ಹಾಸನ: ದಿನನಿತ್ಯ ಛತ್ರಿ ಹಿಡಿಸಿಕೊಂಡು ಸಿನಿಮಾ ಶೂಟಿಂಗ್ ನಲ್ಲಿರುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಲಿ. ನಮ್ಮ ರೈತರ ಕಷ್ಟ ಅರ್ಥವಾಗಲಿ ಎಂದು ಸಿಎಂ ಕುಮಾರಸ್ವಾಮಿ ಯಶ್ ಹಾಗೂ ದರ್ಶನ್ ಪ್ರಚಾರದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.
ಬಳಿಕ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಏನೇ ಪ್ರಯತ್ನ ಪಟ್ಟರೂ, ಎಷ್ಟೇ ಅಪಪ್ರಚಾರ ಮಾಡಿದರೂ ಮಂಡ್ಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಂಡ್ಯದ್ದೇ ಸುದ್ದಿ. ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ. ನಾನೇನು ಗಾಬರಿ ಆಗಿಲ್ಲ ಹಾಗೂ ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗದಂತೆ ನಾನೇ ಖುದ್ದು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. ಏಕೆಂದರೆ 2014ಕ್ಕೂ 2019ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನು ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರಧಾನಿ ಆಗ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
– ಇದು ಜನರಲ್ಲಿ ಇರೋ ಕಾಮನ್‍ಸೆನ್ಸ್
– ಮಂಡ್ಯದ ಬಗ್ಗೆ ಅಣ್ಣನಿಗೆ ನಾಟಕದ ಪ್ರೀತಿ ಇರಲಿಲ್ಲ
ಮಂಡ್ಯ: ಯಾವ ಹೆಣ್ಣುಮಕ್ಕಳು ಮದುವೆಯಾಗಿ ದೀಪ ಹಚ್ಚುತ್ತಾಳೋ ಅದು ಅವರ ಮನೆ ಆಗುತ್ತೆ. ಇದು ಜನರಲ್ಲಿ ಇರೋ ಕಾಮನ್ ಸೆನ್ಸ್ ಎಂದು ನಟ ಯಶ್ ಹೇಳಿದ್ದಾರೆ.
ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಎಂದು ಸಂಸದ ಶಿವರಾಮೇಗೌಡ ಹೇಳಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವ ಹೆಣ್ಣುಮಕ್ಕಳು ಮದುವೆಯಾಗಿ ದೀಪ ಹಚ್ಚುತ್ತಾಳೋ ಅದು ಅವರ ಮನೆ ಆಗುತ್ತೆ. ಇದು ಜನರಲ್ಲಿ ಇರೋ ಕಾಮನ್ ಸೆನ್ಸ್. ಅದು ಬಿಟ್ಟು ಇವರು ಗೌಡ್ತಿನೋ ಅಲ್ವೋ ಜಾತಿಗಳನ್ನ ತರುವುದು ಅದೆಲ್ಲ ತಪ್ಪು. ಸುಮಲತಾ ನಿಮ್ಮ ಮಂಡ್ಯದ ಸೊಸೆ. ಅಂಬರೀಶ್ ಅಣ್ಣ ನಿಮ್ಮ ಮಂಡ್ಯದ ಮಗ. ಇಂಡಿಯಾದಲ್ಲಿ ಮಂಡ್ಯ ಎನ್ನುವ ಪದ ಎಲ್ಲೇ ಬಂದರು ಅಲ್ಲಿ ಅಂಬರೀಶ್ ಅಣ್ಣ ಎಂಬ ಹೆಸರು ಬರಲೇ ಬೇಕು. ಅದು ಆ ವ್ಯಕ್ತಿ ಬೆಳೆಸಿಕೊಂಡ ಪ್ರೀತಿ. ಯಾವಾಗ ಹೋದರು ಮಂಡ್ಯ, ಮಂಡ್ಯ ಎಂದು ಹೇಳುತ್ತಿದ್ದರು. ಮಂಡ್ಯ ಅಂದರೆ ಎಲ್ಲಿಬೇಕಾದರೂ ಬದುಕಬಹುದು. ವಿದೇಶಕ್ಕೆ ಹೋದರೂ ಮಂಡ್ಯ ಎಂದು ಹೇಳುತ್ತಿದ್ದರು. ಜೀವನದಲ್ಲಿ ಮಂಡ್ಯ ಮೇಲೆ ಪ್ರೀತಿ ಇಟ್ಟುಕೊಂಡಿದ್ದರು ಎಂದರು.
ಅಂಬರೀಶ್ ನಿಧನರಾಗುವ ದಿನ ಬಸ್ ಅಪಘಾತದ ಘಟನೆ ನೋಡಿ ನೊಂದುಕೊಂಡು ತುಂಬಾ ಕುಸಿದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರು ಮಂಡ್ಯದ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ಅವರ ಮಂಡ್ಯದ ಮೇಲೆ ನಾಟಕದ ಪ್ರೀತಿ ಇಟ್ಟುಕೊಂಡಿರಲಿಲ್ಲ. ಅಂಬರೀಶ್ ಅಣ್ಣನಿಗೆ ಮಂಡ್ಯ ಜನತೆ ಅಂದರೆ ಎಷ್ಟು ಪ್ರೀತಿ ಇದೆಯೋ ಮಂಡ್ಯ ಜನಕ್ಕೆ ಅಂಬರೀಶ್ ಅಣ್ಣ ಅಂದರೆ ಅಷ್ಟೇ ಪ್ರೀತಿ. ಆ ಸಂಬಂಧ ಅಳಿಸುವುದಕ್ಕೆ ಆಗಲ್ಲ ಎಂದು ಯಶ್ ಹೇಳಿದರು.
ಇವತ್ತಿನ ದಿನ ಒಂದು ಘಟನೆ ಯಾವ ರೀತಿ ತಲುಪಿದೆ ಅಂದರೆ ಇದು ಸ್ವಾಭಿಮಾನದ ಪ್ರಶ್ನೆ ಆಗಿದೆ. ಆ ಹೆಣ್ಣುಮಗಳು ನಿಮ್ಮ ಮಡಿಲಲ್ಲಿ ಇದ್ದಾರೆ. ಇಲ್ಲಿರುವ ತಾಯಂದಿರಿಗೆ ಇದು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಇದು ನಿಮ್ಮ ಗೆಲುವು ಆಗಬೇಕು. ಏಕೆಂದರೆ ಹೆಣ್ಣುಮಕ್ಕಳು ಧೈರ್ಯ ಮಾಡಿ ಮುಂದೆ ಬರುತ್ತಾರೆ. ಯಾರಾದರೂ ಮುಂದೆ ಧೈರ್ಯವಾಗಿ ಮುಂದೆ ಬರುತ್ತಾರೆ ಅಂದ ತಕ್ಷಣ ಅವರನ್ನು ಅಲ್ಲೇ ಹೊಸಕಿ ಹಾಕುವುದಕ್ಕೆ ನೋಡಬಾರದು. ಮಂಡ್ಯ ಜನತೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಈಗ ಒಂದು ಹೆಣ್ಣು ಬಂದು ನಿಂತಿದ್ದಾರೆ ಇದು ಒಂದು ಕೊಡುಗೆ ಆಗಬೇಕು ಎಂದು ತಿಳಿಸಿದ್ದಾರೆ.
ಶಿವರಾಮೇಗೌಡ ಹೇಳಿದ್ದೇನು?
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.
ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಶಿವರಾಮೇಗೌಡ ಪ್ರಶ್ನೆ ಮಾಡಿದ್ದರು. ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ದಾರೆ.
ಮಂಡ್ಯ: ಪ್ರಚಾರಕ್ಕೆ ಹೋದ ಮೈತ್ರಿ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಿಖಿಲ್ ಪ್ರಚಾರಕ್ಕೆಂದು ಸಾರಂಗಿಗೆ ಬಂದಿದ್ದರು. ಈ ವೇಳೆ ಪ್ರಚಾರಕ್ಕೆ ಬಂದ ನಿಖಿಲ್‍ಗೆ ಸಾರಂಗಿ ಗ್ರಾಮದ ಮಹಿಳೆಯೊಬ್ಬರು ನಿಮಗೆ ವೋಟ್ ಹಾಕಿ ಎಂದು ಕೇಳುವವರಲ್ಲಿ ನಾನೂ ಒಬ್ಬಳು. ಆದರೆ ನಮ್ಮ ಊರಿನ ಚರಂಡಿ, ರಸ್ತೆ ನೋಡಿ ಎಂದು ಅಳಲು ತೋಡಿಕೊಂಡರು.
ಮಹಿಳೆ ಅಳಲನ್ನು ತೋಡಿಕೊಳ್ಳುವ ವೇಳೆ ಜೆಡಿಎಸ್ ಮುಖಂಡರು ಅವರನ್ನು ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಮಸ್ಯೆಯನ್ನು ಹೇಳಲಿ ಬಿಡಿ ಎಂದು ಮುಖಂಡರನ್ನು ಸುಮ್ಮನಿರಿಸಿದರು. ಆಗ ಮಹಿಳೆ ಇಂದು ಈ ರಸ್ತೆ, ಚರಂಡಿ ನಾನು ಸ್ವಚ್ಛಗೊಳಿಸಿದ್ದೇನೆ. ನಮ್ಮ ಊರಿನ ಪರಿಸ್ಥಿತಿ ನಿಮಗೆ ತಿಳಿಯಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ಬಗೆಹರಿಸೋದಾಗಿ ಎಂದು ನಿಖಿಲ್ ಮಹಿಳೆಗೆ ಭರವಸೆ ನೀಡಿದರು. ನಂತರ ನಾನು ಹೋಗಬಹುದೇ ಎಂದು ಮಹಿಳೆ ಬಳಿ ಕೇಳಿಕೊಂಡರು. ಮಹಿಳೆ ಸಮಸ್ಯೆ ಕೇಳಿ ನಿಖಿಲ್ ಮುಂದೆ ಸಾಗಿದರು.
ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಧುಮಕಲಿರುವ ಯಶ್ ಒಂದು ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.
ಸುಮಲತಾ ಅವರ ತಂಡ ದರ್ಶನ್, ಯಶ್ ಪ್ರಚಾರ ಕಾರ್ಯದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯಶ್ ಕೆ.ಆರ್ ನಗರ ಹೊರತುಪಡಿಸಿ ಮಂಡ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಯಶ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್ ನಗರಕ್ಕೆ ಯಶ್ ಹೋಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಸ್ನೇಹಕ್ಕೆ ತಲೆಬಾಗಿ ಯಶ್ ಕೆ.ಆರ್ ನಗರ ಕ್ಷೇತ್ರಕ್ಕೆ ಪ್ರಚಾರ ಹೋಗಲ್ಲ ಎಂದು ಹೇಳಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶ್ ಕೆ.ಆರ್ ನಗರದಲ್ಲಿ ಜೆಡಿಎಸ್‍ನ ಸಚಿವ ಸಾ.ರಾ ಮಹೇಶ್ ಪರ ಪ್ರಚಾರ ಮಾಡಿದ್ದರು. ಇದೇ ಕಾರಣಕ್ಕೆ ಈಗ ಯಶ್ ಅವರು ಸುಮಲತಾ ಪರ ಪ್ರಚಾರಕ್ಕೆ ಕೆ.ಆರ್ ನಗರಕ್ಕೆ ಹೋಗುತ್ತಿಲ್ಲ ಎನ್ನಲಾಗುತ್ತಿದೆ.
ಮಂಡ್ಯ: ತಮ್ಮ ಪಾದಗಳಿಗೆ ನಮಸ್ಕಾರ ದಯವಿಟ್ಟು ವೋಟ್ ಮಾಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಜನರಲ್ಲಿ ಮನವಿ ಮಾಡಿಕೊಂಡರು.
ಇಂದು ಮಂಡ್ಯದಲ್ಲಿ ದರ್ಶನ್ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಅವರು “ಸುಮಲತಾ ಎ ನೆನಪಿರಲಿ” ಅಂತ ಪದೇ ಪದೇ ಒತ್ತಿ ಹೇಳಿದರು. ಅಲ್ಲದೆ ತಮ್ಮ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ ದಯವಿಟ್ಟು ವೋಟ್ ಮಾಡಿ ಎಂದು ದರ್ಶನ್ ಮನವಿ ಮಾಡಿಕೊಂಡರು. ವಯಸ್ಸಾದವರನ್ನು ಕರೆದು ಕೊಂಡು ಹೋಗಿ ಸುಮಲತಾ ಅವರಿಗೆ ವೋಟು ಮಾಡುವಂತೆ ದರ್ಶನ್ ಹೇಳಿದರು. ಪ್ರಚಾರದ ವೇಳೆ ದರ್ಶನ್ ಸ್ಥಳೀಯ ಮುಖಂಡನನ್ನು ಗಾಡಿಗೆ ಹತ್ತಿಸಿಕೊಂಡರು. ಬಳಿಕ ವಿಡಿಯೋ ಕಾಲ್ ಮೂಲಕ ತನ್ನ ಅಭಿಮಾನಿಯ ಜೊತೆ ಮಾತನಾಡಿದರು.
ದರ್ಶನ್ ಪ್ರಚಾರದ ವೇಳೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಹೆಸರು ಬಳಸಿದರು. ಚಿತ್ರರಂಗದಲ್ಲಿ ಈ ನಾಲ್ಕು ದಿಗ್ಗಜರ ಹೆಸರು ಮರೆಯುವ ಹಾಗಿಲ್ಲ. ಈ ಪಟ್ಟಿಯಲ್ಲಿ ಅಪ್ಪಾಜೀ ಅಂಬರೀಶ್ ಅವರ ಹೆಸರು ಕೂಡ ಇದೆ. ದಯಮಾಡಿ ಅಂಬರೀಶ್ ಅವರಿಗಾಗಿ ಸುಮಮ್ಮನಿಗೆ ವೋಟ್ ಮಾಡಿ ಎಂದು ಕೇಳಿಕೊಂಡರು.
ಕೆಆರ್‍ಎಸ್ ಅರಳಿಕಟ್ಟೆಗೆ ದರ್ಶನ್ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ದರ್ಶನ್, ರೆಬಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸುಮಲತಾ ಪರ ಪ್ರಚಾರವನ್ನು ಆರಂಭಿಸಿದರು.
ಕಲಬುರಗಿ: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಮೈತ್ರಿ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೆನ್ ಮಾಡ್ತಿದ್ರೆ, ಇತ್ತ ಹೈವೋಲ್ಟೆಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಪ್ರಮುಖ ಪಕ್ಷ ಜೆಡಿಎಸ್, ಕಾಂಗ್ರೆಸ್ ಜೊತೆ ಕುಸ್ತಿಗೆ ನಿಂತಿದೆ.
ಕಲಬುರಗಿಯಲ್ಲಿ ಖರ್ಗೆಯವರಿಗೆ ಸೋಲಿನ ಭೀತಿ ಎದುರಾಗುತ್ತಲೆ, ಇತ್ತ ಖರ್ಗೆ ಬೆಂಬಲಿಗರು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರನ್ನು ಆಪರೇಶನ್ ಮಾಡಲು ಮುಂದಾಗಿತ್ತು. ಇದರಿಂದ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಸಭೆ ಸೇರಿ ಬಿಜೆಪಿಗೆ ಮತ ಹಾಕಿ ಇಲ್ಲವಾದಲ್ಲಿ ನೋಟಾ ಚಲಾಯಿಸಿ ಎಂದು ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಅಲ್ಪಸಂಖ್ಯಾತರ ಈ ಖಡಕ್ ನಿರ್ಧಾರಕ್ಕೆ ಖರ್ಗೆ ಬೆಚ್ಚಿಬಿದ್ದಿದ್ದಾರೆ. ಸ್ಥಳೀಯವಾಗಿ ನೀವು ನಮ್ಮನ್ನು ಕಾಂಗ್ರೆಸ್‍ಗೆ ಸೆಳೆದುಕೊಂಡರೆ ಮುಂದೆ ಕಾರ್ಪೋರೇಶನ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಮೂಲೆ ಗುಂಪು ಮಾಡುತ್ತೀರಿ. ಹೀಗಾಗಿ ನಾವು ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಬಂದಾಗ ಮಾತ್ರ ನಿಮಗೆ ಅಲ್ಪಸಂಖ್ಯಾತರ ಮತಗಳು ನೆನಪಾಗುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯ: ಗೌರವದಿಂದ ಮನೆಯಲ್ಲಿ ಇರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಅವರು ನಟರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅವರು ಅಂಬರೀಶ್ ಬಗ್ಗೆ ನಮಗೆ ಈಗಲೂ, ಮುಂದೆಯೂ ಗೌರವವಿದೆ. ಆದರೆ ಇತರ ಚಲನಚಿತ್ರ ಕಲಾವಿದರ ಬಗ್ಗೆ ನನಗೆ ಅಸಮಾಧಾನವಿದೆ. ಅನೇಕ ಚಿತ್ರಕಲಾವಿದರೂ ಗೊಂದಲನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ರೀತಿ ಗೊಂದಲ ಹುಟ್ಟು ಹಾಕಿದರೆ ಅವರಿಗೆ ಒಳ್ಳೆಯದಲ್ಲ. ಚಲನಚಿತ್ರದ ಕ್ಷೇತ್ರದ ಬಗ್ಗೆ ಮಾತನಾಡಲಿ. ಆದ್ರೆ ಅವರು ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ಒಳ್ಳೆಯದಲ್ಲ ಎಂದು ಹೇಳಿದರು.
ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳುವ ಮೂಲಕ ಶಾಸಕರು, ದರ್ಶನ್ ಹಾಗೂ ಯಶ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಕ್ಷಮೆ ಕೇಳಿದ ಶಾಸಕ:
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ನಾರಾಯಣಗೌಡ ಅವರು, ನಾವು ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆಸಿಕೊಂಡಿಲ್ಲ. ಸ್ಟಾರ್ ನಟರು ಮಂಡ್ಯದ ರೈತರ ಬಗ್ಗೆ ಹಾಗೂ ಜನರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅವರು ನನ್ನ ಮಂಡ್ಯದ ಜನತೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಇಷ್ಟೊಂದು ದಿನ ಕಾವೇರಿ ಹೋರಟಕ್ಕಾಗಿ ಹಾಗೂ ರೈತರ ಹೋರಾಟಕ್ಕಾಗಿ ಬಂದಿಲ್ಲ. ಅವರು ಈಗ ಮಂಡ್ಯಕ್ಕೆ ಬರುವುದು ಸರಿಯಲ್ಲ. ದರ್ಶನ್‍ಗೆ ಮಂಡ್ಯದ ಜನತೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದರು.
ಈ ಚುನಾವಣೆ ಬಗ್ಗೆ ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ಅವರು ಮಂಡ್ಯದ ಜನತೆ ಬಗ್ಗೆ ಹಾಗೂ ನಮ್ಮ ಪಕ್ಷದ ಬಗ್ಗೆ ಏಕವಚನದಲ್ಲಿ ಹಾಗೂ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಅವರ ಮೇಲೆ ಆಕ್ರೋಶದಿಂದ ಮಾತನಾಡಿದ್ದೇನೆ. ನಾನು ಆಕ್ರೋಶದಿಂದ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದೇನೆ. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಮಂಡ್ಯ ಜನತೆಗೆ ಇವರ ಕೊಡುಗೆ ಏನಿದೆ?. ರೈತರ ಹೋರಾಟಕ್ಕೆ ಇವರು ಭಾಗಿಯಾಗಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.
ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಇಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಮನೆಗೆ ಭೇಟಿ ನೀಡಿದ್ದಾರೆ.
ಬಿ.ಶಿವರಾಂ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ರೇವಣ್ಣ, “ಕೋಮುವಾದಿ ಶಕ್ತಿ ದೂರ ಇಡಲು ನಾವು ಕಾಂಗ್ರೆಸ್ ಒಂದಾಗಿದ್ದೇವೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸಣ್ಣ ಪುಟ್ಟ ಸಮಸ್ಯೆ ಇದರೂ ಒಟ್ಟಾಗಿ ಮಾತನಾಡಿದ್ದೇವೆ. ನಾವು ಶಿವರಾಂ ಒಟ್ಟಾಗಿ ಸೇರಿ ಚುನಾವಣೆ ಕಾರ್ಯತಂತ್ರ ಮಾಡುತ್ತೇವೆ” ಎಂದು ಎಚ್‍ಡಿ ರೇವಣ್ಣ ಹೇಳಿದ್ದಾರೆ.
ಅಲ್ಲದೆ ಮುಂದೆ ನಾವಿಬ್ಬರೂ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದು ಬಿ. ಶಿವರಾಂ ಸಚಿವ ರೇವಣ್ಣ ಮಾತಿಗೆ ಧ್ವನಿಗೂಡಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಹಳೇ ಭಿನ್ನಮತ ಮರೆತು ಒಟ್ಟಾಗಿ ಹೋಗುತ್ತೇವೆ. ಮುಂದೆ ಕಾಂಗ್ರೆಸ್ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ಪಡೆಯಿರಿ ಎಂದು ಮನವಿ ಮಾಡಿದ್ದೇನೆ. ಹಿಂದಿನ ಭಾವನೆ ಬೇಡ, ನಂಬಿಕೆಯಿಂದ ಮುನ್ನಡೆಯೋಣ. ನಾನೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ ಎಂದು ರೇವಣ್ಣ ಹೇಳಿದ್ದಾರೆ.
ಇತ್ತೀಚೆಗೆ ಶಿವರಾಂ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ರೇವಣ್ಣ ಚುನಾವಣೆಯಲ್ಲಿ ಪುತ್ರನಿಗೆ ಬೆಂಬಲಿಸಲು ಸಹಾಯ ಯಾಚಿಸಲು ಶಿವರಾಂ ಮನೆಗೆ ಆಗಮಿಸಿದ್ದರು. ಈ ವೇಳೆ ಶಿವರಾಂ ರೇವಣ್ಣರನ್ನು ಹಾರ ಮತ್ತು ಶಾಲು ಹಾಕಿ ಸ್ವಾಗತಿಸಿದ್ದಾರೆ. ಬಳಿಕ ಟೀ ಕುಡಿಯುತ್ತಾ ಶಿವರಾಂ ಹೊತೆ ಉಭಯ ಕುಶಲೋಪರಿ ನಡೆಸಿದ್ದಾರೆ. ಇದೇ ವೇಳೆ ರೇವಣ್ಣ ಮನೆ ಆಲ್ಟ್ರೇಷನ್ ಮಾಡಿಸಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನೆಯಲ್ಲಿ ವಾಸ್ತುಗೀಸ್ತು ಇಲ್ಲ ಎಂದು ಶಿವರಾಂ ನಗೆ ಚಟಾಕಿ ಹಾರಿಸಿದ್ದಾರೆ.
ಮೈಸೂರು: ನಮ್ಮನ್ನ ಸಸ್ಪೆಂಡ್ ಮಾಡಿದ್ರು ಪರವಾಗಿಲ್ಲ. ನಾನು ಸುಮಲತಾ ಪರವಾಗಿಯೇ ಪ್ರಚಾರ ಮಾಡೋದು ಎಂದು ಮೈಸೂರಿನ ಕೆ.ಆರ್ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದಾರೆ.
ಸುಮಲತಾ ಎಂಪಿ ಆಗೋಕೆ ಸೂಕ್ತ ಅಭ್ಯರ್ಥಿ. ನಾವು ಒಳ್ಳೆಯ ಅಭ್ಯರ್ಥಿ ಜೊತೆ ಕೆಲಸ ಮಾಡ್ತಿದ್ದೀವಿ. ಅದಕ್ಕಾಗಿ ನಮಗೆ ಯಾವುದೇ ಭಯ ಇಲ್ಲ. ಹಿಂದೆಯಲ್ಲ ಕಾಂಗ್ರೆಸ್ ಅಭ್ಯರ್ಥಿ ಓಡಾಡಿದ್ದೇವೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ ಅದಕ್ಕೆ ಸುಮಕ್ಕನ ಜೊತೆ ಓಡಾಡುತ್ತೇವೆ. ಬಹಿರಂಗವಾಗಿ ನಾನು ಸುಮಲತಾ ಅವರಿಗೆ ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ಮೈತ್ರಿ ಪಕ್ಷಗಳ ಸೂತ್ರಕ್ಕೆ ಡೋಂಟ್ ಕೇರ್ ಎಂದಿದ್ದಾರೆ.
ಸಾ.ರಾ.ಮಹೇಶ್ ಎಚ್ಚರಿಕೆ:
ಮೈತ್ರಿ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರು ಒಮ್ಮತದಿಂದ ಕೆಲಸ ಮಾಡಬೇಕು. ಆದರೆ ನಿಖಿಲ್ ಕುಮಾರಸ್ವಾಮಿ ಹೆಸರು ಹೇಳಿದ ನಂತರ ಕಾಂಗ್ರೆಸ್ ಮುಖಂಡರು ಮತ್ತೊಬ್ಬ ಆಕಾಂಕ್ಷಿಯ ಜೊತೆ ಓಡಾಡುತ್ತಿದ್ದಾರೆ. ಆದರೆ ಅವರನ್ನು ಸ್ವಾಗತಿಸುತ್ತಿದ್ದಾರೆ. ಈ ರೀತಿ ಮಂಡ್ಯದಲ್ಲಿ ನಡೆದು ಕೊಂಡಾಗ ಮೈಸೂರು ಕಾರ್ಯಕರ್ತರ ಮೇಲೂ ಅದು ಪರಿಣಾಮ ಬೀರುತ್ತದೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ನಮ್ಮ ಗುಂಪುಗಾರಿಕೆ, ವೈಯಕ್ತಿಕ ಇಚ್ಛಾಶಕ್ತಿ ಹಾಗೂ ಭಿನ್ನಾಭಿಪ್ರಾಯ ಬಿಡಬೇಕು ಎಂದು ಹೇಳುವ ಮೂಲಕ ಸಚಿವ ಸಾ.ರಾ ಮಹೇಶ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ: ಲೋಕಸಭಾ ಚುನಾವಣೆಗೆ ಈಗಾಗಲೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪ್ರಚಾರದಲ್ಲಿ ತೊಡಗಿದ್ದಾರೆ. ಈಗ ಅವರ ಮಗ, ನಟ ಅಭಿಷೇಕ್ ಅಂಬರೀಶ್ ಅವರ ಸರದಿಯಾಗಿದ್ದು, ಅಭಿಷೇಕ್ ಕೂಡ ಪ್ರಚಾರದಲ್ಲಿ ತಮ್ಮ ತಾಯಿ ಜೊತೆ ಭಾಗವಹಿಸಲಿದ್ದಾರೆ.
ಅಭಿಷೇಕ್ ತಮ್ಮ ಫೇಸ್‍ಬುಕ್‍ನಲ್ಲಿ ತಮ್ಮ ತಾಯಿಯೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಮಳವಳ್ಳಿಗೆ ಬರುವುದಾಗಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
`ನನ್ನ ಜನರಿಗಾಗಿ ನನ್ನ ಹೆಜ್ಜೆ. ನಾಳೆ ನಾನು ಮಳವಳ್ಳಿಗೆ ಬರುತ್ತಿದ್ದೇನೆ. ನನ್ನ ಅಮ್ಮನೊಂದಿಗೆ ಅದು ಚುನಾವಣಾ ಪ್ರಚಾರಕ್ಕಾಗಿ. ನನ್ನ ಅಪ್ಪ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಊರು ಮಳವಳ್ಳಿ. ನನ್ನ ತಾತ ಸಾಕಷ್ಟು ವರ್ಷಗಳ ಕಾಲ ಜೀವನ ನಡೆಸಿದ ಮಳವಳ್ಳಿಗೆ ನಾನು ಅಮ್ಮನೊಂದಿಗೆ ಬರುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ಇಷ್ಟು ದಿನ ತಮ್ಮ ಮೊದಲ ‘ಅಮರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ತಮ್ಮ ತಾಯಿ ಸುಮಲತಾ ಅವರ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.