Tag: cash transaction

  • ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ನವದೆಹಲಿ: ಬ್ಯಾಂಕ್‍ನಲ್ಲಿ ಇನ್ನು ಮುಂದೆ ಬೇಕಾಬಿಟ್ಟಿ ನಗದು ವ್ಯವಹಾರ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ. ಯಾಕಂದ್ರೆ ತಿಂಗಳಿಗೆ 4 ಬಾರಿ ವ್ಯವಹಾರ ಮಾಡಿದ ಬಳಿಕ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ 150 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲು ಹೆಚ್‍ಡಿಎಫ್‍ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್‍ಗಳು ನಿರ್ಧಾರ ಮಾಡಿವೆ.

    ಈ ನಿಯಮ ಮಾರ್ಚ್ 1 ರಿಂದಲೇ ಜಾರಿಗೆ ಬಂದಿದ್ದು, ಸ್ಯಾಲರಿ ಅಕೌಂಟ್ ಹಾಗೂ ಉಳಿತಾಯ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ಹೆಚ್‍ಡಿಎಫ್‍ಸಿ ಬ್ಯಾಂಕ್ ಹೇಳಿದೆ.

    ಹೆಚ್‍ಡಿಎಫ್‍ಸಿ ಬ್ಯಾಂಕ್: ಒಂದು ತಿಂಗಳಲ್ಲಿ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಆದ್ರೆ ಅದೇ ತಿಂಗಳಲ್ಲಿ 5ನೇ ಬಾರಿಗೆ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾ ಮಾಡಿದರೆ ಹೆಚ್ಚುವರಿ 150 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಅಲ್ಲದೆ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ದಿನವೊಂದಕ್ಕೆ 25 ಸಾವಿರ ರೂಪಾಯಿ ಮಾತ್ರ ತೆಗೆಯಬಹುದು ಅಂತಾ ಹೆಚ್‍ಡಿಎಫ್‍ಸಿ ಬ್ಯಾಂಕ್ ತಿಳಿಸಿದ್ದು, ಕ್ಯಾಶ್ ಹ್ಯಾಂಡ್ಲಿಂಗ್ ಶುಲ್ಕವನ್ನು ಹಿಂಪಡೆದಿದೆ.

    ಐಸಿಐಸಿಐ ಬ್ಯಾಂಕ್: ಐಸಿಐಸಿಐನ ಹೋಮ್ ಬ್ರಾಂಚ್‍ನಲ್ಲಿ ತಿಂಗಳ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಅದೇ ತಿಂಗಳು 5ನೇ ಬಾರಿಗೆ ವ್ಯವಹಾರ ಮಾಡಿದ್ರೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ತಿಂಗಳಿಗೆ ಕನಿಷ್ಠ 150 ರೂ. ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಬೇರೆ ಎಟಿಎಂನಿಂದ ವಿತ್‍ಡ್ರಾ ಮಾಡುವ ಮಿತಿ ದಿನಕ್ಕೆ 50 ಸಾವಿರ ರೂ. ಇರಲಿದೆ. ಆದ್ರೆ ನಾನ್ ಹೋಮ್ ಬ್ರಾಂಚ್‍ಗಳಲ್ಲಿ ತಿಂಗಳ ಮೊದಲ ನಗದು ವಿತ್‍ಡ್ರಾವಲ್‍ಗೆ ಐಸಿಐಸಿಐ ಯಾವುದೇ ಶುಲ್ಕ ಪಡೆಯುವುದಿಲ್ಲ. ಆದ್ರೆ ಅನಂತರದ ವಿತ್‍ಡ್ರಾವಲ್‍ಗೆ 1 ಸಾವಿರ ರೂ.ಗೆ 5 ರೂ. ನಂತೆ ತಿಂಗಳಿಗೆ ಕನಿಷ್ಠ 150 ರೂ. ದಂಡ ಕಟ್ಟಬೇಕು. ಹಾಗೇ ಬೇರೆ ಕಡೆ ನಗದು ಡೆಪಾಸಿಟ್ ಮಾಡಿದ್ರೆ 1 ಸಾವಿರ ರೂ.ಗೆ 5 ರೂಪಾಯಿಯಂತೆ (ಕನಿಷ್ಟ 150 ರೂ.) ಬ್ರಾಂಚ್‍ಗಳಲ್ಲಿ ಶುಲ್ಕ ಕಟ್ಟಬೇಕು. ಕ್ಯಾಶ್ ಸ್ವೀಕೃತಿ ಮಷೀನ್‍ಗಳಲ್ಲಿ ಡೆಪಾಸಿಟ್ ಮಾಡಿದ್ರೆ ತಿಂಗಳ ಮೊದಲ ಡೆಪಾಸಿಟ್‍ಗೆ ಯಾವುದೇ ಶುಲ್ಕ ಇಲ್ಲ. ನಂತರದ ಡೆಪಾಸಿಟ್‍ಗೆ 1 ಸಾವಿರ ರೂ.ಗೆ 5 ರೂಪಾಯಿಯಂತೆ ಕನಿಷ್ಠ 150 ರೂ. ಶುಲ್ಕ ತೆರಬೇಕು.

    ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್‍ಗಳಲ್ಲಿ ತಿಂಗಳ ಮೊದಲ 5 ನಗದು ವ್ಯವಹಾರ ಅಥವಾ 10 ಲಕ್ಷ ರೂ.ವರಗಿನ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾವಲ್ ಉಚಿತವಾಗಿರುತ್ತದೆ. ನಂತರದ ವ್ಯವಹಾರಕ್ಕೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ಕನಿಷ್ಟ 150 ರೂ. ಶುಲ್ಕವನ್ನು ತೆರಬೇಕಾಗುತ್ತದೆ.

    ನಗದು ವ್ಯವಹಾರಕ್ಕೆ ಕಡಿವಾಣ ಹಾಕುವುದು ಹಾಗೂ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ಈ ನಿಯಮದ ಉದ್ದೇಶ ಎನ್ನಲಾಗಿದೆ. ಉಳಿದ ಬ್ಯಾಂಕ್‍ಗಳೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಯಿದೆ. ಈ ನಿಯಮ ಜಾರಿ ನಿರ್ಧಾರ ಮುಂಚೂಣಿಯಲ್ಲಿರುವ ಬ್ಯಾಂಕ್‍ಗಳು ಮಾಡಿರುವ ತೀರ್ಮಾನವಾಗಿದೆಯೇ ಹೊರತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಕೇಂದ್ರ ಸರ್ಕಾರ ಮಾಡಿರುವುದಲ್ಲ. ಈ ಮೂರು ಬ್ಯಾಂಕ್‍ಗಳು ದಂಡ ಹಾಕುವುದಕ್ಕೆ ಆರ್‍ಬಿಐ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಆದ್ರೆ ಯಾವುದೇ ಹಣಕಾಸಿನ ವ್ಯವಹಾರ 3 ಲಕ್ಷ ಮೀರಿದ್ರೆ ದಂಡ ತೆರಬೇಕಾಗುತ್ತದೆ ಅಂತಾ ಕೇಂದ್ರ ಸರ್ಕಾರ ಬಜೆಟ್‍ನಲ್ಲೇ ಘೋಷಣೆ ಮಾಡಿತ್ತು.

  • ವಿಜಯ್ ಮಲ್ಯಗೆ ಅರುಣ್ ಜೇಟ್ಲಿಯಿಂದ ಶಾಕ್!

    ನವದೆಹಲಿ: ಇಂದಿನ ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ಥಿಕ ಅಪರಾಧಿಗಳ ದಂಡನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಘೋಷಸಿದ್ದು, ಸಾಲ ಮಾಡಿ ಕಾನೂನು ಕಣ್ತಪ್ಪಿಸಿ ದೇಶ ಬಿಟ್ಟು ಹೋದವರ ಆಸ್ತಿ ಪಾಸ್ತಿ ಜಪ್ತಿಗೆ ಸರ್ಕಾರ ಹೊಸ ಕಾನೂನು ತರಲಿದೆ ಎಂದು ಹೇಳಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಗೆ ದೊಡ್ಡ ಶಾಕ್ ಸಿಕ್ಕಿದೆ.

    ವಿದೇಶದಲ್ಲಿರುವ ಮಲ್ಯರಿಂದ ಸಾಲ ಹಿಂಪಡೆಯಲು ಬ್ಯಾಂಕ್‍ಗಳು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಕಾನೂನಿನ ಕಣ್ತಪ್ಪಿಸಿ ಕೆಲವರು ದೇಶ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಹೀಗಾಗಿ ಸರ್ಕಾರ ಇಂತಹ ವ್ಯಕ್ತಿಗಳ ಆಸ್ತಿ ಜಪ್ತಿ ಮಾಡಲು ಕಾನೂನು ರೂಪಿಸಲಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡನೆ ವೇಳೆ ಹೇಳಿದ್ರು.

    ಉದ್ಯಮಿ ವಿಜಯ ಮಲ್ಯ ಕಳೆದ ವರ್ಷ ಮಾರ್ಚ್‍ನಲ್ಲಿ ವಿದೇಶಕ್ಕೆ ಹಾರಿದ್ರು. ಹಲವು ಬ್ಯಾಂಕ್‍ಗಳು ಮಲ್ಯಾರಿಂದ 9 ಸಾವಿರ ಕೋಟಿ ರೂ. ಆಸ್ತಿ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮಲ್ಯರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಲ್ಯ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿದೆ.

  • ಏಪ್ರಿಲ್ 1 ರಿಂದ 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ರದ್ದು

    ನವದೆಹಲಿ: ಕಪ್ಪು ಹಣದ ಮೇಲಿನ ಸಮರವನ್ನು ಕೇಂದ್ರ ಸರ್ಕಾರ ಮುಂದುವರೆಸಿದ್ದು, ಇಂದಿನ ಬಜೆಟ್ ನಲ್ಲಿ ಅರುಣ್ ಜೇಟ್ಲಿ, 3 ಲಕ್ಷಕ್ಕೂ ಮೀರಿದ ನಗದು ವಹಿವಾಟನ್ನು ರದ್ದು ಮಾಡುವ ಪ್ರಸ್ತಾಪವನ್ನು ಹೇಳಿದ್ದಾರೆ.

    2017ರ ಏಪ್ರಿಲ್ 1 ರಿಂದ 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ರದ್ದಾಗಲಿದ್ದು. ಈ ಮೊತ್ತಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಆನ್‍ಲೈನ್ ಮೂಲಕವೇ ಮಾಡಬೇಕಾಗುತ್ತದೆ. ಕಪ್ಪು ಹಣದ ಮೇಲಿನ ವಿಶೇಷ ತನಿಖಾ ತಂಡ ಸರ್ಕಾರಕ್ಕೆ ಈ ಶಿಫಾರಸ್ಸು ನೀಡಿತ್ತು. ಜಸ್ಟಿಸ್ ಎಂಬಿ ಷಾ ನೇತೃತ್ವದ ವಿಶೇಷ ತನಿಖಾ ತಂಡ, ಕಪ್ಪು ಹಣ ನಿಯಂತ್ರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜುಲೈನಲ್ಲಿ ತನ್ನ 5ನೇ ವರದಿಯನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿತ್ತು.

    ಕಪ್ಪು ಹಣ ಹೆಚ್ಚಾಗಿ ನಗದು ರೂಪದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಸ್‍ಐಟಿ ನಗದು ವಹಿವಾಟಿಗೆ ಮಿತಿ ಹೇರಬೇಕು ಎಂದು ಸೂಚಿಸಿತ್ತು. 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟನ್ನು ರದ್ದು ಮಾಡಬೇಕು. ಈ ಮೊತ್ತಕ್ಕಿಂತ ಹೆಚ್ಚಿನ ನಗದು ವಹಿವಾಟು ಮಾಡಿದರೆ ಅದನ್ನು ಅಕ್ರಮ ಎಂದು ಪರಿಗಣಿಸಲು ಕಾಯ್ದೆ ರೂಪಿಸಬೇಕೆಂದು ಎಸ್‍ಐಟಿ ಹೇಳಿತ್ತು.