Tag: calf

  • ಕರು ತಪ್ಪಿಸಲು ಹೋಗಿ ಕಾರು ಪಲ್ಟಿ- ಮೂವರ ಸ್ಥಿತಿ ಗಂಭೀರ

    ಕರು ತಪ್ಪಿಸಲು ಹೋಗಿ ಕಾರು ಪಲ್ಟಿ- ಮೂವರ ಸ್ಥಿತಿ ಗಂಭೀರ

    – ಬಾವಿ ಅಗೆಯುವಾಗ ಮಣ್ಣು ಕುಸಿದು ಕಾರ್ಮಿಕ ಸಾವು

    ಚಿಕ್ಕಮಗಳೂರು: ರಸ್ತೆ ಮಧ್ಯೆ ಕಾರಿಗೆ ಅಡ್ಡ ಬಂದ ಕರುವನ್ನ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿಯಾಗಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಗ್ರಾಮದ ಬಳಿ ನಡೆದಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಕೃಷ್ಣಮೂರ್ತಿ, ವೀಣಾ ಹಾಗೂ ಚಾಲಕ ಮೂವರು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕಾರು ಹೊಂಡಕ್ಕೆ ಪಲ್ಟಿಯಾದ ರಭಸಕ್ಕೆ ಕೃಷ್ಣಮೂರ್ತಿ ಅವರಿಗೆ ಕಾಲು ಮುರಿದಿದ್ದು, ಮೂವರಿಗೂ ಗಂಭೀರ ಗಾಯಗಳಾಗಿವೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಲ್ಲೆಯ ಕಳಸ ತಾಲೂಕಿನಲ್ಲಿ ಬಾವಿ ಅಗೆಯುವಾಗ ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿನನ್ನು 45 ವರ್ಷದ ಮನೋಜ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಕಳಸ ತಾಲೂಕಿನ ಯಡೂರು ಬಳಿ ಬಾವಿ ಅಗೆಯುವಾಗ ದುರಂತ ಸಂಭವಿಸಿದೆ. ನಿನ್ನೆ ಕಳಸ ಸುತ್ತಮುತ್ತ ಭಾರೀ ಮಳೆ ಸುರಿದಿತ್ತು. ಈ ಹಿನ್ನೆಲೆ ಮಣ್ಣು ತೇವಾಂಶದಿಂದ ಕೂಡಿದ್ದು, ಇಂದು ಬಾವಿ ಪಕ್ಕದಲ್ಲಿ ಮಣ್ಣು ಅಗೆಯುವಾಗ ಏಕಾಏಕಿ ಮಣ್ಣು ಕುಸಿದು ಬಿದ್ದಿದ್ದರಿಂದ ಮೇಲೆ ಏಳಲು ಸಾಧ್ಯವಾಗದೇ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂರು ಕರುಗಳಿಗೆ ಜನ್ಮನೀಡಿದ ಹಸು

    ಮೂರು ಕರುಗಳಿಗೆ ಜನ್ಮನೀಡಿದ ಹಸು

    ಕೋಲಾರ: ಹಸು ಮೂರು ಕರುಗಳಿಗೆ ಜನ್ಮ ನೀಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಆವಲಕುಪ್ಪ ಗ್ರಾಮದಲ್ಲಿ ನಡೆದಿದೆ.

    ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ. ಈ ಹಿಂದೆ ಹಸು ಮೂರು ಬಾರಿ ಒಂದೊಂದು ಕರುವಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿದೆ. ಮೂರು ಕರುವನ್ನು ನೋಡಿ ಸ್ಥಳಿಯರು ಸಂತೋಷ ಪಟ್ಟಿದ್ದಾರೆ.

    ರೈತ ನಾರಾಯಣಸ್ವಾಮಿ ಹಾಗು ಭಾಗ್ಯಮ್ಮ ದಂಪತಿಗಳಿಗೆ ಸೇರಿದ ಹಸು ಇದಾಗಿದೆ. 2 ಹೆಣ್ಣು ಹಾಗೂ 1 ಗಂಡು ಕರುವಿಗೆ ಹಸು ಜನ್ಮ ನೀಡಿದೆ. ಪಶು ವೈದ್ಯ ವೆಂಕಟೇಶ್ ಅವರು ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ. ಕರು ಮತ್ತು ಹಸು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

  • 2 ತಲೆ ಇರುವ ಕರುವಿಗೆ ಜನ್ಮ ನೀಡಿದ ಎಮ್ಮೆ

    2 ತಲೆ ಇರುವ ಕರುವಿಗೆ ಜನ್ಮ ನೀಡಿದ ಎಮ್ಮೆ

    ಲಕ್ನೋ: ಎಮ್ಮೆಯೊಂದು 2 ತಲೆ ಇರುವ ಕರುವಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ವಾರಣಾಸಿಯ ಕ್ಯಾಂಟ್ ಪ್ರದೇಶದ ಸಿಕ್ರೋಲ್‍ನ ಮೆನೆಯೊಂದರಲ್ಲಿ ಸಾಕಿದ್ದ ಎಮ್ಮೆ ಇಂದು ಬೆಳಗ್ಗೆ ಹೆರಿಗೆ ನೋವಿನಿಂದ ಒದ್ದಾಡುತ್ತಿತ್ತು. ಕರುವನ್ನು ಹೊರಗೆ ತೆಗೆಯಲು ನೆರೆಹೊರೆಯವರು ಕಷ್ಟ ಪಟ್ಟಿದ್ದಾರೆ ಆದರೆ ಕರು ಮಾತ್ರ ಹೊರಗೆ ಬಂದಿಲ್ಲ.

    ಕರುವನ್ನು ಹೊರಗೆ ತೆಗೆಯಲು ಹರಸಾಹಸಪಟ್ಟಿದ್ದಾರೆ. ಈ ವೇಳೆ 2 ತಲೆ ಕಾಣಿಸಿಕೊಂಡಿದೆ. ಆಗ 2 ಕರುಗಳು ಇರಬಹುದು ಎಂದು ಆಶ್ಚರ್ಯದಿಂದ ನೋಡ ತೊಡಗಿದ್ದಾರೆ. ಕರು ಹೊರಗೆ ಬಂದಿದೆ. ಆಗ ಒಂದು ದೇಹ 2 ತಲೆ ಇರುವ ಕರುವನ್ನು ಕಂಡು ಜನರು ಆಶ್ಚರ್ಯ ಜೊತೆಗೆ ಭಯಗೊಂಡಿದ್ದಾರೆ.

    ಈ ಸುದ್ದಿತಿಳಿಯುತ್ತಿದ್ದಂತೆ ಹಳ್ಳಿಯ ಸುತ್ತಮುತ್ತಲಿನ ಊರಿನವರು ಕರುವನ್ನು ನೋಡಲು ಬಂದಿದ್ದಾರೆ. ಎಮ್ಮೆ ಕರುವನ್ನು ನೋಡಿ ಸ್ಥಳಿಯರು ಆಶ್ಚರ್ಯ ಪಟ್ಟಿದ್ದಾರೆ. ಎಮ್ಮೆ ಮತ್ತು ಕರು ಆರೋಗ್ಯವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಹಾಲು ಕುಡಿಯೋ ವಯಸ್ಸಲ್ಲಿ ಹಸಿವಿನಿಂದ ನರಳಾಟ – 20 ದಿನದಲ್ಲಿ 10ಕ್ಕೂ ಹೆಚ್ಚು ಕರುಗಳು ಸಾವು

    ಹಾಲು ಕುಡಿಯೋ ವಯಸ್ಸಲ್ಲಿ ಹಸಿವಿನಿಂದ ನರಳಾಟ – 20 ದಿನದಲ್ಲಿ 10ಕ್ಕೂ ಹೆಚ್ಚು ಕರುಗಳು ಸಾವು

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೆಲವು ರೈತರು ತಮ್ಮ ಮನೆಗಳಲ್ಲಿ ಜನಿಸಿದ ಗಂಡು ಕರುಗಳನ್ನು ಹುಟ್ಟಿದ ಮೂರ್ನಾಲ್ಕು ದಿನಕ್ಕೆ ತಂದು ಕೆ.ಆರ್.ಪೇಟೆ ತಾಲೂಕಿನ ಗವಿರಂಗನಾಥ ಸ್ವಾಮಿ ದೇವಾಲಯದ ಬಳಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಹಾಲು ಕುಡಿಯುವ ಎಳೆಯ ವಯಸ್ಸಿನ ಕರುಗಳು ಹಸಿವಿನಿಂದ ನರಳಿ ನರಳಿ ಸಾಯುತ್ತಿವೆ.

    ಗವಿರಂಗನಾಥ ಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧಿ ಪಡೆದುಕೊಂಡಿದ್ದು, ಇಲ್ಲಿ ಹರಕೆ ಹೊತ್ತುಕೊಂಡ್ರೆ ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆ ಇದೆ. ಅದರಂತೆ ಹರಕೆ ಹೊತ್ತವರು ದೇವರಲ್ಲಿ ಬೇಡಿಕೊಂಡ ಕಾರ್ಯ ಸಿದ್ಧಿಸಿದ ಬಳಿಕ ಕರುಗಳನ್ನು ಇಲ್ಲಿಗೆ ತಂದು ಬಿಟ್ಟೋಗುವ ಪದ್ಧತಿ ಮಾಡಿಕೊಂಡು ಬರಲಾಗುತ್ತಿದೆ. ತಮ್ಮ ಮನೆಯಲ್ಲಿ ಜನಿಸಿದ ಗಂಡು ಕರು ಅಥವಾ ಹೆಣ್ಣು ಕರುಗಳನ್ನು ಕೆಲವು ತಿಂಗಳು ಸಾಕಿ ಮೇವು ತಿನ್ನುವುದನ್ನು ಕಲಿತ ಬಳಿಕ ತಂದು ದೇವಾಲಯದ ಬಳಿ ಬಿಡುತ್ತಿದ್ದರು. ಆದರೆ ಇದೀಗ ಗಂಡು ಕರುಗಳನ್ನಷ್ಟೇ ಬಿಟ್ಟೋಗುತ್ತಿದ್ದಾರೆ. ಅದರಲ್ಲೂ ಎಳೆಯ ಕರುಗಳನ್ನು ಬಿಟ್ಟೋಗುತ್ತಿರುವುದರಿಂದ ಅವುಗಳು ಪೋಷಣೆ ಇಲ್ಲದೇ ಸಾಯುತ್ತಿವೆ.

    ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ಗಂಡು ಕರುಗಳನ್ನು ತಂದು ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ 20 ದಿನಗಳಲ್ಲಿ 10ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ನಾರಾಯಣಗೌಡ, ಯಾವುದೇ ಕಾಯ್ದೆಯನ್ನೂ ಒಂದೇ ಬಾರಿಗೆ ಜಾರಿಗೊಳಿಸಲು ಆಗಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಮಂಡ್ಯದಲ್ಲಿ ಗಂಡು ಕರುಗಳ ಸಾವಿನ ಬಗ್ಗೆ ಗಮನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ದೇವಸ್ಥಾನದ ಬಳಿ ಗೋ ಶಾಲೆ ಆರಂಭಿಸಿ ಇಲ್ಲಿಗೆ ತಂದು ಬಿಡುವ ಕರುಗಳನ್ನ ರಕ್ಷಣೆ ಮಾಡುವಂತಹ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಬೇಕೆಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.

  • ದಾಳಿ ಮಾಡಲು ಬಂದ ಕರುವಿಗೆ ಹೊಡೆದು, ಕಾಲಿನಿಂದ ಒದ್ದು, ಇಟ್ಟಿಗೆಯಿಂದ ಹಲ್ಲೆಗೈದ!

    ದಾಳಿ ಮಾಡಲು ಬಂದ ಕರುವಿಗೆ ಹೊಡೆದು, ಕಾಲಿನಿಂದ ಒದ್ದು, ಇಟ್ಟಿಗೆಯಿಂದ ಹಲ್ಲೆಗೈದ!

    – ಪೊಲೀಸರಿಂದ ವ್ಯಕ್ತಿಯ ಬಂಧನ
    – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ನವದೆಹಲಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕರುವೊಂದು ದಾಳಿಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ದಾರಿಹೋಕ ಇಟ್ಟಿಗೆಯಿಂದ ಕರುವಿಗೆ ಹೊಡೆದಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದಂತೆ, ಪ್ರಾಣಿ ಹಿಂಸೆಯ ಆರೋಪದಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಪೂರ್ವ ದೆಹಲಿಯ ವಿನೋದ್ ನಗರ ಪ್ರದೇಶದ ರಸ್ತೆಯಲ್ಲಿ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಹಸುವಿನೊಂದಿಗಿದ್ದ ಕರು ಏಕಾಏಕಿ ವ್ಯಕ್ತಿಯ ಮೇಲೆ ತಿವಿಯಲು ಬಂದಿದೆ. ಇದರಿಂದ ಕೆರಳಿದ ದಾರಿಹೋಕ ಕರುವಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದಾನೆ. ಪುನಃ ಸಮಾಧಾನಗೊಳ್ಳದೆ ಹತ್ತಿರದಲ್ಲಿದ್ದ ಇಟ್ಟಿಗೆಯನ್ನು ತೆಗೆದುಕೊಂಡು ಹಲವು ಬಾರಿ ಹೊಡೆದಿದ್ದಾನೆ. ಇದರಿಂದ ಕರುವಿಗೆ ಗಾಯಗಳಾಗಿವೆ. ಈ ದೃಶ್ಯ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕರುವಿಗೆ ದಾಳಿ ಮಾಡಿ ಗಾಯವಾಗುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಸ್ಥಳೀಯಾಡಳಿತದ ಅಧಿಕಾರಿಗಳು ಆಗಮಿಸಿ ಕರುವನ್ನು ರಕ್ಷಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಘಟನೆಯ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ ಪೊಲೀಸರು ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಈ ಕರಿತು ಟ್ವೀಟ್ ಮಾಡಿರುವ ಪೂರ್ವ ದೆಹಲಿಯ ಡಿಸಿಪಿ ಆರೋಪಿಯನ್ನು ಕಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಮೇಲಿನ ಕೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದರು.

  • ಹಾಲುಣಿಸಿ ಕರುವಿನ ಹಸಿವು ನೀಗಿಸುತ್ತಿರೋ ಶ್ವಾನ- ಪ್ರಾಣಿಗಳ ಬಾಂಧವ್ಯಕ್ಕೆ ಜನ ಮೂಕವಿಸ್ಮಿತ

    ಹಾಲುಣಿಸಿ ಕರುವಿನ ಹಸಿವು ನೀಗಿಸುತ್ತಿರೋ ಶ್ವಾನ- ಪ್ರಾಣಿಗಳ ಬಾಂಧವ್ಯಕ್ಕೆ ಜನ ಮೂಕವಿಸ್ಮಿತ

    ಚಿಕ್ಕಮಗಳೂರು: ಪ್ರತಿಯೊಂದು ಜೀವಿಗೂ ಜೀವನದ ಪಾಠ ಕಲಿಸುವುದು ಹಸಿವು. ಹೊಟ್ಟೆ ಹಸಿದವರ ಹಸಿವು ನೀಗಿಸುವವರೇ ಎಷ್ಟೋ ಜನರಿಗೆ ದೇವರಾಗಿರುತ್ತಾರೆ. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದಾಗ ಆ ಮಗುವನ್ನು ಮುದ್ದಾಡಿ ನನ್ನ ಮಗು ಎಂಬ ಭಾವನೆಯಿಂದ ತನ್ನ ಎದೆಯ ಹಾಲು ಕುಡಿಸುತ್ತಾಳೆ. ತಾಯಿ ಮಗುವಿನ ವಾತ್ಸಕ್ಕೆ ಬೆಲೆಯೇ ಕಟ್ಟಲಾಗುವುದಿಲ್ಲ. ಮನುಷ್ಯರಂತೆಯೇ ಮೂಕ ಪ್ರಾಣಿಗಳಿಗೆ ಕೂಡ ತನ್ನ ಮರಿಗಳ ಮೇಲೆ ಭಾವನೆಗಳಿರುತ್ತದೆ ಎಂಬುದಕ್ಕೆ ಶ್ವಾನವೊಂದು ಸಾಕ್ಷಿಯಾಗದೆ. ಆದ್ರೆ ಶ್ವಾನ ಇಲ್ಲಿ ತನ್ನ ಮರಿಯನ್ನು ಹೊರತುಪಡಿಸಿ ಮತ್ತೊಂದು ಪ್ರಾಣಿಗೆ ಪ್ರೀತಿಯಧಾರೆ ಎರೆದಿದೆ. ಶ್ವಾನವೊಂದು ಕರುವಿಗೆ ಹಾಲು ಕುಡಿಸಿ ಅದರ ಹಸಿವನ್ನು ನೀಗಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ನಾಯಿ ಮತ್ತು ಕರುವಿನ ಬಾಂಧವ್ಯಕ್ಕೆ ಜನ ಮೂಕವಿಸ್ಮಿತರಾಗಿದ್ದಾರೆ.

    ಹೌದು. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದ ನಿವಾಸಿ ಚಂದ್ರಣ್ಣ ಎಂಬವರ ಮನೆಯಲ್ಲಿ ನಾಯಿ ಸಾಕಿದ್ದರು. ಇತ್ತೀಚೆಗೆ ಹಸುವೊಂದು ಕರುವಾಕಿತ್ತು. ಸದ್ಯ ಕರುವಿಗೆ 4 ತಿಂಗಳಾಗಿದ್ದು, ಹಸು ಮೇಯಲು ಹೊರಕ್ಕೆ ಹೋದಾಗ ಕರುವಿನ ಹಸಿವನ್ನು ಈ ಶ್ವಾನ ನೀಗಿಸುತ್ತಿದೆ. ನಾಯಿ ತನ್ನ ಮರಿಗಳಿಗೆ ಹಾಲು ಉಣಿಸವುದರ ಜೊತೆ ಜೊತೆಗೆ ಕರುವಿಗೆ ಕೂಡ ಹಾಲುಣಿಸುತ್ತಿದೆ. ಜೊತೆಗೆ ಹಸು ಮೇಯಲು ಹೋದಾಗ ನಾಯಿ ಜೊತೆ ಕರು ಆಟವಾಡುತ್ತದೆ. ಇದನ್ನು ನೋಡಿದ ಊರಿನ ಜನ ಶ್ವಾನ ಮತ್ತು ಹಸುವಿನ ಅನುಬಂಧಕ್ಕೆ ಬೆರಗಾಗಿದ್ದಾರೆ.

    ಮೂಕ ಪ್ರಾಣಿಗಳೆ ಹಾಗೇ ಅವುಗಳಲ್ಲಿ ಮೇಲು- ಕೀಳು ಎಂಬ ಬೇಧ-ಭಾವವಿರುವುದಿಲ್ಲ. ನಿಸ್ವಾರ್ಥ ಮತ್ತು ಸ್ವಚ್ಛ ಮನಸ್ಸು ಹೊಂದಿರುತ್ತವೆ. ಈ ಮುಗ್ಧ ಪ್ರಾಣಿಗಳ ನಿಷ್ಕಲ್ಮಷ ಭಾವನೆಗಳಿಗೆ ಸಾಟಿ ಯಾವುದೂ ಇಲ್ಲ. ಮಾನವೀಯತೆಯೇ ಕಳೆದುಕೊಂಡಿರುವ ಜನರ ಮಧ್ಯೆ ಈ ಪ್ರಾಣಿಗಳ ಮುಗ್ಧತೆಗೆ ಬೆಲೆ ಕಟ್ಟಲು ಅಸಾಧ್ಯ ಅಂತ ಹೇಳಿದರೆ ತಪ್ಪಾಗಲಾರದು ಎಂಬುವುದಕ್ಕೆ ಈ ಅಪರೂಪದ ಘಟನೆಯೇ ಸಾಕ್ಷಿ.

  • ಕರು ದತ್ತು ಪಡೆದ ಮಕ್ಕಳಿಲ್ಲದ ದಂಪತಿ- 500 ಅತಿಥಿಗಳ ಸಮ್ಮುಖದಲ್ಲಿ ಕೇಶಮುಂಡನ

    ಕರು ದತ್ತು ಪಡೆದ ಮಕ್ಕಳಿಲ್ಲದ ದಂಪತಿ- 500 ಅತಿಥಿಗಳ ಸಮ್ಮುಖದಲ್ಲಿ ಕೇಶಮುಂಡನ

    ಲಕ್ನೋ: ಮಕ್ಕಳಿಲ್ಲದ ದಂಪತಿ ಬೇರೆಯವರ ಮಗುವನ್ನು ದತ್ತು ಪಡೆದು ಸಾಕುವುದನ್ನು ನೊಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಕರುವನ್ನು ದತ್ತು ಪಡೆದಿದ್ದು, ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ.

    ಉತ್ತರ ಪ್ರದೇಶದ ಶಹಜಾನ್‍ಪುರದ ರೈತರಾದ ವಿಜಯ್‍ಪಾಲ್ ಹಾಗೂ ಇವರ ಪತ್ನಿ ರಾಜೇಶ್ವರಿ ದೇವಿ ದಂಪತಿ ವಿವಾಹವಾಗಿ 15 ವರ್ಷಗಳು ಕಳೆದಿದ್ದು, ಮಕ್ಕಳಾಗಿಲ್ಲ. ಈ ಕೊರಗನ್ನು ನೀಗಿಸಲು ಅವರು ಕರು ದತ್ತು ಪಡೆದಿದ್ದಾರೆ. ಇದಕ್ಕೆ ಲಲ್ತು ಬಾಬಾ ಎಂದು ನಾಮಕರಣ ಮಾಡಿದ್ದಾರೆ. ವಿಜಯ್‍ಪಾಲ್ ಅವರ ತಂದೆ ಒಂದು ಹಸುವನ್ನು ತಂದಿದ್ದರು. ಅವರೇ ಹಸು ನೋಡಿಕೊಳ್ಳುತ್ತಿದ್ದರು. ಹಸು ಕರುವಿಗೆ ಜನ್ಮ ನೀಡಿದೆ. ಆದರೆ ಕೆಲ ದಿನಗಳಲ್ಲೇ ವಿಜಯ್ ಪಾಲ್ ಅವರ ತಂದೆ ಸಾವನ್ನಪ್ಪಿದರು. ಬಳಿಕ ಹಸು ಸಹ ಸಾವನ್ನಪ್ಪಿತು. ಆಗ ಕರು ಮಾತ್ರ ಉಳಿಯಿತು.

    ವಿಜಯ್‍ಪಾಲ್ ಹಾಗೂ ಪತ್ನಿ ರಾಜೇಶ್ವರಿ ಅವರು ತಮ್ಮ ಕುಟುಂಬ ಪೂರ್ಣವಾಗಬೇಕಾದರೆ ಕರು ಇರಲೇಬೇಕೆಂದು ದತ್ತು ಪಡೆದರು. ಮಾತ್ರವಲ್ಲದೆ ಕರುವಿಗೆ ಅದ್ಧೂರಿಯಾಗಿ ಕೇಶಮುಂಡನ ಸಹ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಎಲ್ಲ ಪದ್ಧತಿ ಅನುಸರಿಸಿ ಕೇಶಮುಂಡನ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರು ತುಂಬಾ ಸಂತಸಗೊಂಡಿದ್ದಾರೆ.

    ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 500 ಜನರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ಕೇಶಮುಂಡನ ಮಾಡಿದ್ದಾರೆ. ಕರು ಜನಿಸಿದಾಗಿನಿಂದ ನಮಗೆ ತುಂಬಾ ಹತ್ತಿರವೆನಿಸಿದೆ. ಹೀಗಾಗಿ ಲಲ್ತುನನ್ನು ನಮ್ಮ ಮಗನಂತೆ ಕಾಣುತ್ತೇವೆ. ಹಸುವನ್ನು ನಾವು ತಾಯಿಯಾಗಿ ಸ್ವೀಕರಿಸುವುದಾದರೆ, ಕರುವನ್ನು ಮಗನಂತೆ ಯಾಕೆ ಕಾಣಬಾರದು ಎಂದು ವಿಜಯ್ ಪಾಲ್ ತಿಳಿಸಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಉತ್ತರ ಪ್ರದೇಶ ಸರ್ಕಾರ ‘ನಿರಾಶ್ರಿತ್/ಬೆಸಹರಾ ಗೋವಂಶ ಸಹಭಾಗಿತಾ ಯೋಜನೆ’ ಜಾರಿಗೆ ತಂದಿದೆ. ಈ ಯೋಜನೆಯಡಿ ಹಸು ದತ್ತು ಪಡೆಯುವರಿಗೆ ಅದರ ನಿರ್ವಹಣೆಗಾಗಿ ಪ್ರತಿ ದಿನ 30 ರೂ.ನೀಡುತ್ತದೆ. ಉತ್ತರ ಪ್ರದೇಶದ ಸೆಮಿ ಅರ್ಬನ್ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನರು ಬೀದಿ ದನಗಳನ್ನು ದತ್ತು ಪಡೆಯಬಹುದು. ಪ್ರತಿ ಕಟುಂಬದವರು ನಾಲ್ಕು ದನಗಳನ್ನು ಸಾಕಬಹುದಾಗಿದೆ. ಇವರಿಗೆ ದಿನಕ್ಕೆ 30ರೂ. ನಿರ್ವಹಣಾ ವೆಚ್ಚವನ್ನು ಸರ್ಕಾರ ನೀಡಲಿದೆ.

  • ಕರುವಿಗಾಗಿ ಬೈಕ್ ಹಿಂದೆಯೇ ಕಿಲೋಮೀಟರ್ ದೂರ ಓಡಿದ ಎಮ್ಮೆ

    ಕರುವಿಗಾಗಿ ಬೈಕ್ ಹಿಂದೆಯೇ ಕಿಲೋಮೀಟರ್ ದೂರ ಓಡಿದ ಎಮ್ಮೆ

    ದಾವಣಗೆರೆ: ತನ್ನ ಕರುವಿಗಾಗಿ ಎಮ್ಮೆಯೊಂದು ಬೈಕ್ ಹಿಂದೆ ಕಿಲೋಮೀಟರ್ ದೂರ ಓಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಚಿಕಿತ್ಸೆಗಾಗಿ ಕರುವನ್ನು ಒಯ್ದರೆ ಜನ್ರನ್ನೇ ಹಿಂಬಾಲಿಸಿ ಓಡೋಡಿ ಬಂತು ತಾಯಿ ಹಸು!

    ಎಮ್ಮೆಯೊಂದು ಹೊಲದಲ್ಲಿಯೇ ಕರುವಿಗೆ ಜನ್ಮ ನೀಡಿದೆ. ಹೀಗಾಗಿ ಎಮ್ಮೆ ಮಾಲೀಕರು ಹೊಲದಿಂದ ಮನೆಗೆ ಕರುವನ್ನು ಬೈಕ್‍ನಲ್ಲಿ ಹಾಕಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಆದರೆ ಬೈಕಿನಲ್ಲಿ ಕರುವನ್ನು ಕರೆದುಕೊಂಡು ಹೋಗುವುದನ್ನು ನೋಡಿದ ಎಮ್ಮೆ ತನ್ನ ಕರುವಿಗಾಗಿ ಬೈಕ್ ಹಿಂದೆಯೇ ಓಡಿದೆ.

    ಎಮ್ಮೆ ತನ್ನ ಕರುವನ್ನು ನೋಡಲು ಪರಿತಪಿಸಿ ಬೈಕ್ ಹಿಂದೆಯೇ ಕಿಲೋಮೀಟರ್ ದೂರ ಓಡಿದೆ. ಬೈಕ್ ಹಿಂದೆ ಓಡುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಎಮ್ಮೆ ಹಿಂದೆ ಬೈಕಿನಲ್ಲಿ ಹೋಗುತ್ತಿದ್ದವರು ಇದನ್ನು ನೋಡಿ ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಬೈಕ್ ಹಿಂದೆಯೇ ಕರುವಿಗಾಗಿ ಎಮ್ಮೆಯೂ ಕೂಡ ತುಂಬ ವೇಗವಾಗಿ ಓಡುತ್ತಿರುವುದನ್ನು ಕಾಣಬಹುದಾಗಿದೆ.

  • ಅಮ್ಮನನ್ನು ಕದ್ದ ಕಳ್ಳರು, ಕಾರಿನ ಹಿಂದೆಯೇ ಓಡಿದ ಕರು

    ಅಮ್ಮನನ್ನು ಕದ್ದ ಕಳ್ಳರು, ಕಾರಿನ ಹಿಂದೆಯೇ ಓಡಿದ ಕರು

    ಚಿಕ್ಕಮಗಳೂರು: ದನಗಳ್ಳರು ಹಸುವನ್ನು ಗಾಡಿಗೆ ತುಂಬಿಕೊಂಡು ಹೋಗುವಾಗ ಕರು ಅದೇ ಗಾಡಿಯ ಹಿಂದೆ ಓಡಿ ಹೋಗಿರುವ ಕರುಣಾಜನಕ ಘಟನೆ ನಡೆದಿದೆ.

    ತಾಲೂಕಿನ ತೇಗೂರಿನಲ್ಲಿ ಘಟನೆ ನಡೆದಿದ್ದು, ಅಮ್ಮನನ್ನು ಕದ್ದೊಯ್ದ ಕಳ್ಳರ ಕಾರಿನ ಹಿಂದೆ ಕರು ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಕ ಪ್ರಾಣಿಯ ಅಮ್ಮನ ಪ್ರೀತಿ ಅನಾವರಣಗೊಂಡಿದೆ. ತಾಯಿಗಾಗಿ ಕರು ಓಡುವ ದೃಶ್ಯ ಕರುಳು ಹಿಂಡುವಂತಿದೆ. ಅಂಬಾ, ಅಂಬಾ ಎನ್ನು ಸುಮಾರು ದೂರ ಕಾರಿನ ಹಿಂದೆಯೇ ಓಡುತ್ತದೆ. ಆದರೆ ಕಟುಕರು ಮಾತ್ರ ಇದಾವುದನ್ನು ಲೆಕ್ಕಿಸದೆ ಹಸುವನ್ನು ಹೊತ್ತೊಯ್ಯುತ್ತಾರೆ.

    ಮಲೆನಾಡು ಭಾಗದಲ್ಲಿ ದನಗಳ್ಳರ ಹಾವಳಿ ವ್ಯಾಪಕವಾಗಿದೆ. ರಸ್ತೆ ಬದಿಯಲ್ಲಿರುವ ದನಗಳನ್ನು ಕ್ಸೈಲೋ, ಸ್ಕಾರ್ಪಿಯೋ ನಂತಹ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಇಷ್ಟು ದಿನ ರಸ್ತೆ ಬದಿಯಲ್ಲಿದ್ದ ದನಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರು, ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನೂ ಬಿಡುತ್ತಿಲ್ಲ. ಹೀಗೆ ಮನೆಯ ಪಕ್ಕದಲ್ಲಿ ಕಟ್ಟಿದ್ದ ಹಸುವನ್ನು ಕಳ್ಳರು ಕದ್ದೋಯ್ದಿದ್ದಾರೆ. ಈ ವೇಳೆ ಕರು ಸ್ವಲ್ಪ ದೂರ ಓಡಿ, ನಂತರ ಮೂಕರೋಧನೆ ಅನುಭವಿಸಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಸುವನ್ನ ಗಾಡಿಗೆ ತುಂಬುವ ರೀತಿ ಕೂಡ ಕರುಣೆಯೇ ಇಲ್ಲವೆಂಬಂತಿದೆ. ಕೆಲವರು ಇದೇ ರೀತಿ ಕದಿಯುವ ವೇಳೆ ಸಿಕ್ಕಿ ಬಿದ್ದಿದ್ದರು. ಇನ್ನೂ ಕೆಲವರು ದನವನ್ನು ಕಡಿದು ಮಾಂಸ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಅಲ್ಲದೆ ಗಾಡಿಗಳು ಅಪಘಾತವಾಗಿ ಇನ್ನೂ ಕೆಲವರು ಸಿಕ್ಕಿಬಿದ್ದಿದ್ದಾರೆ. ಇಷ್ಟೆಲ್ಲ ಆದರೂ ಕಳ್ಳತನ ಮಾತ್ರ ಕಡಿಮೆಯಾಗಿಲ್ಲ. ರೈತರ ಹಸುಗಳು ನಿತ್ಯ ಮಾಯವಾಗುತ್ತಿವೆ.

  • ತನ್ನ ಸೊಂಡಿಲಲ್ಲಿ ಬಾಟಲಿ ಹಿಡಿದು ಹಾಲು ಕುಡಿದ ಆನೆಮರಿ- ವಿಡಿಯೋ ವೈರಲ್

    ತನ್ನ ಸೊಂಡಿಲಲ್ಲಿ ಬಾಟಲಿ ಹಿಡಿದು ಹಾಲು ಕುಡಿದ ಆನೆಮರಿ- ವಿಡಿಯೋ ವೈರಲ್

    – ಆನೆಮರಿಯ ಮುಗ್ಧತೆಗೆ ನೆಟ್ಟಿಗರು ಫಿದಾ

    ನೈರೋಬಿ(ಕೀನ್ಯಾ): ಕೇರಳದಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಫೋಟಕ ಇಟ್ಟು ಹತ್ಯೆಗೈದಿದ್ದು, ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ದೇವರ ನಾಡಿನಲ್ಲಿ ನಡೆದ ಈ ಘಟನೆ ನಡೆಸಿದ ಕ್ರೂರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ವ್ಯಕ್ತವಾಗಿತ್ತು. ಈ ಮಧ್ಯೆ ಇದೀಗ ಕೀನ್ಯಾದಲ್ಲಿ ಆನೆಮರಿಯೊಂದು ಹಾಲು ಕುಡಿಯುತ್ತಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

    ಹೌದು. ಆನೆಮರಿ ಓಡಿಕೊಂಡು ಬಂದು ಪುಟ್ಟ ಮಕ್ಕಳಂತೆ ಬಾಟಲಿಯಲ್ಲಿ ಹಾಲು ಕುಡಿಯುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 39 ಸೆಕೆಂಡ್ ಇರೋ ಈ ವಿಡಿಯೋ ಟಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದು, ಇದೂವರೆಗೂ ಸಾವಿರಾರು ಬಾರಿ ವೀಕ್ಷಣೆಯಾಗಿದೆ.

    ವಿಡಿಯೋದಲ್ಲೇನಿದೆ..?
    ಶೆಲ್ಡ್ರಿಕ್ ವೈಲ್ಡ್ ಲೈಫ್ ಸಂಸ್ಥೆ ಸಿಬ್ಬಂದಿ, ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಆನೆಮರಿಗೆ ದಿನಾ ಬಾಟಲಿ ಮೂಲಕವೇ ಹಾಲು ಕೊಡುತ್ತಿದ್ದಾರೆ. ಆನೆ ಮರಿ ಕೂಡ ಬಾಟಲಿ ಕಂಡ ತಕ್ಷಣ ಸಿಬ್ಬಂದಿಯನ್ನು ಹಿಂಬಾಲಿಕೊಂಡು ಓಡೋಡಿ ಬಂದು ತನ್ನ ಸ್ಥಳದಲ್ಲಿ ನಿಂತು ಪುಟ್ಟ ಮಕ್ಕಳಂತೆ ಬಾಟಲಿಯಲ್ಲಿ ಹಾಲು ಕುಡಿಯುತ್ತದೆ. ಅದರಲ್ಲೂ ಬಾಟಲಿಯನ್ನು ತನ್ನ ಸೊಂಡಿಲಿನಲ್ಲಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವುದು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.

    https://twitter.com/SheldrickTrust/status/1270781636397989894

    ಆನೆಮರಿ ಹಾಲು ಕುಡಿಯುತ್ತಿರುವುದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಆ ವಿಡಿಯೋವನ್ನು ಶೆಲ್ಡ್ರಿಕ್ ವೈಲ್ಡ್ ಲೈಫ್ ಎಂಬ ಟ್ವಿಟ್ಟರ್ ಅಕೌಂಟಿನಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ ನೆಟ್ಟಿಗರು ಆನೆ ಮರಿಯ ಮುಗ್ಧತೆಯನ್ನು ಕಂಡು ಕಮೆಂಟ್ ಮಾಡಲು ಆರಂಭಿಸಿದ್ದಾರೆ.

    ಅದರಲ್ಲಿ ಒಬ್ಬರು ಯಾವ ರೀತಿಯ ಹಾಲನ್ನು ಅದಕ್ಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಬ್ಬಂದಿ, ನಮ್ಮ ಸಂಸ್ಥೆಯಲ್ಲೇ ಆನೆಮರಿಗಾಗಿ ವಿಶೇಷ ಹಾಲನ್ನು ತಯಾರಿಸಲಾಗುತ್ತಿದೆ. ಹೆಚ್ಚು ಪೌಷ್ಠಿಕಾಂಶ ಇರುವ ಹಾಲನ್ನು ನೀಡಲಾಗುತ್ತಿದೆ. ಅನೇಕ ಸಂಶೋಧನೆಗಳ ಬಳಿಕ ಆನೆಮರಿಗಾಗಿಯೇ ವಿಶೇಷ ಹಾಲು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.