Tag: Care

  • ಸೋಂಕಿತೆಯ ತಲೆ ಬಾಚಿ ಜಡೆ ಹಾಕಿದ ಕಿಮ್ಸ್ ಸಿಬ್ಬಂದಿ – ನರ್ಸ್, ದಾದಿಯರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ

    ಸೋಂಕಿತೆಯ ತಲೆ ಬಾಚಿ ಜಡೆ ಹಾಕಿದ ಕಿಮ್ಸ್ ಸಿಬ್ಬಂದಿ – ನರ್ಸ್, ದಾದಿಯರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ

    ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಿಕ್ತಾ ಇಲ್ಲ. ಬೆಡ್ ಸಿಕ್ಕವರಿಗೆ ಆಕ್ಸಿಜನ್ ಪೊರೈಕೆ ಇಲ್ಲ. ಸೋಂಕಿತರಿಗೆ ಬೆಡ್ ಆಕ್ಸಿಜನ್ ಸಿಕ್ಕರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಅನ್ನೋ ಆರೋಪಗಳನ್ನ ಕೇಳ್ತಾನೇ ಇದ್ದೇವೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯರ ಆರೈಕೆ ಮಾಡ್ತಾ ಇರೋ ನರ್ಸಗಳ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡನಲ್ಲಿ ನೂರಾರು ಕೋವಿಡ್ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಸೋಂಕಿತರನ್ನ ಇದೀಗ ನರ್ಸಗಳು, ದಾದಿಯರು ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ.

    ಸೋಂಕಿತ ಮಹಿಳೆಗೆ ಬರೀ ಮಾತ್ರೆ, ಇಂಜೆಕ್ಷನ್, ಊಟ ಕೊಡುವ ಜೊತೆ ಜೊತೆಗೆ ಇಲ್ಲಿನ ದಾದಿಯರು, ನರ್ಸ್ ಗಳು ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಡ್ ಮೇಲೆ ಆಕ್ಸಿಜನ್ ಪಡೆಯುತ್ತಿದ್ದ ಸೋಂಕಿತ ಹಿಳೆಗೆ ನರ್ಸ್ ಒಬ್ಬರು ತಮ್ಮ ಮನೆಯ ಹಿರಿಯ ಸದಸ್ಯರಿಗೆ ಸೇವೆ ಮಾಡುವಂತೆ ಅವರ ತಲೆ ಬಾಚಿ ಜಡೆ ಹಾಕಿ ಆರೈಕೆ ಮಾಡುತ್ತಿರುವ ಫೋಟೋ ಇದೀಗ ಬಿಡುಗಡೆಯಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ನಲ್ಲಿ ನರ್ಸ್,  ದಾದಿಯರು ಪಿಪಿಇ ಕಿಟ್ ಹಾಕಿಕೊಂಡು ದಿನಪೂರ್ತಿ ಕೆಲಸ ಮಾಡುವುದರ ಜೊತೆಗೆ ಸೋಂಕಿತರಿಗೆ ವಿಶೇಷ ಆರೈಕೆ ಮಾಡುತ್ತಿರುವುದು ವಿಶೇಷವಾಗಿದೆ. ಅಲ್ಲದೇ 6 ಗಂಟೆಗಳ ಕಾಲ ಸತತವಾಗಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದೇ ದುಸ್ತರವಾಗಿರುವ ಸಮಯದಲ್ಲಿ ನರ್ಸಗಳು ವಿಶೇಷ ಕಾಳಜಿವಹಿಸಿ ಮಹಿಳೆಯೊಬ್ಬರಿಗೆ ತಲೆಬಾಚಿ ಜಡೆ ಹಾಕಿರುವುದು ನಿಜಕ್ಕೂ ಮಾನವೀಯತೆಗೆ ಸಾಕ್ಷಿಯಾಗಿದೆ.

  • ಆಸ್ಪತ್ರೆಯಲ್ಲಿ ಇನ್ಮುಂದೆ ಸೋಂಕಿತರಿಗೆ ಸಂಬಂಧಿಕರಿಂದ ಆರೈಕೆ?

    ಆಸ್ಪತ್ರೆಯಲ್ಲಿ ಇನ್ಮುಂದೆ ಸೋಂಕಿತರಿಗೆ ಸಂಬಂಧಿಕರಿಂದ ಆರೈಕೆ?

    – ಕಾರ್ಯರೂಪಕ್ಕೆ ಬರುತ್ತಾ ಈ ಯೋಜನೆ
    – ತಜ್ಞರಿಂದ ಮಿಶ್ರ ಪ್ರತಿಕ್ರಿಯೆ

    ಬೆಂಗಳೂರು: ಮಹಾಮಾರಿ ಕೊರೊನಾ ರುದ್ರ ನರ್ತನ ಮುಂದುವರಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ದೇಶದಲ್ಲಿ ಕೊರೊನಾದ ಅಟ್ಟಹಾಸ ಜೋರಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಒಂದು ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.

    ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ರಾಜ್ಯದಲ್ಲಿ 6 ಲಕ್ಷದ ಗಡಿ ಬಳಿ ಸೋಂಕಿತರ ಸಂಖ್ಯೆ ಬಂದು ತಲುಪಿದೆ. ಬೆಂಗಳೂರು ಮಹಾನಗರದಲ್ಲಿ 2.5 ಲಕ್ಷದ ಬಳಿ ಬಂದಿದೆ. ಇದರಿಂದ ಆರೋಗ್ಯ ಇಲಾಖೆ ಇನ್ಮುಂದೆ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ ಆರೈಕೆಯನ್ನು ಅವರ ಕುಟುಂಬದವರಿಂದ ಮಾಡಿಸುವ ಪ್ಲ್ಯಾನ್ ಮಾಡಿದೆ. ಆರೋಗ್ಯ ಇಲಾಖೆಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

    ಏನಿದು ಸಂಬಂಧಿಕರಿಂದ ಆರೈಕೆ ಪ್ಲ್ಯಾನ್?
    ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸಂಬಂಧಿಕರಿಂದಲೇ ಆರೈಕೆ ಮಾಡಿಸುವುದಾಗಿದೆ. ಸಂಬಂಧಿಕರು ರೋಗಿಯ ಆರೈಕೆ ಮಾಡುವುದು ಉತ್ತಮ ಅಂತ ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧಿಕರು ಸೋಂಕಿತರ ಜೊತೆಗಿದ್ದರೆ ಮಾನಸಿಕವಾಗಿ ಬೇಗ ಚೇತರಿಕೆ ಕಾಣಬಹುದು. ಇದಕ್ಕೆ ಸಂಬಂಧಿಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕಾಗುತ್ತದೆ. ಪಿಪಿಇ ಕಿಟ್ ಧರಿಸಿಕೊಂಡು ಆರೈಕೆ ಬಗ್ಗೆ ಮಾಹಿತಿ ನೀಡಬೇಕು.

    ಸೋಂಕಿತರಿಗೆ ಮನೆಯಿಂದ ಊಟ ತರಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸಂಬಂಧಿಕರು ಜೊತೆಗಿದ್ದರೆ ಕೊರೊನಾ ಸೋಂಕಿತರಿಗೆ ಖಿನ್ನತೆ ಕಡಿಮೆಯಾಗಿ ಮನೋಧೈರ್ಯ ಹೆಚ್ಚಳವಾಗುತ್ತದೆ. ಆದರೆ ಐಸೋಲೇಷನ್‍ನಲ್ಲಿರೋ ವ್ಯಕ್ತಿಯನ್ನು ಭೇಟಿಯಾಗಲು ಸಂಬಂಧಿಕರಿಗೆ ಅವಕಾಶ ಇರುವುದಿಲ್ಲ. ಆದರೆ ಸೋಂಕಿತರನ್ನು ನೋಡಿಕೊಳ್ಳುವ ಸಂಬಂಧಿಕರಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದೇ ಆರೋಗ್ಯ ಇಲಾಖೆಗೆ ಒಂದು ಸವಾಲಾಗುತ್ತದೆ.

    ಸಂಬಂಧಿಕರ ಆರೈಕೆ ಬಗ್ಗೆ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ
    ಸೋಂಕಿತ ವ್ಯಕ್ತಿಗೆ ಕುಟುಂಬ ಸದಸ್ಯರು ಆರೈಕೆ ಮಾಡುವುದು ಸೂಕ್ತವಲ್ಲ. ಯಾಕೆಂದರೆ ಸೋಂಕಿತ ವ್ಯಕ್ತಿಯನ್ನ ಭೇಟಿ ಮಾಡುವುದರಿಂದ ಕುಟುಂಬದ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಸೋಂಕಿತ ವ್ಯಕ್ತಿಯ ಆರೈಕೆಗೆ ವೈದ್ಯಕೀಯ ಸಿಬ್ಬಂದಿ ತರಬೇತಿ ಪಡೆದಿರುತ್ತಾರೆ. ಜೊತೆಗೆ ವೈದ್ಯಕೀಯ ಸಿಬ್ಬಂದಿ ತಮಗೆ ಸೋಂಕು ಹರಡದಂತೆ ಎಚ್ಚರ ವಹಿಸುತ್ತಾರೆ. ಆದರೆ ರೋಗಿಯ ಸಂಬಂಧಿಕರು ರೋಗಿಯನ್ನು ನೋಡಿದಾಗ ಭಾವನಾತ್ಮಕವಾಗಿ ವರ್ತಿಸಬಹುದು. ಇವರಿಗೆ ಯಾವುದೇ ರೀತಿಯ ತರಬೇತಿ ಕೂಡ ಬರುವುದಿಲ್ಲ. ಆದ್ದರಿಂದ ಸಂಬಂಧಿಕರು ರೋಗಿಯನ್ನ ಮುಟ್ಟೋದು ಮಾಡಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಬಹುದು ಎಂದು ಕೆಲ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

    ರೋಗಿಯ ಆರೈಕೆಯನ್ನ ಸಂಬಂಧಿಕರು ಮಾಡುವುದು ಒಂದು ರೀತಿಯಲ್ಲಿ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕಾಗುತ್ತೆ. ಪಿಪಿಇ ಕಿಟ್ ಧರಸಿಕೊಂಡು ಸಂಬಂಧಿಕರ ಆರೈಕೆ ಮಾಡುವುದನ್ನ ತಿಳಿಸಿಕೊಡಬೇಕಾಗುತ್ತೆ. ಜೊತೆಗೆ ಮನೆಯಿಂದ ಊಟ ನೀಡಲು ವ್ಯವಸ್ಥೆ ಮಾಡಬಹುದು. ಇದರಿಂದ ರೋಗಿಗೆ ಮನೋಧೈರ್ಯ ಹೆಚ್ಚಾಗಲಿದೆ. ಅಲ್ಲದೇ ಮನಸಿಕ ಖಿನ್ನತೆ ಕಡಿಮೆಯಾಗುತ್ತದೆ ಎಂದಿದ್ದಾರೆ.

    ಐಸೋಲೇಷನ್‍ನಲ್ಲಿರುವ ವ್ಯಕ್ತಿಯನ್ನ ಭೇಟಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ಆರೋಗ್ಯ ಇಲಾಖೆ, ಆಸ್ಪತ್ರೆಯ ಸಿಬ್ಬಂದಿ ಸಂಬಂಧಿಕರಿಗೆ ಕೊರೊನಾ ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕೆವಹಿಸದೇ ಬೇಕಾಬಿಟ್ಟಿಯಾಗಿ ರೋಗಿಯ ಆರೈಕೆ ಮಾಡಲು ಸಂಬಂಧಿಕರನ್ನ ಬಿಡುವುದು ಕೊರೊನಾ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತೆ. ಸೋಂಕಿತ ವ್ಯಕ್ತಿಯ ಆರೈಕೆಯನ್ನ ಸಂಬಂಧಿಕರು ಮಾಡುವುದು ರೋಗಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

  • ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ಮಳೆಯಲ್ಲಿ ಆರೋಗ್ಯ ರೀತಿಯ ತ್ವಚೆಯ ರಕ್ಷಣೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಶೀತ, ಉಸಿರಾಟದ ತೊಂದರೆ ಮತ್ತು ಚರ್ಮದ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ ನಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್

    ಸಾಮಾನ್ಯವಾಗಿ ಮಳೆಗಾಲದಲ್ಲಿ ವಾತಾವರಣದಲ್ಲಿ ಅಧಿಕ ತೇವಾಂಶವಿರುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ, ಒಡಕು ಇಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದರೆ ಕೆಲ ಉಪಯುಕ್ತ ಸಲಹೆಗಳು ನಿಮಗಾಗಿ ಇಲ್ಲಿವೆ.

    * ಮಳೆಗಾಲದಲ್ಲಿ ನಮ್ಮ ರೋಗ-ನಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಏಕೆಂದರೆ ಸೋಂಕುಗಳ ಹಾವಳಿ ಈ ಸಮಯದಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯ ಬೇರೆ ಸಮಯಕ್ಕೆ ಹೋಲಿಸಿದರೆ ಮಳೆಗಾಲದಲ್ಲಿ ಹೆಚ್ಚು ಹದಗೆಡುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಸೋಂಕುಕಾರಕ ಕ್ರಿಮಿಗಳನ್ನು ಹೊರಹಾಕುವಲ್ಲಿ ತುಂಬಾ ಸಹಾಯಕ.

    * ಮಳೆಗಾಲದಲ ವಾತಾವರಣದಲ್ಲಿ ತೇವಾಂಶ ಅಧಿಕವಿರುವುದರಿಂದ ತ್ವಚೆಯಲ್ಲಿ ತುರಿಕೆ. ಅಲರ್ಜಿ ಮುಂತಾದ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಲೋಳೆಸರದಲ್ಲಿ ಏನಾದರೂ ತ್ವಚೆ ಅಲರ್ಜಿ ಆಗಿದ್ದರೆ ಅದನ್ನು ಗುಣಪಡಿಸುವ ಸಾಮರ್ಥ್ಯ ಇದೆ. ತಾಜಾ ಲೋಳೆಸರವನ್ನು ತ್ವಚೆ ಅಲರ್ಜಿಯಾಗಿರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಡಿಮೆಯಾಗುವುದು. ಅಲ್ಲದೆ ಲೋಳೆಸರ ಹಚ್ಚುವುದರಿಂದ ತ್ವಚೆ ಕಾಂತಿ ಹೆಚ್ಚುವುದು.
    * ಕಹಿಬೇವಿನಲ್ಲಿ ಸೋಂಕು ನಿವಾರಕ ಗುಣವಿದೆ. ಹೀಗಾಗಿ ಮೊಡವೆ, ಕಪ್ಪು ಕಲೆ, ಮೈ ಮೇಲೆ ಗುಳ್ಳೆಗಳು ಇವುಗಳನ್ನು ಗುಣಪಡಿಸುವಲ್ಲಿ ಕಹಿಬೇವು ಸಹಕಾರಿ.

    * ಮೊಡವೆ, ಕಪ್ಪುಕಲೆ ಮುಂತಾದ ತೊಂದರೆಗೆ ಮುಖಕ್ಕೆ ಅರಿಶಿಣ ಹಚ್ಚಿದರೆ ಒಳ್ಳೆಯದು. ಅರಿಶಿಣವನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮಳೆಗಾಲದ ಆಹಾರದಲ್ಲಿ ಅರಿಶಿಣ ಇರಬೇಕು.
    * ಬಿಸಿ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಸ್ನಾನ ಮಾಡುವುದು. ಇದರಿಂದ ಚರ್ಮದಲ್ಲಿನ ಡ್ರೈನೆಸ್ ಹೋಗುತ್ತದೆ.
    * ತ್ವಚೆ ಒಣಗಿದಂತೆ ಅಥವಾ ತುರಿಕೆಯಂತಹ ಸಮಸ್ಯೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು.
    * ಸ್ನಾನದ ನೀರಿನಲ್ಲಿ ಗುಲಾಬಿ ಎಸಳುಗಳನ್ನು ಹಾಕಿ ಕೆಲ ಸಮಯದ ಬಳಿಕ ಆ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ಮಳೆಗಾಲದಲ್ಲಿ ತ್ವಚೆ ಕಾಂತಿಯುತವಾಗಿರುತ್ತದೆ.

    * ಮುಖದಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಒಂದು ಚಮಚ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ. ಎರಡು ನಿಮಷ ಸ್ಕ್ರಬ್ ಮಾಡಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
    * ಹೆಚ್ಚಾಗಿ ನೀರು ಕುಡಿಯುವುದು ಕೂಡ ತ್ವಚೆಯ ರಕ್ಷಣೆಗೆ ಉಪಯೋಗಕಾರಿ
    * ಮುಖದಲ್ಲಿ ಮೊಡವೆ, ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಆಯಿಂಟ್‍ಮೆಂಟ್ ಬದಲಾಗಿ ಅರಿಶಿಣ ಹಚ್ಚುವುದು ಉತ್ತಮ.
    * ಮಳೆಗಾಲದಲ್ಲಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುವುದು ಉತ್ತಮ. ತೇವ ಇರುವಾಗಲೇ ಕೂದದಲನ್ನು ಬಾಚಬಾರದು. ಆದಷ್ಟೂ ಬಿಸಿಲಿನಲ್ಲಿ ಕೂದಲನ್ನು ಒಣಗಿಸಬೇಕು.

    * ಎಣ್ಣೆ ಚರ್ಮದವರು ಮುಣದ ಅಂದವನ್ನು ಕಾಪಾಡಿಕೊಳ್ಳಲು ಸೋಪು ಬಳಸುವುದುಕ್ಕಿಂತ ಕಡಲೆಹಿಟ್ಟಿನಿಂದ ಮುಖ ತೊಳೆಯುವುದು ಉತ್ತಮ.
    * ಪಪ್ಪಾಯ ಹಣ್ಣನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗುವಂತೆ ಮಾಡಬಹುದು.

  • ಪ್ರಧಾನಿ ಭೇಟಿ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಬಿಎಸ್‍ವೈ

    ಪ್ರಧಾನಿ ಭೇಟಿ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಬಿಎಸ್‍ವೈ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪನವರು, ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ನಡುವೆ ನಿನ್ನೆ ಪ್ರಧಾನಿ ಮೋದಿಯವರನ್ನು ಸಂಸತ್‍ನಲ್ಲಿ ಭೇಟಿ ಮಾಡಿದ್ದ ಯಡಿಯೂರಪ್ಪ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ ಎಂಬ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿಎಂ ಭೇಟಿ ವೇಳೆ ಪ್ರಧಾನಿ ಮೋದಿಯವರು ಬಿಎಸ್‍ವೈ ಆರೋಗ್ಯದ ಬಗ್ಗೆ ಅತೀವ ಕಾಳಜಿ ತೋರಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಸಲಹೆ ನೀಡಿದ್ದಾರೆ. ವಯಸ್ಸಾಗಿದೆ, ಆರೋಗ್ಯ ಸಮಸ್ಯೆಗಳ ಕಡೆ ಹೆಚ್ಚು ನಿಗಾವಹಿಸಿ. ಕೊರೊನಾ ಸಂಧರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಮೋದಿ ಹೇಳಿದ್ದಾರೆ. ಇದನ್ನು ಕಂಡು ಬಿಎಸ್‍ವೈ ಭಾವುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊರೊನಾದಿಂದ ಸಾವನ್ನಪ್ಪಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ವಿಚಾರ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿರುವ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಇವರ ಜೊತೆಗೆ ಹಲವು ಕೇಂದ್ರ ಸಚಿವರು ಕೂಡ ಫೋನ್ ಮೂಲಕವೇ ಬೇಡಿಕೆಗಳು ತಿಳಿಸಿ. ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಕೇಂದ್ರ ನಾಯಕರ ಕಾಳಜಿಯನ್ನು ಕಂಡು ಬಿಎಸ್‍ವೈಯವರು ಭಾವುಕರಾಗಿದ್ದಾರೆ ಎನ್ನಲಾಗಿದೆ.

  • 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ಎಂಬ ಸಂಕಷ್ಟದ ಕಾಲದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ಲೆಕ್ಕಿಸದೇ, ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೆಲಸ ಮಾಡುವ ಇವರ ಹೆರಸು ರೂಪಾ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಸೇವೆಯಿಂದ ವಿಮುಖರಾಗದೇ, ಮಾತೃತ್ವದ ರಜೆ ಕೂಡ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಅಂದ್ರೆ ಏನು ಎಂಬುದು ತೋರಿಸಿಕೊಟ್ಟಿದ್ದಾರೆ.

    ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಕಣ್ಣಿಗೆ ಕಾಣದ ಒಂದು ವೈರಸ್ ನಿಂದ ಜನರು ಬಳಲುವಂತಾಗಿದ್ದು, ಯಾವಾಗಪ್ಪ ಇದು ಮುಗಿಯುತ್ತೇ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕಿನಿಂದ ದೂರವಿರಬೇಕೆಂದು ಲಾಕ್‍ಡೌನ್ ಘೋಷಿಸಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ಆಶಾ ಮತ್ತು ಅಂಗನವಾಡಿ ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಜನರ ಸೇವೆ ಮಾಡುತ್ತಿದ್ದಾರೆ.

    ಅಂತಹದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಇದರಲ್ಲೇನು ವಿಶೇಷತೆ ಅಂತಿರಾ? ವಿಶೇಷವಿದೆ. ಇವರು ಕೇವಲ ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿದ್ರೆ ಬೇರೆ ಮಾತು. ಆದರೆ ಈ ಮಹಿಳೆ ನಿಜವಾಗಿಯೂ ಗಟ್ಟಿಗಿತ್ತಿ. ಯಾಕೆಂದರೆ ಇವರು 9 ತಿಂಗಳ ತುಂಬು ಗರ್ಭಿಣಿ. ಈ ಕೊರೊನಾ ಎಂಬ ಸಂಕಷ್ಟದ ಸಮಯದಲ್ಲಿ ತಮ್ಮ ಸಂಕಷ್ಟವನ್ನೆಲ್ಲ ಮರೆತು ರೋಗಿಗಳ ಸೇವೆ ಮತ್ತು ಅವರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಜನರು ರಸ್ತೆಗಿಳಿಯಲು ಅದರಲ್ಲೂ ವಿನಾಕಾರಣ ಆಸ್ಪತ್ರೆ ಒಳಗಡೆ ಅಲ್ಲ ಅದರ ಆವರಣಕ್ಕೂ ಹೋಗಲು ಹಿಂಜರಿಯುತ್ತಿರುವ ವೇಳೆಯಲ್ಲಿ ಈ ಕೊರೊನಾ ವಾರಿಯರ್ ರೂಪರವರು, ತಾವು ತುಂಬು ಗರ್ಭಿಣಿ ಎಂಬುದನ್ನು ಮರೆತು ತಮಗಾಗುವ ಆಯಾಸವನ್ನೆಲ್ಲಾ ಬದಿಗಿಟ್ಟು, ಸೇವೆಗೆ ಮುಂದಾಗಿದ್ದಾರೆ. ಪ್ರತಿದಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ದಾಖಲಾದವರ ಆರೈಕೆಯಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ರೆಸ್ಟ್ ಎಂಬ ಹೆಸರಿನಲ್ಲಿ ಮನೆಯಲ್ಲಿರಲು ಇವರಿಗೆ ಇಷ್ಟವಾಗುವುದಿಲ್ಲವಂತೆ. ಕಳೆದ 8-9 ವರ್ಷಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿಕೊಂಡು ಬಂದಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರು ಇತರೇ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.

    ಶಿವಮೊಗ್ಗದ ಗಾಜನೂರು ಗ್ರಾಮದಿಂದ ಸುಮಾರು 60 ಕಿ.ಮೀ. ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಾಣಿಸಿ, ಸೇವೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 120 ಕಿ.ಮೀ. ಪ್ರಯಾಣ ಮಾಡುವ ಇವರು ಬಳಲದೇ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೀರ್ಥಹಳ್ಳಿಯ ಜನರು ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಕೊರೊನಾ ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದಾರೆ.

    ಅಷ್ಟಕ್ಕೂ ತಮ್ಮ ಚೊಚ್ಚಲ ಹೆರಿಗೆಯ ಬೆರಳೆಣಿಕೆ ದಿನಗಳನ್ನು ಎಣಿಸುತ್ತಿರುವ ವಾರಿಯರ್ ರೂಪಾರವರು ಈ ರೀತಿ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ಆಸ್ಪತ್ರೆಯ ಇತರೇ ಸಿಬ್ಬಂದಿ ಮತ್ತು ಇಲ್ಲಿನ ವೈದ್ಯಾಧಿಕಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಆಸ್ಪತ್ರೆಯವರು 7 ತಿಂಗಳಾಗುತ್ತಿದ್ದಂತೆ ರಜೆ ತಗೆದುಕೊಳ್ಳಿ ಎಂದಿದ್ದರು ಕೂಡ ರೂಪಾರವರು ಇಲ್ಲ ನಾನು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತೇನೆ. ನನಗೆ ರಜೆ ಬೇಡ ಎಂದಿದ್ದಾರಂತೆ. 9 ತಿಂಗಳ ನೋವು ಸಂಕಟವನ್ನೇಲ್ಲಾ ಅಸ್ಪತ್ರೆಯಲ್ಲಿ ಬರುವ ರೋಗಿಗಳ ಸೇವೆ ಮಾಡುತ್ತಾ ಮರೆತು ಆಸ್ಪತ್ರೆಯಲ್ಲಿ ಖುಷಿ, ಖುಷಿಯಾಗಿ, ಲವಲವಿಕೆಯಿಂದ ಓಡಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಮೊದಲು ತಮ್ಮ ಕುಟುಂಬದವರಿಗೆ ಇದು ಇಷ್ಟವಿಲ್ಲದೇ ಇದ್ದರೂ ಕೂಡ ಅವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೇ ಜನರ ಸೇವೆಗೆ ಮುಂದಾಗಿರುವುದಕ್ಕೆ ರೂಪಾರನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.

    ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ದೇವರು ಎಂದು ಜನರು ಭಾವಿಸಿ ಬರುತ್ತಾರೆ. ಹೀಗಾಗಿ ಇಂತಹ ಸಂಕಷ್ಟದ ಸಮಯದಲ್ಲೂ ವಿರಮಿಸದೇ ಅವರ ಸೇವೆ ಮಾಡುವುದೇ ಮುಖ್ಯ ಎಂಬದು ರೂಪಾರವರ ತೀರ್ಮಾನ. ಏನೇ ಆಗಲಿ ಕೊರೊನಾ ವಾರಿಯರ್ ಆಗಿ ಇಂತಹ ಸಮಯದಲ್ಲಿಯೂ ಸೇವೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

  • ಚಂದದ ಕಣ್ಣಿಗೆ ಮನೆಯಲ್ಲಿಯೇ ಆರೈಕೆ ಮಾಡಿ

    ಚಂದದ ಕಣ್ಣಿಗೆ ಮನೆಯಲ್ಲಿಯೇ ಆರೈಕೆ ಮಾಡಿ

    ಸಾಮಾನ್ಯವಾಗಿ ಎಲ್ಲರಿಗೂ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಅದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ದೆ ಮಾಡದೇ, ಕಣ್ಣಿಗೆ ಸರಿಯಾಗಿ ಆರೈಕೆ ಮಾಡದೇ ಇರುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆಯಾಗುತ್ತದೆ. ಅದರಲ್ಲೂ ಕಂಪ್ಯೂಟರ್ ಮುಂದೆ ಹೆಚ್ಚಾಗಿ ಕುಳಿತು ಕೆಲಸ ಮಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುತ್ತದೆ. ಆದ್ದರಿಂದ ಇದನ್ನು ತಡೆಯಲು ಮನೆಯಲ್ಲಿಯೇ ಮದ್ದು ಮಾಡಬಹುದು.

    ಕಣ್ಣಿನ ಅಂದಕ್ಕೆ ಮನೆಮದ್ದು:
    * ಪ್ರತಿದಿನ ಕಡಿಮೆ ಎಂದರೆ 7 ಗಂಟೆ ನಿದ್ದೆ ಮಾಡಬೇಕು.
    * ಸೌತೆಕಾಯಿಯ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಮತ್ತು 15 ನಿಮಿಷದ ನಂತರ ನೀರಿನಿಂದ ತೊಳೆಯಿರಿ.
    * ಪ್ರತಿ ದಿನದ ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಕಪ್ಪು ವೃತ್ತ ತಡೆಯಲು ಉತ್ತಮ ವಿಧಾನವಾಗಿದೆ.

    * ತಣ್ಣಗಿನ ಟೀ ಬ್ಯಾಗ್ ಅನ್ನು ಕಣ್ಣಿನ ಕೆಳಭಾಗದಲ್ಲಿ ಇಡುವುದರಿಂದ ಕೂಡ ಕಣ್ಣಿನ ಕಪ್ಪು ಕಲೆಗಳು ಮಾಯವಾಗುತ್ತವೆ.
    * ದಿನಕ್ಕೆ 10 ಲೋಟ ನೀರು ಕುಡಿಯಬೇಕು. ನೀರಿನಾಂಶ ಹೆಚ್ಚಾದಷ್ಟು ಕಣ್ಣಿನ ಸುತ್ತ ಇರೋ ಕಲೆಗಳನ್ನು ಹೋಗಲಾಡಿಸಬಹುದು.

    * ನಿಂಬೆ ಹಣ್ಣು ಮತ್ತು ಸೌತೆ ಕಾಯಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಅದರ ರಸವನ್ನು ಪ್ರತಿದಿನ ಹಚ್ಚಿ. 15 ನಿಮಿಷದ ನಂತರ ನೀರಿನಲ್ಲಿ ತೊಳೆದುಕೊಂಡರೆ ಕಪ್ಪು ವೃತ್ತ ಕಡಿಮೆಯಾಗುತ್ತದೆ.
    * ಕೆಲಸ, ಕಾಲೇಜು ಮುಗಿಸಿ ಮನೆಗೆ ಹೋದಾಗ ಬೆಚ್ಚಗಿನ ಅಥವಾ ತಣ್ಣನೆ ನೀರಿನಿಂದ ಕಣ್ಣನ್ನು ತೊಳೆಯಿರಿ. ಇದರಿಂದ ರಕ್ತ ಸಂಚಲನ ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗುತ್ತದೆ.

    * ಪುದೀನಾ ಎಲೆಗಳನ್ನು ಜಜ್ಜಿ ಅದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. 10 ರಿಂದ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಮಾಡಿದರೆ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.
    * ಆಲೂಗಡ್ಡೆ ಮತ್ತು ಸೌತೆಕಾಯಿ ಮಿಶ್ರಣದ ರಸವನ್ನು ಬಳಿದರೆ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು.

    * ಕಿತ್ತಳೆ ರಸವನ್ನು ಗ್ಲಿಸರಿನ್ ಜೊತೆ ಬೆರೆಸಿ ವಾರದಲ್ಲಿ 3 ಬಾರಿ ಕಣ್ಣಿನ ಸುತ್ತ ಹಚ್ಚಿ. ಬಳಿಕ 20 ನಿಮಿಷದ ನಂತರ ತೊಳೆಯಿರಿ. ಇದರಿಂದ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ.


    * ಮಲಗುವ ಮೊದಲು ಬಾದಾಮಿ ಮತ್ತು ಹಾಲನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತಲು ಹಚ್ಚಿ. ಮಾರನೆಯ ದಿನ ಬೆಳಗ್ಗೆ ತಣ್ಣನೆಯ ನೀರಿನಿಂದ ತೊಳೆಯಿರಿ.

    * ತಾಜಾ ಹಣ್ಣು, ಮೊಸರು, ಬೇಳೆಕಾಳುಗಳು, ಕೆನೆ ತೆಗೆದ ಹಾಲು, ಸೊಪ್ಪುಗಳು ಮತ್ತು ಬೀನ್ಸ್ ಇವುಗಳನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಯಿಗಳ ಹಾವಳಿ ತಡೆಯಲಾಗದ ಬಿಬಿಎಂಪಿಯಿಂದ ಹೊಸ ಪ್ಲಾನ್

    ನಾಯಿಗಳ ಹಾವಳಿ ತಡೆಯಲಾಗದ ಬಿಬಿಎಂಪಿಯಿಂದ ಹೊಸ ಪ್ಲಾನ್

    ಬೆಂಗಳೂರು: ನಾಯಿಗಳ ಹಾವಳಿಯನ್ನು ತಡೆಯಲು ಸಾಧ್ಯವಾಗದೆ ಇದೀಗ ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಪುಂಡ-ಪೋಕರಿಗಳಿಂದ ತಪ್ಪಿಸಿಕೊಳ್ಳಲು ಮಕ್ಕಳು ಕರಾಟೆ ಸೇರಿ ಇನ್ನಿತರ ವಿದ್ಯೆ ಕಲಿಯುತ್ತಾರೆ. ಆದರೆ ಈಗ ಬಿಬಿಎಂಪಿ ಮಕ್ಕಳಿಗೆ ಮತ್ತೊಂದು ರೀತಿಯ ಪಾಠ ಹೇಳುವುದಕ್ಕೆ ಸಿದ್ಧವಾಗಿದೆ.

    ಬೆಂಗಳೂರಿನ ನಾಯಿಗಳು ಬನ್ನೇರುಘಟ್ಟ ಸಿಂಹಗಳ ತರ ಇರುತ್ತವೆ ಅನ್ನೋ ಮಾತಿದೆ. ಇದಕ್ಕೆ ಪೂರಕ ಎನ್ನುವಂತೆ ತಿಂಗಳಿಗೊಂದು ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗುತ್ತಿವೆ. ಮೂರು ವರ್ಷಗಳಲ್ಲಿ ಹೆಚ್ಚು ಮಕ್ಕಳು ಮತ್ತು ವಯಸ್ಕರು ಸೇರಿ 35 ಸಾವಿರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದೆ.

    ಕಳೆದ ಒಂದು ತಿಂಗಳ ಹಿಂದೆ ವಿಭೂತಿ ಪುರದಲ್ಲಿ 11 ವರ್ಷದ ಮಗುವೊಂದನ್ನು ನಾಯಿಗಳ ಗುಂಪು ಕಚ್ಚಿ ಕೊಂದಿದ್ದವು. ಇಷ್ಟೆಲ್ಲ ನಾಯಿ ಕಚ್ಚಿದ ಪ್ರಕರಣಗಳು ನಡೆಯುತ್ತಿರುವಾಗ ನಾಯಿ ಹಾವಳಿಯನ್ನು ತಡೆಯಬೇಕಿದೆ. ಹೀಗಾಗಿ ನಾಯಿಗಳ ಕಚ್ಚುವಿಕೆಯಿಂದ ಪರಾರಿ ಆಗೋದು ಹೇಗೆ ಅನ್ನುವ ಪಾಠ ಮಾಡಿಸಬೇಕು ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.

    ಮೇಯರ್ ಗಂಗಾಂಬಿಕೆ ಮಾತು ಕೇಳಿ ಕೆಲವು ಸಂಘಟನೆಗಳ ಮೂಲಕ ಶಾಲಾ ಮಕ್ಕಳೊಂದಿಗೆ, ನಾಯಿ ಹಾವಳಿಯಿಂದ ಮರಣದಂತಹ ಪ್ರಕರಣಗಳು ನಡೆದಿರುವ ಬಡಾವಣೆಗಳಿಗೆ ಹೋಗಿ ಸಾರ್ವಜನಿಕರಿಗೆ ನಾಯಿಗಳೊಂದಿಗೆ ಹೇಗೆ ವರ್ತಿಸಬೇಕು ಎಂದು ಜಾಗೃತಿ ಮೂಡಿಸಲು ಚಿಂತಿಸಲಾಗಿದೆ.

    ನಾಯಿ ಹಾವಳಿ ನಿಯಂತ್ರಣಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಬದಲಿಗೆ ಮಕ್ಕಳಿಗೆ ಪಾಠ ಹೇಳುವುದಕ್ಕೆ ಮೇಯರ್ ಸಿದ್ಧವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಮೈಸೂರು: ಮೈಸೂರು ದಸರೆಗಾಗಿ ಆಗಮಿಸಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಮೊದಲ ಗಜಪಡೆಯ ಟೀಂ ರಾಜಬೀದಿಯಲ್ಲಿ ತಾಲೀಮು ಆರಂಭಿಸಿದೆ.

    ಅಂಬಾರಿ ಮೆರವಣಿಗೆ ವೇಳೆಗೆ ಆನೆಗಳು ಮತ್ತಷ್ಟು ಶಕ್ತಿಶಾಲಿ ಆಗಬೇಕಿದ್ದು, ತಾಲೀಮು ಆರಂಭಿಸುವ ಮುನ್ನ ಅವುಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಗಜಪಡೆಯ ಆರೈಕೆ ಹಾಗೂ ಆರೋಗ್ಯದ ಮೇಲೆ ನಿಗಾ ಇಡುವ ಸಲುವಾಗಿ ಅರಣ್ಯ ಇಲಾಖೆಯೂ ಈ ಪರೀಕ್ಷೆ ನಡೆಸುತ್ತದೆ. ಕಳೆದ ಬಾರಿ ದಸರಾ ಮುಗಿಸಿ ಕಾಡಿಗೆ ಹಿಂದಿರುಗಿದ್ದ ಗಜಪಡೆಯ ತೂಕಕ್ಕೂ ಇವತ್ತಿನ ತೂಕಕ್ಕೂ ಇರುವ ವ್ಯತ್ಯಾಸದ ಕುರಿತ ಇನ್‍ಟ್ರೆಸ್ಟಿಂಗ್ ಅಂಶಗಳು ಇಂತಿದೆ.

    ಇಂದು ಟ್ರಕ್‍ಗಳ ತೂಕ ಹಾಕುವ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷಿಸಲಾಯಿತು. ಕ್ಯಾಪ್ಟನ್ ಅರ್ಜುನ, ವರಲಕ್ಷ್ಮಿ, ವಿಕ್ರಮ, ಧನಂಜಯ, ಗೋಪಿ ಮತ್ತು ಚೈತ್ರ ಆನೆಗಳ ದೇಹ ತೂಕ ಪರೀಕ್ಷಿಸಲಾಯಿತು. ಕಳೆದ ವರ್ಷ 5,250 ಕೆಜಿ ತೂಕವಿದ್ದ ಕ್ಯಾಪ್ಟನ್ ಅರ್ಜುನ ಈಗ 5,650 ಕೆಜಿ ತೂಕವಿದ್ದಾನೆ. ಅಲ್ಲಿಗೆ, ಒಂದು ವರ್ಷಕ್ಕೆ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಇನ್ನೂ ವರಲಕ್ಷ್ಮಿ ಆನೆ 3,120 ಕೆಜಿ ತೂಕವಿದೆ. ಕಳೆದ ವರ್ಷ ಈ ಆನೆ 2,830 ಕೆಜಿ ಇತ್ತು. ಅಲ್ಲಿಗೆ 290 ಕೆಜಿ ತೂಕವನ್ನು ವರಲಕ್ಷ್ಮಿ ಹೆಚ್ಚಿಸಿಕೊಂಡಿದೆ.

    ವಿಕ್ರಮ ಆನೆ 3,985 ಕೆಜಿ, ಗೋಪಿ 4,435 ಕೆಜಿ, ಚೈತ್ರಾ 2,920 ಕೆಜಿ ಹಾಗೂ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆ 4,045 ಕೆಜಿ ತೂಕವಿದ್ದಾನೆ. ಅಲ್ಲಿಗೆ ಮೊದಲ ತಂಡದ ಆನೆಗಳಲ್ಲಿ ಕ್ಯಾಪ್ಟನ್ ಅರ್ಜುನ ಹೆಚ್ಚು ಬಲಶಾಲಿಯಾಗಿದ್ದಾನೆ. ಉಳಿದಂತೆ ಎಲ್ಲಾ ಆನೆಗಳು ಸದೃಢವಾಗಿವೆ. ಆನೆಗಳ ಬಲವನ್ನು ಇನ್ನಷ್ಟು ಹೆಚ್ಚಿಸಲು ಇಂದಿನಿಂದ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಪೌಷ್ಠಿಕವಾದ ಕಾಳು, ಹಸಿರು ಹುಲ್ಲನ್ನು ಪ್ರತಿ ದಿನವೂ ನಾಲ್ಕೈದು ಬಾರಿ ಆನೆಗಳಿಗೆ ನೀಡಿ ಅವುಗಳನ್ನು ಇನ್ನಷ್ಟು ಬಲಶಾಲಿ ಆಗುವಂತೆ ಮಾಡಲಾಗುತ್ತದೆ.

    ನಾಡಿನಲ್ಲಿ ಒಂದೂವರೆ ತಿಂಗಳು ಸಿಗುವ ರಾಜಾತಿಥ್ಯದಲ್ಲಿ ಆನೆಗಳು ತಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನಗಳೇ ಇಲ್ಲ. ವಿಜಯದಶಮಿ ಮೆರವಣಿಗೆಯಲ್ಲಿ ಐದು ಕಿಮೀ ದೂರವನ್ನು ಈ ಆನೆಗಳು ಕ್ರಮಿಸುತ್ತದೆ. ಹೀಗಾಗಿ ಆನೆಗಳ ಸಾರ್ಮಥ್ಯದ ಮೇಲೆ ಅರಣ್ಯ ಇಲಾಖೆ ಹೆಚ್ಚು ನಿಗಾವಹಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ- ರಕ್ಷಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು

    ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ- ರಕ್ಷಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು

    ಚಾಮರಾಜನಗರ: ತಾಯಿಯೊಬ್ಬಳು ಆಗ ತಾನೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕುರಬಗೇರಿಯ ಚರಂಡಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆಯಾಗಿದ್ದು, ಇಂದು ಬೆಳಗ್ಗೆ ಪೌರ ಕಾರ್ಮಿಕರು ಸ್ವಚ್ಛತೆಗೆಂದು ಬಂದಾಗ ಶಿಶುವಿನ ಚೀರಾಟವನ್ನು ಕೇಳಿ ಚರಂಡಿ ಬಳಿ ಹೋಗಿದ್ದಾರೆ. ಈ ವೇಳೆ ಆಗ ತಾನೇ ಜನಿಸಿದ ಹೆಣ್ಣು ಮಗುವನ್ನು ಚರಂಡಿಗೆ ಎಸೆದು ಹೋಗಿರುವುದು ಪತ್ತೆಯಾಗಿದೆ.

    ಮಗುವನ್ನು ಕಂಡ ಪೌರಕಾರ್ಮಿಕ ಮಹಿಳೆಯರು ಚರಂಡಿಯಿಂದ ಮಗುವನ್ನು ರಕ್ಷಿಸಿ ಪೋಷಣೆ ಮಾಡಿದ್ದಾರೆ. ಬಳಿಕ ಗುಂಡ್ಲುಪೇಟೆಯ ಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಮೈಸೂರಿನ ಚಲುವಾಂಬ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಹಳ್ಳದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ – ಗ್ರಾಮಸ್ಥರಿಂದ ರಕ್ಷಣೆ

    ಹಳ್ಳದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ – ಗ್ರಾಮಸ್ಥರಿಂದ ರಕ್ಷಣೆ

    ಬಾಗಲಕೋಟೆ: ಹಳ್ಳವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಭಗವತಿ-ಹಳ್ಳೂರು ಗ್ರಾಮಗಳ ಮಧ್ಯದ ಹರಿಯುವ ಹಳ್ಳವೊಂದರಲ್ಲಿ ಯಾರೋ ಪಾಪಿಗಳು ಗೋಣಿಚೀಲದಲ್ಲಿ ಹಸುಗೂಸನ್ನು ಬಿಸಾಕಿ ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಮಗುವಿನ ರಕ್ಷಣೆಯನ್ನು ಮಾಡಿದ್ದಾರೆ.

    ಸ್ಥಳಕ್ಕೆ ಅಂಗನವಾಡಿ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಗುವನ್ನು ಬೇವೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮುದ್ದಾದ ಮಗುವನ್ನು ಬಿಸಾಕಿ ಹೋಗಿರುವ ಪಾಪಿಗಳಿಗೆ ಸ್ಥಳಿಯರು ಹಿಡಿಶಾಪ ಹಾಕಿದರು.