Tag: CAPF

  • ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ

    ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ

    – ನ.19ರ ವರೆಗೆ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು ಬಂದ್

    ಇಂಫಾಲ್‍: ಹಿಂಸಾಚಾರ ಪೀಡಿತ ಮಣಿಪುರದ (Manipur violence) ಭದ್ರತಾ ವ್ಯವಸ್ಥೆಗಳ ಕುರಿತು ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರಿಂದು ಉನ್ನತ ಮಟ್ಟದ ಸಭೆ ನಡೆಸಿದರು. ಹಲವು ವಿಷಯಗಳ ಕುರಿತು ಚರ್ಚಿಸಿದರು.

    ಈ ವೇಳೆ ಉದ್ವಿಗ್ನತೆ ಹೆಚ್ಚಿರುವ ಕಾರಣ ಮಣಿಪುರದಲ್ಲಿ ಹೆಚ್ಚುವರಿ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ನಿಯೋಜಿಸಲು ನಿರ್ಧರಿಸಲಾಯಿತು. ಈ ಸಂಬಂಧ ಸಭೆಯ ಬಳಿಕ ಸಿಎಪಿಎಫ್‌ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಅಮಿತ್‌ ಶಾ ನಿರ್ದೇಶನ ನೀಡಿದರು. ಈ ಮೊದಲೇ 20 ಭದ್ರತಾ ಪಡೆಗಳನ್ನು ನಿಯೋಹಿಸಲಾಗಿತ್ತು. ಸದ್ಯ ಒಟ್ಟು 70 ಕೇಂದ್ರೀಯ ಭದ್ರತಾ ಪಡೆಗಳು ಮಣಿಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ.

    ಶಾಲೆ, ಕಾಲೇಜುಗಳು ಬಂದ್‌:
    ಇನ್ನೂ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಜನ ಕಂಗಾಲಾಗಿದ್ದು, ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳನ್ನು ನವೆಂಬರ್‌ 19ರ ವರೆಗೆ (ಮಂಗಳವಾರ) ಬಂದ್‌ ಮಾಡಿರುವುದಾಗಿ ಮಣಿಪುರ ಸರ್ಕಾರ ಸೋಮವಾರ (ಇಂದು) ಘೋಷಿಸಿದೆ. ಇದನ್ನೂ ಓದಿ: ವಿಮಾನ ಪ್ರಯಾಣದಲ್ಲಿ ದಾಖಲೆ – ನ.17 ರಂದು ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

    ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
    ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ

    ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಇದರಿಂದ ಅಮಿತ್‌ ಶಾ ಮಹಾರಾಷ್ಟ್ರದಲ್ಲಿ ನಿಯೋಜನೆಗೊಂಡಿದ್ದ ಚುನಾವಣಾ ರ‍್ಯಾಲಿಗಳನ್ನು ದಿಢೀರ್‌ ಸ್ಥಗಿತಗೊಳಿಸಿ ಭಾನುವಾರ ಸಂಜೆಯೇ ಭದ್ರತಾ ಅಧಿಕಾರಿಗಳ ಸಭೆ ನಡೆಸಿದ್ದರು.

    ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು, ಶಾಂತಿಯನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳನ್ನ ನೇರವಾಗಿ ಹೊಣೆ ಮಾಡಿತು. ಇದನ್ನೂ ಓದಿ: ನಾವು ಜಾತಿ ಸಮೀಕ್ಷೆ ನಡೆಸುತ್ತೇವೆ, ಅವಕಾಶ ವಂಚಿತರಿಗೆ ಇದರಿಂದ ಲಾಭವಾಗಲಿದೆ: ರಾಹುಲ್ ಗಾಂಧಿ

    ಸದ್ಯ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೈಗೆತ್ತಿಕೊಂಡಿದೆ. ಇದನ್ನೂ ಓದಿ: Kantara Chapter 1 ಟೈಟಲ್ ಟೀಸರ್ ರಿಲೀಸ್- ರಿಷಬ್ ಶೆಟ್ಟಿ ಲುಕ್‌ಗೆ ಫ್ಯಾನ್ಸ್ ಫಿದಾ

  • ಮಾತೃ ಭಾಷೆಯಲ್ಲಿ CAPF ಪರೀಕ್ಷೆ ಬರೆಯಲು ಅನುಮತಿ

    ಮಾತೃ ಭಾಷೆಯಲ್ಲಿ CAPF ಪರೀಕ್ಷೆ ಬರೆಯಲು ಅನುಮತಿ

    ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಗಳಲ್ಲಿ ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಹಿಂದಿ (Hindi) ಮತ್ತು ಇಂಗ್ಲಿಷ್ (English) ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ‌. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ದೇಶಾದ್ಯಂತ 128 ನಗರಗಳಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳಿಗೆ ಫೆಬ್ರವರಿ 20ರಿಂದ ಮಾರ್ಚ್ 7 ರ ವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amitshah) ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು 13 ಪ್ರಾದೇಶಿಕ ಭಾಷೆಗಳಲ್ಲಿ ಸಿಎಪಿಎಫ್ ಗಳ ನೇಮಕಾತಿಗಾಗಿ ಕಾನ್‌ಸ್ಟೇಬಲ್‌ (ಸಾಮಾನ್ಯ ಕರ್ತವ್ಯ) ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆ ಹೆಚ್ಚಿಸಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಕೇಂದ್ರ ಗೃಹ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಹೆಚ್‌ಡಿಡಿಯನ್ನು ಭೇಟಿ ಮಾಡಿ ಚರ್ಚಿಸಿದ ಯೋಗೇಶ್ವರ್‌

    ಕಾನ್‌ಸ್ಟೇಬಲ್‌ ಜಿಡಿ ಪರೀಕ್ಷೆಯು ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ನಡೆಸುವ ಪ್ರಮುಖ ಪರೀಕ್ಷೆಗಳಲ್ಲಿ ಒಂದಾಗಿದೆ, ಇದು ದೇಶಾದ್ಯಂತ ಲಕ್ಷಾಂತರ ಯುವಕರನ್ನು ಆಕರ್ಷಿಸುತ್ತದೆ. ಆದ್ದರಿಂದ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಸಿಬ್ಬಂದಿ ಆಯ್ಕೆ ಆಯೋಗವು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಮೇಲಿನ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುವಂತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ.

    ಸರ್ಕಾರದ ಈ ನಿರ್ಧಾರವು ಲಕ್ಷಾಂತರ ಯುವಕರು ತಮ್ಮ ಮಾತೃಭಾಷೆ, ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ ಅವರಿಗೆ ಆಯ್ಕೆಯ ಭವಿಷ್ಯವನ್ನು ಸುಧಾರಿಸುತ್ತದೆ. ಪರಿಣಾಮವಾಗಿ, ಇಡೀ ದೇಶದ ಅಭ್ಯರ್ಥಿಗಳಲ್ಲಿ ಈ ಪರೀಕ್ಷೆಯ ವ್ಯಾಪ್ತಿಯು ಹೆಚ್ಚಾಗುತ್ತದೆ. ಎಲ್ಲರಿಗೂ ಸಮಾನ ಉದ್ಯೋಗ ಅವಕಾಶ ಸಿಗುತ್ತದೆ.

  • ಇನ್ನು ಮುಂದೆ ಕನ್ನಡದಲ್ಲೂ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಪರೀಕ್ಷೆ ಬರೆಯಬಹುದು

    ಇನ್ನು ಮುಂದೆ ಕನ್ನಡದಲ್ಲೂ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಪರೀಕ್ಷೆ ಬರೆಯಬಹುದು

    ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ (CAPF) ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಕನ್ನಡ (Kannada) ಸೇರಿದಂತೆ 13 ಸ್ಥಳೀಯ ಭಾಷೆಯಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ (Union Government) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಸರ್ಕಾರ ನಿರ್ಧಾರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಷಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಸ್ಸಾಂ, ಬೆಂಗಾಳಿ, ಗುಜರಾತಿ, ಮರಾಠಿ, ಮಲೆಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ, ಕೊಂಕಣಿ ಭಾಷೆಯಯಲ್ಲಿ ಇನ್ನು ಮುಂದೆ ಪರೀಕ್ಷೆ ಬರೆಯಬಹುದು.

    ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪರೀಕ್ಷೆ ಆಯೋಜನೆ ಮಾಡಿದ್ದಕ್ಕೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ 13 ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಆಯೋಜನೆ ಮಾಡಲು ಮುಂದಾಗಿದೆ.  ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ಟ್ವೀಟ್‌ನಲ್ಲಿ ಏನಿದೆ?
    ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಆಯೋಜಿಸುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಕೈಗೊಂಡಿದೆ.

    ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರ್ಕಾರವೊಂದು ಇಂತಹ ನಿರ್ಣಯ ಕೈಗೊಂಡು ಸ್ಥಳೀಯ ಭಾಷೆಗಳಿಗೆ ಗೌರವ ನೀಡುವ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾರ್ಯವನ್ನು ಮಾಡಿದೆ. ಈ ನಿರ್ಣಯದಿಂದ ರಾಜ್ಯದ ಹೆಚ್ಚು ಅಭ್ಯರ್ಥಿಗಳಿಗೆ ಈ ಸೇವೆಗೆ ಸೇರುವ ಅವಕಾಶ ದೊರೆಯಲಿದೆ.

    ಈ ಐತಿಹಾಸಿಕ ಹಾಗೂ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಹಾಗೂ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.