Tag: Cauvery River

  • ಅಜ್ಜಿಯ ಅಸ್ಥಿ ಬಿಡಲು ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮೊಮ್ಮಗ

    ಅಜ್ಜಿಯ ಅಸ್ಥಿ ಬಿಡಲು ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮೊಮ್ಮಗ

    ಮಂಡ್ಯ: ಅಜ್ಜಿಯ ಅಸ್ಥಿ ವಿಸರ್ಜನೆ ವೇಳೆ ಯುವಕನೊಬ್ಬ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಬಳಿ ನಡೆದಿದೆ.

    ಬೆಂಗಳೂರಿನ ಗವಿಪುರಂ ನಿವಾಸಿ 31 ವರ್ಷದ ಎನ್.ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋದ ಯುವಕನಾಗಿದ್ದಾನೆ. ಶ್ರೀಪ್ರಸಾದ್‍ನ ಅಜ್ಜಿ ಚಂದ್ರಮತಿ ಮೂರು ದಿನದ ಹಿಂದೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಸದಸ್ಯರೆಲ್ಲ ಶ್ರೀರಂಗಪಟ್ಟಣ ಗೋಸಾಯಿ ಘಾಟ್‍ಗೆ ಬಂದಿದ್ದರು.

    ಈ ವೇಳೆ ವೈದಿಕರ ಮಾರ್ಗದರ್ಶನದಂತೆ ವಿಧಿ ವಿಧಾನ ಮುಗಿಸಿ, ಅಂತಿಮವಾಗಿ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಹಾಗೂ ಆತನ ಭಾವ ಮಯೂರ್ ಕಾವೇರಿ ನದಿಗೆ ಇಳಿದಿದ್ದರು. ಅಸ್ಥಿ ಬಿಟ್ಟ ಬಳಿಕ ನೀರಿನಲ್ಲಿ ಮುಳುಗಲು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮೊದಲೇ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮಯೂರ್ ಅವರನ್ನು ಸ್ಥಳೀಯರು ದಡ ಸೇರಿಸಿದ್ದಾರೆ. ಆದರೆ ಶ್ರೀಪ್ರಸಾದ್ ಕುಟುಂಬಸ್ಥರ ಕಣ್ಣೆದುರೇ ನೀರಿನಲ್ಲಿ ಮುಳುಗಿದ್ದಾರೆ.

    ನದಿ ಅಂಚಿನ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‍ಗಳಲ್ಲಿ ವೈದಿಕರು ಅಂತಿಮ ವಿಧಿ ವಿಧಾನ ನಡೆಸುತ್ತಿದ್ದರು. ನದಿ ಆಳವಿದ್ದರೂ ಹಣದ ಆಸೆಗಾಗಿ ಹೊರ ಜಿಲ್ಲೆಗಳಿಂದ ಬರುವ ಜನರನ್ನು ಪುಸಲಾಯಿಸಿ ಅಪಾಯವನ್ನೂ ಲೆಕ್ಕಿಸದೇ ಅವರಿಂದ ಅಸ್ಥಿ ವಿಸರ್ಜನೆ ಮಾಡಿಸುತ್ತಿದ್ದರು. ಅದರಿಂದಲೇ ಈ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೂರೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಪ್ರವಾಹ ಮುಗಿದರೂ ಅಧಿಕಾರಿಗಳ ಎಡವಟ್ಟಿನಿಂದ ಜೀವಭಯದಲ್ಲೇ ಜನರ ಬದುಕು

    ಪ್ರವಾಹ ಮುಗಿದರೂ ಅಧಿಕಾರಿಗಳ ಎಡವಟ್ಟಿನಿಂದ ಜೀವಭಯದಲ್ಲೇ ಜನರ ಬದುಕು

    ಮಡಿಕೇರಿ: ಕೊಡಗು ಜಿಲ್ಲೆಯ ಮೇಲೆ ಅದ್ಯಾಕೋ ಪ್ರಕೃತಿಯ ಮುನಿಸು ಕಡಿಮೆಯಾದಂತಿಲ್ಲ. ಮಳೆಗಾಲದಲ್ಲಂತೂ ಅಲ್ಲಿನ ಜನರ ಪರಿಸ್ಥಿತಿ ಹೇಳತೀರದಾಗಿದೆ. ಈ ನಡುವೆ ಜಲಮಂಡಳಿ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ನದಿ ಪಾತ್ರದ ಜನ ಜೀವಭಯದಲ್ಲೇ ಬದುಕುವಂತಾಗಿದೆ.

    ಜೀವನದಿ ಕಾವೇರಿಯ ಪ್ರವಾಹ ತಗ್ಗಿದರೂ ಕೊಡಗು ಜಿಲ್ಲೆಯ ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ ಸೋಮವಾರಪೇಟೆಯ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನದಿ ಪಾತ್ರದಲ್ಲಿ ಮಣ್ಣು ಕುಸಿಯುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಎಲ್ಲೆಲ್ಲೂ ಬಿರುಕು ಮೂಡುತ್ತಿದ್ದು, ಭೂಮಿ ಕುಸಿಯತೊಡಗಿದೆ.

    ಕಳೆದ 3 ವರ್ಷಗಳಿಂದಲೂ ಸ್ಥಳೀಯರು ಪ್ರವಾಹದ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಒಳಚರಂಡಿಯ ಪೈಪ್‍ಲೈನ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿರುವುದು ಇದಕ್ಕೆಲ್ಲ ಕಾರಣವಂತೆ. ಪೈಪ್‍ಲೈನ್ ಅಳವಡಿಸಿರುವ ಜಾಗದಲ್ಲಿ ರಸ್ತೆಗಳಲ್ಲಿ ಗುಂಡಿ ಬೀಳುತ್ತಿದೆ. ಲಕ್ಷಾಂತರ ವೆಚ್ಚದಲ್ಲಿ ಮನೆ ಕಟ್ಟಿಕೊಂಡಿದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುವೆಂಪು ಬಡಾವಣೆಯಲ್ಲಿ ಈ ಬಾರಿಯ ಪ್ರವಾಹಕ್ಕೆ ನಂಜುಂಡಸ್ವಾಮಿ ಎಂಬವರ ಮನೆಯ ಗೋಡೆ ಕುಸಿದುಬಿದ್ದಿದೆ. ಇದೇ ರೀತಿ ಅನೇಕ ಮನೆಗಳ ಗೋಡೆಗಳು ಶಿಥಿಲಾವಸ್ಥೆಯಲ್ಲಿದೆ. ಇಷ್ಟೆಲ್ಲಾ ಆದರೂ ಜಿಲ್ಲಾಡಳಿತ ಮಾತ್ರ ಏನೂ ಆಗಿಲ್ಲವೆಂಬಂತೆ ಗಾಢ ನಿದ್ರೆಯಲ್ಲೇ ಇದೆ. ಮನೆ ಕಟ್ಟಿಕೊಂಡು ನೆಮ್ಮದಿಯ ಬದುಕು ಬದುಕಬೇಕು ಅಂದುಕೊಂಡಿದ್ದ ಜನ ಪ್ರವಾಹಕ್ಕೆ ಸಿಕ್ಕಿ ನಲುಗಿ ಹೋಗುತ್ತಿದ್ದಾರೆ. ಇತ್ತ ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

  • ಕೊಡಗಿನಲ್ಲಿ ಪ್ರವಾಹದ ಬಳಿಕವೂ ನದಿ ತೀರದ ಜನರಲ್ಲಿ ಮತ್ತೆ ಅತಂಕ

    ಕೊಡಗಿನಲ್ಲಿ ಪ್ರವಾಹದ ಬಳಿಕವೂ ನದಿ ತೀರದ ಜನರಲ್ಲಿ ಮತ್ತೆ ಅತಂಕ

    ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಶಾಲನಗರಕ್ಕೆ ಕಳೆದ ಮೂರು ವರ್ಷಗಳಿಂದ ಪ್ರವಾಹದ ಭೀತಿ ಎದುರಾಗುತ್ತಲೇ ಇದೆ. ಮಳೆಗಾಲದಲ್ಲಿ ಕಣ್ಣೀರಿನ ಕಡಲಲ್ಲಿ ಕೈ ತೊಳೆಯುವ ನದಿ ತೀರದ ನಿವಾಸಿಗಳು ಪ್ರಸ್ತುತ ಜಲಮಂಡಳಿ ಈ ಹಿಂದೆ ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನದಿ ದಂಡೆಯ ಮಣ್ಣು ಕುಸಿಯುತ್ತಿರುವುದರಿಂದ ಮತ್ತೊಮ್ಮೆ ಆತಂಕ ಎದುರಾಗಿದೆ.

    ಜೀವನದಿ ಕಾವೇರಿಯ ಪ್ರವಾಹ ತಗ್ಗಿದ್ದರೂ ಮಾತ್ರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆಯ ನದಿ ಪಾತ್ರದಲ್ಲಿ ಮಣ್ಣು ಕುಸಿಯುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಶುರುವಾಗಿದೆ.

    ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಪ್ರವಾಹದ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಜಲಮಂಡಳಿ ಅಳವಡಿಸಿದ ಒಳಚರಂಡಿಯ ಪೈಪ್‍ಲೈನ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದೇ ಇಷ್ಟಕ್ಕೆಲ್ಲ ಕಾರಣ. ಪೈಪ್‍ಲೈನ್ ಅಳವಡಿಸಿರುವ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ. ಸಂಚಾರಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಹದಗೆಡುತ್ತಿವೆ. ನದಿ ಪಾತ್ರದಲ್ಲಿ ಅವೈಜ್ಞಾನಿಕವಾಗಿ ಪೈಪ್‍ಲೈನ್ ಮಾಡಿದ್ದೇ ಇದಕ್ಕೆಲ್ಲ ಕಾರಣ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಕುವೆಂಪು ಬಡಾವಣೆಯಲ್ಲಿ ಮಾಜಿ ಸೈನಿಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ವಾಸಿಸುತ್ತಿದ್ದಾರೆ. ಈಗಾಗಲೇ ನಂಜುಂಡಸ್ವಾಮಿ ಅವರ ಮನೆಯ ಗೋಡೆಯೊಂದು ಪ್ರವಾಹಕ್ಕೆ ಕುಸಿದಿದೆ. ಇದೇ ರೀತಿ ಹಲವು ಮನೆಗಳ ತಡೆಗೋಡೆಗಳು ಶಿಥಿಲಾವಸ್ಥೆಯಲ್ಲಿವೆ. ಕಳೆದ ಮೂರು ವರ್ಷಗಳಿಂದ ಪ್ರವಾಹದ ನೀರು ಬಡಾವಣೆಯಲ್ಲಿ ನಿಂತು ಹರಿದು ರಸ್ತೆಗಳು ಕಿತ್ತು ಹೋಗಿದ್ದರೂ ಕೂಡ ಮೂರು ವರ್ಷಗಳಿಂದ ಒಂದೇ ಒಂದು ರಸ್ತೆ ನಿರ್ಮಿಸದ ಜಿಲ್ಲಾಡಳಿತದ ವಿರುದ್ಧವೂ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮನೆಯ ಕನಸು ಇಟ್ಟುಕೊಂಡು ಹಿಂದೆ ಕಡಿಮೆ ದರದಲ್ಲಿ ಸಿಕ್ಕ ಜಾಗದಲ್ಲಿ ಸಿಕ್ಕಂತಹ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡವರಿಗೆ ಕಳೆದ ಮೂರು ವರ್ಷಗಳಿಂದ ಪ್ರವಾಹದ ಭೀತಿ ಎದುರಾಗಿದೆ. ಜೊತೆಗೆ ನಿಧಾನವಾಗಿ ನದಿದಂಡೆ ಕುಸಿಯುತ್ತಿರುವುದಕ್ಕೆ ಜಲಮಂಡಳಿಯ ಅವೈಜ್ಞಾನಿಕ ಕೆಲಸವೂ ಕಾರಣವೆಂದು ಸ್ಥಳೀಯರು ಆರೋಪಿಸುತ್ತಿದ್ದು, ಇದಕ್ಕೆಲ್ಲ ವಾಸ್ತವವಾಗಿ ಯಾರು ಹೊಣೆಗಾರರು ಎನ್ನುವುದೇ ಇದೀಗ ಬಡವಣೆಯ ನಿವಾಸಿಗಳಿಗೆ ಗೊಂದಲವಾಗಿದೆ.

  • ತಗ್ಗಿದ ಆಲಮಟ್ಟಿ ಜಲಾಶಯದ ಒಳಹರಿವು-KRSನಿಂದ 74 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ತಗ್ಗಿದ ಆಲಮಟ್ಟಿ ಜಲಾಶಯದ ಒಳಹರಿವು-KRSನಿಂದ 74 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ವಿಜಯಪುರ/ಮಂಡ್ಯ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆ ಆದ ಹಿನ್ನೆಲೆ ವಿಜಯಪುರದ ಆಲಮಟ್ಟಿ ಜಲಾಯಕ್ಕೆ ಒಳಹರಿವು ಕಡಿಮೆ ಆಗಿದೆ. ಸದ್ಯ ಒಳಹರಿವು 1,80,000 ಕ್ಯೂಸೆಕ್ ದಾಖಲಾಗಿದ್ದು, 1,80,000 ಕ್ಯೂಸೆಕ್ ನೀರನ್ನ ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ.

    ಇನ್ನು ಗರಿಷ್ಠ 123 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 92.59 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ 2 ಲಕ್ಷ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಇಂದು ಒಳಹರಿವು ಕಡಿಮೆ ಆದ ಹಿನ್ನೆಲೆ ಆತಂಕ ಕಡಿಮೆ ಆಗಿದೆ.

    ಕೆಆರ್‍ಎಸ್ ನಿಂದ 74 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಿರುವ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಪ್ರವಾಹದ ಆತಂಕದಲ್ಲಿ ಇವೆ. ಈಗಾಗಾಲೇ ರಂಗನತಿಟ್ಟಿನಲ್ಲಿ ಇರುವ ಬಹುತೇಕ ದ್ವೀಪಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪಕ್ಷಿಗಳು ಆತಂಕದಿಂದ ಮರದ ಮೇಲ್ಭಾಗದಲ್ಲಿ ಇವೆ. ನೀರು ರಂಗನತಿಟ್ಟಿನ ಬೋಟಿಂಗ್‍ವರೆಗೂ ಬಂದಿದೆ.

    ಕೆಆರ್‍ಎಸ್ ಡ್ಯಾಂ ನ ನೀರಿನ ಮಟ್ಟ 119.47 ಅಡಿಗಳಿದ್ದು, ಒಳಹರಿವು-77,950 ಕ್ಯೂಸೆಕ್ ಮತ್ತು ಹೊರ ಹರಿವು-74,560 ಕ್ಯೂಸೆಕ್ ಇದೆ. ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ ಇದೆ.

  • ಹೊಗೇನಕಲ್ ಜಲವೈಭವ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಹೊಗೇನಕಲ್ ಜಲವೈಭವ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    – ಜಮೀನುಗಳಿಗೆ ಕಾವೇರಿ ನೀರು ನುಗ್ಗಿ ಹಾನಿ

    ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಹೊಗೇನಕಲ್‍ನಲ್ಲಿ ಜಲವೈಭವವೇ ಸೃಷ್ಟಿಯಾಗಿದೆ. ಈ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವಿಶಾಲವಾಗಿ ಹರಿಯುತ್ತಾ ಹೊಗೇನಕಲ್ ಬಳಿ ಭೋರ್ಗೆರೆದು ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯ ವರ್ಣನಾತೀತವಾಗಿದೆ. ಕೊಡಗಿನಲ್ಲಿ ಹುಟ್ಟಿ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹರಿದು ಹೊಗೇನಕಲ್ ಬಳಿ ತಮಿಳುನಾಡಿಗೆ ಪ್ರವೇಶಿಸುವ ಕಾವೇರಿಯ ಸೊಬಗು ಈಗ ಇಮ್ಮಡಿಗೊಂಡಿದೆ. ಮಲೆಮಹದೇಶ್ವರ ಬೆಟ್ಟ ಅರಣ್ಯದಲ್ಲಿನ ಬೆಟ್ಟಗುಡ್ಡಗಳ ನಡುವೆ ಬಂಡೆಗಳನ್ನು ಸೀಳಿ ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯವಂತೂ ರುದ್ರರಮಣೀಯವಾಗಿದೆ.

    ಇತ್ತ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ, ದಾಸನಪುರ ಗ್ರಾಮಗಳಲ್ಲಿ ಕಬ್ಬು ಭತ್ತ, ಬಾಳೆ ಬೆಳೆ ಸೇರಿದಂತೆ ನೂರಾರು ಎಕರೆ ಬೆಳೆ ಹಾನಿಗೀಡಾಗಿದೆ.

    ಭತ್ತದ ಸಸಿ ಸಂಪೂರ್ಣ ನಾಶವಾಗಿವೆ, ಹತ್ತಾರು ಪಂಪ್ ಸೆಟ್‍ಗಳು ಜಲಾವೃತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸರ್ಕಾರ ಕಳೆದ ವರ್ಷದ ಬೆಳೆ ಹಾನಿ ಪರಿಹಾರವನ್ನೇ ಸರಿಯಾಗಿ ನೀಡಿಲ್ಲ. ಈ ವರ್ಷ ಪ್ರವಾಹದಿಂದ ನಮ್ಮ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಭರಚುಕ್ಕಿ ಜಲಪಾತ

    ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಭರಚುಕ್ಕಿ ಜಲಪಾತ

    ಚಾಮರಾಜನಗರ: ವರುಣನ ಅಬ್ಬರದಿಂದ ಒಂದೆಡೆ ಅಪಾರ ಆಸ್ತಿಪಾಸ್ತಿ ನಷ್ಟವಾಗಿದ್ದರೆ ಇನ್ನೊಂದೆಡೆ ರುದ್ರರಮಣೀಯ ದೃಶ್ಯಕ್ಕೂ ಸಾಕ್ಷಿಯಾಗಿದೆ.

    ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕು ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಭೋರ್ಗೆರೆದು ಧುಮ್ಮಿಕ್ಕುತ್ತಿದೆ. ಆದರೆ ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ ಇಲ್ಲದಂತಾಗಿದೆ.

    ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಭರಚುಕ್ಕಿ ಜಲಪಾತಕ್ಕೂ ಪ್ರವಾಸಿಗರ ಪ್ರವೇಶ ಇಲ್ಲದಂತಾಗಿದೆ. ಕೊಳ್ಳೇಗಾಲ ತಾಲೂಕು ಶಿವನಸಮುದ್ರದ ಬಳಿ ಗಗನಚುಕ್ಕಿ, ಭರಚುಕಿ ಭೋರ್ಗೆರೆದು ಧುಮ್ಮಿಕುತ್ತಿದೆ.

    ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ 60 ಅಡಿ ಆಳಕ್ಕೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣೆಗಳೆರಡು ಸಾಲದಂತೆ ಭಾಸವಾಗುತ್ತಿದೆ.

    ಪ್ರವಾಸಿಗರಿಗೆ ನಿರ್ಬಂಧ ತೆರುವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಲಪಾತದ ಸೊಬಗು ಸವಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಸಮಿತಿ ಸಭೆ ಕರೆದು ಇನ್ನೆರಡು ದಿನದಲ್ಲಿ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • 40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೋಬ್ಬರಿ 40 ವರ್ಷಗಳ ನಂತರ ಕಾವೇರಿ ನದಿಯಲ್ಲಿ ಈಜಾಡಿ ಸ್ವಲ್ಪ ಕಾಲ ಕಳೆದಿದ್ದಾರೆ. ಇದನ್ನೂ ಓದಿ: ಹೊಸ ಸೈಕಲ್ ಖರೀದಿಸಿದ ಸಿದ್ದರಾಮಯ್ಯ 

    ಡಿ.ಕೆ.ಶಿವಕುಮಾರ್ ಭಾನುವಾರ ಕಾವೇರಿ ನದಿಯಲ್ಲಿ ಈಜಾಡಿ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ತಮ್ಮ ಶಾಲಾ, ಕಾಲೇಜು ದಿನ ಮತ್ತು ತಂದೆಯ ಜೊತೆ ಕಾಲ ಕಳೆದಿದ್ದ ಕೆಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಡಿಕೆಶಿ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

    “40 ವರ್ಷಗಳ ನಂತರ ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದೆ. ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಭಾನುವಾರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿದ ನಂತರ, ತಮ್ಮ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ತಾವು ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬದವರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

     

    ಇತ್ತೀಚೆಗಷ್ಟೆ ಡಿ.ಕೆ ಶಿವಕುಮಾರ್ ತನ್ನ ಮಗಳು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಸರಳವಾಗಿ ಮನೆಯಲ್ಲಿಯೇ ಮಾಡಿದ್ದರು. ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.

    ಈಗ ಕೇವಲ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  • ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಮಹಾಮಳೆಗೆ ಕೊಡಗಿನ ಕಾವೇರಿ ನದಿ ತೀರದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

    ಕೊಪ್ಪದ ಕಾವೇರಿ ಸೇತುವೆ ಕೆಳ ಭಾಗದಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಜೆಸಿಬಿಯಲ್ಲಿ ಕುಳಿತ ಶಾಸಕ ರಂಜನ್ ಹೂಳೆತ್ತುವ ಕೆಲಸಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತಾನಾಡಿದ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಣ್ಣ ಮಟ್ಟದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಹೂಳೆತ್ತಲು ಅವಕಾಶ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಕೆಲಸಕ್ಕೆ ಕಳೆದ ಸಿಎಂ ಕುಮಾರಸ್ವಾಮಿ ಅವಧಿಯಲ್ಲೇ 75 ಕೋಟಿ ಮೀಸಲಿಡಲಾಗಿತ್ತು. ಅಂದಾಜು ಪಟ್ಟಿ ತಯಾರಿಸಿದಾಗ 130 ಕೋಟಿಯಷ್ಟು ಅಗತ್ಯವಿತ್ತು ಎಂದರು.

    ಕೇವಲ ಕುಶಾಲನಗರ ಮಾತ್ರವಷ್ಟೇ ಅಲ್ಲ, ಹಟ್ಟಿ ಹೊಳೆ, ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ ಭಾಗದಲ್ಲಿ ಹೊಳೆಯಲ್ಲಿ ಹೂಳು ತುಂಬಿದೆ. ಪರಿಣಾಮ ಹೊಳೆ ನೀರು ದಿಕ್ಕು ಬದಲಿಸಿ ಹರಿಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರವಾಹದಲ್ಲಿ ಜಿಲ್ಲೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಪ್ರವಾಹದಿಂದ ಕುಶಾಲನಗರ ಮುಳುಗಬೇಕಾದ ಪರಿಸ್ಥಿತಿಯನ್ನು ನೋಡಬೇಕಾಯಿತು. ಪ್ರವಾಹ ತಡೆಗಟ್ಟುವ ಉದ್ದೇಶದ ಸೇವಾ ಭಾವನೆಯಿಂದ ಹೂಳು ತೆಗೆಯುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ಲೋಪಗಳು ಆಗದಂತೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

  • ಕೊರೊನಾ ಎಫೆಕ್ಟ್ – ಸ್ವಚ್ಛವಾಗಿ ಹರಿಯುತ್ತಿದ್ದಾಳೆ ಜೀವನದಿ ಕಾವೇರಿ

    ಕೊರೊನಾ ಎಫೆಕ್ಟ್ – ಸ್ವಚ್ಛವಾಗಿ ಹರಿಯುತ್ತಿದ್ದಾಳೆ ಜೀವನದಿ ಕಾವೇರಿ

    ಮಡಿಕೇರಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ, ಪ್ರಕೃತಿ ಮಾತೆ ಮಾತ್ರ ಸಂತಸ ಪಡುತ್ತಿದ್ದಾಳೆ.

    ಮಹಾಮಾರಿಯಿಂದ ಜನರನ್ನು ರಕ್ಷಿಸಲು ಪ್ರಧಾನಿ ಮೋದಿ ಅವರು ದೇಶವನ್ನೇ ಲಾಕ್‍ಡೌನ್ ಮಾಡಿರುವುದರಿಂದ ದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಕೋಟ್ಯಂತರ ವಾಹನಗಳ ಸದ್ದಿಲ್ಲ. ಕಾರ್ಖಾನೆಗಳ ಹೊಗೆ ತ್ಯಾಜ್ಯವೂ ಇಲ್ಲ. ಹೀಗಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯಗಳಿಗೆ ಬ್ರೇಕ್ ಬಿದ್ದಿದೆ.

    ಮತ್ತೊಂದೆಡೆ ಜನರ ಓಡಾಟವೂ ಇಲ್ಲದಿರುವುದರಿಂದ ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುತ್ತಿರುವ ಕನ್ನಡನಾಡಿನ ಜೀವನದಿ ಕಾವೇರಿ ತನ್ನಿಂದ ತಾನೇ ಸ್ವಚ್ಛವಾಗಿದ್ದಾಳೆ. ಬೇಸಿಗೆಯಲ್ಲಂತೂ ಕೊಡಗಿನಲ್ಲೇ ಕಾವೇರಿ ನದಿ ನೀರು ಸಿ ಕೆಟಗರಿಯಲ್ಲಿ ಇರುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಈಗ ಬಿ ಕೆಟಗರಿಯಲ್ಲಿ ಹರಿಯುತ್ತಿದೆ.

    ಸಾಕಷ್ಟು ಹೊಟೇಲ್, ರೆಸಾರ್ಟ್‍ಗಳಲ್ಲಿ ಬರುತ್ತಿದ್ದ ಎಲ್ಲಾ ರೀತಿಯ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿತ್ತು. ಆದರೆ ಈಗ ಲಾಕ್‍ಡೌನ್‍ನಿಂದಾಗಿ ಎಲ್ಲ ರೆಸಾರ್ಟ್ ಹೊಟೇಲ್‍ಗಳು ಬಂದ್ ಆಗಿವೆ. ಹೀಗಾಗಿ ಕಾವೇರಿ ಸ್ವಚ್ಛವಾಗಿದ್ದಾಳೆ. ಈಗ ಕಾವೇರಿ ನದಿಯ ನೀರು ಕೊಡಗಿನಲ್ಲಿ ಬಿ ಕೆಟಗರಿಯಲ್ಲಿ ಹರಿಯುತ್ತಿರುವುದು ಜನತೆಯ ಸಂತಸಕ್ಕೆ ಕಾರಣವಾಗಿದೆ.

  • ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಚಾಮರಾಜನಗರ: ಮಲೆ ಮಹದೇಶ್ವರನ ದರ್ಶನಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ನಡೆದೆ ಬರುತ್ತಾರೆ. ಅಪಾಯಕಾರಿಯಾಗಿ ಹರಿಯುತ್ತಿರೋ ಕಾವೇರಿ ನದಿಯನ್ನು ಲೆಕ್ಕಿಸದೆ ನಡೆದೆ ಹೋಗುತ್ತಾರೆ. ಒಬ್ಬಿಬ್ಬರಲ್ಲ ಲಕ್ಷಾಂತರ ಮಂದಿ ನದಿಯನ್ನು ದಾಟುತ್ತಾರೆ. ಹೀಗಾಗಿ ಕಾವೇರಿ ನದಿಗೆ ಸೇತುವೆ ಮಾಡಬೇಕೆಂಬುದು ಭಕ್ತರ ಬೇಡಿಕೆಯಾಗಿದ್ದು, ಅವರ ಬೇಡಿಕೆ ಈಡೇರುತ್ತಾ? ಅವರು ನಡೆದು ಹೋಗುವುದು ಯಾವ ಪವಾಡ ಪುರುಷ ಮಹದೇಶ್ವರನ ಭಕ್ತರ ಅಳಲು ಈಡೇರುತ್ತಾ ಅಂತ ಕಾಯುತ್ತಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಾಡ ಪುರುಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಅದರಲ್ಲೂ ಶಿವರಾತ್ರಿ ದಿನವಾದ ಇಂದು ಎತ್ತ ನೋಡಿದರು ಜನ ಸಾಗರವೇ ಕಾಣಸಿಗುತ್ತದೆ. ಎಲ್ಲಿ ಹೋದರು ಹರ ಹರ ಮಹದೇವನ ಸದ್ದು ಜೋರಾಗಿದೆ. ಇಂತಹ ಮಲೆ ಮಾದಪ್ಪನ ದರ್ಶನಕ್ಕೆ ಕಾಡು-ಮೇಡು, ನದಿ ಲೆಕ್ಕಿಸದೆ ಜೀವ ಕೈಲಿಡಿದು ಲಕ್ಷಾಂತರ ಮಂದಿ ಭಕ್ತರು ನಡೆದು ಬರೋದನ್ನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಅದರಲ್ಲೂ ಕೂಡ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಜನರು ಮಾದಪ್ಪನಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಸನ್ನಿದಾನಕ್ಕೆ ಬಂದು ಹರಕೆ ತೀರಿಸುತ್ತಾರೆ.

    ರಾಮನಗರ ಜಿಲ್ಲೆಯ ಸಂಗಮ ಸಮೀಪದಲ್ಲಿರುವ ಮೇಕೆದಾಟು ಮೂಲಕ ರಭಸವಾಗಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಪ್ರಾಣದ ಹಂಗು ತೊರೆದು ನದಿಯಲ್ಲಿ ನಡೆದು ಭಕ್ತರು ಮಲೆ ಮಾದಪ್ಪನ ದರ್ಶನಕ್ಕೆ ಬರುತ್ತಾರೆ. ಸುಮಾರು 150ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸಿ ಕಾಲ್ನಡಿಗೆಯಲ್ಲಿ ಬರುವುದರಿಂದ ಒಂದು ಸೇತುವೆ ನಿರ್ಮಣ ಮಾಡೋದು ಒಳ್ಳೆಯದು ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಇದೀಗ ಮಾದಪ್ಪನ ದರ್ಶನಕ್ಕೆ ನಡೆದು ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಿ ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

    ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವಸ್ಥಾನದ ಸಿಬ್ಬಂದಿ, ಹಲವು ವರ್ಷಗಳಿಂದಲೂ ಜನರು ಮಾದಪ್ಪನ ದರ್ಶನಕ್ಕೆ ನಡೆದು ಬರುತ್ತಿರುವುದು ನಮಗೂ ಕೂಡ ಅರಿವಿದೆ. ಆದರೆ ಅವರು ನಡೆದು ಬರುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಹೀಗಾಗಿ ಸೇತುವೆ ನಿರ್ಮಾಣಕ್ಕೆ ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಮರ್ಷಿಯಲ್ ದೃಷ್ಟಿಯಿಂದಲೂ ಕೂಡ ಮಾದಪ್ಪನ ಬೆಟ್ಟಕ್ಕೆ ಆ ಮಾರ್ಗದಲ್ಲಿ ರಸ್ತೆ, ಸೇತುವೆ ಮಾಡುವುದು ಒಳ್ಳೆಯದು. ಆದರೆ ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದರಿಂದ ಅಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆಗ್ತಿಲ್ಲ. ಅರಣ್ಯ ಇಲಾಖೆ ಒಪ್ಪಿದರೆ ಸೇತುವೆ ನಿರ್ಮಾಣ ಮಾಡುವ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು. ಜೊತೆಗೆ ರಸ್ತೆ ಕೂಡ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತೆ ಎನ್ನುತ್ತಿದ್ದಾರೆ.

    ಈ ಲಕ್ಷಾಂತರ ಭಕ್ತರ ಕೂಗು ಆಲಿಸಿ ಸೇತುವೆ ನಿರ್ಮಾಣ ಮಾಡಿದರೆ ಸಾಕು ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮತ್ತಷ್ಟು ಭಕ್ತರು ಮಾದಪ್ಪನ ದರ್ಶನಕ್ಕೆ ಹೋಗುತ್ತಾರೆ. ಇನ್ನಾದರು ಸರ್ಕಾರ ಈ ಬಗ್ಗೆ ಎಚ್ಚೆತ್ತು ಸೇತುವೆ ನಿರ್ಮಾಣ ಮಾಡ್ತಾರಾ ಅನ್ನೊದೆ ಸದ್ಯದ ಪ್ರಶ್ನೆಯಾಗಿದೆ.