Tag: Cauvery Water Management Authority

  • ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ CWMA ಸೂಚನೆ

    ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ CWMA ಸೂಚನೆ

    ನವದೆಹಲಿ: ತಮಿಳುನಾಡಿಗೆ (Tamil Nadu) 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ (Karnataka) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Manegment Authority) ಸೂಚನೆ ನೀಡಿದೆ.

    ಮಂಗಳವಾರ ಸಭೆ ನಡೆಸಿದ ಪ್ರಾಧಿಕಾರ, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ಹರಿಸಲು ನಿರ್ದೇಶನ ನೀಡಿದೆ. ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯೂ 2.5 ಟಿಎಂಸಿ ನೀರು ಹರಿಸಲು ಶಿಫಾರಸು ಮಾಡಿತ್ತು. ಇದನ್ನೂ ಓದಿ: ಮುಂಗಾರು ಪೂರ್ವದಲ್ಲೇ ಕಾವೇರಿಗೆ ಜೀವಕಳೆ; KRS ಒಳಹರಿವು ಹೆಚ್ಚಳ

    ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ಮಳೆ ಹೆಚ್ಚಾಗಿದ್ದು, ಕಾವೇರಿ (Cauvery River) ಒಡಲಿಗೆ ಜೀವಕಳೆ ಬಂದಿದೆ. ಪರಿಣಾಮ ಕೆಆರ್‌ಎಸ್ (KRS) ಒಳ ಹರಿವು ಹೆಚ್ಚಾಗಿದೆ. ಕಳೆದೊಂದು ವಾರದಲ್ಲಿ 1 ಟಿಎಂಸಿಯಷ್ಟು ನೀರು ಕನ್ನಂಬಾಡಿ ಕಟ್ಟೆ ಸೇರಿದೆ.

    ನೀರಿನ ಬವಣೆಯಿಂದ ಬೆಂದಿದ್ದ ರಾಜ್ಯಕ್ಕೆ ಮಳೆ ಕೊಂಚ ನಿರಾಳ ಮೂಡಿಸಿದೆ. ಈ ಹೊತ್ತಿನಲ್ಲೇ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಸೂಚಿಸಿದೆ. ಇದನ್ನೂ ಓದಿ: ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

  • ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    – ಕರ್ನಾಟಕ ಬಂದ್‌ ನಡುವೆ ರಾಜ್ಯಕ್ಕೆ ಮತ್ತೆ ಕಾವೇರಿ ಶಾಕ್‌

    ನವದಹೆಲಿ: ಕರ್ನಾಟಕದಾದ್ಯಂತ ಕಾವೇರಿ ಕಿಚ್ಚು (Cauvery Issue) ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲೇ ರಾಜ್ಯಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಕ್ಟೋಬರ್‌ 15 ರ ವರೆಗೆ ನಿತ್ಯ 3,000 ಕ್ಯೂಸೆಕ್‌ ನೀರನ್ನು ಹರಿಸಬೇಕು ಎಂದು ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದೆ.

    ನವದೆಹಲಿಯಲ್ಲಿ ಇಂದು (ಶುಕ್ರವಾರ) ಪ್ರಾಧಿಕಾರದ ಅಧ್ಯಕ್ಷ ಎಸ್‌.ಕೆ ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮತ್ತೆ ಸಿಡಬ್ಲ್ಯೂಆರ್‌ಸಿ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿಯಿತು. 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ (Tamil Nadu) ಬಿಡಬೇಕು ಎಂದು ಸೂಚನೆ ನೀಡಿತು. ಆ ಮೂಲಕ CWRC ಆದೇಶ ಪರಿಷ್ಕರಿಸಲು ನಿರಾಕರಿಸಿತು. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ಕರ್ನಾಟಕದ (Karnataka) ಪರ ಎಸಿಎಸ್‌ ರಾಕೇಶ್ ಸಿಂಗ್, ತಮಿಳುನಾಡು ಪರ ತಾಂತ್ರಿಕ ಮುಖ್ಯಸ್ಥ ಸುಬ್ರಮಣಿ ಸಭೆಯಲ್ಲಿ ಭಾಗಿಯಾಗಿದ್ದರು. ಎರಡು ರಾಜ್ಯಗಳಿಂದ ಅಧಿಕಾರಿಗಳ ತಂಡ ಉಪಸ್ಥಿತಿ ಇತ್ತು.

    ಕಾವೇರಿ ನೀರು ಹಂಚಿಕೆ ಬಗ್ಗೆ ಚರ್ಚೆ ವೇಳೆ, ತಮಿಳುನಾಡಿಗೆ ನಿತ್ಯ 12,500 ಕ್ಯೂಸೆಕ್ ನೀರು ಬಿಡಬೇಕು. ಮಾಸಿಕ ನಿಗದಿಯಂತೆ ಅಕ್ಟೋಬರ್‌ನಲ್ಲಿ ಬಿಡಬೇಕಾದ 22.14 ಟಿಎಂಸಿ ನೀರನ್ನು ಸಕಾಲಕ್ಕೆ ಬಿಡಬೇಕು. ಕರ್ನಾಟಕದ ಹೊಸ ಕೊರತೆ ಮಾಪನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಪ್ರಾಧಿಕಾರದ ಮುಂದೆ ತಮಿಳುನಾಡು ಮನವಿ ಮಾಡಿತು. ಇದನ್ನೂ ಓದಿ: ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

    CWRC ಆದೇಶ ಪರಿಷ್ಕರಿಸಲು ಕರ್ನಾಟಕ ಸಭೆಯಲ್ಲಿ ಮನವಿ ಮಾಡಿತು. ಸಂಕಷ್ಟ ಸೂತ್ರದ ಅಡಿಯಲ್ಲಿ ಮಾಸಿಕವಾರು ನೀರು ಹಂಚಿಕೆಗೆ ಹೊಸ ಪಟ್ಟಿ ಸಿದ್ಧಪಡಿಸಿರುವ ಕರ್ನಾಟಕ, ಹೊಸ ಹಂಚಿಕೆ ಪ್ರಕಾರ ನೀರು ಹರಿಸಲು ಮನವಿ ಮಾಡಿತು. ಕರ್ನಾಟಕದ ಮನವಿಯನ್ನು ಪರಿಗಣಿಸದಂತೆ ತಮಿಳುನಾಡು ಒತ್ತಡ ಹಾಕಿತು.

    ಎರಡೂ ಕಡೆಯ ಮನವಿ ಆಲಿಸಿದ ಪ್ರಾಧಿಕಾರ ಕೊನೆಗೆ CWRC ಆದೇಶವನ್ನು ಎತ್ತಿ ಹಿಡಿಯಿತು. 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಿತು. ಸಿಡಬ್ಲ್ಯೂಆರ್‌ಸಿ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಅ.15 ರ ವರೆಗೂ ನೀರು ಹರಿಸಬೇಕು ಎಂದು ತಿಳಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ – ಜಿ ಪರಮೇಶ್ವರ್

    ಕಾವೇರಿ ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ – ಜಿ ಪರಮೇಶ್ವರ್

    ಬೆಂಗಳೂರು: ಕಾವೇರಿ ನೀರಿಗಾಗಿ ಹೋರಾಟ (Cauvery Protest) ಮಾಡುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಎಚ್ಚರಿಕೆ ನೀಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ (Supreme Court) ತೀರ್ಪಿನಿಂದ ಮಂಡ್ಯ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಆಗ್ತಿದೆ. ಪ್ರತಿಭಟನೆ ಮಾಡೋದು ಅವರ ಹಕ್ಕು. ಆದರೆ ಪ್ರತಿಭಟನೆ ವೈಲೆಂಟ್ ಆಗಬಾರದು. ಅಹಿತಕರ ಘಟನೆ ಆದ್ರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮೀನು ಮಾರುತ್ತಿದ್ದ ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ- ಕಣ್ಣೀರಾಕಿದ ತಾಯಿ!

    ತಮಿಳುನಾಡಿಗೆ (TamilNadu) ನೀರು ಬಿಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಸಚಿವರು, ಸುಪ್ರೀಂ ಕೋರ್ಟ್ ತೀರ್ಪು ಸರ್ಕಾರವನ್ನ ತೊಂದರೆಗೆ ಸಿಲುಕಿಸಿದೆ. ನಮ್ಮಲ್ಲಿ ನೀರೇ ಇಲ್ಲ. ಇಂತಹ ಸಮಯದಲ್ಲಿ ನಮ್ಮ ಅಹವಾಲನ್ನ ಸರಿಯಾದ ರೀತಿಯಲ್ಲಿ ನಾವು ಕೇಳಿದ್ವಿ. ನಮ್ಮ ಕಷ್ಟಗಳನ್ನ ಅರ್ಥ ಮಾಡಿಕೊಳ್ಳದ ತೀರ್ಪು ಇದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿತ್ತು. ಇದಕ್ಕೆ ಬೇಕಾದ ದಾಖಲಾತಿಗಳನ್ನ ನಮ್ಮ ವಕೀಲರು ಕೋರ್ಟ್‌ಗೆ ನೀಡಿದ್ದರು. KRS ಡ್ಯಾಂ ನಲ್ಲಿ 20 TMC ನೀರು ಇದೆ. 10 TMC ಡೆಡ್ ಸ್ಟೋರೇಜ್ ಹೊರತುಪಡಿಸಿದ್ರೆ, ಉಳಿಯೋದು 10 TMC ಮಾತ್ರ. ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಸಾಧ್ಯವಿಲ್ಲ. ಬೆಳೆಗಳಿಗೆ, ಕುಡಿಯೋಕೆ ನೀರು ಇಲ್ಲ. ಕನಿಷ್ಠ ಪಕ್ಷ ಕುಡಿಯುವ ನೀರಿಗಾದ್ರು ಕೋರ್ಟ್ ಅವಕಾಶ ಕೊಡಬೇಕಾಗಿತ್ತು ಎಂದರು.

    ನೀರು ಇದ್ದರೆ ಬಿಡಬಹುದು. ನೀರೇ ಇಲ್ಲದೆ ಬಿಡೋದು ಹೇಗೆ. ನಮಗೆ ಸಂಕಷ್ಟ ಸೂತ್ರವೇ ಇಲ್ಲ. ಸಂಕಷ್ಟ ಸೂತ್ರ ಮಾಡೋಕೆ‌ ಯಾರಿಗೆ ಅಥಾರಿಟಿ ಇದೆಯೋ ಅದನ್ನ ಮಾಡಬೇಕು. ಹೀಗೆ ಆದ್ರೆ ಎಷ್ಟು ವರ್ಷ ಹೊಗೋದು. ಹೀಗಾಗಿ ಒಂದು ಸಂಕಷ್ಟ ಸೂತ್ರ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ: ಬೊಮ್ಮಾಯಿ ಆಕ್ರೋಶ 

    INDIA (ಇಂಡಿಯಾ) ಒಕ್ಕೂಟಕ್ಕಾಗಿ ಸರ್ಕಾರ ಕರ್ನಾಟಕದ ಹಿತ ಬಲಿಕೊಟ್ಟಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತ ಬಲಿ ಕೊಡಬೇಕಿದ್ರೆ ನೀರು ಬಿಟ್ಟು ಬಿಡಬೇಕಿತ್ತು. ನಾವು ಆ ರೀತಿ ಮಾಡಲಿಲ್ಲ. ಒಳ ಒಪ್ಪಂದ ಮಾಡಿಕೊಳ್ಳೋ ಅವಶ್ಯಕತೆಯೂ ನಮಗೆ ಇಲ್ಲ. ಅದು ಸಾಧ್ಯವೂ ಇಲ್ಲ. ಬಿಜೆಪಿ ಅವರು ರಾಜಕೀಯ ಲಾಭಕ್ಕೆ ನಮ್ಮ ಮೇಲೆ ಆರೋಪ ಮಾಡಬಹುದು. ನಮಗೆ ಅದರ ಅವಶ್ಯಕತೆ ಇಲ್ಲ ಎಂದರು.

    ಇನ್ನು ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಸ್ಟಾಲಿನ್‌ಗೆ ಹೇಳಲಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿ ಅವರಿಗೆ ಏನು ಅಥಾರಿಟಿ ಇದೆ? ಸೋನಿಯಾ ಗಾಂಧಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದಿದ್ದರೆ ಅವರ ಕೈಯಲ್ಲಿ ಹೇಳಿಸಬಹುದಿತ್ತು. ಅವರ ಮಾತು ಯಾಕೆ ಸ್ಟಾಲಿನ್ ಕೇಳ್ತಾರೆ. ಕೇವಲ ರಾಜಕೀಯಕ್ಕಾಗಿ ಮಾತ್ರ ಅವರು ಹೀಗೆ ಆರೋಪ ಮಾಡ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಹಿತ ಕಾಪಾಡುತ್ತೇವೆ ಎಂದು ನುಡಿದರು.

    ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ನೀರಾವರಿ ಸಚಿವರು ದೆಹಲಿಯಲ್ಲಿ ಇದ್ದಾರೆ ಅವರು ಬಂದ ಮೇಲೆ ಚರ್ಚೆ ಮಾಡಿ ಏನ್ ಮಾಡೋದು ಅಂತ ತೀರ್ಮಾನ ಮಾಡ್ತೀವಿ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ ಸರ್ಕಾರಕ್ಕೆ ಮತ್ತೆ ಕಾವೇರಿ ಶಾಕ್ – ತ.ನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಆದೇಶ

    ಕರ್ನಾಟಕ ಸರ್ಕಾರಕ್ಕೆ ಮತ್ತೆ ಕಾವೇರಿ ಶಾಕ್ – ತ.ನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಆದೇಶ

    ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಲಾಗಿದೆ. ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ‌ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಲಾಗಿದೆ.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಇಂದು (ಸೋಮವಾರ) ಸಭೆ ನಡೆಸಲಾಯಿತು. ಸಭೆಯಲ್ಲಿ, ಎರಡು ರಾಜ್ಯಗಳನ್ನು ನಿಭಾಯಿಸಲು ಸಿಡಬ್ಲ್ಯೂಆರ್‌ಸಿ ಆದೇಶ ಪಾಲಿಸಬೇಕು. 15 ದಿನ 5,000 ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಸರ್ವ ಪಕ್ಷ ನಿಯೋಗ ಭೇಟಿಗೆ ಕೇಂದ್ರ ಸಮಯ ಕೊಡ್ತಿಲ್ಲ: ಡಿಕೆಶಿ

    ಸಭೆ ಆರಂಭದ ವೇಳೆ, ನೀರಿಗಾಗಿ ತಮಿಳುನಾಡು ಪಟ್ಟು ತೀವ್ರಗೊಳಿಸಿತ್ತು. ನಿತ್ಯ 12,500 ಕ್ಯೂಸೆಕ್ ನೀರು ಹರಿಸಲು ಪಟ್ಟು ಹಿಡಿದಿತ್ತು. ಆದರೆ ನೀರು ನಿರ್ವಹಣಾ ಪ್ರಾಧಿಕಾರ, ಸಿಡಬ್ಲ್ಯೂಆರ್‌ಸಿ ಆದೇಶವನ್ನು ಮುಂದುವರಿಸುವಂತೆ ಸೂಚಿಸಿದೆ.

    ಪ್ರಾಧಿಕಾರದ ಆದೇಶ ತಮಿಳುನಾಡಿನ ಪರ ಬಂದಿದೆ. ಈ ಆದೇಶದಿಂದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಮತ್ತೆ ಕಾವೇರಿ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ರಾಜ್ಯದ ಜನರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡ್ತಿದೆ: ಕುಮಾರಸ್ವಾಮಿ

    ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ಹಾಜರಿದ್ದರು. 24ನೇ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಜಲಸಂಪನ್ಮೂಲ ಕಾರ್ಯದರ್ಶಿ ಸಂದೀಪ್ ಸಸೇನಾ, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಕೇರಳದ ಅಧಿಕಾರಿಗಳೂ ಖುದ್ದು ಹಾಜರಿದ್ದರು.

    ಕರ್ನಾಟಕ ಮತ್ತು ಪುದುಚೇರಿಯ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು. ಸುಮಾರು 2 ಗಂಟೆಗಳ ಕಾಲ ಸಭೆ ನಡೆಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳುನಾಡಿಗೆ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ

    ತಮಿಳುನಾಡಿಗೆ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ

    ನವದೆಹಲಿ: ತಮಿಳುನಾಡಿಗೆ (Tamil Nadu) ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಸೂಚನೆ ನೀಡಿದೆ. ದಿನಕ್ಕೆ 10 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ತಿಳಿಸಿದೆ.

    ದಿನಕ್ಕೆ 10 ಸಾವಿರ ಕ್ಯೂಸೆಕ್‌ನಂತೆ ಹದಿನೈದು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಲು ಪ್ರಾಧಿಕಾರ ಹೇಳಿದೆ. ಆದರೆ ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ (Karnataka) ಒಪ್ಪಿಗೆ ಸೂಚಿಸಿಲ್ಲ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆ ಆಗಸ್ಟ್ 22 ರ ವರೆಗೂ ನಿತ್ಯ 8,000 ಕ್ಯೂಸೆಕ್‌ ನೀರು ಬಿಡುವುದಾಗಿ ಕರ್ನಾಟಕ ತಿಳಿಸಿದೆ. ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಟಿಎಂಸಿ ರಕ್ತದೊಂದಿಗೆ ಆಟವಾಡಿದೆ: ಮೋದಿ ವಾಗ್ದಾಳಿ

    ನಿತ್ಯ 15 ಸಾವಿರ ಕ್ಯೂಸೆಕ್ ನೀರಿಗಾಗಿ ತಮಿಳುನಾಡು ಬೇಡಿಕೆ ಇಟ್ಟಿತ್ತು. ನೀರು ಬಿಡದಿದ್ದರೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಕನಿಷ್ಠ 10 ಸಾವಿರ ಕ್ಯೂಸೆಕ್‌ ನೀರು ಬಿಡಲು ಪ್ರಾಧಿಕಾರ ಸೂಚನೆ ನೀಡಿತ್ತು.

    ನೀರಿನ ಅಭಾವ ಹಿನ್ನೆಲೆ ನಿತ್ಯ 8,000 ಕ್ಯೂಸೆಕ್ ಬಿಡುವುದಾಗಿ ಕರ್ನಾಟಕ ಹೇಳಿತ್ತು. ಹೀಗಾಗಿ ಕರ್ನಾಟಕದ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಂದ್ – ಪ್ರಾಧಿಕಾರದ ವಿರುದ್ಧ ರೈತರ ಆಕ್ರೋಶ

    ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಂದ್ – ಪ್ರಾಧಿಕಾರದ ವಿರುದ್ಧ ರೈತರ ಆಕ್ರೋಶ

    ಮಂಡ್ಯ: ಕಳೆದ 15 ದಿನಗಳಿಂದ ನಾಲೆಗೆ ನೀರು ಬಿಡುಗಡೆ ಮಾಡುತ್ತಿದ್ದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಏಕಾಏಕಿ ನಾಲೆಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಿದೆ. ಪ್ರಾಧಿಕಾರ ಈ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಲೆಗೆ ನೀರು ನಿಲ್ಲಿಸಿರುವುದನ್ನು ಖಂಡಿಸಿ ನದಿ ನೀರಿನಲ್ಲಿ ಇಳಿದು ಪ್ರತಿಭಟನೆ ನಡೆಸಿದ ರೈತರು, ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

    ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕಳೆದ 15 ದಿನದಿಂದ ನಾಲೆಗಳಿಗೆ ನೀರು ಬಿಡಲಾಗುತಿತ್ತು. ಇಂದು ಬೆಳಗ್ಗೆ ನಾಲೆಗಳ ಮೂಲಕ 2,911 ಕ್ಯೂಸೆಕ್ ನೀರನ್ನು ರೈತರ ಬೆಳೆಗೆ ಹರಿಸಲಾಗಿತ್ತು. ಆದರೆ ಇಂದು ಸಂಜೆಯಿಂದ ಏಕಾಏಕಿ ನೀರು ಬಿಡುವುದನ್ನ ಸ್ಥಗಿತಗೊಳಿಸಲಾಗಿದೆ. ಆದರೆ ತಮಿಳುನಾಡಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಈ ಮೂಲಕ ಕಾವೇರಿ ನದಿ ನೀರು ಪ್ರಾಧಿಕಾರದಿಂದ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಮೊದಲು ಮಂಡ್ಯ ರೈತರ ಹಿತಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಮುಂದಾಗಬೇಕೆಂದು ಒತ್ತಾಯ ಮಾಡಿದ ರೈತರು, ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಸದ್ಯ ನಾಲೆಗಳಿಗೆ ಕೇವಲ 50 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಆದರೆ ಕೆಆರ್ ಅಣೆಕಟ್ಟಿನಿಂದ ಹೊರ ಹರಿವಿನಲ್ಲಿ 6080 ಕ್ಯೂಸೆಕ್ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೂಡಲೇ ನಾಲೆಗೆ ನೀರು ಬಿಟ್ಟು, ರೈತರಿಗೆ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಸೂಕ್ತ ಸೂಚನೆ ನೀಡಬೇಕು. ಈಗ ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ನೀಡು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಅಣೆಕಟ್ಟೆ ಗರಿಷ್ಠ ಮಟ್ಟ 124.80 ಅಡಿ ಇದ್ದು ಇಂದು 83.60 ಅಡಿ ನೀರು ಸಂಗ್ರಹಗೊಂಡಿದೆ. 5,661 ಕ್ಯೂಸೆಕ್ ಒಳ ಹರಿವು ಇದ್ದರೆ 6130 ಕ್ಯೂಸೆಕ್ ಹೊರ ಹರಿವು ಇದೆ.

  • ಕರ್ನಾಟಕ ವಾದಕ್ಕೆ ಮನ್ನಣೆ – ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಏನಾಯ್ತು?

    ಕರ್ನಾಟಕ ವಾದಕ್ಕೆ ಮನ್ನಣೆ – ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಏನಾಯ್ತು?

    ನವದೆಹಲಿ: ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆಯಯಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

    ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇಂದು ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವನ್ನು ಪರಿಗಣಿ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ.

    ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಮಸೂದ್ ಹುಸೇನ್ ಅವರ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿ ಸಭೆ ನಡೆಯಿತು. ಪ್ರಾಧಿಕಾರದ ಮುಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಅವರು ಮಾನ್ಸೂನ್ ಮಳೆಯ ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ವರದಿಯನ್ನು ಸಲ್ಲಿಸಿದ್ದರು.

    ಈ ಅಂಶಗಳನ್ನು ಪರಿಗಣಿಸಿರುವ ಮಂಡಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾದರೆ ಮಾತ್ರ ನೀರು ಹರಿಸಲು ಸೂಚಿಸಿದೆ. ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ಪುದುಚೇರಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು.

    ಜೂನ್ ತಿಂಗಳಿನಲ್ಲಿ ಕರ್ನಾಟಕ 9.19 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಿತ್ತು. ಈಗಾಗಲೇ ಕೇವಲ 1.72 ಟಿಎಂಸಿ ನೀರನ್ನು ಬಿಡುಗಡೆ ಮಾಡಿತ್ತು. ಬಾಕಿ 7.47 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಲು ತಮಿಳುನಾಡು ಒತ್ತಾಯ ಮಾಡಿತ್ತು. ಅಲ್ಲದೇ ಜುಲೈ ತಿಂಗಳ ಕೋಟಾದಲ್ಲಿ 31 ಟಿಎಂಸಿ ನೀರು ಬಿಡಬೇಕಿದೆ.

    ಸಭೆಯಲ್ಲಿ ತಮಿಳುನಾಡು ಜೂನ್ ತಿಂಗಳು ಮಾತ್ರವಲ್ಲದೇ ಜುಲೈ ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಬೇಕಿದ್ದ ಪಾಲಿನ 31 ಟಿಎಂಸಿ ನೀರು ಹರಿಸುವಂತೆ ಒತ್ತಡ ಹಾಕಿತ್ತು. ತಮಿಳಯನಾಡಿನ ರೈತರು ಕಾವೇರಿ ನೀರು ನೆಚ್ಚಿಕೊಂಡಿದ್ದು, ಕುರುವೈ ಬೆಳೆಗಾಗಿ ರೈತರು ಮೆಟ್ಟೂರು ಜಲಾಶಯ ಅವಲಂಬಿಸಿದ್ದಾರೆ. ಆದರೆ ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜೂನ್ 30 ಒಳಗೆ ಸಂಪೂರ್ಣ ನೀರನ್ನು ಬಿಡುವಂತೆ ಸೂಚಿಸಿಲು ತಮಿಳುನಾಡು ಕೋರಿತ್ತು. ಇದರಂತೆ ಜೂನ್ ಹಾಗೂ ಜುಲೈ ತಿಂಗಳ ಅವಧಿಯಲ್ಲಿ ತಮಗೆ ಬಿಡುಗಡೆ ಮಾಡಬೇಕಿದ್ದ ಒಟ್ಟು 40 ಟಿಎಂಸಿ ನೀರನ್ನು ತಮಿಳುನಾಡು ಕೇಳಿತ್ತು.

    ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕಾವೇರಿ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ, ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಮುಂದೆ ಮಳೆ ಚೆನ್ನಾಗಿ ಬಂದರಷ್ಟೇ ನೀರು ಬಿಡಲಾಗುವುದು. ಒಂದೊಮ್ಮೆ ಮುಂಗಾರು ಮತ್ತಷ್ಟು ವಿಫಲವಾದರೆ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗುವ ಅಂಶಗಳನ್ನು ತಿಳಿಸಿ ಕರ್ನಾಟಕ ಪ್ರತಿವಾದ ಮಂಡಿಸಿತ್ತು.

  • ನಿಗದಿಗಿಂತಲೂ ಹೆಚ್ಚು ಟಿಎಂಸಿ ನೀರು ಕೇಳಿದ ತಮಿಳುನಾಡು: ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಇಂದು ಏನಾಯ್ತು?

    ನಿಗದಿಗಿಂತಲೂ ಹೆಚ್ಚು ಟಿಎಂಸಿ ನೀರು ಕೇಳಿದ ತಮಿಳುನಾಡು: ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಇಂದು ಏನಾಯ್ತು?

    ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡಿನಿಂದ ಮತ್ತೆ ಖ್ಯಾತೆ ಆರಂಭವಾಗಿದ್ದು, ರಾಜ್ಯಕ್ಕೆ 34 ಟಿಎಂಸಿ ನೀರು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರದ ಎದುರು ಪ್ರಸ್ತಾವನೆ ಸಲ್ಲಿಸಿದೆ.

    ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಇಂದು ನವದೆಹಲಿಯಲ್ಲಿ ಮೊದಲ ಸಭೆ ನಡೆಸಲಾಯಿತು. ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ತನ್ನ ಪ್ರಸ್ತಾವನೆ ಸಲ್ಲಿಸಿದೆ. ತಿಂಗಳುವಾರು ಹಂಚಿಕೆ ಪೈಕಿ ಜುಲೈ ನಲ್ಲಿ 34 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು, ಈ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲು ತಮಿಳುನಾಡಿದ ಪ್ರತಿನಿಧಿ ಎಸ್.ಕೆ ಪ್ರಭಾಕರನ್ ಮನವಿ ಮಾಡಿದರು.

    ತಮಿಳುನಾಡು ಮಾಡಿದ ಮನವಿಯನ್ನು ತಿರಸ್ಕರಿಸಿದ ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್, ನೀರು ಬಿಡಲು ಒಪ್ಪಿಗೆ ಸೂಚಿಸದೆ ಸಭೆಯಿಂದ ಹೊರ ಬಂದರು. ನ್ಯಾಯಬದ್ಧವಾಗಿ ಕರ್ನಾಟಕ ಜುಲೈ ತಿಂಗಳ ಪಾಲು 31.24 ಟಿಎಂಸಿ ನೀರನ್ನು ಹರಿಸಬೇಕು. ಆದರೆ 34 ಟಿಎಂಸಿ ನೀರನ್ನು ಕೇಳುವ ಮೂಲಕ ತಮಿಳುನಾಡು ಕಾಲುಕೆರೆದು ಜಗಳಕ್ಕೆ ನಿಂತಿದೆ ಎಂದರು.

    ಸಭೆಯಲ್ಲಿ ಚರ್ಚೆ ಬಳಿಕ ಮಾತನಾಡಿದ ಪ್ರಾಧಿಕಾರ ಅಧ್ಯಕ್ಷ ಮಸೂದ್ ಹುಸೈನ್, ಸುಪ್ರೀಂ ಕೋರ್ಟ್ 14.75 ಟಿಎಂಸಿ ನೀರನ್ನು ಕಡಿತಗೊಳಿಸಿತ್ತು. ಈಗ ಹರಿಸಬೇಕಾದ ನೀರಿನ ಪ್ರಮಾಣವನ್ನು ತಿಂಗಳುವಾರು ಹಂಚಿಕೆ ಮಾಡಿ ಮುಂದಿನ ಸಭೆಯಲ್ಲಿ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬುದು ತೀರ್ಮಾನ ಮಾಡುತ್ತೆವೆ ಎಂದರು.

    ಸಭೆಯಲ್ಲಿ ಏನು ಚರ್ಚೆ ಆಯ್ತು?
    ನವದೆಹಲಿಯ ಕೇಂದ್ರ ಜಲ ಆಯೋಗ ಕಚೇರಿಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಕಾವೇರಿ ಕಣಿವೆಯ ರಾಜ್ಯದ ಹಾಗೂ ಕೇಂದ್ರ ಸರ್ಕಾರ ಪ್ರತಿನಿಧಿಗಳು ಭಾಗಿಯಾಗಿ ಐದು ಗಂಟೆಗಳ ಚರ್ಚೆ ನಡೆಸಿದರು.

    ಸಭೆ ಆರಂಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು. ಕಾವೇರಿ ನದಿಯ ಎಂಟು ಜಲಾಶಯಗಳ ನಿರ್ವಹಣೆ ಹಾಗೂ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿಯೋಜನೆ, ಸಿಬ್ಬಂದಿಯ ಸೇವಾ ನಿಯಮಗಳು ರೂಪಿಸುವುದು ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕ್ರೋಢಿಕರಣ, ಕಚೇರಿಗಾಗಿ ಸ್ಥಳ ನಿಯೋಜನೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

    ಮಾಹಿತಿ ಸಂಗ್ರಹ: ಕಾವೇರಿ ನದಿ ವ್ಯಾಪ್ತಿಯಲ್ಲಿರುವ ಕೇರಳದ ಬಾಣಾಸುರ ಸಾಗರ, ರಾಜ್ಯದ ಹೇಮಾವತಿ, ಕಬಿನಿ, ಹಾರಂಗಿ, ಕೃಷ್ಣರಾಜಸಾಗರ, ತಮಿಳುನಾಡಿನ ಭವಾನಿ, ಅಮರಾವತಿ ಮತ್ತು ಮೆಟ್ಟೂರು ಜಲಾಶಯಗಳ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹ ಮಾಡಲಾಯಿತು. ನೀರಿನ ಬಳಕೆ ಸಂಗ್ರಹ ಸಾಮಥ್ರ್ಯ, ಮಳೆಯ ಪ್ರಮಾಣ, ಬೆಳೆಯ ವ್ಯಾಪ್ತಿ ಮತ್ತು ಸ್ಥಳೀಯ ಹಾಗೂ ಕೈಗಾರಿಕಾ ಅಗತ್ಯತೆ ಈ ಸಮಿತಿಯಿಂದಲೇ ಕಾರ್ಯ ನಿರ್ವಹಿಸುವ ಕುರಿತು ಚರ್ಚೆ ನಡೆಯಿತು. ಜೂನ್ 1 ರಿಂದ ಜೂನ್ 30 ರವರೆಗೆ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿ ಪಡೆದ ಪ್ರಾಧಿಕಾರ, ಈ ಅವಧಿಯಲ್ಲಿ ಮಳೆಯ ಕೊರತೆ ಇದ್ದಲ್ಲಿ ಆ ಬಗ್ಗೆ ಚರ್ಚೆ ನಡೆಸಿ ಮಾಸಿಕ 10 ದಿನಗಳಂತೆ ಮೂರು ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.

    ತಮಿಳುನಾಡು ಖ್ಯಾತೆ ಏನು?
    ಮೊದಲ ಸಭೆಯಲ್ಲೇ ತನ್ನ ಖ್ಯಾತೆ ಆರಂಭಿಸಿದ ತಮಿಳುನಾಡು ಜುಲೈ ತಿಂಗಳ ಪಾಲು 34 ಟಿಎಂಸಿ ನೀರಿಗಾಗಿ ಪ್ರಸ್ತಾವನೆ ಸಲ್ಲಿಸಿತು. ಆದರೆ ತಮಿಳುನಾಡು ಪ್ರಸ್ತಾಪವನ್ನು ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ತಿರಸ್ಕರಿಸಿದರು. ಬಳಿಕ ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸಿ ಈ ಕುರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿ ಸಭೆಯಿಂದ ಹೊರ ಬಂದರು.

    ಅಂದಹಾಗೇ ಸುಪ್ರೀಂಕೋರ್ಟ್ ಆದೇಶದ ಬಳಿಕ ನ್ಯಾಯಬದ್ಧವಾಗಿ ತಮಿಳುನಾಡು 31.24 ಟಿಎಂಸಿ ನೀರು ಕೇಳಬೇಕಿತ್ತು. ಆದರೆ 31.24 ಟಿಎಂಸಿ ಬದಲು 2.5 ಟಿಎಂಸಿ ನೀರು ಹೆಚ್ಚುವರಿ ಕೇಳಿ ಪ್ರಸ್ತಾಪ ಸಲ್ಲಿಸಿದ್ದು, ಜೂನ್ ನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದ ಕಾರಣ ಈಗಾಗಲೇ ಕರ್ನಾಟಕ ಒಂದು ಟಿಎಂಸಿ ನೀರು ತಮಿಳುನಾಡಿಗೆ ಹರಿಸಿದೆ. ಹೀಗಾಗೀ ಉಳಿದ 30.24 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಹರಿಸಬೇಕು. ಆದರೆ ತಮಿಳುನಾಡು ಹೆಚ್ಚುವರಿ ನೀರು ಕೇಳುವ ಮೂಲಕ ಮತ್ತೆ ಕಾಲ್ಕೇರದು ಜಗಳಕ್ಕೆ ನಿಂತಿದೆ.

     

    ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ತೀರ್ಪು ಪ್ರಕಾರ ಜೂನ್ ನಲ್ಲಿ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಟಿಎಂಸಿ ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕಿತ್ತು. ಈ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ವರ್ಷದ ಫೆಬ್ರವರಿ 16 ರಂದು ಐತೀರ್ಪನ್ನು ಸ್ವಲ್ಪ ಬದಲಾಯಿಸಿ 177.75 ಟಿಎಂಸಿ ನೀರನ್ನು ಕರ್ನಾಟಕ ಪ್ರತಿವರ್ಷ ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿತ್ತು. ಅಷ್ಟೇ ಅಲ್ಲದೇ ಯಾವ ತಿಂಗಳಿನಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನು ಕೇಂದ್ರ ನೇಮಿಸುವ ಸಂಸ್ಥೆ ನಿರ್ಧರಿಸಬೇಕು ಎಂದು ಹೇಳಿತ್ತು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
    ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.