Tag: Captain Arjuna

  • ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದವೊಂದು ನಡೆದಿರುವ ಬಗ್ಗೆ ಸಂಶಯ ಮೂಡಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಅರ್ಜುನ (Arjuna) ಬಲ ಕಳೆದುಕೊಂಡು ಕಾದಾಡಲಾಗದೆ ಸೋಲೊಪ್ಪಿದನಾ ಎಂಬ ಪ್ರಶ್ನೆ ಮೂಡಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರುವ ಯಡವಟ್ಟಿನ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಮದದಲ್ಲಿದ್ದ ಕಾಡಾನೆ (Elephant) ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಮದದಲ್ಲಿರುವ ಕಾಡಾನೆ ಹುಚ್ಚಾನೆಯಂತೆ ವರ್ತಿಸುತ್ತದೆ ಎಂಬ ಜ್ಞಾನ ಇದ್ದರೂ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ತಜ್ಞರು ಟೀಕಿಸುತ್ತಿದ್ದಾರೆ. ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗ ಏಕಾಏಕಿ ದಾಳಿ ಮಾಡಿತ್ತು. ಸಲಗ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

    ಗುಂಡು ಹಾರಿಸಿದಾಗ ಗುರಿ ತಪ್ಪಿ ಅದು ಅರ್ಜುನನ ಕಾಲಿಗೆ ತಗುಲಿರುವ ಬಗ್ಗೆ ಅನುಮಾನ ಮೂಡಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರು ನೀಡಿರುವ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಅರ್ಜುನನ ಕಾಲಿಗೆ ಗುಂಡು ತಗುಲುತ್ತಲೇ ಅದು ಬಲ ಕಳೆದುಕೊಂಡಿತ್ತು. ಈ ವೇಳೆ ಹಂತಕ ಆನೆ ಹಠಾತ್ ದಾಳಿ ಮಾಡಿತ್ತು ಎನ್ನಲಾಗಿದೆ.

    ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಮತ್ತೊಂದು ಯಡವಟ್ಟಾಗಿರುವ ಬಗ್ಗೆ ಅನುಮಾನ ಮೂಡಿದೆ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆ ಎದುರಿಸಿದೆ. ಮದವೇರಿದ ಆನೆಗೆ ಅರವಳಿಕೆ ಚುಚ್ಚದೇ ಹೋಗಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬಲಿಯಾದ ಎನ್ನಲಾಗಿದೆ. ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಹಿಸಲಾಗುತ್ತಿದೆ.

    ಮಾವುತ ಬಿಚ್ಚಿಟ್ಟ ಸತ್ಯ:
    ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ ಹೆಸರಿನ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತನನ್ನು ಸುಧಾರಿಸಲಾಯಿತು. ಆಮೇಲೆ ಅರ್ಜುನನ ಮೇಲೆ ಮೊದಲಬಾರಿಗೆ ಕಾಡಾನೆ ದಾಳಿ ಮಾಡಿತು. ಕಾಡಾನೆ, ಸಾಕಾನೆ ಕಾಳಗದ ವೇಳೆ ಕೋವಿಯಿಂದ ಗುಂಡು ಹಾರಿಸಲಾಯಿತು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ದೊಡ್ಡ ಆನೆ ಅದು ಮರಗಳನ್ನು ಬೀಳಿಸಿತು. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ವೀಡಿಯೋ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ಅರ್ಜುನ ಅಂತ್ಯಕ್ರಿಯೆ:
    ಮದಗಜದ ಜೊತೆ ಹೋರಾಡುವಾಗ ವೀರಮರಣವನ್ನಪ್ಪಿದ ಅರ್ಜುನನ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ವೇಳೆ ಮೈಸೂರು ಅರಮನೆಯ ರಾಜಮನೆತನದ ಪುರೋಹಿತ ಪ್ರಹ್ಲಾದ್ ಸ್ಥಳಕ್ಕೆ ಆಗಮಿಸಲಿದ್ದಾರೆ. ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನಗಳನ್ನು ರಾಜಮನೆತನದ ಪುರೋಹಿತ ಪ್ರಹ್ಲಾದ್ ನೆರವೇರಿಸಲಿದ್ದಾರೆ. ಜೊತೆಗೆ ಜಿಲ್ಲಾಡಳಿತ ಸರ್ಕಾರಿ ಗೌರವ ಸಲ್ಲಿಸಲಿದೆ. ಸದ್ಯ ಮಂಗಳವಾರ 12 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

  • ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ಹಾಸನ: 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ (Captain Arjuna) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳೊಂದಿಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯೊಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ 3 ಸಾಕಾನೆಗಳು ಹಿಮ್ಮೆಟ್ಟಿವೆ. ಆನೆಗಳು ಕಾದಾಡಲು ಪ್ರಾರಂಭಿಸುತ್ತಿದ್ದಂತೆ ಮಾವುತ ಕೂಡಾ ಇಳಿದು ದೂರ ಓಡಿದ್ದಾರೆ.

    ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಅರ್ಜುನ ಪ್ರತಿರೋಧ ತೋರದೇ ಹೋಗಿದ್ದರೆ ಇತರ ಆನೆಗಳು ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಜೀವಕ್ಕೆ ಕುತ್ತಾಗುತ್ತಿತ್ತು. ಕೊಂಚ ಯಡವಟ್ಟಾಗಿದ್ದರೂ ಕೂಡ ಹಲವು ಸಿಬ್ಬಂದಿಯ ಪ್ರಾಣಕ್ಕೆ ಅಪಾಯವಿರುತ್ತಿತ್ತು. ಅದೃಷ್ಟವಶಾತ್ ಅರ್ಜುನ ಕಾಡಾನೆ ಜೊತೆ ಕಾಳಗಕ್ಕೆ ನಿಂತಿದ್ದರಿಂದ ದುರಂತ ತಪ್ಪಿದೆ. ತನ್ನ ಪ್ರಾಣ ತ್ಯಾಗ ಮಾಡಿ ಅರ್ಜುನ ಹಲವರ ಜೀವ ಉಳಿಸಿದ್ದಾನೆ. ಮದಗಜಗಳ ಕಾಳಗದಲ್ಲಿ ಅರ್ಜುನ ವೀರಮರಣ ಹೊಂದಿದ್ದಾನೆ.

    ಕಾರ್ಯಾಚರಣೆ ಸ್ಥಗಿತ:
    ಕಾಡಾನೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅರ್ಜುನನಿಗೆ ತಿವಿದು ಪ್ರಾಣ ಬಿಟ್ಟರೂ ಕೂಡಾ ಹಂತಕ ಆನೆ ಮಾತ್ರ ಬಹಳ ಹೊತ್ತಿನವರೆಗೂ ಅಲ್ಲೇ ಇತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಇವೆಲ್ಲವನ್ನೂ ದೂರದಲ್ಲೇ ನಿಂತು ನೋಡಬೇಕಾಯಿತು. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

    ಕುಸಿದು ಬಿದ್ದ ಮಾವುತ:
    ಕಾಡಾನೆ ದಾಳಿಯಿಂದ ಅರ್ಜುನ ಕಣ್ಮುಚ್ಚಿದ ಸುದ್ದಿ ಕೇಳಿ ಅಕ್ಕರೆಯಿಂದ ನೋಡಿಕೊಂಡಿದ್ದ ಮಾವುತ ವಿನು ನೋವಿನಿಂದ ಕುಸಿದು ಬಿದ್ದಿದ್ದರು. ಮದಗಜದ ಜೊತೆ ಅರ್ಜುನ ಕಾದಾಡುವಾಗ ಮಾವುತ ವಿನು ಆನೆ ಮೇಲಿಂದ ಇಳಿದು ಬಂದಿದ್ದರು. ವಿನುವಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನನ ಸಾವಿನ ಸುದ್ದಿಯನ್ನು ಇಲಾಖೆ ಸಿಬ್ಬಂದಿ ಮೊದಲಿಗೆ ತಿಳಿಸಿರಲಿಲ್ಲ. ಆನಂತರ ಮಾವುತ ವಿನುಗೆ ತನ್ನ ಪ್ರೀತಿಯ ಅರ್ಜುನನ ಸಾವಿನ ವಿಚಾರವನ್ನು ತಿಳಿಸಲಾಗಿತ್ತು. ಈ ವೇಳೆ ವಿನು ಕಣ್ಣೀರಿಡುತ್ತಲೇ ಉಳಿದ ಸಾಕಾನೆಗಳೊಂದಿಗೆ ಬಂದಿದ್ದರು. ದಾರಿ ಮಧ್ಯೆ ವಿನು ಅರ್ಜುನನ ಸಾವಿನ ನೋವು ತಡೆಯಲಾರದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ 108 ಅಂಬುಲೆನ್ಸ್ ಮೂಲಕ ಮಾವುತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 1 ತಿಂಗಳು ಪರೀಕ್ಷೆ ಮುಂದೂಡಿಕೆ