Tag: Catfish

  • ನಿಮ್ಗೆ ಒದೆ ಬಿದ್ದಿಲ್ಲ ಅನ್ಸುತ್ತೆ- ಕ್ಯಾಟ್‍ಫಿಶ್ ಮಾಲೀಕರಿಗೆ ಚನ್ನಣ್ಣವರ್ ವಾರ್ನಿಂಗ್

    ನಿಮ್ಗೆ ಒದೆ ಬಿದ್ದಿಲ್ಲ ಅನ್ಸುತ್ತೆ- ಕ್ಯಾಟ್‍ಫಿಶ್ ಮಾಲೀಕರಿಗೆ ಚನ್ನಣ್ಣವರ್ ವಾರ್ನಿಂಗ್

    ಬೆಂಗಳೂರು: ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದ ರೌಡಿಗಳನ್ನು ತಪಾಸಣೆ ಮಾಡಲು ಹೋದ ಪೊಲೀಸರಿಗೆ ರೌಡಿಗಳು ಆವಾಜ್ ಹಾಕಿದ್ದರು. ಇದೀಗ ಆ ರೌಡಿಗಳಿಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ.ಡಿ.ಚನ್ನಣ್ಣನವರ್ ಖಡಕ್ ವಾರ್ನಿಂಗ್ ನೀಡಿರುವ ಘಟನೆ ನಂದಗುಡಿಯಲ್ಲಿ ನಡೆದಿದೆ.

    ನಂದಗುಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಜನಸಂಪರ್ಕ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ ಅಕ್ರಮ ಕ್ಯಾಟ್ ಫಿಶ್ ಸಾಕಣೆದಾರನಿಗೆ ರವಿ ಚನ್ನಣ್ಣನವರ್ ಕ್ಲಾಸ್ ತೆಗೆದುಕೊಂಡರು. ಇದೇ ವೇಳೆ ಕ್ಯಾಟ್ ಫಿಶ್ ಸಾಕಾಣೆದಾರ, ನಮಗೆ ಬೇರೆ ಬ್ಯುಸಿನೆಸ್ ಇಲ್ಲ. ಹೀಗಾಗಿ ಕ್ಯಾಟ್ ಫಿಶ್ ಸಾಕುತ್ತಿದ್ದೇವೆ ಎಂದು ಹೇಳಿದ್ದಾನೆ. ಇದನ್ನೂ ಓದಿ:  ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ತಕ್ಷಣ ಗರಂ ಆದ ಚನ್ನಣ್ಣನವರ್, ಬೇರೆ ಕೆಲಸ ಇಲ್ಲ ಎಂದು ದರೋಡೆ ಮಾಡೋಕಾಗುತ್ತಾ, ಕೆಲಸ ಇಲ್ಲ ಅಂತಾ ಗಾಂಜಾ ಬೆಳೆಯೋಕೆ ಆಗುತ್ತಾ, ಇಸ್ಪೀಟ್ ಆಡೋಕಾಗುತ್ತಾ. ನಿಮಗೆ ಒದೆ ಬಿದ್ದಿಲ್ಲ ಅನ್ಸುತ್ತೆ ಎಂದು ಕ್ಲಾಸ್ ತೆಗೆದುಕೊಂಡರು.

    ನಾನು 10 ಗಂಟೆ ರಾತ್ರಿಯಲ್ಲಿ ಬಂದಿದ್ದೀನಿ. ಆದರೂ 18 ವರ್ಷದ ಹುಡುಗ ಡ್ಯಾಗರ್ ಹಿಡಿದುಕೊಂಡು ಓಡಾಡ್ತಾನೆ. ನಮ್ಮ ವ್ಯಾಪ್ತಿಯಲ್ಲಿ 1900 ಹಳ್ಳಿ ಇದೆ. ಆ ಊರಲ್ಲಿ ಮಾತ್ರ ಯಾಕೆ ಕ್ಯಾಟ್ ಫಿಶ್ ಸಾಕುತ್ತಾರೆ. ಯಾಕೆಂದರೆ ಅಲ್ಲಿ ಕೆಟ್ಟವರ ಸಂಖ್ಯೆ ಜಾಸ್ತಿ ಇದೆ. ಒಂದು ಕೆಲಸ ಮಾಡು ನಿನಗೆ ಫುಲ್ ಫ್ರೀಡಂ ಕೊಡುತ್ತೀನಿ ಅಲ್ಲಿ ಯಾರ‍್ಯಾರು ಕೆಟ್ಟ ಕೆಲಸ ಮಾಡುತ್ತಾರೆ ಅವರ ಲಿಸ್ಟ್ ಮಾಡು ಎಂದು ಕ್ಯಾಟ್‍ಫಿಶ್ ಮಾಲೀಕರಿಗೆ ವಾರ್ನಿಂಗ್ ನೀಡಿದರು.

  • ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಬೆಂಗಳೂರು: ದೇಶಾದ್ಯಂತ ನಿಷೇಧಗೊಂಡಿರುವ ಕ್ಯಾಟ್ ಫಿಶ್ ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಬೈಲಾನರಸಾಪುರ ಹಾಗು ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ತಾಲೂಕು ತಹಶೀಲ್ದಾರ್, ಮೀನುಗಾರಿಕೆ ಇಲಾಖೆ ಹಾಗೂ ನಂದಗುಡಿ ಪೋಲಿಸ್ ಇಲಾಖೆಯ ಅಧಿಕಾರಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

    ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಎರಡು ತಂಡಗಳಾಗಿ 2 ಜೆಸಿಬಿಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವು ಕಾರ್ಯಚರಣೆ ನಡೆಸಿದರು. ಈ ಹಿಂದೆಯೂ ಸಹ ಜಿಲ್ಲಾ ಎಸ್ಪಿ ರವಿ ಡಿಚನ್ನಣ್ಣನವರ್ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದರೂ ಸಹ ಮತ್ತೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಪ್ರಾರಂಭಿಸಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ದಾಳಿ ನಡೆಸಿ ಹೊಂಡಗಳನ್ನು ಧ್ವಂಸಗೊಳಿಸಿದ್ದಾರೆ.

    ಇಂದು ದಿನಪೂರ್ತಿ ಅಧಿಕಾರಿಗಳ ತಂಡ ತೆರವು ಕಾರ್ಯಚರಣೆ ಮಾಡಿ ಎರಡು ಗ್ರಾಮಗಳಲ್ಲಿ ಸಂಪೂರ್ಣ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಿದ್ದಾರೆ. ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಹೊಂಡಗಳ ಜಾಗದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಕ್ಯಾಟ್ ಫಿಶ್ ಅಪಾಯವೇಕೆ?
    ಕ್ಯಾಟ್ ಫಿಶ್ ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ.

    ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

    ದಷ್ಟ ಪುಷ್ಟವಾಗಿ ಬಳೆದ ಪರಿಣಾಮ ಮೀನಿನಲ್ಲಿ ಮುಳ್ಳು ಕಮ್ಮಿ ಇರುತ್ತದೆ. ಈ ಕಾರಣಕ್ಕೆ ಜನರು ಇದನ್ನು ಹೆಚ್ಚು ತಿನ್ನ ಇಷ್ಟಪಡುತ್ತಾರೆ. ಆದರೆ ಇದನ್ನು ತಿಂದರೆ ರಕ್ತ ಹೆಪ್ಪುಗಟ್ಟಿ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ. ಮೀನುಗಾರಿಕಾ ಇಲಾಖೆಯ ಅಧ್ಯಯನದಲ್ಲಿ ಈ ಅಂಶಗಳು ದೃಢಪಟ್ಟಿರುವುದರಿಂದ ಈ ಮೀನನ್ನು ಭಾರತದಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.

  • ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆ ಮೇಲೆ ದಾಳಿ

    ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆ ಮೇಲೆ ದಾಳಿ

    ರಾಮನಗರ: ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆಯ ಮೇಲೆ ರಾಮನಗರ ತಹಶೀಲ್ದಾರ್ ರಾಜು ನೇತೃತ್ವದಲ್ಲಿ ಅಧಿಕಾರಗಳ ತಂಡ ದಾಳಿ ನಡೆಸಿದೆ.

    ಕಂಚುಗಾರನಹಳ್ಳಿ ಹೊರವಲಯದ ಎಸ್‍ಪಿಆರ್ ತಿಮ್ಮೇಗೌಡ ಎಂಬವರಿಗೆ ಸೇರಿದ ಜಮೀನಿನಲ್ಲಿ ಬರೋಬ್ಬರಿ 38 ಹೊಂಡಗಳಲ್ಲಿ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡಲಾಗ್ತಿತ್ತು. ಬೆಂಗಳೂರಿನ ರಜಾಕ್‍ಪಾಳ್ಯದ ನಜೀರ್ ಎಂಬವರು ಜಮೀನನ್ನು ಲೀಸ್‍ಗೆ ಪಡೆದು ಹಲವು ವ್ಯಕ್ತಿಗಳ ಜೊತೆ ಸೇರಿ ಹೊಂಡಗಳನ್ನು ನಿರ್ಮಿಸಿ ಕ್ಯಾಟ್‍ಫಿಶ್‍ಗಳನ್ನು ಸಾಕುತ್ತಿದ್ದರು.

    ಸ್ಥಳೀಯ ಗ್ರಾಮಸ್ಥರ ದೂರಿನ ಮೇರೆಗೆ ದಾಳಿ ನಡೆಸಿದ ರಾಮನಗರ ತಹಶೀಲ್ದಾರ್ ರಾಜು ಅವರು ಕ್ಯಾಟ್‍ಫಿಶ್ ಅಡ್ಡೆಗಳನ್ನು ತೆರವುಗೊಳಿಸುವಂತೆ, ಅಲ್ಲದೆ ಸಾಕಾಣಿಕೆ ಮಾಡಿರುವ ಕ್ಯಾಟ್‍ಫಿಶ್‍ನ್ನು ನಾಶಗೊಳಿಸುವಂತೆ ಆದೇಶಿಸಿದ್ದರು ನಂತರ ಜೆಸಿಬಿ ಮೂಲಕ ಹೊಂಡಗಳಿಂದ ನೀರನ್ನು ಹೊರಹಾಕಿ ಕ್ಯಾಟ್‍ಫಿಶ್ ಅಡ್ಡೆ ಹೊಂಡಗಳ ಮೇಲೆ ಮಣ್ಣು ಹಾಕುವಂತಹ ಕಾರ್ಯವನ್ನು ನಡೆಸಲಾಯಿತು.

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮೀನ್‍ನ ಮಾಲೀಕರು ಹಾಗೂ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡುತ್ತಿದ್ದವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.

  • ಪರಿಸರಕ್ಕೆ, ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಕ್ಯಾಟ್‍ಫಿಶ್‍ನ ಅಕ್ರಮ ಸಾಗಾಣೆ

    ಪರಿಸರಕ್ಕೆ, ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಕ್ಯಾಟ್‍ಫಿಶ್‍ನ ಅಕ್ರಮ ಸಾಗಾಣೆ

    ಕೋಲಾರ: ಮನುಷ್ಯ ಸೇರಿದಂತೆ ಪ್ರಾಣಿಗಳ ಮೂಳೆಯನ್ನು ಬಿಡದೆ ತಿಂದು ಹಾಕಬಲ್ಲ, ಪರಿಸರಕ್ಕೆ ಹಾಗೂ ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಅಕ್ರಮವಾಗಿ ಕ್ಯಾಟ್‍ಫಿಶ್‍ನ್ನು ಕೋಲಾರದಲ್ಲಿ ಎಗ್ಗಿಲ್ಲದೆ ಸಾಗಾಣೆ ಮಾಡಲಾಗುತ್ತಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ನಾರಾಯಣಸ್ವಾಮಿ ಗ್ರಾಮದ ಬಳಿ ಬೃಹತ್ ಮಟ್ಟದಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗುತ್ತಿದೆ. ಆದರು ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ.

    ಈ ಕ್ಯಾಟ್ ಫಿಶ್ ಸಾಕಾಣಿಕೆ ಅಡ್ಡೆ ಗ್ರಾಮದ ಹೊರ ವಲಯದಲ್ಲಿ ತೋಟಗಳ ಮಧ್ಯೆ ನಡೆಯುತ್ತಿದ್ದು, ಕೆಲ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಕ್ಯಾಟ್ ಫಿಶ್‍ಗೆ ಹಾಕಲಾಗುವ ಆಹಾರ ಕೊಳೆತ ಕುರಿ, ಕೋಳಿ, ಹಂದಿ, ಮಾಂಸವನ್ನು ತಂದು ಹಾಕಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ಹಾಳಾಗುತ್ತಿರುವುದಲ್ಲದೆ ನಾಯಿ, ಹದ್ದುಗಳು ಈ ತ್ಯಾಜ್ಯಕ್ಕಾಗಿ ಇಲ್ಲಿಯೇ ಬೀಡು ಬಿಟ್ಟಿವೆ.

    ಈ ತ್ಯಾಜ್ಯವನ್ನ ತಿಂದು ರುಚಿ ಕಂಡಿರುವ ನಾಯಿಗಳು ಮಕ್ಕಳ ಮೇಲೆ ಎರಗುವ ಆತಂಕ ಕೂಡ ಈ ಭಾಗದಲ್ಲಿದೆ. ಹಾಗಾಗಿ ಸಂಬಂಧ ಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv