Tag: cart

  • ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಲಕ್ನೋ: ವಯಸ್ಸಾದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ.

    ವೀಡಿಯೊದಲ್ಲಿ ಏನಿದೆ?: ಚಿಲ್ಖರ್ ಬ್ಲಾಕ್‍ನ ಗ್ರಾಮದ ನಿವಾಸಿ ಸಕುಲ್ ಪ್ರಜಾಪತಿ ಅವರು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತ್ನಿ ಜೋಗ್ನಿ (55) ಅವರನ್ನು ಗಾಡಿಯಲ್ಲಿ ಮಲಗಿಸಿಕೊಂಡು ತನ್ನ ಕೈಗಳಿಂದ ಎಳೆಯುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಮತ್ತೆ ಕೋರ್ಟ್ ಸಂಕಷ್ಟ: ಫೋನ್ ಕಿತ್ತುಕೊಂಡ ಪ್ರಕರಣಕ್ಕೆ ಸಲ್ಲು ಕಟಕಟೆಯಲ್ಲಿ

    ಮಾರ್ಚ್ 28 ರಂದು, ಪ್ರಜಾಪತಿ ತನ್ನ ಹೆಂಡತಿಯನ್ನು ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಕೆಲವು ಔಷಧಿಗಳನ್ನು ನೀಡಿ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಜೋಗ್ನಿ ಆಸ್ಪತ್ರೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಶವವನ್ನು ಮನೆಗೆ ಕೊಂಡೊಯ್ಯಲು ಅಂಬುಲೆನ್ಸ್ ನೀಡಲು ಆಸ್ಪತ್ರೆ ನಿರಾಕರಿಸಿತು, ರಾತ್ರಿ ಸೇವೆ ಲಭ್ಯವಿಲ್ಲ ಎಂದು ಹೇಳಿದರು. ನಂತರ 1,100 ರೂ.ಗೆ ಖಾಸಗಿ ಅಂಬುಲೆನ್ಸ್ ಬಾಡಿಗೆಗೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವಯಸ್ಸಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಫೋಟೋವನ್ನು ಟ್ಯಾಗ್ ಮಾಡಿ, ಟ್ವೀಟ್‍ನಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಖರ್ಚು ಮಾಡುತ್ತಿಲ್ಲ. ಯುಪಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗಳ ಸುಳ್ಳು ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿರುವ ಸ್ವಲ್ಪ ಭಾಗವನ್ನು ವೈದ್ಯಕೀಯ ಸೇವೆಗಳಿಗೆ ವಿನಿಯೋಗಿಸಬೇಕು. ಸ್ಟ್ರೆಚರ್ ಮತ್ತು ಆಂಬ್ಯುಲೆನ್ಸ್‌ಗಳ ಕೊರತೆಯಿಂದ ಜನರು ಸಾಯುತ್ತಿದ್ದಾರೆ ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • ಬಸ್ ಕಾಣದ ಬಿಸಿಲನಾಡಿನ ಕುಗ್ರಾಮ-ತುರ್ತು ಪರಿಸ್ಥಿತಿಯಲ್ಲೂ ಎತ್ತಿನ ಬಂಡಿಯೇ ಗತಿ

    ಬಸ್ ಕಾಣದ ಬಿಸಿಲನಾಡಿನ ಕುಗ್ರಾಮ-ತುರ್ತು ಪರಿಸ್ಥಿತಿಯಲ್ಲೂ ಎತ್ತಿನ ಬಂಡಿಯೇ ಗತಿ

    ರಾಯಚೂರು: ಜಿಲ್ಲೆಯನ್ನ ಹಿಂದುಳಿದ ಪ್ರದೇಶ ಅಂತ ಕರೆಯೋದಕ್ಕೆ ಸಾಕ್ಷಿಯಂಬಂತೆ ಇಲ್ಲೊಂದು ಗ್ರಾಮ ಇದೆ. ಈ ಗ್ರಾಮ ಹುಟ್ಟಿದಾಗಿನಿಂದ ಬಸ್ ಮುಖವನ್ನೇ ನೋಡಿಲ್ಲ. ಈಗಲೂ ಜನ ಎತ್ತಿನ ಬಂಡಿಯಲ್ಲೇ ಓಡಾಡುತ್ತಿದ್ದಾರೆ. ಅವಸರದ ಕೆಲಸಗಳು ಏನಾದ್ರೂ ಇದ್ರೆ ಪಟ್ಟಣಕ್ಕೆ ಬರುವುದು ಕಷ್ಟವೇ ಸರಿ. ಸಿರವಾರ ತಾಲೂಕಿನ ಕೆ.ತುಪ್ಪದೂರು ಗ್ರಾಮ ಈಗಲೂ ಐವತ್ತು ವರ್ಷ ಹಿಂದಿದೆ.

    ಸುಮಾರು ಒಂದು ಸಾವಿರ ಜನ ವಾಸವಾಗಿರುವ ಈ ಗ್ರಾಮ ಇದುವರೆಗೆ ಬಸ್ ಕಂಡಿಲ್ಲ. ಇಲ್ಲಿ ಉತ್ತಮ ರಸ್ತೆಗಳು, ಹಳ್ಳಕ್ಕೆ ಸೇತುವೆಯೂ ಇಲ್ಲ. ಹೀಗಾಗಿ ಬಸ್‍ಗಳನ್ನ ಬಿಡಲು ಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಇದುವರೆಗೂ ಇಚ್ಛಾಶಕ್ತಿಯನ್ನ ತೋರಿಲ್ಲ. ಬಸ್ ವ್ಯವಸ್ಥೆ ಇಲ್ಲದೆ ಹೈರಾಣಾದ ಜನ ಅನಾರೋಗ್ಯ ಪೀಡಿತರನ್ನ ಪಟ್ಟಣ ಪ್ರದೇಶಕ್ಕೆ ಕೊಂಡೊಯ್ಯಲು ಹರಸಾಹಸವೇ ಮಾಡಬೇಕಾಗುತ್ತದೆ.

    ಗರ್ಭಿಣಿ ಹಾಗೂ ವೃದ್ಧರಿಗೆ ಎತ್ತಿನ ಬಂಡಿಯಲ್ಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಎತ್ತಿನ ಬಂಡಿ ಕಟ್ಟಿಕೊಂಡೇ ರೋಗಿಗಳನ್ನು ಆಸ್ಪತ್ರೆಗೆ ಒಯ್ಯಲಾಗುತ್ತೆ. ಎಮರ್ಜೆನ್ಸಿ ಇದ್ರೆ ಅಂಬುಲೆನ್ಸ್ ಸಹ ಈ ಊರಿಗೆ ಬರುವುದು ಅಷ್ಟು ಸುಲಭದ ಮಾತಲ್ಲ. ಮಳೆಗಾಲದಲ್ಲಂತೂ ಇಲ್ಲಿನ ರಸ್ತೆ ಕೆಸರಿನಂತಾಗಿ ಜನರು ನಡೆದಾಡಲೂ ಕಷ್ಟವಾಗುತ್ತೆ. ತುಪ್ಪದೂರು ಗ್ರಾಮಕ್ಕೆ ಇದುವರೆಗೂ ಬಸ್ ಕಲ್ಪಿಸದಿರುವುದಕ್ಕೆ ಗ್ರಾಮದ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ತುಪ್ಪದೂರು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಂಪೂರ್ಣ ವಿಫಲರಾಗಿದ್ದಾರೆ. ದೊಡ್ಡಗಾಡಿಗಳು ಬಂದರೆ ಹಳ್ಳದ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಈವರೆಗೂ ಯಾವೊಬ್ಬ ಅಧಿಕಾರಿ ನಮ್ಮ ಕಷ್ಟ ಕೇಳಲು ತುಪ್ಪದೂರು ಗ್ರಾಮಕ್ಕೆ ಭೇಟಿ ನೀಡಿಲ್ಲ ಅಂತ ಗ್ರಾಮಸ್ಥರ ಆರೋಪಿಸಿದ್ದಾರೆ.

    ಕೇವಲ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಆಶ್ವಾಸನೆ ಕೊಡುವ ರಾಜಕಾರಣಿಗಳು ಗೆದ್ದಮೇಲೆ ಇತ್ತ ತಲೆಹಾಕಿಯು ಮಲಗುವುದಿಲ್ಲ. ನಾವು ಬಸ್‍ನ್ನೆ ನೋಡಿಲ್ಲ ಅಂತ ಇಲ್ಲಿನ ವಯೋವೃದ್ಧರು ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಈಗಲಾದ್ರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

  • ಗರ್ಭಿಣಿ ಪತ್ನಿ, ಮಗುವನ್ನು ಗಾಡಿ ಬಂಡಿಯಲ್ಲಿ 700ಕಿ.ಮೀ ಕರೆದುಕೊಂಡು ಬಂದ ಕಾರ್ಮಿಕ

    ಗರ್ಭಿಣಿ ಪತ್ನಿ, ಮಗುವನ್ನು ಗಾಡಿ ಬಂಡಿಯಲ್ಲಿ 700ಕಿ.ಮೀ ಕರೆದುಕೊಂಡು ಬಂದ ಕಾರ್ಮಿಕ

    – ತೆಲಂಗಾಣದಿಂದ ಮಧ್ಯಪ್ರದೇಶವರೆಗೂ ಬಂದ ಕಾರ್ಮಿಕ ದಂಪತಿ

    ಭೋಪಾಲ್: ಲಾಕ್‍ಡೌನ್‍ನಿಂದ ಕಾರ್ಮಿಕರ ವಲಯ ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ. ಈಗ ಇಲ್ಲೊಬ್ಬ ಕಾರ್ಮಿಕ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.

    ತನ್ನ ಪತ್ನಿ ಹಾಗೂ ಮಗುವನ್ನು ಗಾಡಿ ಬಂಡಿಯಲ್ಲಿ ಕುರಿಸಿಕೊಂಡು ಎಳೆದುಕೊಂಡು ಬಂದಿರುವ ಕಾರ್ಮಿಕನನ್ನು ರಾಮು ಘೋರ್ಮರೆ ಎಂದು ಗುರುತಿಸಲಾಗಿದೆ. ಈತ ಮಾರ್ಚ್ 17ರಂದು ಕೆಲಸವನ್ನು ಹುಡುಕಿಕೊಂಡು ಕುಟುಂಬ ಸಮೇತ ತೆಲಂಗಾಣಕ್ಕೆ ಹೋಗಿದ್ದಾನೆ. ಆದರೆ ಈತ ಅಲ್ಲಿಗೆ ಹೋದ 5 ದಿನದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಆದ್ದರಿಂದ ವಾಪಸ್ ಬಂದಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ರಾಮು, ನಾನು ನನ್ನ ಗರ್ಭಿಣಿ ಪತ್ನಿ ಮತ್ತು ಮಗುವಿನೊಂದಿಗೆ ಮಾರ್ಚ್ 17ರಂದು ತೆಲಂಗಾಣ ಕೆಲಸಕ್ಕಾಗಿ ಹೋಗಿದ್ದೇವೆ. ಆದರೆ ನಾವು ಹೋದ ಐದೇ ದಿನಕ್ಕೆ ಲಾಕ್‍ಡೌನ್ ಆಯ್ತು. ಆಗ ಅಲ್ಲಿ ಉಳಿದುಕೊಳ್ಳಲು ನನಗೆ ಮನೆ ಮತ್ತು ದುಡ್ಡಿನ ಸಮಸ್ಯೆ ಎದುರಾಯಿತು. ವಾಪಸ್ ಬರಲು ಬಸ್ ರೈಲು ಏನೂ ಇರಲಿಲ್ಲ. ಹಾಗಾಗಿ ಸ್ವಲ್ಪ ದಿನ ಬಿಟ್ಟು ನಾನೇ ಮರದಿಂದ ಗಾಡಿ ಬಂಡಿಯನ್ನು ತಯಾರಿಸಿಕೊಂಡು ಅದರಲ್ಲಿ ಪತ್ನಿಯನ್ನು ಕುರಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

    ರಾಮುವಿನ ಪತ್ನಿ ಗರ್ಭಿಣಿಯಾಗಿದ್ದು, ಆಕೆಗೆ ನಡೆಯಲು ಸಾಧ್ಯವಿಲ್ಲ. ಜೊತೆಗೆ ಸಣ್ಣ ಮಗು ಇರುವ ಕಾರಣದಿಂದ ರಾಮು ಗಾಡಿ ಬಂಡಿಯನ್ನು ಮಾಡಿಕೊಂಡು ಅದರಲ್ಲಿ ಅವರನ್ನು ಕೂರಿಸಿಕೊಂಡು ಬಂದಿದ್ದಾರೆ. ಸುಮಾರು 700 ಕಿ.ಮೀ ನಡೆದಿರುವ ರಾಮು, ಗಾಡಿಯನ್ನು ಎಳೆದುಕೊಂಡು ತೆಲಂಗಾಣದಿಂದ ಮಧ್ಯಪ್ರದೇಶದ ಗಡಿ ಭಾಗದವರಿಗೂ ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ರಾಮುವಿನ ಪತ್ನಿ, ನಾವು ತೆಲಂಗಾಣಕ್ಕೆ ಹೋದ ಕೇಲವೆ ದಿನಗಳಲ್ಲಿ ಲಾಕ್‍ಡೌನ್ ಜಾರಿ ಆಯ್ತು. ಹಾಗಾಗಿ ಅಲ್ಲೇ ಇದ್ದೇವು. ಆದರೆ ನಮಗೆ ತಿನ್ನಲು ಆಹಾರ ಇರಲಿಲ್ಲ. ಉಳಿಯಲು ಸರಿಯಾದ ಜಾಗವೂ ಇಲ್ಲ. ಮಾಡಲು ಕೆಲಸವಿಲ್ಲ. ಆದ್ದರಿಂದ ನಾವು ಅಲ್ಲಿಂದ ವಾಪಸ್ ಬರಲು ತೀರ್ಮಾನ ಮಾಡಿದ್ದೇವು. ನಂತರ ನನ್ನ ಪತಿ ಈ ರೀತಿಯ ಬಂಡಿ ಮಾಡಿದರು. ಅದರಲ್ಲಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

    ಕೇವಲ ಒಂದು ಹೊತ್ತಿನ ಊಟ ತಿಂದು ದಿನ ಪೂರ್ತಿ ತನ್ನ ಗರ್ಭಿಣಿ ಹೆಂಡತಿಯ ಜೊತೆ ಮಗುವನ್ನು ಎಳೆದುಕೊಂಡು ಬಂದ ರಾಮುವನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಿಚಾರಿಸಿ ನಂತರ ಅವನಿಗೆ ತಿನ್ನಲು ಊಟ ಮತ್ತು ಬಿಸ್ಕೆಟ್ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿ ನಿತೀಶ್ ಭಾರ್ಗವ ಅವರು ಅಲ್ಲಿಂದ ರಾಮು ಕುಟುಂಬ ಮನೆಗೆ ಹೋಗಲು ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

  • ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    – ಮಗಳ ಮದ್ವೆಗೆ 2,400 ಪುಸ್ತಕ ಗಿಫ್ಟ್ ಕೊಟ್ಟ ತಂದೆ
    – ವಿವಿಧ ದೇಶ ಸುತ್ತಾಡಿ ಪುಸ್ತಕ ಸಂಗ್ರಹಣೆ

    ಗಾಂಧಿನಗರ: ಸಾಮಾನ್ಯವಾಗಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಪೋಷಕರು ಹಣ, ಆಭರಣ ಅಥವಾ ಮಗಳಿಗೆ ಇಷ್ಟವಾಗುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಗುಜರಾತ್‍ನಲ್ಲಿ ತಂದೆಯೊಬ್ಬರು ಮದುವೆಯಾದ ಮಗಳಿಗೆ ಎತ್ತಿನಗಾಡಿಯಲ್ಲಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಅಪರೂಪದ ಘಟನೆ ರಾಜ್‍ಕೋಟ್‍ನಲ್ಲಿ ನಡೆದಿದೆ. ವಧು ಕಿನ್ನರಿ ತಮ್ಮ ತಂದೆ ಹರ್ದೇವ್ ಸಿಂಗ್ ಬಳಿ ನನ್ನ ಮದುವೆಗೆ ಹಣ, ಆಭರಣ ಕೊಡುವ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ ಎಂದು ಕೇಳಿಕೊಂಡಿದ್ದಳು. ಮಗಳ ಇಷ್ಟದಂತೆ ತಂದೆ ದೇಶದ ವಿವಿಧ ನಗರಗಳಲ್ಲಿ ಸಂಚರಿಸಿ ಪುಸ್ತಕಗಳನ್ನು ಸಂಗ್ರಹಿಸಿ ಎತ್ತಿನಗಾಡಿಯಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

    ಹರ್ವೇದ್ ಸಿಂಗ್ ವೃತ್ತಿಯಿಂದ ಶಿಕ್ಷಕ. ಇವರು ದೆಹಲಿ, ಕಾಶಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದೀರ್ಘಕಾಲ ಸುತ್ತಾಡಿ ತಮ್ಮ ಮಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ ತಮ್ಮ ಮಗಳು ಕಿನ್ನರಿಗೆ 2400 ಪುಸ್ತಕಗಳನ್ನು ಮದುವೆಯ ದಿನ ಎತ್ತಿಗಾಡಿಯಲ್ಲಿ ತುಂಬಿ ಉಡುಗೊರೆಯಾಗಿ ನೀಡಿದ್ದಾರೆ. ಕಿನ್ನರಿ ಸ್ವಲ್ಪ ಪುಸ್ತಕಗಳನ್ನು ತನ್ನೊಂದಿಗೆ ಪತಿಯ ಮನೆಗೆ ತೆಗೆದುಕೊಂಡು ಹೋಗಲಿದ್ದಾಳೆ. ಇತರ ಪುಸ್ತಕಗಳನ್ನು ವಿವಿಧ ಶಾಲೆಗಳಿಗೆ ನೀಡಲಾಗುವುದು.

    ನನ್ನ ಮಗಳು ಬಾಲ್ಯದಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹೀಗಾಗಿ ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆಯೇ ಪುಸ್ತಕಗಳನ್ನು ಕೊಡಿಸಿದ್ದೇನೆ. ನಮ್ಮ ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ ಎಂದು ತಂದೆ ಸಂತಸದಿಂದ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜೊತೆಗೆ ಗುಜರಾತಿ ಹಾಗೂ ಇಂಗ್ಲೀಷ್‍ನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ಜನರು ಪುಸ್ತಕಗಳಿಂದ ದೂರವಾಗುತ್ತಿವಾಗ ಕಿನ್ನರಿ ತಮ್ಮ ಮದುವೆಯಲ್ಲಿ ವರದಕ್ಷಿಣೆ ಎಂದು ಚಿನ್ನ, ಬೆಳ್ಳಿ  ಮತ್ತು ಆಭರಣಗಳ ಬದಲು ಪೋಷಕರಿಂದ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.