Tag: Calcutta High Court allows BJP to conduct

  • ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    -ಆಡಳಿತಾರೂಢ ದೀದಿ ಸರ್ಕಾರಕ್ಕೆ ಮುಖಭಂಗ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಕೋಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ್ದು, ಅಲ್ಲದೇ ಕಾನುನೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿಯನ್ನು ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಏಕ ಸದಸ್ಯ ಪೀಠ ಸಹ ಯಾತ್ರೆಗೆ ತಡೆಹಿಡಿದಿತ್ತು. ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸೋಮವಾರ ಆದೇಶವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿತ್ತು.

    ಇಂದು ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಬಿಜೆಪಿಗೆ ಕೆಲ ಷರತ್ತುಗಳನ್ನು ವಿಧಿಸಿ, ಯಾತ್ರೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

    ಈ ಹಿಂದೆ ಕೂಚ್ ಬಿಹಾರ್ ನಿಂದ ಆರಂಭವಾಗಬೇಕಿದ್ದ ಬಿಜೆಪಿಯ `ರಥ ಯಾತ್ರೆ’ಗೆ ಕೋಲ್ಕತಾ ಹೈಕೋರ್ಟ್ ನ ಏಕ ಸದಸ್ಯ ಪೀಠ ಅನುಮತಿ ನಿರಾಕರಿಸಿತ್ತು. ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ರಥ ಯಾತ್ರೆಗೆ ಅನುಮತಿ ನೀಡುವ ಕುರಿತು ಬಿಜೆಪಿಯ ಮೂವರು ಸದಸ್ಯರ ತಂಡದೊಂದಿಗೆ ಚರ್ಚಿಸಿ, ಡಿಸೆಂಬರ್ 14 ರೊಳಗೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗೃಹ ಕಾರ್ಯದರ್ಶಿಗೆ ಸೂಚಿಸಿತ್ತು. ಆದರೆ ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv