Tag: caught

  • ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ರಾಂಚಿ: ರಸ್ತೆಗಳು ಹದಗೆಟ್ಟ ಪರಿಣಾಮ ಗ್ರಾಮಸ್ಥರು ತುಂಬು ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಅದನ್ನು ತಮ್ಮ ಹೆಗಲಲ್ಲಿ ಹೊತ್ತು ಆಸ್ಪತ್ರೆಗೆ ನಡೆದ ವಿಲಕ್ಷಣ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.

    ಗುಡಿಯಾ ದೇವಿ ತುಂಬು ಗರ್ಭಿಣಿ. ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಈಕೆಯಿದ್ದ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೆ ಹತ್ತಿರ ಯಾವುದೇ ಆಸ್ಪತ್ರೆಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯನ್ನು ಮಂಚದ ಮೇಲೆ ಮಲಗಿಸಿದ್ದಾರೆ. ನಂತರ ಮಂಚವನ್ನು ಹೊತ್ತು ಗ್ರಾಮಸ್ಥರು ಕೆಲ ದೂರ ಸಾಗಿದ್ದಾರೆ. ಸೂಕ್ತವಾದ ರಸ್ತೆ ಸಿಕ್ಕಿದ ಬಳಿಕ ಗುಡಿಯಾ ದೇವಿಯವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ಸಂಬಂಧ ಸಮಾಜ ಸೇವಕ ಭವೇಶ್ ಕುಮಾರ್ ಹೆಂಬ್ರಾಂ ಮಾತನಾಡಿ, ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅದರಿಂದ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಾರ್ಖಂಡ್‍ನ 6 ಗ್ರಾಮಗಳಿಗೆ ಮೂಲ ಸೌಕರ್ಯಗಳ ಕೊರತೆಯಿದೆ ಎಂದರು.

    ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಆಸ್ಪತ್ರೆ ಕೂಡ ಇಲ್ಲ. ಹೀಗಾಗಿ ಈ ಗ್ರಾಮಗಳಲ್ಲಿ ಜನ ವೈದ್ಯಕೀಯ ಚಿಕಿತ್ಸೆ ಪಡೆಯಲು ಜನ ಹರಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಳಲು ತೋಡಿಕೊಂಡರು.

  • ಆಹಾರ ಅರಸಿ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಆಹಾರ ಅರಸಿ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಕಾರವಾರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದ ಬಳಿಯ ಠಾಣೇಗೇರಿಯಲ್ಲಿ ಸೆರೆಹಿಡಿಯಲಾಗಿದೆ.

    ಠಾಣೇಗೇರಿಯ ನಿವಾಸಿ ಜಯರಾಮ್ ನಾಯ್ಕ ಅವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಕಾಳಿಂಗ ಸರ್ಪ ಆಹಾರ ಅರಸಿ ಬಂದಿತ್ತು. ಮನೆಯ ಬಳಿ ಕಾಳಿಂಗ ಸರ್ಪವನ್ನು ನೋಡಿದ ಮನೆಯವರು ಗಾಬರಿಗೊಂಡು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ, ಹಾವನ್ನು ಸೆರೆಹಿಡಿಯುವಂತೆ ಹೇಳಿದ್ದರು.

    ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ಪ್ರೇಮಿ ಮನೋಹರ್ ಸ್ಥಳಕ್ಕೆ ಆಗಮಿಸಿದರು. ಬಳಿಕ ಮನೋಹರ ಅವರು ಹಾವನ್ನ ಸೆರೆಹಿಡಿದು ಸ್ಥಳೀಯ ಕತ್ತಲೆಕಾನು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

    ಹಾವನ್ನು ಸೆರೆಹಿಡಿಯುವಾಗ ಅದು ಉರಗ ತಜ್ಞರ ಮೇಲೆಯೇ ದಾಳಿ ಮಾಡಲು ಯತ್ನಿಸಿತ್ತು. ಆದರೆ ಉರಗ ತಜ್ಞರು ಅದನ್ನು ಯಶಸ್ವಿಯಾಗಿ ಸೆರೆಹಿಡಿದರು. ಈ ವೇಳೆ ಹಾವನ್ನು ನೋಡಲು ಸಾಕಷ್ಟು ಮಂದಿ ಸ್ಥಳದಲ್ಲಿ ನೆರೆದಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

  • ಕಾಲುವೆಯಿಂದ ಬಾವಿಯೊಳಗೆ ಸೇರಿದ್ದ 7 ಅಡಿ ಉದ್ದದ ಮೊಸಳೆ ಸೆರೆ

    ಕಾಲುವೆಯಿಂದ ಬಾವಿಯೊಳಗೆ ಸೇರಿದ್ದ 7 ಅಡಿ ಉದ್ದದ ಮೊಸಳೆ ಸೆರೆ

    ಬೆಳಗಾವಿ(ಚಿಕ್ಕೋಡಿ): ಕಾಲುವೆಯಿಂದ ಹೊರಬಂದು ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿನ ಬಾವಿಯೊಂದರಲ್ಲಿ 7 ಅಡಿ ಉದ್ದದ ಮೊಸಳೆ ಸೇರಿಕೊಂಡಿತ್ತು. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಯಬಾಗ ಉಪ ಕಾಲುವೆಯ ನೀರಲ್ಲಿ ಬಂದ ಮೊಸಳೆ ಹೊರವಲಯದಲ್ಲಿದ್ದ 25 ಅಡಿ ಆಳದ ಬಾವಿಯನ್ನು ಸೇರಿಕೊಂಡಿತ್ತು. ಕಳೆದ 4 ದಿನಗಳಿಂದ ಇದೇ ಬಾವಿಯಲ್ಲಿ ಮೊಸಳೆ ಇರೋದನ್ನು ಕುರಿಗಾಹಿಗಳು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದರು. ಬಳಿಕ ಸ್ಥಳೀಯರು ಮೊಸಳೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಜೊತೆಗೆ ಸ್ಥಳೀಯರು ಕೂಡ ಕೈಜೊಡಿಸಿ ಹರಸಾಹಸಪಟ್ಟು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.

    ಈಗಾಗಲೇ ಬೇರೆ ಬೇರೆ ಕಡೆಯಲ್ಲಿ ಸಿಕ್ಕ ಮೊಸಳೆಗಳನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್‍ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಿಟ್ಟು ಬಂದಿದ್ದಾರೆ. ಘಟಪ್ರಭಾ ನದಿಗೆ ಅಡ್ಡಲಾಗಿರುವ ಹಿಡಕಲ್ ಡ್ಯಾಮ್ ನಿರ್ಮಿಸಲಾಗಿದೆ. ಡ್ಯಾಮ್‍ನಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರನ್ನು ಹರಿಸಲಾಗಿತ್ತು. ಈ ವೇಳೆ ಮೊಸಳೆಗಳು ಕೂಡ ನೀರಿನಲ್ಲಿ ಹರಿದು ಬಂದು ಕಾಲುವೆ ಸೇರಿದ್ದವು. ಇದೀಗ ಕಾಲುವೆಯ ನೀರಿನಿಂದ ಹೊರಬರುತ್ತಿರುವ ಮೊಸಳೆಗಳು ಬೃಹತ್ ಬಾವಿ, ಕೆರೆ, ಹಳ್ಳ ಕೊಳ್ಳದಲ್ಲಿ ಸೇರುತ್ತಿವೆ.

    ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಇಷ್ಟು ದಿನ ನದಿ ಹಾಗೂ ನದಿ ದಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮೊಸಳೆಗಳು, ಇತ್ತೀಚಿನ ಪ್ರವಾಹದಿಂದ ಎಲ್ಲೆಡೆ ಪೊದೆ, ಕಂಟಿ, ಬಾವಿಯಲ್ಲಿ ಸೇರಿಕೊಂಡಿವೆ. ಆಹಾರ ಅರಸಿ ನದಿ ತೀರದ ಜಮೀನುಗಳಿಗೆ ನುಗ್ಗುತ್ತಿವೆ.

  • ತೋಟಕ್ಕೆ ನುಗ್ಗಿದ್ದ 7 ಅಡಿ ಉದ್ದದ ಮೊಸಳೆ ಸೆರೆಹಿಡಿದು ಮರಕ್ಕೆ ಕಟ್ಟಿದ ಗ್ರಾಮಸ್ಥರು

    ತೋಟಕ್ಕೆ ನುಗ್ಗಿದ್ದ 7 ಅಡಿ ಉದ್ದದ ಮೊಸಳೆ ಸೆರೆಹಿಡಿದು ಮರಕ್ಕೆ ಕಟ್ಟಿದ ಗ್ರಾಮಸ್ಥರು

    ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ನದಿ ತೀರದ ತೋಟದ ವಸತಿಗೆ ನುಗ್ಗಿದ ಸುಮಾರು 7 ಅಡಿ ಉದ್ದದ ಮೊಸಳೆಯೊಂದನ್ನು ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಗ್ರಾಮಸ್ಥರು ಸೆರೆಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.

    ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ಗ್ರಾಮಸ್ಥರಿಗೆ ಇತ್ತು. ಆದರೆ ಯಾರ ಕಣ್ಣಿಗೂ ಮೊಸಳೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಸ್ಥಳೀಯರಿಗೆ ಮೊಸಳೆ ಗೋಚರಿಸಿದೆ. ಈ ವೇಳೆ ಮೊಸಳೆಯನ್ನು ಸೆರೆ ಹಿಡಿಯಲು ನಿರ್ಧರಿಸಿದರು. ನಂತರ ಹರಸಾಹಸ ಪಟ್ಟು ಮೊಸಳೆಯನ್ನು ಸೆರೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

    ಅರಣ್ಯ ಇಲಾಖೆಯ ಸಹಾಯವಿಲ್ಲದೆ ಗ್ರಾಮಸ್ಥರೇ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಮೊಸಳೆ ಬೇರೆಲ್ಲೂ ಹೋಗದಂತೆ ಅದಕ್ಕೆ ಹಗ್ಗ ಹಾಕಿ ಮರಕ್ಕೆ ಕಟ್ಟಿಹಾಕಿದ್ದಾರೆ. ಈ ಮೊಸಳೆಯನ್ನು ನೋಡಿದ ಮಕ್ಕಳು ಹಾಗೂ ಜನರು ಅದರ ಫೋಟೋ ಕ್ಲಿಕ್ಕಿಸಿದ್ದಾರೆ.

  • ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು ಕಾರ್ಟ್‍ಗಳ ನಡುವೆ ಸಿಲುಕಿಕೊಂಡಿದ್ದ ಹಾವನ್ನು ನೋಡಿ ಸಿಬ್ಬಂದಿ ಮೊದಲು ಭಯಗೊಂಡು ಕೂಗಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಹಾವನ್ನು ನೋಡಿ ಗಾಬರಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ.

    ಈ ಬಗ್ಗೆ ಯುಎಸ್‍ನ ಈಶಾನ್ಯ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದು ಹಾವಿನ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದೆ. ಶನಿವಾರದಂದು ಇಲಾಖೆ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವರೆಗೆ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಶೇರ್ ಹಾಗೂ ಲೈಕ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಮಾತನಾಡಿ, ಸ್ಥಳದಲ್ಲಿ ತುಂಬಾ ಮಳೆ ಬಂದ ಕಾರಣಕ್ಕೆ ಅದರಿಂದ ರಕ್ಷಣೆಗಾಗಿ ಹಾವು ಸೂಪರ್ ಮಾರ್ಕೆಟ್ ಒಳಗೆ ಬಂದಿದೆ. ಈ ವೇಳೆ ಶಾಪಿಂಗ್ ಕಾರ್ಟ್‍ನಲ್ಲಿ ಸೇರಿಕೊಂಡಿರಬಹುದು ಎಂದು ಊಹಿಸಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2017ರಲ್ಲಿ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್‍ನಲ್ಲಿ ಫ್ರೀಜ್ಡ್ ನಲ್ಲಿ ಇರಿಸಿದ್ದ ಮೊಸರು ತೆಗೆದುಕೊಳ್ಳುವ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು.

    https://www.facebook.com/NortheastPD/posts/1024911421052498

  • 8 ಸಾಕಾನೆ ಬಳಸಿ ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    8 ಸಾಕಾನೆ ಬಳಸಿ ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಮಡಿಕೇರಿ: ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ 8 ಸಾಕಾನೆಗಳನ್ನು ಬಳಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

    ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಕಾಡಾನೆಯ ಉಪಟಳಕ್ಕೆ ಬೇಸತ್ತಿದ್ದ ಜನರು ಆನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಹೀಗಾಗಿ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ 40 ಕ್ಕೂ ಅಧಿಕ ಸಿಬ್ಬಂದಿ ಭಾಗಿಯಾಗಿದ್ದು, 8 ಸಾಕಾನೆಗಳ ಬಳಸಿಕೊಂಡು ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಪರಿಶ್ರಮ ಪಟ್ಟು ಕೊನೆಗೂ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

    ಪಶುವೈದ್ಯ ಡಾ.ಮುಜೀಬ್ ಮಾರ್ಗದರ್ಶನದಲ್ಲಿ ಹಾಗೂ ಮಡಿಕೇರಿ, ವಿರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದೆ. ಅಭಿಮನ್ಯು, ಹರ್ಷ, ಅಜಯ, ಧನಂಜಯ, ವಿಕ್ರಮ, ಕೃಷ್ಣ, ಲಕ್ಷಣ, ಈಶ್ವರ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಶ್ರಮಪಟ್ಟಿದೆ. ಅಲ್ಲದೆ ಎಸಿಎಫ್ ಚಿಣ್ಣಪ್ಪ, ಡಿಎಫ್‍ಓ ಮಂಜುನಾಥ್, ರೇಂಜರ್ ಅರುಣ್ ಅವರು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಮೈಸೂರು: ಮನೆಯ ಬಾಗಿಲ ಮೇಲೆ ನೇತಾಡುತ್ತಿದ್ದ ನಾಗರಹಾವೊಂದನ್ನು ಕಂಡು ಮನೆಯವರೆನ್ನೆಲ್ಲ ಗಾಬರಿಗೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.

    ಶ್ರೀರಾಂಪುರದ ನಿವಾಸಿ ನಾಗೇಂದ್ರ ಅವರ ಮನೆಯ ಬಾಗಿಲ ಮೇಲೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಭಯಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲ ಮೇಲೆ ಆರಾಮಾಗಿ ಮಲಗಿದ್ದ ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ತಕ್ಷಣ ಉರಗ ತಜ್ಞ ಕೆಂಪರಾಜು ಅವರು ಸ್ಥಳಕ್ಕೆ ಆಗಮಿಸಿ, ಸುಮಾರು ಎರಡೂವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  • ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

    ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

    ಕೋಲಾರ: ಮೊಲ ನುಂಗಿ ಸುಸ್ತಾಗಿ ಪರದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಕುಪ್ಪಂ ತಾಲೂಕಿನ ಗುಡಿಪಲ್ಲಿ ಬಳಿ ಈ ಹೆಬ್ಬಾವು ಪತ್ತೆಯಾಗಿದ್ದು, ಮೊಲ ನುಂಗಿ ಸುಸ್ತಾಗಿ ಗಿಡಗಳ ಮಧ್ಯೆ ಅವಿತುಕೊಂಡಿತ್ತು. ಇದನ್ನು ಕಂಡ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಹೆಬ್ಬಾವನ್ನ ರಕ್ಷಣೆ ಮಾಡಿದ್ದಾರೆ.

    10 ಅಡಿ ಉದ್ದದ ಹೆಬ್ಬಾವನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ಬಳಿಕ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರು ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗ್ರಾಮದ ಸಮೀಪ ಬಂದಿದ್ದ ಹೆಬ್ಬಾವನ್ನ ಹಿಡಿಯುತ್ತಿದ್ದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಸ್ಥಳದಲ್ಲಿ ಹೆಬ್ಬಾವನ್ನ ನೋಡಲು ಆಗಮಿಸಿದ ಗ್ರಾಮದ ಜನರು ಹೆಬ್ಬಾವಿನೊಂದಿಗೆ ಫೋಟೋಗಳನ್ನ ಕ್ಲಿಕ್ಕಿಸಿಕೊಂಡರಲ್ಲದೇ, ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋವನ್ನೂ ಕೂಡ ಸೆರೆಹಿಡಿದಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷಿತವಾಗಿ ಚಿಕಟಪಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

  • ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆಹಿಡಿದ ಗ್ರಾಮಸ್ಥರು

    ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆಹಿಡಿದ ಗ್ರಾಮಸ್ಥರು

    ಬೆಳಗಾವಿ(ಚಿಕ್ಕೋಡಿ): ಕೃಷ್ಣಾನದಿಯಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ಆಹಾರ ಅರಸಿ ತೋಟವೊಂದಕ್ಕೆ ನುಗ್ಗಿದ್ದ ಮೊಸಳೆಯನ್ನು ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

    ಚಿಂಚಲಿ ಪಟ್ಟಣದ ಹೊರವಲಯದ ಗ್ರಾಮಸ್ಥರ ತೋಟದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕ್ಕೊಳಗಾದ ತೋಟದ ಮಾಲೀಕ ಸ್ಥಳೀಯರಿಗೆ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲಾ ಜೊತೆಗೂಡಿ 7 ಅಡಿ ಉದ್ದದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:10 ಅಡಿ ಉದ್ದದ ಮತ್ತೊಂದು ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು!

    ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಈ ರೀತಿ ಮೊಸಳೆಗಳು ತೋಟ, ಜಮೀನುಗಳಿಗೆ ಆಹಾರ ಅರಸಿ ನುಗ್ಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿರುವ ಹಿನ್ನೆಲೆ ಆಹಾರಕ್ಕಾಗಿ ಮೊಸಳೆಗಳು ಜನ ವಾಸಿಸುವ ಪ್ರದೇಶಕ್ಕೆ ಬರುತ್ತಿರುವುದು ನದಿ ಪಾತ್ರದ ಜನರ ನಿದ್ದೆಗೆಡಿಸಿದೆ. ಈ ಹಿಂದೆ ಕೂಡ ಕೃಷ್ಣ ನದಿ ತೀರದ ಗ್ರಾಮಗಳಲ್ಲಿ 2 ಮೊಸಳೆಗಳನ್ನು ಗ್ರಾಮಸ್ಥರು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

    ಸದ್ಯ ಸೆರೆಹಿಡಿದಿರುವ ಮೊಸಳೆಯನ್ನು ರಾಯಬಾಗ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

  • ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ಬೆಂಗಳೂರು: ಶನಿವಾರ ರಾತ್ರಿ ಸುರಿದ ಮಳೆಗೆ ಆಶ್ರಯ ಅರಸಿ ವಿಶೇಷ ಅತಿಥಿಯೊಂದು ಮನೆಯೊಳಗೆ ಸೇರಿಕೊಂಡ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಈ ವೇಳೆ ಗುಡ್ನಹಳ್ಳಿ ನಿವಾಸಿ ಮುನಿಯಪ್ಪ ಅವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಸುಮಾರು 7ರಿಂದ 9 ಗಂಟೆಯವೆರೆಗೂ ಮಳೆ ಸುರಿದಿದ್ದು, ಮಳೆಯಿಂದ ಆಶ್ರಯ ಪಡೆಯಲು ಹಾವು ಮನೆಗೆ ನುಗ್ಗಿದೆ.

    ಮನೆಗೆ ನುಗ್ಗಿದ್ದ ಹಾವನ್ನು ಕಂಡ ಮನೆ ಮಾಲೀಕರು ಭಯಗೊಂಡಿದ್ದು, ತಕ್ಷಣ ಉರಗ ತಜ್ಞ ಮಾಯಸಂದ್ರ ಸೂರಿ ಅವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.