Tag: Camp

  • ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಆಯೋಜನೆ

    ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಆಯೋಜನೆ

    ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿರೋ (Gruhalakshmi Scheme) ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ. ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಸಲು ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 27 ರಿಂದ 29ರ ವರೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ (Camp) ಆಯೋಜನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿದೆ. ಪಿಡಿಓಗಳ (PDO) ನೇತೃತ್ವದಲ್ಲಿ ಕ್ಯಾಂಪ್ ಆಯೋಜನೆ ಆಗಲಿದ್ದು, ಈ ಕ್ಯಾಂಪ್ ನಲ್ಲಿ ಫಲಾನುಭವಿಗಳಿಗೆ ಇರುವ ಸಮಸ್ಯೆ ಸರಿಪಡಿಸಲು ಸೂಚನೆ ನೀಡಲಾಗಿದೆ.

    ಗೃಹಲಕ್ಷ್ಮಿ ಕ್ಯಾಂಪ್ ಹೇಗೆ!?: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್‍ಗಳನ್ನು ಅಯೋಜಿಸತಕ್ಕದ್ದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್‍ಗಳಲ್ಲಿ ಪರಿಹರಿಸತಕ್ಕದ್ದು. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು Electronic Delivery of Citizen Services (EDCS) ತಂಡಗಳು ಈ ಕ್ಯಾಂಪ್‍ಗಳಲ್ಲಿ ಭಾಗವಹಿಸತಕ್ಕದ್ದು.

    ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಪ್ರತಿನಿಧಿಗಳು ಮತ್ತು ಇತರ ಬ್ಯಾಂಕ್‍ಗಳ ಪ್ರತಿನಿಧಿಗಳು ಈ ಕ್ಯಾಂಪ್‍ಗಳಲ್ಲಿ ಭಾಗವಹಿಸತಕ್ಕದ್ದು. ಕ್ಯಾಂಪ್‍ಗಳಲ್ಲಿ ಫಲಾನುಭವಿಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸತಕ್ಕದ್ದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು. ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡುವುದು. ಇ-ಕೆವೈಸಿ ಅಪ್‍ಡೇಟ್ ಮಾಡುವುದು. ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲಿಸುವುದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುವುದು ಇದರ ಉದ್ದೇಶ ಆಗಿದೆ.

    ಕ್ಯಾಂಪ್‍ಗಳನ್ನು ಆಯೋಜಿಸುವ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಿಸೆಂಬರ್ 27 ರಿಂದ 29ರವರೆಗೆ ಪ್ರತಿದಿನ ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ಕ್ಯಾಂಪ್‍ಗಳನ್ನು ಆಯೋಜಿಸುವುದು. ಕ್ಯಾಂಪ್ ಆಯೋಜಿಸುವ ಕುರಿತು ಫಲಾನುಭವಿಗಳಿಗೆ EDCS ರವರು SMS ಮೂಲಕ ಮಾಹಿತಿ ನೀಡುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ, ಅವರನ್ನು ಕ್ಯಾಂಪ್‍ಗಳಿಗೆ ಕರೆತರುವ ಜವಾಬ್ದಾರಿ ನಿರ್ವಹಿಸುವುದು. ಕ್ಯಾಂಪ್ ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರಿಕೆ, ಮತ್ತು ಇತರ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • CRPF ಸಹ ಸೈನಿಕರ ಮೇಲೆ ಗುಂಡಿನ ದಾಳಿ- ನಾಲ್ವರು ಬಲಿ, ಮೂವರಿಗೆ ಗಂಭೀರ ಗಾಯ

    CRPF ಸಹ ಸೈನಿಕರ ಮೇಲೆ ಗುಂಡಿನ ದಾಳಿ- ನಾಲ್ವರು ಬಲಿ, ಮೂವರಿಗೆ ಗಂಭೀರ ಗಾಯ

    ಚಂಢೀಗಡ: ಸಹೋದ್ಯೋಗಿ ಗುಂಡಿನ ದಾಳಿಗೆ ನಾಲ್ವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್​​ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.

    ರಾಜ್ಯ ರಾಜಧಾನಿ ರಾಯ್‍ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಮರೈಗುಡೆಮ್‍ನಲ್ಲಿರುವ ಲಿಂಗಂಪಲ್ಲಿಯ 50ನೇ ಬೆಟಾಲಿಯನ್‍ನ ಶಿಬಿರದಲ್ಲಿ ಸಿಆರ್‍ಪಿಎಫ್ ಯೋಧರ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆ ಮುಂಜಾನೆ 3.30ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ. ಹೇಳಿದ್ದಾರೆ. ಇದನ್ನೂ ಓದಿ: ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್

    ಯೋಧನೊಬ್ಬ ತನ್ನ ಸಹ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಹೀಗಾಗಿ ಕೂಡಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

  • ಮನಬಂದಂತೆ ಆನೆಗೆ ಥಳಿಸಿದ ಮಾವುತರು – ವಿಡಿಯೋ ವೈರಲ್

    ಮನಬಂದಂತೆ ಆನೆಗೆ ಥಳಿಸಿದ ಮಾವುತರು – ವಿಡಿಯೋ ವೈರಲ್

    ಚೆನ್ನೈ: ದೇವಸ್ಥಾನದ ಆನೆಗೆ ಮನಬಂದಂತೆ ಇಬ್ಬರು ಮಾವುತರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕಕ್ಕೆ ಕಾರಣವಾಗಿದೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರು ಪ್ರದೇಶದ ಆನೆ ಶಿಬಿರದಲ್ಲಿ ನಡೆದಿದೆ.

    ಆನೆ ತಾವು ಅಂದುಕೊಂಡಂತೆ ವರ್ತಿಸುತ್ತಿಲ್ಲ ಎಂದು ಕೋಪಗೊಂಡ ಮಾವುತ ವಿನಿಲ್ ಕುಮಾರ್ ಹಾಗೂ ಆತನ ಸಹಾಯಕ ಶಿವಪ್ರಸಾದ್ ಆನೆಯ ಮೇಲೆ ಸಿಟ್ಟು ತೋರಿಸಿದ್ದಾರೆ. ಬೇಕಾ ಬಿಟ್ಟಿಯಾಗಿ ಆನೆಗೆ ಹೊಡೆದು ಸಿಟ್ಟು ತೋರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಮಾವುತರು ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಇಬ್ಬರು ಮಾವುತರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮರದ ಹಿಂಭಾಗದಲ್ಲಿ ಕಟ್ಟಿ ಹಾಕಲಾಗಿದ್ದ ಆನೆಗೆ ಇಬ್ಬರು ಮಾವುತರು ದೊಣ್ಣೆಯಿಂದ ಆನೆಯ ಮುಂಗಾಲಿಗೆ ಜೋರಾಗಿ ಬಡಿದಿದ್ದಾರೆ. ನೋವನ್ನು ತಾಳಲಾರದೆ ಆನೆ ಘೀಳಿಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋಗೆ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗೆ ತಮಿಳುನಾಡಿನ ರೆಸಾರ್ಟ್ ಮಾಲೀಕ ಬೆಂಕಿ ಹಚ್ಚಿ ಆನೆ ಮೇಲೆ ಎಸೆದಿದ್ದನು. ಆನೆ ನೋವು ತಾಳಲಾರದೇ ಸಾವನ್ನಪ್ಪಿತ್ತು. ಇದೀಗ ಈ ಘಟನೆ ನಡೆದಿದ್ದು, ಪ್ರಾಣಿಗಳಿಗೆ ನೀಡುತ್ತಿರುವ ಹಿಂಸೆ ಕುರಿತಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

  • ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಹೋಗಿ ಬಂಡೆಯ ಮಧ್ಯೆ ಸಿಲುಕಿದ ವ್ಯಕ್ತಿಯ ರಕ್ಷಣೆ

    ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಹೋಗಿ ಬಂಡೆಯ ಮಧ್ಯೆ ಸಿಲುಕಿದ ವ್ಯಕ್ತಿಯ ರಕ್ಷಣೆ

    ಬಳ್ಳಾರಿ: ಶಿಬಿರಾರ್ಥಿಯೊಬ್ಬ ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬೃಹತ್ ಬಂಡೆಯ ಮಧ್ಯೆ ಸಿಕ್ಕಿ ನರಳಾಡಿದ ಘಟನೆ ಹಂಪಿಯಲ್ಲಿ ನಡೆದಿದೆ.

    ಹಂಪಿ ಕಡಲೇ ಕಾಳು ಗಣೇಶ ಹಿಂಭಾಗದಲ್ಲಿ ಇರುವ ಶಿವರಾಂ ಅವಧೂತರ ಮಠದಲ್ಲಿ ಕಳೆದ ನಾಲ್ಕು ದಿನಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಮದ್ಯವರ್ಜನ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿಯಾಗಿದ್ದರು.

    ಇದರಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿ ಮೂಲದ ದೇವೇಂದ್ರ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗ ಮಠದ ಪಕ್ಕದಲ್ಲಿರುವ ಎರಡು ಬೃಹತ್ ಬಂಡೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ಹೊರಗೆ ಬರಲಾಗದೆ ನರಳಾಡಿದ್ದಾನೆ.

    ನಂತರ ಸ್ಥಳೀಯರು ವ್ಯಕ್ತಿಯನ್ನು ಗಮನಿಸಿ ಹಂಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಸತತ 4 ಗಂಟೆ ಕಾರ್ಯಾಚರಣೆ ನಡೆಸಿದ ಹೋಮ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ದೇವೇಂದ್ರನನ್ನು ರಕ್ಷಿಸಿದ್ದಾರೆ.

    ಪ್ರಾಣಪಾಯದಿಂದ ಪಾರಾಗಿರುವ ದೇವೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಸಾಕಾನೆ ಪರಾರಿ – ದುಬಾರೆ ಆನೆ ಶಿಬಿರಕ್ಕೆ ನಿರ್ಬಂಧ

    ಸಾಕಾನೆ ಪರಾರಿ – ದುಬಾರೆ ಆನೆ ಶಿಬಿರಕ್ಕೆ ನಿರ್ಬಂಧ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಯೊಂದಕ್ಕೆ ಮದವೇರಿ ಶಿಬಿರದಿಂದ ಪರಾರಿಯಾಗಿರುವ ಕಾರಣ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

    ದುಬಾರೆ ಆನೆ ಶಿಬಿರವನ್ನು ಮುಚ್ಚಿರುವ ಅರಣ್ಯ ಇಲಾಖೆ, ಹೈ ಅಲರ್ಟ್ ಘೋಷಿಸಿದ್ದು, ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ 37 ವರ್ಷದ ಗೋಪಿ ಎಂಬ ಹಾನೆ ಮಾವುತರ ಕಣ್ಣು ತಪ್ಪಿಸಿ ಕಾಡಿಗೆ ಪರಾರಿಯಾಗಿದೆ.

    ಪರಾರಿಯಾಗಿರುವ ಗೋಪಿ ಕಾಡಾನೆಗಳ ಜೊತೆ ಕಾದಾಟ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಇದರಿಂದ ಅಪಾಯ ಸಂಭವಿಸಬಹುದು ಎಂಬ ಹಿನ್ನೆಲೆಯಲ್ಲಿ ಮಾವುತರು ಆನೆಯ ಪತ್ತೆ ಕಾರ್ಯ ಆರಂಭಿಸಿದ್ದಾರೆ.

    ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ್ದು, ಅಲ್ಲಿದ್ದ 26 ಆನೆಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ. ಆನೆಯ ಮದವಿಳಿಯಲು 10 ದಿನಗಳ ಸಮಯ ಬೇಕಾಗಿದ್ದು, ಅಲ್ಲಿಯವರೆಗೂ ಎಚ್ಚರಿಕೆಯಿಂದರಲು ಸೂಚಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಹೇಳಿದ್ದಾರೆ.

  • ಪ್ರಯಾಗ್ ಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ!

    ಪ್ರಯಾಗ್ ಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ!

    ಲಕ್ನೋ: ಕುಂಭಮೇಳ ಆರಂಭದ ಮುನ್ನಾದಿನವೇ ಉತ್ತರ ಪ್ರದೇಶದ ಪ್ರಯಾಗ್‍ನಲ್ಲಿ ಅನಾಹುತವೊಂದು ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಪ್ರಯಾಗ್‍ನ ದಿಗಂಬರ ಸಾಧುಗಳ ಕ್ಯಾಂಪ್‍ನಲ್ಲಿ ಸುಮಾರು 5 ಕೆ.ಜಿ. ಗ್ಯಾಸ್‍ನ ಸಿಲಿಂಡರ್ ಸ್ಫೋಟಗೊಂಡು ಭಾರೀ ಆತಂಕ ಸೃಷ್ಟಿಸಿತ್ತು. ಸಿಲಿಂಡರ್ ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಶೀಟ್ ನಿಂದ ನಿರ್ಮಿಸಿದ್ದ ಕ್ಯಾಂಪ್‍ಗಳು ನೆಲಕ್ಕೆ ಉರುಳಿದ್ದವು. ಅದೃಷ್ಟವಶಾತ್ ಯಾರೋಬ್ಬರು ಸ್ಫೋಟ ಸಂಭವಿಸಿದ್ದ ಜಾಗದಲ್ಲಿ ಇರಲಿಲ್ಲ. ಹೀಗಾಗಿ ಅನಾಹುತ ಕೈತಪ್ಪಿದೆ.

    ಕ್ಯಾಂಪ್ ಮುಂದೆ ಹಾಕಿದ್ದ ಶಾಮಿಯಾನ ಹಾಗೂ ಮಳಿಗೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಕುರಿತು ಕೆಲವರು ಮಾಹಿತಿ ನೀಡುತ್ತಿದ್ದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿದೆ. ಇತ್ತ ಆರೋಗ್ಯ ಇಲಾಖೆ ಕೂಡ ಸುಮಾರು 10 ಆಬುಲೆನ್ಸ್ ಗಳನ್ನು ಕಳುಹಿಸಿತ್ತು.

    ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಹಾಗೂ ಗಾಯಗಳಾದ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಯಾಗ್ ಕುಂಭ ಮೇಳದಲ್ಲಿ ದೇಶದ ವಿವಿಧ ಮೂಲೆಗಳಿಂದ ಜನರು ಭಾಗಿಯಾಗುತ್ತಾರೆ. ಸಾಧು, ಸಂತರು, ಜನಸಾಮಾನ್ಯ ಸೇರಿದಂತೆ ಲಕ್ಷಾಂತರ ಜನರು ಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಭಾರೀ ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv