Tag: cbi

  • ಐಎಂಎ ಬಹುಕೋಟಿ ವಂಚನೆ ಪ್ರಕರಣ- ತನಿಖೆ ಪ್ರಾರಂಭಿಸಿದ ಸಿಬಿಐ

    ಐಎಂಎ ಬಹುಕೋಟಿ ವಂಚನೆ ಪ್ರಕರಣ- ತನಿಖೆ ಪ್ರಾರಂಭಿಸಿದ ಸಿಬಿಐ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕೃತವಾಗಿ ತನಿಖೆ ಆರಂಭಿಸಿದೆ. ಎಸ್‍ಐಟಿ ಮುಖ್ಯಸ್ಥ ರವಿಕಾಂತೇಗೌಡ ಮತ್ತು ತನಿಖಾಧಿಕಾರಿ ಗಿರೀಶ್ ಭೇಟಿ ಮಾಡಿ ಸಿಬಿಐ ಅಧಿಕಾರಿಗಳು ತನಿಖೆಯ ಫೈಲ್ ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಹಿಂದೆ ಎಸ್‍ಐಟಿಯ ಎಫ್‍ಐಆರ್‍ನಲ್ಲಿ ಮನ್ಸೂರ್ ಖಾನ್ ಸೇರಿದಂತೆ ಎಲ್ಲ ನಿರ್ದೇಶಕರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಎಲ್ಲರನ್ನು ಆರೋಪಿಗಳನ್ನಾಗಿಸಿ, ಐಎಂಎಗೆ ಸೇರಿದ ಮೂವತ್ತು ಸಂಸ್ಥೆಗಳ ಮೇಲೆ ಸಿಬಿಐ ಇದೀಗ ಮತ್ತೊಂದು ಹೊಸ ಎಫ್‍ಐಆರ್ ದಾಖಲಿಸಿದೆ.

    ಅಲ್ಲದೆ ವಂಚನೆಗೊಳಗಾದ 40 ಸಾವಿರ ಜನರು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರುಗಳನ್ನು ಸಹ ಸಿಬಿಐ ಪಡೆದಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಪ್ರಾರಂಭಿಸಿದೆ. ಮನ್ಸೂರ್ ಖಾನ್‍ನಿಂದ ಅಕ್ರಮವಾಗಿ ಹಣ ಪಡೆದು ಸದ್ಯ ಜೈಲಿನಲ್ಲಿರುವ ಎಲ್ಲ ಆರೋಪಿಗಳನ್ನು ಸಿಬಿಐ ಹಂತ ಹಂತವಾಗಿ ವಿಚಾರಣೆ ನಡೆಸಲಿದೆ.

    ಬೆಂಗಳೂರು ಮತ್ತು ಹೈದ್ರಾಬಾದ್‍ನ ಸಿಬಿಐ ಅಧಿಕಾರಗಳ ತಂಡ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದ ಮಾಹಿತಿಯನ್ನು ಸಾಕ್ಷಿ ಸಮೇತ ಸಿಬಿಐ ಅಧಿಕಾರಿಗಳಿಗೆ ಹಂತ ಹಂತವಾಗಿ ಎಸ್‍ಐಟಿ ಅಧಿಕಾರಿಗಳು ನೀಡಲಿದ್ದಾರೆ. ತನಿಖೆಯನ್ನು ಸಿಬಿಐಗೆ ವಹಿಸಿರುವುದರಿಂದ ಮನ್ಸೂರ್ ಖಾನ್ ಸೇರಿದಂತೆ ಇತರ ವಂಚಕರಿಗೆ ನಡುಕ ಆರಂಭವಾಗಿದೆ.

  • ಚಿದಂಬರಂಗೆ ಕೊಂಚ ರಿಲೀಫ್ ಕೊಟ್ಟ ಸುಪ್ರೀಂ

    ಚಿದಂಬರಂಗೆ ಕೊಂಚ ರಿಲೀಫ್ ಕೊಟ್ಟ ಸುಪ್ರೀಂ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಕೊಂಚ ರಿಲೀಫ್ ಸಿಕ್ಕಿದೆ.

    ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಕುರಿತ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸದಂತೆ ಮತ್ತು ಸಿಬಿಐ ಪ್ರಧಾನ ಕಚೇರಿಯಲ್ಲೇ ಗುರುವಾರದವರೆಗೆ ಇರಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಚಿದಂಬರಂ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

    ಮಧ್ಯಂತರ ಜಾಮೀನಿಗಾಗಿ ಚಿದಂಬರಂ ಕೋರಿಕೆಯನ್ನು ವಿಚಾರಣಾ ನ್ಯಾಯಾಲಯ ಸೋಮವಾರವೇ ಪರಿಗಣಿಸದಿದ್ದಲ್ಲಿ ಸಿಬಿಐ ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ನ್ಯಾಯಾಧೀಶರಾದ ಆರ್.ಭಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ತಮ್ಮ ವಿರುದ್ಧ ಜಾರಿಗೊಳಿಸಲಾದ ಜಾಮೀನುರಹಿತ ವಾರಂಟ್ ಪ್ರಶ್ನಿಸಿ ಚಿದಂಬರಂ ಅವರು ಸಲ್ಲಿಸಿದ ಅರ್ಜಿಗೆ ಉತ್ತರಿಸುವಂತೆ ಸಿಬಿಐಗೆ ಸೂಚನೆ ನೀಡಿದೆ.

    ಚಿದಂಬರಂ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತಮ್ಮ ಕಕ್ಷಿದಾರರನ್ನು ಕಳೆದ 12 ದಿನಗಳಿಂದ ಸಿಬಿಐ ತನ್ನ ಕಸ್ಟಡಿಯಲ್ಲಿಟ್ಟುಕೊಂಡಿದೆ. ಅಷ್ಟೇ ಅವರನ್ನು ತಿಹಾರ್ ಜೈಲಿಗೆ ಯಾಕೆ ಕಳುಹಿಸಬೇಕು? ಸದ್ಯದ ಮಟ್ಟಿಗೆ ಅವರಿಗೆ ಗೃಹಬಂಧನ ನೀಡಿದರೆ ಸಾಕು ಎಂದು ಮನವಿ ಸಲ್ಲಿಸಿದರು. ಇದನ್ನು ಪುರಷ್ಕರಿಸಿದ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ಜೈಲಿಗೆ ಕಳುಹಿಸದಂತೆ ಸೂಚನೆ ನೀಡಿದೆ.

  • ನಾವು ದುರ್ಬಳಕೆ ಮಾಡಿಲ್ಲ, ತಲೆಕೆಟ್ಟ ಬಿಜೆಪಿಯವರು ಈ ಮಾತು ಹೇಳ್ತಾರೆ – ಉಗ್ರಪ್ಪ

    ನಾವು ದುರ್ಬಳಕೆ ಮಾಡಿಲ್ಲ, ತಲೆಕೆಟ್ಟ ಬಿಜೆಪಿಯವರು ಈ ಮಾತು ಹೇಳ್ತಾರೆ – ಉಗ್ರಪ್ಪ

    ಬಳ್ಳಾರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಅಪರಾಧ ಎಸಗಿಲ್ಲ. ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ಕಾನೂನು ಹೋರಾಟದಲ್ಲಿ ಪಕ್ಷ ಡಿಕೆಶಿ ಜೊತೆಗಿದೆ. ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಎಐಸಿಸಿ ಕೂಡ ಡಿಕೆಶಿ ಬೆಂಬಲಕ್ಕಿರೋದಾಗಿ ಘೋಷಿಸಿದೆ ಎಂದು ಈ ವೇಳೆ ತಿಳಿಸಿದರು.

    ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಂಡಿಲ್ಲ. ತಲೆಕೆಟ್ಟ ಬಿಜೆಪಿಯವರು ಈ ಮಾತನ್ನು ಹೇಳುತ್ತಾರೆ. ಸಿಬಿಐಗೆ ಅನೇಕ ದೂರುಗಳನ್ನು ನೀಡಿದ್ದೇವೆ. ಆದರೆ, ಅವುಗಳ ಕುರಿತು ಸೂಕ್ತ ತನಿಖೆ ನಡೆಸಿ ಈ ವೆರೆಗ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅಮಿತ್ ಶಾ ಪ್ರಕರಣ ಮುಚ್ಚಿ ಹೋಗುತ್ತಿದೆ. ಆದರೆ ರಾಬಟ್ ವಾದ್ರಾ, ಚಿದಂಬರಂ, ಡಿ.ಕೆ.ಶಿವಕುಮಾರ್ ಅವರನ್ನು ಸಿಕ್ಕಿ ಹಾಕಿಸುತ್ತಿದ್ದಾರೆ. 2007ರ ಪ್ರಕರಣಕ್ಕೆ ಈಗ ಚಾರ್ಚ್ ಶೀಟ್ ಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಡಿಕೆಶಿಯವರ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸಿಲುಕಿಸುತ್ತಿದ್ದಾರೆ. ಆಪರೇಷನ್ ಕಮಲ ಮಾಡುವುದಕ್ಕೆ ಐದು ಕೋಟಿ ರೂ. ಹಣ ಕೊಡೋಕೆ ಬಂದಿದ್ದರು ಎಂದು ಸದನದಲ್ಲಿ ಶಾಸಕ ಶ್ರೀನಿವಾಸ ಆರೋಪಿಸಿದ್ದರು. ಅಲ್ಲದೆ, ಈ ಕುರಿತು ಬಿ.ಎಸ್.ಯಡಿಯೂರಪ್ಪನವರ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣ ಏನಾಗಿದೆ? ಸಿಬಿಐ ಏನು ಮಾಡುತ್ತಿದೆ. ಈ ಪ್ರಕರಣಗಳನ್ನೆಲ್ಲ ಬಿಟ್ಟು ಯಾವುದೇ ಅಪರಾಧ ಎಸಗಿಲ್ಲದ ಡಿಕೆಶಿ ಮೇಲೆ ವಿಚಾರಣೆ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಕಿಡಿಕಾರಿದರು.

  • ಭ್ರಷ್ಟಾಚಾರದ ವಿರುದ್ಧ ಸಮರ – 22 ತೆರಿಗೆ ಅಧಿಕಾರಿಗಳು ವಜಾ

    ಭ್ರಷ್ಟಾಚಾರದ ವಿರುದ್ಧ ಸಮರ – 22 ತೆರಿಗೆ ಅಧಿಕಾರಿಗಳು ವಜಾ

    – ಇತ್ತೀಚೆಗಷ್ಟೇ 27 ಅಧಿಕಾರಿಗಳನ್ನು ವಜಾ ಮಾಡಲಾಗಿತ್ತು

    ನವದೆಹಲಿ: ಭ್ರಷ್ಟಾಚಾರ ಹಾಗೂ ಗಂಭೀರ ಅಕ್ರಮ ಎಸಗಿದ ಆರೋಪ ಹೊಂದಿದ್ದ 22 ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

    ಭ್ರಷ್ಟಾಚಾರ ಕಿತ್ತೊಗೆಯಲು ಪ್ರಧಾನಿ ಮೋದಿಯವರ ವ್ಯವಸ್ಥೆಯ ಶುದ್ಧೀಕರಣದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯ 12 ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಸೇರಿ ಕಂದಾಯ ಇಲಾಖೆಯ ಒಟ್ಟು 27 ಹಿರಿಯ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಂಡಿತ್ತು.

    ಇದೀಗ ಕೇಂದ್ರ ನೇರ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಐಸಿ) ಇದೀಗ ಸುಪರಿಂಟೆಂಡೆಂಟ್ ಹಾಗೂ ಆಡಳಿತಾಧಿಕಾರಿ ದರ್ಜೆಯ 22 ಹಿರಿಯ ಅಧಿಕಾರಿಗಳನ್ನು ಮೂಲಭೂತ ನಿಯಮ 56(ಜೆ) ಅಡಿ ಭಷ್ಟಾಚಾರ, ಇತರ ಆರೋಪಗಳು ಹಾಗೂ ಸಿಬಿಐ ಬಲೆಗೆ ಬಿದ್ದಿದ್ದರಿಂದ ಅವರು ಕಡ್ಡಾಯ ನಿವೃತ್ತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

    ಈ ಮೂಲಕ ಭ್ರಷ್ಟಾಚಾರ ಹಾಗೂ ಇತರ ಗಂಭೀರ ಆರೋಪಗಳನ್ನು ಮಾಡಿದ ಅಧಿಕಾರಿಗಳಿಗೆ ಕೇವಲ ನೋಟಿಸ್ ಹಾಗೂ ಸಮನ್ಸ್ ನೀಡುವ ಸಂಸ್ಕೃತಿಗೆ ಸರ್ಕಾರ ತಿಲಾಂಜಲಿ ಹಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಈ ಕುರಿತು ಖಡಕ್ ಎಚ್ಚರಿಕೆ ನೀಡಿದ್ದು, ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಅಧಿಕಾರಿಗಳ ಎಲ್ಲ ನೋಟಿಸ್, ಸಮನ್ಸ್ ಹಾಗೂ ಆದೇಶಗಳು ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯ ಮೂಲಕ ನೀಡಲಾಗುವುದು. ಅಲ್ಲದೆ, ಕಂಪ್ಯೂಟರ್ ದಾಖಲೆಗಳು ವಿಶೇಷ ಗುರುತಿನ ಸಂಖ್ಯೆಯನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.

    ಕಂಪ್ಯೂಟರ್ ಜನರೇಟೆಡ್ ಡಿಐಎನ್ ಇಲ್ಲದೆ, ನಡೆಸಲಾಗುವ ಯಾವುದೇ ಸಂವಹನ ಕಾನೂನಿನಿಂದ ಹೊರಗುಳಿಯಲಿದೆ. ಅಲ್ಲದೆ, ಯಾವುದೇ ಕಂಪನಿ ಪ್ರತಿಕ್ರಿಯೆ ನೀಡಿದ ಮೂರು ತಿಂಗಳೊಳಗೆ ತೆರಿಗೆ ಇಲಾಖೆಯು ಆ ಪ್ರಕರಣವನ್ನು ನಿರ್ಧರಿಸದಿದ್ದಲ್ಲಿ ತೆರಿಗೆ ನೋಟಿಸ್ ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ಕಳೆದ ಬಾರಿಯ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮ್ ತಿಳಿಸಿದ್ದರು.

    ಇತ್ತೀಚೆಗೆ ನಿವೃತ್ತಿ ಹೊಂದಿದ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳನ್ನು ಈ ಹಿಂದೆ ಕೇಂದ್ರ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಬಂಧಿಸಿದ್ದರು. ಇದರಲ್ಲಿ ಇನ್ನೂ ಕೆಲವರ ವಿಚಾರಣೆಯನ್ನು ನಡೆಸಲಾಗುತ್ತಿದೆ.

    22 ಅಧಿಕಾರಿಗಳಲ್ಲಿ 9 ಮಂದಿ ಭೋಪಾಲ್ ಮೂಲದವರಾಗಿದ್ದು, ಇವರು ಸಿಗರೇಟ್ ತಯಾರಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿಗರೇಟ್‍ಗಳನ್ನು ರಹಸ್ಯವಾಗಿ ಉತ್ಪಾದಿಸಲು ಅನುಮತಿ ನೀಡಿರುವುದು ಮತ್ತು ಅವುಗಳನ್ನು ಸರಬರಾಜು ಮಾಡಲು ಅನುಕೂಲ ಮಡಿಕೊಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾರೆ.

    2003ರಲ್ಲಿ ಬೆಂಗಳೂರಿನ ಇನ್ನೊಬ್ಬ ಅಧಿಕಾರಿ ಮೊಬೈಲ್ ಸ್ಮಗ್ಲಿಂಗ್ ಹಾಗೂ ಕಂಪ್ಯೂಟರ್ ಬಿಡಿ ಭಾಗಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ್ದವರಿಗೆ ಸಹಾಯ ಮಾಡಿದ್ದರು. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಈ ವಸ್ತುಗಳನ್ನು ವಶಪಡಿಸಿಕೊಂಡು ಅಧಿಕಾರಿಯನ್ನು ವಜಾ ಮಾಡಲಾಗಿತ್ತು.

    ದೆಹಲಿಯ ಇನ್ನೊಂದು ಪ್ರಕರಣದಲ್ಲಿ, ದೆಹಲಿಯ ಜಿಎಸ್‍ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತೆರಿಗೆ ಅಧಿಕಾರಿಯೊಬ್ಬರು ಕಳೆದ ವರ್ಷ ದುಬೈನಿಂದ 1,200 ಗ್ರಾಂ. ತೂಕದ 10 ಬಾರ್ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇವರನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದರು.

    ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

  • ಚಿದಂಬರಂ ಐದು ದಿನ ಸಿಬಿಐ ಕಸ್ಟಡಿಗೆ

    ಚಿದಂಬರಂ ಐದು ದಿನ ಸಿಬಿಐ ಕಸ್ಟಡಿಗೆ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಅವ್ಯವಹಾರ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

    ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಪಿ.ಚಿದಂಬರಂ ಅವರನ್ನು ಬಂಧಿಸಿದ್ದರು. ರಾತ್ರಿ ಸಿಬಿಐ ಕೇಂದ್ರ ಕಚೇರಿಯಲ್ಲಿ ಇರಿಸಿಕೊಂಡಿದ್ದ ಅಧಿಕಾರಿಗಳು ಇಂದು ಕೋರ್ಟ್ ಗೆ ಹಾಜರು ಪಡಿಸಿದ್ದರು. ಪ್ರರಕಣದ ಕುರಿತು ವಿಚಾರಣೆ ನಡೆದಿದ ಕೋರ್ಟ್, ಆಗಸ್ಟ್ 22ರಿಂದ 26ರ ವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

    ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಶಾರ್​ ಮೆಹ್ತಾ ಅವರು, ಮೌನ ಎಂಬುದು ಸಂವಿಧಾನಿಕ ಹಕ್ಕು. ಇದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ಐಎನ್‍ಎಕ್ಸ್ ಮೀಡಿಯಾ ಅವ್ಯವಹಾರ ಹಗರಣ ಕುರಿತು ಪಿ.ಚಿದಂಬರಂ ಅವರು ತನಿಖೆಗೆ ಸಹಕರಿಸುತ್ತಿಲ್ಲ.  ಅವರು ಪ್ರಶ್ನೆಗಳಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಕೋರ್ಟ್​ ಮುಂದೆ ವಾದ ಮಂಡಿಸಿದರು.

    ಮಾಜಿ ಸಚಿವ ಪಿ.ಚಿದಂಬರಂ ಅವರ ಪರ ಹಿರಿಯ ವಕೀಲ ಕಪಿಲ್​ ಸಿಬಲ್​  ಅವರು ವಾದ ಮಂಡಿಸಿದರು. ಮಾಜಿ ಸಚಿವರ ಜೊತೆಗೆ ಅಭಿಷೇಕ್​ ಮನು ಸಿಂಗ್ವಿ, ಅವರ ಪತ್ನಿ ನಳಿನಿ ಮತ್ತು ಸಹ ಆರೋಪಿ ಮಗ ಕಾರ್ತಿ ಚಿದಂಬರಂ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್  ಪಿ.ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

    ಮಾಜಿ ಸಚಿವರು ಸಲ್ಲಿಸಿದ್ದ ನೀರಿಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಮಂಗಳವಾರ ವಜಾಗೊಳಿಸಿದ ಬಳಿಕ ಪಿ.ಚಿದಂಬರಂ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆದರೆ 24 ಗಂಟೆ ಬಳಿಕ (ಬುಧವಾರ) ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಸುದ್ದಿಗೋಷ್ಠಿ ನಡೆಸಿದ್ದ ಅವರು ಆ ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದರು.

    ಮಾಜಿ ಸಚಿವರು ನಿವಾಸಕ್ಕೆ ತೆರಳಿದ ಮಾಹಿತಿ ಲಭಿಸುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಗೇಟ್ ಹಾಕಿದ್ದರಿಂದ ಅಧಿಕಾರಿಗಳು ನಿವಾಸದ ಎದುರಿನ ಗೇಟ್ ಹಾಗೂ ಕಾಂಪೌಡ್ ಜಿಗಿದು ಪ್ರವೇಶಿಸಿದ್ದರು. ಇಡಿ ಹಾಗೂ ಸಿಬಿಐ ಅಧಿಕಾರಿಗಳು ನಿವಾಸ ಪ್ರವೇಶ ಮಾಡುತ್ತಿದಂತೆ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಈ ವೇಳೆ ಪೊಲೀಸರು ಕೂಡ ನಿವಾಸ ಎದುರು ಬೀಡು ಬಿಟ್ಟಿದ್ದರು. ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ಮನೆಯಲ್ಲಿಯೇ ವಿಚಾರಣೆಗೆ ಒಳಪಡಿಸಿದ್ದರು. ಆ ಬಳಿಕ ಮಾಜಿ ಸಚಿವರನ್ನು ಬಂಧಿಸಿದ ಅಧಿಕಾರಿಗಳು ಕಾರಿನಲ್ಲಿ ಕರೆದುಕೊಂಡ ಹೋಗಿದ್ದರು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

  • ಇಂದ್ರಾಣಿಯ ಆ ಒಂದು ಹೇಳಿಕೆಯಿಂದ ಚಿದಂಬರಂ ಅರೆಸ್ಟ್ – ಕಂಪ್ಯೂಟರ್‌ನಿಂದ  ಸೆರೆಯಾದ ಕಾರ್ತಿ

    ಇಂದ್ರಾಣಿಯ ಆ ಒಂದು ಹೇಳಿಕೆಯಿಂದ ಚಿದಂಬರಂ ಅರೆಸ್ಟ್ – ಕಂಪ್ಯೂಟರ್‌ನಿಂದ ಸೆರೆಯಾದ ಕಾರ್ತಿ

    ನವದೆಹಲಿ: ಐಎನ್‍ಎಕ್ಸ್ ಕಂಪನಿಯ ಮಾಲಕಿ, ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಮುಂಬೈ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ನೀಡಿದ ಒಂದು ಹೇಳಿಕೆಯಿಂದ ಮಾಜಿ ಗೃಹ ಸಚಿವ ಚಿದಂಬರಂ ಈಗ ಅರೆಸ್ಟ್ ಆಗಿದ್ದಾರೆ.

    ಐಎನ್‍ಎಕ್ಸ್ ಪ್ರಕರಣದ ತನಿಖೆ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಇದ್ರಾಣಿ ಮುಖರ್ಜಿ 2006 ರಲ್ಲಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಚಿದಂಬರಂ ಅವರನ್ನು ಭೇಟಿಯಾಗಿದ್ದ ವೇಳೆ ನಡೆದ ಮಾತುಕತೆ ವಿಚಾರವನ್ನು ತಿಳಿಸಿದ್ದರು. ಈ ಹೇಳಿಕೆಯನ್ನು ಪ್ರಕರಣದ ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸಿ ಸಿಬಿಐ ಈಗ ಚಿದಂಬರಂ ಅವರನ್ನು ಬಂಧಿಸಿದೆ.

    2018ರ ಫೆಬ್ರವರಿ 17ರ ವಿಚಾರಣೆ ಸಮಯದಲ್ಲಿ ದೆಹಲಿಯ ಹಯಾತ್ ಹೋಟೆಲಿನಲ್ಲಿ ಚಿದಂಬರಂ ಪುತ್ರ ಕಾರ್ತಿಯನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ನಮ್ಮ ವ್ಯವಹಾರಕ್ಕಾಗಿ ಕಾರ್ತಿ 1 ದಶಲಕ್ಷ ಡಾಲರ್(7.17 ಕೋಟಿ ರೂ.) ಬೇಡಿಕೆ ಇಟ್ಟಿದ್ದರು ಎನ್ನುವ ಮತ್ತೊಂದು ವಿಚಾರವನ್ನು ಇಂದ್ರಾಣಿ ಮುಖರ್ಜಿ ತಿಳಿಸಿದ್ದರು.

    ಸಿಬಿಐ ಆರೋಪ ಏನು?
    ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಒಡೆತನದ ಐಎನ್‍ಎಕ್ಸ್ ಮೀಡಿಯಾಗೆ 2007ರ ಮಾರ್ಚ್ ತಿಂಗಳಿನಲ್ಲಿ ಮೂರು ಮಾರಿಷಸ್ ಕಂಪೆನಿಗಳಿಂದ ಸುಮಾರು 4.62 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹರಿದುಬರಲು ಅಂದಿನ ಸರ್ಕಾರ ಅನುಮತಿ ನೀಡಿತ್ತು. ಸರ್ಕಾರ 4.62 ಕೋಟಿ ರೂ.ಗೆ ಅನುಮತಿ ನೀಡಿದ್ದರೆ 305 ಕೋಟಿ ರೂಪಾಯಿಗಳನ್ನು ಹೂಡಿಕೆಯಾಗಿ ವಿದೇಶದಿಂದ ತರಲಾಯಿತು. ಈ ಸಂದರ್ಭದಲ್ಲಿ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್(ಭಾರತೀಯ ಕಂಪೆನಿ ಮತ್ತೊಂದು ಕಂಪೆನಿಯ ಮೇಲೆ ವಿದೇಶಿ ಹೂಡಿಕೆಯನ್ನು ಮಾಡುವುದು) ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿತ್ತು.

    ಇಂದ್ರಾಣಿ ಮುಖರ್ಜಿಯ ಕಂಪನಿಗೆ ಈ ಸಂದರ್ಭದಲ್ಲಿ ಕಾರ್ತಿ ಮಾಲೀಕತ್ವದ ಅಡ್ವಾನ್ಸ್ಡ್ ಸ್ಟ್ರಟಜಿಕ್ ಕನಸ್ಟಲಿಂಗ್ ಪ್ರೈವೆಟ್ ಲಿಮಿಟೆಡ್(ಎಎಸ್‍ಸಿಪಿಎಲ್) ಕಂಪನಿಯಿಂದ ಹೂಡಿಕೆಯಾಗಿತ್ತು. ಕಾರ್ತಿ ಮತ್ತು ಇಂದ್ರಾಣಿ ಮಾತುಕತೆಯ ಫಲವಾಗಿ ಎಎಸ್‍ಸಿಪಿಎಲ್ ಮತ್ತು ಇದರ ಸಹಭಾಗಿತ್ವದಲ್ಲಿರುವ ಕಂಪನಿಗಳು ಸುಮಾರು 7 ಲಕ್ಷ ಡಾಲರ್(ಆಗಿನ ಮೌಲ್ಯ 3.10 ಕೋಟಿ ರೂ.) ಹೂಡಿಕೆಯಾಗಿತ್ತು. ನಂತರ ಈ ಹಣ ಮರುಪಾವತಿಯಾಗಿತ್ತು. ಇದಾದ ನಂತರ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ(ಎಫ್‍ಐಪಿಬಿ) ಕೆಲ ಬದಲಾವಣೆ ಮಾಡಿ ಇಂದ್ರಾಣಿ ಕಂಪನಿಗೆ ಅನುಮತಿ ನೀಡಿತ್ತು ಎನ್ನುವುದು ಸಿಬಿಐ ಆರೋಪ.

    ಸಿಬಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, ಎಫ್‍ಐಪಿಬಿ 4.62 ಕೋಟಿ ರೂ. ವಿದೇಶಿ ಹೂಡಿಕೆಗೆ ಅನುಮತಿ ನೀಡಿತ್ತು. ಆದರೆ ಚಿದಂಬರಂ ಮೂಲಕ ಕಾರ್ತಿಗೆ ಲಂಚ ನೀಡಿದ ಪರಿಣಾಮ 305 ಕೋಟಿ ರೂ. ವಿದೇಶಿ ಹಣ ಬಂದಿತ್ತು. ಅಷ್ಟೇ ಅಲ್ಲದೇ ಐಎನ್‍ಎಕ್ಸ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶೇ.26 ರಷ್ಟು ಡೌನ್‍ಸ್ಟ್ರೀಮ್ ಇನ್ವೆಸ್ಟ್ ಮೆಂಟ್ ಮಾಡಲಾಯಿತು ಎಂದು ತಿಳಿಸಿದ್ದರು.

    ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಲಂಚವಾಗಿ ಪಡೆದ ಹಣದಲ್ಲಿ ಕಾರ್ತಿ ಚಿದಂಬರಂ ಸ್ಪೇನ್ ದೇಶದಲ್ಲಿ ಟೆನ್ನಿಸ್ ಕ್ಲಬ್, ಇಂಗ್ಲೆಂಡಿನಲ್ಲಿ ಕಾಟೇಜ್, ಭಾರತ ಮತ್ತು ವಿದೇಶಗಳಲ್ಲಿ ಸುಮಾರು 54 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಆಸ್ತಿಗಳನ್ನು ಖರೀದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    2008 ರಲ್ಲಿ ಕೇಂದ್ರ ಹಣಕಾಸು ಇಲಾಖೆಯ ಹಣಕಾಸು ಗುಪ್ತಚರ ವಿಭಾಗಕ್ಕೆ ಐಎನ್‍ಎಕ್ಸ್ ಕಂಪನಿಯಲ್ಲಿ ಹೂಡಿದ ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಬಂದಿದೆ. ಈ ಸಂದರ್ಭದಲ್ಲಿ ಮುಂಬೈ ಆದಾಯ ತೆರಿಗೆ ವಿಭಾಗ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ(ಇಡಿ) ವರ್ಗಾಯಿಸಿತ್ತು. 2010ರಲ್ಲಿ ಐಎನ್‍ಎಕ್ಸ್ ಮೀಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಅಡಿ ಪ್ರಕರಣ ದಾಖಲಿಸಿತ್ತು.

    ಈ ಪ್ರಕರಣ ತನಿಖೆ ನಡೆಸುತ್ತಿದ್ದಾಗ ಐಎನ್‍ಎಕ್ಸ್ ಮೀಡಿಯಾದ ಕಂಪ್ಯೂಟರ್ ನಲ್ಲಿ ಲೆಕ್ಕ ಪರಿಶೋಧಕ ಭಾಸ್ಕರ್ ರಾಮನ್ ಹೆಸರಿನಲ್ಲಿದ್ದ ದಾಖಲೆಗಳು ಸಿಕ್ಕಿದೆ. ಈ ಭಾಸ್ಕರ್ ರಾಮನ್ ಯಾರು ಎನ್ನುವುದನ್ನು ಪತ್ತೆ ಹಚ್ಚಿದಾಗ ಈ ವ್ಯಕ್ತಿ ಕಾರ್ತಿ ಚಿದಂಬರಂ ಅವರ ಲೆಕ್ಕಪರಿಶೋಧಕ ಎನ್ನುವುದು ಇಡಿಗೆ ತಿಳಿಯಿತು. ಸಿಕ್ಕಿದ ಸಾಫ್ಟ್ ಕಾಪಿ ದಾಖಲೆಯಲ್ಲಿ ಐಎನ್‍ಎಕ್ಸ್ ಕಂಪನಿ ಮತ್ತು ಕಾರ್ತಿ ನಡುವಿನ ವ್ಯವಹಾರದ ಮಾಹಿತಿ, ವಿದೇಶಿ ಬಂಡವಾಳ ಉತ್ತೇಜನ ಮಂಡಳಿ ನೀಡಿದ ಅನುಮತಿ ವಿವರಗಳು ಲಭ್ಯವಾಗಿತ್ತು. ಇಡಿಗೆ ಸಿಕ್ಕಿದ ಈ ದಾಖಲೆಯನ್ನು ಆಧಾರವಾಗಿಟ್ಟುಕೊಂಡು ಸಿಬಿಐ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಾರ್ತಿ ವಿರುದ್ಧ 2017ರಲ್ಲಿ ಎಫ್‍ಐಆರ್ ದಾಖಲಿಸಿತ್ತು.

    ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಕಾರ್ತಿ ಅವರನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿದ್ದರು. ನಂತರ ಕಾರ್ತಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

  • ಚಿದಂಬರಂ ಅರೆಸ್ಟ್ – ಗೇಟ್ ಹಾರಿ ನಿವಾಸದ ಪ್ರವೇಶಿಸಿದ ಇಡಿ, ಸಿಬಿಐ ಅಧಿಕಾರಿಗಳು

    ಚಿದಂಬರಂ ಅರೆಸ್ಟ್ – ಗೇಟ್ ಹಾರಿ ನಿವಾಸದ ಪ್ರವೇಶಿಸಿದ ಇಡಿ, ಸಿಬಿಐ ಅಧಿಕಾರಿಗಳು

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂರನ್ನು ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 27 ಗಂಟೆಗಳ ಬಳಿಕ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಸುದ್ದಿಗೋಷ್ಠಿ ನಡೆಸಿದ್ದ ಚಿದಂಬರಂ ಅವರು, ಆ ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದರು.

    ಚಿದಂಬರಂ ಅವರು ನಿವಾಸಕ್ಕೆ ತೆರಳಿದ ಮಾಹಿತಿ ಲಭಿಸುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ನಿವಾಸಕ್ಕೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಅವರ ನಿವಾಸ ಗೇಟ್ ಬಂದ್ ಆಗಿದ್ದ ಕಾರಣ ಅಧಿಕಾರಿಗಳು ನಿವಾಸದ ಎದುರಿನ ಗೇಟ್ ಹಾಗೂ ಕಾಂಪೌಡ್ ಜಿಗಿದು ನಿವಾಸವನ್ನು ಪ್ರವೇಶ ಮಾಡಿದ್ದರು. ಇಡಿ ಹಾಗೂ ಸಿಬಿಐ ಅಧಿಕಾರಿಗಳು ನಿವಾಸ ಪ್ರವೇಶ ಮಾಡುತ್ತಿದಂತೆ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಪೊಲೀಸರು ಕೂಡ ನಿವಾಸ ಎದುರು ಬೀಡು ಬಿಟ್ಟಿದ್ದರು. ಈ ವೇಳೆಗೆ ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ತಮ್ಮ ನಿವಾಸದಲ್ಲೇ ವಿಚಾರಣೆಗೆ ಒಳಪಡಿಸಿದ್ದರು. ಆ ಬಳಿಕ ಅವರನ್ನು ಸ್ವಲ್ಪ ಸಮಯದ ಬಳಿಕ ಬಂಧಿಸಿ ಅಧಿಕಾರಿಗಳು ಅವರನ್ನು ಕಾರಿನಲ್ಲಿ ಕರೆದುಕೊಂಡು ಸಿಬಿಐ ಕಚೇರಿಗೆ ಕರೆತಂದರು.

    ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪ್ರಕರಣದಲ್ಲಿ ಆರೋಪಿ ಅಲ್ಲ. ನನ್ನನ್ನು ಹಾಗೂ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಲಾಗಿದೆ. ಎಫ್‍ಐಆರ್ ನಲ್ಲೂ ನನ್ನ ಹೆಸರು ಇಲ್ಲ ಎಂದು ಆರೋಪಿಸಿದ್ದರು.

    ಎಐಸಿಸಿ ಕಚೇರಿಯಲ್ಲಿ ಚಿದಂಬರಂ ಅವರು ಆಗಮಿಸುವ ಮುನ್ನವೇ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದರು. ಅಲ್ಲದೇ ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಕಚೇರಿಯತ್ತ ದೌಡಾಯಿಸಿದ್ದರು. ಆದರೆ ಅಧಿಕಾರಿಗಳು ಕಚೇರಿಯ ಒಳಗೆ ತೆರಳದಂತೆ ಪಕ್ಷದ ಕಾರ್ಯಕರ್ತರು ಮುಖ್ಯ ಬಾಗಿಲನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದು ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹೈಡ್ರಾಮಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದ ಎದುರು ಹೈಡ್ರಾಮ ನಡೆಯುತ್ತಿದ್ದರೆ ಸುದ್ದಿಗೋಷ್ಠಿ ನಡೆಸಿ ಬಳಿಕ ನೇರ ಚಿದಂಬರಂ ಅವರು ತಮ್ಮ ನಿವಾಸಕ್ಕೆ ತೆರಳಿದರು.

    ಇತ್ತ ಚಿದಂಬರಂ ಅವರು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಆ ಬಳಿಕ ಅವರು ನಿವಾಸದಿಂದ ಕಾಣೆಯಾಗಿದ್ದರು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

  • ಕಾಂಗ್ರೆಸ್ ಕಚೇರಿಯಲ್ಲಿ ಚಿದಂಬರಂ ಪ್ರತ್ಯಕ್ಷ

    ಕಾಂಗ್ರೆಸ್ ಕಚೇರಿಯಲ್ಲಿ ಚಿದಂಬರಂ ಪ್ರತ್ಯಕ್ಷ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಇಂದು ಸಂಜೆ ವೇಳೆ ಪ್ರತ್ಯಕ್ಷರಾಗಿದ್ದರು.

    ನಾಪತ್ತೆಯಾಗಿದ್ದ ಚಿದಂಬರಂ ಅವರು ಏಕಾಏಕಿ ಕಾಂಗ್ರೆಸ್ ಕಚೇರಿಯಲ್ಲಿ ಹಾಜರಾಗಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಾನು ಪ್ರಕರಣದಲ್ಲಿ ಆರೋಪಿ ಅಲ್ಲ. ನನ್ನನ್ನು ಹಾಗೂ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಲಾಗಿದೆ. ಎಫ್‍ಐಆರ್ ನಲ್ಲೂ ನನ್ನ ಹೆಸರು ಇಲ್ಲ ಎಂದು ಆರೋಪಿಸಿದರು. ಆದರೆ ಮಾಧ್ಯಮ ಪ್ರಶ್ನೆಗಳನ್ನು ಸ್ವೀಕರಿಸಲು ನಿರಾಕರಿಸಿದರು.

    ಎಐಸಿಸಿ ಕಚೇರಿಯಲ್ಲಿ ಚಿದಂಬರಂ ಅವರು ಆಗಮಿಸುವ ಮುನ್ನವೇ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದರು. ಅಲ್ಲದೇ ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಕಚೇರಿಯತ್ತ ದೌಡಾಯಿಸಿದ್ದರು. ಆದರೆ ಅಧಿಕಾರಿಗಳು ಕಚೇರಿಯ ಒಳಗೆ ತೆರಳದಂತೆ ಪಕ್ಷದ ಕಾರ್ಯಕರ್ತರು ಮುಖ್ಯ ಬಾಗಿಲನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದು ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹೈಡ್ರಾಮಕ್ಕೆ ಕಾರಣವಾಗಿತ್ತು.

    ಕಾಂಗ್ರೆಸ್ ಪಕ್ಷದ ಎದುರು ಹೈಡ್ರಾಮ ನಡೆಯುತ್ತಿದ್ದರೆ ಸುದ್ದಿಗೋಷ್ಠಿ ನಡೆಸಿ ಬಳಿಕ ನೇರ ಚಿದಂಬರಂ ಅವರು ತಮ್ಮ ನಿವಾಸಕ್ಕೆ ತೆರಳಿದರು. ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ಹಿರಿಯ ನಾಯಕರು ಕಚೇರಿಯಲ್ಲಿ ಹಾಜರಿದ್ದರು. ಕಳೆದ ಹಲವು ಗಂಟೆಗಳಿಂದ ಚಿದಂಬರಂ ಅವರಿಗಾಗಿ ಹುಡುಕಾಟ ನಡೆಸಿದ್ದ ಇಡಿ ಮತ್ತು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.

    ಇತ್ತ ಚಿದಂಬರಂ ಅವರು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಆ ಬಳಿಕ ಅವರು ನಿವಾಸದಿಂದ ಕಾಣೆಯಾಗಿದ್ದರು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

  • ಚಿದಂಬರಂ ಎಲ್ಲಿದ್ದೀರಪ್ಪಾ – ಮಾಳವಿಕಾ ಅವಿನಾಶ್ ಪ್ರಶ್ನೆ

    ಚಿದಂಬರಂ ಎಲ್ಲಿದ್ದೀರಪ್ಪಾ – ಮಾಳವಿಕಾ ಅವಿನಾಶ್ ಪ್ರಶ್ನೆ

    ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ‘ನಿಖಿಲ್ ಎಲ್ಲಿದಿಯಪ್ಪ’ ಘೋಷಣೆ ಭಾರೀ ಸುದ್ದಿ ಮಾಡಿತ್ತು. ಈಗ ಕೇಂದ್ರದ ಮಾಜಿ ಸಚಿವ ಚಿದಂಬರಂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಚಿದಂಬರಂ ಎಲ್ಲಿದ್ದೀರಪ್ಪ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಸಹ ಈ ಕುರಿತು ಟ್ವೀಟ್ ಮಾಡಿದ್ದು,’ಚಿದಂಬರ ರಹಸ್ಯ’ವನ್ನು ಬೇಧಿಸುವವರಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳಿದಂತೆ ಹ್ಯಾಶ್ ಟ್ಯಾಗ್ ಹಾಕಿ ‘ಚಿದಂಬರಂ ಎಲ್ಲಿದ್ದೀರಪ್ಪ’ ಎಂದು ಪ್ರಶ್ನಿಸಿದ್ದಾರೆ.

    ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಎಲ್ಲಿದಿಯಪ್ಪಾ ಎಂಬ ಘೋಷಣೆ ಸಾಕಷ್ಟು ಟ್ರೋಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ವಿರುದ್ಧ ಸ್ಪರ್ಧಿಸಿದ್ದರು. ಆಗ ಕುಮಾರಸ್ವಾಮಿ ಅಥವಾ ನಿಖಿಲ್ ಅವರ ಪ್ರತಿ ವಿಷಯಕ್ಕೂ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದರು. ಇದನ್ನು ಓದಿ: ಚಿದಂಬರಂಗಿಲ್ಲ ರಿಲೀಫ್ – ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಕಾರ

    ಇದೀಗ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬಂಧನ ಭೀತಿಯಿಂದ ಕಾಣೆಯಾಗಿದ್ದಾರೆ. ಮಂಗಳವಾರದಿಂದಲೂ ಸಹ ಚಿದಂಬರಂ ಅವರು ತಮ್ಮ ಮನೆಗೆ ಆಗಮಿಸಿಲ್ಲ. ಹೀಗಾಗಿ ಇಡಿ ಹಾಗೂ ಸಿಬಿಐ ಅದಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಚಿದಂಬರಂ ಕಾಣೆಯಾಗಿದ್ದನ್ನು ಸಹ ಇದೀಗ ಅದೇ ಧಾಟಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ದೆಹಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸಹ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮೂಲಕ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

    ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಕಳುಹಿಸುತ್ತೇವೆ ಅವರೇ ಆದೇಶ ಪ್ರಕಟಿಸುತ್ತಾರೆ ಎಂದು ನ್ಯಾಯಮೂರ್ತಿ ಎನ್.ವಿ.ರಮಣ್, ಎಂ.ಶಾಂತನಗೌಡರ್ ಹಾಗೂ ಅಜಯ್ ರಸ್ಟೋಗಿ ಅವರಿದ್ದ ಪೀಠ ಇಂದು ತಿಳಿಸಿದೆ.

    ಸಿಬಿಐ ಅಧಿಕಾರಿಗಳು ಮಂಗಳವಾರ ಮಧ್ಯ ರಾತ್ರಿಯೇ ನೋಟಿಸ್ ನೀಡಿದ್ದು, ಇದೀಗ ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲದೆ ಸಿಬಿಐ ಅಧಿಕಾರಿಗಳು ಸಹ ಚಿದಂಬರಂ ಅವರ ಮನೆಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಆದರೆ ಚಿದಂಬರಂ ಅವರು ಮನೆಯಲ್ಲಿರಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಚಿಂದಂಬರಂ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ.

    ನೋಟಿಸಿನಲ್ಲಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದನ್ನು ಪ್ರಶ್ನೆ ಮಾಡಿರುವ ಚಿದಂಬರಂ ಪರ ವಕೀಲ ಅರ್ಶದೀಪ್ ಸಿಂಗ್ ಖುರಾನ, ನನ್ನ ಕಕ್ಷಿದಾರರು 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕೆಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದೀರಿ. 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಕಾನೂನಿನ ಯಾವ ನಿಬಂಧನೆ ಅಡಿ ಇದೆ ಎಂದು ಪ್ರಶ್ನೆ ಮಾಡಿದ್ದರು.

  • ಚಿದಂಬರಂಗಿಲ್ಲ ರಿಲೀಫ್ – ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಕಾರ

    ಚಿದಂಬರಂಗಿಲ್ಲ ರಿಲೀಫ್ – ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಕಾರ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಬಂಧನ ಭೀತಿ ಎದುರಾಗಿದ್ದು, ದೆಹಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸಹ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮೂಲಕ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

    ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಕಳುಹಿಸುತ್ತೇವೆ ಅವರೇ ಆದೇಶ ಪ್ರಕಟಿಸುತ್ತಾರೆ ಎಂದು ನ್ಯಾಯಮೂರ್ತಿ ಎನ್.ವಿ.ರಮಣ್, ಎಂ.ಶಾಂತನಗೌಡರ್ ಹಾಗೂ ಅಜಯ್ ರಸ್ಟೋಗಿ ಅವರಿದ್ದ ಪೀಠ ತಿಳಿಸಿದೆ.

    ಸಿಬಿಐ ಅಧಿಕಾರಿಗಳು ಮಂಗಳವಾರ ಮಧ್ಯ ರಾತ್ರಿಯೇ ನೋಟಿಸ್ ನೀಡಿದ್ದು, ಇದೀಗ ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲದೆ ಸಿಬಿಐ ಅಧಿಕಾರಿಗಳು ಸಹ ಚಿದಂಬರಂ ಅವರ ಮನೆಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಆದರೆ ಚಿದಂಬರಂ ಅವರು ಮನೆಯಲ್ಲಿರಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಚಿಂದಂಬರಂ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ.

    ಸಿಬಿಐ ಹಾಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರ ಕುರಿತು ಚಿದಂಬರಂ ಪರ ವಕೀಲ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನಿನ ಯಾವ ನಿಬಂಧನೆ ಅಡಿಯಲ್ಲಿ ನನ್ನ ಕಕ್ಷಿದಾರರಿಗೆ ನೋಟಿಸ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಐಎನ್‍ಎಕ್ಸ್ ಮೀಡಿಯಾ ಮತ್ತು ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕೃತಗೊಳಿಸಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಬಂಧನಕ್ಕಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅವರು ಮನೆಯಲ್ಲಿ ಇಲ್ಲದ ಕಾರಣ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಿ ಎಂದು ಸಿಬಿಐ ಅಧಿಕಾರಿಗಳು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.

    ನೋಟಿಸಿನಲ್ಲಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದನ್ನು ಪ್ರಶ್ನೆ ಮಾಡಿರುವ ಚಿದಂಬರಂ ಪರ ವಕೀಲ ಅರ್ಶದೀಪ್ ಸಿಂಗ್ ಖುರಾನ, ನನ್ನ ಕಕ್ಷಿದಾರರು 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕೆಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದೀರಿ. 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಕಾನೂನಿನ ಯಾವ ನಿಬಂಧನೆ ಅಡಿ ಇದೆ ಎಂದು ಪ್ರಶ್ನೆ ಮಾಡಿದ್ದರು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.