Tag: cbi

  • ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?

    ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?

    ನವದೆಹಲಿ: ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಬಿಐ ಅಧಿಕಾರಿಗಳು ಕಿತ್ತಾಟ ನಡೆಸಿದ್ದು, ಇಬ್ಬರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

    ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ನೇಮಕ ಮಾಡಿದೆ.

    ಕಿತ್ತಾಟ ಆರಂಭಗೊಂಡಿದ್ದು ಹೇಗೆ?
    1979ರ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ವರ್ಮಾ 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. 2016ರಲ್ಲಿ ಸಿಬಿಐಗೆ ನೇಮಕವಾಗಿದ್ದ ರಾಕೇಶ್ ಆಸ್ಥಾನಾ 2017ರಲ್ಲಿ ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಭಡ್ತಿ ನೀಡಿತು. ಸಿಬಿಐಗೆ ವಿಶೇಷ ನಿರ್ದೇಶಕರನ್ನಾಗಿ ನೇಮಕವಾಗಿದ್ದು ಇದೇ ಮೊದಲು. ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದರು. ಆಸ್ಥಾನಾ ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದ ದಿನದಿಂದಲೂ ಶುರುವಾದ ಈ ಒಳ ಜಗಳ ಈಗ ಇಲ್ಲಿಯವರೆಗೆ ತಲುಪಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ರಾಕೇಶ್ ಆಸ್ಥಾನಾ ಮೇಲಿರುವ ಆರೋಪ ಏನು?
    ಅಕ್ರಮ ಹಣ ವರ್ಗಾವಣೆ ಪ್ರಕರಣ ಎಸಗಿದ ಆರೋಪದ ಅಡಿ ಸ್ಟರ್ಲಿಂಗ್ ಬಯೋಟಿಕ್ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ದಾಳಿ ವೇಳೆ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ರಾಕೇಶ್ ಆಸ್ಥಾನಾ ಹೆಸರಿದೆ. ಈ ಪ್ರಕರಣದಲ್ಲಿ ಆಸ್ಥಾನಾ 3 ಕೋಟಿ ರೂ. ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಿಬಿಐ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದು, ಈ ಎಫ್‍ಐಆರ್ ನಲ್ಲಿ ಆಸ್ಥಾನಾ ಹೆಸರು ಇಲ್ಲ.

    ಕಿತ್ತಾಟ ಜಾಸ್ತಿಯಾಗಿದ್ದು ಹೇಗೆ?
    ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದರು. ಸ್ಟರ್ಲಿಂಗ್ ಬಯೋಟಿಕ್ ಕಂಪನಿಯ ತನಿಖೆ ವೇಳೆ ಮೂಗು ತೂರಿಸದಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ರಾಕೇಶ್ ಆಸ್ಥಾನಾಗೆ ಸೂಚಿಸಿದ್ದರು. ವರ್ಮಾ ಮಾತನ್ನೇ ಪರಿಗಣಿಸದೇ ಆಸ್ಥಾನಾ ಸಿಬಿಐ ಕಚೇರಿಯಲ್ಲಿ ಪೂರ್ಣ ಪ್ರಮಾಣದ ಮುಖ್ಯಸ್ಥರಂತೆ ವರ್ತಿಸಲು ಆರಂಭಿಸಿದ್ದರು. ಸಿಬಿಐನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಕುರಿತು ಸಭೆ ಕರೆಯುವುದು, ಅಧಿಕಾರಗಳ ಜೊತೆ ಚರ್ಚೆ ನಡೆಸಲು ಆರಂಭಿಸಿದ್ದರು. ಅಸ್ಥಾನ ಅಲೋಕ್ ವರ್ಮಾ ಅವರನ್ನ ಟಾರ್ಗೆಟ್ ಮಾಡಲು ಶುರು ಮಾಡಿದ್ದು ಸಿಬಿಐ ಕಚೇರಿಯೋಳಗೆ ಪರಿಸ್ಥಿತಿ ಕೆಟ್ಟು ಈ ಹಂತಕ್ಕೆ ಬಂದು ನಿಲ್ಲಲು ಬಹುದೊಡ್ಡ ಕಾರಣ ಎಂದು ವರದಿಯಾಗಿದೆ.

    ರಾಕೇಶ್ ಆಸ್ಥಾನಾ ಯಾರು?
    ಅಸ್ಥಾನ 1984 ರ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ. ಆರ್‍ಜೆಡೆ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರ ಬಹುಕೋಟಿ ಮೇವು ಹಗರಣ, ಗುಜರಾತ್ ನ ಗೋದ್ರಾ ಹತ್ಯಾಕಾಂಡ, ಹಾಗೂ 2008 ರಲ್ಲಿ ನಡೆದ ಅಹ್ಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಹಗರಣ ಎಂದು ಕರೆಯಲಾಗುವ ಅಗಸ್ತವೆಸ್ಟ್‍ಲ್ಯಾಂಡ್, ಕಲ್ಲಿದ್ದಲು ಹಗರಣ ಹಾಗೂ ಬ್ಯಾಂಕುಗಳಿಗೆ ವಂಚಿಸಿ ವಿದೇಶ ಸೇರಿರುವ ಉದ್ಯಮಿ ವಿಜಯ ಮಲ್ಯ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದಾರೆ. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಅಧಿಕಾರಿಯೂ ಆಗಿದ್ದರು. ಜಾರಿ ನಿರ್ದೇಶನಾಲಯ(ಇಡಿ)ಯಲ್ಲೂ ಆಸ್ಥಾನಾ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು.

    ಅಲೋಕ್ ವರ್ಮಾ ಯಾರು?
    ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೂಡಾ ಪ್ರಧಾನಿ ಆಪ್ತ ವಲಯದ ಅಧಿಕಾರಿ. 2016 ರಲ್ಲಿ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿದ್ದ ಆರ್.ಕೆ ದತ್ತಾ ಅವರನ್ನ ಕೇಂದ್ರ ಗೃಹ ಇಲಾಖೆಗೆ ತುರ್ತು ವರ್ಗಾವಣೆ ಮಾಡಲಾಗಿತ್ತು. ಆಗ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ಅವಧಿ ಬಳಿಕ ದತ್ತಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನಕ್ಕೆ ಬಡ್ತಿ ನೀಡಲು ಪ್ಲಾನ್ ಮಾಡಲಾಗಿತ್ತು ಆದರೆ ಗೃಹ ಇಲಾಖೆಗೆ ದತ್ತಾ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಸಿಬಿಐ ನಿರ್ದೇಶಕ ಹುದ್ದೆಗೆ 2017ರ ಜನವರಿಯಲ್ಲಿ ವರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಅಲೋಕ್ ವರ್ಮಾ ಕೂಡಾ ಪ್ರಭಾವಿ ಅಧಿಕಾರಿಯಾಗಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಮೋದಿ ಆಪ್ತ ಎಂದು ಕರೆಯಲ್ಪಡುವ ಅಜಿತ್ ದೊವೇಲ್ ಅವರ ಆಪ್ತ.

    ಕಿತ್ತಾಟ ಬಯಲಾಗಿದ್ದು ಹೇಗೆ?
    ಸಿಬಿಐ ಕಚೇರಿ ಒಳಗೆ ಆತಂರಿಕವಾಗಿ ನಡೆಯುತ್ತಿದ್ದ ಈ ಜಗಳ ಮೊದಲು ಹೊರ ಬಂದಿದ್ದು ಈ ವರ್ಷದ ಜುಲೈನಲ್ಲಿ. ಕೇಂದ್ರ ವಿಚಕ್ಷಣ ದಳ(ಸಿವಿಸಿ) ಜುಲೈ 12 ರಂದು ಸಿಬಿಐ ನೇಮಕಾತಿ ಸಂಬಂಧಿಸಿದ ಸಭೆಗೆ ಭಾಗವಹಿಸುವಂತೆ ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿತ್ತು. ಈ ವೇಳೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ರಜೆ ಮೇಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಜುಲೈ 19ಕ್ಕೆ ಸಭೆ ನಿಗದಿಪಡಿಸುವಂತೆ ಸಿವಿಸಿಗೆ ಮರು ಪತ್ರ ಬರೆದಿದ್ದರು. ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ಥಾನಾ ಅವರ ಹೆಸರು ಭ್ರಷ್ಟಾಚಾರ ಪ್ರಕರಣದಲ್ಲಿ ಕೇಳಿ ಬಂದ ಹಿನ್ನೆಲೆ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರವಿಲ್ಲ ಎಂದು ವರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದರಿಂದ ಆಕ್ರೋಶಗೊಂಡ ಆಸ್ಥಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಅಲೋಕ್ ವರ್ಮಾ ಸಹ ಭಾಗಿಯಾಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿ ಕ್ಯಾಬಿನೆಟ್ ಕಾರ್ಯದರ್ಶಿ ಪತ್ರ ಬರೆದಿದ್ದರು ಈ ಮೂಲಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳ ಬಯಲಿಗೆ ಬಂದಿತ್ತು.

    ಅಲೋಕ್ ವರ್ಮಾ ಮೇಲಿರುವ ಆರೋಪ ಏನು?
    ಕ್ಯಾಬಿನೆಟ್ ಕಾರ್ಯದರ್ಶಿ ಬರೆದ ಪತ್ರದಲ್ಲಿ, ದೇಶದ ಬಹುದೊಡ್ಡ ಮಾಂಸ ರಫ್ತುದಾರ, ಹವಾಲಾ ದಂಗೆಕೋರ, ಉದ್ಯಮಿ ಮೋಯಿನ್ ಖುರೇಷಿ ಪ್ರಕರಣ ತನಿಖೆ ನಡೆಸಲು ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಸಾನಾ ಅವರಿಂದ ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಅಸ್ತಾನಾ ಆರೋಪಿಸಿದ್ದರು. ಖರೇಷಿ ಪ್ರಕರಣದಲ್ಲಿ ಸಾನಾ ಭಾಗಿಯಾಗಿದ್ದು ಪ್ರಕರಣದಿಂದ ಕೈ ಬಿಡಲು ವರ್ಮಾ ಲಂಚ ಪಡೆದಿದ್ದಾರೆ. ಈ ಪ್ರಕರಣದ ಆರೋಪಿಯಾದ ಸತೀಶ್ ಸಾನಾ ಬಂಧಿಸಲು ಹೋದಾಗ ಪ್ರಕ್ರಿಯೆ ನಡೆಸದಂತೆ ಅಲೋಕ್ ವರ್ಮಾ ಸೂಚಿಸಿದ್ದರು ಎಂದು ಅಸ್ಥಾನಾ ಕ್ಯಾಬಿನೆಟ್ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.

    ಪ್ರಕರಣ ದಿಢೀರ್ ತಿರುವು ಪಡೆದಿದ್ದು ಹೇಗೆ?
    ಬಂಧಿಸಿ ವಿಚಾರಣೆ ವೇಳೆ ಸತೀಶ್ ಸಾನಾ ನಾನು ಆಸ್ಥಾನಗೆ ಪ್ರಕರಣದಿಂದ ಕೈ ಬಿಡುವಂತೆ 3 ಕೋಟಿ ರೂ. ಹಣದ ಡೀಲ್ ನಡೆದಿದೆ ಎಂದು ಬಾಯಿಬಿಟ್ಟಿದ್ದ. ಈ ಪ್ರಕರಣ ಸಂಬಂಧ ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ 1.75 ಕೋಟಿ ಲಂಚದ ಹಣವನ್ನು ಸಂಗ್ರಹಿಸಲು ದೆಹಲಿಗೆ ಬಂದಿರುವುದಾಗಿ ಮನೋಜ್ ಪ್ರಸಾದ್ ತಿಳಿಸಿದ್ದ. ಅಷ್ಟೇ ಅಲ್ಲದೇ ಕಳೆದ ವರ್ಷ ಅಸ್ಥಾನಾ ಲಂಡನ್ ಗೆ ಬಂದಿದ್ದಾಗ ಮನೋಜ್ ಜೊತೆ ನನ್ನ ನಿವಾಸದಲ್ಲಿ ತಂಗಿದ್ದರು ಎಂಸು ಸತೀಶ್ ಸಾನಾ ಹೇಳಿದ್ದ ಎನ್ನಲಾಗಿದೆ. ಈ ಹೇಳಿಕೆಯನ್ನು ಆಧಾರಿಸಿ ಸಿಬಿಐ ರಾಕೇಶ್ ಅಸ್ಥಾನಾ ವಿರುದ್ಧ ಎಫ್‍ಐಆರ್ ದಾಖಲಿಸುತ್ತದೆ. ಪ್ರಕರಣದಲ್ಲಿ ಅಸ್ಥಾನಾಗೆ ಸಹಾಯ ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿ ಡಿಎಸ್ಪಿ ದೇವೇಂದ್ರ ಕುಮಾರ್ ಅವರ ದೆಹಲಿಯ ಸಿಬಿಐ ಪ್ರಧಾನ ಕಚೇರಿ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿ ಬಂಧಿಸಲಾಗಿದೆ.
    – ಶಬ್ಬೀರ್ ನಿಡಗುಂದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುರಾರಿ ಪ್ರಕರಣ: ಒಂದೇ ಕುಟುಂಬದ 11 ಜನರು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಅದೊಂದು ಆಕಸ್ಮಿಕ ಘಟನೆ

    ಬುರಾರಿ ಪ್ರಕರಣ: ಒಂದೇ ಕುಟುಂಬದ 11 ಜನರು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಅದೊಂದು ಆಕಸ್ಮಿಕ ಘಟನೆ

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವು ಆತ್ಮಹತ್ಯೆ ಅಲ್ಲ, ಆಚರಣೆ ವೇಳೆ ನಡೆದ ಆಕಸ್ಮಿಕ ಘಟನೆ ಎಂದು ಸಿಬಿಐ ನೀಡಿರುವ ವರದಿಯಲ್ಲಿ ಬಹಿರಂಗೊಂಡಿದೆ.

    ಘಟನೆಯ ಕುರಿತು ಸತ್ಯಾಂಶ ತಿಳಿಯಲು ಸಿಬಿಐ ಸಹಾಯ ಕೋರಿದ್ದ ದೆಹಲಿ ಪೊಲೀಸರು ಕೇಂದ್ರ ತನಿಖಾ ದಳಕ್ಕೆ ಮಾಹಿತಿ ನೀಡಿದ್ದರು. ಸದ್ಯ ಬುಧವಾರ ಸಂಜೆ ತನಿಖಾ ವರದಿಯನ್ನು ದೆಹಲಿ ಪೊಲೀಸರು ಪಡೆದಿದ್ದಾರೆ.

    ವರದಿಯಲ್ಲಿ ಸಾವಿನ ಹಿಂದಿನ ಕುರಿತ ನೈಜ ಕಾರಣವನ್ನು ಬಹಿರಂಗ ಪಡಿಸಲಾಗಿದ್ದು, ಸಾವಿಗೂ ಮುನ್ನ ಉದ್ದೇಶ ಪೂರ್ವಕವಾಗಿ ಕುಟುಂಬ ಯಾವ ಸದಸ್ಯರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿರಲಿಲ್ಲ. ಆದರೆ ಆಚರಣೆ ವೇಳೆ ನಡೆದ ಆಕಸ್ಮಿತ ಘಟನೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ.

    ಮರಣೋತ್ತರ ಪರೀಕ್ಷೆ ನಡೆಸಿದ ಸಿಬಿಐನ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಸಿಎಫ್‍ಎಸ್‍ಎಲ್) ಮೃತರ ಮನೆಯಲ್ಲಿ ದೊರೆತ ಕೆಲ ದಾಖಲೆಗಳ ಕುರಿತು ತನಿಖೆ ನಡೆಸಿದೆ. ಅಲ್ಲದೇ ಮನೆಯ ನೆರೆಹೊರೆ ಕುಟುಂಬಗಳು, ಸ್ನೇಹಿತರು, ಆತ್ಮೀಯರನ್ನು ತನಿಖೆಗೆ ಒಳಪಡಿಸಿ ಸಾವಿಗೂ ಮುನ್ನ ಕುಟುಂಬ ಸದಸ್ಯರು ಇದ್ದ ಮನಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೇ ಘಟನೆಯಲ್ಲಿ ಸಾವನ್ನಪ್ಪಿದ್ದ ದಿನೇಶ್ ಸಿಂಗ್ ಚುಂದಾವತ್ ಹಿರಿಯ ಮಗ ಹಾಗೂ ಆಕೆಯ ಸಹೋದರಿ ಸುಜಾತ ನಾಗ್‍ಪಾಲ್ ಮತ್ತು ಇತರೇ ಕುಟುಂಬಸ್ಥರ ಆತ್ಮೀಯರನ್ನು ವಿಚಾರಣೆ ನಡೆಸಿತ್ತು.

    ಏನಿದು ಸೈಕಲಾಜಿಕಲ್ ಮರಣೋತ್ತರ ಪರೀಕ್ಷೆ?
    ಈ ಮರಣೋತ್ತರ ಪರೀಕ್ಷೆ ವಿಧಾನದಲ್ಲಿ ವ್ಯಕ್ತಿ ಸಾವಿಗೂ ಮುನ್ನ ಇದ್ದ ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಇದರಲ್ಲಿ ವ್ಯಕ್ತಿಯ ಸ್ನೇಹಿತರು, ಕುಟುಂಬ ಹಾಗೂ ಆರೋಗ್ಯ ಸ್ಥಿತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಹಲವರನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಈ ಮಾಹಿತಿ ಅನ್ವಯ ಸಿಬಿಐ ವರದಿ ನೀಡುತ್ತದೆ.

    ಏನಿದು ಪ್ರಕರಣ: ಜುಲೈ 1ರಂದು ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ 11 ಕಿಟಕಿಗಳು, 11 ಪೈಪುಗಳು ಸಿಕ್ಕಿದ್ದು 11 ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆರಂಭಿಕ ತನಿಖೆ ವೇಳೆ ಮನೆಯಲ್ಲಿ ಸಿಕ್ಕ ಚೀಟಿಯ ಪ್ರಕಾರ ಮೃತ 11 ಮಂದಿಯು 10 ಕ್ರಮಗಳನ್ನು ಅನುಸರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿತ್ತು, ಅಲ್ಲದೇ ಇವರ ಮನೆಯಲ್ಲಿ ಬಾಗಿಲುಗಳು ಸಹ 11 ಕಬ್ಬಿಣದ ರಾಡ್‍ಗಳನ್ನು ಒಳಗೊಂಡಿದ್ದು ಹಲವು ನಿಗೂಢತೆಗೆ ಎಡೆಮಾಡಿಕೊಟ್ಟಿತ್ತು.

    11 ಮಂದಿಯೂ ಆಧ್ಯಾತ್ಮದ ಮೊರೆ ಹೋಗಿ ಮೋಕ್ಷ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆಯೂ ವ್ಯಕ್ತವಾಗಿತ್ತು. ಈ ಆತ್ಮಹತ್ಯೆಗೆ ಪ್ರೇರೇಪಣೆ ನೀಡಲಾಗಿತ್ತು ಎಂದು ಕೂಡ ವರದಿಯಾಗಿತ್ತು.

    ನೆರೆಮನೆಯವರು ನೀಡಿದ ಮಾಹಿತಿ ಅನ್ವಯ ಕುಟುಂಬವು ಆತ್ಮಹತ್ಯೆಗೂ ಮುಂಚೆ ಪ್ರಿಯಾಂಕ ಎಂಬವರ ಮದುವೆಗೆ ತಯಾರು ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

    ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಎಫ್‍ಐಆರ್ ದಾಖಲಿಸುವ ಪ್ರಯತ್ನ ನಡೆಸುತ್ತಿದ್ದ ಬೆನ್ನಲ್ಲೇ ಸಹೋದರ ಸಂಸದ ಡಿ.ಕೆ. ಸುರೇಶ್ ಅವರು ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳನ್ನ ಮತ್ತು ವಕೀಲರನ್ನು ಭೇಟಿ ಮಾಡಿ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಬಳಿ ಇರುವ ಎಲ್ಲ ಲೆಕ್ಕಗಳಿಗೆ ಐಟಿಗೆ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.

    ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ಕಾನೂನು, ಸಂವಿಧಾನದ ಮೇಲೆ ಗೌರವವಿದೆ. ಭಯದಿಂದ ಈ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಬಿಜೆಪಿ ಅವರ ದುರಾಡಳಿತ, ಅವರು ಯಾವ ರೀತಿ ವಿರೋಧ ಪಕ್ಷದ ಮೇಲೆ ಗದಾಪ್ರಹಾರ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಈ ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು.

    ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಹೀಗೆ ದೇಶದ ಎಲ್ಲ ನಾಯಕರ ಮೇಲೂ ಕೇಸು ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಯತ್ನ ಮಾಡುತ್ತಿದ್ದಾರೆ. ಗುಜರಾತ್ ರಾಜ್ಯಸಭಾ ಚುನಾವಣೆ ನಂತರ ಈ ಸೇಡಿನ ರಾಜಕಾರಣ ಜಾಸ್ತಿಯಾಗಿದೆ. ಡಿ.ಕೆ ಶಿವಕುಮಾರ್ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಸರ್ಕಾರವನ್ನು ಅಸ್ಥಿರ ಮಾಡಲು, ಅಧಿಕಾರವನ್ನು ಪಡೆಯಲು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಡಿ.ಕೆ ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಆರೋಪಿಸಿದರು.

    ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಳೆದಿದೆ. ಅದರಲ್ಲೂ ಕೂಡ ಕರ್ನಾಟಕ ಬಿಜೆಪಿಯ ಟಾರ್ಗೆಟ್ ಆಗಿದೆ. ಇಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿದ್ಯಮಾನಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿ, ಇಡಿ, ಸಿಬಿಐಯನ್ನ ಬಳಸಿಕೊಂಡು ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿರುವವರನ್ನ ಬಂಧಿಸುವ ಪ್ರಯತ್ನವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಮಾಡುತ್ತಿದ್ದಾರೆ ಎಂದರು.

    ಕಳೆದು ಒಂದು ವರ್ಷದ ಹಿಂದೆ ನನ್ನ ಸಹೋದರರ ಮನೆ, ಕಚೇರಿ, ಸಂಬಂಧಿಕರ ಮೇಲೆ ಸುಮಾರು 68 ಕಡೆ ಐಟಿ ದಾಳಿ ನಡೆಸಿತ್ತು. ಅದು ಮುಂದುವರಿದು 80 ಕಡೆ ದಾಳಿ ನಡೆದಿತ್ತು. ಈಗಾಗಲೇ ಐಟಿ ಅಧಿಕಾರಿಗಳು ಪ್ರಾಷಿಕ್ಯೂಷನ್ ಕೇಸ್ ಅನ್ನು ಡಿ.ಕೆ ಶಿವಕುಮಾರ್ ಮೇಲೆ ಹಾಕಿದ್ದಾರೆ. ಆದರೆ ಕೇಸ್ ಹಾಕಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೊತ್ತಾದ ಮೇಲೆ ಮತ್ತೊಂದು ಪ್ರಯತ್ನವನ್ನು ಹಿಂಬಾಗಿಲಿನಿಂದ ಶಿವಕುಮಾರ್ ಮೇಲೆ ಒತ್ತಡ ತರಬೇಕು ಎಂದು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.

    ಪ್ರಧಾನಿ ಮಂತ್ರಿ ಅವರಿಗೆ ಇದರ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಪ್ರಧಾನಿ ಮಂತ್ರಿಯ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಅದೀನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಈ ವಿಚಾರ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರು ಮಧ್ಯೆ ವಹಿಸಬೇಕು ಎಂದು ಒತ್ತಾಯಿಸುತ್ತೇನೆ. ಇದರ ಬಗ್ಗೆ ಮಾತನಾಡಲು ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

    ಡಿ.ಕೆ. ಶಿವಕುಮಾರ್ ಅಪರಾಧ ಎಸಗಿದರೆ ಮಾತ್ರ ಜಾರಿ ನಿರ್ದೇಶನಾಲಯಕ್ಕೆ ರೆಫರ್ ಮಾಡಲು ಅವಕಾಶ ಇರುತ್ತದೆ. ಆದರೆ ಇದು ಸಿಬಿಐ ಅಲ್ಲಾ ಸಿಬಿಐ ಮೋರ್ಚಾ, ಐಟಿ ಮೋರ್ಚಾ ಮತ್ತು ಇಡಿ ಮೋರ್ಚಾವಾಗಿ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಕಾರಣ ಬಿಜೆಪಿ ನಾಯಕರ ಒತ್ತಡವಾಗಿದೆ. 1 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಅಂತ ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದರ ಅರ್ಥ ಏನು ಅಂತ ಎಲ್ಲರಿಗು ಗೊತ್ತಾಗಿದೆ. ಬಿಜೆಪಿಯವರು ಹೀಗೆ ಒತ್ತಡ ಹೇರುವ ಮೂಲಕ ಸರ್ಕಾರ ಬೀಳಿಸುವ ಯತ್ನ ನಡೆಸುತ್ತಿದ್ದಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ನವದೆಹಲಿ: ಬಲ್ಗೇರಿಯಾದಲ್ಲಿ ಕಾಡು ಹಂದಿ ಬೇಟೆಯಾಡಿದ್ದರ ಕುರಿತು ಸೈಫ್ ಅಲಿ ಖಾನ್ ಗೆ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ.

    ಬೇಟೆಯಾಡಿರುವುದರ ವಿಚಾರ ಕುರಿತು ಸೈಫ್ ಅಲಿ ಖಾನ್ ಅವರಿಂದ ಹೇಳಿಕೆ ಪಡೆಯುವಂತೆ ಬಲ್ಗೇರಿಯಾ ಸರ್ಕಾರ ಇಂಟರ್ ಪೋಲ್ ಗೆ ಸೂಚನೆ ನೀಡಿದೆ.

    ಅನುಮತಿ ಹಾಗೂ ಪರವಾನಗಿ ಪಡೆದುಕೊಳ್ಳದೆ ಸೈಫ್ ಅಲಿ ಖಾನ್ ಅವರ ಏಜೆಂಟ್ ಕಾಡು ಹಂದಿ ಬೇಟೆಯನ್ನು ವ್ಯವಸ್ಥೆ ಮಾಡಿದ್ದರು ಹಾಗಾಗಿ ಏಜೆಂಟ್ ನನ್ನು ಬಲ್ಗೇರಿಯಾ ಪೊಲೀಸರು ಪ್ರಕರಣದಲ್ಲಿ ಸೇರಿಸಿದ್ದಾರೆ. ಪ್ರಕರಣದಲ್ಲಿ ಸೈಫ್ ಅಲಿ ಖಾನ್ ಸಾಕ್ಷಿಯಾಗಿದ್ದು ಒಂದು ತಿಂಗಳ ಹಿಂದೆ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

    ಬಲ್ಗೇರಿಯಾದಲ್ಲಿ ಬೇಟೆಯಾಡಲು ನಿಯಮಗಳಿದ್ದು, ಬೇಟೆಯ ಕಾನೂನಿನ ಪ್ರಕಾರ ಬೇಟೆಯಾಡುವವರು ಆ ದೇಶದ ಬೇಟೆಯಾಡುವ ಪರವಾನಗಿ ಹೊಂದಿರಬೇಕು ಅಥವಾ ಬಲ್ಗೇರಿಯಾ ದೇಶದ ಪರೀಕ್ಷೆಯನ್ನು ಪಾಸ್ ಮಾಡಿ ಪರವಾನಗಿಯನ್ನು ಪಡೆದಿರಬೇಕು.

    ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪಡೆಯುವಂತೆ ಇಂಟರ್ ಪೋಲ್ ನಿಂದ ಬಾಂದ್ರಾ ಘಟಕದ ಕ್ರೈಂ ವಿಭಾಗಕ್ಕೆ ಸೂಚನೆ ಬಂದ ಬೆನ್ನಲ್ಲೇ ಪೊಲೀಸರು ಖಾನ್ ಅವರ ಉಪನಗರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಸಿಬಿಐ ಮೂಲಕ ಇಂಟರ್ ಪೋಲ್ ನಿಂದ ಕೆಲವು ದಾಖಲೆಗಳು ಬಂದಿತು ಅದನ್ನು ಖಾನ್ ಅವರಿಗೆ ಕಳಿಸಿಕೊಡಲಾಗಿದೆ ಹೇಳಿಕೆಯನ್ನು ಇನ್ನೂ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾಡು ಪ್ರಾಣಿಗಳ ಬೇಟೆಯನ್ನು ನಿಷೇಧಿಸಲಾಗಿದೆ.

  • ಡಿಕೆಶಿ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ಒಕ್ಕಲಿಗ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ!

    ಡಿಕೆಶಿ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ಒಕ್ಕಲಿಗ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ!

    ಬೆಂಗಳೂರು: ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ರಾಜ್ಯಾದ್ಯಂತ ಒಕ್ಕಲಿಗರ ಸಂಘ ಪ್ರತಿಭಟನೆಗೆ ನಿರ್ಧಾರ ಮಾಡಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಹೇಳಿದ್ದಾರೆ.

    ಮೋದಿ ವಿರುದ್ದ ಪ್ರತಿಭಟನೆ ಗೆ ನಿರ್ಧಾರ ಮಾಡಿರುವ ರಾಜ್ಯ ಒಕ್ಕಲಿಗರ ಸಂಘ ಇದೇ ರೀತಿ ದಾಳಿ ಮುಂದುವರಿದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದರು.

    ನೋಟು ನಿಷೇಧಗೊಂಡ ಸಂದರ್ಭದಲ್ಲಿ ಅವ್ಯವಹಾರ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ 11 ಕಡೆ ದಾಳಿ ನಡೆಸಿದ್ದರು. ರಾಮನಗರ ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜರ್ ಬಿ ಪ್ರಕಾಶ್ ಮನೆ ಹಾಗೂ ಕಚೇರಿಗಳ ಮೇಲೆ ಕೂಡ ದಾಳಿ ಮಾಡಿದ್ದರು.

  • ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಬೆಂಗಳೂರು: 500, 1 ಸಾವಿರ ರೂ. ನೋಟು ನಿಷೇಧಗೊಂಡ ಸಮಯದಲ್ಲಿ ಹಣ ವಿನಿಮಯ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಡಿಕೆ ಸಹೋದರರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದೆ.

    ನಿನ್ನೆಯೇ ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಇಂದು ಕನಕಪುರ, ರಾಮನಗರ, ಯಶವಂತಪುರ, ಬಸವನಗುಡಿ, ನೆಲಮಂಗಲ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ.

    ಸರ್ಕಾರಿ ಬ್ಯಾಂಕ್‍ನಲ್ಲಿ ನಡೆದಿದ್ದ 10 ಲಕ್ಷ ಹಣ ಬದಲಾವಣೆ ಕುರಿತು ದಾಳಿ ನಡೆಸಿರುವ ಸಿಬಿಐ, ಸರ್ಕಾರಿ ಬ್ಯಾಂಕ್ ನ ಇಬ್ಬರು ಮ್ಯಾನೇಜರ್ ಗಳ ಮನೆ ಹಾಗೂ ಕಚೇರಿ ಮೇಲೆ, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೂಡ ದಾಳಿ ನಡೆಸಿದೆ. 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗೊಳಗಾಗಿರುವ ಎಲ್ಲರೂ ಡಿಕೆ ಸಹೋದರರ ಆಪ್ತರಾಗಿದ್ದಾರೆ.

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು 11 ಮಂದಿ ಆಪ್ತರ ಮೇಲೆ ಸಿಬಿಐ, ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿನ್ನೆಯೇ ಸರ್ಚ್ ವಾರೆಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.

    ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಹೆದರುವುದಿಲ್ಲ ಎದುರಿಸಲು ಸಿದ್ಧರಿದ್ದೇವೆ. ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ ಅಕ್ರಮ ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಿ ಧ್ವನಿಯನ್ನು ಅಡಗಿಸುತ್ತೇವೆ ಅಂತ ಅಂದುಕೊಂಡಿದ್ದಲ್ಲಿ ಅದು ಬಿಜೆಪಿಯವರ ಭ್ರಮೆ ಎಂದು ಹೇಳಿದರು.

  • ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಡಿಕೆಶಿ ಆಪ್ತರಾದ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಜಾರಿಯಾಗಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದ ಕುರಿತು ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಪ್ರಕರಣವು ಕೇಂದ್ರ ಹಾಗೂ ಡಿಕೆಶಿ ಅವರಿಗೆ ಸಂಬಂಧಿಸಿದ್ದು, ನನ್ನ ವ್ಯಾಪ್ತಿಗೆ ಬರಲ್ಲ. ಅವರು ಸಮರ್ಥರಿದ್ದಾರೆ, ಐಟಿ ದಾಳಿಯನ್ನು ಎದುರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

    ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಗಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಆರ್ ನಗರದ ಚುನಾವಣೆ ಬಗ್ಗೆ ಏನೂ ತಲೆ ಕೆಡಿಸಿಕೊಂಡಿಲ್ಲ. ನಾವು ಅಥವಾ ಕಾಂಗ್ರೆಸ್ ಗೆಲ್ಲಬೇಕಿತ್ತು. ಅಲ್ಲಿ ಈಗ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ 11 ಮಂದಿ ಆಪ್ತರ ಮೇಲೆ ಸಿಬಿಐ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿದೆ. ಆದಾಯ ತೆರಿಗೆ ಪ್ರಕರಣದಲ್ಲಿ ಸಿಬಿಐ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ನಿನ್ನೆ ಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. 11 ಜನರಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಇಬ್ಬರ ಹೆಸರಿಲ್ಲ.

    ಸರ್ಚ್ ವಾರೆಂಟ್ ಹೊರಡಿಸಿದ ವಿಚಾರ ತಿಳಿದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಇಡಿ ಮೂಲಕ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಇಲಾಖೆಗಳನ್ನು ದುರಪಯೋಗ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 11 ಜನರ ಮೇಲೆ ಸಿಬಿಐ ಮತ್ತು ಇಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಬಿಜೆಪಿಯ ಬೆದರಿಕೆ ಮತ್ತು ಆಮಿಷಗಳಿಗೆ ನಾವು ಬಗ್ಗಲ್ಲ. ಈ ಸಂಬಂಧ ಕಾನೂನು ರೀತಿಯಲ್ಲಿ ನಾವು ಹೋರಾಡುತ್ತೇವೆ. ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದನ್ನು ನಾವು ಜನರಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಯಾವ ಪ್ರಕರಣದಡಿಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗಿಲ್ಲ ಎಂದು ಹೇಳಿದ್ದರು.

  • ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ದೆಹಲಿ: ಉನ್ನಾವೋದ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಂಧನಕ್ಕೆ ಒಳಗಾದ ಸಹಾಯಕ ತಿಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.

    ಮುಂದೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಂಗಡಿಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ಈ ಸಂಬಂಧ ಕುಲದೀಪ್ ಸಹಾಯಕನನ್ನು ಸಿಬಿಐ ವಶಕ್ಕೆ ಪಡೆದಿತ್ತು. ತೀವ್ರ ತನಿಖೆ ನಡೆಸಿದ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ತಾನು ಬಾಗಿಲು ಕಾಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಮತ್ತೆ ಜೂ.11 ರಂದು ಶುಭಾಸಿಂಗ್ ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ. 19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಲಕಿ ಜೂ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶಾಸಕ ಕುಲದೀಪ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ. ಅಲ್ಲದೇ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಳಿಕ ಸಲ್ಲಿಸಿದ ಆರೋಪ ಪಟ್ಟಿಯಲ್ಲಿಯೂ ಕುಲದೀಪ್ ಹೆಸರಿರಲಿಲ್ಲ. ಈ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಸಿಬಿಐ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

    ಕುಲದೀಪ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಬಾಲಕಿ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅಲ್ಲದೇ, ಯುವತಿ ಧರಿಸಿದ್ದ ಉಡುಗೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಎಫ್‍ಐಆರ್ ದಾಖಲು ಮಾಡಿದೆ. ಕುಲದೀಪ್ ಹಾಗೂ ಆತನ ಸಹಚರನ ವಿರುದ್ಧ ಒಂದು ಎಫ್‍ಐಆರ್ ದಾಖಲಾಗಿದ್ದರೆ, ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ನಡೆದ ಗಲಾಟೆಯ ಸಂಬಂಧಿಸಿದಂತೆ ಸ್ಥಳೀಯರ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೂರನೇ ಎಫ್‍ಐಆರ್ ದಾಖಲಾಗಿದೆ.

  • ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜುಗೆ ಸಂಕಷ್ಟ

    ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜುಗೆ ಸಂಕಷ್ಟ

    ಮಂಡ್ಯ: ಸಂಸದ ಸಿ ಎಸ್ ಪುಟ್ಟರಾಜು ಅವರಿಗೆ ಮತ್ತೊಂದು ಸಂಕಷ್ಟವೊಂದು ಎದುರಾಗಿದೆ. ಆರ್ ಟಿ ಐ ಕಾರ್ಯಕರ್ತ ರವೀಂದ್ರ ಎಂಬವರು ಬುಧವಾರ ಪುಟ್ಟರಾಜು ಅವರ ವಿರುದ್ಧ ಸಿಬಿಐನಲ್ಲಿ ದೂರು ದಾಖಲಿಸಿದ್ದಾರೆ.

    ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಅಮೃತ ಮಹಲ್ ಪ್ರದೇಶದಲ್ಲಿ ಸಂಸದರ ಪತ್ನಿ ಮಾಲೀಕತ್ವದ ಎಸ್.ಟಿ.ಜೆ ಸ್ಟೋನ್ ಕ್ರಷರ್‍ಗೆ ಕಾನೂನು ಬಾಹಿರವಾಗಿ 10 ಲಕ್ಷ ರೂ ಸಬ್ಸಿಡಿ ಮತ್ತು 1.50 ಕೋಟಿ ರೂ ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮಂಡ್ಯ ಡಿಸಿ ಜಿಯಾವುಲ್ಲಾ ಮತ್ತು ಬ್ಯಾಂಕ್ ಮ್ಯಾನೇಜರ್ ವಿರುದ್ಧ ತನಿಖೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬೇಬಿ ಬೆಟ್ಟದ ಕಾವಲ್ ಪ್ರದೇಶದ ಸರ್ವೆ ನಂಬರ್ 1 ರಲ್ಲಿನ 1,623 ಎಕರೆ ಪ್ರದೇಶದ ಖಾಸಗಿ ಆಸ್ತಿಯಾಗಿದೆ. ಇದರಲ್ಲಿ 1,487 ಎಕರೆ ಜಮೀನು ಬಿ ಖರಾಬು ಎಂದು ದಾಖಲಾಗಿದ್ದರೂ, ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮವಾಗಿ ದಾಖಲೆಗಳನ್ನ ಸೃಷ್ಟಿಸಿಕೊಂಡು ಕಾನೂನು ಬಾಹಿರವಾಗಿ ಸಾಲ ಪಡೆದಿದ್ದಾರೆ ಅಂತಾ ಆರೋಪಿಸಲಾಗಿದೆ.

    ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರರ್ ಜಯಚಂದ್ರನ್, ಆಗಿನ ಮಂಡ್ಯ ಜಿಲ್ಲಾಧಿಕಾರಿ ಜಿಯಾವುಲ್ಲಾ ಹಾಗೂ ಸಂಸದ ಸಿ ಎಸ್ ಪುಟ್ಟರಾಜು ಸೇರಿದಂತೆ ಹಲವರು ಭಾಗಿಯಾಗಿದ್ದು. ಈ ಸಂಬಂಧ ಸಿಬಿಐ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ 18 ಪುಟಗಳ ದಾಖಲೆ ಸಮೇತ ರವಿಂದ್ರ ದೂರು ಸಲ್ಲಿಸಿದ್ದಾರೆ.

  • ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಲಕ್ನೋ: ಮೊಬೈಲ್ ಬಳಕೆ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುವುದಕ್ಕೆ ಪೋಷಕರೇ ಕಾರಣ ಎಂದು ಉತ್ತರಪ್ರದೇಶದ ಬಾಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    15 ವರ್ಷದ ಒಳಗಿನ ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಅಲ್ಲದೇ, ಅವರಿಗೆ ಮುಕ್ತವಾಗಿ ಸಂಚರಿಸಲು ಹಾಗೂ ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ನೀಡಬಾರದು ಎಂದಿದ್ದಾರೆ.

    ಈ ಹಿಂದೆ ಉನ್ನವೋ ಅತ್ಯಾಚಾರ ಸಂತ್ರಸ್ತೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದಾಳೆ ಎಂದು ಸುರೇಂದ್ರ ಸಿಂಗ್ ಹೇಳಿದ್ದರು.”ಈ ಹಿಂದೆ ಆಕೆ ಯುವಕನ ವಿರುದ್ಧ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಳು. ಈಕೆಯ ದೂರಿನ ಪರಿಣಾಮ ಆತ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತಾಗಿತ್ತು” ಎಂದು ಹೇಳಿಕೆ ನೀಡಿದ್ದರು.

    ಕಳೆದ ಏಪ್ರಿಲ್‍ನಲ್ಲಿ ಉನ್ನಾವೋದ ಯುವತಿ ಮೇಲಿನ ಅತ್ಯಾಚಾರ ಆರೋಪದಡಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲಾಗಿದೆ. ಸೆಂಗರ್ ಮತ್ತು ಅತ್ಯಾಚಾರ ಸಂತ್ರಸ್ತೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ತನಿಖೆ ನಂತರ ಸತ್ಯ ಹೊರ ಬರಲಿದೆ. ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಬೇಕು ಎಂದರು.

    ಸೆಂಗರ್ ಮತ್ತು ಆತನ ಸಹಚರರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತೆಯ ಕುಟುಂಬಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಆತ್ಮಹತ್ಯಗೆ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಕುಟುಂಬದವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದಿದ್ದ ಸಂತ್ರಸ್ತೆಯ ತಂದೆ ತೀವ್ರ ಗಾಯದಿಂದಾಗಿ ಠಾಣೆಯಲ್ಲಿಯೇ ಮೃತಪಟ್ಟಿದ್ದರು.

    ತನಿಖೆಯ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಏಪ್ರಿಲ್ 12 ರಂದು ಸಿಬಿಐಗೆ ವಹಿಸಿದೆ.