Tag: Caller tune

  • ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ನವದೆಹಲಿ: ಕೋವಿಡ್-19 ಪ್ರಕರಣಗಳ ಇಳಿಕೆಯ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಾಲರ್ ಟ್ಯೂನ್ ಅನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

    ಕೋವಿಡ್-19 ಕಾಲರ್ ಟ್ಯೂನ್ ಅನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಹಬ್ಬಿದಾಗ ಪ್ರಾರಂಭಿಸಲಾಯಿತು. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ

    COVIDಏರ್‌ಟೆಲ್, ಬಿಎಸ್‍ಎನ್‍ಎಲ್, ರಿಲಯನ್ಸ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್‌ಗಳು ತಮ್ಮ ಕಾಲರ್ ಟ್ಯೂನ್‍ಗಳನ್ನು ಮಾರ್ಚ್ 2020ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದರು. ಆರಂಭದಲ್ಲಿ ಕೋವಿಡ್-19 ನಲ್ಲಿನ ಕಾಲರ್ ಟ್ಯೂನ್‍ಗಳಲ್ಲಿ ಜನರು ಕೆಮ್ಮುವುದು, ಸೀನುವುದು ಮತ್ತು ನಂತರ ಕೊರೊನಾ ವೈರಸ್‍ನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಲಹೆಯೊಂದಿಗೆ ಪ್ರಾರಂಭವಾಗುತ್ತಿತ್ತು. ಇದನ್ನೂ ಓದಿ: ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ನಂತರದಲ್ಲಿ ಅದನ್ನ ಬದಲಾಯಿಸಲಾಯಿತು. ಹೊಸ ಸಂದೇಶವು ಜನರನ್ನು ಲಸಿಕೆ ಹಾಕುವಂತೆ ಮಾಹಿತಿ ನೀಡುತ್ತಿದೆ. ಪ್ರತಿ ತಿಂಗಳು ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಮವಾರ ಭಾರತದಲ್ಲಿ 1,270 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

  • ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ನವದೆಹಲಿ: ವ್ಯಾಕ್ಸಿನ್ ಪಡೆಯುವ ಕುರಿತು ಜಾಗೃತಿಯ ಕಾಲರ್ ಟ್ಯೂನ್ ಬಗ್ಗೆ ದೆಹಲಿ ಹೈ ಕೋರ್ಟ್ ಕಿಡಿ ಕಾರಿದ್ದು, ಸಾಕಷ್ಟು ವ್ಯಾಕ್ಸಿನ್ ಇಲ್ಲ, ಹೀಗಿರುವಾಗ ಜನ ಹೇಗೆ ಲಸಿಕೆ ಪಡೆಯಬೇಕು? ಕಿರಿಕಿರಿಯುಂಟು ಮಾಡುವ ಈ ಕಾಲರ್ ಟ್ಯೂನ್‍ನ್ನು ಇನ್ನೂ ಎಷ್ಟು ದಿನ ಕೇಳಬೇಕು ಎಂದು ದೆಹಲಿ ಹೈ ಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರತಿ ಬಾರಿ ಕರೆ ಮಾಡಿದಾಗ ನೀವು ಕಿರಿಕಿರಿ ಉಂಟುಮಾಡುವ ಕಾಲರ್ ಟ್ಯೂನ್ ಪ್ಲೇ ಮಾಡುತ್ತಿದ್ದೀರಿ. ಇನ್ನೂ ಎಷ್ಟು ದಿನ ಇದನ್ನು ಕೇಳಬೇಕೋ ತಿಳಿಯುತ್ತಿಲ್ಲ. ನಿಮ್ಮ ಬಳಿ ಸಾಕಷ್ಟು ಲಸಿಕೆ ಲಭ್ಯತೆ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈ ಕೋರ್ಟ್ ಪ್ರಶ್ನಿಸಿದೆ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡುತ್ತಿದ್ದೀರಿ. ಯಾರಿಗೂ ಲಸಿಕೆ ಇಲ್ಲದಿದ್ದಾಗ, ಯಾರು ಲಸಿಕೆ ಹಾಕಿಸಿಕೊಳ್ಳಬೇಕು? ಈ ಸಂದೇಶದ ಅರ್ಥವೇನು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ಇಂತಹ ವಿಚಾರಗಳಲ್ಲಿ ಸರ್ಕಾರ ಆವಿಷ್ಕಾರಕವಾಗಿರಬೇಕು. ಕೇವಲ ಒಂದನ್ನು ತಯಾರಿಸಿ ಯಾವಾಗಲೂ ಅದನ್ನೇ ಹಾಕುವ ಬದಲು, ಇಂತಹ ಹೆಚ್ಚಿನ ಸಂದೇಶಗಳನ್ನು ಸಿದ್ಧಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಸ್ಥಿತಿಗೆ ಸ್ಪಂದಿಸಬೇಕು. ಹೀಗಾಗಿ ವಿವಿಧ ರೀತಿಯ ಹೆಚ್ಚು ಸಂದೇಶಗಳನ್ನು ತಯಾರಿಸಿ, ಪ್ರತಿ ಬಾರಿ ಬೇರೆ ಬೇರೆ ಕಾಲರ್ ಟ್ಯೂನ್ ಕೇಳಿದಾಗ ಅವರಿಗೆ ಸಹಾಯವಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.

    ಟಿವಿ ನಿರೂಪಕರು ಹಾಗೂ ನಿರ್ಮಾಪಕರ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ, ಈ ಮೂಲಕ ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿ. ನಾವು ಸಮಯವನ್ನು ಕಳೆಯುತ್ತಿದ್ದೇವೆ. ಕೊರೊನಾ ನಿರ್ವಹಣೆ ಮಾಹಿತಿಯನ್ನು ಟಿವಿ, ಮುದ್ರಣ ಮಾಧ್ಯಮ ಹಾಗೂ ಕಾಲರ್ ಟ್ಯೂನ್‍ಗಳ ಮೂಲಕ ಪ್ರಸಾರ ಮಾಡಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಮೇ.18ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.

  • ಕೊರೊನಾ ಕಾಲರ್ ಟ್ಯೂನ್‍ಗೆ ಧ್ವನಿಯಾಗಿದ್ದು ಮಂಗ್ಳೂರು ಬೆಡಗಿ

    ಕೊರೊನಾ ಕಾಲರ್ ಟ್ಯೂನ್‍ಗೆ ಧ್ವನಿಯಾಗಿದ್ದು ಮಂಗ್ಳೂರು ಬೆಡಗಿ

    ಮಂಗಳೂರು: ‘ನೋವೆಲ್ ಕೊರೊನಾ ವೈರಸ್ ಹರಡುದನ್ನು ತಡೆಗಟ್ಟಬಹುದಾಗಿದೆ. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂವಿನಿಂದ ನಿಮ್ಮ ಬಾಯಿ ಮುಚ್ಚಿ’. ಹೀಗಂತ ಕನ್ನಡಿಗರು ಕಾಲ್ ಮಾಡುವಾಗ ಬರುವ ಕನ್ನಡ ಕಾಲರ್ ಟ್ಯೂನ್ ನಾವು ನೀವೆಲ್ಲ ಕೇಳಿರುತ್ತೀವಿ, ಕೊರೊನಾ ವಕ್ಕರಿಸಿದ ಮೇಲೆ ಕೊರೊನಾಗಿಂತ ಜಾಸ್ತಿ ಕಾಡಿದ್ದು ಇದೇ ಕೊರೋನಾ ವಾಯ್ಸ್.

    ಹೌದು. ಕೊರೊನಾ.. ಕೊರೊನಾ.. ಕೊರೊನಾ.. ವಿಶ್ವದೆಲ್ಲೆಡೆ ಅದೇ ಸುದ್ದಿ. ಯಾರೊಂದಿಗಾದರೂ ಕಾಲ್ ಮಾಡಿ ನೆಮ್ಮದಿಯಿಂದ ಮಾತಡೋಣ ಅಂದ್ರೂ, ಮೊದಲು ಬರೋದು ಕೂಡ ಕೊರೊನಾ ತಡೆಗಟ್ಟಿ ಎನ್ನುವ ಕಾಲರ್ ಟ್ಯೂನ್. ಹಲವು ಮಂದಿ ಇದ್ರಿಂದ ಕಿರಿಕಿರಿ ಅಂತ ಸಾಮಾಜಿಕ ಜಾಲತಾಣದಲ್ಲಿ ಬೇಸರ ಕೂಡ ವ್ಯಕ್ತಪಡಿಸಿದ ಉದಾಹರಣೆಗಳಿವೆ. ಆದರೆ ಎಲ್ಲರಿಗೂ ಇದರ ಹಿಂದಿನ ಧ್ವನಿ ಯಾರದ್ದು ಅಂತ ಕುತೂಹಲ ಕೂಡ ಇತ್ತು. ಆದ್ರೀಗ ಯಾರ ಧ್ವನಿ ಅಂತ ಗೊತ್ತಾಗಿದ್ದು, ಕಾಲರ್ ಟ್ಯೂನ್ ಧ್ವನಿ ನೀಡಿದ್ದು ಮತ್ಯಾರು ಅಲ್ಲ ಅವರೇ ನಮ್ಮ ಮಂಗಳೂರ್ ಹುಡುಗಿ, ಬಹುಮುಖ ಪ್ರತಿಭೆ ಮಂಗಳೂರಿನ ಡಾರೆಲ್ ಜೆಸಿಕಾ ಫೆರ್ನಾಂಡಿಸ್. ಮಂಗಳೂರಿನ ಪಡೀಲ್ ನಿವಾಸಿ ದಿವಂಗತ ವೆಲೇರಿಯನ್ ಫೆರ್ನಾಂಡಿಸ್ ಹಾಗೂ ಲವಿನಾ ಫೆರ್ನಾಂಡಿಸ್ ರವರ ಪುತ್ರಿ.

    ಕನ್ನಡದಲ್ಲಿ ಒಟ್ಟು ಮೂರು ಹಂತದಲ್ಲಿ ಜಾಗೃತಿ ಧ್ವನಿ ಬಂದಿವೆ. ಅದರಲ್ಲಿ ಮೊದಲನೆಯದ್ದು, ಮಂಗಳೂರಿನ ಪಡೀಲ್ ಮೂಲದ ಡಾರೆಲ್ ಜೆಸಿಕಾ ಫೆರ್ನಾಂಡಿಸ್ ಅವರ ಧ್ವನಿಯಾಗಿದೆ. ಎಂಪಿಎಡ್ ಪದವಿ ಪಡೆದ ಇವರು ಸ್ವಲ್ಪ ಸಮಯ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2013ರಲ್ಲಿ ದೆಹಲಿಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಇವರ ಧ್ವನಿಯನ್ನು ಗುರುತಿಸಿದ ಶಾಲಾ ಸಂಚಾಲಕರಾಗಿದ್ದ ವಾಯ್ಸ್ ಓವರ್ ಆರ್ಟಿಸ್ಟ್, ಖ್ಯಾತ ಯಕ್ಷಗಾನ ಕಲಾವಿದ ಕೃಷ್ಣ ಭಟ್  ಅವರು, ಜೆಸಿಕಾ ಫೆರ್ನಾಂಡಿಸ್ ಅವರಿಗೆ ವಾಯ್ಸ್ ಓವರ್ ನೀಡಲು ಅವಕಾಶ ಮಾಡಿಕೊಟ್ಟರು.

    ಡಾರೆಲ್ ಜೆಸಿಕಾ ಫೆರ್ನಾಂಡಿಸ್ ಅವರು ರೆಡಿಯೋ ಹಾಗೂ ಟಿವಿಗಳಲ್ಲಿ ಬರುವ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ್ದರು. ಹೀಗಾಗಿ ಇವರಿಗೆ ಕೊರೊನಾ ಜಾಗೃತಿಯ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು. ಪತಿ ಚಂಡೀಗಢದಲ್ಲಿ ಸೈನಿಕರಾಗಿರುವುದರಿಂದ ಜೆಸಿಂತಾ ಫೆರ್ನಾಂಡೀಸ್ ಕೂಡ ಸದ್ಯ ಚಂಡೀಗಢದಲ್ಲಿದ್ದಾರೆ.

    ಇಷ್ಟು ದಿನ ಯಾರದಪ್ಪ ಈ ಧ್ವನಿ ಅಂತ ತಲೆ ಕೆರೆದುಕೊಳ್ಳುವವರಿಗೆ ಇದೀಗ ಉತ್ತರ ಸಿಕ್ಕಿದೆ. ಜಗತ್ತಿಗೆ ಬಾಧಿಸಿದ ಮಹಾಮಾರಿಯನ್ನು ಓಡಿಸಲು ಜಾಗೃತಿಯ ಸಂದೇಶ ಧ್ವನಿ ನೀಡಿದ್ದು,ನಮ್ಮ ಕರಾವಳಿಯ ಯುವತಿ ಅನ್ನೋದು ವಿಶೇಷ. ಇಷ್ಟೇ ಅಲ್ಲದೇ ಡಾರೆಲ್ ಜೆಸಿಕಾ 200ಕ್ಕೂ ಅಧಿಕ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತಿಗೆ ಧ್ವನಿ ನೀಡಿದ್ದಾರೆ ಅನ್ನೋದು ವಿಶೇಷ.