Tag: Capsicum

  • ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

    ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

    ನಾಲಿಗೆಯನ್ನು ತಣಿಸುವ ರುಚಿಕರ ತರಕಾರಿ ಸಾರು ಮಾಡಿಕೊಳ್ಳುವ ಬಯಕೆ ನಿಮಗಾಗಿಲ್ಲವೆ. ಹಾಗದ್ರೆ ಕ್ಯಾರೆಟ್, ಮೂಲಂಗಿ, ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ), ಹಸಿರು ಬಟಾಣಿ, ಬೀಟ್‍ರೂಟ್, ಎಲೆಕೋಸು, ಹೂಕೋಸು ಹೀಗೆ ತರಹೇವಾರಿ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂದು ರುಚಿಕರವಾದ ಆಲೂ ಕ್ಯಾಪ್ಸಿಕಂನ  ಕರಿಯನ್ನು ಮಾಡಿದರೆ ಬಿಸಿ ಬಿಸಿಯಾದ ಅನ್ನಕ್ಕೆ ಸೂಪರ್ ಆಗಿರುತ್ತದೆ. ಒಮ್ಮೆ ನೀವು ಮನೆಯಲ್ಲಿ ಮಾಡಲು ಪ್ರಯತ್ನಿಸಲು ಇಲ್ಲಿದೆ ಮಾಡುವ ವಿಧಾನ ಜೊತೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ.

    ಬೇಕಾಗುವ ಸಾಮಗ್ರಿಗಳು:

    * ಆಲೂಗಡ್ಡೆ- 4
    * ಕ್ಯಾಪ್ಸಿಕಂ – 3
    * ಈರುಳ್ಳಿ – 1
    * ಟೊಮೆಟೊ – 2
    * ಬೆಳ್ಳುಳಿ – 1
    * ಅರಿಶಿಣ ಪುಡಿ – 1 ಟೀ ಸ್ಪೂನ್
    * ಖಾರದ ಪುಡಿ – 1 ಟೀ ಸ್ಪೂನ್
    * ಜೀರಿಗೆ ಪುಡಿ – 2 1 ಟೀ ಸ್ಪೂನ್
    * ಗರಂ ಮಸಾಲ ಪುಡಿ – 1 ಟೀ ಸ್ಪೂನ್
    * ಜೀರಿಗೆ – 1 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆ ಎಣ್ಣೆ- 1 ಟೀ ಸ್ಪೂನ್

    ಮಾಡುವ ವಿಧಾನ:

    * ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸ ಚೆನ್ನಾಗಿ ಫ್ರೈ ಮಾಡಿ.

    * ನಂತರ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಆಲೂಗಡ್ಡೆಗಳು, ಕ್ಯಾಪ್ಸಿಕಂ ಅನ್ನು ಬೆರೆಸಿ. 4-5 ನಿಮಿಷಗಳ ಕಾಲ ಬೇಯಿಸಿ. ನಂತರ, ಇದಕ್ಕೆ ಕತ್ತರಿಸಿದ ಟೊಮೇಟೊ, ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ:
    ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ

    * ತರಕಾರಿಗಳೆಲ್ಲ ಬೆಂದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಅದರ ಮೇಲೆ ಗರಂ ಮಸಾಲವನ್ನು ಚಿಮುಕಿಸಿ.

    * ಈಗ ಉರಿಯನ್ನು ಆರಿಸಿ, ಕರಿಯ ಮೇಲೆ ಕೊತ್ತಂಬರಿಯ ಸೊಪ್ಪನ್ನು ಚಿಮುಕಿಸಿ, ಅಲಂಕಾರಿಕವಾಗಿ ಕಾಣುವಂತೆ ಮಾಡಿ. ಈಗ ನಿಮ್ಮ ಮುಂದೆ ರುಚಿಕರವಾದ ಆಲೂ ಕರಿ ತಯಾರಾಗಿದೆ.

  • ಕ್ಯಾಪ್ಸಿಕಂ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

    ಕ್ಯಾಪ್ಸಿಕಂ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

    ದೊಡ್ಡ ಮೆಣಸಿನಕಾಯಿ(ಕ್ಯಾಪ್ಸಿಕಂ) ಅಂದ ಕೂಡಲೆ ಥಟ್ಟನೆ ನೆನಪಾಗುವುದು ಅದರಿಂದ ತಯಾರಿಸಿದ ಬೊಂಡಾ, ಕ್ಯಾಪ್ಸಿಕಂ ಮಸಾಲಾ, ಕ್ಯಾಪ್ಸಿಕಂ ಬಾತ್ ಹೀಗೆ ಹಲವು ಖಾದ್ಯಗಳು. ಸಾಮಾನ್ಯವಾಗಿ ಕ್ಯಾಪ್ಸಿಕಂ ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಆದರೆ ಇದರಲ್ಲಿನ ಅನೇಕ ಉಪಯುಕ್ತ, ಆರೋಗ್ಯಕರ ಅಂಶದ ಬಗ್ಗೆ ಹಲವರಿಗೆ ತಿಳಿದಿಲ್ಲ.

    ದೊಡ್ಡ ಮೆಣಸಿನಕಾಯಿ ಆರೋಗ್ಯಕ್ಕೆ ಯಾವೆಲ್ಲ ಲಾಭವನ್ನು ನೀಡುತ್ತದೆ ಎನ್ನುವ ಬಗ್ಗೆ ನಾವು ತಿಳಿಸುತ್ತಿದ್ದೇವೆ. ದೊಡ್ಡ ಮೆಣಸಿನಕಾಯಿ ಆಂಟಿ-ಆಕ್ಸಿಡೆಂಟ್‍ಗಳನ್ನು ಹೇರಳವಾಗಿ ಹೊಂದಿದ್ದು, ಇವುಗಳು ಕ್ಯಾನ್ಸರ್ ರೋಗವನ್ನು ನಿವಾರಿಸುವ ಪಥ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇದೊಂದು ಮೆಣಸಿನ ವಿಧವಾಗಿದ್ದು ಬೆಲ್ಲಿ ಪೆಪ್ಪರ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ಇದು ಮೂಲತಃ ಅಮೇರಿಕಾದ ಉಷ್ಣವಲಯದ ಬೆಳೆಯಾಗಿದ್ದು, ಇದರ ಔಷಧೀಯ ಗುಣಗಳಿಂದಾಗಿ ಮೊದಲು ಔಷಧಿಯ ರೂಪದಲ್ಲಿಯೇ ದೊಡ್ಡ ಮೆಣಸಿನಕಾಯಿಯನ್ನು ಬಳಸಲಾಗುತ್ತಿತ್ತು.

    ಇದರಲ್ಲಿ ಕೊಬ್ಬು ಕಡಿಮೆ ಪ್ರಮಾಣದಲ್ಲಿದ್ದು, ಇದರ ಪೋಷಕಾಂಶಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತವೆ. ಅಲ್ಲದೇ ಹಲವಾರು ವಿಟಮಿನ್‍ಗಳು, ಖನಿಜಗಳು ಹಾಗೂ ಇತರೆ ಪೋಷಕಾಂಶಗಳೂ ದೊಡ್ಡ ಮೆಣಸಿನಕಾಯಿಯ ಮಹತ್ವವನ್ನು ಹೆಚ್ಚಿಸುತ್ತದೆ.

    ಈ ದೊಡ್ಡ ಮೆಣಸಿನಕಾಯಿ ಸಾಮಾನ್ಯವಾಗಿ ಹಸಿರು, ಹಳದಿ ಹಾಗೂ ಕೆಂಪು ಸೇರಿದಂತೆ ಮೂರು ಬಣ್ಣದಲ್ಲಿ ಬರುತ್ತದೆ. ದೊಡ್ಡ ಮೆಣಸಿನಕಾಯಿ ಕೇವಲ ಅಡುಗೆ ಮಾಡಲು, ಆಹಾರವನ್ನು ಸಿಂಗರಿಸಲು ಮಾತ್ರ ಉಪಯೋಗಿಸುವುದಿಲ್ಲ. ಅದನ್ನು ಔಷಧಿಯ ರೀತಿ ಕೂಡ ಉಪಯೋಗಿಸಲಾಗುತ್ತದೆ. ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಅಂಶ, ಕ್ಯಾರೊಟೆನಾಯ್ಡಸ್, ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.

    ಕ್ಯಾಪ್ಸಿಕಂ ಲಾಭಗಳೇನು?
    ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತೆ
    ದೊಡ್ಡ ಮೆಣಸಿನಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಕ್ಯಾನ್ಸರ್‍ಕಾರಕ ಫ್ರೀ ರ್ಯಾಡಿಕಲ್ ಕಣಗಳ ವಿರುದ್ಧ ಹೋರಾಡುತ್ತವೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಲೈಕೋಪೀನ್ ಎಂಬ ಕ್ಯಾರೋಟಿನಾಯ್ಡ್ ಗರ್ಭ ಕೋಶ, ಪ್ರಾಸ್ಟೇಟ್, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಅಲ್ಲದೇ ಇದರಲ್ಲಿರುವ ಕಿಣ್ವಗಳು ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸುತ್ತವೆ.

    ಆಂಟಿ-ಆಕ್ಸಿಡೆಂಟ್ ಗುಣ
    ದೊಣ್ಣೆಮೆಣಸಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ ಹಾಗೂ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಿ ಇವುಗಳ ಪ್ರಭಾವದಿಂದ ರಕ್ತನಾಳಗಳು ಮತ್ತು ಜೀವಕೋಶಗಳ ಮೇಲೆ ಆಗಬಹುದಾದ ಹಾನಿಯಿಂದ ರಕ್ಷಿಸುತ್ತವೆ.

    ತೂಕ ಕಡಿಮೆಗೊಳಿಸಲು ಸಹಕಾರಿ
    ದೊಡ್ಡ ಮೆಣಸಿಣಕಾಯಿ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಾಯಕಾರಿಯಾಗಿದೆ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ಟ್ರೈಗ್ಲಿಸರೈಡುಗಳನ್ನು ತಗ್ಗಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಅಲ್ಲದೆ ಪ್ರತಿ ನಿತ್ಯ ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೀಗಾಗಿ ಡಯಟ್‍ನಲ್ಲಿ ದೊಡ್ಡ ಮೆಣಸಿಕಾಯಿ ಸೇವಿಸುವುದು ಉಪಯುಕ್ತವಾಗಿದೆ.

    ಹೃದಯಕ್ಕೆ ಉತ್ತಮ
    ಟೊಮಾಟೋದಲ್ಲಿರುವ ಲೈಕೋಪೀನ್ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕೆಂಪು ದೊಣ್ಣೆಮೆಣಸಿನಲ್ಲಿದೆ. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಫೈಬರ್ ಅಂಶ ಅಡಕವಾಗಿದೆ. ಇದರಲ್ಲಿ ಬಿ-6 ಮತ್ತು ಫೋಲೆಟ್ ಇರುವುದರಿಂದ ದೇಹದಲ್ಲಿ ಹೋಮೋಕ್ಲಾಸ್ಟೇನ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ ದೊಡ್ಡ ಮೆಣಸಿನಕಾಯಿಯಲ್ಲಿ ಪೊಟಾಷಿಯಂ ಅಂಶವಿದ್ದು, ಇದು ರಕ್ತದೊತ್ತಡವನ್ನು ಕಡಿಮೆಗೊಳಿಸಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

    ರೋಗ ನಿರೋಧಕ, ಕಬ್ಬಿಣದ ಕೊರತೆ ಕಡಿಮೆಗೊಳಿಸುತ್ತದೆ
    ದೊಡ್ಡ ಮೆಣಸಿಣಕಾಯಿ ತರಹದ ತರಕಾರಿಗಳಲ್ಲಿ ವಿಟಮಿನ್ ಸಿ ಅಂಶವಿದ್ದು, ಸಂಧಿವಾತ ಎದುರಾಗುವ ಸಾಧ್ಯತೆಯನ್ನು ಕಡಿಮೆಗೊಳಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ವಿಟಮಿನ್ ಕೆ ಒದಗಿಸಿ ಉರಿಯೂತವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

    ತ್ವಚೆ, ಕೂದಲು, ಉಗುರಿಗೆ ಒಳ್ಳೆಯದು
    ಹಸಿರು ದೊಡ್ಡ ಮೆಣಸಿನಕಾಯಿಯಲ್ಲಿ ನೈಸರ್ಗಿಕ ಸಿಲಿಕಾನ್ ಅಂಶ ಅಡಕವಾಗಿದೆ. ಇದು ಕೂದಲು ಹಾಗೂ ಉಗುರು ಬೆಳವಣಿಗೆಗೆ ಸಹಕಾರಿಯಾಗಿದೆ. ದೊಡ್ಡ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ರಕ್ತ ಸಂಚಲನವನ್ನು ವೃದ್ಧಿಸಿ ಕೂದಲು ಬೆಳೆಯಲು ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಇರುವುದು ದೇಹಕ್ಕೆ ಅನೇಕ ಆರೋಗ್ಯಕರ ಲಾಭವನ್ನು ನೀಡುತ್ತದೆ.

    ದೊಡ್ಡ ಮೆಣಸಿನ ಕಾಯಿ ಜ್ಯೂಸ್ ಮಾಡಿ ಸೇವಿಸಿದರೆ ತ್ವಚೆಗೆ ಒಳ್ಳೆಯದು. ಇದರ ಜೊತೆ ಕ್ಯಾರೆಟ್ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮುಖ ತ್ವಚೆಯ ಮೇಲಿರುವ ಕಲೆಗಳು ಹಾಗೂ ರ್ಯಾಷಸ್ ಕಡಿಮೆಯಾಗುತ್ತದೆ. ಅಲ್ಲದೆ ಮಿತವಾಗಿ ಈ ಜ್ಯೂಸ್ ಸೇವಿಸುತ್ತ ಬಂದರೆ ತ್ವಚೆ ಸುಕ್ಕಾಗುವುದನ್ನು ತಡೆಯುತ್ತದೆ.

    ಇಷ್ಟು ದಿನ ದೊಡ್ಡ ಮೆಣಸಿನಕಾಯಿ ಬರೀ ಅಡುಗೆಗೆ ಸೀಮಿತ ಎಂದುಕೊಂಡವರಿಗೆ ಅದರ ಅದ್ಭುತ ಆರೋಗ್ಯಕರ ಲಾಭವೇನು ಎನ್ನುವ ಬಗ್ಗೆ ತಿಳಿಸಿದ್ದೇವೆ. ಇನ್ಮುಂದೆ ಬರೀ ರುಚಿಗಾಗಿ ಮಾತ್ರವಲ್ಲ ಆರೋಗ್ಯಕ್ಕಾಗಿ ಕೂಡ ದೊಡ್ಡ ಮೆಣಸಿನ ಕಾಯಿ ಸೇವಿಸಿ.