Tag: Cameron Bankroft

  • ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?

    ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?

    ಕೇಪ್‍ಟೌನ್: ಆಸ್ಟ್ರೇಲಿಯಾ ತಂಡ ಹಲವು ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕುವ ಮೂಲಕ ವಿವಾದಕ್ಕೆ ಕಾರಣರಾದ ವಿಷಯ ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಬಾರಿ ಆಸೀಸ್ ಬ್ಯಾಟ್ಸ್ ಮನ್ ಕೆಮರೂನ್ ಬ್ಯಾಂಕ್ರೋಫ್ಟ್ ಚೆಂಡನನ್ನು ವಿರೂಪಗೊಳಿಸಿ ಸುದ್ದಿಯಾಗಿದ್ದಾರೆ.

    ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನ ಮೂರನೇ ದಿನದಾಟದಂದು ಘಟನೆ ನಡೆದಿದೆ. ಆಸ್ಟ್ರೇಲಿಯಾದ ಕೆಮರೊನ್ ಬ್ಯಾಂಕ್ರೊಫ್ಟ್ ಪಂದ್ಯದ ವೇಳೆ ಜೇಬಿನಿಂದ ಹಳದಿ ಬಣ್ಣದ ವಸ್ತುವಿನಿಂದ ಬಾಲ್ ವಿರೂಪಗೊಳಿಸಿದ್ದಾರೆ. ಬಾಲ್ ವಿರೂಪಗೊಳಿಸಿದ ಬಳಿಕ ಕೆಮರೊನ್ ಹಳದಿ ಬಣ್ಣದ ವಸ್ತುವನ್ನು ಜೇಬಿಗೆ ತೂರಿಸಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಟ್ವಿಟ್ಟರ್ ನಲ್ಲಿ ಈ ದೃಶ್ಯಗಳನ್ನು ಶೇರ್ ಮಾಡಿದ್ದಾರೆ.

    ಪಂದ್ಯದ ವೇಳೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ಇದನ್ನು ಅಂಪೈರ್ ಗಮನಕ್ಕೂ ತಂದಿದ್ದಾರೆ. ಆದರೆ ತಾನೇನು ಮಾಡಿಲ್ಲ ಎಂಬಂತೆ ನಟಿಸಿದ ಕೆಮರೊನ್, ಜೇಬಿನಿಂದ ಸನ್ ಗ್ಲಾಸ್ ಹೊರ ತೆಗೆದಿದ್ದಾರೆ. ಕೆಮರೊನ್ ಬಾಲ್ ತಿದ್ದಿರುವುದನ್ನು ದೃಶ್ಯಗಳನ್ನು ಗಮನಿಸಿರುವ ಆಸೀಸ್ ಕೋಚ್ ಡೆರನ್ ಲೆಹಮನ್ ವಾಕಿಟಾಕಿ ಮೂಲಕ ವಿಷಯ ತಿಳಿಸಿದ್ದಾರೆ.

    ಸದ್ಯ ಈ ಕೃತ್ಯದಲ್ಲಿ ಆಸೀಸ್ ನಾಯಕ ಸ್ಮಿತ್ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ದಿನದಾಟದ ವಿರಾಮ ವೇಳೆಯಲ್ಲಿ ಈ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ್ದು, ಚೆಂಡು ಬೌಲರ್ ಗಳಿಗೆ ಸಹಾಯವಾಗುವಂತೆ ಮಾಡಲು ಈ ಕೃತ್ಯ ಎಸಗಿದ್ದಾರೆ. ಅಲ್ಲದೇ ಈ ಪ್ಲಾನ್ ನಲ್ಲಿ ತಂಡದ ಕೋಚ್ ಗಳ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯಸ್ಥ ಜೇಮ್ಸ್ ಸುದರ್ಲ್ಯಾಂಡ್ ತಮ್ಮ ಆಟಗಾರರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ನಿರಾಕರಿಸಿದ್ದಾರೆ. ಭಾನುವಾರ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿಯನ್ನು ಆಫ್ರಿಕಾ ಗೆ ಕಳುಹಿಸಿಕೊಡಲಾಗುವುದು. ಸಮಿತಿಯ ತನಿಖೆಯ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವೇಳೆ ತಮ್ಮ ನಾಯಕತ್ವ ಸ್ಥಾನವನ್ನು ಸಮರ್ಥಿಸಿಕೊಂಡಿರುವ ಸ್ಮಿತ್ ಈ ಘಟನೆ ದೊಡ್ಡ ತಪ್ಪು ಎಂದು ಹೇಳಿದ್ದಾರೆ. ಸದ್ಯ ಸ್ಮಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಬಾಲ್ ವಿರೂಪಗೊಳಿಸಿರುವ ಕೆಮರೊನ್ ಬ್ಯಾಂಕ್ರೊಫ್ಟ್ ಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆ ಇದ್ದು, 3 ರಿಂದ 4 ಡಿಮೆರಿಟ್ ಅಂಕ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಜೊಹನ್ಸ್ ಬರ್ಗ್ ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ನಿಂದ ನಿಷೇಧಗೊಳ್ಳುವ ಸಾಧ್ಯತೆಯಿದೆ.

    ಆಸ್ಟ್ರೇಲಿಯಾ ಪ್ರಧಾನಿ ಕೂಡ ಘಟನೆ ಕುರಿತು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಿತ್ ತಮ್ಮ ನಾಯಕತ್ವ ಸ್ಥಾನ ಕಳೆದು ಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.