Tag: cafe coffee day

  • ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು, ಈ ಪತ್ರವನ್ನು ಕೆಫೆ ಕಾಫಿ ಡೇ(ಸಿಸಿಡಿ) ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ನಿರ್ಧರಿಸಿದೆ.

    ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.ಈ ಸಭೆಯಲ್ಲಿ ಸಿದ್ಧಾರ್ಥ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆದಿದೆ.

    ಹಣಕಾಸು ವ್ಯವಹಾರ, ಲೆಕ್ಕ ಪರಿಶೋಧನೆ ಕಂಪನಿ ಇತರೇ ವಿಚಾರಗಳನ್ನು ತಿಳಿಸುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಸಿದ್ಧಾರ್ಥ್ ಅವರ ವೈಯಕ್ತಿಕ ಮಾಹಿತಿಗಳು ಇರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಗಂಭೀರವಾಗಿ ಸ್ವೀಕರಿಸಿದ್ದು ಕೂಲಂಕಷವಾಗಿ ತನಿಖೆ ಮಾಡಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.

    ಇಂದಿನ ಸಭೆಯಲ್ಲಿ ಎಸ್‍ವಿ ರಂಗನಾಥ್(ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ) ಅವರನ್ನು ಕಂಪನಿಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ನಿತಿನ್ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಕಾನೂನು ಸಲಹೆಗಾರರನ್ನಾಗಿ ಸಿರಿಲ್ ಅಮರಚಂದ್ ಮಂಗ್ಲದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ ಸಭೆಯನ್ನು ಆಗಸ್ಟ್ 8 ರಂದು ನಡೆಸಲು ತೀರ್ಮಾನಿಸಲಾಗಿದೆ.

  • ಕಾಫಿ ತೋಟದಲ್ಲಿ ‘ಕಾಫಿ ಕಿಂಗ್’ ಲೀನ

    ಕಾಫಿ ತೋಟದಲ್ಲಿ ‘ಕಾಫಿ ಕಿಂಗ್’ ಲೀನ

    ಚಿಕ್ಕಮಗಳೂರು: ಉದ್ಯಮಿ ವಿಜಿ ಸಿದ್ಧಾರ್ಥ್ ಹೆಗ್ಡೆ ಅವರ ಅಂತ್ಯಸಂಸ್ಕಾರವು ಸ್ವಗ್ರಾಮ ಬೇಲೂರಿನ ಚಿಕ್ಕನಹಳ್ಳಿಯ ಚೇತನಹಳ್ಳಿ ಎಸ್ಟೇಟ್ ನಿವಾಸದ ಬಳಿ ಸಾವಿರಾರು ಜನರ ಕಣ್ಣೀರಧಾರೆ ನಡುವೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು.

    ವಿಜಿ ಸಿದ್ಧಾರ್ಥ ಅವರ ಚಿತೆಗೆ ಹಿರಿಯ ಪುತ್ರ ಅಮರ್ತ್ಯ ಅಂತಿಮ ವಿಧಿವಿಧಾನ ನಡೆಸಿ ಪೂಜೆ ನಡೆಸಿದರು. ಬಳಿಕ ಪುತ್ರರಾದ ಅಮರ್ತ್ಯ ಮತ್ತು ಕಿರಿಯ ಪುತ್ರ ಇಶಾನ್ ಅಗ್ನಿ ಸ್ಪರ್ಶ ನೇರವೇರಿಸಿದರು. ಹಲಸು, ಶ್ರೀಗಂಧ, ಮಾವು, ಆಲದ ಮರದಿಂದ ಸಿದ್ಧಪಡಿಸಿರುವ ಚಿತೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

    ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ದಾರ್ಥ್ ಮೂರು ದಿನಗಳ ಹಿಂದೆ ಇಳಿ ಸಂಜೆ ನೇತ್ರಾವತಿ ಸೇತುವೆ ಮೇಲಿನಿಂದ ಕಣ್ಮರೆಯಾಗಿದ್ದರು. ಅವರಿಗಾಗಿ ನಿರಂತರವಾಗಿ ಮೂರು ದಿನ ಹುಡುಕಾಟ ನಡೆಸಲಾಗಿತ್ತು. ಸಿದ್ಧಾರ್ಥ್ ಅವರು ಹೊಯಿಗೆ ಬಜಾರಿನ ಅಳಿವೆ ಬಾಗಿಲಿನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಶವದ ರೂಪದಲ್ಲಿ ಪತ್ತೆಯಾದರು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕಣ್ಣಿಗೆ ಸಿದ್ದಾರ್ಥ್ ಮೃತದೇಹ ಕಂಡಿತ್ತು. ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರು, ಆಪ್ತರು, ಕಾಫಿಡೇ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.

    ಮಧ್ಯಾಹ್ನ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್‍ನಲ್ಲಿ ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ಅವರಣಕ್ಕೆ ತರಲಾಯಿತು. ಅಳಿಯ ಪಾರ್ಥಿವ ಶರೀರ ನೋಡಿದ ಹಿರಿಯ ಜೀವ ಎಸ್.ಎಂ.ಕೃಷ್ಣ ಮನಸ್ಸು ಭಾರವಾಗಿತ್ತು. ಕಪ್ಪು ಕನ್ನಡಕ ಅವರ ದುಃಖವನ್ನು ಮರೆ ಮಾಚಿತ್ತು. ಎಸ್‍ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಸಿದ್ದಾರ್ಥ್ ಧರ್ಮಪತ್ನಿ ಮಾಳವಿಕಾ, ತಾಯಿ ವಸಂತಿ ಕಣ್ಣಾಲಿಗಳು ತುಂಬಿಬಂದಿದ್ದವು. ಎಲ್ಲರ ದುಃಖದ ಕಟ್ಟೆ ಒಡೆದಿತ್ತು. ಮಕ್ಕಳಾದ ಅಮಥ್ಯ ಮತ್ತು ಇಶಾನ್‍ರ ಕಣ್ಣೀರ ಕೋಡಿ ನಿಲ್ಲಲೇ ಇಲ್ಲ. ಆದರೆ ಮೈಸೂರಿನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರಿಗೆ ಪುತ್ರನ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿಲ್ಲ.

    ಎಬಿಸಿ ಕಾಫಿ ಕ್ಯೂರಿಂಗ್ ಅವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ನೂರಾರು ರಾಜಕಾರಣಿಗಳು, ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು, ಕಾರ್ಮಿಕರು ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ಧಾರ್ಥ್ ಅವರನ್ನು ನೆನೆದು ಕಣ್ಣೀರಿಟ್ಟರು.

    ಕಾಫಿ ನಾಡು ಚಿಕ್ಕಮಗಳೂರಿಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೂ ಅವಿನಾಭಾವ ಸಂಬಂಧ. ಚಿಕ್ಕಮಗಳೂರಿನ ಬಹುತೇಕರು ಒಂದಲ್ಲ ಒಂದು ರೀತಿ, ಒಂದಲ್ಲ ಒಂದು ಕ್ಷಣದಲ್ಲಿ ಸಿದ್ಧಾರ್ಥ್ ಅವರಿಂದ ನೆರವು ಪಡೆದವರೇ. ಹೀಗಾಗಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಿದ್ಧಾರ್ಥ್ ಪಾರ್ಥಿವ ಶರೀರವನ್ನು ತರುವ ಮಾರ್ಗದುದ್ದಕ್ಕೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು. ಮಲೆನಾಡ ಹೆಬ್ಬಾಗಿಲು ಕೊಟ್ಟಿಗೆಹಾರ, ಬಣಕಲ್‍ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿತ್ತು. ಪಾರ್ಥಿವ ಶರೀರ ಬರುವಿಕೆಗಾಗಿ ಮಾರ್ಗದುದ್ದಕ್ಕೂ ಕಾದು ನಿಂತ ಸಾವಿರಾರು ಜನ, ವಾಹನ ನಿಲ್ಲಿಸಿ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು, ಹಾಸನ, ಮಡಿಕೇರಿ ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಾಫಿ ಕೆಲಸ ಸಂಪೂರ್ಣ ಸ್ತಬ್ಧವಾಗಿತ್ತು.

    ಸಿದ್ಧಾರ್ಥ್ ಅಕಾಲಿಕ ಅಗಲಿಕೆಗೆ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಆಪ್ತರ ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ. ಸಿದ್ದಾರ್ಥ್ ಬದುಕಿನ ವಿಚಾರದಲ್ಲಿ ದುಡುಕಿದ್ದಾರೆ. ಭಗವಂತ ಎಸ್‍ಎಂ ಕೃಷ್ಣ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದಾರ್ಥ್ ನಿಧನವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಇದು ದೇಶಕ್ಕೆ ದೊಡ್ಡ ನಷ್ಟ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿ ಹೋಗಿದೆ ಅಂತ ಸಂತಾಪ ಸೂಚಿಸಿದ್ದಾರೆ. ಅವರ ಈ ದಾರುಣ ಸಾವಿಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

    ಡಿಕೆ ಶಿವಕುಮಾರ್ ಮಾತನಾಡಿ, ಸಿದ್ಧಾರ್ಥ್ ನಮ್ಮ ರಾಜ್ಯದ ಆಸ್ತಿ. ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆ ಏನ್ ಬೇಕಾದರೂ ಮಾತಾಡಿಕೊಳ್ಳಲಿ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.

    ಖುದ್ದು ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮಾಜಿ ಸಚಿವ ಯು.ಟಿ ಖಾದರ್, ಸಂತಾಪ ಸೂಚಿಸಿದರು. ಶವ ಪತ್ತೆಯಾದ ರೀತಿಯನ್ನು ವಿವರಿಸಿದರು. ನೀರಿನ ಸೆಳೆತ, ವೇಗಕ್ಕೆ ಸಿದ್ಧಾರ್ಥ್ ಧರಿಸಿದ್ದ ಟೀ ಶರ್ಟ್ ಬಿಚ್ಚಿ ಹೋಗಿದೆ. ಸಿದ್ಧಾರ್ಥ್ ಪ್ಯಾಂಟಿನಲ್ಲಿ ಮೊಬೈಲ್, ಕರ್ಚಿಫ್ ಸಿಕ್ಕಿದೆ. ಕೈಯಲ್ಲಿ ಉಂಗುರ, ಡಿಜಿಟಲ್ ವ್ಹಾಚ್ ಇದೆ ಎಂದು ತಿಳಿಸಿದರು. ಶೃಂಗೇರಿ ಶಾಸಕ ರಾಜೇಗೌಡರರು ಆಪ್ತ ಮಿತ್ರ ಸಿದ್ಧಾರ್ಥ್ ಅವರನ್ನು ನೆನೆದು ಕಂಬನಿ ಮಿಡಿದರು.

    https://www.youtube.com/watch?v=zudpwA7rBm4

  • ಯಾವುದೇ ಕಾರಣಕ್ಕೂ ಕಾಫಿ ಡೇ ಸಂಸ್ಥೆ ಮುಚ್ಚಲ್ಲ: ಸಿಸಿಡಿ ಸಭೆಯಲ್ಲಿ ನಿರ್ಧಾರ

    ಯಾವುದೇ ಕಾರಣಕ್ಕೂ ಕಾಫಿ ಡೇ ಸಂಸ್ಥೆ ಮುಚ್ಚಲ್ಲ: ಸಿಸಿಡಿ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಯಾವುದೇ ಕಾರಣಕ್ಕೂ ಕೆಫೆ ಕಾಫಿ ಡೇ ಸಂಸ್ಥೆಯನ್ನು ಮುಚ್ಚದಿರುವ ಕುರಿತು ನಿರ್ದೇಶಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

    ನಗರದ ಮಲ್ಯ ಆಸ್ಪತ್ರೆ ಸಮೀಪ ಇರುವ ಕಚೇರಿಯಲ್ಲಿ ಸಂಸ್ಥೆಯ ಭವಿಷ್ಯದ ಕುರಿತು ಕೆಫೆ ಕಾಫಿ ಡೇ ಸಂಸ್ಥೆಯ ನಿರ್ದೇಶಕರಾದ ನಿತೀಶ್ ಬಾಗ್ಮನೆ, ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

    ಸಿಸಿಡಿಯ ಮುಂದಿನ ಕಾರ್ಯಚಟುವಟಿಕೆ ಬಗ್ಗೆ ನಿರ್ದೇಶಕರು ಸಭೆಯಲ್ಲಿ ಚರ್ಚಿಸಿದ್ದು, ಎಂತಹ ಬಿಕ್ಕಟ್ಟಿನ ಸಂದರ್ಭ ಎದುರಾದರೂ ಸಂಸ್ಥೆಯನ್ನು ಮುಚ್ಚದೇ ಮುಂದುವರಿಸಿಕೊಂಡು ಹೋಗುವ ಬಗ್ಗೆ ಬಹುತೇಕರು ಆಶಯ ವ್ಯಕ್ತಪಡಿಸಿದರು. ಹೀಗಾಗಿ ಸಿದ್ಧಾರ್ಥ್ ಕನಸಿನ ಕೂಸು ಕೆಫೆ ಕಾಫಿ ಡೇಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಬ್ಯಾಂಕ್‍ನಲ್ಲಿ ಸಾಲ ಮಾಡಿ ಹಾಗೂ ಕಾಫಿ ತೋಟವನ್ನು ಮಾರಿ ಸುಮಾರು 5 ಲಕ್ಷ ರೂ. ಹಣದಿಂದ 1993ರಲ್ಲಿ ಕಾಫಿ ಉದ್ದಿಮೆಗೆ ಸಿದ್ಧಾರ್ಥ್ ಕಾಲಿಟ್ಟಿದ್ದರು. ಕಾಫಿ ಡೇ ಪ್ರಾರಂಭಿಸುತ್ತಿದ್ದಂತೆ ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾಗಿದ್ದರು.

    1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1,772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ ವಿವಿಧ ಕಂಪನಿಗಳನ್ನು ಆರಂಭಿಸಿದ್ದರು.

  • ಬೆಂಗಳೂರಿನ ಸಿದ್ಧಾರ್ಥ್ ಕಚೇರಿಯಲ್ಲಿ ಮಂಗಳೂರು ಪೊಲೀಸರಿಂದ ತನಿಖೆ ಆರಂಭ

    ಬೆಂಗಳೂರಿನ ಸಿದ್ಧಾರ್ಥ್ ಕಚೇರಿಯಲ್ಲಿ ಮಂಗಳೂರು ಪೊಲೀಸರಿಂದ ತನಿಖೆ ಆರಂಭ

    ಬೆಂಗಳೂರು: ಕಾಫಿ ಕಿಂಗ್ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿದ್ದು, ಬೆಂಗಳೂರಿನ ಸಿದ್ಧಾರ್ಥ್ ಅವರ ಕಚೇರಿಯಲ್ಲಿ ಮಂಗಳೂರು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

    ಮಲ್ಯ ಆಸ್ಪತ್ರೆಯ ಬಳಿಯ ಸಿದ್ಧಾರ್ಥ್ ಅವರ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು ಎಂಟು ಜನ ಪೊಲೀಸರು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿದ್ಧಾರ್ಥ್ ಅವರು ಬಳಸುತ್ತಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಇದರ ಜೊತೆಯಲ್ಲಿ ಕಚೇರಿಯ ಕೆಲ ಸಿಬ್ಬಂದಿ ಬಳಿ ಮಾಹಿತಿ ಕಲೆಹಾಕುತ್ತಿದ್ದಾರೆ.

    ಸಿದ್ಧಾರ್ಥ್ ಕಚೇರಿಯಿಂದ ಹೊರಡುವ ಮುನ್ನ ಯಾರನ್ನು ಭೇಟಿಯಾಗಿದ್ದರು? ಕಳೆದ ಒಂದು ವಾರದಿಂದ ಕಚೇರಿಗೆ ಯಾರೆಲ್ಲ ಬಂದಿದ್ದರು? ಯಾರ ಜೊತೆ ಎಷ್ಟು ಹೊತ್ತು ಮಾತನಾಡಿದರು? ಶುಕ್ರವಾರ ಮೈಸೂರಿಗೆ ಹೋಗುವ ಮುನ್ನ ಯಾರನ್ನು ಭೇಟಿಯಾಗಿದ್ದರು ಎಂಬುದರ ಕುರಿತು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಸಿಬ್ಬಂದಿ ಬಳಿ ಸಹ ವಿವರ ಪಡೆಯುತ್ತಿದ್ದಾರೆ.

    ಕಚೇರಿಯ ಮೂವರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಸಿದ್ಧಾರ್ಥ್ ಅವರ ಚೇಂಬರ್‍ನಲ್ಲಿದ್ದ ಕೆಲವು ದಾಖಲೆಗಳನ್ನೂ ವಶ ಪಡಿಸಿಕೊಂಡಿದ್ದಾರೆ. ಹೊರಡುವ ಮುನ್ನ ಕಚೇರಿಯಲ್ಲಿಯೂ ಏನಾದರೂ ಬರೆದಿಟ್ಟಿದ್ದಾರಾ ಎನ್ನುವ ಬಗ್ಗೆ ಪೊಲೀಸರು ಪರಿಶೀಲಿಸಿದ್ದಾರೆ. ಅವಲ್ಲದೆ, ಸಿದ್ಧಾರ್ಥ್ ಅವರ ವರ್ಕಿಂಗ್ ಡೈರಿಯನ್ನು ವಶಕ್ಕೆ ಪಡೆದಿದ್ದು, ಐಟಿ ದಾಳಿ ಸಂದರ್ಭದಲ್ಲಿನ ಕೆಲವು ಮಾಹಿತಿಯನ್ನು ಸಹ ಕಲೆಹಾಕಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

    ಇಂದು ಬೆಳಗ್ಗೆ 6.30ಕ್ಕೆ ಕೆಫೆ ಕಾಫೀ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದರು. 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿತ್ತು.

  • ಸಿದ್ಧಾರ್ಥ್ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ: ಜಗ್ಗೇಶ್

    ಸಿದ್ಧಾರ್ಥ್ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ: ಜಗ್ಗೇಶ್

    ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ನವರಸನಾಯಕ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದಾರೆ.

    ಜಗ್ಗೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಗುರುಗಳು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕ ಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇ ಅಲ್ಲಿ ಕೆಲಸ ಕೊಟ್ಟವರು. ನನ್ನ ಗುರುಗಳು ಎಸ್.ಎಂ ಕೃಷ್ಣ ಹಾಗೂ ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ನಮ್ಮ ಮಂಡ್ಯ ಜಿಲ್ಲೆಯವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅವರ ಸಾವು ತೀವ್ರ ಆಘಾತ ತಂದಿದೆ. ಎಸ್.ಎಂ ಕೃಷ್ಣ ಅವರಿಗೂ ಹಾಗೂ ಅವರ ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಸಿದ್ಧಾರ್ಥ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಸೋಮವಾರ ರಾತ್ರಿ ಮಂಗಳೂರು ಕಾಸರಗೋಡು ಹೆದ್ದಾರಿ ಮಧ್ಯೆ ಇರುವ ಜಪ್ಪಿನಮೊಗರು ಎಂಬಲ್ಲಿ ಸೇತುವೆಯಿಂದ ಸಿದ್ಧಾರ್ಥ್ ನದಿಗೆ ಹಾರಿದ್ದರು. ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

  • ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಮಂಗಳೂರು: ಸೇತುವೆಯ 8ನೇ ಕಂಬದಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರರೊಬ್ಬರು ಕಣ್ಣಾರೆ ಕಂಡಿದ್ದಾರೆ.

    ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬರು ಜಪ್ಪಿನಮೊಗರು ಸೇತುವೆಯಿಂದ ಹಾರಿದ್ದನ್ನು ನಾನು ನೋಡಿದೆ ಎಂದು ಮೀನುಗಾರರೊಬ್ಬರು ನನಗೆ ತಿಳಿಸಿದ್ದಾರೆ ಎಂದು ಉಳ್ಳಾಲ ಶಾಸಕ ಯುಟಿ ಖಾದರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸೇತುವೆಯ ಎಂಟನೇ ಕಂಬದ ಮುಂಭಾಗದಿಂದ ವ್ಯಕ್ತಿಯೊಬ್ಬರು ನೀರಿಗೆ ಬಿದ್ದಿದ್ದರು. ನದಿಯಲ್ಲಿ ಸುಮಾರು 50 ಮೀಟರ್ ಅವರು ಸಾಗಿದ್ದಾರೆ. ವ್ಯಕ್ತಿ ನೀರಿಗೆ ಬೀಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಅವರು ನೀರಿಗೆ ಬೀಳುವಾಗ ನಾನು ಒಬ್ಬನೇ ಇದ್ದೆ. ಹಾಗಾಗಿ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಮೀನುಗಾರನೊಬ್ಬ ಹೇಳಿದ್ದಾರೆ. ಅವರ ಮಾಹಿತಿ ಆಧಾರಿಸಿ ಸೇತುವೆಯ ಎಂಟನೇ ಕಂಬದ ನೇರಕ್ಕೆ ಕಾರ್ಯಾಚರಣೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

    ಸೋಮವಾರ ರಾತ್ರಿಯಿಂದ ನಮ್ಮ ಜಿಲ್ಲಾಡಳಿತ, ಪೊಲೀಸರು ಬೇರೆ ಬೇರೆ ತಂಡದವರು ಸಕ್ರಿಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಸೋಮವಾರ ಇಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಿಂದ ಸಲಹೆ ಹಾಗೂ ಮಾಹಿತಿ ಪಡೆಯುತ್ತಿದ್ದೇವೆ. ಸಿದ್ಧಾರ್ಥ್ ಅವರು ಇಲ್ಲಿಯವರೆಗೆ ಬಂದಿರುವುದು ಎಲ್ಲರಿಗೂ ಗೊತ್ತು. ಬಳಿಕ ಏನಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದರು.

    ನೀರಿನಲ್ಲಿ ಏನಾದರೂ ಆಗಿರಬಹುದು ಎಂದು ಎಲ್ಲರಿಗೂ ಸಂಶಯ ಇದೆ. ಹಾಗಾಗಿ ನೀರಿನಲ್ಲಿ ಜಾಸ್ತಿ ಪಾಮುಖ್ಯತೆ ಕೊಡಲಾಗುತ್ತಿದೆ. ಬೇರೆ ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೇತ್ರಾವತಿ ಸೇತುವೆಯಿಂದ ಸಮುದ್ರಕ್ಕೆ ಒಂದೂವರೆ ಕಿ.ಮೀ ದೂರವಿದೆ. ಮೃತದೇಹ ಸಮುದ್ರಕ್ಕೆ ಮುಟ್ಟಿದ್ದರೆ, ಆಗ ಬಹಳ ಕಷ್ಟವಾಗುತ್ತದೆ. ಈಗಾಗಲೇ ಸಮುದ್ರದ ಬಳಿ ತಂಡ ಸಜ್ಜಾಗಿದೆ. ನದಿ ಸಮುದ್ರ ತಲುಪುವಂತಹ ಜಾಗದಲ್ಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಳೆ ಆಗುತ್ತಿರುವುದಿಂದ ಕಾರ್ಯಚರಣೆ ಅಡ್ಡಿಯಾಗುತ್ತಿದೆ. ಆದರೆ ಪ್ರತಿ ತಂಡ ಮಳೆ, ಗಾಳಿ ಎಂದು ಲೆಕ್ಕಿಸದೇ ಕಾರ್ಯಚರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ಕೂಡ ತಂದು ಇಟ್ಟಿದ್ದಾರೆ. ಹವಾಮಾನ ನೋಡಿ ಅಗತ್ಯ ಬಂದರೆ ಅದನ್ನು ಉಪಯೋಗಿಸಲಾಗುವುದು. ಹೆಲಿಕಾಪ್ಟರ್ ಬಳಸಲು ಸಲಹೆ ಸೂಚನೆ ಪಡೆಯುತ್ತಿದ್ದೇವೆ ಎಂದರು.

  • ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಚಿಕ್ಕಮಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ನೌಕರರು ಕಣ್ಣೀರು ಹಾಕುತ್ತಿದ್ದಾರೆ.

    ಚಿಕ್ಕಮಗಳೂರಿನಲ್ಲಿರುವ ಕಾಫಿ ಡೇಗೆ ಸೇರಿದ ಕಾಫಿ ಕ್ಯೂರಿಂಗ್ ಘಟಕದ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಕೆಲಸ ಕೊಟ್ಟ ಧಣಿಗೆ ಏನೂ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕಣ್ಣೀರು ಹಾಕುತ್ತಿದ್ದಾರೆ.

    ನಮಗೆಲ್ಲಾ ಅನ್ನ ಕೊಟ್ಟಂತಹ ಧಣಿಗೆ ಯಾವುದೇ ರೀತಿಯ ತೊಂದರೆ ಆಗದೇ ದೇವರು ಅವರನ್ನು ವಾಪಸ್ ಕಳುಹಿಸಲಿ. ನಾವು ಕಾಫಿ ಡೇ ಎಲ್ಲ ಸಿಬ್ಬಂದಿ ಸಂಬಳ ಬಿಟ್ಟು ಅವರಿಗೆ ತೊಂದರೆಯಾಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಪತ್ನಿಗೆ ಅವರು ಅನ್ನ ಕೊಟ್ಟ ದೇವರು. ಅವರು ಕ್ಷೇಮವಾಗಿ ಬರಲಿ ಎಂದು ಸಿಬ್ಬಂದಿಯೊಬ್ಬರು ಸಿದ್ಧಾರ್ಥ್ ಅವರನ್ನು ನೆನೆಸಿಕೊಂಡು ಭಾವುಕರಾದರು.

    ಸಿದ್ಧಾರ್ಥ್ ಅವರು ನನಗೆ 10 ವರ್ಷದಿಂದ ಅನ್ನ ಕೊಡುತ್ತಿದ್ದಾರೆ. ಅವರಿಗೆ ಏನೂ ಆಗಲ್ಲ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗಲ್ಲ. ಸಿದ್ಧಾರ್ಥ್ ಅವರು 50 ಸಾವಿರ ಜನರಿಗೆ ಅನ್ನ ನೀಡಿದ್ದು, ಎಲ್ಲವೂ ಒಳ್ಳೆಯದು ಆಗುತ್ತದೆ ಎಂದು ನೌಕರ ಕಣ್ಣೀರು ಹಾಕಿದ್ದಾರೆ.

    ಇತ್ತ ಸಿದ್ಧಾರ್ಥ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಕ್ಕೆ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ. ಸಿದ್ಧಾರ್ಥ್ ಅವರು ಎಬಿಸಿ ಸೇರಿದಂತೆ ಹಲವು ಕಂಪನಿಯ ಮಾಲೀಕರಾಗಿದ್ದು, ಆ ಕಂಪನಿಯಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದ ಕಾರಣ ಕಾರ್ಮಿಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.

    https://www.youtube.com/watch?v=9H9GW25r8zA

  • 5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    – ಕಂಪನಿ ಸಿಬ್ಬಂದಿ ಕಣ್ಣೀರು

    ಚಿಕ್ಕಮಗಳೂರು: ಖ್ಯಾತ ಉದ್ಯಮಿ ಸಿದ್ಧಾರ್ಥ್ ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

    ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ ಬಳಿಕ ನಾನು ಮುಂಬೈಗೆ ಹೋಗಬೇಕು, 5 ಲಕ್ಷ ರೂ. ಕೊಡಿ ಎಂದು ಪಟ್ಟು ಹಿಡಿದಿದ್ದರು. ಮಗನಿಗೆ ಹಣ ನೀಡಲು ಸಿದ್ಧಾರ್ಥ್ ಅವರ ತಂದೆ ಸ್ವಲ್ಪ ಜಮೀನು, ಜಾಗ ಮಾರಾಟ ಮಾಡಿದ್ದರು ಎಂದು ರುದ್ರೇಶ್ ಕಡೂರು ತಿಳಿಸಿದ್ದಾರೆ.

    ಅಂದು 5 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದ ಸಿದ್ಧಾರ್ಥ್ ಅವರು ಕೆಲವೇ ವರ್ಷಗಳಲ್ಲಿ ಪ್ರಪಂಚವೇ ಅವರತ್ತ ನೋಡುವಂತೆ ಬೆಳೆದರು. ಅವರನ್ನು ನಂಬಿ ಇಂದು ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ದನಿ ನಮ್ಮನ್ನ ಬಿಟ್ಟು ಎಲ್ಲಿಗೆ ಹೋದರು ಎನ್ನುವಷ್ಟು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂದಾಜು 13 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದಾರೆ. ಅವರ ವಿವಿಧ ಕಂಪನಿಗಳಲ್ಲಿ ಸುಮಾರು ಒಂದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಟಿವಿ ಆನ್ ಮಾಡುತ್ತಿದ್ದಂತೆ ಸಿದ್ಧಾರ್ಥ್ ಅವರು ನಾಪತ್ತೆ ಸುದ್ದಿ ಕೇಳಿ ದುಃಖವಾಯಿತು ಎಂದು ಭಾರವಾದ ಮನಸ್ಸಿನಿಂದ ಹೇಳಿದರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು, ಕರ್ನಾಟಕದ ಆಸ್ತಿ. ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅವರು ವಾಪಸ್ ಬರಲಿ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ತಿಳಿಸಿದರು.

  • ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ಕಂಕನಾಡಿ ಪೊಲೀಸರು ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.

    ಸೇತುವೆಗೆ ಬಂದ ಬಳಿಕ ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರು ಬಳಿ ಬಂದಿಲ್ಲ ಎಂದು ಬಸವರಾಜ್ ಹೇಳಿದ್ದಾರೆ.

    ಅಲ್ಲದೆ ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ನಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಎಸ್.ಎಂ ಕೃಷ್ಣ ಮನೆಗೆ ಪುನೀತ್ ರಾಜ್‍ಕುಮಾರ್ ಭೇಟಿ

    ಎಸ್.ಎಂ ಕೃಷ್ಣ ಮನೆಗೆ ಪುನೀತ್ ರಾಜ್‍ಕುಮಾರ್ ಭೇಟಿ

    ಬೆಂಗಳೂರು: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರು ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಎಸ್.ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.

    ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಎಸ್. ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿ ಅವರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡಿ ಧೈರ್ಯ ಹೇಳಿದ್ದಾರೆ.

    ಸೋಮವಾರ ರಾತ್ರಿಯಿಂದಲೇ ಅನೇಕ ಗಣ್ಯರು ಎಸ್.ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಿ ಕೃಷ್ಣ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡಿದ್ದಾರೆ. ಆತಂಕಕ್ಕೊಳಗಾಗಬೇಡಿ, ಸಿದ್ಧಾರ್ಥ್ ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬುದಾಗಿ ಹೇಳುತ್ತಾ ಬಿಎಸ್‍ವೈ ಅವರು ಕೃಷ್ಣ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

    ಎಸ್.ಎಂ ಕೃಷ್ಣ ಅವರ ಮನೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು, ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಮಾಧಾನ ಮಾಡುತ್ತಿದ್ದಾರೆ.