Tag: canada

  • ಕೆನಡಾ ಚುನಾವಣೆ| ಮೋದಿಯನ್ನು ಭೇಟಿಯಾಗಿದ್ದಕ್ಕೆ ಚಂದ್ರ ಆರ್ಯಗೆ ಟಿಕೆಟ್‌ ಮಿಸ್‌

    ಕೆನಡಾ ಚುನಾವಣೆ| ಮೋದಿಯನ್ನು ಭೇಟಿಯಾಗಿದ್ದಕ್ಕೆ ಚಂದ್ರ ಆರ್ಯಗೆ ಟಿಕೆಟ್‌ ಮಿಸ್‌

    ಒಟ್ಟಾವಾ: ಕೆನಡಾದಲ್ಲಿ(Canada Election) ಅಧಿಕಾರದಲ್ಲಿರುವ ಲಿಬರಲ್ ಪಾರ್ಟಿ ಭಾರತದ (India) ಮೇಲೆ ದ್ವೇಷ ಮುಂದುವರಿಸಿದೆ. ಖಲಿಸ್ತಾನಿಗಳ (Khalistan) ವಿರುದ್ಧ ಕಠಿಣ ನಿಲುವು ತಾಳಿದ್ದ ತುಮಕೂರು ಮೂಲದ ಸಂಸದ ಚಂದ್ರ ಆರ್ಯಗೆ (Chandra Arya) ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಲು ನಿರಾಕರಿಸಿದೆ. ಇದನ್ನೂ ಓದಿ: ಓಲಾ, ಊಬರ್ ಕ್ಯಾಬ್‍ಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್ – ಸಹಕಾರ್ ಟ್ಯಾಕ್ಸಿ ಲೋಕಾರ್ಪಣೆಗೆ ಸಿದ್ಧತೆ

     

    ಕಳೆದ ವರ್ಷ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಮಾಡಿದ್ದ ಬಗ್ಗೆ ಸರ್ಕಾರಕ್ಕೆ ಚಂದ್ರ ಆರ್ಯ ಮಾಹಿತಿ ನೀಡಿಲ್ಲ ಎಂಬ ನೆಪ ಹೇಳಿ ಟಿಕೆಟ್ ಕೊಟ್ಟಿಲ್ಲ. ಕೆನಡಾ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದೆಗೆಟ್ಟ ಕಾರಣವನ್ನೂ ನೀಡಲಾಗಿದೆ. ಇದನ್ನೂ ಓದಿ : ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ತಮ್ಮ ಮೇಲೆ ಭಾರತ ಸರ್ಕಾರದ ಪ್ರಭಾವವಿದೆ ಎಂಬ ಆರೋಪಗಳನ್ನು ಚಂದ್ರ ಆರ್ಯ ತಿರಸ್ಕರಿಸಿದ್ದಾರೆ. ಏಪ್ರಿಲ್ 28ಕ್ಕೆ ಕೆನಡಾ ಸಂಸತ್ ಚುನಾವಣೆ ನಡೆಯಲಿದೆ.

     

  • ಕೆನಡಾ ಅಮೆರಿಕದ ಭಾಗವಾಗಲ್ಲ – ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ಮಾರ್ಕ್‌ ಕಾರ್ನಿ ಘೋಷಣೆ

    ಕೆನಡಾ ಅಮೆರಿಕದ ಭಾಗವಾಗಲ್ಲ – ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ಮಾರ್ಕ್‌ ಕಾರ್ನಿ ಘೋಷಣೆ

    ಒಟ್ಟಾವಾ: ಕೆನಡಾದ 24ನೇ ಪ್ರಧಾನ ಮಂತ್ರಿಯಾಗಿ ಮಾರ್ಕ್ ಕಾರ್ನಿ (Mark Carney) ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಟ್ರಂಪ್‌ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಆಕಾರದಲ್ಲಾಗಲಿ, ರೂಪದಲ್ಲಾಗಲಿ ಕೆನಡಾ (Canada), ಅಮೆರಿಕದ ಭಾಗವಾಗುವುದಿಲ್ಲ ಎಂದರಲ್ಲದೇ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಸುಂಕ ವಿಧಿಸುವ ಕ್ರಮವನ್ನು ಎದುರಿಸುವುದೇ ನಮ್ಮ ಪ್ರಮುಖ ಆದ್ಯತೆ ಎಂದು ಗುಡುಗಿದ್ದಾರೆ.

    ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾರ್ಕ್‌ ಕಾರ್ನಿ, ಕೆನಡಾ ಆಕಾರ – ಗಾತ್ರದಲ್ಲಿ, ಯಾವುದೇ ರೀತಿಯಲ್ಲಾಗಲಿ ಅಮೆರಿಕದ ಭಾಗವಾಗುವುದಿಲ್ಲ. ಆದ್ರೆ ನಮ್ಮ ಸರ್ಕಾರ ಎರಡೂ ದೇಶದ ಹಿತಾಸಕ್ತಿಯನ್ನು ಹೆಚ್ಚಿಸಲು ವಾಷಿಂಗ್ಟನ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡಬಹುದು ಭರವಸೆ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನು ಮುಂದೆ ಕಸಕ್ಕೂ ಸರ್ವಿಸ್‌ ಚಾರ್ಜ್‌ – ಏ.1 ರಿಂದ ಜಾರಿ

    ಇದೇ ವೇಳೆ ಟ್ರಂಪ್‌ ಅವರನ್ನು ಭೇಟಿಯಾಗುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೆನಡಾ ಅನುಭವಿ ಕ್ಯಾಬಿನೆಟ್‌ ಹೊಂದಿದ್ದು, ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಭವಿಷ್ಯವನ್ನು ರಕ್ಷಿಸುತ್ತಾ, ನಮ್ಮ ಆರ್ಥಿಕತೆಯನ್ನು ಸುರಕ್ಷಿತಗೊಳಿಸುತ್ತದೆ. ಕೆನಡಾದ ಸಾರ್ವಭೌಮತ್ವಕ್ಕೆ ಗೌರವ ಕೊಡುವುದಾದರೇ ಟ್ರಂಪ್‌ ಅವರನ್ನು ಭೇಟಿಯಾಗಲು ಒಪ್ಪುತ್ತೇನೆ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಮನೆಯಿಂದ ಹೊರಗೆ ಬರಬೇಡಿ: ದಿನೇಶ್ ಗುಂಡೂರಾವ್

    ಕಳೆದ ಜನವರಿಯಲ್ಲಿ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ಒಟ್ಟಾವ ಗಡಿಯಾಚೆಗಿನ ಸಂಬಂಧಗಳು ಕುಸಿದಿವೆ. ಅಲ್ಲದೇ ಕೆನಡಾವನ್ನು 51ನೇ ರಾಜ್ಯವಾಗಿ ಮಾಡಿಕೊಳ್ಳುವ ಚಿಂತನೆ ಹಾಗೂ ಕೆನಡಾ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ಟ್ರಂಪ್‌ ಅವರ ನಿರ್ಧಾರಗಳು ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸುವಂತೆ ಮಾಡಿದೆ. ‌ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ವಕ್ಫ್‌ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ – ಅಧ್ಯಕ್ಷರಾಗಿ ಸೈಯದ್ ಹುಸೈನಿ ಆಯ್ಕೆ

  • ಕೆನಡಾ ನೂತನ ಪ್ರಧಾನಿಯಾಗಿ ಕಾರ್ನಿ ಪ್ರಮಾಣ ವಚನ ಸ್ವೀಕಾರ

    ಕೆನಡಾ ನೂತನ ಪ್ರಧಾನಿಯಾಗಿ ಕಾರ್ನಿ ಪ್ರಮಾಣ ವಚನ ಸ್ವೀಕಾರ

    ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ (Mark Carney) ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

    ಈ ಮೊದಲು ಮಾರ್ಕ್ ಕಾರ್ನಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷರಾಗಿದ್ದರು. ಜನವರಿಯಲ್ಲಿ ಜಸ್ಟಿನ್ ಟ್ರುಡೋ ರಾಜೀನಾಮೆ ನೀಡಿದ್ದ ಹಿನ್ನೆಲೆ ಇತ್ತೀಚಿಗಷ್ಟೆ ಕಾರ್ನಿ ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇದೀಗ ಕೆನಡಾದ 24ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ

    ಈ ಕುರಿತು ಮಾತನಾಡಿರುವ ಕಾರ್ನಿ, ತಮ್ಮ ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದು, ಕೆನಡಿಯನ್ನರ ನಿರೀಕ್ಷೆ ಪೂರ್ಣಗೊಳಿಸಲಿದ್ದೇವೆ. ವೇಗವಾಗಿ ಚಲಿಸುವ, ನಮ್ಮ ಆರ್ಥಿಕತೆಯನ್ನು ಸುರಕ್ಷಿತಗೊಳಿಸುವ ಮತ್ತು ಕೆನಡಾದ ಭವಿಷ್ಯವನ್ನು ರಕ್ಷಿಸುವ ಅನುಭವಿ ಸಚಿವ ಸಂಪುಟ ನಮ್ಮದು ಎಂದಿದ್ದಾರೆ.

    2013ರಲ್ಲಿ ಲಿಬರಲ್ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದ ಜಸ್ಟಿನ್ ಟ್ರುಡೋ, 2025ರ ಜನವರಿ 6 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.ಇದನ್ನೂ ಓದಿ: ರೈತ ಮುಖಂಡ ರಾಕೇಶ್ ಟಿಕಾಯತ್ ಕಾರು ಅಪಘಾತ – ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ಬಚಾವ್‌

     

  • ಲ್ಯಾಂಡಿಂಗ್‌ ವೇಳೆ ರನ್‌ ವೇಯಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ!

    ಲ್ಯಾಂಡಿಂಗ್‌ ವೇಳೆ ರನ್‌ ವೇಯಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ!

    ಟೊರೊಂಟೋ: ಲ್ಯಾಂಡ್‌ ಆಗಿ ರನ್‌ ವೇಯಲ್ಲಿ ಸಾಗುವಾಗ ವಿಮಾನ ಪಲ್ಟಿಯಾಗಿ ಹೊತ್ತಿ ಉರಿದ (Plane Crash) ಘಟನೆ ಕೆನಡಾದ (Canada) ರಾಜಧಾನಿ ಟೊರೊಂಟೋದಲ್ಲಿ (Toronto) ನಡೆದಿದೆ.

    80 ಜನರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್‌ ಆಗಿ ರನ್‌ವೇಯಲ್ಲಿ ಮುಂದಕ್ಕೆ ಬರುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಮಾನ ದುರಂತದಲ್ಲಿ ಕನಿಷ್ಠ 18 ಜನರಿಗೆ ಗಾಯಗಳಾಗಿವೆ. ಇದರಲ್ಲಿ ಒಂದು ಮಗು ಸೇರಿದಂತೆ, ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್‌ ಗರಂ

    76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಮಾನ ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಿಂದ ಕೆನಡಾದ ಅತಿದೊಡ್ಡ ಮಹಾನಗರ ಟೊರೊಂಟೊಕ್ಕೆ ಬಂದಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

    ವಿಮಾನ ಪಲ್ಟಿಯಾಗುತ್ತಿದ್ದಂತೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಗಾಯಗಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಬಳಿಕ ವಿಮಾನ ನಿಲ್ದಾಣದಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ಉತ್ತರ ಅಮೆರಿಕದಲ್ಲಿ ವಾಷಿಂಗ್ಟನ್‌ನಲ್ಲಿ ಯುಎಸ್ ಸೇನಾ ಹೆಲಿಕಾಪ್ಟರ್ ಮತ್ತು ಪ್ಯಾಸೆಂಜರ್ ಜೆಟ್ ನಡುವೆ ಆಕಾಶದಲ್ಲಿ ಡಿಕ್ಕಿ ಸಂಭವಿಸಿ 67 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

  • ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ನೀರಿಕ್ಷೆಯಂತೆ ಕೆನಡಾ, ಮೆಕ್ಸಿಕೊ ಹಾಗೂ ಚೀನಾ ದೇಶಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಕೆನಡಾ ಹಾಗೂ ಮೇಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತಲಾ ಶೇ.25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ.10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ಆದೇಶ ಹೊರಡಿಸಿದ್ದರು. ಇಂದಿನಿಂದ (ಫೆ.4) ಈ ಪರಿಷ್ಕೃತ ಸುಂಕವು ಆಯಾ ದೇಶಗಳ ಮೇಲೆ ಜಾರಿಯಾಗಬೇಕಿತ್ತು. ಆದರೆ ದಿಢೀರ್‌ ಈ ನಿರ್ಧಾರದಲ್ಲಿ ಟ್ರಂಪ್‌ ಬದಲಾವಣೆ ಮಾಡಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.

    ಅಮೆರಿಕ ಸ್ವಹಿತಾಸಕ್ತಿಯ ಜೊತೆಗೆ ಸಹಕಾರ, ನೆರವಿನ ತತ್ವಗಳನ್ನು ಈವರೆಗೆ ಪಾಲಿಸಿಕೊಂಡು ಬಂದಿತ್ತು. ಆದ್ದರಿಂದಲೇ ವಿಶ್ವದ ಹಿರಿಯಣ್ಣ ಎಂಬ ಗೌರವ ಬಂದಿತ್ತು. ಇದೀಗ ʻಅಮೆರಿಕ ಫಸ್ಟ್‌ʼ ಹೆಸರಿನಲ್ಲಿ ಅವೆಲ್ಲಾ ವಿಚಾರಗಳನ್ನು ಗಾಳಿಗೆ ತೂರಿದೆ. ಇದರ ಪ್ರಭಾವ ದೇಶ-ವಿದೇಶಗಳ ಮೇಲೆ ಉಂಟಾಗಲಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಅಮೆರಿಕದ ಏಜೆನ್ಸಿ USAID ಇನ್ಮುಂದೆ ಈಜಿಪ್ಟ್‌ ಹಾಗೂ ಇಸ್ರೇಲ್‌ ಹೊರತುಪಡಿಸಿ ಉಳಿದ ಯಾವುದೇ ದೇಶಗಳಿಗೂ ಸಹಾಯ ನೀಡುವುದಿಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಟ್ರಂಪ್‌ ಅವರ ತೆರಿಗೆ ನೀತಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಲಾಹಲ ಎಬ್ಬಿಸಿದೆ.

    ʻಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆʼಯ ಅನ್ವಯ ಟ್ರಂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ರಾಷ್ಟ್ರದ ಹಿತ ಕಾಪಾಡಲು ಸುಂಕವು ಅತ್ಯಂತ ಶಕ್ತಿಯುತ ಮಾಧ್ಯಮವಾಗಿದೆ. ಅಕ್ರಮ ವಲಸಿಗರು ಮತ್ತು ಮಾದಕವಸ್ತುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕವನ್ನು ಪ್ರವೇಶಿಸದಂತೆ ತಡೆಯಲು ಈ ಆದೇಶ ಹೊರಡಿಸಲಾಗಿದೆ ಎಂದು ಶ್ವೇತ ಭವನ ಹೇಳಿದೆ.

    ವ್ಯಾಪಾರ ಪ್ರಮಾಣವು ಚೀನಾದಿಂದ 32.2%, ಕೆನಡಾದಿಂದ 14%, ಮೆಕ್ಸಿಕೊದಿಂದ 9% ಇದ್ದರೆ ಭಾರತದಿಂದ 3.2% ಇದೆ. ಹೀಗಾಗಿ ಅಮೆರಿಕದ ಈ ಕ್ರಮವನ್ನು ಮೂರೂ ದೇಶಗಳೂ ಖಂಡಿಸಿವೆ. ಇದಕ್ಕೆ ಪ್ರತೀಕಾರವಾಗಿ ಕ್ರಮ ಕೈಗೊಳ್ಳುವುದಾಗಿ ಈ ದೇಶಗಳು ಹೇಳಿವೆ. ಅದರಂತೆ, 106.6 ಬಿಲಿಯನ್ ಡಾಲರ್‌ನಷ್ಟು (ಸುಮಾರು 9.24 ಲಕ್ಷ ಕೋಟಿ ರೂ.) ಮೊತ್ತದ ಅಮೆರಿಕದ ವಸ್ತುಗಳ ಮೇಲೆ ಕೆನಡಾವು ಶೇ.25ರಷ್ಟು ಆಮದು ಸುಂಕ (ರಿವರ್ಸ್‌ ಟ್ಯಾಕ್ಸ್‌) ವಿಧಿಸಲು ನಿರ್ಧರಿಸಿದೆ. ಮೆಕ್ಸಿಕೊ ಕೂಡ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೆ, ಚೀನಾ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವುದಾಗಿ ಹೇಳಿದೆ. ಅಲ್ಲದೇ ತನ್ನ ಹಕ್ಕು ಮತ್ತು ಹಿತಾಸಕ್ತಿಯನ್ನು ದೃಢವಾಗಿ ಕಾಪಾಡಿಕೊಳ್ಳಲು ಪ್ರತಿಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದೆ.

    ಈ ಮೂರು ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತಿದ್ದ ಕಡಿಮೆ ಬೆಲೆಯ ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನೂ ಟ್ರಂಪ್ ಅವರು ರದ್ದು ಮಾಡಿದ್ದಾರೆ. ಆದರೆ, ಅಮೆರಿಕಕ್ಕೆ ಕೆನಡಾದಿಂದ ಬರುತ್ತಿರುವ ವಿದ್ಯುತ್‌ ಸಂಪನ್ಮೂಲ ಮತ್ತು ತೈಲಗಳ ಮೇಲಿನ ಸುಂಕದಲ್ಲಿ ಮಾತ್ರ ಯಾವುದೇ ಏರಿಕೆಯನ್ನು ಅಲ್ಲಿನ ಸರ್ಕಾರ ಘೋಷಿಸಿಲ್ಲ. ಆದ್ರೆ ಈ ವಾರದಲ್ಲಿ ಯುರೋಪಿಯನ್ ಯೂನಿಯನ್‌ನ ದೇಶಗಳ ಮೇಲೆಯೂ ಸುಂಕ ವಿಧಿಸುತ್ತೇನೆ ಎಂದು ಟ್ರಂಪ್‌ ಅವರು ಹೇಳಿದ್ದಾರೆ. ವಿವಿಧ ದೇಶಗಳ ಆಮದು ಸರಕುಗಳ ಮೇಲೆ ಸುಂಕ ಹೆಚ್ಚಿಸುವ ನಿರ್ಧಾರದ ಕುರಿತು ಜಪಾನ್‌ನ ಹಣಕಾಸು ಸಚಿವ ಕಾಟುನೊಬೊ ಕಾಟು, ʻಅಮೆರಿಕದ ಇಂಥ ಕ್ರಮಗಳಿಂದ ವಿಶ್ವದ ಆರ್ಥಿಕತೆಯ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದರ ಕುರಿತು ನಮಗೆ ತೀವ್ರ ಕಳವಳವಿದೆ’ ಎಂದಿದ್ದಾರೆ.

    ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಇಡೀ ವಿಶ್ವಕ್ಕೆ ಚೀನಾದ ರಫ್ತಿನ ಪ್ರಮಾಣ 12% ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಚೀನಾದ ಕರೆನ್ಸಿ ಮೌಲ್ಯವೂ ಕುಸಿಯುತ್ತಿದೆ. ಅಮೆರಿಕದ ಒಂದು ಡಾಲರ್‌ ಬೆಲೆ 7.20 ಯುವಾನ್‌ ಇದೆ. ಜೊತೆಗೆ ಅನೇಕ ಸರಕುಗಳ ಬೆಲೆ ಇಳಿಕೆಯಾಗಿದೆ. ಇದು ಅಮೆರಿಕ ತೆರಿಗೆ ಹೆಚ್ಚಳ ಮಾಡಲು ಒಂದು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

    ಅಮೆರಿಕದ ಮೇಲೆ ಏನು ಪರಿಣಾಮ?

    ಅಮೆರಿಕದಲ್ಲಿ ಉದ್ಯೋಗ ನಷ್ಟ
    ಸುಂಕ ವಿಧಿಸಲು ನಮಗೆ ಇಷ್ಟವಿಲ್ಲ. ಆದರೆ ಹೀಗೆ ಮಾಡದೆ ಬೇರೆ ವಿಧಿಯಿಲ್ಲ. ಈ ನಿರ್ಧಾರವು ಕೆನಡಾ ಜನರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ನಿಜ. ಇದಕ್ಕೂ ಮಿಗಿಲಾಗಿ ಇದರಿಂದ ಅಮೆರಿಕ ಜನರ ಮೇಲೆಯೇ ಹೆಚ್ಚು ಪರಿಣಾಮ ಉಂಟಾಗಲಿದೆ. ಅಮೆರಿಕದ ವಾಹನ ಜೋಡಣಾ ಘಟಕಗಳು ಹಾಗೂ ತಯಾರಿಕಾ ಘಟಕಗಳು ಮುಚ್ಚುವ ಸಾಧ್ಯತೆಗಳಿದ್ದು, ಇದರಿಂದ ಉದ್ಯೋಗ ನಷ್ಟ ಸಂಭವಿಸಲಿದೆ ಎಂದು ಕೆನಡಾ ಪ್ರಧಾನಿ ಜಸ್ಟೀನ್‌ ಟ್ರಡೊ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಈಗ ಮೆಕ್ಸಿಕೊ ಮತ್ತು ಅಮೆರಿಕದ ಮಧ್ಯೆಯೇ ಮಧ್ಯೆಯೇ ವ್ಯಾಪಾರ ಯುದ್ಧ ಆರಂಭಿಸಿದ್ದೇವೆ. ಇದರಿಂದ ಉತ್ತರ ಅಮೆರಿಕ ಭಾಗಕ್ಕೆ ವಸ್ತುಗಳ ಪೂರೈಕೆ ಕಡಿತವಾಗಬಹುದು ಎಂದು ಹೇಳಿದ್ದಾರೆ.

    ಅಮೆರಿಕಕ್ಕೆ ಕಾದಿದೆ ಸಂಕಷ್ಟ’
    ಕೆನಡಾ, ಮೆಕ್ಸಿಕೊ ಮತ್ತು ಚೀನಾ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕವು ಆಮದು ಮಾಡಿಕೊಳ್ಳುತ್ತದೆ. ಈಗ ಈ ದೇಶಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಕೆನಡಾ ಈಗಾಗಲೇ ಅಮೆರಿಕ ಮೇಲೆ ಆಮದು ಸುಂಕ ವಿಧಿಸಲು ಮುಂದಾಗಿದೆ. ಇದರಿಂದ ಅಮೆರಿಕಕ್ಕೆ ಹೆಚ್ಚಿನ ನಷ್ಟವಾಗಲಿದೆ. ಒಂದು ವೇಳೆ ಚೀನಾ ಹಾಗೂ ಮೆಕ್ಸಿಕೊ ದೇಶಗಳೂ ಕೆನಡಾ ದಾರಿಯನ್ನೇ ಹಿಡಿದರೆ ಅಮೆರಿಕಕ್ಕೆ ಸಂಕಷ್ಟ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.

    ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕವು ಶೇ 0.7ರಷ್ಟು ಹಣದುಬ್ಬರ ಎದುರಿಸಲಿದೆ. ಜನರು ಖರ್ಚು ಕಡಿಮೆ ಮಾಡಲಿದ್ದಾರೆ ಮತ್ತು ಹೂಡಿಕೆ ಪ್ರಮಾಣ ಕುಸಿಯಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ವ್ಯಾಪಾರ ನೀತಿಗಳಲ್ಲಿನ ಇಂಥ ಅನಿಶ್ಚಿತತೆಯು ಮಾರುಕಟ್ಟೆಯಲ್ಲಿ ನಿರಂತರ ಬದಲಾವಣೆಗಳನ್ನು ತಂದೊಡ್ಡಲಿದೆ. ಇಂಥ ಪರಿಸ್ಥಿತಿಯು ಖಾಸಗಿ ವಲಯಕ್ಕೆ ತೀವ್ರ ಪೆಟ್ಟು ನೀಡಲಿದೆ. ಟ್ರಂಪ್ ಅವರು ತಮ್ಮ ಪ್ರಚಾರದುದ್ದಕ್ಕೂ ವ್ಯಾಪರ ಸ್ನೇಹಿ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಟ್ರಂಪ್‌ ಅವರ ಈ ಕ್ರಮಗಳು ವ್ಯಾಪಾರ ಸ್ನೇಹಿಯಾಗಿಲ್ಲ ಎಂದಿದ್ದಾರೆ.

  • ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗನ ನಾಮಪತ್ರ – ಭಾಷಣದ ಕೊನೆಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದ ಚಂದ್ರ ಆರ್ಯ

    ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗನ ನಾಮಪತ್ರ – ಭಾಷಣದ ಕೊನೆಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದ ಚಂದ್ರ ಆರ್ಯ

    ಒಟ್ಟಾವಾ: ಕೆನಡಾದ (Canadaa) ಪ್ರಧಾನಿ ಹುದ್ದೆಗೆ ಕರ್ನಾಟಕ ಮೂಲದ ಚಂದ್ರ ಆರ್ಯ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಲಿಬರಲ್ ಪಕ್ಷದಿಂದ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ ಬಳಿಕ ಕನ್ನಡದಲ್ಲಿ (Kannada) ಮಾತನಾಡಿ ಚಂದ್ರ ಆರ್ಯ (Indian-origin MP Chandra Arya) ಗಮನ ಸೆಳೆದಿದ್ದಾರೆ.

    ಸದನವನ್ನು ಉದ್ದೇಶಿಸಿ ಆರ್ಯ ಅವರು ತಮ್ಮ ಪರಂಪರೆಯ ಬಗ್ಗೆ ಅಪಾರ ಹೆಮ್ಮೆಯಿಂದ ಮಾತನಾಡಿದರು. ಕರ್ನಾಟಕದ (Karnataka) ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಲು ಗ್ರಾಮದ ವ್ಯಕ್ತಿಯೊಬ್ಬರು ಕೆನಡಾದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈಗ ಈ ಗೌರವಾನ್ವಿತ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದರು.

    ಭಾಷಣದ ಕೊನೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಹಾಗೂ ನಟ ಡಾ.ರಾಜ್‌ಕುಮಾರ್ ಅವರು ಹಾಡಿದ್ದ ಪ್ರಸಿದ್ಧ ಹಾಡಿನ ಸಾಲನ್ನು ಹೇಳಿದರು. ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹೇಳಿ ತಮ್ಮ ಮಾತಿಗೆ ಪೂರ್ಣ ವಿರಾಮ ಹಾಕಿದರು. ಈ ಹಿಂದೆ ಸಂಸದರಾಗಿ ಆಯ್ಕೆಯಾದ ವೇಳೆಯೂ ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದರು.

    ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

    ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಹಿತದೃಷ್ಟಿಯಿಂದ, ನಾವು ಸಂಪೂರ್ಣವಾಗಿ ಅಗತ್ಯವಾದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಲಿಬರಲ್ ಪಕ್ಷದ ಮುಂದಿನ ನಾಯಕರಾಗಿ ಆಯ್ಕೆಯಾದರೆ, ನನ್ನ ಜ್ಞಾನ ಮತ್ತು ಪರಿಣತಿಯ ಮೇಲೆ ಉತ್ತಮ ಆಡಳಿತ ನೀಡುತ್ತೇನೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಆರ್ಯ ಅವರು 2015 ರಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದರು ಮತ್ತು 2019 ರಲ್ಲಿ ಮರು ಆಯ್ಕೆಯಾದರು. 2022 ರಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. ಹಿಂದೂ ಕೆನಡಿಯನ್ನರ ಪರವಾಗಿ ವಾದಿಸುವ ವಕೀಲರಾಗಿ, ಆರ್ಯ ಆಗಾಗ ದೃಢವಾದ ನಿಲುವುಗಳನ್ನು ತೆಗೆದುಕೊಂಡಿದ್ದಾರೆ.

     

    2024 ರಲ್ಲಿ ಸಂಸತ್ತಿನ ಹೊರಗೆ ‘ಓಂ’ ಚಿಹ್ನೆಯನ್ನು ಹೊಂದಿರುವ ಕೇಸರಿ ಧ್ವಜವನ್ನು ಹಾರಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಹಿಂದೂ ಸಮುದಾಯ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಅವರು ಈ ಸಂದರ್ಭವನ್ನು ಬಳಸಿಕೊಂಡಿದ್ದರು.

    ತುಮಕೂರು ಮೂಲದ ಆರ್ಯ ಅವರು, ಧಾರವಾಡದಲ್ಲಿರುವ ಕೌಸಾಲಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು 20 ವರ್ಷಗಳ ಹಿಂದೆ ಒಟ್ಟಾವಾಕ್ಕೆ ತೆರಳಿದ್ದರು. ರಾಜಕೀಯ ಪ್ರವೇಶಿಸುವ ಮೊದಲು ಎಂಜಿನಿಯರ್, ಹೂಡಿಕೆ ಸಲಹೆಗಾರ ಮತ್ತು ಉದ್ಯಮಿಯಾಗಿ ಕೆಲಸ ಮಾಡಿದ್ದರು.

  • ಕೆನಡಾ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ – ಭಾರತದ ಇಂಪ್ಯಾಕ್ಟ್ ಏನು?

    ಕೆನಡಾ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ – ಭಾರತದ ಇಂಪ್ಯಾಕ್ಟ್ ಏನು?

    – ಕೆನಡಾ ಪ್ರಧಾನಿ ರೇಸ್‌ನಲ್ಲಿ ಮೂವರು ಭಾರತೀಯರು!

    ಕುಸಿತ ಕಂಡ ಜನಪ್ರಿಯತೆ, ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಹಳಸಿದ ಭಾರತ ಜೊತೆಗಿನ ಸಂಬಂಧ, ಕೆನಡಾ ಬಗೆಗಿನ ಅಮೆರಿಕ ನಿಲುವು… ಹೀಗೆ ಅನೇಕ ಕಾರಣಗಳು ಕೆನಡಾ ಪ್ರಧಾನಿ ಹುದ್ದಗೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡುವಂತಹ ಮಾತುಗಳನ್ನಾಡಿಸಿವೆ. ದೇಶದ ಉನ್ನತ ಹುದ್ದೆಯನ್ನು ತೊರೆಯುತ್ತೇನೆ ಎಂದು ಟ್ರುಡೊ ಈಚೆಗೆ ಘೋಷಿಸಿದ್ದಾರೆ. ಅವರ ನಿಲುವು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

    ಅಷ್ಟಕ್ಕೂ ಕೆನಡಾದಲ್ಲಿ ಆಡಳಿತ ಪಕ್ಷವೊಂದರ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವೇನು? ಟ್ರುಡೊ ರಾಜೀನಾಮೆ ಘೋಷಿಸುವ ಒತ್ತಡ ಸೃಷ್ಟಿಯಾಗಿದ್ಯಾಕೆ? ಈ ಬೆಳವಣಿಗೆಯಲ್ಲಿ ಭಾರತದ ಇಂಪ್ಯಾಕ್ಟ್ ಇದೆಯಾ? ಟ್ರುಡೊ ರಾಜೀನಾಮೆ ನಂತರ ಮುಂದೇನು ಎಂಬ ಅನೇಕ ಪ್ರಶ್ನೆಗಳು ಮೂಡಬಹುದು. ಎಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

    ಕುಸಿದ ಟ್ರುಡೊ ವರ್ಚಸ್ಸು
    44 ವರ್ಷ ವಯಸ್ಸಿನ ಟ್ರುಡೊ ಅವರ ಆಶಾವಾದಿ ರಾಜಕೀಯ ಸಂದೇಶ ಮತ್ತು ಯುವ ವರ್ಚಸ್ಸು 2015ರಲ್ಲಿ ಲಿಬರಲ್ ಪಕ್ಷಕ್ಕೆ ಸಂಸತ್ತಿನಲ್ಲಿ ಅಭೂತಪೂರ್ವ ಬಹುಮತ ತಂದುಕೊಟ್ಟಿತ್ತು. ಆದರೆ, ಈಚೆಗೆ ಆಂಗಸ್ ಇನ್‌ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆಯಲ್ಲಿ 2024ರ ಡಿಸೆಂಬರ್ ಹೊತ್ತಿಗೆ, ಅವರ ಪರವಾದ ಬೆಂಬಲ ರೇಟಿಂಗ್ ದಾಖಲೆಯ ಕನಿಷ್ಠ 24%ಗೆ ಕುಸಿದಿದೆ. ಲಿಬರಲ್ ಪಕ್ಷಕ್ಕೆ ಬೆಂಬಲ 16%ಗೆ ಇಳಿದಿದೆ. ಇದು ಪಕ್ಷಕ್ಕೆ 157 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಚುನಾವಣಾ ಸಾಧನೆಯಾಗಿದೆ.

    ಕಳೆದ 50 ವರ್ಷಗಳಲ್ಲಿ ಯಾವುದೇ ಕೆನಡಾದ ಪ್ರಧಾನಿ ಸತತ ಮೂರನೇ ಅವಧಿಗೆ ಗೆದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ 8-9 ವರ್ಷಗಳ ಅವಧಿಯಲ್ಲಿ ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಸಾಮರ್ಥ್ಯ ಕುಂದಿದೆ. ಜನರು ಒಂಬತ್ತು ವರ್ಷಗಳ ಬಳಿಕವೂ ಅವರನ್ನು ಪ್ರೀತಿಸಲು ಸಾಧ್ಯವಿಲ್ಲ. ಟ್ರುಡೊ ಸಮಯ ಮುಗಿದಿದೆ ಅಂತ ಕಳೆದ ಎರಡು ವರ್ಷಗಳಿಂದ ಸಮೀಕ್ಷಾ ತಜ್ಞರು ಹೇಳುತ್ತಿದ್ದಾರೆಂದು ಕೆನಡಾದ ಪತ್ರಕರ್ತ ಟರ‍್ರಿ ಮಿಲೆವ್ಸಿ÷್ಕ ಅಭಿಪ್ರಾಯಪಟ್ಟಿದ್ದಾರೆ.

    ಆರ್ಥಿಕ ಸಮಸ್ಯೆಗಳಿಂದಾಗಿ ಟ್ರುಡೊ ವಿರುದ್ಧದ ಅಸಮಾಧಾನವು ದೇಶದಲ್ಲಿ ಉತ್ತುಂಗಕ್ಕೇರಿದೆ. ಅವರ ಎರಡನೇ ಅವಧಿಯಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವೇತನವು ದಾಖಲೆಯ ಹಣದುಬ್ಬರವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರವು ‘ಸರ್ಕಾರದ ಹಂತಕ’ ಎಂದು 2019ರ ವರೆಗೆ ಟ್ರುಡೊ ಅವರ ಪ್ರಧಾನಿ ಕಾರ್ಯದರ್ಶಿಯಾಗಿದ್ದ ಯುರೇಷಿಯಾ ಗ್ರೂಪ್‌ನ ರಾಜಕೀಯ ಸಲಹೆಗಾರ ಜೆರಾಲ್ಡ್ ಬಟ್ಸ್ ಹೇಳಿದ್ದರು. ಹಿಂದಿನ ಸರ್ಕಾರಗಳಂತೆಯೇ, ಟ್ರುಡೊ ಅವರು ಹಣದುಬ್ಬರ ಸಂಗತಿ ಮತ್ತು ಅಗತ್ಯವಿರುವ ಪರಿಹಾರ ಮಾರ್ಗಗಳನ್ನು ಗುರುತಿಸುವಲ್ಲಿ ವಿಫಲರಾದರು ಎಂದು ತಿಳಿಸಿದ್ದರು.

    ಇದರ ಜೊತೆಗೆ, ರಾಜಕೀಯ ಹಗರಣಗಳ ಸರಣಿಯು ಟ್ರುಡೊ ಅವರ ವೈಯಕ್ತಿಕ ಜನಪ್ರಿಯತೆ ಕುಸಿಯುವಂತೆ ಮಾಡಿತು. 2017ರಲ್ಲಿ ಹೆಚ್ಚಿನ ಗಿಫ್ಟ್ಗಳ ಸ್ವೀಕಾರ, 2020ರಲ್ಲಿ ಟ್ರುಡೊ ಕುಟುಂಬಕ್ಕೆ ಡಬ್ಲ್ಯೂಇ ಚಾರಿಟಿಯಿಂದ ಲಕ್ಷಾಂತರ ಡಾಲರ್‌ಗಳ ಪಾವತಿಯಾಗಿದೆ ಎಂಬ ಆರೋಪಗಳು ಕೇಳಿಬಂದವು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ದೇಶಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿತು. ದಾಖಲೆ ಸಂಖ್ಯೆಯ ವಲಸಿಗರಿಗೆ ಅವಕಾಶ ನೀಡುವ ಸರ್ಕಾರದ ನೀತಿಯು ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿತು. ಇದರಿಂದ ಎಚ್ಚೆತ್ತು ಟ್ರುಡೊ ವಲಸೆ ನೀತಿಯಿಂದ ಹಿಂದೆ ಸರಿದರು. ಆದರೆ, ಅಷ್ಟೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು.

    ಪಕ್ಷದ ಬೆಂಬಲ ಕಳೆದುಕೊಂಡ ನಾಯಕ
    ಟ್ರಡೊ ಮೈತ್ರಿಕೂಟದ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಪಕ್ಷವು ಸಂಸತ್ತಿನ 338 ಸ್ಥಾನಗಳಲ್ಲಿ 153 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಸಣ್ಣ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆಗೊಂಡಿತು. ಬ್ಲಾಕ್ ಕ್ವಿಬೆಕೊಯಿಸ್ ಮತ್ತು ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ ಬೆಂಬಲ ನೀಡಿದ್ದವು. ಈಗ ಟ್ರುಡೊ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಅವರ ಲಿಬರಲ್ ಪಕ್ಷದೊಳಗಿನಿಂದಲೇ ದೊಡ್ಡ ಕೂಗು ಕೇಳಿಬರುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಮಾರು ಲಿಬರಲ್ ಪಕ್ಷದ ಎರಡು ಡಜನ್ ಬ್ಯಾಕ್‌ಬೆಂಚರ್‌ಗಳು, ಟ್ರುಡೊ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವ ಪತ್ರಕ್ಕೆ ಸಹಿ ಹಾಕಿವೆ.

    ಹಣಕಾಸು ಸಚಿವ ರಾಜೀನಾಮೆ
    ಡಿಸೆಂಬರ್ ಮಧ್ಯದಲ್ಲಿ ಟ್ರುಡೊ ಅವರ ಆಪ್ತ ಸಹಾಯಕ, ಕೆನಡಾದ ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ಕೊಟ್ಟರು. ‘ಕೆನಡಾವನ್ನು ಅಮೆರಿಕಕ್ಕೆ ವಿಲೀನಗೊಳಿಸಲಾಗುವುದು. ಯುಎಸ್ ರಾಜ್ಯವನ್ನಾಗಿ ಮಾಡಿಕೊಳ್ಳಲಾಗುವುದು’ ಎಂಬ ಟ್ರಂಪ್ ಹೇಳಿಕೆಗೆ ಕ್ರಿಸ್ಟಿಯಾ ಆಕ್ರೋಶ ಹೊರಹಾಕಿದ್ದರು. ಈ ವಿಚಾರದಲ್ಲಿ ಟ್ರುಡೊ ಅವರ ಜಾಣಕುರುಡು ನಡೆಯನ್ನೂ ಖಂಡಿಸಿದರು. ಹೊಸ ನಾಯಕರ ಹುಟ್ಟಿಗೆ ಇದು ಸರಿಯಾದ ಸಮಯ ಎಂದು ಲಿಬರಲ್ ಪಕ್ಷದ ಅನೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರ ಬರೆದವರು ಮಾತ್ರವಲ್ಲ ಪಕ್ಷದ ಉಳಿದ ಸಂಸದರೂ ಟ್ರುಡೊಗೆ ಬೆಂಬಲ ನೀಡಲು ಹಿಂಜರಿಯುತ್ತಿದ್ದಾರೆ.

    ಮುಂದೆ ಏನಾಗುತ್ತೆ?
    ಲಿಬರಲ್ ಪಕ್ಷವು ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ರಾಜನ ಪ್ರತಿನಿಧಿಯಾದ ಗವರ್ನರ್ ಜನರಲ್ 3ನೇ ಕಿಂಗ್ ಚಾರ್ಲ್ಸ್, ಮಾರ್ಚ್ 24 ರವರೆಗೆ ಎಲ್ಲಾ ಕಲಾಪಗಳನ್ನು ಸ್ಥಗಿತಗೊಳಿಸುವ ಮೂಲಕ ಸಂಸತ್ತನ್ನು ಮುಂದೂಡುವ ಟ್ರುಡೊ ಮನವಿಯನ್ನು ಅಂಗೀಕರಿಸಿದ್ದಾರೆ. ಇದು ಲಿಬರಲ್ ಪಕ್ಷಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಸಮಯ ನೀಡುತ್ತದೆ. ಆದರೆ, ಮುಂದಿನ ಪ್ರಧಾನಿ ಯಾರಾಗಿರಬಹುದು ಎಂಬುದು ಸ್ಪಷ್ಟವಾಗಿಲ್ಲ. ಸಾರಿಗೆ ಸಚಿವೆ ಅನಿತಾ ಆನಂದ್ ಮತ್ತು ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ ಅವರನ್ನು ಸಂಭಾವ್ಯ ಸ್ಪರ್ಧಿಗಳೆಂದು ಗುರುತಿಸಲಾಗಿದೆ. ಸಂಸತ್ತಿನ ಚುನಾವಣೆ 2025ರ ಅಕ್ಟೋಬರ್ ಒಳಗೆ ನಡೆಯಬೇಕು. ಆದರೆ ಅದು ಇನ್ನೂ ಮುಂಚೆಯೇ ಆಗಬಹುದು. ಪ್ರಮುಖ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷವು ಮೇ ತಿಂಗಳೊಳಗೆ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸಾಧ್ಯತೆಯಿದೆ. ಇದು ಚುನಾವಣೆಗೆ ಕಾರಣವಾಗಬಹುದು. ಪಿಯರೆ ಪೊಯ್ಲಿವ್ರೆ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲಿಬರಲ್ ಪಕ್ಷದವರಿಗಿಂತ 29 ಅಂಕಗಳ ಮುನ್ನಡೆಯನ್ನು ಹೊಂದಿದೆ. ಪಕ್ಷದ ನಾಯಕರಾಗಿ ಟ್ರೂಡೊ ಅವರ ನಂತರ ಯಾರು ಬಂದರೂ ಸಹ ಅವರು ಗೆಲ್ಲುವ ಸಾಧ್ಯತೆಯಿದೆ.

    ಕೆನಡಾ-ಭಾರತ ತಿಕ್ಕಾಟ
    ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಟ್ರೂಡೊ ಆರೋಪಿಸಿದ್ದರಿಂದ (ಸೆಪ್ಟೆಂಬರ್ 2023ರಿಂದ) ಭಾರತ-ಕೆನಡಾ ಸಂಬಂಧಗಳು ಹದಗೆಟ್ಟಿತು. ಆಗಿನಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕತೆಯಲ್ಲಿ ಬಿಕ್ಕಟ್ಟು ತಲೆದೋರಿದೆ. ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ‘ಕೆನಡಾದಲ್ಲಿ ಹೊಸಬರು ಅಧಿಕಾರಕ್ಕೆ ಬಂದಿರುವುದರಿಂದ ಸಂಬಂಧಗಳನ್ನು ಸುಧಾರಿಸಲು ಅವಕಾಶವಿರುತ್ತದೆ. ಭಾರತವನ್ನು ದೃಷ್ಟಿಯಾಗಿಟ್ಟುಕೊಂಡು ಟ್ರುಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಮಿಲೆವ್ಸ್ಕಿ ಹೇಳಿದ್ದಾರೆ.

    ಬ್ರಾಂಪ್ಟನ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಗಳು ಮತ್ತು ಹಿಂದೂಗಳ ನಡುವೆ ಘರ್ಷಣೆ ಮೂಲಕ ಟ್ರುಡೊ ವಿಭಜನೆಯನ್ನು ಬಿತ್ತುತ್ತಿದ್ದಾರೆ ಎಂದು ಪೊಯ್ಲಿವ್ರೆ ಆರೋಪಿಸಿದ್ದರು. ಟ್ರುಡೊ ಆಗಸ್ಟ್ನಲ್ಲಿ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಲು ಕಾರಣವಾಯಿತು.

    ಕೆನಡಾ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಸಂಜಾತರು
    ಕೆನಡಾದಲ್ಲಿ ಅಕ್ಟೋಬರ್ ಕೊನೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಹೀನಾಯ ಸೋಲನುಭವಿಸಲಿದ್ದು, ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೇರಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಟ್ರುಡೊ ರಾಜೀನಾಮೆ ಘೋಷಣೆ ಬೆನ್ನಲ್ಲೇ ಕೆನಡಾ ಪ್ರಧಾನಿ ಸ್ಥಾನಕ್ಕೆ ಹೊಸ ನಾಯಕರ ಹುಡುಕಾಟ ಶುರುವಾಗಿದೆ. ಪ್ರಧಾನಿ ರೇಸ್‌ನಲ್ಲಿರುವ ನಾಯಕರ ಪಟ್ಟಿಯಲ್ಲಿ ಮೂವರು ಭಾರತೀಯ ಸಂಜಾತರು ಸೇರಿರುವುದು ವಿಶೇಷ.

    ಟ್ರೂಡೊ ಅವರ ಸಂಪುಟದಲ್ಲಿ ಮಾಜಿ ರಕ್ಷಣಾ ಸಚಿವೆ ಹಾಗೂ ಪ್ರಸ್ತುತ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವೆಯಾಗಿರುವ ಅನಿತಾ ಆನಂದ್ ಅವರನ್ನು ಪಕ್ಷವನ್ನು ಮುನ್ನಡೆಸುವ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತಿದೆ. ಅನಿತಾ ಅವರ ಪೋಷಕರು ತಮಿಳುನಾಡು ಮತ್ತು ಪಂಜಾಬ್‌ನ ಭಾರತೀಯ ವೈದ್ಯರಾಗಿದ್ದರು. 2019 ರಿಂದ 2021 ರವರೆಗೆ ಸಾರ್ವಜನಿಕ ಸೇವೆಗಳು ಮತ್ತು ಖರೀದಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳನ್ನು ಪಡೆದುಕೊಳ್ಳಲು ಒಪ್ಪಂದದ ಮಾತುಕತೆ ಮುನ್ನಡೆಸಿದ್ದರಿಂದ ಆನಂದ್ ರಾಜಕೀಯದಲ್ಲಿ ಗಮನಾರ್ಹ ಅನುಭವವನ್ನು ಹೊಂದಿದ್ದಾರೆ.

    ಸಂಸದರಾಗಿರುವ ಭಾರತೀಯ ಮೂಲದ ಮತ್ತೊಬ್ಬ ವ್ಯಕ್ತಿ ಜಾರ್ಜ್ ಚಾಹಲ್ ಹೆಸರು ಕೂಡ ಪ್ರಧಾನಿ ರೇಸ್‌ನಲ್ಲಿ ಕೇಳಿಬರುತ್ತಿದೆ. ಆಲ್ಬರ್ಟಾ ಲಿಬರಲ್ ಸಂಸದರಾಗಿರುವ ಜಾರ್ಜ್ ಬಗ್ಗೆ ಹಲವು ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. ವಕೀಲ ಮತ್ತು ಸಿಖ್ ಕಾಕಸ್ ಸಮುದಾಯದ ನಾಯಕರಾಗಿರುವ ಚಾಹಲ್, ವಾರ್ಡ್ 5 ರ ಕ್ಯಾಲ್‌ಗರಿ ನಗರ ಕೌನ್ಸಿಲರ್ ಆಗಿ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಸಿಖ್ ಕಾಕಸ್‌ನ ಅಧ್ಯಕ್ಷರೂ ಆಗಿದ್ದಾರೆ.

    ಕೆನಡಾದ ಮುಂದಿನ ಪ್ರಧಾನಿಯಾಗಲು ಭಾರತೀಯ ಮೂಲದ ಕೆನಡಾದ ಸಂಸದ ಚಂದ್ರ ಆರ್ಯ ಅಧಿಕೃತವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ನೇಪಿಯನ್ ಅನ್ನು ಪ್ರತಿನಿಧಿಸುವ ಲಿಬರಲ್ ಸಂಸದರಾದ ಆರ್ಯ, ಕೆನಡಾವನ್ನು ‘ಸಾರ್ವಭೌಮ ಗಣರಾಜ್ಯ’ ಮಾಡುವ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ತೀನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವ ತಮ್ಮ ಯೋಜನೆಗಳನ್ನು ವಿವರಿಸಿದ್ದಾರೆ. ಚಂದ್ರ ಆರ್ಯ ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಲು ಗ್ರಾಮದವರು. ಧಾರವಾಡದ ಕೌಸಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. 2022ರಲ್ಲಿ ಕೆನಡಾದ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಚಂದ್ರ ಆರ್ಯ ಗಮನ ಸೆಳೆದಿದ್ದರು. ಅವರು ಕೂಡ ಈಗ ಕೆನಡಾ ಪ್ರಧಾನಿ ರೇಸ್‌ನಲ್ಲಿದ್ದಾರೆ.

    ಟ್ರಂಪ್ ಕಾರ್ಡ್
    ಕೆನಡಾವನ್ನು ಅಮೆರಿಕದ ಜೊತೆಗೆ ವಿಲೀನಗೊಳಿಸಿ ರಾಷ್ಟ್ರದ 51ನೇ ರಾಜ್ಯವನ್ನಾಗಿಸಲಾಗುವುದು ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಕಳೆದ ವರ್ಷದ ನವೆಂಬರ್ ಕೊನೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆಗಿನ ಮಾರ್-ಎ-ಲಾಗೊದಲ್ಲಿ ನಡೆಸಿದ ಔತಣ ಕೂಟದಲ್ಲಿ ಟ್ರಂಪ್ ಮೊದಲ ಬಾರಿಗೆ ತಮಾಷೆಯಾಗಿ ಹೇಳಿದ್ದರು. ಈ ರೀತಿ ಹೇಳಿಕೆ ನೀಡುವಾಗ ಟ್ರಂಪ್ ನಗುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ವಿಚಾರವನ್ನು ಕೆನಡಾ ಆಡಳಿತ ಪಕ್ಷದ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಟ್ರಂಪ್ ಮಾತಿನಲ್ಲಿ ಮಿತ್ರರಾಷ್ಟçವನ್ನು ದುರ್ಬಲಗೊಳಿಸುವ ಉದ್ದೇಶವಿದೆ ಎಂದು ಕೆನಡಾದ ಹಣಕಾಸು ಸಚಿವರು ಅಸಮಾಧಾನ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲ, ಈ ಹಿಂದಿನಿಂದಲೂ ಕೆನಡಾ ಮೇಲೆ ಟ್ರಂಪ್ ಕಾರ್ಡ್ ಬಳಕೆಯಾಗಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ (2016 ರಿಂದ) ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕ ವಿಧಿಸುವುದು ಸೇರಿದಂತೆ ‘ಅಮೆರಿಕ ಮೊದಲು’ ನೀತಿಯಿಂದಾಗಿ ಕೆನಡಾ ಜೊತೆಗಿನ ಸಂಬಂಧ ಹದಗೆಟ್ಟಿತ್ತು. ಈಗ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾಗಿದ್ದಾರೆ. ಗೆಲುವಿನ ಬೆನ್ನಲ್ಲೇ, ಕೆನಡಾದ ಎಲ್ಲ ಉತ್ಪನ್ನಗಳ ಮೇಲೆ ಶೇ.25 ರಷ್ಟು ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಗೆಲುವು ಒಟ್ಟಾರೆಯಾಗಿ ಕೆನಡಾದಲ್ಲಿ ಟ್ರುಡೊ ರಾಜಕೀಯ ಕಂಪನಕ್ಕೆ ಕಾರಣವಾಗಿದೆ.

  • ಕೆನಡಾ ಪ್ರಧಾನಿ ರೇಸ್‌ನಲ್ಲಿ ಕನ್ನಡಿಗ ಚಂದ್ರ ಆರ್ಯ!

    ಕೆನಡಾ ಪ್ರಧಾನಿ ರೇಸ್‌ನಲ್ಲಿ ಕನ್ನಡಿಗ ಚಂದ್ರ ಆರ್ಯ!

    ಒಟ್ಟಾವಾ: ಕೆನಡಾದ ಪ್ರಧಾನಿ ಸ್ಥಾನದ ಪೈಪೋಟಿಯಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ ಅವರ ಹೆಸರು ಕೇಳಿಬಂದಿದೆ.

    ಕೆನಡಾದ ಪ್ರಧಾನ ಮಂತ್ರಿ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಅವರು ಘೋಷಿಸಿದ್ದಾರೆ. ಲಿಬರಲ್ ಪಕ್ಷದ ಸಂಸದರಾಗಿರುವ ಅವರು, ದೇಶವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ. ಇನ್ನೂ, ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ನಂತರ ಆಡಳಿತಾರೂಢ ಲಿಬರಲ್ ಪಕ್ಷದ ನಾಯಕ ಮತ್ತು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಜಸ್ಟಿನ್ ಟ್ರುಡೊ ಸೋಮವಾರ ನಿರ್ಧಾರ ಪ್ರಕಟಿಸಿದ್ದರು. ಇದಾದ ಬಳಿಕ ಈ ಬೆಳವಣಿಗೆಯಾಗಿದೆ.

    ಆರ್ಯ ಚಂದ್ರ ಅವರು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವುದು ಮತ್ತು ಪ್ಯಾಲೆಸ್ತೇನ್‌ನ್ನು ಒಂದು ರಾಜ್ಯವಾಗಿ ಗುರುತಿಸುವುದು ಸೇರಿದಂತೆ ಮಹತ್ವಾಕಾಂಕ್ಷೆಯ ನೀತಿ ಪ್ರಸ್ತಾಪಗಳನ್ನು ಉಮೇದುವಾರಿಕೆ ಬಳಿಕ ವಿವರಿಸಿದ್ದಾರೆ.

    ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

    ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಹಿತದೃಷ್ಟಿಯಿಂದ, ನಾವು ಸಂಪೂರ್ಣವಾಗಿ ಅಗತ್ಯವಾದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಲಿಬರಲ್ ಪಕ್ಷದ ಮುಂದಿನ ನಾಯಕರಾಗಿ ಆಯ್ಕೆಯಾದರೆ, ನನ್ನ ಜ್ಞಾನ ಮತ್ತು ಪರಿಣತಿಯ ಮೇಲೆ ಉತ್ತಮ ಆಡಳಿತ ನೀಡುತ್ತೇನೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಆರ್ಯ ಅವರು 2015 ರಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದರು ಮತ್ತು 2019 ರಲ್ಲಿ ಮರು ಆಯ್ಕೆಯಾದರು. 2022 ರಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. ಹಿಂದೂ ಕೆನಡಿಯನ್ನರ ಪರವಾಗಿ ವಾದಿಸುವ ವಕೀಲರಾಗಿ, ಆರ್ಯ ಆಗಾಗ ದೃಢವಾದ ನಿಲುವುಗಳನ್ನು ತೆಗೆದುಕೊಂಡಿದ್ದಾರೆ.

    2024 ರಲ್ಲಿ ಸಂಸತ್ತಿನ ಹೊರಗೆ ‘ಓಂ’ ಚಿಹ್ನೆಯನ್ನು ಹೊಂದಿರುವ ಕೇಸರಿ ಧ್ವಜವನ್ನು ಹಾರಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಿಂದೂ ಸಮುದಾಯ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಅವರು ಈ ಸಂದರ್ಭವನ್ನು ಬಳಸಿಕೊಂಡಿದ್ದರು.

    ತುಮಕೂರು ಮೂಲದ ಆರ್ಯ ಅವರು, ಧಾರವಾಡದಲ್ಲಿರುವ ಕೌಸಾಲಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು 20 ವರ್ಷಗಳ ಹಿಂದೆ ಒಟ್ಟಾವಾಕ್ಕೆ ತೆರಳಿದ್ದರು. ರಾಜಕೀಯ ಪ್ರವೇಶಿಸುವ ಮೊದಲು ಎಂಜಿನಿಯರ್, ಹೂಡಿಕೆ ಸಲಹೆಗಾರ ಮತ್ತು ಉದ್ಯಮಿಯಾಗಿ ಕೆಲಸ ಮಾಡಿದ್ದರು.

  • ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ!

    ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ!

    ಒಟ್ಟಾವಾ: ಖಲಿಸ್ತಾನಿ (Khalistani) ಉಗ್ರ ಸಂಘಟನೆಯ ವಿಚಾರದಲ್ಲಿ ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಸ್ಥಳೀಯ ಕಾಲಮಾನ ಬೆಳಗ್ಗೆ ರೈಡೋ ಕಾಟೇಜ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ಗವರ್ನರ್ ಜನರಲ್ ಅವರಿಗೆ ಸಂಸತ್ತನ್ನು ಮಾರ್ಚ್‌ 24ರ ವರೆಗೆ ಮುಂದೂಡುವಂತೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.

    ರಾಜೀನಾಮೆ ಬಳಿಕ ಟ್ರುಡೋ ಹೇಳಿದ್ದೇನು?
    ಪಕ್ಷದೊಳಗಿನ ಆಂತರಿಕ ಕದನಗಳಿಂದಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಪಿಯರ್ ಪೊಯ್ಲಿವ್ರೆ ತಮ್ಮ ಉತ್ತರಾಧಿಕಾರಿಯಾಗಲು ಉತ್ಸಾಹಿಯಾಗಿದ್ದಾರೆ. ಆದ್ರೆ ಕೆನಡಾವನ್ನು ಮುನ್ನಡೆಸಲು ಆತ ಸರಿಯಾದ ವ್ಯಕ್ತಿಯಲ್ಲ ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದಾರೆ.

    ರಾಜೀನಾಮೆಗೆ ಕಾರಣ ಏನು?
    ಟ್ರುಡೋ ಅವರು 2013 ರಲ್ಲಿ ಲಿಬರಲ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಲಿಬರಲ್‌ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ. ಇತ್ತೀಚಿನ ಚುನಾವಣೆಗಳಲ್ಲಿ ಲಿಬರಲ್‌ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ತಿರುಗಿಬಿದ್ದು, ರಾಜೀನಾಮೆಗೆ ಆಗ್ರಹಿಸಿದ್ದರು.

    ಅಲ್ಲದೇ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಜಸ್ಟಿನ್ ಟ್ರುಡೋ ನೇರವಾಗಿ ಆರೋಪಿಸಿದ್ದರು. ಆದರೆ ಅಕ್ಟೋಬರ್‌ 16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು.

  • ಭಾರತದ ಜೊತೆ ಚೇಷ್ಟೆ ಮಾಡುತ್ತಿದ್ದ ಕೆನಡಾ ಪ್ರಧಾನಿ ಟ್ರುಡೋ ಇಂದೇ ರಾಜೀನಾಮೆ?

    ಭಾರತದ ಜೊತೆ ಚೇಷ್ಟೆ ಮಾಡುತ್ತಿದ್ದ ಕೆನಡಾ ಪ್ರಧಾನಿ ಟ್ರುಡೋ ಇಂದೇ ರಾಜೀನಾಮೆ?

    ಒಟ್ಟಾವಾ: ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡಿದ್ದ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಇಂದು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಟ್ರುಡೋ  ಯಾವಾಗ ರಾಜೀನಾಮೆ ಘೋಷಿಸುತ್ತಾರೆ ಎಂಬುದು ಖಚಿತವಾಗಿ ತಿಳಿದಿಲ್ಲ. ಬುಧವಾರದ ಪಕ್ಷದ ರಾಷ್ಟ್ರೀಯ ಸಭೆ ನಡೆಯುವ ಮೊದಲೇ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟ್ರಂಪ್‌ ಪ್ರಮಾಣವಚನ ಸಮಾರಂಭ – 8.57 ಕೋಟಿ ದೇಣಿಗೆ ನೀಡಲಿದ್ದಾರೆ ಟಿಮ್‌ ಕುಕ್‌

    ಪಕ್ಷದ ಆಂತಂರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕಾಏಕಿ ರಾಜೀನಾಮೆ ಘೋಷಣೆ ಮಾಡುತ್ತಾರಾ ಅಥವಾ ಹೊಸ ನಾಯಕತ್ವ ಆಯ್ಕೆವರೆಗೂ ಪ್ರಧಾನಿಯಾಗಿ ಮುಂದುವರೆಯುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ . ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ಟ್ರುಡೋ ಅವರು 2013 ರಲ್ಲಿ ಲಿಬರಲ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಲಿಬರಲ್‌ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ.

    ಇತ್ತೀಚಿನ ಚುನಾವಣೆಗಳಲ್ಲಿ ಲಿಬರಲ್‌ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದರು.

    ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದರು. ಆದರೆ ಅಕ್ಟೋಬರ್‌ 16  ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು  ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.