Tag: Cauvery Calling campaign

  • ಕಾವೇರಿ ಕೂಗು ಅಭಿಯಾನಕ್ಕೆ ಧ್ವನಿಗೂಡಿಸಿದ ಹರಿಪ್ರಿಯಾ

    ಕಾವೇರಿ ಕೂಗು ಅಭಿಯಾನಕ್ಕೆ ಧ್ವನಿಗೂಡಿಸಿದ ಹರಿಪ್ರಿಯಾ

    ಬೆಂಗಳೂರು: ಜೀವನದಿ ಕಾವೇರಿ ಉಳಿವಿಗಾಗಿ ಕಾವೇರಿ ಕಾಲಿಂಗ್ (ಕಾವೇರಿ ಕೂಗು) ಎಂಬ ಅಭಿಯಾನ ಆರಂಭಿಸಲಾಗಿದ್ದು, ಇದಕ್ಕೆ ಸಿನಿ ಕಲಾವಿದರು, ಕ್ರಿಕೆಟಿಗರು ಸಾಥ್ ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‍ವುಡ್ ಸುಂದರಿ ಹರಿಪ್ರಿಯಾ ಅವರು ಕೂಡ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಮ್ಮ ನಾಡಿನಲ್ಲಿ ಹುಟ್ಟುವ ಕಾವೇರಿ ತಾಯಿಯು ರಾಜ್ಯದ ಹಾಗೂ ದೇಶದ ಕೋಟ್ಯಂತರ ಜನರನ್ನು ಸಾಕುತ್ತಾ ಬಂದಿದ್ದಾಳೆ. ಆದರೆ ಕಳೆದ 15 ವರ್ಷಗಳಲ್ಲಿ ಕಾವೇರಿ ಹರಿವು ಶೇ.40 ರಿಂದ 50ರಷ್ಟು ಕಡಿಮೆಯಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಅರಣ್ಯ ನಾಶವಾಗಿದೆ ಎಂದು ಹರಿಪ್ರಿಯಾ ಕಳಕಳಿ ವ್ಯಕ್ತಪಡಿಸಿದ್ದಾರೆ.

    ನಮ್ಮ ಪೂರ್ವಿಕರು ಕಾವೇರಿಯನ್ನು ಅತ್ಯಂತ ಸ್ವಚ್ಛವಾಗಿ ನಮಗೆ ಕೊಟ್ಟಿದ್ದರು. ಅದನ್ನು ನಾವು ಕೂಡ ಮುಂದಿನ ಪೀಳಿಗೆಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾವೇರಿ ಕಾಲಿಂಗ್ ಅಭಿಯಾನ ಆರಂಭವಾಗಿದೆ. ಅದಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ. ನೀವು ಕೂಡ ಬೆಂಬಲ ನೀಡಿ ಎಂದು ಹರಿಪ್ರಿಯಾ ಮನವಿ ಮಾಡಿಕೊಂಡರು.

    ನೀವು ವ್ಯವಸಾಯ ಮಾಡುವ ಭೂಮಿಯಲ್ಲಿ ಸ್ವಲ್ಪ ಭಾಗ ಮರಗಳನ್ನು ಬೆಳೆಸಬೇಕು. ಅರಣ್ಯ ಕೃಷಿ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ, ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಸಿಗುತ್ತದೆ. ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಾಯವಾಗಲಿದೆ ಹಾಗೂ ಮಣ್ಣಿನ ಗುಣಮಟ್ಟ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು.

    ಒಂದು ಸಸಿಯ ಬೆಲೆ 42 ರೂ. ಇದೆ. ನಮ್ಮಿಂದ ಸಸಿ ನೆಡಲು ಸಾಧ್ಯವಾಗದಿದ್ದರೆ ಸಸಿಗಳನ್ನು ಖರೀದಿಸಲು ರೈತರಿಗೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ಸಹಾಯ ಧನವನ್ನು ಸಂಗ್ರಹಿಸಲಾಗುತ್ತಿದ್ದು, cauvery calling .org ವೆಬ್‍ಸೈಟ್‍ಗೆ ಹೋಗಿ ಹಣವನ್ನು ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ 80009-80009 ಮೊಬೈಲ್ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.