Tag: cbi court

  • ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

    ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

    – ಮಾಜಿ ಸಚಿವನಿಗೆ ಶಾಕ್‌ ಕೊಟ್ಟ ಸಿಬಿಐ ಕೋರ್ಟ್‌

    ಬಳ್ಳಾರಿ/ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದೆ.

    ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಶ್ರೀನಿವಾಸ್‌ ರೆಡ್ಡಿ ಮತ್ತು ಅಲಿ ಖಾನ್‌ಗೆ ಕೋರ್ಟ್‌ ಸೇರಿ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅವಿಭಜಿತ ಆಂಧ್ರಪ್ರದೇಶ ಗಣಿ ಸಚಿವೆಯಾಗಿದ್ದ ಸಬಿತಾ ಇಂದ್ರರೆಡ್ಡಿ, ಕೃಷ್ಣ ನಂದಾಗೆ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿದೆ. ಇದನ್ನೂ ಓದಿ: ನನಗೆ ನಮ್ಮ ದೇಶ ಮುಖ್ಯ, ಅದಕ್ಕೆ ಯುದ್ಧಕ್ಕೆ ಹೋಗ್ತೀನಿ ಎಂದಿದ್ದೆ: ಸಚಿವ ಜಮೀರ್

    ಏನಿದು ಪ್ರಕರಣ?
    ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

    2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಷಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು. ಇದನ್ನೂ ಓದಿ: ಸುಹಾಸ್‌ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್ ಮಾಡಿದ್ದೇ ಬಿಜೆಪಿ: ದಿನೇಶ್ ಗುಂಡೂರಾವ್ ತಿರುಗೇಟು

  • ಬಾಬ್ರಿ ಮಸೀದಿ ಧ್ವಂಸ ಕೇಸ್‌, ಸೆ.30ಕ್ಕೆ ಅಂತಿಮ ತೀರ್ಪು – 32 ಆರೋಪಿಗಳು ಹೆಸರು ಇಲ್ಲಿದೆ

    ಬಾಬ್ರಿ ಮಸೀದಿ ಧ್ವಂಸ ಕೇಸ್‌, ಸೆ.30ಕ್ಕೆ ಅಂತಿಮ ತೀರ್ಪು – 32 ಆರೋಪಿಗಳು ಹೆಸರು ಇಲ್ಲಿದೆ

    ಲಕ್ನೋ: 28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ಸೆ.30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ.

    ತೀರ್ಪು ನೀಡುವ ದಿನ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾ.ಸುರೇಂದ್ರ ಕುಮಾರ್ ಯಾದವ್‌ ಸೂಚಿಸಿದ್ದಾರೆ.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ.

     

     

    351 ಸಾಕ್ಷಿ ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿತ್ತು. ಸೆಪ್ಟೆಂಬರ್‌ 1ರಂದು ವಾದ ಮತ್ತು ಪ್ರತಿವಾದ ಮುಗಿದಿದ್ದು, ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುತ್ತಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್‌ ಸಿಂಗ್‌ ತಿಳಿಸಿದ್ದಾರೆ.

    2017ರ ಏಪ್ರಿಲ್‌ 19 ಎಂದು ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷದ ಒಳಗಡೆ ತೀರ್ಪು ಪ್ರಕಟಿಸುವಂತೆ ಸಿಬಿಐ ವಿಶೇಷ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

    ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಲಕ್ನೋ ಸಿಬಿಐ ನ್ಯಾಯಾಲಯದಲ್ಲಿ ಕರಸೇವಕರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ 8 ವಿಐಪಿಗಳ ವಿರುದ್ಧ ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2017ರ ಏಪ್ರಿಲ್‌ನಲ್ಲಿ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಲಕ್ನೋ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು.

    32 ಮಂದಿಆರೋಪಿಗಳು ಯಾರು?
    ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್‌ ಪಾಂಡೆ, ವಿಜಯ್‌ ಬಹದ್ದೂರ್‌ ಸಿಂಗ್‌, ಆರ್‌ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.

  • ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಪಂಚಕುಲಾ: ನಾನು ದೇವರ ಅಪರಾವತರ. ದೇವರ ಸಂದೇಶಗಾರ ಎಂದು ಸ್ವಂಘೋಷಿತ ದೇವಮಾನವನ ಸೋಗಿನಲ್ಲಿ ಅತ್ಯಾಚಾರ ನಡೆಸಿದ ಡೇರಾ ಸಚ್ಛಾಸೌದದ ಗುರ್ಮಿತ್ ರಾಮ್ ರಹೀಂ ಸಿಂಗ್‍ಗೆ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 29 ಲಕ್ಷ ರೂ.ದಂಡ ವಿಧಿಸಿದೆ.

    ಸಿರ್ಸಾ ಆಶ್ರಮದಲ್ಲಿ ಇಬ್ಬರು ಸಾಧ್ವಿಗಳ ಮೇಲೆ ಮೂರು ವರ್ಷ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಬಾಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) 506(ಜೀವ ಬೆದರಿಕೆ) ಅಡಿ ಕಠಿಣ ಜೈಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್ ಆದೇಶಿಸಿದ್ದಾರೆ.

    ಮೊದಲಿಗೆ 10 ವರ್ಷ ಅಷ್ಟೇ ಎಂದೇ ಸುದ್ದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ಮೊದಲ ಮತ್ತು 4.30ಕ್ಕೆ ಎರಡನೇ ತೀರ್ಪು ಪ್ರಕಟಿಸಿದರು. ಕೋರ್ಟ್ ಆದೇಶ ಓದಿದ ಬಳಿಕ 2 ಅತ್ಯಾಚಾರ ಕೇಸ್‍ಗಳಲ್ಲಿ ತಲಾ 10ರಂತೆ 20 ವರ್ಷ ಶಿಕ್ಷೆ ಮತ್ತು 15 ಲಕ್ಷ ದಂಡ ಹಾಗೂ 14 ಲಕ್ಷವನ್ನ ಸಂತ್ರಸ್ತೆಯರಿಗೆ ನೀಡುವಂತೆ ಜಡ್ಜ್ ಒಟ್ಟು 29 ಲಕ್ಷ ದಂಡ ವಿಧಿಸಿದ್ದಾರೆ.

    ಸಿಬಿಐ ಕೋರ್ಟ್ ತೀರ್ಪನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಮ್ ರಹೀಮ್ ಪರ ವಕೀಲರು ಸ್ಪಷ್ಟ ಪಡಿಸಿದ್ದಾರೆ. ಶಿಕ್ಷೆಯಲ್ಲಿ ಗೊಂದಲ ಇಲ್ಲ ಎಂದು ಸಿಬಿಐ ವಕ್ತಾರರು ಸಹ ಖಾತ್ರಿ ಪಡಿಸಿದರು. ಆದರೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯೊಬ್ಬರು ಹೈಕೋರ್ಟ್‍ಗೆ ಹೋಗುವುದಾಗಿ ಹೇಳಿದ್ದಾರೆ.

    ತೀರ್ಪಿನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಅದೇ ಜೈಲಿನಲ್ಲಿ ರಾಮ್ ರಹೀಂಗೆ ಜೈಲು ಉಡುಪು ಕೊಡಲಾಯ್ತು. ಆಗಸ್ಟ್ 25ಕ್ಕೆ ತೀರ್ಪಿನಂತೆ ಹಿಂಸಾಚಾರ ಇವತ್ತು ನಡೆಯಲು ಭದ್ರತಾ ಪಡೆಗಳು ಆಸ್ಪದ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇವತ್ತು ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯಲು ಆದೇಶಿಸಲಾಗಿತ್ತು. ಆದಾಗ್ಯೂ, ಸಿರ್ಸಾದ ಪುಲ್ಕನ್ ಗ್ರಾಮದ ಬಳಿ 2 ಕಾರುಗಳಿಗೆ ಭಕ್ತರು ಬೆಂಕಿ ಹಚ್ಚಿದ್ದರು.

    ಲೈಬ್ರರಿಯಲ್ಲಿ ಕಲಾಪ:
    ರೋಹ್ಟಕ್ ನ ಸುನಾರಿಯಾ ಜೈಲಿನ ಗ್ರಂಥಾಲಯದಲ್ಲಿ ತಾತ್ಕಾಲಿಕ ಕೋರ್ಟ್ ಹಾಲ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್ ಮೂಲಕ ಜಡ್ಜ್ ಜಗದೀಪ್ ಸಿಂಗ್ ಕೋರ್ಟ್ ಗೆ ಆಗಮಿಸಿದರು. ಶಿಕ್ಷೆ ಪ್ರಕಟಣೆಗೆ ಮುಂಚೆ ರೋಹ್ಟಕ್‍ನ ಸುನರಿಯಾ ಕೋರ್ಟ್ ನಲ್ಲಿ ಭಾರೀ ಹೈಡ್ರಾಮ ನಡೆಯಿತು. ಜಡ್ಜ್ ಜಗದೀಪ್ ಸಿಂಗ್, ಸಿಬಿಐ ಪರ ವಕೀಲ, ಬಾಬಾ ಪರ ವಕೀಲ, ಆರೋಪ ಬಾಬಾ ಸೇರಿ 7 ಮಂದಿ ಮಾತ್ರ ಕೋರ್ಟ್ ಹಾಲ್‍ನಲ್ಲಿದ್ದರು. 2.30ಕ್ಕೆ ಕಲಾಪ ಆರಂಭಿಸಿದ ಜಡ್ಜ್, ಇಬ್ಬರೂ ವಕೀಲರಿಗೆ ಹತ್ತತ್ತು ನಿಮಿಷ ಅವಕಾಶ ಕಲ್ಪಿಸಿದರು.

    ಸಿಬಿಐ ಪರ ವಕೀಲರ ವಾದ ಏನಿತ್ತು?
    ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಬಾಬಾ ರೇಪ್ ಮಾಡಿದ್ದು ತಮ್ಮನ್ನು ನಂಬಿ ಬಂದ ಹೆಣ್ಮಕ್ಕಳ ಜೀವನ ಹಾಳು ಮಾಡಿದ್ದಾರೆ. ಬಾಬಾ ಗುರ್ಮಿತ್ ಕೃತ್ಯವನ್ನು ಸಮಾಜ ಕ್ಷಮಿಸಲಾಗದು. ಅತ್ಯಾಚಾರ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಬಾಬಾ ಬೆಂಬಲಿಗರು ತೀರ್ಪಿನ ದಿನ ದಾಂಧಲೆ ಮಾಡಿದ್ದು ಅಲ್ಲದೇ ಈಗಲೂ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ನೀಡಬೇಕು

    ಬಾಬಾ ಪರ ವಕೀಲರ ವಾದ ಏನಿತ್ತು?
    ಸಿಬಿಐ ಪರ ವಕೀಲರ ವಾದವನ್ನು ದಯವಿಟ್ಟು ಪರಿಗಣಿಸಬೇಡಿ. ನಮ್ಮ ಕಕ್ಷಿದಾರನಿಗೆ ವಯಸ್ಸಾಗಿದ್ದು ಆರೋಗ್ಯ ಬೇರೆ ಕೈಕೊಟ್ಟಿದೆ. ನಮ್ಮ ಕಕ್ಷಿದಾರ ಅಪಾರ ಸಮಾಜ ಸೇವೆ ಮಾಡಿದ್ದಾರೆ. ದಯವಿಟ್ಟು ಬಾಬಾ ಗುರ್ಮಿತ್‍ಗೆ ಕನಿಷ್ಠ ಶಿಕ್ಷೆಯನ್ನು ವಿಧಿಸಿ.

    ಬಾಬಾ ಮನವಿ ಏನಿತ್ತು?
    ಕೋರ್ಟ್ ಹಾಲ್‍ಗೆ ಎಂಟ್ರಿ ಕೊಡುತ್ತಲೇ ಭವಿಷ್ಯ ನೆನಪಿಸಿಕೊಂಡು ಕಣ್ಣೀರು ಹಾಕಿ ನನ್ನನ್ನು ಮನ್ನಿಸಬೇಕು. ದಯವಿಟ್ಟು ನನ್ನ ಮೇಲೆ ಕನಿಕರ ತೋರಿ ಕನಿಷ್ಠ ಶಿಕ್ಷೆ ವಿಧಿಸಿ. ನನ್ನ ನಂಬಿರುವ ಜನಕ್ಕೆ ಮತ್ತು ಸಮಾಜದ ಸೇವೆ ಸಲ್ಲಿಸಬೇಕಿದೆ. ಪ್ಲೀಸ್ ದಯವಿಟ್ಟು ನನ್ನನ್ನು ಕ್ಷಮಿಸಿ ಸಣ್ಣ ಪ್ರಮಾಣದ ಶಿಕ್ಷೆ ನೀಡಿ.

    ಜಡ್ಜ್ ತೀರ್ಪು ಏನು?
    ಅಪರಾಧಿ ಮಾಡಿದ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆಯೇ ಸರಿ(ಎರಡು ಕೇಸ್‍ನಲ್ಲಿ ತಲಾ ಹತ್ತತ್ತು ವರ್ಷ ಶಿಕ್ಷೆ). ಅಪರಾಧಿಗೆ ಜೈಲಿನಲ್ಲಿ ವಿವಿಐಪಿ ಸವಲತ್ತು ನೀಡುವಂತಿಲ್ಲ. ಅಷ್ಟೇ ಅಲ್ಲದೇ ಬಾಬಾಗೆ ಸಹಾಯಕನನ್ನು ಸಹ ನೀಡುವಂತಿಲ್ಲ. ನಂಬಿಕೆ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠ ಆಗಬೇಕು.

    ರೇಪಿಸ್ಟ್ ಬಾಬಾನ ಮುಂದಿನ ಹಾದಿ ಏನು?
    ಶಿಕ್ಷೆ ಅಮಾನತ್ತಿಡಲು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. 20 ವರ್ಷ ಶಿಕ್ಷೆ ವಿಧಿಸಿರುವುದರಿಂದ ಶಿಕ್ಷೆ ಅಮಾನತ್ತಿನಲ್ಲಿಡುವುದು ಕಡಿಮೆ. ಸದ್ಯಕ್ಕೆ ಜಾಮೀನು ನೀಡುವ ಸಾಧ್ಯತೆ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.