾರ್ಥಿಯೊಬ್ಬ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ 96% ಫಲಿತಾಂಶ ಪಡೆದಿದ್ದು, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

    ದೆಹಲಿಯ ಪ್ರಿಯೇಶ್ ತಾಯಲ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕ. 10ನೇ ತರಗತಿ ಪರೀಕ್ಷೆ ಸಮಯದಲ್ಲಿಯೇ ಅವನನ್ನು ಕೀಮೋಥೆರಪಿ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಯಿತು. ಅಲ್ಲಿನ ಹಾಸಿಗೆಯ ಮೇಲೆ ಮಲಗಿದ್ದ ಅವನು, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಚಿಕಿತ್ಸೆ (ಸಲೈನ್) ಪಡೆದುಕೊಂಡು ಓದಿದ್ದ.

    ಮಗನಿಗೆ ಬೋರ್ಡ್ ಪರೀಕ್ಷೆ ಕಾಲದಲ್ಲಿಯೇ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಇತರಿಂದ ಅವನ ಭವಿಷ್ಯಕ್ಕೆ ತೊಂದರೆ ಉಂಟಾಯಿತು ಎಂದು ನಾವು ಚಿಂತಿಸಬೇಕಾಯಿತು. ಆದರೆ, ಅವನು ಧೈರ್ಯ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. 2017 ಡಿಸೆಂಬರ್‍ನಲ್ಲಿ ಪೂರ್ವಭಾವಿ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆದರೆ ಆ ಸಮಯದಲ್ಲಿಯೇ ಪ್ರಿಯೇಶ್‍ಗೆ ಜ್ವರ ಮತ್ತು ನೀಲಿ ಮಚ್ಚೆಗಳು ಕಾಣಿಸಿಕೊಂಡವು. ಇದರಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ಮಾಡಿಸಿದಾಗ ಅವನಿಗೆ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದು ಬಂತು ಎಂದು ಬಾಲಕನ ತಾಯಿ ಹೇಳಿದ್ದಾರೆ.

    ಲ್ಯುಕೇಮಿಯಾ ರೋಗಿಗಳಿಗೆ ಕನಿಷ್ಠ ಎರಡುವರೆ ವರ್ಷ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಿಯು ಕಿಮೊಥೆರಪಿಗಾಗಿ ಆಸ್ಪತ್ರೆಗೆ ಬರಬೇಕು ಮತ್ತು ಮನೆಯಲ್ಲಿ ಔಷಧಿಗಳನ್ನು ತಗೆದುಕೊಳ್ಳಬೇಕು. ಈ ಚಿಕಿತ್ಸೆ ಕಠಿಣವಾಗಿದ್ದು, ರೋಗಿಯು ಕಾಲು ನೋವು, ನಿದ್ರೆಯ ಕೊರತೆಯಂತಹ ಭೌತಿಕ ಅಸ್ವಸ್ಥತೆಗಳನ್ನ ಎದುರಿಸಬೇಕಾಗುತ್ತದೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ. ಮಾನಸ್ ಕಾರ್ಲಾ ಹೇಳಿದ್ದಾರೆ.

    ನಾನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಯಲ್ಲಿ ಅಧ್ಯಯನ ಮಾಡಿ ಎಂಜಿನಿಯರ್ ಆಗಬೇಕು. ನಾನು ಕ್ಯಾನ್ಸರ್ ಮೆಟ್ಟಿನಿಲ್ಲುತ್ತೇನೆ ಮತ್ತು ನನ್ನ ಹೆಸರನ್ನು ದೇಶ ನೆನಪಿಡುವಂತಹ ಸಾಧನೆ ಮಾಡುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಉತ್ತಮ ಮಾನವನಾಗಿ ಬಾಳುತ್ತೇನೆ ಎಂದು ಪ್ರಿಯೇಶ್ ಹೇಳಿದ್ದಾನೆ.

    ಸಿಬಿಎಸ್‍ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿತ್ತು. ಒಟ್ಟು 86.70% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 88.67% ಬಾಲಕಿಯರು ಮತ್ತು 85.32% ಬಾಲಕರು ಉತ್ತೀರ್ಣರಾಗಿದ್ದಾರೆ. ಈ ವರ್ಷ 4,460 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 16,24,682 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.