Tag: canada

  • ಭಾರತಕ್ಕೆ ನಾವು ಯಾವುದೇ ಪುರಾವೆ ನೀಡಿಲ್ಲ: ಟ್ರುಡೋ ಸೆಲ್ಫ್‌ ಗೋಲ್‌

    ಭಾರತಕ್ಕೆ ನಾವು ಯಾವುದೇ ಪುರಾವೆ ನೀಡಿಲ್ಲ: ಟ್ರುಡೋ ಸೆಲ್ಫ್‌ ಗೋಲ್‌

    ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತಕ್ಕೆ (India) ನಾವು ಯಾವುದೇ ಪುರಾವೆ ನೀಡಿಲ್ಲ ಎಂದು ಕೆನಡಾ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದಾರೆ.

    ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ನಂಬಲರ್ಹವಾದ ಗುಪ್ತಚರ ಸೇವೆಗಳಿಂದ ತಿಳಿಸಲಾಯಿತು. ನಾವು ಇದನ್ನು ಪರಿಶೀಲಿಸಲು ಗುಪ್ತಚರ ಸಂಸ್ಥೆಗಳನ್ನು ಕೇಳಿದ್ದೆವು ಎಂದು ತಿಳಿಸಿದರು.

    ಜುಲೈ ಮತ್ತು ಆಗಸ್ಟ್‌ನಲ್ಲಿ ನಮ್ಮ ನೆಲದಲ್ಲಿ ಕೆನಡಾದವರ ಹತ್ಯೆಯ ಹಿಂದೆ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ನನಗೆ ತಿಳಿಸಲಾಯಿತು. ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಂತರರಾಷ್ಟ್ರೀಯ ಕಾನೂನಿನ ನಿಯಮದ ಉಲ್ಲಂಘನೆಯಾಗಿದ್ದು ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ಅದನ್ನು ಮಾಡಿದ್ದರೆ ಅದು ದೊಡ್ಡ ತಪ್ಪು ಎಂದು ಹೇಳಿದರು. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

     

    ಈ ವಿಚಾರದ ಬಗ್ಗೆ ಭಾರತ ಸಾಕ್ಷ್ಯಗಳನ್ನು ಕೇಳಿತ್ತು. ಆದರೆ ಭಾರತವು ತನಿಖೆಗೆ ಸಹಕರಿಸಲು ನಿರಾಕರಿಸಿತು ಮತ್ತು ನಮ್ಮ ಸರ್ಕಾರದ ವಿರುದ್ಧದ ದಾಳಿಯನ್ನು ದ್ವಿಗುಣಗೊಳಿಸಿತು ಎಂದು ದೂರಿದರು.

    ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತ ಸಾಕಷ್ಟು ಬಾರಿ ಸಾಕ್ಷ್ಯಗಳನ್ನು ಕೇಳಿತ್ತು. ಆದರೆ ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಸರಿಯಾದ ಸಾಕ್ಷ್ಯ ನೀಡದೇ ಭಾರತಕ್ಕೆ ಸಾಕ್ಷ್ಯ ನೀಡಿದೆ ಎಂದು ಮೊಂಡುವಾದ ಮಾಡುತ್ತಿತ್ತು. ಕಳೆದ ವಾರ ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ರಾಯಭಾರಿ ಹಾಗೂ ಇತರ ರಾಜತಾಂತ್ರಿಕ ಅಧಿಕಾರಿಗಳ ಕೈವಾಡ ಇದೆ ಎಂಬ ಕೆನಡಾದ ಹೊಸ ಆರೋಪಕ್ಕೆ ಭಾರತ ಕೆಂಡಾಮಂಡಲವಾಗಿದೆ.

    ಕೆನಡಾದಲ್ಲಿರುವ ತನ್ನ ರಾಯಭಾರಿಯನ್ನು ತತ್‌ಕ್ಷಣ ಹಿಂದಕ್ಕೆ ಕರೆಯಿಸಿಕೊಳ್ಳಲು ತೀರ್ಮಾನಿಸಿದ ಭಾರತ ದೆಹಲಿಯಲ್ಲಿರುವ ಕೆನಡಾದ ಆರು ಮಂದಿ ರಾಜತಾಂತ್ರಿಕರಿಗೆ ಅ. 19ರ ಮಧ್ಯರಾತ್ರಿಯೊಳಗೆ ದೇಶ ತೊರೆಯುವಂತೆ ಆದೇಶಿಸಿದೆ.

     

  • ಭಾರತದ ಪ್ರಭಾವ ಕುಗ್ಗಿಸಲು ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ – ಕೆನಡಾ ಅಧಿಕಾರಿ ಹೇಳಿಕೆ ವಿಡಿಯೋ ವೈರಲ್‌

    ಭಾರತದ ಪ್ರಭಾವ ಕುಗ್ಗಿಸಲು ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ – ಕೆನಡಾ ಅಧಿಕಾರಿ ಹೇಳಿಕೆ ವಿಡಿಯೋ ವೈರಲ್‌

    ಒಟ್ಟಾವಾ: ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತ ಮತ್ತು ಕೆನಡಾ (India – Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಈ ನಡುವೆ ಕೆನಡಾದ ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ ನೀಡುತ್ತಿದೆ ಎಂದು ಕೆನಡಾ ಗುಪ್ತಚರ ಸಂಸ್ಥೆಯ (CSIS) ನಿರ್ದೇಶಕಿ ವನೆಸ್ಸಾ ಲಾಯ್ಡ್ ಅವರು ಹೇಳಿದ್ದ ವೀಡಿಯೋ ಸದ್ದು ಮಾಡುತ್ತಿದೆ.

    ಇತ್ತೀಚೆಗೆ ನಡೆದ ವಿದೇಶಿ ಹಸ್ತಕ್ಷೇಪ ಸಮಿತಿಯ ಅಧಿವೇಶನದಲ್ಲಿ ವನೆಸ್ಸಾ ಲಾಯ್ಡ್, ನಿಜ್ಜರ್‌ ಹತ್ಯೆಗೆ ಸಂಬಂಧಿಸಿಂತೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಕೆನಡಾದ ರಾಜಕೀಯದ ಮೇಲೆ ಪ್ರಭಾವ ಬೀರುವಲ್ಲಿ ಪಾಕಿಸ್ತಾನದ ಪಾತ್ರವೂ ಇದೆ. ಜೊತೆಗೆ ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಕಡಿಮೆಗೊಳಿಸಲು ಪಾಕ್‌ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಖಲಿಸ್ತಾನಿಗಳ ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಭಾರತ-ಕೆನಡಾ ನಡುವೆ ಮತ್ತೆ ಬಿಕ್ಕಟ್ಟು ಎದುರಾದ ಬೆನ್ನಲ್ಲೇ ಈ ವೀಡಿಯೋ ಭಾರಿ ಸದ್ದು ಮಾಡುತ್ತಿದೆ.

    ಹರ್ದೀಪ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರ (Indian Gooovernment) ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಸೋಮವಾರ (ಅ.14) ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ 6 ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಗಡಿಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸರ್ಕಾರವೂ ನವದೆಹಲಿಯಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶ ತೊರೆಯುವಂತೆ ಹೇಳಿದೆ. ಇದರಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

    ಈ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತೀಯ ಸರ್ಕಾರಿ ಏಜೆಂಟ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೆನಡಾದ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ 

  • ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

    ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

    ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತ ಮತ್ತು ಕೆನಡಾ (India – Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಹರ್ದೀಪ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರ (Indian Gooovernment) ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ.

    ಸೋಮವಾರ (ಅ.14) ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ 6 ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಗಡಿಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸರ್ಕಾರವೂ ನವದೆಹಲಿಯಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶ ತೊರೆಯುವಂತೆ ಹೇಳಿದೆ. ಇದರಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ.

    2023ರ ಜೂನ್‌ ತಿಂಗಳಲ್ಲಿ ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ನಡೆದಿತ್ತು. ಹತ್ಯೆಯ ಹಿಂದೆ ಭಾರತದ ಸರ್ಕಾರಿ ಏಜೆಂಟರ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಆರೋಪಿಸಿದ್ದರು. ಟ್ರುಡ್ರೋ ಹೇಳಿಕೆಯಿಂದ ಭಾರತದ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸಿತು. ಪ್ರಸ್ತುತ ಈ ಬಿಕ್ಕಟ್ಟಿಗೆ ಕಾರಣ ಏನು? ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ ಭಾರತ-ಕೆನಡಾ ನಡುವಿನ ಬಿಕ್ಕಟ್ಟಿನ ಹಿನ್ನೆಲೆ ಏನೆಂಬುದನ್ನು ನೋಡೋಣ…

    ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು?

    2007ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೋಸ್ಟ್‌ ವಾಂಟೆಡ್‌ ಆಗಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಭಾರತ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಭಾರತದಲ್ಲಿ ಉಗ್ರರ ಸಂಘಟನೆ ಎಂದು ಪಟ್ಟಿ ಮಾಡಲಾಗಿ ಖಲಿಸ್ತಾನ್ ಟೈಗರ್ ಫೋರ್ಸ್‌ನ ಅಧ್ಯಕ್ಷನಾಗಿದ್ದ ನಿಜ್ಜರ್ 1990ರ ದಶಕದಲ್ಲೇ ಭಾರತ ತೊರೆದು ಕೆನಡಾ ಸೇರಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ತರಬೇತಿ ಮತ್ತಿತರ ನೆರವು ನೀಡಿದ ಆರೋಪಗಳೂ ಆತನ ಮೇಲಿದ್ದವು. ಆತನ ಹೆಸರಿದ್ದ ಉಗ್ರನ ಪಟ್ಟಿಯನ್ನು ಭಾರತ ಕೆನಡಾಕ್ಕೆ ಹಸ್ತಾಂತರಿಸಿತ್ತು. ಆದಾಗ್ಯೂ ಕೆನಡಾ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ರ‍್ರೆಯಲ್ಲಿನ ಗುರುದ್ವಾರದ ಅಧ್ಯಕ್ಷನಾಗಿದ್ದ ನಿಜ್ಜರ್‌ನನ್ನು ಇಬ್ಬರು ಮುಸುಕುಧಾರಿಗಳು 2023ರ ಜೂನ್‌ನಲ್ಲಿ ಗುಂಡಿಟ್ಟು ಕೊಂದರು. ಇಲ್ಲಿಂದ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಬಿಗಡಾಯಿಸಲು ಶುರುವಾಯಿತು.

    ಇನ್ನೂ ನಿಜ್ಜರ್‌ ಹತ್ಯೆಗೆ ಭಾರತದ ಸರ್ಕಾರಿ ಏಜೆಂಟರೇ ಕಾರಣ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಆರೋಪಿಸಿದ ನಂತರ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿತು. ಕೆನಡಾ ಸರ್ಕಾರ ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಹೈಕಮಿಷನರ್‌ ಮತ್ತು ಕೆನಡಾ ಗುರಿಯಾಗಿಸಿಕೊಂಡಿರುವ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ ಎಂಬುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ರಾಜತಾಂತ್ರಿಕರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದೆ.

    ಯಾರಿದು ಸಂಜಯ್ ಕುಮಾರ್‌ ವರ್ಮಾ?

    ಸಂಜಯ್‌ಕುಮಾರ್‌ ವರ್ಮಾ ಭಾರತ ಸರ್ಕಾರದ ಹಿರಿಯ ರಾಜತಾಂತ್ರಿಕ ಅಧಿಕಾರಿ. ಕಳೆದ 36 ವರ್ಷಗಳಿಂದ ವಿದೇಶಾಂಗ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಪಾನ್‌, ಸುಡಾನ್‌, ಟರ್ಕಿ, ವಿಯೆಟ್ನಾಂ, ಚೀನಾದಲ್ಲಿ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕೆನಡಾದಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.

    ತಂದೆಯಂತೆ ಮಗ ಟ್ರೂಡೋ

    ಟ್ರುಡೋ ಸರ್ಕಾರವು ಭಾರತದ ವಿರೋಧಿ ಪ್ರತ್ಯೇಕತಾವಾದಿ ಅಜೆಂಡಾಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಏಕೆಂದರೆ ಕೆನಡಾ ಸರ್ಕಾರವು ಖಲಿಸ್ತಾನಿ ಚಟುವಟಿಕೆಗಳನ್ನು ತಡೆಯಲು ನಿರಾಕರಿಸಿರುವುದು ಇದೇ ಮೊದಲೇನಲ್ಲ. ಜಸ್ಟಿನ್ ಟ್ರುಡೊ ಅವರ ತಂದೆ ಪಿಯರೆ ಟ್ರುಡೊ ಸಹ ಇದೇ ನೀತಿಯನ್ನ ಅನುಸರಿಸುತ್ತಿದ್ದರು. ಈ ಹಿಂದೆ 1985ರ ಕಾನಿಷ್ಕ ಬಾಂಂಬ್‌ ಸ್ಫೋಟ ಪ್ರಕರಣದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ಇದೀಗ ಜಸ್ಟಿನ್‌ ಸಹ ತಮ್ಮ ತಂದೆಯ ಹಾದಿಯನ್ನೇ ಅನುಸಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

    ಕಾನಿಷ್ಕ ಬಾಂಬ್‌ ಸ್ಫೋಟದ ಬಗ್ಗೆ ಗೊತ್ತಾ?

    1985ರ ಜೂ.1 ರಂದು ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಖಲಿಸ್ತಾನಿ ಉಗ್ರವಾದಿಗಳು ನಡೆಸಬಹುದಾದ ವಿಮಾನ ದಾಳಿಯ ವಿರುದ್ಧ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ತುರ್ತು ಸಂದೇಶ ರವಾನಿಸಿದ್ದವು. ಆದ್ರೆ ಅದೇ ವರ್ಷದ ಜೂ.23 ರಂದು ಏರ್ ಇಂಡಿಯಾ ವಿಮಾನ (ಕಾನಿಷ್ಕಾ)ದಲ್ಲಿ ಸೂಟ್‌ಕೇಸ್ ಬಾಂಬ್ ಇರಿಸಲಾಗಿತ್ತು. ಟೊರೊಂಟೊದಿಂದ ಬ್ರಿಟನ್‌ನ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಹತ್ಯೆಗೀಡಾಗಿದ್ದ ಬಹುತೇಕ ಪ್ರಯಾಣಿಕರಲ್ಲಿ ಭಾರತೀಯ ಮೂಲದ ಕೆನಡಿಯನ್ನರು ಇದ್ದರು.

    ಆ ಸಂದರ್ಭದಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಸೂಟ್‌ಕೇಸ್‌ನಲ್ಲಿ ಬಾಂಬ್ ಇರಿಸಲಾಗಿತ್ತು. ಮಂಜಿತ್ ಸಿಂಗ್ ಎಂಬ ವ್ಯಕ್ತಿಯು ಏರ್ ಇಂಡಿಯಾ ಫ್ಲೈಟ್ 182ಗೆ ಸೂಟ್‌ಕೇಸ್ ಅನ್ನು ವರ್ಗಾಯಿಸಿದ್ದ. ಆದ್ರೆ ವಿಮಾನ ಟೇಕಾಫ್‌ ಆಗುವಾಗ ಆತ ವಿಮಾನ ಹತ್ತಿರಲಿಲ್ಲ. ಭೀಕರ ಬಾಂಬ್‌ ಸ್ಫೋಟದ ಬಳಿಕ ಖಲಿಸ್ತಾನಿ ಗುಂಪು ತಾವೇ ಮಾಡಿರುವುದಾಗಿ ದಾಳಿಯ ಹೊಣೆ ಹೊತ್ತುಕೊಂಡಿತ್ತು. ನಂತರ ತಲ್ವಿಂದರ್ ಸಿಂಗ್ ಪರ್ಮಾರ್ ಎಂಬಾತನನ್ನ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಹೆಸರಿಸಲಾಯಿತು. ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಕೆನಡಾ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಂದಿನ ಭಾರತದ ವಿದೇಶಾಂಗ ಸಚಿವರಾಗಿದ್ದ ಎಸ್‌.ಎಂ ಕೃಷ್ಣ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದರು. ಕೆನಡಾದ ಸರ್ಕಾರಿ ಏಜೆನ್ಸಿಗಳು ಸಿಖ್ ಉಗ್ರವಾದದ ಬೆದರಿಕೆಯ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಲು ವಿಫಲವಾಗಿವೆ. ಅಲ್ಲದೇ, ಕೆನಡಾದ ಗುಪ್ತಚರ ಇಲಾಖೆಯು ನಿರ್ಲಕ್ಷ್ಯ ವಹಿಸಿತ್ತು ಎಂದು ಸಂಸತ್ತಿನ ಗಮನಕ್ಕೆ ತಂದಿದ್ದರು.

    ಇದಾದ ಕೆಲ ದಿನಗಳಲ್ಲಿ ದಿ ವಾಷಿಂಗ್ಟನ್‌ ಪೋಸ್ಟ್‌ ವರದಿಯೊಂದನ್ನು ಪ್ರಕಟ ಮಾಡಿತ್ತು. ಕಾನಿಷ್ಕ ಬಾಂಬ್‌ ಸ್ಫೋಟದ ಬಗ್ಗೆ ಕೆನಡಾ ಗುಪ್ತಚರ ಸಂಸ್ಥೆ ಮಾಹಿತಿ ಹೊಂದಿತ್ತು ಎಂಬ ವರದಿಯನ್ನು ಪ್ರಕಟಿಸಿತ್ತು. ಆದ್ರೆ ಕೆನಡಾ ಈ ವರದಿಯನ್ನು ತಳ್ಳಿಹಾಕಿತು, ಉಗ್ರಗಾಮಿ ಗುಂಪಿನೊಳಗೆ ನುಸುಳಿದ್ದ ಏಜೆಂಟನನ್ನು ಬಿಟ್ಟುಕೊಡುವಲ್ಲಿ ಹಿಂದೇಟು ಹಾಕಿತ್ತು. ಆದ್ರೆ 2010ರಲ್ಲಿ ಪ್ರಕಟವಾದ ತನಿಖಾ ವರದಿಯೊಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (RCMP) ಮತ್ತು ಗೂಢಚಾರಿಕೆ ಸಂಸ್ಥೆ CSIS ನಡುವೆ ವಿವಾದವಿರುವುದನ್ನು ಸೂಚಿಸಿತ್ತು.

    ಆರೋಪಿ ಒಪ್ಪಿಸಲು ಟ್ರೂಡೋ ನಕಾರ

    ಪಂಜಾಬ್‌ನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೊಂದ ಆರೋಪದ ಮೇಲೆ 1984ರಲ್ಲಿ ಜೈಲಿನಿಂದ ಹೊರಬಂದ ನಂತರ ಮಾಸ್ಟರ್‌ಮೈಂಡ್ ತಲ್ವಿಂದರ್ ಸಿಂಗ್ ಪರ್ಮಾರ್ ಕೆನಡಾಕ್ಕೆ ಪರಾರಿಯಾಗಿದ್ದ. ಬಾಂಬ್‌ ದಾಳಿಯಲ್ಲಿ ಈತನ ಕೈವಾಡ ಇದೆ ಎಂದು ಭಾರತ ಪ್ರತಿಪಾದಿಸಿತ್ತು. ಅಲ್ಲದೇ ಭಾರತಕ್ಕೆ ಆತನನ್ನ ಹಸ್ತಾಂತರಿಸುವಂತೆ ಕೇಳಿತ್ತು. ಆದ್ರೆ ಈಗಿನ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ತಂದೆ ಪಿಯರೆ ಟ್ರೂಡೋ ಆತನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ನಂತರ ಕಾನಿಷ್ಕಾ ದಾಳಿಯ ಸೂತ್ರಧಾರಿಯಾಗಿದ್ದ ಪಾರ್ಮರ್‌ನನ್ನು 1992 ರಲ್ಲಿ ಪಂಜಾಬ್‌ನಲ್ಲಿ ಪೊಲೀಸರು ಹತ್ಯೆ ಮಾಡಿದರು. ಆದರೆ ಅದೇ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಹಲವು ಭಾಗಗಳಲ್ಲಿ ಪಾರ್ಮರ್‌ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಕಾನಿಷ್ಕಾ ಬಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದೀಗ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂಬ ನೇರ ಆರೋಪ ಮಾಡುತ್ತಿರುವುದು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

    ಕೆನಡಾದಲ್ಲಿರುವ ಸಿಖ್ಖರ ಸಂಖ್ಯೆ ಎಷ್ಟು?

    ಕೆನಡಾದಲ್ಲಿನ ಒಟ್ಟು ಜನಸಂಖ್ಯೆ 3.98 ಕೋಟಿ. ಅವರ ಪೈಕಿ 16.80 ಕೋಟಿ ಮಂದಿ ಭಾರತೀಯರಿದ್ದಾರೆ. 8 ಲಕ್ಷದಷ್ಟು ಜನ ಸಿಖ್‌ ಸಮುದಾಯದವರು ಇದ್ದಾರೆ. ಆದರೆ ಇಲ್ಲಿರುವ ಸಿಖ್ಖರಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳ ಪರವಾಗಿ ಇರುವವರು ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕೆನಡಾ ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ 4% ರಷ್ಟಿದೆ. ಇಲ್ಲಿನ ಒಟ್ಟು ಭಾರತೀಯರಲ್ಲಿ 13 ಲಕ್ಷ ಮಂದಿ ಕೆನಡಾ ಪೌರತ್ವ ಪಡೆದುಕೊಂಡಿದ್ದಾರೆ. 3.80 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ.

    ಯಾರು ಈ ಖಲಿಸ್ತಾನಿಗಳು?

    ಸಿಖ್ ಪ್ರತ್ಯೇಕತಾವಾದಿಗಳು ತಮ್ಮ ತಾಯ್ನಾಡು ಖಲಿಸ್ತಾನ್, ಅಂದರೆ ʻಶುದ್ಧರ ನಾಡುʼ ಅನ್ನು ಪಂಜಾಬ್‌ನಿಂದ ರಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಭಾರತವನ್ನು ಹಲವು ರಾಷ್ಟ್ರಗಳಾಗಿ ವಿಭಜಿಸುವುದೇ ಅವರ ಗುರಿ. 1970 ಮತ್ತು 1980ರ ದಶಕದ ಹಿಂಸಾತ್ಮಕ ದಂಗೆಯ ಸಮಯದಿಂದಲೂ ಬೇಡಿಕೆಯನ್ನು ಹಲವು ಬಾರಿ ಪುನರುಚ್ಚರಿಸಿದ್ದಾರೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ಹರಡುವಲ್ಲಿ ಖಲಿಸ್ತಾನಿ ನಾಯಕರು ಪ್ರಮುಖ ಸೂತ್ರಧಾರಿಗಳಾಗಿದ್ದಾರೆ.

    ಕೆಲ ತಿಂಗಳ ಹಿಂದೆ ಜಸ್ಟಿನ್‌ ಟ್ರುಡೋ ನಿಜ್ಜರ್‌ ಹತ್ಯೆಯಿಂದೆ ಭಾರತೀಯ ಸರ್ಕಾರಿ ಏಜೆಂಟರ ಕೈವಾಡ ಇರುವುದಾಗಿ ಆರೋಪಿಸಿದ್ದರು. ಆ ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಇದೀಗ ಕೆನಡಾ ರಾಜತಾಂತ್ರಿಕರನ್ನು ಗಡಿಪಾರು ಮಾಡಿದ್ದು ಮತ್ತೆ ವಿವಾದ ಮುನ್ನೆಲೆಗೆ ಬಂದಿದೆ.

  • ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

    ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

    – ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದ ಬೆನ್ನಲ್ಲೇ ಭಾರತದ ವಿರುದ್ಧ ಹೇಳಿಕೆ

    ಒಟ್ಟೋವಾ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತೀಯ ಸರ್ಕಾರಿ ಏಜೆಂಟ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೆನಡಾದ ರಾಯಲ್‌ ಕೆನಡಾದ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಗಂಭೀಕ ಆರೋಪ ಮಾಡಿದ್ದಾರೆ.

    ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆನೆ ಮತ್ತು ಅವರ ಡೆಪ್ಯೂಟಿ ಬ್ರಿಗಿಟ್ಟೆ ಗೌವಿನ್ ಈ ಆರೋಪ ಮಾಡಿದ್ದಾರೆ. ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ದೆಹಲಿಯ ಏಜೆಂಟ್‌ಗಳು ಭಾಗಿಯಾಗಿದ್ದಾರೆ ಎಂದು ಕಳೆದ ವರ್ಷವೂ ಆರೋಪ ಮಾಡಲಾಗಿತ್ತು.

    ಇದು (ಭಾರತ ಸರ್ಕಾರ) ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಆದರೆ ಅವರು ನಿರ್ದಿಷ್ಟವಾಗಿ ಕೆನಡಾದಲ್ಲಿ ಖಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ. RCMP ದೃಷ್ಟಿಕೋನದಿಂದ ನಾವು ನೋಡಿದ್ದು, ಅವರು ಸಂಘಟಿತ ಅಪರಾಧ ಅಂಶಗಳನ್ನು ಬಳಸುತ್ತಾರೆ ಎಂದು ಸಹಾಯಕ ಕಮಿಷನರ್ ಗೌವಿನ್ ಆರೋಪ ಮಾಡಿದ್ದಾರೆ.

    ಭಾರತ ಸರ್ಕಾರದ ಏಜೆಂಟರ ಮೇಲೆ ನರಹತ್ಯೆ, ಸುಲಿಗೆ, ಬೆದರಿಕೆ ಆರೋಪವಿದೆಯೇ ಎಂದು ಪ್ರಶ್ನೆ ಕೇಳಿದಾಗ, ಡುಹೆಮ್ “ಹೌದು” ಎಂದು ಉತ್ತರಿಸಿದ್ದಾರೆ.

  • ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದಲೇ ಹೊರ ಹಾಕಿದ ಭಾರತ

    ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದಲೇ ಹೊರ ಹಾಕಿದ ಭಾರತ

    ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Hardeep Singh Nijjar) ಹತ್ಯೆಯಲ್ಲಿ ಭಾರತೀಯ (India) ರಾಯಭಾರಿಯ ಪಾತ್ರವಿದೆ ಎಂದು ಕೆನಡಾ (Canada) ದೂರಿದ ಬೆನ್ನಲ್ಲೇ  ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನಡಾದ 6 ಮಂದಿ ರಾಜತಾಂತ್ರಿಕರನ್ನು ಭಾರತ ಹೊರ ಹಾಕಿದೆ.

    ಕೆನಡಾದಲ್ಲಿದ್ದ ಭಾರತೀಯ (India) ರಾಜತಾಂತ್ರಿಕ ಅಧಿಕಾರಿಗಳನ್ನು ಭಾರತ ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟವಾಗಿದೆ.

    ಕೆನಡಾದ ರಾಜತಾಂತ್ರಿಕರನ್ನು ಅಕ್ಟೋಬರ್ 19 ರಂದು ರಾತ್ರಿ 11:59 ರೊಳಗೆ ಅಥವಾ ಅದಕ್ಕಿಂತಲೂ ಮೊದಲು ಭಾರತವನ್ನು ತೊರೆಯುವಂತೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

     

    ಭಾರತದಿಂದ ಹೊರಹಾಕಿದ್ದು ಯಾಕೆ?
    ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್‌ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಈತನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ಬೆನ್ನಲ್ಲೇ ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಸೃಷ್ಟಿಯಾಗಿತ್ತು. ನಂತರ ಮಾತುಕತೆಯ ಮೂಲಕ ಎರಡು ದೇಶಗಳ ನಡುವಿನ ಬಿಕ್ಕಟ್ಟು ಬಗೆ ಹರಿದಿತ್ತು.

    ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಕೆನಡಾ ಭಾರತದ ಕೆಂಗಣ್ಣಿದೆ ಗುರಿಯಾಗಿದೆ. ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್‌ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ ಮತ್ತೆ ಕಿರಿಕ್‌ ಮಾಡಿದೆ.

    ಕೆನಡಾ ನಡೆಗೆ ಭಾರತ ಸರ್ಕಾರ ಸಿಟ್ಟಾಗಿದ್ದು ಒಟ್ಟಾವದಲ್ಲಿದ್ದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಷ್ಟೇ ಅಲ್ಲದೇ ಭಾರತೀಯ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ತನಿಖೆಯ ವ್ಯಾಪ್ತಿಗೆ ತರಬೇಕು ಎಂಬ ಕೆನಡಾ ಮನವಿಯನ್ನು ತಿರಸ್ಕರಿಸಿದೆ.

    ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರವಿಲ್ಲ. ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ಗಳಿಗೆ ಕೆನಡಾ ಆಶ್ರಯ ನೀಡಿದೆ. ಪ್ರತ್ಯೇಕತಾವಾದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಎಂದು ಹೇಳಿ ಭಾರತ ಕೆನಡಾಕ್ಕೆ ತಿರುಗೇಟು ನೀಡಿದೆ.

     

  • Canada | ಅಲ್ಪ ಮತಕ್ಕೆ ಕುಸಿದ ಜಸ್ಟಿನ್‌ ಟ್ರುಡೊ ಸರ್ಕಾರ

    Canada | ಅಲ್ಪ ಮತಕ್ಕೆ ಕುಸಿದ ಜಸ್ಟಿನ್‌ ಟ್ರುಡೊ ಸರ್ಕಾರ

    ಒಟ್ಟಾವಾ: ಭಾರತ (India) ವಿರೋಧ ನೀತಿ ಅನುಸರಿಸಿಕೊಂಡು ಖಲಿಸ್ತಾನಿ ಹೋರಾಟಗಳಿಗೆ (Khalistan Movement) ಪರೋಕ್ಷ ಬೆಂಬಲ ವ್ಯಕ್ತಪಡಿಸುತ್ತಿದ್ದ ಕೆನಡಾದ ಜಸ್ಟಿನ್ ಟ್ರುಡೊ (Justin Trudeau) ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ.

    ನ್ಯೂ ಡೆಮಾಕ್ರಟಿಕ್‌ ಪಕ್ಷದ ನಾಯಕ ಜಗ್‌ಮಿತ್‌ ಸಿಂಗ್‌ (Jagmeet Singh) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದು ಟ್ರುಡೋ ಸರ್ಕಾರ ಈಗ ಅಲ್ಪ ಮತಕ್ಕೆ ಕುಸಿದಿದೆ.

    ಸರ್ಕಾರ ಉಳಿಸಿಕೊಳ್ಳಬೇಕಾದರೆ ಟ್ರುಡೋ ಈಗ ಉಳಿದ ಸಣ್ಣ ಪಕ್ಷಗಳ ಬೆಂಬಲವನ್ನು ಪಡೆಯಬೇಕು. ಬೆಂಬಲ ಸಿಗದೇ ಇದ್ದರೆ ಸರ್ಕಾರ ಪತನವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

     

    ಜಸ್ಟಿನ್‌ ಟ್ರುಡೋ 2015ರಲ್ಲಿ ಅಧಿಕಾರ ಸ್ವೀಕರಿಸಿದ್ದರು. ಹಣದುಬ್ಬರ ನಿಯಂತ್ರಿಸಲು ಸರ್ಕಾರ ವಿಫಲವಾಗಿದ್ದರಿಂದ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಕಾರಣಕ್ಕೆ ಟ್ರುಡೋ ಸರ್ಕಾರದ ವಿರುದ್ಧ ಈಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಕ್ಕೆ ಬೆಂಬಲ ನೀಡಿದರೆ ಮುಂದಿನ ಚುನಾವಣೆಯಲ್ಲಿ ನಮಗೂ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಜಗ್‌ಮಿತ್‌ ಸಿಂಗ್‌ ಬೆಂಬಲ ವಾಪಸ್‌ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಈಗ ಚುನಾವಣೆ ನಡೆದರೆ ಟ್ರುಡೋ ಅವರಿಗೆ ಹೀನಾಯ ಸೋಲಾಗಬಹುದು ಎಂದು ಕೆನಾಡದ ಸಮೀಕ್ಷೆಗಳು ತಿಳಿಸಿವೆ. ಕೆನಡಾ ಸಂಸತ್ತಿನ ಅವಧಿ 2025ಕ್ಕೆ ಅಂತ್ಯವಾಗಲಿದ್ದು 2025ರ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

     

  • ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

    ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

    ಬೆಂಗಳೂರು: ವಿಜಯಪುರ (Vijayapura) ಜಿಲ್ಲೆಯಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೆನಡಾದ ಕೃಷಿ ಉತ್ಪನ್ನ ತಯಾರಿಕಾ ಪ್ರಮುಖ ಕಂಪನಿಯಾಗಿರುವ ವಿಟೆರಾ (Viterra Canada) 250 ಕೋಟಿ ರೂ. ಮೊತ್ತದ ಬಂಡವಾಳ ಹೂಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B.Patil) ತಿಳಿಸಿದ್ದಾರೆ.

    ವಿಟೆರಾ ಕಂಪನಿಯ ಪ್ರತಿನಿಧಿಗಳ ಜತೆ ಸಚಿವರು ಇಲ್ಲಿನ ಖನಿಜ ಭವನದಲ್ಲಿ ನಡೆಸಿದ ಸಭೆಯಲ್ಲಿ‌ ಈ ಬಂಡವಾಳ ಹೂಡಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    ವಿಜಯಪುರ ಜಿಲ್ಲೆಯ ಕೃಷಿ ಸಮುದಾಯದ ಬಳಕೆಗೆ ಅತ್ಯಾಧುನಿಕ ಶೈತ್ಯಾಗಾರಗಳನ್ನು ನಿರ್ಮಿಸಿ ರೈತರು ಸುಗ್ಗಿಯ ನಂತರ ಎದುರಿಸುವ ನಷ್ಟ ತಗ್ಗಿಸಲು ಮತ್ತು ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ದಕ್ಷತೆ ತರಲು ವಿಟೆರಾ ನೆರವಾಗಲಿದೆ. ವಿಟೆರಾ ಕಂಪನಿಯು ಸುಧಾರಿತ ಉತ್ಪಾದನಾ ತಂತ್ರಜ್ಞಾನ ಬಳಸಲಿದೆ. ರಾಜ್ಯದಲ್ಲಿ ಕೆನಡಾದ ಆಧುನಿಕ ಕೃಷಿ ತಂತ್ರಜ್ಞಾನ ಬಳಕೆ ಹಾಗೂ ಈ ಬಂಡವಾಳ ಹೂಡಿಕೆಯಿಂದ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಲಿದ್ದು, ಅದರಿಂದ ರಾಜ್ಯದ ಒಟ್ಟಾರೆ ಆರ್ಥಿಕತೆಗೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

    ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿ.ಕೆ.ಶಿವಕುಮಾರ್

  • ‌ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

    ‌ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

    ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ (Canada’s British Columbia) ಪ್ರಾಂತ್ಯದಲ್ಲಿ ಭಾರತೀಯ ಮೂಲದ 28 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಯುವಕನನ್ನು ಯುವರಾಜ್‌ ಗೋಯಲ್‌ ಎಂದು ಗುರುತಿಸಲಾಗಿದ್ದು, ಇವರು ಪಂಜಾಬ್‌ ಮೂದವರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸರ್ರೆಯ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23 ) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ ( 20 ) ಎಂದು ಗುರುತಿಸಲಾಗಿದೆ.

    ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯ ಸಂಬಂಧ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವರಾಜ್ ಗೋಯಲ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

    ಸಹೋದರಿ ಚಾರು ಸಿಂಘ್ಲಾ ಅವರು ಸರ್ರೆಯಲ್ಲಿನ ಕಾರ್ ಡೀಲರ್‌ಶಿಪ್‌ನಲ್ಲಿ ಗೋಯಲ್ ಕೆಲಸ ಮಾಡುತ್ತಿದ್ದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಸಹೋದರನನ್ನು ಯಾಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅವನು ಅಂತಹ ಯಾವುದೇ ಕೆಲಸಗಳಲ್ಲಿ ಭಾಗಿಯಾಗುವವನಲ್ಲ ಎಂದಿದ್ದಾರೆ.

    ಗೋಯಲ್ ಅವರ ಸೋದರ ಮಾವ ಬವಾನ್‌ದೀಪ್, ಯುವರಾಜ್‌ ಭಾರತದಲ್ಲಿ ವಾಸವಾಗಿರುವ ತನ್ನ ತಾಯಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು. ಅವನು ಎಂದಿನಂತೆ ಜಿಮ್‌ ಮುಗಿಸಿ, ಫೋನ್‌ನಲ್ಲಿ ಅಮ್ಮನ ಜೊತೆ ಮಾತಾಡಿಕೊಂಡು ಬಂದು ಮನೆ ಹತ್ತಿರ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆಯೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ತಿಳಿಸಿದ್ದಾರೆ.

    ಈ ಕೊಲೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆಗೆ ಇಳಿದಿದ್ದಾರೆ. ಅಲ್ಲದೇ ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

  • ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    – ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಸರಿಗಟ್ಟಿದ ಯುಎಸ್‌ ಆಟಗಾರ

    ಡಲ್ಲಾಸ್‌: ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ಕ್ರಿಕೆಟ್‌ ತಂಡ ಗೆಲುವಿನ ಶುಭಾರಂಭ ಕಂಡಿದೆ. ಆರನ್ ಜೋನ್ಸ್‌ (Aaron Jones) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ ಅಮೆರಿಕ ತಂಡವು ಕೆನಡಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಮೆರಿಕ ತಂಡದ (Cricket USA) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಇದು ಐತಿಹಾಸಿಕ ಗೆಲುವು ಸಹ ಆಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆನಡಾ (Canada) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 194 ರನ್‌ ಸಿಡಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ಯುಎಸ್‌ಎ ಕೇವಲ 17.4 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 197‌ ರನ್‌ ಸಿಡಿಸಿ ಗೆಲುವಿನ ಖಾತೆ ತೆರೆಯಿತು.

    ಚೇಸಿಂಗ್‌ ಆರಂಭಿಸಿದ ಯುಎಸ್‌ ತಂಡ 6.3 ಓವರ್‌ಗಳಲ್ಲಿ 42 ರನ್‌ ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಗೂಡಿದ ಆಂಡ್ರೀಸ್ ಗೌಸ್ ಹಾಗೂ ಆರನ್ ಜೋನ್ಸ್‌ ಜೋಡಿ 58 ಎಸೆತಗಳಲ್ಲಿ ಬರೋಬ್ಬರಿ 131 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಕೈತಪ್ಪಿದ ಶತಕ:
    ಆರಂಭಿಕ ಪಂದ್ಯದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿ ತಂಡದ ಗೆಲುವಿಗೆ ಕಾರಣವಾದ ಆರನ್ ಜೋನ್ಸ್‌ 40 ಎಸೆತಗಳಲ್ಲಿ ಸ್ಫೋಟಕ 96 ರನ್‌ (10 ಸಿಕ್ಸರ್‌, 4 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಇದರೊಂದಿಗೆ ಆಂಡ್ರೀಸ್ ಗೌಸ್ 46 ಎಸೆತಗಳಲ್ಲಿ 65 ರನ್‌ (3 ಸಿಕ್ಸರ್‌, 7 ಬೌಂಡರಿ), ಮೊನಾಂಕ್ ಪಟೇಲ್ 16 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕೆನಡಾ ತಂಡ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನೇ ನೀಡಿತ್ತು. ನವನೀತ್ ಧಲಿವಾಲ್44 ಎಸೆತಗಳಲ್ಲಿ 61 ರನ್‌ (3 ಸಿಕ್ಸರ್‌, 6 ಬೌಂಡರಿ), ನಿಕೋಲಸ್ ಕಿರ್ಟನ್ 51 ರನ್‌ (31 ಎಸೆತ, 3 ಬೌಂಡರಿ, 2 ಸಿಕ್ಸರ್‌) ಚಚ್ಚಿದರೆ, ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಸ್ಫೋಟಕ 32 ರನ್‌ ಸಿಡಿ ಮಿಂಚಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಉಡೀಸ್:‌
    ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆರನ್ ಜೋನ್ಸ್‌, ಕ್ರಿಸ್‌ಗೇಲ್‌ ಅವರ ಅಪರೂಪದ ಸಿಕ್ಸರ್‌ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲೇ 10 ಸಿಕ್ಸರ್‌ ಸಿಡಿಸುವ ಮೂಲಕ 2007ರಲ್ಲಿ ಈ ಸಾಧನೆ ಮಾಡಿದ ಗೇಲ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ:T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದವರ ಲಿಸ್ಟ್‌:
    * ಕ್ರಿಸ್‌ ಗೇಲ್‌ – 11 ಸಿಕ್ಸರ್‌ – 2016ರಲ್ಲಿ
    * ಕ್ರಿಸ್‌ ಗೇಲ್‌ – 10 ಸಿಕ್ಸರ್‌ – 2007ರಲ್ಲಿ
    * ಆರನ್‌ ಜೋಸ್‌ – 10 ಸಿಕ್ಸರ್‌ – 2024ರಲ್ಲಿ

  • ಭಾರತ ಮೂಲದ ಟ್ರಕ್ ಚಾಲಕನ ಗಡಿಪಾರಿಗೆ ಕೆನಡಾ ಆದೇಶ

    ಭಾರತ ಮೂಲದ ಟ್ರಕ್ ಚಾಲಕನ ಗಡಿಪಾರಿಗೆ ಕೆನಡಾ ಆದೇಶ

    ಒಟ್ಟಾವಾ: ಕೆನಡಾದಲ್ಲಿ 2018ರಲ್ಲಿ ಅಪಘಾತವೆಸಗಿ ಜೂನಿಯರ್ ಹಾಕಿ ತಂಡದ 16 ಸದಸ್ಯರ ಸಾವಿಗೆ ಕಾರಣವಾದ ಭಾರತ (India) ಮೂಲದ ಟ್ರಕ್ ಚಾಲಕನನ್ನು ಕೆನಡಾದಿಂದ (Canada) ಗಡಿಪಾರು ಮಾಡಲು ಆದೇಶಿಸಿಸಲಾಗಿದೆ.

    ಟ್ರಕ್ ಡ್ರೈವರ್ ಜಸ್ಕಿರತ್ ಸಿಂಗ್ ಸಿಧು (Jaskirat Singh Sidhu), ಅಜಾಗರೂಕತೆಯಿಂದ ಟ್ರಕ್ ಚಲಾಯಿಸಿ ಸಾಸ್ಕಾಚೆವಾನ್ ಪ್ರಾಂತ್ಯದ ಟಿಸ್‍ಡೇಲ್ ಬಳಿ ಹಂಬೋಲ್ಟ್ ಬ್ರಾಂಕೋಸ್ ಜೂನಿಯರ್ ಹಾಕಿ ತಂಡದ ಬಸ್ ಅಪಘಾತಕ್ಕೆ ಕಾರಣವಾಗಿದ್ದ. ಮಾರ್ಗದಲ್ಲಿ ಸ್ಟಾಪ್ ಸಿಗ್ನಲ್ ತೋರಿಸಿದರೂ ಜಸ್ಕಿರತ್ ಸಿಂಗ್ ಸಿಧು ಅದನ್ನು ಲೆಕ್ಕಿಸದೆ ಟ್ರಕ್ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ 16 ಜನ ಹಾಕಿ ಆಟಗಾರರು ಸಾವಿಗೀಡಾಗಿದ್ದರು. ಅಲ್ಲದೇ 13 ಜನ ಗಾಯಗೊಂಡಿದ್ದರು. ಇದನ್ನೂ ಓದಿ: ವರ್ಷದ ಹಿಂದೆ ಮೋದಿ ತಂಗಿದ್ದ ಮೈಸೂರು ಹೋಟೆಲ್ ಬಿಲ್ 80 ಲಕ್ಷ ಬಾಕಿ!

    ಈ ಪ್ರಕರಣದ ವಿಚಾರಣೆಯನ್ನು ಕ್ಯಾಲ್ಗರಿಯ ವಲಸೆ ಮತ್ತು ನಿರಾಶ್ರಿತರ ಮಂಡಳಿ ನಡೆಸಿದ್ದು ಗಡಿಪಾರು ನಿರ್ಧಾರ ಪ್ರಕಟಿಸಿದೆ. ಸಿಧು ಕೆನಡಾದ ಪ್ರಜೆಯಲ್ಲ ಮತ್ತು ಆತ ಗಂಭೀರ ಅಪರಾಧ ಎಸಗಿದ್ದಾನೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೇ ಮೃತಪಟ್ಟವರ ಕುಟುಂಬದವರು ಸಿಧು ಗಡಿಪಾರಿಗೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಗಡಿಪಾರಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಈ ಪ್ರಕರಣದಲ್ಲಿ ಇನ್ನೂ ಹಲವಾರು ಕಾನೂನು ಪ್ರಕ್ರಿಯೆಗಳು ಬರಲಿವೆ. ಗಡಿಪಾರು ಪ್ರಕ್ರಿಯೆಯು ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಸಿಧು ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಪಾಯಕಾರಿ ಚಾಲನೆಗಾಗಿ ಸಿಧು ಈಗಾಗಲೇ 8 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾನೆ. ಬಳಿಕ ಆತನಿಗೆ ಪೆರೋಲ್ ನೀಡಲಾಗಿತ್ತು. ಇದನ್ನೂ ಓದಿ: ಚನ್ನಗಿರಿ ಪ್ರಕರಣ ಲಾಕಪ್ ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿದ್ದರಾಮಯ್ಯ