Tag: captaincy

  • ಸನ್‌ ರೈಸರ್ಸ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ; ತನ್ನನ್ನೇ ಹೊಗಳಿಕೊಂಡ ಪಾಂಡ್ಯ!

    ಸನ್‌ ರೈಸರ್ಸ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ; ತನ್ನನ್ನೇ ಹೊಗಳಿಕೊಂಡ ಪಾಂಡ್ಯ!

    ಮುಂಬೈ: ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಭರ್ಜರಿ ಗೆಲುವು ದಾಖಲಿಸುವ ಮೂಲಕ ತನ್ನ ಸೇಡು ತೀರಿಸಿಕೊಂಡಿತು. ಆದ್ರೆ ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ (Hardik Pandya) ತಮ್ಮ ಬೌಲಿಂಗ್‌ ಪ್ರದರ್ಶನದ ಬಗ್ಗೆ ಹೊಗಳಿಕೊಂಡಿದ್ದಾರೆ.

    ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಪಾಂಡ್ಯ, ನಾವು ಉತ್ತಮ ಕ್ರಿಕೆಟ್‌ ಆಡುವತ್ತ ಗಮನ ಹರಿಸಲು ಬಯಸುತ್ತೇವೆ. ಈ ಪಂದ್ಯದಲ್ಲಿ 10-15 ರನ್‌ ಹೆಚ್ಚುವರಿ ನೀಡಿದ್ದೇವೆ ಅನ್ನಿಸುತ್ತೆ. ಆದ್ರೆ ಅದಕ್ಕೆ ಪ್ರತಿಯಾಗಿ ನಮ್ಮ ಬ್ಯಾಟರ್ಸ್‌ಗಳು ಅಬ್ಬರಿಸಿದ ರೀತಿ ಅತ್ಯುತ್ತಮವಾಗಿತ್ತು. ನನ್ನ ಬೌಲಿಂಗ್‌ (Bowling) ಕೂಡ ಉತ್ತಮವಾಗಿತ್ತು. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್‌ ಮಾಡಿದೆ, ಇದು ತಂಡಕ್ಕೆ ಅನುಕೂಲವಾಯಿತು. ಇದೇ ವೇಳೆ ಮತ್ತೊಂದು ಹಾದಿಯಿಂದ ಪಿಯೂಷ್‌ ಚಾವ್ಲಾ (Piyush Chawla), ಸ್ಪಿನ್‌ ದಾಳಿಗೆ ಮುಂದಾದರು. ಅವರ ಬೌಲಿಂಗ್‌ ಸಹ ನಿಖರವಾಗಿತ್ತು ಎಂದು ಹೇಳಿದ್ದಾರೆ. ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 31 ರನ್‌ ಬಿಟ್ಟುಕೊಟ್ಟ ಹಾರ್ದಿಕ್‌ ಪಾಂಡ್ಯ 3 ವಿಕೆಟ್‌ ಕಿತ್ತರು.

    ನಂತರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಶತಕದ ಕುರಿತು ಮಾತನಾಡಿದ ಪಾಂಡ್ಯ, ನಿಜಕ್ಕೂ ಸೂರ್ಯ ಅವರ ಬ್ಯಾಟಿಂಗ್‌ ನಂಬಲು ಅಸಾಧ್ಯವಾಗಿತ್ತು. ಎದುರಾಳಿ ಬೌಲರ್‌ಗಳ ಮೇಲೆ ಹೆಚ್ಚು ಒತ್ತಡ ಹೇರಿದ್ದರು. ವಿಭಿನ್ನ ರೀತಿಯಲ್ಲಿ ಆಡುವ ಅವರ ಆಟದಿಂದ ತಂಡಕ್ಕೆ ಹೆಚ್ಚು ಅನುಕೂಲವಾಗಿದೆ. ಅವರು ನಮ್ಮ ತಂಡದಲ್ಲಿರೋದು ನಮ್ಮ ಅದೃಷ್ಟ ಎಂದು ಹಾಡಿಹೊಗಳಿದ್ದಾರೆ.

    ಸೇಡು ತೀರಿಸಿಕೊಂಡ ಪಾಂಡ್ಯ ಪಡೆ:
    ಇದೇ ಐಪಿಎಲ್‌ ಆವೃತ್ತಿಯ 8ನೇ ಪಂದ್ಯದಲ್ಲಿ ಹೈದರಾಬಾದ್‌ ತಂಡ ಮುಂಬೈ ವಿರುದ್ಧ ದಾಖಲೆಯ 277 ರನ್‌ ಚಚ್ಚಿತ್ತು. ಈ ಪಂದ್ಯದಲ್ಲಿ 246 ರನ್‌ಗಳನ್ನು ಸಿಡಿಸಿದ್ದ ಮುಂಬೈ 31 ರನ್‌ಗಳ ಅಂತರದಿಂದ ಸೋತಿತ್ತು. ಅಂದು ಹೈದರಾಬಾದ್‌ ತವರಿನಲ್ಲಿ ಸೋತಿದ್ದ ಮುಂಬೈ, ತನ್ನ ತವರು ಕ್ರೀಡಾಂಗಣದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 20 ಓವರ್‌ಗಳಲ್ಲಿ 173 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಮುಂಬೈ 17.2 ಓವರ್‌ಗಳಲ್ಲೇ 174 ರನ್‌ ಸಿಡಿಸಿ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ರಿಷಭ್‌ ಪಂತ್‌ ಮದುವೆಯಾಗ್ತೀರಾ? – ನೋ ಕಾಮೆಂಟ್ಸ್‌ ಎಂದು ಪಾಕ್‌ ಬೌಲರ್‌ ಹೊಗಳಿದ ಊರ್ವಶಿ ರೌಟೇಲಾ

    ಶತಕ ವೀರ ಸೂರ್ಯ:
    ಹೈದರಾಬಾದ್‌ ತಂಡದ ವಿರುದ್ಧ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ಸೂರ್ಯಕುಮಾರ್‌ ಯಾದವ್‌, ಸನ್‌ರೈಸರ್ಸ್‌ ಬೌಲರ್‌ಗಳನ್ನು ಚಚ್ಚಿ ಚಿಂದಿ ಮಾಡಿದರು. ಮೊದಲ 30 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಸ್ಕೈ, ಮುಂದಿನ 21 ಎಸೆತಗಳಲ್ಲಿ 50 ರನ್‌ ಸಿಡಿಸುವ ಮೂಲಕ ಸ್ಫೋಟಕ ಶತಕ ದಾಖಲಿಸಿದರು. ಇದು ಸೂರ್ಯಕುಮಾರ್‌ ಅವರ 2ನೇ ಐಪಿಎಲ್‌ ಶತಕವೂ ಆಗಿದೆ. 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ ಒಟ್ಟು 51 ಎಸೆತಗಳಲ್ಲಿ 102 ರನ್‌ ಚಚ್ಚಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

  • ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾಗಿದ್ದಾರೆ.

    ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ತಂಡದ ಮಾಜಿ ನಾಯಕನಾಗಿದ್ದರು. ಆದರೆ ರಾಹುಲ್ ಅವರೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ತಂಡವು ನಾಯಕನನ್ನು ಬದಲಾಯಿಸಲು ನಿರ್ಧರಿಸಿದೆ. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಐಪಿಎಲ್ 2021 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಬದಲಿಗೆ ಭಾರತೀಯ ಆಟಗಾರನನ್ನು ಚುಕ್ಕಾಣಿ ಹಿಡಿಯಲು ಪಂಜಾಬ್ ತಂಡವು ಉತ್ಸುಕವಾಗಿದೆ. ಅವರು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ.

    ಮಯಾಂಕ್ ಅವರಿಗೆ ಅಷ್ಟೇನು ಹೆಚ್ಚಿನ ನಾಯಕತ್ವದ ಅನುಭವವಿಲ್ಲ. ಐಪಿಎಲ್ 2022ರ ಮೆಗಾ ಹರಾಜಿನ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೈಪೋಟಿ ನೀಡಿ, ಧವನ್ ಅವರನ್ನು 8.25 ಕೋಟಿ ರೂ. ನೀಡಿ ಖರೀದಿಸಲು ಪಿಬಿಕೆಎಸ್ ಯಶಸ್ವಿಯಾಗಿದೆ.

    ಶಿಖರ್ ಧವನ್ ತಂಡದಲ್ಲಿರುವುದಕ್ಕೆ ಪಂಜಾಬ್ ತಂಡವು ತುಂಬಾ ಉತ್ಸುಕವಾಗಿದೆ. ಧವನ್ ಹೆಗಲ ಮೇಲೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲು ತಂಡದ ನಿರ್ವಾಹಕರು ಈಗಾಗಲೇ ಕಾದು ಕುಳಿತಿದ್ದಾರೆ. ತಂಡದ ಮುಖ್ಯ ಕೋಚ್, ಪ್ರವರ್ತಕರು ಎಲ್ಲರೂ ಪಂಜಾಬ್ ಕಿಂಗ್ಸ್ ನಾಯಕನ ಆಯ್ಕೆ ವಿಚಾರವಾಗಿ ಧವನ್ ಪರವಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವೆಬ್‍ಸೈಟ್ ವೊಂದು ತಿಳಿಸಿದೆ. ಇದನ್ನೂ ಓದಿ: ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ

    ಭಾನುವಾರ ಹರಾಜು ಮುಗಿದ ನಂತರ ಪಿಬಿಕೆಎಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಹೊಸ ನಾಯಕನ ನೇಮಕದ ಬಗ್ಗೆ ಕೇಳಲಾಗಿತ್ತು. ಈ ವೇಳೆ ಕುಂಬ್ಳೆ ಅವರು, ಧವನ್ ಹೆಸರನ್ನು ಬಹಿರಂಗಪಡಿಸಿದ್ದರು. ಧವನ್ ಅವರು ತಂಡಕ್ಕೆ ಉತ್ತಮ ಆಟಗಾರರಾಗಿದ್ದಾರೆ. ಅವರ ಪ್ರಬುದ್ಧತೆಯು ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರಲಿದೆ. ತಂಡದ ಪ್ರತಿಯೊಬ್ಬ ಆಟಗಾರರು ಈ ಅನುಭವಿ ಆಟಗಾರನಿಂದ ಕಲಿಯಬಹುದು. ಅವರು ತಂಡಕ್ಕೆ ಎಲ್ಲ ರೀತಿಯಲ್ಲೂ ಪರಿಪೂರ್ಣ ನಾಯಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ವಿರಾಟ್ ಕೊಹ್ಲಿ ಏಕದಿನ ನಾಯಕತ್ವದ ಮೇಲೆ ತೂಗುಗತ್ತಿ

    ವಿರಾಟ್ ಕೊಹ್ಲಿ ಏಕದಿನ ನಾಯಕತ್ವದ ಮೇಲೆ ತೂಗುಗತ್ತಿ

    ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಇದೀಗ ಕೊಹ್ಲಿಗೆ ಟಿ20 ಜೊತೆಗೆ ಏಕದಿನ ತಂಡದ ನಾಯಕತ್ವದಿಂದಲು ಕೆಳಗಿಸಲು ಬಿಸಿಸಿಐ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ವರದಿಯಾಗಿದೆ.

    ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಸೋಲಿನಿಂದಾಗಿ ಸೆಮಿಫೈನಲ್‍ನಿಂದ ಬಹುತೇಕ ಹೊರಬಿದ್ದರುವ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ನಡೆಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿರಾಟ್ ಕೊಹ್ಲಿ ನಾಯನಾಗಿ ತೆಗೆದುಕೊಂಡು ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದರು. ಈ ಎಲ್ಲದರ ನಡುವೆ ಈವರೆಗೆ ನಾಯಕನಾಗಿ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿರುವ ಕೊಹ್ಲಿ ನಾಯಕತ್ವದ ಬಗ್ಗೆ ಬಿಸಿಸಿಐ ಕೂಡ ಯೋಚನೆ ಮಾಡುತ್ತಿದ್ದು, ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

    ಒಬ್ಬ ಬ್ಯಾಟ್ಸ್‌ಮ್ಯಾನ್‌ ಆಗಿ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ್ದ ಕೊಹ್ಲಿ ನಾಯಕನಾಗಿ ತಂಡವನ್ನು ನಿರ್ವಹಿಸುತ್ತಿರುವುದನ್ನು ಬಿಸಿಸಿಐ ಗಮನಿಸಿ ಸೀಮಿತ ಓವರ್‍ ಗಳ ನಾಯಕತ್ವದಿಂದ ಕೆಳಗಿಳಿಸಿ ಟೆಸ್ಟ್ ನಾಯಕತ್ವದಲ್ಲಿ ಮಾತ್ರ ಮುಂದುವರಿಸಲು ಮಾತುಕತೆ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: 14 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ರೋಹಿತ್, ರಾಹುಲ್ ಜೋಡಿ

    ವಿರಾಟ್ ಕೊಹ್ಲಿ ಸಿಮೀತ ಓವರ್‍ ಗಳ ಕ್ರಿಕೆಟ್ ನಾಯಕತ್ವದಿಂದ ಹೊರ ನಡೆದರೆ ನಾಯಕರಾಗಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ರಿಷಬ್ ಪಂತ್ ಹೆಸರು ಕೇಳಿ ಬರುತ್ತಿದೆ. ಜೊತೆಗೆ ಟಿ20 ವಿಶ್ವಕಪ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಆಗಿ ಟೀಂ ಇಂಡಿಯಾಗೆ ಸೇರ್ಪಡೆಗೊಳ್ಳುವುದರಿಂದಾಗಿ ಮಹತ್ವದ ಬದಲಾವಣೆ ಮುನ್ಸೂಚನೆ ಬಿಸಿಸಿಐ ಕೊಟ್ಟಿದೆ. ಇದೀಗ ನಾಯಕತ್ವದ ಬಗ್ಗೆ ಎದ್ದಿರುವ ಪ್ರಶ್ನೆಗೆ ಕೆಲದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

  • ನನಗೆ ನಾಯಕತ್ವದ ಪಟ್ಟ ಸಿಗಲು ಧೋನಿ ಪಾತ್ರ ದೊಡ್ಡದು- ಕೊಹ್ಲಿ

    ನನಗೆ ನಾಯಕತ್ವದ ಪಟ್ಟ ಸಿಗಲು ಧೋನಿ ಪಾತ್ರ ದೊಡ್ಡದು- ಕೊಹ್ಲಿ

    – ವಿರಾಟ್ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಪಂದ್ಯ ರಿವೀಲ್

    ಮುಂಬೈ: ನಾನು ಟೀಂ ಇಂಡಿಯಾ ನಾಯಕತ್ವವನ್ನು ಪಡೆಯುವಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ದೊಡ್ಡ ಪಾತ್ರ ವಹಿಸಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಎಂ.ಎಸ್.ಧೋನಿ ನಾಯಕತ್ವದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕೊಹ್ಲಿ, ನಾಯಕತ್ವದ ಜವಾಬ್ದಾರಿಯನ್ನು ಇದ್ದಕ್ಕಿದ್ದಂತೆ ಪಡೆದುಕೊಂಡಿಲ್ಲ. ಧೋನಿ ಎಲ್ಲವನ್ನೂ ಗಮನಿಸಿಯೇ ನಾಯಕ್ವವನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಚಾರವನ್ನು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಇನ್‍ಸ್ಟಾಗ್ರಾಮ್ ವೈಲ್ ಚಾಟ್‍ನಲ್ಲಿ ಕೊಹ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ದುಬಾರಿ ಶೂ ಕೊಡಿಸಿ ಮಾನವೀಯತೆ ಮೆರೆದ ‘ಮಿಸ್ಟರ್ 360’

    “ನಾನು ಎಂದಿಗೂ ನಾಯಕನಾಗಬೇಕೆಂದು ಯೋಚಿಸಲಿಲ್ಲ. ಆಯ್ಕೆ ಮಾಡುವವರು ಕೂಡ ನನ್ನನ್ನು ಇದ್ದಕ್ಕಿದ್ದಂತೆ ನಾಯಕನನ್ನಾಗಿ ಮಾಡಿಲ್ಲ ಎಂದು ನಂಬುತ್ತೇನೆ. ಈ ಜವಾಬ್ದಾರಿಯನ್ನು ನೀಡುವ ಮೊದಲು ಅವರು ಧೋನಿ ಅವರನ್ನು ಕೇಳಿರಬೇಕು. ಈ ಮೂಲಕ ನಾನು ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ನಂಬಿಕೆಯಿದೆ” ಎಂದು ವಿರಾಟ್ ತಿಳಿಸಿದ್ದಾರೆ.

    “ನಾನು ತಂಡವನ್ನು ಸೇರಿದ ದಿನದಿಂದ ಬಹಳಷ್ಟು ಕಲಿಯಲು ಬಯಸಿದ್ದೆ. ಧೋನಿ ಅರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆ. ಅನೇಕ ಬಾರಿ ಅವರು ನಿರಾಕರಿಸಿದರು. ಆದರೆ ಇಷ್ಟಪಟ್ಟ ವಿಚಾರವನ್ನೂ ಚರ್ಚಿಸಿದರು. ಧೋನಿ ಯಾವಾಗಲೂ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಅವರಿಂದ ಹೆಚ್ಚು ಹೆಚ್ಚು ಕಲಿತಿದ್ದೇನೆ. ನನ್ನ ಕುತೂಹಲದಿಂದಾಗಿ ತಂಡದ ಮುಂದಿನ ನಾಯಕನಾಗಬಹುದೆಂದು ಧೋನಿ ಬಹುಶಃ ನಂಬಿದ್ದರು” ಎಂದು ಕೊಹ್ಲಿ ಹೇಳಿದ್ದಾರೆ.

    ಸಚಿನ್ ಜೊತೆ ಬ್ಯಾಟಿಂಗ್ ಸ್ಮರಣೀಯ ಕ್ಷಣ:
    ಪಾಕಿಸ್ತಾನ ವಿರುದ್ಧ 183 ರನ್‍ಗಳ ಇನ್ನಿಂಗ್ಸ್ ಅನ್ನು ನೆನೆದ ಕೊಹ್ಲಿ, “ಪಾಕಿಸ್ತಾನ ತಂಡದ ಬೌಲಿಂಗ್ ಆಕ್ರಮಣವು ತುಂಬಾ ಪ್ರಬಲವಾಗಿತ್ತು. ಶಾಹಿದ್ ಅಫ್ರಿದಿ, ಸಯೀದ್ ಅಜ್ಮಲ್, ಉಮರ್ ಗುಲ್  ಮತ್ತು ಮೊಹಮ್ಮದ್ ಹಫೀಜ್ ಪಾಕ್ ತಂಡದಲ್ಲಿದ್ದರು. ಅಂತಹ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಬ್ಯಾಟಿಂಗ್ ಮಾಡಲು ನನಗೆ ಸಂತೋಷವಾಗಿತ್ತು. ಸಚಿನ್ 50 ರನ್ ಗಳಿಸಿದ್ದರು. ನಮ್ಮಿಬ್ಬರ ಜೊತೆಯಾಟದಲ್ಲಿ 100ಕ್ಕೂ ಹೆಚ್ಚು ರನ್ ಗಳಿಸಿದ್ವಿ. ಇದು ನನಗೆ ಮರೆಯಲಾಗದ ಕ್ಷಣ. ಈ ಇನ್ನಿಂಗ್ಸ್ ನನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು” ಎಂದಿದ್ದಾರೆ.

    2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಧೋನಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದರು. ಇದರ ನಂತರ ಕೊಹ್ಲಿ ಅವರಿಗೆ ನಾಯಕತ್ವ ನೀಡಲಾಯಿತು. 2018ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಉಭಯ ದೇಶಗಳ ನಡುವಿನ 71 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಸರಣಿ ಜಯ ಸಾಧಿಸಿತ್ತು. ಕೊಹ್ಲಿ 2017ರ ಜನವರಿಯಲ್ಲಿ ಸೀಮಿತ ಓವರ್ ಗಳ ನಾಯಕತ್ವವನ್ನು ವಹಿಸಿಕೊಂಡರು.

    ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು ಈವರೆಗೆ ಒಟ್ಟು 117 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಅವರು ದೇಶದ ಎರಡನೇ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂ.ಎಸ್.ಧೋನಿ 178 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 104 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊಹಮ್ಮದ್ ಅಜರುದ್ದೀನ್ ಮೂರನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 97 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

  • ಕೊಹ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ: ಆರ್‌ಸಿಬಿ ಸ್ಪಷ್ಟನೆ

    ಕೊಹ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ: ಆರ್‌ಸಿಬಿ ಸ್ಪಷ್ಟನೆ

    ಬೆಂಗಳೂರು: ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ತಂಡ ಯೋಚಿಸುತ್ತಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಿರ್ದೇಶಕ ಮೈಕ್ ಹೆಸ್ಸನ್ ಸ್ಪಷ್ಟಪಡಿಸಿದ್ದಾರೆ.

    ಸ್ಫೋಟಕ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ತಂಡದ ಪ್ರಬಲ ಅಸ್ತ್ರವಾಗಿದ್ದಾರೆ. ನಿರಂತರ ನಾಯಕತ್ವದಿಂದಾಗಿ ಯಾವ ಕ್ಷೇತ್ರಗಳನ್ನು ಸುಧಾರಿಸಬೇಕೆಂಬುದು ಅವರಿಗೆ ತಿಳಿದಿರುತ್ತದೆ. ಹೀಗಾಗಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೈಕ್ ಹಸ್ಸನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಟೀಂ ಇಂಡಿಯಾದ ಫಿಟ್ನೆಸ್ ತರಬೇತುದಾರರಾಗಿದ್ದ ಶಂಕರ್ ಬಸು ಈಗ ಆರ್‌ಸಿಬಿಗೆ ತರಬೇತುದಾರರಾಗಿ ಸೇರಿದ್ದಾರೆ. 2015ರಲ್ಲಿ ಟೀಂ ಇಂಡಿಯಾ ಸೇರುವ ಮೊದಲೇ ಶಂಕರ್ ಬಸು ಆರ್‌ಸಿಬಿ ಜೊತೆಗಿದ್ದರು. ಬಸು ದೇಶದ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಶ್ರೀಧರನ್ ಶ್ರೀರಾಮ್ ಅವರನ್ನು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ.

    ಐಪಿಎಲ್ ಟೂರ್ನಿಯ ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿದೆ. ಇಲ್ಲಿಯವರೆಗೆ 12 ಆವೃತ್ತಿಗಳು ನಡೆದಿದ್ದರೂ ಒಂದು ಬಾರಿಯೂ ಆರ್‍ಸಿಬಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಡಲು ತಂಡವು ನಿರ್ಧರಿಸಿದ್ದು, ಡಿವಿಲಿಯರ್ಸ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲ ಊಹಾಪೋಹಗಳಿಗೆ ತಂಡವು ಸ್ಪಷ್ಟನೆ ನೀಡಿದೆ.

    ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ 2013ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ನಾಯಕರಾಗಿ ಒಂದು ತಂಡವನ್ನು ದೀರ್ಘ ಅವಧಿ ಮುನ್ನಡೆಸಿದ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

  • ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ನವದೆಹಲಿ: ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

    ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗಂಭೀರ್ ನಾಯಕತ್ವ ಪಟ್ಟದಿಂದ ಕೆಳಗಿಳಿದ ಕಾರಣ ಡೆಲ್ಲಿ ತಂಡದ ಮ್ಯಾನೇಜ್‍ಮೆಂಟ್ ಶ್ರೇಯಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

    ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

    ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

    ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.