ಬೆಂಗಳೂರು: ಕೊರೊನಾ ಮಹಾಮಾರಿ ಪ್ರಪಂಚವನ್ನೇ ವ್ಯಾಪಿಸಿದ್ದು, ಭಾರತದಲ್ಲೂ ದಿನೇ ದಿನೇ ಆತಂಕ ಹೆಚ್ಚು ಮಾಡುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ದೀಪ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಹಲವು ನಟ, ನಟಿಯರು ಸಾಥ್ ನೀಡಿ, ದೀಪ ಬೆಳಗಿ ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ನೀಡಿದ್ದಾರೆ. ಆದರೆ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೀಪ ಬೆಳಗದೇ ಒಂದು ಫೋಟೋ ಪ್ರಕಟಿಸಿದ್ದು ಮೋದಿ ಅಭಿಮಾನಿಗಳ ಕಣ್ಣು ಕೆಂಪು ಮಾಡಿದೆ.

ಯಾವಾಗಲೂ ವಿವಾದಾತ್ಮಕ ಪೋಸ್ಟ್‍ಗಳ ಮೂಲಕವೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಗಂಭೀರ ವಿಚಾರದಲ್ಲಿ ಉದ್ಧಟತನ ತೋರಿದ್ದಾರೆ. ಹಲವು ನಟ, ನಟಿಯರು, ನಿರ್ದೇಶಕರು, ಸಂಗೀತಗಾರರು, ಧನಿಕರು, ಬಡವರ ಕಷ್ಟ ನೋಡಲಾಗದೇ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಹಲವರು ಹಣದ ಸಹಾಯ ಮಾಡಿದರೆ, ಇನ್ನೂ ಕೆಲವರು ಆಹಾರ, ಅಗತ್ಯ ವಸ್ತುಗಳ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಆರೋಗ್ಯ ತುರ್ತುಪರಿಸ್ಥಿತಿಯ ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿರುವುದು ತುಂಬಾ ಮುಖ್ಯವಾಗಿದೆ. ಸರ್ಕಾರದ ಆದೇಶ ಪಾಲಿಸುವುದು, ಬೇಕಾಬಿಟ್ಟಿಯಾಗಿ ನಡೆದುಕೊಳ್ಳದಿರುವುದು. ಸಾಧ್ಯವಾದರೆ ನೆರೆ ಹೊರೆಯವರಿಗೆ ಸಹಾಯ ಮಾಡುವುದು ಅಗತ್ಯವಾಗಿದೆ. ಬಹುತೇಕರು ಇದನ್ನು ಮಾಡುತ್ತಿದ್ದಾರೆ ಸಹ. ಆದರೆ ಬೆರಳೆಣಿಕೆಯಷ್ಟು ಜನ ಇಂತಹ ಕಷ್ಟದ ಸಂದರ್ಭದಲ್ಲಿಯೂ ಉಡಾಫೆಯಾಗಿ ನಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ದೀಪದ ಅಭಿಯಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ದೀಪ ಹಚ್ಚುವ ಬದಲು ಸಿಗರೇಟ್ ಹಚ್ಚಿದ್ದಾರೆ. ಸಿಗರೇಟ್ ಸೇದುತ್ತಿರುವ ಫೋಟೋ ಟ್ವೀಟ್ ಮಾಡಿರುವ ಅವರು, 9 ಪಿಎಂ ಡಿಸ್‍ಕ್ಲೇಮರ್ ಎಂದು ಹಾಕಿ, ಸಿಗರೇಟ್ ಸೇದುವ ಕುರಿತು ಸರ್ಕಾರದ ಎಚ್ಚರಿಕೆ ಪಾಲಿಸದಿರುವುದು, ಕೊರೊನಾ ಎಚ್ಚರಿಕೆಯನ್ನು ಪಾಲಿಸದಿರುವುದಕ್ಕಿಂತ ಅಪಾಯಕಾರಿ ಎಂದು ಬರೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದು, ದೀಪ ಹಚ್ಚದಿದ್ದರೂ ಪರವಾಗಿಲ್ಲ ಸುಮ್ಮನಾದರೂ ಇರಿ. ದೊಡ್ಡ ನಿರ್ದೇಶಕನಾಗಿ ಈ ರೀತಿ ಕೀಳು ಮಟ್ಟದ ಪೋಸ್ಟ್ ಪ್ರಕಟಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನಿಮ್ಮಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಹೀಗೆ ಹಲವರು ಆರ್ ಜಿವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಏಪ್ರಿಲ್ ಫೂಲ್ ಮಾಡುವ ಧಾವಂತದಲ್ಲಿ ನನಗೆ ಕೊರೊನಾ ಬಂದಿದೆ, ವೈದ್ಯರು ದೃಢಪಡಿಸಿದ್ದಾರೆ ಎಂದು ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗಲೂ ಜನ ನಿಮಗೆ ನಿಜವಾಗಿಯೂ ಕೊರೊನಾ ಬರುತ್ತದೆ ಎಂದೆಲ್ಲ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.