Tag: candidates

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    – ಪ್ರಫುಲ್ 532, ಗಜಾನನ ಹೊಸಬಾಳೆ 663, ಪ್ರಿಯಾಂಕಾ ಕಾಂಬ್ಳೆ 670ನೇ ರ‌್ಯಾಂಕ್

    ಚಿಕ್ಕೋಡಿ: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಒಬ್ಬ, ಚಿಕ್ಕೋಡಿಯ ಇಬ್ಬರು ಸಾಧನೆ ಮಾಡಿದ್ದು, ರೈತನ ಮಗ, ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವವರ ಮಗ ಹಾಗೂ ಅರಣ್ಯ ಸಿಬ್ಬಂದಿ ಮಗಳು 532, 663 ಹಾಗೂ 670ನೇ ರ‌್ಯಾಂಕ್  ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ರೈತನ ಮಗ, ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಫುಲ್ ಕೆಂಪಣ್ಣ ದೇಸಾಯಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಪ್ರಫುಲ್ ದೇಸಾಯಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹುಬ್ಬಳ್ಳಿಯ ಬಿವಿವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿ ಮುಗಿಸಿದ್ದು, ಸದ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಫುಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದಿದ್ದಾರೆ. ಪ್ರಫುಲ್ ಅವರ ಸಾಧನೆಗೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಕುಟಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯುವಕ ಗಜಾನನ ಬಾಳೆ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಯುವಕನ ತಂದೆ ಕಾಗವಾಡ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಮಗನಿಗೆ ವಿದ್ಯಾಭ್ಯಾಸ ನೀಡಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.

    ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಇ ಆಂಡ್ ಸಿ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ, ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಯ ತರಬೇತಿ ಪಡೆದಿದ್ದರು. 29ನೇ ವಯಸ್ಸಿನಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಗಜಾನನ ಅವರ ಸಾಧನೆಯಿಂದ ಕುಟಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

    ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಪುತ್ರಿ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪ್ರೀಯಾಂಕಾ ವಿಠ್ಠಲ ಕಾಂಬ್ಳೆ, ಸರ್ಕಾರಿ ಶಾಲೆಯಲ್ಲಿ ಓದಿ, ಬಿಎಸ್‍ಸಿ ಅಗ್ರಿ ಪದವಿ ಮುಗಿಸಿದ್ದಾರೆ. ಪ್ರಿಯಾಂಕಾ ತಂದೆ ಅರಣ್ಯ ಇಲಾಖೆಯ ವಂಟಮೂರಿ ವಲಯದ ಅರಣ್ಯ ರಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ 6 ತಿಂಗಳು ಸರ್ಕಾರದಿಂದ ನೀಡುವ ಉಚಿತ ಯುಪಿಎಸ್‍ಸಿ ತರಬೇತಿಯನ್ನು ದೆಹಲಿಯಲ್ಲಿ ಪಡೆದಿರುವ ಪ್ರೀಯಾಂಕಾ, 2ನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪಾಸ್ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದಾರೆ.

  • 5 ಲಕ್ಷ ಕೊಟ್ರೆ ಸರ್ಕಾರಿ ಹುದ್ದೆ – ಒಂದೇ ಕೊಠಡಿಯಲ್ಲಿ ಪರೀಕ್ಷೆ, ಬ್ಲೂಟೂತ್‍ನಲ್ಲಿ ಉತ್ತರ ರವಾನೆ

    5 ಲಕ್ಷ ಕೊಟ್ರೆ ಸರ್ಕಾರಿ ಹುದ್ದೆ – ಒಂದೇ ಕೊಠಡಿಯಲ್ಲಿ ಪರೀಕ್ಷೆ, ಬ್ಲೂಟೂತ್‍ನಲ್ಲಿ ಉತ್ತರ ರವಾನೆ

    – 2018ರ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್

    ಕಲಬುರಗಿ: ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಸರ್ಕಾರಿ ನೌಕರಿ ಗಿಟ್ಟಿಸಬೇಕು ಅಂದರೆ 5 ಲಕ್ಷ ಕೊಟ್ಟರೆ ಸಾಕು ನಿಮಗೆ ಸರ್ಕಾರಿ ನೌಕರಿ ಸಿಗುತ್ತದೆ. ಇಂತಹದೊಂದು ಜಾಲ ಕಲಬುರಗಿಯಲ್ಲಿದ್ದು, ನೂರಾರು ಜನರಿಂದ ಹಣ ಪಡೆದು ನೌಕರಿ ಕೊಡಿಸಿದ್ದಾರೆ. ದುರಂತ ಅಂದರೆ ಈ ಗ್ಯಾಂಗನ್ನು ಪೊಲೀಸರು ಬಂಧಿಸಿ ನಂತರ ತನಿಖೆಯನ್ನೇ ಸಂಪೂರ್ಣ ಹಳ್ಳ ಹಿಡಿಸಿದ್ದಾರೆ.

    ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಮಾತೋಳಿ ಗ್ರಾಮದ ನಿವಾಸಿ ಮೊಹಮ್ಮದ್ ನದಾಫ್ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್. ಈತನಿಗೆ 5 ಲಕ್ಷ ಕೊಟ್ಟರೆ ಸಾಕು ಸರ್ಕಾರಿ ಕೆಲಸ ಪಕ್ಕಾ. ಈತ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು, ಅವರಿಗೆ ನಕಲು ಮಾಡಲು ಸಹಕರಿಸಿ ನೂರಾರು ಜನರಿಗೆ ಸರ್ಕಾರಿ ನೌಕರಿ ಕೊಡಿಸಿದ್ದಾನೆ. ಈತನ ಕರಾಮತ್ತು ಏನಂದರೆ ಹಣ ಪಡೆಯೋದು ಮಾತ್ರವಲ್ಲದೆ, ಹಣ ಪಡೆದವರನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಿ ಪಾಸ್ ಆಗುವಂತೆ ಮಾಡುತ್ತಾನೆ.

    2018ರಲ್ಲಿ ನಡೆದ ಕೆಪಿಎಸ್‍ಸಿಯ ಎಫ್‍ಡಿಎ, ಎಸ್‍ಡಿಎ ಪರೀಕ್ಷೆಯಲ್ಲಿ ಅಫಜಲಪುರ್ ತಾಲೂಕಿನ ಒಟ್ಟು 28 ಜನ ಅಭ್ಯರ್ಥಿಗಳನ್ನು ಒಂದೇ ಕೋಣೆಯಲ್ಲಿ ಪರೀಕ್ಷೆ ಬರುವಂತೆ ನದಾಫ್ ನೋಡಿಕೊಂಡಿದ್ದ. ಹೀಗೆ ಪರೀಕ್ಷೆ ಬರೆದ ಎಲ್ಲರಿಗೂ ಸಹ ಬ್ಲೂಟೂತ್ ಮುಖಾಂತರ ಉತ್ತರಗಳನ್ನು ರವಾನಿಸಿದ್ದನು. ಆ ವೇಳೆ ಪರೀಕ್ಷೆ ಬರೆದಿದ್ದ ಎಲ್ಲರೂ ಪಾಸ್ ಆಗಿದ್ದರು. ಈ ಕಾರಣಕ್ಕೆ ಪರೀಕ್ಷೆಯಲ್ಲಿ ಅರ್ಹರನ್ನು ಬಿಟ್ಟು ಅನರ್ಹರು ಸರ್ಕಾರಿ ನೌಕರಿ ಪಡೆದಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ನದಾಫ್ ಹಾಗೂ ಆತನ ಸ್ನೇಹಿತರ ಈ ಜಾಲದ ಬಗ್ಗೆ ಕಲಬುರಗಿ ಪೊಲೀಸರಿಗೆ ಮಾಹಿತಿ ಬಂದು ಬಂಧಿಸಲು ಮುಂದಾದರು. ಈ ವೇಳೆ ಭೀಮರಾಯ ಹಾಗೂ ಚಂದ್ರಕಾಂತ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರತಿ ಅಭ್ಯರ್ಥಿಗಳಿಂದ 5 ಲಕ್ಷ ಹಣ ಪಡೆದಿರೋದು ಬಹಿರಂಗವಾಗಿದೆ. ಇಷ್ಟಾದರು ಸಹ ಅಕ್ರಮವೆಸಗಿದ್ದ ಅಭ್ಯರ್ಥಿಗಳ ವಿರುದ್ಧ ಪೊಲೀಸರು ಇಲ್ಲಿಯವರೆಗೆ ಕ್ರಮ ಜರುಗಿಸಿಲ್ಲ. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯಾದ ದಾವಣಗೆರೆ ಮೂಲದ ಸಾರಿಗೆ ಇಲಾಖೆ ನೌಕರ ವಸಂತ್ ಚೌವ್ಹಾಣ್‍ನನ್ನು ರೆಡ್‍ಹ್ಯಾಂಡಾಗಿ ಪೊಲೀಸರು ಬಂಧಿಸಿ ಬಿಡುಗಡೆ ಸಹ ಮಾಡಿದ್ದಾರೆ.

    ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್‍ಗೆ ದೂರು ನೀಡಿದ್ದರು. ಆಗ ಎಚ್ಚೆತ್ತ ಪೊಲೀಸರು, ವಸಂತ್ ಚೌವ್ಹಾಣ್‍ನ ಹೆಸರನ್ನು ಚಾಜ್‍ಶೀಟ್‍ನಲ್ಲಿ ಸೇರಿಸಿ ಕೈತೊಳೆದುಕೊಂಡಿದ್ದಾರೆ. ಹೀಗಾಗಿ ಇದೀಗ ಮರು ತನಿಖೆ ನಡೆಸಲು ದೂರುದಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

    ಅಕ್ರಮ ಬಯಲಿಗೆ ತಂದು ನೊಂದ ಅಭ್ಯರ್ಥಿಗಳಿಗೇ ನ್ಯಾಯ ನೀಡಬೇಕಾದ ಪೊಲೀಸರು ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಳ್ಳಹಿಡಿದಿರುವ ಈ ಕೆಪಿಎಸ್‍ಸಿ ಗೋಲ್ಮಾಲ್‍ನ ತನಿಖೆಯನ್ನು ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಮರು ತನಿಖೆ ನಡೆಸಬೇಕಾಗಿದೆ.

  • ಕೊನೆಗೂ ದೆಹಲಿ ಸಮರಕ್ಕೆ ‘ಕೈ’ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ಕೊನೆಗೂ ದೆಹಲಿ ಸಮರಕ್ಕೆ ‘ಕೈ’ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ದೆಹಲಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 54 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಿಸಿದೆ.

    70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳು ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ಮೊದಲ ಲಿಸ್ಟ್ ರಿಲೀಸ್ ಮಾಡಿವೆ. ಕಾಂಗ್ರೆಸ್ ಕೂಡ ಶನಿವಾರ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

    ಆಮ್ ಆದ್ಮಿ ಪಾರ್ಟಿಯಿಂದ ಹೊರ ಬಂದು ಕಾಂಗ್ರೆಸ್‍ಗೆ ಸೇರಿದ್ದ ಅಲ್ಕಾ ಲಾಂಬಾ ಅವರು ಚಾಂದಿನಿ ಚೌಕ್‍ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಕ್ರಿಕೆಟರ್ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ಸಂಗಮ್ ವಿಹಾರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ದೆಹಲಿ ಮಾಜಿ ಸಚಿವ ಅಶೋಕ್ ಕುಮಾರ್ ಕೃಷ್ಣ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪರ್ಧೆ ಮಾಡುತ್ತಿರುವ ನವದೆಹಲಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಎಎಪಿ ಎಲ್ಲ 70 ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಿಸಿದೆ.

    ಇದಕ್ಕೂ ಮುನ್ನ ದೆಹಲಿ ವಿಧಾನಸಭಾ ಚುನಾವಣೆ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿತ್ತು. ದೆಹಲಿಯ ಸೋನಿಯಾ ಗಾಂಧಿ ಅವರ ನಿವಾಸದೇದರು ಪ್ರತಿಭಟನೆ ನಡೆಸುವ ಮೂಲಕ ಟಿಕೆಟ್‍ಗೆ ಆಗ್ರಹಿಸಿದ್ದರು.

  • ದೆಹಲಿ ಚುನಾವಣೆಗೆ ಘೋಷಣೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ- ಖಾತೆ ತೆರೆಯಲು ‘ಕೈ’ ತಂತ್ರ

    ದೆಹಲಿ ಚುನಾವಣೆಗೆ ಘೋಷಣೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ- ಖಾತೆ ತೆರೆಯಲು ‘ಕೈ’ ತಂತ್ರ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣಾ ರಣೋತ್ಸಾಹದಲ್ಲಿರುವ ಆಮ್ ಆದ್ಮಿ ಪಾರ್ಟಿ ಒಂದೇ ಹಂತದಲ್ಲಿ 70 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಇತ್ತ ಬಿಜೆಪಿ ತನ್ನ ಮೊದಲು ಪಟ್ಟಿಯಲ್ಲಿ 57 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಕುತೂಹಲ ಮೂಡಿಸಿದೆ.

    2015ರ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 67 ಸ್ಥಾನದಲ್ಲಿ ದಾಖಲೆಯ ಗೆಲವು ಸಾಧಿಸಿದ್ದ ಆಮ್ ಆದ್ಮಿ ಪಾರ್ಟಿ ಅದೇ ಉತ್ಸಾಹದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ. ಮೂರು ಸ್ಥಾನಗಳನ್ನ ಪಡೆದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನ ಪಡೆದ ಮುಖಗಳಿಗೆ ಆದ್ಯತೆ ನೀಡಿದೆ. ಆದರೆ 2015ರಲ್ಲಿ ಖಾತೆ ತೆರೆಯದೆ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಟಿಕೆಟ್ ಹಂಚಿಕೆ ವಿಳಂಬ ಮಾಡುವ ಮೂಲಕ ಎಚ್ಚರಿಕೆಯ ನಡೆ ಅನುಸರಿಸಿದೆ.

    ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಳಂಬ ಹಿಂದೆ ಕಾಂಗ್ರೆಸ್ ಖಾತೆ ತೆರೆಯುವ ಸ್ಟಾಟರ್ಜಿ ಇದೆ ಎನ್ನಲಾಗಿದೆ. 2015ರಲ್ಲಿ ಒಂದು ಕ್ಷೇತ್ರದಲ್ಲಿ ಗೆಲ್ಲದ ಕಾಂಗ್ರೆಸ್ ಈ ಬಾರಿ ಅಳೆದು ತೂಗಿ ಟಿಕೆಟ್ ಫೈನಲ್ ಮಾಡುತ್ತಿದೆ. ಗುರುವಾರ ಸಭೆ ಮಾಡಿದ್ದ ಕಾಂಗ್ರೆಸ್ ಶುಕ್ರವಾರ ಪಟ್ಟಿ ಪ್ರಕಟಿಸಿವುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ತಂತ್ರ ಬದಲಿಸಿರುವ ಕಾಂಗ್ರೆಸ್ ಟಿಕೆಟ್ ಘೋಷಣೆ ಶನಿವಾರಕ್ಕೆ ಮುಂದೂಡಿದೆ.

    ಆಪ್ ಮತ್ತು ಬಿಜೆಪಿ ಘೋಷಿಸಿರುವ ಎರಡು ಪಟ್ಟಿಗಳನ್ನು ಅನುಸರಿಸಿ ಕಾಂಗ್ರೆಸ್ ಸರಿಯಾದ ಪೈಪೋಟಿ ನೀಡಬಹುದಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದೆ. ಈ ಮೂಲಕ ಕಾಂಗ್ರೆಸ್ ಈ ಬಾರಿ ಅಕೌಂಟ್ ತೆರೆಯುವ ಪ್ರಯತ್ನಕ್ಕೆ ಮುಂದಾಗಿದೆ.

    ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದ ಬೆನ್ನೆಲೇ ಶನಿವಾರ ಸಭೆ ಕರೆದಿರುವ ಕಾಂಗ್ರೆಸ್ ಮತ್ತೊಂದು ಹಂತದಲ್ಲಿ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಈ ಸಭೆಯಲ್ಲಿ ಆಪ್ ಮತ್ತು ಬಿಜೆಪಿ ನೀಡಿರುವ ಟಿಕೆಟ್‍ಗಳನ್ನು ಆಧರಿಸಿ ತನ್ನ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲು ಚಿಂತಿಸಿದ್ದು, ಈ ಮೂಲಕ ಟಿಕೆಟ್ ಹಂಚಿಕೆಯಲ್ಲಿ ಎಚ್ಚರಿಕೆ ನಡೆ ಇಟ್ಟಿರುವ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯಲೆಬೇಕು ಎನ್ನುವ ಹಠಕ್ಕೆ ಬಿದ್ದಿದೆ.

    ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರವರಿ 8ರಂದು ನಡೆಯಲಿದ್ದು, ಫೆಬ್ರವರಿ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಬೆಂಗಳೂರು: ಉಪ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮೈತ್ರಿ ಮುರಿದು ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತಿರುವ ಕಾಂಗ್ರೆಸ್ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

    ರಾಜ್ಯದ 15 ಕ್ಷೇತ್ರಗಳ ಚುನಾವಣೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ನೀಡಿದ್ದಾರೆ. ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಉಪಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಹತ್ತಿರ ಬರ್ತಿದ್ದಂತೆ ಗೊಂದಲದಲ್ಲಿ ಬಿಎಸ್‍ವೈ!

    ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಿಂದ ಭೀಮಣ್ಣ ನಾಯಕ್, ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಿಂದ ಬಿ.ಎಚ್.ಬನ್ನಿಕೋಡ, ರಾಣೆಬೆನ್ನೂರು ಕ್ಷೇತ್ರದಿಂದ ಕೆ.ಬಿ.ಕೋಳಿವಾಡ ಹಾಗೂ ಚಿಕ್ಕಬಳ್ಳಾಪುರದಿಂದ ಎಂ.ಆಂಜನಪ್ಪ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? 

    ಉಳಿದಂತೆ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದಿಂದ ಎಂ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಎಂ.ಶಿವರಾಜ್, ಹೊಸಕೋಟೆಯಿಂದ ಪದ್ಮಾವತಿ ಸುರೇಶ್ ಹಾಗೂ ಮೈಸೂರು ಜಿಲ್ಲೆ ಹುಣಸೂರು ಕ್ಷೇತ್ರದಿಂದ ಎಚ್.ಪಿ.ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ 7 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

    ಉಪ ಚುನಾವಣೆ ಅಧಿಸೂಚನೆಯು ನವೆಂಬರ್ 11ರಂದು ಪ್ರಕಟವಾಗಲಿದ್ದು, ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನವೆಂಬರ್ 19 ನಾಮಪತ್ರಗಳ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿರುತ್ತದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.

  • ಚಿಂಚೋಳಿ, ಕುಂದಗೋಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ

    ಚಿಂಚೋಳಿ, ಕುಂದಗೋಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ

    ಬೆಂಗಳೂರು: ಭಾರೀ ಕುತುಹಲ ಕೆರಳಿಸಿದ್ದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಬಿಜೆಪಿ ಚುನಾವಣೆ ಸಮಿತಿಯು ಇಂದು ಘೋಷಣೆ ಮಾಡಿದೆ.

    ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾದವ್ ಅವರಿಗೆ ಕೊನೆಗೂ ಚಿಂಚೋಳಿ ಟಿಕೆಟ್ ಸಿಕ್ಕಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ್ ಅವರಿಗೆ ಕುಂದಗೋಳದ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಜಾಧವ್ ಪುತ್ರನಿಗೆ ಬಿಜೆಪಿ ಟಿಕೆಟ್- ಇದ್ಯಾವ ಡಿಎನ್‍ಎ ಎಂದು ಕಾಲೆಳೆದ ಪ್ರಿಯಾಂಕ್ ಖರ್ಗೆ!

    ಪುತ್ರ ಅವಿನಾಶ್‍ಗೆ ಟಿಕೆಟ್ ನೀಡಬೇಕು ಎಂದು ಉಮೇಶ್ ಜಾಧವ್ ಪಟ್ಟು ಹಿಡಿದಿದ್ದರು. ಇತ್ತ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್ ಕೈತಪ್ಪುತ್ತೆ ಎಂದು ಅರಿತ ಸುನೀಲ್ ವಲ್ಯಾಪುರೆ ಅವರು, ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ಆದರೆ ರಾಜಕಾರಣದಲ್ಲಿ ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ರಾಜಕೀಯದಲ್ಲಿ ಕುಟುಂಬ ರಾಜಕಾರಣ ಕೆಲವೊಮ್ಮೆ ಅನಿವಾರ್ಯ: ಚಿಂಚೋಳಿ ಬಿಜೆಪಿ ಟಿಕೆಟ್ ಆಕಾಂಕ್ಷಿ

    ಕುಂದಗೋಳ ಉಪ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಎಸ್.ಐ. ಚಿಕ್ಕನಗೌಡರ್ ಅವರು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ 2013 ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಪರಾಭವಗೊಂಡಿದ್ದರು. ಎಸ್.ಐ. ಚಿಕ್ಕನಗೌಡರ್ ಅವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಿದ್ದು, ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ.

  • ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ತಿರುವನಂತಪುರಂ: ಲೋಕಸಭಾ ಚುನಾವಣೆ ಹಿನ್ನೆಲೆ ಬ್ಯಾನರ್ ಗಳು, ಕಟೌಟ್‍ಗಳು, ವಿಭಿನ್ನ ಪಕ್ಷಗಳ ರಾಶಿ ರಾಶಿ ಬಾವುಟಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮಿಂದಾದ ಕಸವನ್ನು ತಾವೇ ಸ್ವಚ್ಛ ಮಾಡುವ ಮೂಲಕ ಕೇರಳ ಅಭ್ಯರ್ಥಿಗಳು ಈಗ ಮಾದರಿಯಾಗಿದ್ದಾರೆ.

    ಬೃಹತ್ ರೋಡ್ ಶೋ, ಖ್ಯಾತ ರಾಜಕಾರಣಿಗಳ ಭೇಟಿ, ಪಕ್ಷದ ಪ್ರಚಾರಕ್ಕಾಗಿ ಬ್ಯಾನರ್, ಕಟೌಟ್ ಅಂತ ಕ್ಷೇತ್ರದ ಮೂಲೆ ಮೂಲೆಗೂ ಕಸದ ರಾಶಿಯೇ ತುಂಬಿ ಹೋಗಿರುತ್ತದೆ. ಅಲ್ಲದೆ ಚುನಾವಣೆ ಬಳಿಕ ಮತದಾನ ಮುಗಿಯುತ್ತಿದ್ದಂತೆ ಕಸದ ರಾಶಿಯ ಗತಿ ಕೇಳುವವರೇ ಇರುವುದಿಲ್ಲ. ಎಲ್ಲೆಂದರಲ್ಲಿ ಭಾರಿ ಪ್ರಮಾಣದಲ್ಲಿ ಕಸ ತುಂಬಿಕೊಂಡಿರುತ್ತದೆ. ಆದರೆ ಕೇರಳದಲ್ಲಿ ಮತದಾನ ನಡೆದ ನಂತರ ಸ್ಪರ್ಧೆಗೆ ನಿಂತಿದ್ದ ಅಭ್ಯರ್ಥಿಗಳೇ ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    https://www.facebook.com/kummanam.rajasekharan/posts/1962362957206815

    ಚುನಾವಣೆಗೆ ಬಳಸಿದ ವಸ್ತುಗಳನ್ನು ಪುನಃ ಬಳಕೆ ಮಾಡಲು, ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಅದನ್ನು ಪರಿಷ್ಕರಿಸಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸಲು ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಜೊತೆಗೆ ಸ್ವತಃ ತಾವೇ ಮುಂದೆ ಬಂದು ರಸ್ತೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ತೆರವು ಗೊಳಿಸಲು ಪುರಸಭೆ ಕಾರ್ಮಿಕರ ಜೊತೆ ಕೈಜೋಡಿಸಿದ್ದಾರೆ.

    ಈ ಬಗ್ಗೆ ಮಾಜಿ ಮಿಜೋರಾಮ್ ಗವರ್ನರ್ ಮತ್ತು ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ವಚ್ಛತಾ ಅಭಿಯಾನದಡಿ ಚುನಾವಣೆಗೆ ಬಳಸಿದ್ದ ಸುಮಾರು 1 ಲಕ್ಷ ಶಾಲುಗಳು ವಾಪಸ್ ಬಂದಿದೆ. ಈ ಶಾಲುಗಳನ್ನು ಎಸೆಯುವ ಬದಲು ಅವುಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಸಾರ್ವಜನಿಕರಿಗೆ ಸಹಾಯವಾಗುವಂತೆ ಪುನರ್ ಬಳಕೆಗೆ ಉಪಯೋಗಿಸುತ್ತೇವೆ. ಈ ಶಾಲುಗಳನ್ನು ಬ್ಯಾಗ್, ದಿಂಬು ಹೀಗೆ ಇತ್ಯಾದಿ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತನೆ ಮಾಡಬಹುದು. ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಾಗಿದೆ ನಮ್ಮ ಗುರಿ ಎಂದು ತಿಳಿಸಿದ್ದಾರೆ.

    https://www.facebook.com/HibiEden/posts/10155940051967260

    ಎರ್ನಾಕುಲಮ್‍ನ ಕಾಂಗ್ರೆಸ್ ಅಭ್ಯರ್ಥಿ ಹಿಬಿ ಈಡನ್ ಕೂಡ ಈ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಜತೆ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭ ಬಿದ್ದಿದ್ದ ಕಸಗಳನ್ನು ತೆರವುಗೊಳಿಸಿ, ಬೀದಿಗಳನ್ನು ಸ್ವಚ್ಛ ಮಾಡಿದ್ದಾರೆ. ಚುನಾವಣೆ ಸಂದರ್ಭ ಉಪಯೋಗಿಸಿದ್ದ ಎಲ್ಲಾ ರೀತಿಯ ಪಕ್ಷದ ವಸ್ತುಗಳನ್ನು ತೆರವುಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಫೇಸ್‍ಬುಕ್ ಮೂಲಕ ಹಿಬಿ ಸೂಚಿಸಿದ್ದಾರೆ. ಹಾಗೆಯೇ ಸಿಪಿಎಂ ಅಭ್ಯರ್ಥಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪಿ ರಾಜೀವ್ ಅವರು ಮುಂದಿನ ಎರಡು ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿದ ಎಲ್ಲ ವಸ್ತುಗಳನ್ನು ಕ್ಷೇತ್ರದಿಂದ ತೆರವುಗೊಳಿಸಿ ಸ್ವಚ್ಛಗೊಳಿಸುವುದಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/prajeev.cpm/posts/2437006436311441

    ಕೇಂದ್ರ ಸಚಿವ ಮತ್ತು ಬಿಜೆಪಿಯ ಎರ್ನಾಕುಲಂ ಅಭ್ಯರ್ಥಿ ಆಲ್ಫಾನ್ಸ್ ಕಣ್ಣಂತಾನಂ ಕ್ಷೇತ್ರದ ಸಾರ್ವಜನಿಕ ಜಾಗಗಳನ್ನು ಸಂರಕ್ಷಿಸಲು ಒತ್ತಾಯಿಸಿದ್ದು, ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ಪೋಸ್ಟರ್ ಮತ್ತು ಚಿಹ್ನೆಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಅಲ್ಲದೆ ಪಕ್ಷದ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಬರೆದಿದ್ದ ಗೋಡೆಬರಹ ಹಾಗೂ ರೇಖಾಚಿತ್ರಗಳನ್ನು ಅಳಿಸಲು ಅವುಗಳ ಮೇಲೆ ಪೇಂಟ್ ಮಾಡಲಾಗಿದೆ. “ನಮ್ಮ ಸಂದೇಶವನ್ನು ನಿಮಗೆ ಮತ್ತು ನಿಮ್ಮ ನೆರೆಹೊರೆಯವರ ಜೊತೆ ಹಂಚಿಕೊಳ್ಳಲು ಅವಕಾಶ ನೀಡಿದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

  • ಅಭ್ಯರ್ಥಿಗಳು ಚುನಾವಣೆ ಖರ್ಚು ಮಾಡಿರೋದು 70 ಲಕ್ಷನಾ, 70 ಕೋಟಿನಾ ಪ್ರಮಾಣ ಮಾಡಲಿ: ವಾಟಾಳ್

    ಅಭ್ಯರ್ಥಿಗಳು ಚುನಾವಣೆ ಖರ್ಚು ಮಾಡಿರೋದು 70 ಲಕ್ಷನಾ, 70 ಕೋಟಿನಾ ಪ್ರಮಾಣ ಮಾಡಲಿ: ವಾಟಾಳ್

    ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಖರ್ಚು ಎಂದು 70 ಲಕ್ಷದ ವೆಚ್ಚ ತೋರಿಸ್ತಾರಲ್ಲ, ಇವರೆಲ್ಲಾ ಅವರವರ ಮನೆಯ ದೇವರ ಮುಂದೆ ಹೋಗಿ 70 ಲಕ್ಷ ಖರ್ಚು ಮಾಡಿದ್ದಾರಾ, 70 ಕೋಟಿ ಖರ್ಚು ಮಾಡಿದ್ದಾರಾ ಎಂದು ಪ್ರಮಾಣ ಮಾಡಲಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

    ರಾಜ್ಯದಲ್ಲಿ ಸಮಗ್ರ ಚುನಾವಣೆ ವ್ಯವಸ್ಥೆ ಬದಲಾಗಬೇಕೆಂದು ಆಗ್ರಹಿಸಿ ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಂದು ಅವರು ಪ್ರತಿಭಟನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಯಮಗಳ ವಿರುದ್ಧ ಕಿಡಿಕಾರಿದರು.

    ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗಳು 50 ಕೋಟಿಯಷ್ಟು ಹಣವನ್ನ ಚುನಾವಣೆಗಾಗಿ ಖರ್ಚು ಮಾಡಿದ್ದಾರೆ. ಅಂದರೆ ಒಟ್ಟಾರೆ ರಾಜ್ಯದಲ್ಲಿ 4500 ಕೋಟಿಗೂ ಅಧಿಕ ಹಣ ಚುನಾವಣೆಗೆ ಖರ್ಚಾಗಿದೆ ಎಂದು ಆರೋಪಿಸಿದರು.

    ಚುನಾವಣೆ ವೇಳೆ ಅನೇಕರು ದೇವಾಲಯಕ್ಕೆ ಹೋಗಿ ಪೂಜೆ ಪುನಸ್ಕಾರ ಮಾಡಿಸಿದ್ದಾರೆ. ಹರಕೆ ಹೊತ್ತು ತಾವೇ ಗೆಲ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಚುನಾವಣೆಗೆ 70 ಲಕ್ಷ ಖರ್ಚು ಮಾಡಿದ್ದಾರಾ ಇಲ್ಲಾ 70 ಕೋಟಿ ಖರ್ಚು ಮಾಡಿದ್ದಾರಾ ಎಂಬುದನ್ನ ಅವರ ಮನೆಯ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಎಸೆದರು.

    ಅಭ್ಯರ್ಥಿಗಳಿಗೆ ಚುನಾವಣೆ ಆಯೋಗ 70 ಲಕ್ಷ ಖರ್ಚು ಹಾಗೂ 25 ಸಾವಿರ ಠೇವಣಿ ಮಾಡಲು ಸೂಚಿಸಿರುವುದು ಸರಿಯಲ್ಲ. ಹೀಗೆ ಮಾಡಿದರೆ ಹಣವಿದ್ದವರು ರಾಜಕೀಯ ಮಾಡುತ್ತಾರೆ. ಸಾಮಾನ್ಯ ಜನರು ಎಲ್ಲಿಂದ ಹಣ ತಂದು ಚುನಾವಣೆ ಎದುರಿಸ್ತಾರೆ ಎಂದು ಪ್ರಶ್ನಿಸಿದರು. ಹಾಗೆಯೇ ಮತ ಚೀಟಿಯನ್ನ ಸರ್ಕಾರವೇ ಮನೆಗಳಿಗೆ ಹಂಚಬೇಕು, ಕಡ್ಡಾಯ ಮತದಾನ ಪದ್ದತಿ ಜಾರಿಯಾಗಬೇಕು. ಅಲ್ಲದೇ ಮತದಾನದ ಅವಧಿ ಹೆಚ್ಚಾಗಬೇಕು ಎಂದು ಅವರು ಆಗ್ರಹಿಸಿದರು.

  • ಮಾಟಮಂತ್ರ ನಂತ್ರ ಚುನಾವಣೆ ಗೆಲುವಿಗಾಗಿ ನಾಗಸಾಧು ಮೊರೆ ಹೋದ ಅಭ್ಯರ್ಥಿಗಳು

    ಮಾಟಮಂತ್ರ ನಂತ್ರ ಚುನಾವಣೆ ಗೆಲುವಿಗಾಗಿ ನಾಗಸಾಧು ಮೊರೆ ಹೋದ ಅಭ್ಯರ್ಥಿಗಳು

    ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ನಾಗಸಾಧು ಮೊರೆ ಹೋಗುತ್ತಿದ್ದಾರೆ.

    ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ನಾಗಸಾಧುರೊಬ್ಬರನ್ನ ಭೇಟಿ ಮಾಡಿ ಗೆಲುವಿಗಾಗಿ ಆಶೀರ್ವಾದ ಪಡೆದಿದ್ದಾರೆ. ಸಂಡೂರು ತಾಲೂಕಿನ ಜೋಗದ ಬಳಿಯಿರುವ ದಿಗಂಬರ ರಾಜಾಭಾರತಿ ಸ್ವಾಮೀಜಿಯನ್ನ ಭೇಟಿ ಮಾಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆ ನಡೆದ ಉಪಚುನಾವಣೆಯ ವೇಳೆ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಸಹ ಈ ನಾಗಸಾಧು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಚುನಾವಣೆ ನಡೆಸಿದ್ದರು. ಆಗ ಉಗ್ರಪ್ಪ ಬಹುಮತಗಳಿಂದ ಗೆದ್ದ ಪರಿಣಾಮ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ಈ ನಾಗಸಾಧು ಮೊರೆ ಹೋಗಿ ಜಯಕ್ಕಾಗಿ ಪಾರ್ಥಿಸಿದ್ದಾರೆ.

    ಇತ್ತೀಚೆಗೆ ಚಾಮರಾಜನಗರದಲ್ಲೂ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊಳ್ಳೇಗಾಲಕ್ಕೆ ಬಂದು ಮಾಟ-ಮಂತ್ರ ಮಾಡಿಸಿ ತಮ್ಮ ಎದುರಾಳಿಗಳನ್ನು ಸೋಲಿಸುವ ತಂತ್ರಕ್ಕೆ ಮುಂದಾಗಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ರಾಜ್ಯದಲ್ಲಿ ಮಾಟ-ಮಂತ್ರಕ್ಕೆ ಫುಲ್ ಫೇಮಸ್ ಆಗಿದ್ದು, ಇದ್ರಿಂದ ಇಲ್ಲಿಗೆ ಇದೀಗ 28 ಲೋಕಸಭಾ ಕ್ಷೇತ್ರದ ಹಲವು ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬರುತ್ತಿದ್ದಾರೆ ಎಂದು ತಿಳಿದು ಬಂದಿತ್ತು.

  • ಚುನಾವಣೆ ಗೆಲ್ಲಲು ಬಾನಾಮತಿ ಮೊರೆ ಹೋದ ಅಭ್ಯರ್ಥಿಗಳು!

    ಚುನಾವಣೆ ಗೆಲ್ಲಲು ಬಾನಾಮತಿ ಮೊರೆ ಹೋದ ಅಭ್ಯರ್ಥಿಗಳು!

    ಚಾಮರಾಜನಗರ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಎದುರಾಳಿಗಳನ್ನು ಸೋಲಿಸಲು ಹಲವು ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಇದೀಗ ಮಾಟ-ಮಂತ್ರದ ಸರದಿ ಒಂದಾಗಿದೆ.

    ಲೋಕಸಭಾ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊಳ್ಳೇಗಾಲಕ್ಕೆ ಬಂದು ಮಾಟ-ಮಂತ್ರ ಮಾಡಿಸಿ ತಮ್ಮ ಎದುರಾಳಿಗಳನ್ನು ಸೋಲಿಸುವ ತಂತ್ರಕ್ಕೆ ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ರಾಜ್ಯದಲ್ಲಿ ಮಾಟ-ಮಂತ್ರಕ್ಕೆ ಫುಲ್ ಫೇಮಸ್ ಆಗಿದ್ದು, ಇದ್ರಿಂದ ಇಲ್ಲಿಗೆ ಇದೀಗ 28 ಲೋಕಸಭಾ ಕ್ಷೇತ್ರದ ಹಲವು ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯ ಹೈ ವೊಲ್ಟೇಜ್ ಆಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೂ ಮಾಟ-ಮಂತ್ರ ಮಾಡಿಸುವುದಕ್ಕೆ ಕೆಲವರು ಇಲ್ಲಿಗೆ ಬರುತ್ತಿದ್ದಾರೆ. ಪ್ರಮುಖವಾಗಿ ಕೆಲವು ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಪೂಜೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ತಮ್ಮ ಅಭ್ಯರ್ಥಿ ಗೆಲ್ಲಬೇಕೆಂದು ಸುದರ್ಶನ ಹೋಮ, ಅನ್ನಸಂರ್ತಪಣೆ, ತಡೆ ಹೋಡಸಿ ಇತರ ಪೂಜೆಗಳನ್ನು ಮಾಡಿಸಿದ್ದಾರೆ.

    ಇದಲ್ಲದೇ ರಾಜ್ಯದ ಪ್ರಮುಖ ರಾಜಕಾರಣಿಗಳು ಕೊಳ್ಳೇಗಾಲಕ್ಕೆ ಮಧ್ಯರಾತ್ರಿ ವೇಳೆ ಬಂದು ತಮ್ಮ ಪಕ್ಷದ ಗೆಲುವಿಗೆ ಮಾಟ-ಮಂತ್ರ ಮಾಡಿಸಿದ್ದಾರೆ. ಒಟ್ಟಾರೆ ಚುನಾವಣೆಯ ಕಾವು ಹೆಚ್ಚುತ್ತಿದ್ದ ಹಾಗೆ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮಾಟ-ಮಂತ್ರದ ಮೊರೆ ಹೋಗುತ್ತಿದ್ದು, ಈ ಸ್ಟಾಟರ್ಜಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.