Tag: cbi

  • ಕಾನೂನಿನ ಯಾವ ನಿಬಂಧನೆ ಅಡಿ ಚಿದಂಬರಂಗೆ ನೋಟಿಸ್ – ಸಿಬಿಐಗೆ ವಕೀಲರ ಪ್ರಶ್ನೆ

    ಕಾನೂನಿನ ಯಾವ ನಿಬಂಧನೆ ಅಡಿ ಚಿದಂಬರಂಗೆ ನೋಟಿಸ್ – ಸಿಬಿಐಗೆ ವಕೀಲರ ಪ್ರಶ್ನೆ

    ನವದೆಹಲಿ: ಕಾನೂನಿನ ಯಾವ ನಿಬಂಧನೆ ಅಡಿಯಲ್ಲಿ ನನ್ನ ಕಕ್ಷಿದಾರರಿಗೆ ನೋಟಿಸ್ ನೀಡಿದ್ದೀರಿ ಎಂದು ಚಿದಂಬರಂ ಪರ ವಕೀಲರು ಸಿಬಿಐ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

    ಐಎನ್‍ಎಕ್ಸ್ ಮೀಡಿಯಾ ಮತ್ತು ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕೃತಗೊಳಿಸಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಬಂಧನಕ್ಕಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅವರು ಮನೆಯಲ್ಲಿ ಇಲ್ಲದ ಕಾರಣ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಿ ಎಂದು ಸಿಬಿಐ ಅಧಿಕಾರಿಗಳು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.

    ನೋಟಿಸಿನಲ್ಲಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದನ್ನು ಪ್ರಶ್ನೆ ಮಾಡಿರುವ ಚಿದಂಬರಂ ಪರ ವಕೀಲ ಅರ್ಶದೀಪ್ ಸಿಂಗ್ ಖುರಾನ, ನನ್ನ ಕಕ್ಷಿದಾರರು 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕೆಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದೀರಿ. 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಕಾನೂನಿನ ಯಾವ ನಿಬಂಧನೆ ಅಡಿ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಚಿದಂಬರಂ ಅವರು ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಬೆಳಗ್ಗೆ 10.30ಕ್ಕೆ ತುರ್ತು ಅರ್ಜಿ ನಡೆಯಲಿದೆ. ಹೀಗಾಗಿ ಈ ಅರ್ಜಿ ವಿಚಾರಣೆ ನಡೆಯುವರೆಗೂ ನನ್ನ ಕಕ್ಷಿದಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ವಕೀಲರು ಮನವಿ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜಾಮೀನು ವಜಾಗೊಂಡ ಬೆನ್ನಲ್ಲೇ ಚಿದಂಬರಂ ನಾಪತ್ತೆಯಾಗಿದ್ದು ಫೋನ್ ನಂಬರ್ ಸ್ವಿಚ್ಛ್ ಆಫ್ ಆಗಿದೆ.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

  • ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿ ಅಧಿಕೃತ ಆದೇಶ ಹೊರಡಿಸಿದೆ.

    ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ವಹಿಸಬೇಕು. 2018ರ ಆಗಸ್ಟ್ 1ರಿಂದ ಇಲ್ಲಿಯವರೆಗಿನ ಫೋನ್ ಟ್ಯಾಪಿಂಗ್ ವಿವರಗಳನ್ನು ಸಲ್ಲಿಸಬೇಕು. ಆಡಳಿತ ಮತ್ತು ಪ್ರತಿ ಪಕ್ಷಗಳ ನಾಯಕರು, ಅವರ ಸಹವರ್ತಿಗಳು, ಸರ್ಕಾರಿ ನೌಕರರ ಕರೆ ವಿವರಗಳ ಸಲ್ಲಿಸಬೇಕು ಎಂದು ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

    ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈಗ ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿದೆ.

    ರಾಜಕಾರಣಿಗಳು, ರಾಜಕಾರಣಿಗಳ ಸಂಬಂಧಿಕರು, ಸರ್ಕಾರಿ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ದೃಢವಾಗಿದೆ. ಫೋನ್ ಟ್ಯಾಪಿಂಗ್ ಸಂಬಂಧಿಸಿದಂತೆ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲು ಸಿದ್ಧವೆಂದು ಸೈಬರ್ ಕ್ರೈಂ ರಾಜ್ಯ ಸರ್ಕಾರಕ್ಕೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ- ಯೋಗೇಶ್ವರ್

    ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ- ಯೋಗೇಶ್ವರ್

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣದ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದು, ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ, ಕೋಟಿ ಕೋಟಿ ರೂ. ಹಣ ಕೊಟ್ಟು ಇಂತಹದ್ದೊಂದು ಯಂತ್ರವನ್ನು ಡಿಕೆಶಿ ತಂದಿದ್ದಾರೆ. ಎರಡು ವರ್ಷಗಳ ಹಿಂದೆಯೇ ಅವರು ನನ್ನ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

    ನನ್ನ ಫೋನು ಎರಡು ವರ್ಷಗಳಿಂದ ಕದ್ದಾಲಿಕೆಯಾಗುತ್ತಿದೆ. ಈ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಟಾರ್ಗೆಟ್ ಮಾಡಿಕೊಂಡು ಫೋನ್ ಕದ್ದಾಲಿಕೆ ಮಾಡಿದ್ದರು. ಇದು ನನಗೂ ಸಹ ತಿಳಿದಿತ್ತು, ಅಲ್ಲದೆ, ಈಗಿನ ತಂತ್ರಜ್ಞಾನ ಯುಗದಲ್ಲಿ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತು ನಾವೇ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಇದೀಗ ಸಿಬಿಐ ತನಿಖೆ ನಡೆಸಲಾಗುತ್ತಿದೆ, ನಮ್ಮನ್ನು ವಿಚಾರಣೆಗೆ ಕರೆದರೆ ನಾವೂ ಸಹ ಈ ಕುರಿತು ತಿಳಿಸುತ್ತೇವೆ. ಫೋನ್ ಕದ್ದಾಲಿಕೆ ಮಾಡುವುದು ನಮ್ಮ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತೆ. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಇಂತಹದ್ದೊಂದು ಡಿವೈಸ್‍ನ್ನು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಕದ್ದಾಲಿಕೆ ಮಾಡುತ್ತಾರೆ ಎಂಬ ಆರೋಪವೂ ಇದೆ. ಈ ಕುರಿತು ಸಹ ತನಿಖೆಯಾಗಬೇಕು ಎಂದು ತಿಳಿಸಿದ್ದಾರೆ.

    ಕೋಟ್ಯಂತರ ರೂ. ನೀಡಿ ಅಂತಹದ್ದೊಂದು ಡಿವೈಸ್ ತಂದು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಅವರು ಯಾರ ಫೋನು ಬೇಕಾದರೂ ಕದ್ದಾಲಿಸುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವಂತೆ ನಾನು ಹೇಳಿಲ್ಲ- ಸಿದ್ದರಾಮಯ್ಯ

    ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವಂತೆ ನಾನು ಹೇಳಿಲ್ಲ- ಸಿದ್ದರಾಮಯ್ಯ

    ಬಾಗಲಕೋಟೆ: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾನು ಹೇಳಿಲ್ಲ. ತನಿಖೆಯಾಗಬೇಕೆಂದು ಮಾತ್ರ ಹೇಳಿದ್ದೆ ಆದರೆ, ಇಂತಹದ್ದೇ ಸಂಸ್ಥೆಗೆ ನೀಡಬೇಕೆಂದು ಹೇಳಿರಲಿಲ್ಲ. ಯಡಿಯೂರಪ್ಪನವರು ಯಾವ ಕಾರಣಕ್ಕೆ ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

    ಜಿಲ್ಲೆಯ ಬಾದಾಮಿ ತಾಲೂಕಿನ ಬೀರನೂರು ಗ್ರಾಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಸಲಹೆ ಮೇರೆಗೆ ಫೋನ್ ಟ್ಯಾಪಿಂಗ್ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಿದ್ದೇ ಆದಲ್ಲಿ, ಇದೀಗ ನಾನು ಒಂದು ಸಲಹೆ ನೀಡುತ್ತೇನೆ. ಇಡೀ ಆಪರೇಶನ್ ಕಮಲದ ಎಪಿಸೋಡ್ ಸಿಬಿಐ ತನಿಖೆಗೆ ವಹಿಸಲಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪ ತಮ್ಮ ಮಗನನ್ನೇ ಬಿಟ್ಟಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಸಿದ್ದರಾಮಯ್ಯನವರು, ಈ ಕುರಿತು ಅವರನ್ನೇ ಕೇಳಿ ಎಂದು ಉತ್ತರಿಸಲು ನಿರಾಕರಿಸಿದರು.

    ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ. ಮೋದಿಯವರಿಗೆ ಕಣ್ಣು ಬಾಯಿ ಇಲ್ಲ. ಪ್ರವಾಹ ಪರಿಹಾರ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ, ಈ ಹಿಂದೆ 2009ರಲ್ಲಿ ನೆರೆ ಬಂದಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಯಡಿಯೂರಪ್ಪ ಸಿಎಂ ಇದ್ರು. ಕೇಂದ್ರದಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದರು. ಪ್ರವಾಹವಾದ ಎರಡೇ ದಿನಕ್ಕೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 1,609 ಕೋಟಿ ರೂ. ಬಿಡುಗಡೆಗೊಳಿಸಿದ್ದರು ಎಂದು ತಿಳಿಸಿದರು.

    ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮೋದಿಗೆ ಕಣ್ಣು, ಬಾಯಿ ಇಲ್ಲಾ. ಕಣ್ಣು ಕಾಣಿಸಲ್ಲ ಅನಿಸುತ್ತದೆ. ಪ್ರವಾಹ ಪರಿಸ್ಥಿತಿಯನ್ನು ಬಂದು ನೋಡಬೇಕಾಗಿತ್ತು ಆದರೆ, ನೋಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಪರಿಹಾರ ಕಾರ್ಯಗಳಿಗೆ ಮೊದಲು ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಂತರ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಕೇಂದ್ರದ ತಂಡ ಸಮೀಕ್ಷೆ ನಡೆಸಿ ಉಳಿದ ಹಣ ನೀಡಬೇಕೆಂದು ಒತ್ತಾಯಿಸಿದರು. ಪರಿಹಾರ ನಿಧಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮುಂದೆ ಬಾಯ್ಬಿಡುತ್ತಿಲ್ಲಾ. ಕೇಂದ್ರ ಸರ್ಕಾರ ರಾಜ್ಯದಿಂದ 25 ಜನ ಸಂಸದರು ಹಾಗೂ 105 ಜನರ ಮಾತು ಕೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ವಿರೋಧ ಪಕ್ಷದವರನ್ನು ಹೆದರಿಸುವ ವಾತಾವರಣ ಸೃಷ್ಟಿಯಾಗಿದೆ- ಅನಿತಾ ಕುಮಾರಸ್ವಾಮಿ

    ವಿರೋಧ ಪಕ್ಷದವರನ್ನು ಹೆದರಿಸುವ ವಾತಾವರಣ ಸೃಷ್ಟಿಯಾಗಿದೆ- ಅನಿತಾ ಕುಮಾರಸ್ವಾಮಿ

    ರಾಮನಗರ: ಬಿಜೆಪಿಯವರಿಂದ ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ರಾಮನಗರ ಶಾಸಕಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

    ರಾಮನಗರದ ವಿವಿಧೆಡೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

    ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಹೆಸರನ್ನು ತಳಕು ಹಾಕುತ್ತಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದೀಗ ಸಿಬಿಐಗೆ ತನಿಖೆ ವಹಿಸಿರುವುದರಿಂದ ಪಾರದರ್ಶಕವಾಗಿ ತನಿಖೆ ನಡೆಯಲಿ ಎಂದು ತಿಳಿಸಿದರು.

    ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದಕ್ಕೆಲ್ಲ ಅವರು ಹೆದರುವವರೂ ಅಲ್ಲ, ಹೆದರುವ ಅಗತ್ಯವೂ ಇಲ್ಲ. ಹೋರಾಟದ ಮೂಲಕವೇ ಅವರು ರಾಜಕಾರಣಕ್ಕೆ ಬಂದಿರುವುದು. ಬಿಜೆಪಿಯವರು ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಕುಮಾರಸ್ವಾಮಿಯವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿ ಪ್ರಯತ್ನ ಮಾಡುತ್ತಿದ್ದು, ಅವರ ಕೆಲಸ ಎಂದಿಗೂ ಸಫಲವಾಗುವುದಿಲ್ಲ. ನೆರೆ ಪ್ರವಾಹವನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನ ತೊಂದರೆಯಲ್ಲಿದ್ದು, 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಿಎಂ ಹೇಳುತ್ತಿಲ್ಲ. ಪ್ರಧಾನಿ ಮೋದಿಯವರೇ ಪರಿಹಾರದ ಕುರಿತು ಹೇಳಬಹುದಿತ್ತು. ಕೇಂದ್ರ ಸರ್ಕಾರ ನೆರೆ ಪರಿಹಾರದ ಘೋಷಣೆ ಕುರಿತು ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಬಗ್ಗೆ ಬೇಜವಬ್ದಾರಿತನ ತೋರುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

  • ಎಚ್‍ಡಿಕೆ ಒಬ್ಬ ಲಜ್ಜೆಗೆಟ್ಟ ಮಾಜಿ ಸಿಎಂ, ನನ್ನ ಫೋನ್ ಟ್ಯಾಪ್ ಆಗಿದೆ – ಕೆ.ಎನ್.ರಾಜಣ್ಣ

    ಎಚ್‍ಡಿಕೆ ಒಬ್ಬ ಲಜ್ಜೆಗೆಟ್ಟ ಮಾಜಿ ಸಿಎಂ, ನನ್ನ ಫೋನ್ ಟ್ಯಾಪ್ ಆಗಿದೆ – ಕೆ.ಎನ್.ರಾಜಣ್ಣ

    ತುಮಕೂರು: ನನ್ನದು ಮತ್ತು ನನ್ನ ಮಗ ರಾಜೇಂದ್ರನ ಫೋನ್ ಕೂಡ ಕದ್ದಾಲಿಕೆ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

    ಇಂದು ನಗದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ನಮ್ಮ ಕುಟುಂಬದ ಫೋನ್ ಕೂಡ ಟ್ಯಾಪಿಂಗ್ ಆಗಿದೆ. ಟ್ಯಾಪಿಂಗ್ ವಿಚಾರ ನನಗೆ ಮೊದಲೇ ಗೊತ್ತಿತ್ತು. ಆದರೆ ಸೂಕ್ತ ದಾಖಲೆ ಇಲ್ಲದಿರುವ ಕಾರಣ ನಾನು ದೂರು ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ.

    ಈ ಪ್ರಕರಣವನ್ನು ಸಿಬಿಐಗೆ ನೀಡಿರುವುದು ಸ್ವಾಗತಾರ್ಹ ನಡೆ. ಟೆಲಿಫೋನ್ ಕದ್ದಾಲಿಕೆ ಅಂತ್ಯ ಆಗಬೇಕಾದರೆ ಸಿಬಿಐ ತನಿಖೆ ಸೂಕ್ತವಾದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಟೆಲಿಫೋನ್ ಕದ್ದಾಲಿಕೆಯಿಂದ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ. ಕುಮಾರಸ್ವಾಮಿ ಒಬ್ಬ ಲಜ್ಜೆಗೆಟ್ಟ ಮಾಜಿ ಮುಖ್ಯಮಂತ್ರಿ. ಅಂಥವರನ್ನು ಈ ದೇಶದಲ್ಲಿ ಮುಖ್ಯಮಂತ್ರಿಯಾಗಿ ಕಂಡಿದ್ದು ದುರ್ದೈವ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಆ ಮಟ್ಟದಲ್ಲಿ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

  • ಯುಪಿಎ ಸರ್ಕಾರವಿದ್ದರೆ ಬಿಎಸ್‍ವೈ ಹೀಗೆ ಮೌನವಾಗಿರುತ್ತಿದ್ರಾ – ಖರ್ಗೆ ಪ್ರಶ್ನೆ

    ಯುಪಿಎ ಸರ್ಕಾರವಿದ್ದರೆ ಬಿಎಸ್‍ವೈ ಹೀಗೆ ಮೌನವಾಗಿರುತ್ತಿದ್ರಾ – ಖರ್ಗೆ ಪ್ರಶ್ನೆ

    ಬೆಂಗಳೂರು: ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದರೆ ಬಿಎಸ್‍ವೈ ಹೀಗೆ ಮೌನವಾಗಿರುತ್ತಿದ್ರಾ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

    ಪ್ರವಾಹಕ್ಕೆ ಪರಿಹಾರ ಕೊಡದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಅವರು, ಮೊದಲು ಮಧ್ಯಂತರವಾಗಿ ಪರಿಹಾರ ಕೊಡಬೇಕು. ಅದು ಬಿಟ್ಟು ಟೀಮ್ ಕಳುಹಿಸುತ್ತೇನೆ. ಅಧ್ಯಯನ ಮಾಡಬೇಕು ಎಂದು ಹೇಳೋದು ಸರಿಯಲ್ಲ. ಒಂದು ವೇಳೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದರೆ ಬಿಎಸ್‍ವೈ ಹೀಗೆ ಮೌನವಾಗಿರುತ್ತಿದ್ರಾ? ನಾನು ಈ ಸಂದರ್ಭದಲ್ಲಿ ರಾಜಕೀಯ ಮಾಡಲಾರೆ. ಇದು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕಾದ ಸಮಯ. ಆದರೆ ಕೇಂದ್ರದ ಮುಂದೆ ಇವರು ಕೇಳಬೇಕು. ಮೋದಿ ಸರ್ಕಾರಕ್ಕೂ ಇದೆಲ್ಲ ಅರ್ಥವಾಗಬೇಕು ಎಂದು ಹೇಳಿದರು.

    ಮೈತ್ರಿ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ಆಗಿದ್ಯೋ ಈ ಹಿಂದಿನ ಸರ್ಕಾರದಲ್ಲಿ ಆಗಿದ್ಯೋ ನನಗೆ ಸಂಬಂಧವಿಲ್ಲ. ಆದರೆ ಈ ಪ್ರಕರಣದ ಜೊತೆಗೆ ಅಪರೇಷನ್ ಕಮಲದ ವಿಚಾರವು ಹೊರಗೆ ಬರಬೇಕು ಎಂದು ಅವರು ಆಗ್ರಹಿಸಿದರು.

    ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಪ್ರಕರಣವನ್ನು ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದಾರೆ. ಆದರೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಫೋನ್ ಟ್ಯಾಪಿಂಗ್ ಜೊತೆಗೆ ಅಪರೇಷನ್ ಸರ್ಕಾರದ ಹೆಸರಿನಲ್ಲಿ ಯಾರು ಅಧಿಕಾರವನ್ನು ದೋಚಲು ಯತ್ನಿಸಿದರೋ ಅದು ಕೂಡ ಹೊರಗೆ ಬರಬೇಕು ಎಂದು ಹೇಳಿದರು.

    ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಈ ಕಾರಣಕ್ಕಾಗಿ ಸಿಎಂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಾರೆ. ಆದರೆ ಈ ವಿಚಾರವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಬಾರದು. ಈವರೆಗೆ ರಾಜ್ಯದಲ್ಲಿ ಏನೇನು ಘಟನೆ ಆಗಿದ್ಯೋ ಎಲ್ಲವೂ ಹೊರಗೆ ಬರಲಿ. ಸಿದ್ದರಾಮಯ್ಯ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ನಾನೇನು ಹೇಳಲಾರೆ. ಅವರವರ ಊಹೆಗೆ ಬಿಟ್ಟಿದ್ದು ಎಂದು ತಿಳಿಸಿದರು.

  • ಅಸ್ತ್ರಗಳನ್ನೆಲ್ಲಾ ನಿಶಸ್ತ್ರ ಮಾಡ್ತೀನಿ ನೋಡ್ತಿರಿ- ಕುಮಾರಸ್ವಾಮಿ ಗುಡುಗು

    ಅಸ್ತ್ರಗಳನ್ನೆಲ್ಲಾ ನಿಶಸ್ತ್ರ ಮಾಡ್ತೀನಿ ನೋಡ್ತಿರಿ- ಕುಮಾರಸ್ವಾಮಿ ಗುಡುಗು

    -ವರ್ಗಾವಣೆ ದಂಧೆಗೆ ಸಿಎಂ ಪುತ್ರನನ್ನೇ ಬಿಟ್ಟಿದ್ದಾರೆ

    ಉಡುಪಿ: ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಬರುತ್ತಿರುವ ಸರಣಿ ಸುದ್ದಿಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ವಿಚಲಿತರಾಗಿದ್ದು, ಕೆಲವು ಮಾಧ್ಯಮಗಳು ಕುಮಾರಸ್ವಾಮಿಗೆ ಗಂಡಾಂತರ ಕಾದಿದೆ, ಯಡಿಯೂರಪ್ಪ ಜೈಲಿಗೆ ಹೋದ ಪ್ರಸಂಗಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಎಲ್ಲರಿಗೂ ಸತ್ಯದರ್ಶನ ಮಾಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊಡ್ಡ ಅಸ್ತ್ರ ಸಿಕ್ಕಿದೆ ಅಂತೆಲ್ಲಾ ಹೇಳುತ್ತಿದ್ದಾರೆ. ಅಸ್ತ್ರಗಳೆಲ್ಲಾ ನಿಶಸ್ತ್ರ ಆಗುತ್ತೆ ನೋಡುತ್ತಿರಿ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ರೀತಿಯ ತನಿಖೆಗೆ ಮುಕ್ತವಾಗಿದ್ದೇನೆ. ವೈಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು ಎಂದರು.

    ಮಾತಿನ ನಡುವೆ ಸಿಎಂಗೆ ಕುಟುಕಿದ ಎಚ್‍ಡಿಕೆ ನಾನ್ಯಾಕೆ ಭಯ ಪಡಬೇಕು. ನಾನೇನೂ ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ. ಸಿದ್ದರಾಮಯ್ಯ ಸಲಹೆ ಪಡೆದು ಸಿಬಿಐಗೆ ವಹಿಸಿದ್ದಕ್ಕೆ ಯಡಿಯೂರಪ್ಪನವರಿಗೆ ಕೃತಜ್ಞತೆ ತಿಳಿಸುತ್ತೇನೆ. ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ಕುರಿತು ಸಹ ತನಿಖೆ ಆಗಲಿ ಎಂದರು.

    ಹಿಂದಿನ ಹದಿನೈದು ವರ್ಷಗಳ ಯಡಿಯೂರಪ್ಪ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಮತ್ತು ನನ್ನ ಅವಧಿಯ ಎಲ್ಲಾ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಲಿ. ಕೇವಲ ಸಿಬಿಐ ಯಾಕೆ? ಟ್ರಂಪ್, ಪುಟೀನ್ ಗೆ ಹೇಳಿ ತನಿಖೆ ಮಾಡಿಸಿ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಯಲಹಂಕ ತಹಶೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು? ಹೇಳಿ. ನಮಗೆ ವರ್ಗಾವಣೆ ಲೂಟಿ ಅಂತೀರಿ, ನೀವೇನು ಮಾಡುತ್ತಿದ್ದೀರಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪನವರು ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಂತ್ರಸ್ತರ ವಿಚಾರದಲ್ಲಿ ಸರ್ಕಾರದ ನಿಲುವೇನು?
    ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಯಾವ ರೀತಿಯ ನೆರವು ನೀಡುತ್ತೆ ಸ್ಪಷ್ಟಪಡಿಸಲಿ. ಜನರಲ್ಲಿ ಮೊದಲು ವಿಶ್ವಾಸ ಮೂಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಬಿಜೆಪಿಯ ಕೇಂದ್ರ ನಾಯಕರು ಪ್ರವಾಸ ಮಾಡಿ ಹೋದರು. ಇಲ್ಲಿಯವರೆಗೆ ಏನೂ ನೆರವು ಕೊಟ್ಟಿಲ್ಲ. ಬಿಜೆಪಿ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ರಾಜ್ಯ ಸಂಕಷ್ಟದಲ್ಲಿರುವಾಗ ಸರ್ಕಾರದ ಕುರಿತು ಟೀಕೆ ಸರಿಯಲ್ಲ ಅಂತ ಸುಮ್ಮನಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಕೆಲಸ ಮಾಡಬೇಕಾಗಿದೆ ಎಂದರು.

    ರಾಜ್ಯದಲ್ಲಿ ಕಳೆದ 25 ದಿನದಿಂದ ಸಚಿವ ಸಂಪುಟವೇ ಇಲ್ಲ. ಕೊನೆಗೂ ಬಿಜೆಪಿ ಹೈಕಮಾಂಡ್ ವಿಸ್ತರಣೆಗೆ ಅವಕಾಶ ಕೊಟ್ಟಿದೆ. ಮಳೆ ಅನಾಹುತಕ್ಕೆ ರಾಜ್ಯದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ರಾಜ್ಯ ಹಲವಾರು ಸವಾಲು ಎದುರಿಸುತ್ತಿದೆ. ಮೈತ್ರಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದು ಪಾಪದ ಸರ್ಕಾರ ಅಂತ ಜನರಲ್ಲಿ ಭಾವನೆ ಮೂಡಿಸಿದರು. ಒಂದು ವರ್ಗದ ಮಾಧ್ಯಮಗಳು ಸರ್ಕಾರ ಅಸ್ಥಿರಗೊಳಿಸಲು ಪಣ ತೊಟ್ಟವು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದು ಯಾವುದೇ ಸ್ಪಷ್ಟತೆ ಇಲ್ಲದ ಸರ್ಕಾರ ಎಂದು ಕುಮಾರಸ್ವಾಮಿ ಟೀಕಿಸಿದರು.

  • ಶಾ ಎರಡನೇ ಆದೇಶ-ಘಟಾನುಘಟಿಗಳು ಲಾಕ್, ಬಿಎಸ್‍ವೈ ರಾಕ್!

    ಶಾ ಎರಡನೇ ಆದೇಶ-ಘಟಾನುಘಟಿಗಳು ಲಾಕ್, ಬಿಎಸ್‍ವೈ ರಾಕ್!

    -ಐಎಂಎ ಪ್ರಕರಣ ಸಿಬಿಐಗೆ?

    ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐಗೆ ವರ್ಗಾಯಿಸಿದ್ದಾರೆ. ಇದೀಗ ಅಮಿತ್ ಶಾ ಎರಡನೇ ಸಂದೇಶವೊಂದನ್ನು ರವಾನಿಸಿದ್ದು, ಘಟಾನುಘಟಿ ನಾಯಕರುಗಳಿಗೆಲ್ಲ ನಡುಕು ಶುರುವಾಗಿದೆ ಎನ್ನಲಾಗುತ್ತಿದೆ.

    ಏನದು ಆದೇಶ?
    ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಗೆ ವಹಿಸಿದ ಮೇಲೆ ಇದೀಗ ರಾಜ್ಯದಲ್ಲಿ ಸದ್ದು ಮಾಡಿದ್ದ ಐಎಂಎ ಬಹುಕೋಟೆ ಹಗರಣವನ್ನು ಸಿಬಿಐಗೆ ವರ್ಗಾಯಿಸಲು ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಐಎಂಎ ಬಹುಕೋಟೆ ಹಗರಣದಲ್ಲಿ ಈಗಾಗಲೇ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೆಸರುಗಳು ಕೇಳಿ ಬಂದಿವೆ. ಇತ್ತ ಅಧಿಕಾರಿಗಳು ತನ್ನಿಂದ ಅಪಾರ ಪ್ರಮಾಣದ ಹಣ ಪಡೆದಿದ್ದಾರೆ ಎಂದು ವಂಚಕ ಮನ್ಸೂರ್ ಖಾನ್ ಆರೋಪಿಸಿದ್ದಾನೆ.

    ಈ ಹಿನ್ನೆಲೆಯಲ್ಲಿ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ರಾಜಕೀಯ ವಿರೋಧಿಗಳನ್ನು ಸುಲಭವಾಗಿ ಕಟ್ಟಿ ಹಾಕಬಹದು ಎಂದು ಅಮಿತ್ ಶಾ ಪ್ಲಾನ್ ಮಾಡಿಕೊಂಡಿದ್ದಾರಂತೆ. ಇತ್ತ ಯಡಿಯೂರಪ್ಪ ಈ ಸಂಬಂಧ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಮತ್ತು ಆಪ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಯಾರಿಗೆಲ್ಲ ಸಂಕಷ್ಟ?
    ಐಎಂಎ ಬಹುಕೋಟಿ ಹಗರಣದಲ್ಲಿ ಆರಕ್ಕೂ ಅಧಿಕ ರಾಜಕೀಯ ನಾಯಕರು, ಐಪಿಎಸ್, ಐಎಎಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವರುಗಳಾದ ಜಮೀರ್ ಅಹ್ಮದ್, ರೋಷನ್ ಬೇಗ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಅಜಯ್ ಹಿಲೋರಿ-ಐಪಿಎಸ್ ಅಧಿಕಾರಿ, ರಮೇಶ್‍ಕುಮಾರ್-ಎಸಿಪಿ, ರಮೇಶ್-ಇನ್ಸ್ ಪೆಕ್ಟರ್, ವಿಜಯ್‍ಶಂಕರ್-ಐಎಎಸ್ ಅಧಿಕಾರಿ, ನಾಗರಾಜ್-ಸಹಾಯಕ ಆಯುಕ್ತ, ಕುಮಾರ್-ಬಿಡಿಎ ಅಧಿಕಾರಿ, ಇಸ್ತಿಯಾಕ್- ಶಿವಾಜಿನಗರ ಕಾರ್ಪೋರೇಟರ್ ಗಂಡ, ಮುಜಾಹೀದ್- ಜಮೀರ್, ಬೇಗ್ ಶಿಷ್ಯ.

  • ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ – ಹೊರಟ್ಟಿ

    ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ – ಹೊರಟ್ಟಿ

    ಹುಬ್ಬಳ್ಳಿ: ಫೋನ್ ಕದ್ದಾಲಿಕೆ ವಿಚಾರವನ್ನು ಸಿಬಿಐಗೆ ಒಪ್ಪಿಸಿದ್ದನ್ನು ಸ್ವಾಗತಿಸುತ್ತೇನೆ. ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರವಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡದೇ ಪ್ರಮಾಣಿಕವಾಗಿ ತನಖೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಅಧಿಕಾರವಿದೆ ಎಂಬ ಉದ್ದೇಶದಿಂದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ನಡೆಸಬಾರದು. ಒಂದು ವೇಳೆ ಏಕಪಕ್ಷೀಯ ತನಿಖೆ ನಡೆದಲ್ಲಿ ಸಿಬಿಐಗೆ ಕೊಡಬಾರದು. ರಾಜ್ಯದಲ್ಲಿ ಹಲವಾರು ತನಿಖಾ ತಂಡಗಳಿವೆ ಅವುಗಳಿಂದ ತನಿಖೆ ಮಾಡಿಸಬೇಕು. ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ಒಪ್ಪಿಸಿದೆ ಅದು ತನಿಖೆ ಪೂರ್ಣಗೊಳಿಸಿ ಫಲಿತಾಂಶ ಹೇಳುವವರೆಗೂ ಕಾದು ನೋಡೋಣ ಎಂದರು.

    ಬಿಜೆಪಿಯದ್ದು ನೀಡಲಿ
    ಫೋನ್ ಕದ್ದಾಲಿಕೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಅಷ್ಟೇ ಅಲ್ಲ ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಅಗಿದೆ. ಅವುಗಳನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲದೆ, ಈ ಪ್ರಕರಣಗಳಾದಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಆರ್.ಅಶೋಕ್ ಸುಮ್ಮನೆ ಕುಳಿತಿದ್ದರು. ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರಗೆ ಬರುತ್ತದೆ. ಇತ್ತಿಚೆಗೆ ರಾಜಕಾರಣ ಹೊಲಸಾಗಿದೆ. ಒಮ್ಮೆ ಯಾದರೂ ಸತ್ಯ ಹೊರಗೆ ಬರಬೇಕು ಎಂದರು.

    ಸಿಎಂಗೆ ಅಧಿಕಾರವಿದೆ
    ದೇಶಕ್ಕೆ ಮತ್ತು ರಾಜ್ಯಕ್ಕೆ ಗಂಡಾಂತರ ಎದುರಾದಾಗ ಫೋನ್ ಟ್ಯಾಪಿಂಗ್ ಮಾಡಲು ಸಿಎಂಗೆ ಅಧಿಕಾರವಿದೆ. ಈ ರೀತಿ ಮಾಡಿದ್ರೆ ಸಿಬಿಐ ಜೈಲಿಗೆ ಹಾಕುತ್ತಾ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಪ್ರತಿಧ್ವನಿಸುತ್ತಿರುವ ಫೋನ್ ಟ್ಯಾಪ್ ಪ್ರಕರಣದ ತನಿಖೆ ತೋಳ ಬಂತು ತೋಳ ಆಗಬಾರದು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ದೇಶದ ಹಲವಾರು ವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಅವರು ಈ ಬಗ್ಗೆ ಗಮನಹರಿಸಿ ಇದನ್ನು ಸ್ವಚ್ಛ ಮಾಡಲಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಗೂಬೆ ಕುರಿಸುವುದು ಸರಿಯಲ್ಲ ಎಂದು ಟೀಕಿಸಿದರು.