Tag: cbi

  • ಮೋದಿ ಬೆಂಬಲಿಸುವ ನಾಯಕರಿಗೆ ಸಿಬಿಐ ಭಯವಿಲ್ಲ- ಚಂದ್ರಬಾಬು ನಾಯ್ಡು

    ಮೋದಿ ಬೆಂಬಲಿಸುವ ನಾಯಕರಿಗೆ ಸಿಬಿಐ ಭಯವಿಲ್ಲ- ಚಂದ್ರಬಾಬು ನಾಯ್ಡು

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಬೆಂಬಲಿಸುವ ಪಕ್ಷದ ನಾಯಕರನ್ನು ರಕ್ಷಿಸುತ್ತಾರೆ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

    ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಮಾತನಾಡಿ ಅವರು, ಕೆ.ಚಂದ್ರಶೇಖರ್ ರಾವ್ ನಿವಾಸದ ಮೇಲೆ ದಾಳಿ ಮಾಡಲು ಸಿಬಿಐ ತಂಡವು ಹೈದ್ರಾಬಾದ್‍ಗೆ ಬಂದಿತ್ತು. ಆಗ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಂತೆ ಸಿಬಿಐ ತಂಡವು ವಾಪಾಸ್ ಆಗಿದೆ. ಜೊತೆಗೆ ಕೆ.ಚಂದ್ರಶೇಖರ್ ರಾವ್ ಅವರ ಮೇಲಿರುವ ಇಎಸ್‍ಐ ಆಸ್ಪತ್ರೆಯ ಹಗರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

    ರಾಜಕೀಯ ಪಕ್ಷಗಳನ್ನು ತಮ್ಮ ಮುಂದೆ ಶರಣಾಗುವಂತೆ ಪ್ರಧಾನಿ ಮೋದಿ ಅವರು ಪ್ಲಾನ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ನಿಲ್ಲುವ ರಾಜಕೀಯ ನಾಯಕರ ವಿರುದ್ಧ ಸಿಬಿಐ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಹೀಗಾಗಿ ತಮ್ಮ ಮುಂದೆ ಶರಣಾಗುವ ನಾಯಕರನ್ನು ರಕ್ಷಿಸುತ್ತಾರೆ ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾದಲ್ಲಿ ಕೆ.ಚಂದ್ರಶೇಖರ್ ರಾವ್ ಅವರು 2004ರಿಂದ 2006ರವರೆಗೆ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿದ್ದರು. ಈ ವೇಳೆ ಅವರ ವಿರುದ್ಧ ಇಎಸ್‍ಐ ಆಸ್ಪತ್ರೆಯ ಬಹುಕೋಟಿ ಹಗರಣ ದಾಖಲಾಗಿತ್ತು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ವಜಾ

    ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ವಜಾ

    ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯ ಮಹತ್ವದ ನಿರ್ಧಾರ ಕೈಗೊಂಡಿದೆ.

    ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕಿ. ಸಿಕ್ರಿ., ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇರುವ ಉನ್ನತಾಧಿಕಾರ ಸಮಿತಿ ಗುರುವಾರ ರಾತ್ರಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.

    ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಸಿವಿಸಿ ವರದಿಯ ಆಧಾರದ ಮೇಲೆ ವಜಾ ಮಾಡಲಾಗಿದೆ. 2 ಗಂಟೆಗಳ ಚರ್ಚೆಯಲ್ಲಿ ಅಲೋಕ್ ವಜಾಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕಾರಣಗಳನ್ನು ಕೇಳಿದ್ದಾಗಿಯೂ, ಅವರಿಗೆ ಜಸ್ಟೀಸ್ ಎ.ಕೆ. ಸಿಕ್ರಿ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದೆ.

    ಅಲೋಕ್ ವರ್ಮಾ ಅವರನ್ನು ದೆಹಲಿ ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನ ನಡುವಿನ ವೈಮನಸ್ಸು ಬೀದಿಗೆ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆ ನೀಡಿ ಕಳುಹಿಸಿತ್ತು.

    ಸುಪ್ರೀಂ ಆದೇಶದಿಂದ ಬುಧವಾರ ಮರು ನೇಮಕವಾಗಿದ್ದ ಅಲೋಕ್ ಕುಮಾರ್, ಹಂಗಾಮಿ ಮುಖ್ಯಸ್ಥರಾಗಿದ್ದ ನಾಗೇಶ್ವರ ರಾವ್ ನೇಮಕಾತಿಯನ್ನು ರದ್ದುಗೊಳಿಸಿ, ಆಯಕಟ್ಟಿನ ಸ್ಥಳಕ್ಕೆ ತಮ್ಮ ಆಪ್ತರನ್ನು ನೇಮಿಸಿಕೊಂಡಿದ್ದರು. ಈಗ ಮತ್ತೆ ನಾಗೇಶ್ವರ ರಾವ್ ಹಂಗಾಮಿ ಮುಖ್ಯಸ್ಥರಾಗಿದ್ದಾರೆ. ಇದೇ 31ಕ್ಕೆ ವರ್ಮಾ ಅವರ ಅಧಿಕಾರವಧಿ ಅಂತ್ಯವಾಗಲಿದ್ದು, ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಂಡ ಮೊದಲಿಗರಾಗಿದ್ದಾರೆ. ಇದನ್ನು ಓದಿ : ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?

    ಏನಿದು ಪ್ರಕರಣ?:
    ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವಿನ ಆಂತರಿಕ ಕಲಹ ಉಂಟಾಗಿ, ಇಬ್ಬರ ಜಗಳ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಅವರನ್ನ 2018ರ ಅಕ್ಟೋಬರ್ 23 ರಂದು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು. ಇದನ್ನು ವಿರೋಧಿಸಿ ಅಲೋಕ್ ವರ್ಮಾ ಕಾನೂನು ಹೋರಾಟ ನಡೆಸಿದ್ದರು.

    ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಲೋಕ್ ವರ್ಮಾ ವಿರುದ್ಧದ ಆರೋಪಗಳ ಕುರಿತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳಬೇಕು. ಅಲ್ಲಿಯವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ಹೇರಿತ್ತು. ಈ ತೀರ್ಪಿನಿಂದಾಗಿ ಅಲೋಕ್ ವರ್ಮಾ 77 ದಿನಗಳ ಬಳಿಕ ಮತ್ತೆ ಸಿಬಿಐ ನಿರ್ದೇಶಕರಾಗಿ ನಿನ್ನೆ ಅಧಿಕಾರ ವಹಿಸಿಕೊಂಡು ಕಚೇರಿಗೆ ಮರಳಿದ್ದರು.

    ಅಲೋಕ್ ವರ್ಮಾ ರಜೆಯ ಮೇಲಿದ್ದ ವೇಳೆಯೇ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ ಅವರನ್ನು ನೇಮಿಸಲಾಗಿತ್ತು. ಈ ವೇಳೆ ವರ್ಮಾ ಆಪ್ತರಾದ 10 ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ನಾಗೇಶ್ವರ ರಾವ್ ಸಹಿ ಹಾಕಿದ್ದರು. ಕಾನೂನು ಸಮರದ ಬಳಿಕ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವರ್ಮಾ ಅವರು ಬಹುತೇಕ ವರ್ಗಾವಣೆಗಳನ್ನು ರದ್ದು ಮಾಡಿದ್ದರು. ಸುಪ್ರೀಂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದರು ಆದೇಶಗಳನ್ನು ರದ್ದು ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರಕ್ಕೆ ಮುಖಭಂಗ: ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರಿಕೆ

    ಕೇಂದ್ರಕ್ಕೆ ಮುಖಭಂಗ: ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರಿಕೆ

    ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

    ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ತೀರ್ಪು ಪ್ರಕಟವಾದ ಕೂಡಲೇ ವಿರೋಧ ಪಕ್ಷಗಳು ಆದೇಶವನ್ನು ಸ್ವಾಗತಿಸಿದ್ದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಪ್ರತಿಕ್ರಿಯಿಸಿವೆ.

     

    ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ಪೀಠ ಅರ್ಜಿಗಳನ್ನು ವಿಚಾರಣೆ ನಡೆಸಿತ್ತು. ರಂಜನ್ ಗೊಗೋಯ್ ಗೈರಾಗಿದ್ದ ಹಿನ್ನೆಲೆಯಲ್ಲಿ ನ್ಯಾ. ಸಂಜಯ್ ಕಿಶನ್ ಕೌಲ್ ಆದೇಶವನ್ನು ಓದಿದರು.

    ಕೇಂದ್ರದ ಆದೇಶವನ್ನು ರದ್ದುಗೊಳಿಸಿದ್ದ ಕೋರ್ಟ್ ಅಲೋಕ್ ವರ್ಮಾ ಅವರನ್ನು ಮತ್ತೆ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಆದೇಶಿಸಿದೆ. ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ಕೆಳಗಡೆ ಇಳಿಸುವ ಮುನ್ನ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಲೆಂದೇ ಇರುವ ದೆಹಲಿ ವಿಶೇಷ ಪೊಲೀಸ್ ಕಾಯ್ದೆ(ಡಿಎಸ್‍ಪಿಇ) ಅಡಿ ರೂಪಿತವಾಗಿರುವ ಉನ್ನತ ಸಮಿತಿಯಲ್ಲಿ ಚರ್ಚೆಯಾಗಬೇಕಿತ್ತು. ಯಾವುದೇ ಚರ್ಚೆ ನಡೆಸದೇ ಸರ್ಕಾರ ಹೊರಡಿಸಿದ ಕ್ರಮ ಸರಿಯಲ್ಲ. ಅಲೋಕ್ ವರ್ಮಾ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

    ತನ್ನನ್ನು ಕಡ್ಡಾಯ ರಜೆ ಮೇಲೆ ಕಳುಹಿಸುವ ಸಂಬಂಧ ಕೇಂದ್ರ ಜಾಗೃತ ಆಯೋಗ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗಳು ಕಳೆದ ಅ.23ರಂದು ಹೊರಡಿಸಿದ್ದ ಮೂರು ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿ ಅಲೋಕ್ ವರ್ಮಾ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರಕಾರದ ಕ್ರಮದ ವಿರುದ್ಧ ಕಾಮನ್ ಕಾಸ್ ಎಂಬ ಸರ್ಕಾರೇತರ  ಸಂಸ್ಥೆಯೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಅವರ ಅವಧಿ ಜನವರಿ 31ಕ್ಕೆ ಮುಕ್ತಾಯವಾಗಲಿದೆ.

    ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಕಿತ್ತಾಟ ಬಹಿರಂಗವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಬ್ಬರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ನೇಮಕ ಮಾಡಿತ್ತು.

    ಇಬ್ಬರು ಹಿರಿಯ ಅಧಿಕಾರಿಗಳಾಗಿದ್ದು ಹೀಗೆ ಕಿತ್ತಾಟ ನಡೆಸಿದ ಪರಿಣಾಮ ಮುಜುಗರಕ್ಕೆ ಒಳಗಾದ ಕೇಂದ್ರ ಸರ್ಕಾರ ಇಬ್ಬರನ್ನು ಅಕ್ಟೋಬರ್ 23 ರಂದು ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.

    ಕಿತ್ತಾಟ ಆರಂಭಗೊಂಡಿದ್ದು ಹೇಗೆ?
    1979ರ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ವರ್ಮಾ 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. 2016ರಲ್ಲಿ ಸಿಬಿಐಗೆ ನೇಮಕವಾಗಿದ್ದ ರಾಕೇಶ್ ಆಸ್ಥಾನಾ 2017ರಲ್ಲಿ ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಭಡ್ತಿ ನೀಡಿತು. ಸಿಬಿಐಗೆ ವಿಶೇಷ ನಿರ್ದೇಶಕರನ್ನಾಗಿ ನೇಮಕವಾಗಿದ್ದು ಇದೇ ಮೊದಲು. ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದರು. ಆಸ್ಥಾನಾ ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದ ದಿನದಿಂದಲೂ ಶುರುವಾದ ಈ ಒಳ ಜಗಳ ಈಗ ಇಲ್ಲಿಯವರೆಗೆ ತಲುಪಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ರಾಕೇಶ್ ಆಸ್ಥಾನಾ ಮೇಲಿರುವ ಆರೋಪ ಏನು?
    ಅಕ್ರಮ ಹಣ ವರ್ಗಾವಣೆ ಪ್ರಕರಣ ಎಸಗಿದ ಆರೋಪದ ಅಡಿ ಸ್ಟರ್ಲಿಂಗ್ ಬಯೋಟಿಕ್ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ದಾಳಿ ವೇಳೆ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ರಾಕೇಶ್ ಆಸ್ಥಾನಾ ಹೆಸರಿದೆ. ಈ ಪ್ರಕರಣದಲ್ಲಿ ಆಸ್ಥಾನಾ 3 ಕೋಟಿ ರೂ. ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಿಬಿಐ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದು, ಈ ಎಫ್‍ಐಆರ್ ನಲ್ಲಿ ಆಸ್ಥಾನಾ ಹೆಸರು ಇಲ್ಲ.

    ಕಿತ್ತಾಟ ಜಾಸ್ತಿಯಾಗಿದ್ದು ಹೇಗೆ?
    ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದರು. ಸ್ಟರ್ಲಿಂಗ್ ಬಯೋಟಿಕ್ ಕಂಪನಿಯ ತನಿಖೆ ವೇಳೆ ಮೂಗು ತೂರಿಸದಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ರಾಕೇಶ್ ಆಸ್ಥಾನಾಗೆ ಸೂಚಿಸಿದ್ದರು. ವರ್ಮಾ ಮಾತನ್ನೇ ಪರಿಗಣಿಸದೇ ಆಸ್ಥಾನಾ ಸಿಬಿಐ ಕಚೇರಿಯಲ್ಲಿ ಪೂರ್ಣ ಪ್ರಮಾಣದ ಮುಖ್ಯಸ್ಥರಂತೆ ವರ್ತಿಸಲು ಆರಂಭಿಸಿದ್ದರು. ಸಿಬಿಐನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಕುರಿತು ಸಭೆ ಕರೆಯುವುದು, ಅಧಿಕಾರಗಳ ಜೊತೆ ಚರ್ಚೆ ನಡೆಸಲು ಆರಂಭಿಸಿದ್ದರು. ಅಸ್ಥಾನ ಅಲೋಕ್ ವರ್ಮಾ ಅವರನ್ನ ಟಾರ್ಗೆಟ್ ಮಾಡಲು ಶುರು ಮಾಡಿದ್ದು ಸಿಬಿಐ ಕಚೇರಿಯೋಳಗೆ ಪರಿಸ್ಥಿತಿ ಕೆಟ್ಟು ಈ ಹಂತಕ್ಕೆ ಬಂದು ನಿಲ್ಲಲು ಬಹುದೊಡ್ಡ ಕಾರಣ ಎಂದು ವರದಿಯಾಗಿದೆ.

    ರಾಕೇಶ್ ಆಸ್ಥಾನಾ ಯಾರು?
    ಅಸ್ಥಾನ 1984 ರ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ. ಆರ್‍ಜೆಡೆ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರ ಬಹುಕೋಟಿ ಮೇವು ಹಗರಣ, ಗುಜರಾತ್ ನ ಗೋದ್ರಾ ಹತ್ಯಾಕಾಂಡ, ಹಾಗೂ 2008 ರಲ್ಲಿ ನಡೆದ ಅಹ್ಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಹಗರಣ ಎಂದು ಕರೆಯಲಾಗುವ ಅಗಸ್ತವೆಸ್ಟ್‍ಲ್ಯಾಂಡ್, ಕಲ್ಲಿದ್ದಲು ಹಗರಣ ಹಾಗೂ ಬ್ಯಾಂಕುಗಳಿಗೆ ವಂಚಿಸಿ ವಿದೇಶ ಸೇರಿರುವ ಉದ್ಯಮಿ ವಿಜಯ ಮಲ್ಯ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದಾರೆ. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಅಧಿಕಾರಿಯೂ ಆಗಿದ್ದರು. ಜಾರಿ ನಿರ್ದೇಶನಾಲಯ(ಇಡಿ)ಯಲ್ಲೂ ಆಸ್ಥಾನಾ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು.

    ಅಲೋಕ್ ವರ್ಮಾ ಯಾರು?
    ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೂಡಾ ಪ್ರಧಾನಿ ಆಪ್ತ ವಲಯದ ಅಧಿಕಾರಿ. 2016 ರಲ್ಲಿ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿದ್ದ ಆರ್.ಕೆ ದತ್ತಾ ಅವರನ್ನ ಕೇಂದ್ರ ಗೃಹ ಇಲಾಖೆಗೆ ತುರ್ತು ವರ್ಗಾವಣೆ ಮಾಡಲಾಗಿತ್ತು. ಆಗ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ಅವಧಿ ಬಳಿಕ ದತ್ತಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನಕ್ಕೆ ಬಡ್ತಿ ನೀಡಲು ಪ್ಲಾನ್ ಮಾಡಲಾಗಿತ್ತು ಆದರೆ ಗೃಹ ಇಲಾಖೆಗೆ ದತ್ತಾ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಸಿಬಿಐ ನಿರ್ದೇಶಕ ಹುದ್ದೆಗೆ 2017ರ ಜನವರಿಯಲ್ಲಿ ವರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಅಲೋಕ್ ವರ್ಮಾ ಕೂಡಾ ಪ್ರಭಾವಿ ಅಧಿಕಾರಿಯಾಗಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಮೋದಿ ಆಪ್ತ ಎಂದು ಕರೆಯಲ್ಪಡುವ ಅಜಿತ್ ದೊವೇಲ್ ಅವರ ಆಪ್ತ.

    ಕಿತ್ತಾಟ ಬಯಲಾಗಿದ್ದು ಹೇಗೆ?
    ಸಿಬಿಐ ಕಚೇರಿ ಒಳಗೆ ಆಂತರಿಕವಾಗಿ ನಡೆಯುತ್ತಿದ್ದ ಈ ಜಗಳ ಮೊದಲು ಹೊರ ಬಂದಿದ್ದು ಈ ವರ್ಷದ ಜುಲೈನಲ್ಲಿ. ಕೇಂದ್ರ ವಿಚಕ್ಷಣ ದಳ(ಸಿವಿಸಿ) ಜುಲೈ 12 ರಂದು ಸಿಬಿಐ ನೇಮಕಾತಿ ಸಂಬಂಧಿಸಿದ ಸಭೆಗೆ ಭಾಗವಹಿಸುವಂತೆ ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿತ್ತು. ಈ ವೇಳೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ರಜೆ ಮೇಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಜುಲೈ 19ಕ್ಕೆ ಸಭೆ ನಿಗದಿಪಡಿಸುವಂತೆ ಸಿವಿಸಿಗೆ ಮರು ಪತ್ರ ಬರೆದಿದ್ದರು. ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ಥಾನಾ ಅವರ ಹೆಸರು ಭ್ರಷ್ಟಾಚಾರ ಪ್ರಕರಣದಲ್ಲಿ ಕೇಳಿ ಬಂದ ಹಿನ್ನೆಲೆ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರವಿಲ್ಲ ಎಂದು ವರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದರಿಂದ ಆಕ್ರೋಶಗೊಂಡ ಆಸ್ಥಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಅಲೋಕ್ ವರ್ಮಾ ಸಹ ಭಾಗಿಯಾಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿ ಕ್ಯಾಬಿನೆಟ್ ಕಾರ್ಯದರ್ಶಿ ಪತ್ರ ಬರೆದಿದ್ದರು ಈ ಮೂಲಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳ ಬಯಲಿಗೆ ಬಂದಿತ್ತು.

    ಅಲೋಕ್ ವರ್ಮಾ ಮೇಲಿರುವ ಆರೋಪ ಏನು?
    ಕ್ಯಾಬಿನೆಟ್ ಕಾರ್ಯದರ್ಶಿ ಬರೆದ ಪತ್ರದಲ್ಲಿ, ದೇಶದ ಬಹುದೊಡ್ಡ ಮಾಂಸ ರಫ್ತುದಾರ, ಹವಾಲಾ ದಂಗೆಕೋರ, ಉದ್ಯಮಿ ಮೋಯಿನ್ ಖುರೇಷಿ ಪ್ರಕರಣ ತನಿಖೆ ನಡೆಸಲು ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಸಾನಾ ಅವರಿಂದ ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಅಸ್ತಾನಾ ಆರೋಪಿಸಿದ್ದರು. ಖರೇಷಿ ಪ್ರಕರಣದಲ್ಲಿ ಸಾನಾ ಭಾಗಿಯಾಗಿದ್ದು ಪ್ರಕರಣದಿಂದ ಕೈ ಬಿಡಲು ವರ್ಮಾ ಲಂಚ ಪಡೆದಿದ್ದಾರೆ. ಈ ಪ್ರಕರಣದ ಆರೋಪಿಯಾದ ಸತೀಶ್ ಸಾನಾ ಬಂಧಿಸಲು ಹೋದಾಗ ಪ್ರಕ್ರಿಯೆ ನಡೆಸದಂತೆ ಅಲೋಕ್ ವರ್ಮಾ ಸೂಚಿಸಿದ್ದರು ಎಂದು ಅಸ್ಥಾನಾ ಕ್ಯಾಬಿನೆಟ್ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.

    ಪ್ರಕರಣ ದಿಢೀರ್ ತಿರುವು ಪಡೆದಿದ್ದು ಹೇಗೆ?
    ಬಂಧಿಸಿ ವಿಚಾರಣೆ ವೇಳೆ ಸತೀಶ್ ಸಾನಾ ನಾನು ಆಸ್ಥಾನಗೆ ಪ್ರಕರಣದಿಂದ ಕೈ ಬಿಡುವಂತೆ 3 ಕೋಟಿ ರೂ. ಹಣದ ಡೀಲ್ ನಡೆದಿದೆ ಎಂದು ಬಾಯಿಬಿಟ್ಟಿದ್ದ. ಈ ಪ್ರಕರಣ ಸಂಬಂಧ ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ 1.75 ಕೋಟಿ ಲಂಚದ ಹಣವನ್ನು ಸಂಗ್ರಹಿಸಲು ದೆಹಲಿಗೆ ಬಂದಿರುವುದಾಗಿ ಮನೋಜ್ ಪ್ರಸಾದ್ ತಿಳಿಸಿದ್ದ. ಅಷ್ಟೇ ಅಲ್ಲದೇ ಕಳೆದ ವರ್ಷ ಅಸ್ಥಾನಾ ಲಂಡನ್ ಗೆ ಬಂದಿದ್ದಾಗ ಮನೋಜ್ ಜೊತೆ ನನ್ನ ನಿವಾಸದಲ್ಲಿ ತಂಗಿದ್ದರು ಎಂಸು ಸತೀಶ್ ಸಾನಾ ಹೇಳಿದ್ದ ಎನ್ನಲಾಗಿದೆ. ಈ ಹೇಳಿಕೆಯನ್ನು ಆಧಾರಿಸಿ ಸಿಬಿಐ ರಾಕೇಶ್ ಅಸ್ಥಾನಾ ವಿರುದ್ಧ ಎಫ್‍ಐಆರ್ ದಾಖಲಿಸುತ್ತದೆ. ಪ್ರಕರಣದಲ್ಲಿ ಅಸ್ಥಾನಾಗೆ ಸಹಾಯ ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿ ಡಿಎಸ್ಪಿ ದೇವೇಂದ್ರ ಕುಮಾರ್ ಅವರ ದೆಹಲಿಯ ಸಿಬಿಐ ಪ್ರಧಾನ ಕಚೇರಿ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿ ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಬಿಐ ವಶಪಡಿಸಿದ್ದ ಕಬ್ಬಿಣದ ಅದಿರನ್ನೇ ಕದ್ದ ಚೋರ – ಏಳು ಲಾರಿಗಳಲ್ಲಿ ಲೂಟಿ

    ಸಿಬಿಐ ವಶಪಡಿಸಿದ್ದ ಕಬ್ಬಿಣದ ಅದಿರನ್ನೇ ಕದ್ದ ಚೋರ – ಏಳು ಲಾರಿಗಳಲ್ಲಿ ಲೂಟಿ

    ಬಳ್ಳಾರಿ: ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದ ಅದಿರನ್ನ ಅಕ್ರಮವಾಗಿ ಕಳ್ಳಸಾಗಾಣೆ ಮಾಡುತ್ತಿದ್ದ ಪ್ರಕರಣವೊಂದು ಬಳ್ಳಾರಿಯಲ್ಲಿ ಬಯಲಿದೆ ಬಂದಿದೆ.

    ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದ ಅದಿರನ್ನ ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿ ಸೀಜ್ ಮಾಡಿದ್ದರು. ಆದ್ರೆ ಹೊಸಪೇಟೆ ಮೂಲದ ಲುಂಗಿನಾಯ್ಕ್ ಹಾಗೂ ಕೆಲ ಖದೀಮರು ಸಿಬಿಐ ಜಪ್ತಿ ಮಾಡಿದ್ದ ಅದಿರನ್ನ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದರು.

    ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ದಾಳಿ ನಡೆಸಿದ ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರ ದಾಳಿ ನಡೆಸಿ ಏಳು ಲಾರಿಗಳಲ್ಲಿ ಕಳ್ಳ ಸಾಗಾಣೆ ಮಾಡುತ್ತಿದ್ದ ಅದಿರು ಹಾಗೂ ಲಾರಿಗಳನ್ನ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ. ಅದಿರನ್ನು ಸತತವಾಗಿ ಕದ್ದು ಮಾರಾಟ ಮಾಡುತ್ತಿದ್ದ ಖದೀಮರು, ಆಂಧ್ರ ಹಾಗೂ ತೆಲಂಗಾಣ ಪಾಸಿಂಗ್ ನಂಬರ್ ಹೊಂದಿರುವ ಲಾರಿಗಳಲ್ಲಿ ಅದಿರನ್ನ ಸಾಗಾಟ ಮಾಡುತ್ತಿದ್ದರು. ಹೀಗಾಗಿ ಏಳು ಲಾರಿಗಳ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

    ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

    -ರಾತ್ರೋರಾತ್ರಿ ದುಬೈನಿಂದ ದೆಹಲಿಗೆ ಕರೆತಂದ ಸಿಬಿಐ ಅಧಿಕಾರಿಗಳು

    ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆದುತಂದಿದ್ದು, ವಿಚಾರಣೆ ಆರಂಭಿಸಿದೆ.

    ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕಲ್‍ ಜೇಮ್ಸ್ ನನ್ನು ಯುಎಇ ಗಡಿಪಾರು ಮಾಡಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಸಿಬಿಐ ಮುಖ್ಯಕಚೇರಿಗೆ ಕರೆತರಲಾಗಿದೆ.

    ಗಡೀಪಾರು ಮಾಡಿದ್ದು ಯಾಕೆ?
    ಬಿಟ್ರನ್ ಬಿಟ್ಟು ದುಬೈನಲ್ಲಿ ಮೈಕಲ್ ನೆಲೆಸಿದ್ದ. ಈತನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಎಇಗೆ ಮನವಿ ಸಲ್ಲಿಸಿತ್ತು. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನು ವಿರೋಧಿಸಿ ಮೈಕಲ್ ದುಬೈ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಟ್ ಆತನ ಕೋರಿಕೆಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಮೈಕಲ್ ನನ್ನು ಗಡಿಪಾರು ಮಾಡಿತ್ತು.

    ಏನಿದು ಪ್ರಕರಣ?
    ವಿವಿಐಪಿ ವ್ಯಕ್ತಿಗಳ ಪ್ರಯಾಣಕ್ಕೆ ಇಟಲಿಯ ಫಿನ್‍ಮೆಕ್ಯಾನಿಕಾ ಕಂಪೆನಿಯ ಅಂಗಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಜೊತೆ 2010ರಲ್ಲಿ 12 ಹೆಲಿಕಾಪ್ಟರ್ ಖರೀದಿಸಲು ಯುಪಿಎ ಸರ್ಕಾರ 3,600 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2013ರಲ್ಲಿ ಈ ಲಂಚದ ಆರೋಪ ಕೇಳಿ ಬಂದ ಕಾರಣ ಸರ್ಕಾರ 2014ರಲ್ಲಿ ಒಪ್ಪಂದವನ್ನು ರದ್ದು ಮಾಡಿತ್ತು. ಹಗರಣ ಬಯಲಿಗೆ ಬಂದ ಬಳಿಕ 1818 ಕೋಟಿ ರೂ. ಭಾರತ ಮರು ವಶಪಡಿಸಿಕೊಂಡಿದೆ. ಈ ಮೂಲಕ ಒಟ್ಟು 2,068 ಕೋಟಿ ರೂ. ವಾಪಸ್ ಪಡೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಒಪ್ಪಂದ ಕುದುರಿಸುವ ಉದ್ದೇಶದಿಂದ ಆಗಸ್ಟಾ ವೆಸ್ಟ್‍ಲ್ಯಾಂಡ್‍ನಿಂದ 225 ಕೋಟಿ ರೂ. ಹಣವನ್ನು ಮೈಕಲ್ ಪಡೆದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಆ ಹಣವನ್ನು ಮೈಕಲ್ ಭಾರತದ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಉದ್ದೇಶದಿಂದ ಪಡೆದಿದ್ದ ಎನ್ನಲಾಗಿದೆ.

    ಮೈಕಲ್ ಡೈರಿಯಲ್ಲಿ ಗಣ್ಯರ ಹೆಸರು:
    ಈ ಖರೀದಿಯಲ್ಲಿ ಅವ್ಯವಹಾರ ವಾಸನೆ ಹೊಡೆದು ಭಾರೀ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಯುಪಿಎ ಸರ್ಕಾರ 2014ರ ಜನವರಿಯಲ್ಲಿ ಒಪ್ಪಂದವನ್ನು ರದ್ದು ಮಾಡಿಕೊಂಡಿತ್ತು. ಇತ್ತ ಮೈಕಲ್ ಡೈರಿಯಲ್ಲಿ ಕಾಂಗ್ರೆಸ್ಸಿನ ಪ್ರಭಾವಿ ನಾಯಕರ ಹೆಸರು ಸಿಕ್ಕಿದೆ. ಅಷ್ಟೇ ಅಲ್ಲದೆ ಹಲವರಿಗೆ ಹಣ ನೀಡಿದ್ದರ ವಿವರವೂ ಅದರಲ್ಲಿದ್ದು, ಯಾರಿಗೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಪ್ರಕರಣದ ಬೆನ್ನು ಬಿದ್ದಿದ್ದ ಸಿಬಿಐ ಹಾಗೂ ಜಾರಿನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಕ್ರಿಶ್ಚಿಯನ್ ಮೈಕಲ್‍ಗಾಗಿ ಬಲೆ ಬೀಸಿದ್ದರು. ದುಬೈನಲ್ಲಿ ಮೈಕಲ್ ಇದ್ದಾನೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯುಎಇ ಅಬ್ದಿಲ್ಲಾ ಬಿನ್ ಜಾಯೆದ್ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಇದು ಯಶಸ್ವಿಯಾಗಿದ್ದು, ಬುಧವಾರ ರಾತ್ರಿಯೇ ದುಬೈನಿಂದ ಆರೋಪಿಯನ್ನು ಕರೆತರಲಾಗಿದೆ.

    ಎಸ್‍ಪಿ ತ್ಯಾಗಿ ಬಂಧನವಾಗಿತ್ತು:
    ಈ ಖರೀದಿ ಅಕ್ರಮದಲ್ಲಿ ಎಸ್‍ಪಿ ತ್ಯಾಗಿ ಶಾಮೀಲಾಗಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಇಟಲಿಯ ಮಿಲಾನ್ ಕೋರ್ಟ್ 2016ರ ಏಪ್ರಿಲ್ 8ರಂದು ತೀರ್ಪು ನೀಡಿತ್ತು. ಈ ತೀರ್ಪು ಬಂದ ಬಳಿಕ ನಿವೃತ್ತ ವಾಯುಸೇನಾ ಮುಖ್ಯಸ್ಥ ಎಸ್‍ಪಿ ತ್ಯಾಗಿ ಅವರನ್ನು ಸಿಬಿಐ ಬಂಧಿಸಿತ್ತು. ಖರೀದಿ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡು ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತ್ಯಾಗಿ ಅವರನ್ನು ಬಂಧಿಸಿತ್ತು. ತ್ಯಾಗಿ ಜೊತೆ ದೆಹಲಿ ಮೂಲದ ವಕೀಲ ಗೌತಮ್ ಖಟಿಯನ್, ಎಸ್‍ಪಿ ತ್ಯಾಗಿ ಅವರ ಸಂಬಂಧಿ ಸಂಜೀವ್ ತ್ಯಾಗಿ ಅವರನ್ನು ಬಂಧಿಸಲಾಗಿತ್ತು.

    ತ್ಯಾಗಿ ಮೇಲಿದ್ದ ಆರೋಪ ಏನು?
    ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಸರ್ಕಾರ ಕರೆದ ಹರಾಜು ಪ್ರಕ್ರಿಯೆಯಲ್ಲಿ ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು 6 ಸಾವಿರ ಮೀಟರ್ ನಿಂದ 4,500 ಮೀಟರ್ ಗೆ(15,000 ಅಡಿಗಳಿಗೆ) ವಾಯುಸೇನೆ ಇಳಿಸಿತ್ತು. ಆಗಸ್ಟಾ ಕಂಪನಿ ನೆರವಾಗುವ ಉದ್ದೇಶದಿಂದಲೇ ಎಸ್‍ಪಿ ತ್ಯಾಗಿ ಅವರು ಎತ್ತರದ ಮಿತಿಯನ್ನು ಇಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಜೊತೆ ಎಸ್‍ಪಿ ತ್ಯಾಗಿ ಮಾತುಕತೆ ನಡೆಸಿ ಕಿಕ್‍ಬ್ಯಾಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಸಿಬಿಐ ಪೊಲೀಸರಿಂದ ಎಫ್‍ಐಆರ್ ದಾಖಲು

    ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಸಿಬಿಐ ಪೊಲೀಸರಿಂದ ಎಫ್‍ಐಆರ್ ದಾಖಲು

    ಬೆಂಗಳೂರು: ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅಜಿತಾಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚೆನ್ನೈನ ಸಿಬಿಐ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಟೆಕ್ಕಿ ಅಜಿತಾಬ್ ಪ್ರಕರಣ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸತತ 11 ತಿಂಗಳ ಕಾಲ ಅಜಿತಾಬ್ ಗಾಗಿ ಹುಡಕಾಟ ನಡೆಸಿದ್ದರು. ಅಲ್ಲದೇ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನೂ ಸಹ ರಚನೆ ಮಾಡಲಾಗಿತ್ತು. ಆದರೂ ಸಹ ಅಜಿತಾಬ್ ಬಗ್ಗೆ ಸಣ್ಣ ಸುಳಿವು ಬೆಂಗಳೂರು ಪೊಲೀಸರಿಗೆ ಸಿಕ್ಕಿರಲಿಲ್ಲ.

    ಇದರಿಂದ ನೊಂದ ಅಜಿತಾಬ್ ಪೋಷಕರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರಿಗೂ ಪತ್ರ ಬರೆದಿದ್ದರು. ಹೀಗಾಗಿ ಕೋರ್ಟ್ ಆದೇಶದನ್ವಯ ಚೆನ್ನೈ ಸಿಬಿಐ ಬ್ರಾಂಚ್ ನಲ್ಲಿ ಅಜಿತಾಭ್ ನಾಪತ್ತೆ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಸಂಬಂಧ ಓಎಲ್ ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಓಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18 ರಂದು ಅವರ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಅಜಿತಾಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

    ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಿದ್ದರು. ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸಿದ್ದರು.

    ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ?

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ?

    ಮೈಸೂರು: ನಿಯಮ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿದ ಪ್ರಕರಣದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ನಡೆಯುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಸ್ಪಷ್ಟ ಅಭಿಪ್ರಾಯ ಕೇಳಿ ಮೈಸೂರು ಪೊಲೀಸ್ ಆಯುಕ್ತರಿಗೆ ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಗಂಗರಾಜು ಎಂಬವರು ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಜುಲೈ 23 ರಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಗಂಗರಾಜು ಡಿಐಜಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟ ಅಭಿಪ್ರಾಯ ಕೇಳಿ ಡಿಐಜಿ ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

    ಏನಿದು ಪ್ರಕರಣ?
    ಮೈಸೂರಿನ ವಿಜಯನಗರದಲ್ಲಿರುವ ಸಿದ್ದರಾಮಯ್ಯ ನಿವಾಸದ ಜಾಗದ ಕುರಿತಾಗಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಗಂಗರಾಜು ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೈಸೂರು ನ್ಯಾಯಾಲಯದ ಮೊರೆ ಹೋಗಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಜಾಗವನ್ನು ಸಿದ್ದರಾಮಯ್ಯ ಪ್ರಭಾವ ಬಳಸಿ ಡಿನೋಟಿಫೈ ಮಾಡಿಸಿದ್ದಾರೆ. ಅದೇ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೇ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆ ಎಂದು ಗಂಗಾರಾಜು ಆರೋಪ ಮಾಡಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಗಂಗರಾಜು, 30 ಗುಂಟೆ ಜಾಗ ಅದರ ಸುತ್ತಾ 400-500 ಎಕರೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳುತ್ತಾರೆ. ಅದರಲ್ಲಿ ಲೇಔಟ್ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಈ 30 ಗುಂಟೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳದೇ ಪರೋಕ್ಷವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

    ದೂರು ನೀಡಿದ ಹಿನ್ನೆಲೆಯಲ್ಲಿ ಮೈಸೂರಿನ ಸಿವಿಲ್ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಲು ಆದೇಶ ನೀಡಿತ್ತು. ಇದರ ಅನ್ವಯ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಸೇರಿ ನಾಲ್ಕು ಜನರ ವಿರುದ್ಧ 9 ಐಪಿಸಿ ಸೆಕ್ಷನ್ ಗಳಡಿ [ಸೆಕ್ಷನ್ 120ಬಿ, 197, 166, 167, 169, 200, 417, 409, 420 ಹಾಗೂ ಸೆಕ್ಷನ್ 468] ಪ್ರಕರಣ ದಾಖಲಿಸಲಾಗಿತ್ತು. ಸಿದ್ದರಾಮಯ್ಯ ಜೊತೆ ಮುಡಾದ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ, ಡಿ ಧೃವಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಸಿ. ಬಸವೇಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಗಂಗರಾಜು ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಭ್ರಷ್ಟಾಚಾರವನ್ನು ಮರೆಮಾಚಲು ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಬಿಐಗೆ ನಿರ್ಬಂಧ: ಅರುಣ್ ಜೇಟ್ಲಿ

    ಭ್ರಷ್ಟಾಚಾರವನ್ನು ಮರೆಮಾಚಲು ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಬಿಐಗೆ ನಿರ್ಬಂಧ: ಅರುಣ್ ಜೇಟ್ಲಿ

    ಭೋಪಾಲ್: ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಿಬಿಐ ತನಿಖೆಗೆ ನಿರ್ಬಂಧ ಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಭ್ರಷ್ಟಾಚಾರ ಹಾಗೂ ಅಕ್ರಮಗಳು ಹೊರ ಬೀಳುತ್ತದೆ ಎನ್ನುವ ಕಾರಣಕ್ಕೆ ಸಿಬಿಐ ಅನ್ನು ಹೊರಗಿಟ್ಟಿದ್ದೀರಾ? ಸಿಬಿಐ ಅನ್ನು ಹೊರಗಿಟ್ಟರೆ ನಿಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಮುಂದೆ ಏನಾಗುತ್ತದೋ ಎಂಬ ಭಯಕ್ಕೆ ಸಿಬಿಐ ಸಂಸ್ಥೆಯನ್ನು ತಮ್ಮ ರಾಜ್ಯಗಳಿಂದ ನಿರ್ಬಂಧಿಸಿದ್ದಾರೆಂದು ಕಿಡಿಕಾರಿದರು.

    ರಾಜ್ಯಗಳಲ್ಲಿ ನಡೆಯುವ ಹಲವು ಗಂಭೀರ ಪ್ರಕರಣಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲೇಬೇಕಾಗುತ್ತದೆ. ಅದನ್ನು ತಡೆಯಲು ಯಾವುದೇ ರಾಜ್ಯಕ್ಕೂ ಸಾಧ್ಯವಿಲ್ಲ. ನಮ್ಮದು ಸಂಯುಕ್ತ ಗಣರಾಜ್ಯ ರಾಷ್ಟ್ರವಾಗಿದೆ. ಒಂದು ವೇಳೆ ಇದರ ಮೇಲೆ ನಿಯಂತ್ರಣ ಸಾಧಿಸಲು ಮುಂದಾದರೆ, ಗಣರಾಜ್ಯದ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ಸಿಬಿಐ ಸಂಸ್ಥೆಗೆ ನಿಷೇಧ ಹೇರಲು ಸಾಧ್ಯವಿಲ್ಲ ಹೇಳಿದರು.

    ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನವರ ಹೆಸರು ಕೇಳಿಬಂದರೆ, ಪಶ್ಚಿಮ ಬಂಗಾಳ ಸರ್ಕಾರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಂಧ್ರ ಪ್ರದೇಶವು ಯಾವುದೋ ನಿರ್ದಿಷ್ಟ ವಿಚಾರಕ್ಕೆ ಸಿಬಿಐಗೆ ನಿರ್ಬಂಧಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೊ ಎಂಬ ಭಯದಿಂದ ಹೀಗೆ ಮಾಡಿರಬಹುದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಏನಿದು ಸಿಬಿಐ ನಿರ್ಬಂಧ?
    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೇಂದ್ರ ತನಿಖಾ ದಳ(ಸಿಬಿಐ)ವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯಗಳಿಂದ ಸಿಬಿಐಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಅಲ್ಲದೇ ಕೇಂದ್ರದ ಯಾವುದೇ ತನಿಖಾ ತಂಡ ರಾಜ್ಯದಲ್ಲಿ ವಿಚಾರಣೆ ನಡೆಸಬೇಕೆಂದರೆ, ಮೊದಲು ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕೆಂಬ ಷರತ್ತನ್ನು ವಿಧಿಸಿವೆ. ಇದನ್ನೂ ಓದಿ: ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಹೈದರಾಬಾದ್: ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂತೆಗೆದುಕೊಂಡಿದ್ದು, ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದಾರೆ.

    ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಇನ್ನು ಮುಂದೆ ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿದೆ. ಇದರ ಪರಿಣಾಮ ಆಂಧ್ರಪ್ರದೇಶದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಅವರು ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ), ಅದಾಯ ತೆರಿಗೆ ಇಲಾಖೆ (ಐಟಿ) ತನಿಖಾಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು, ತಮ್ಮ ರಾಜಕೀಯ ವೈರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಸಿಬಿಐ ಅಧೀನದಲ್ಲಿರುವ ಎಲ್ಲಾ ಪ್ರಕರಣಗಳ ತನಿಖೆಯನನ್ನು ನಡೆಸಲು ಸಿಬಿಐ ಬದಲಾಗಿ ಎಸಿಬಿ (ಭ್ರಷ್ಟಚಾರ ನಿಗ್ರಹ ದಳ)ಗೆ ಜವಾಬ್ದಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸುವ ದಾಳಿಗಳಿಗೆ ರಾಜ್ಯ ಸರ್ಕಾರವೂ ಯಾವುದೇ ಪೊಲೀಸ್ ಭದ್ರತೆಯನ್ನು ಒದಗಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಫೇಲ್ ವಿಮಾನದ ಬೆಲೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

    ರಫೇಲ್ ವಿಮಾನದ ಬೆಲೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: 10 ದಿನದ ಒಳಗಡೆ ಮುಚ್ಚಿದ ಲಕೋಟೆಯಲ್ಲಿ ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

    59 ಸಾವಿರ ಕೋಟಿ ರೂ. ನೀಡಿ ಫ್ರಾನ್ಸ್ ನಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ವಕೀಲರಾದ ಮನೋಹರ್ ಲಾಲ್ ಶರ್ಮಾ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪಿಐಎಲ್ ಜೊತೆಗೆ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಪಿಐಎಲ್ ಸಲ್ಲಿಸಿದ್ದಾರೆ.

    ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ಎಸ್.ಕೆ. ಕೌಲ್ ಮತ್ತು ನ್ಯಾ.ಕೆ.ಎಂ ಜೋಸೆಫ್ ಅವರನ್ನೊಳಗೊಂಡ ಪೀಠ, ವಿಮಾನಗಳ ಬೆಲೆ ಕುರಿತು ಸಂಪೂರ್ಣ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ 10 ದಿನದ ಒಳಗಡೆ ಸಲ್ಲಿಸುವಂತೆ ಸೂಚನೆ ನೀಡಿದೆ.

    ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ವಿಮಾನ ಖರೀದಿಯ ಬೆಲೆ ಗೌಪ್ಯತೆಯನ್ನು ಕಾಪಾಡಲಾಗಿದ್ದು, ಸಾರ್ವಜನಿಕವಾಗಿ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದರು. ಈ ಸಮಯದಲ್ಲಿ ಕೋರ್ಟ್ ರಫೇಲ್ ಯುದ್ಧ ವಿಮಾನದ ತಾಂತ್ರಿಕ ಗೌಪ್ಯ ವಿಚಾರಗಳು ನಮಗೆ ಬೇಕಾಗಿಲ್ಲ ಆದರೆ ಒಪ್ಪಂದ ಮತ್ತು ಬೆಲೆಯ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವಂತಿಲ್ಲ, ಹತ್ತು ದಿನಗಳ ಒಳಗೆ ಅರ್ಜಿದಾರರು ಕೇಳುವ ಮಾಹಿತಿಯನ್ನು ನೀಡಬೇಕು ಎಂದು ಆದೇಶಿಸಿದೆ.

    ಪ್ರಶಾಂತ್ ಭೂಷಣ್ ಅವರು, ವ್ಯವಹಾರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಸಿಬಿಐ ತನಿಖೆಗೆ ಆದೇಶಿಸಿ ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ವಿಚಾರಣೆ ಮುಗಿಯುವ ತನಕ ನೀವು ಕಾಯಬೇಕು, ಈಗಲೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿತು.

    ಅ.10 ರಂದು ವಿಚಾರಣೆ ನಡೆಸಿದ್ದ ಪೀಠ, ಅರ್ಜಿಗಳಲ್ಲಿ ಒಪ್ಪಂದ ಕುರಿತು ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳನ್ನು ಈಗ ಪರಿಗಣಿಸುವುದಿಲ್ಲ. ಆದರೆ ಈ ಖರೀದಿ ಪ್ರಕ್ರಿಯೆ ನಡೆಸಿದ ಪ್ರಕ್ರಿಯೆ, ತಾಂತ್ರಿಕ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚಿಸಿತ್ತು. ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಅ.27ರಂದು ತಿಳಿಸಿದ ಬಳಿಕ ಸುಪ್ರೀಂ ಈಗ ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚಿಸಿದೆ.

    ರಫೇಲ್ ವಿಮಾನಗಳ ಖರೀದಿಯಲ್ಲಿ ಭಾರೀ ಅಕ್ರಮಗಳು ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಒಪ್ಪಂದ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಆಗ್ರಹಿಸಿತ್ತು. ಆದರೆ ಕೇಂದ್ರ ಖರೀದಿ ಸಂಬಂಧದ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸದಂತೆ ಎರಡು ಸರ್ಕಾರಗಳ ನಡುವೆ ಒಪ್ಪಂದ ನಡೆದಿದೆ. ಹೀಗಾಗಿ ಸಾರ್ವಜನಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಆರೋಪಗಳಿಗೆ ತಿರುಗೇಟು ನೀಡಿತ್ತು. ಈಗ ಸುಪ್ರೀಂ ಕೋರ್ಟ್ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv