Tag: Cabinet Extension

  • ಮಧ್ಯಾಹ್ನ ಕ್ಷಮೆ ಕೇಳಿ ಸಂಜೆ ಕಿಡಿಕಾರಿದ ಪಂಚಮಸಾಲಿ ಶ್ರೀ- ಸ್ವಾಮೀಜಿಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು

    ಮಧ್ಯಾಹ್ನ ಕ್ಷಮೆ ಕೇಳಿ ಸಂಜೆ ಕಿಡಿಕಾರಿದ ಪಂಚಮಸಾಲಿ ಶ್ರೀ- ಸ್ವಾಮೀಜಿಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು

    ಬೆಂಗಳೂರು: ಪಂಚಮ ಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮೇಲೆ ಒತ್ತಡ ಹೇರಿದ್ದ ಪಂಚಮಸಾಲಿ ಮಠದ ಶ್ರೀಗಳ ವರ್ತನೆ ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೆ ಈಡಾಗಿದೆ. ಆದರೂ ವಚನಾನಂದಶ್ರೀಗಳ ವರ್ತನೆ ಬದಲಾದಂತೆ ಕಾಣುತ್ತಿಲ್ಲ. ಇವತ್ತು ಕೂಡ ಸಿಎಂ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಿನ್ನೆಯಿಂದ ಸ್ವಾಮೀಜಿಗಳ ವರ್ತನೆಗೆ ವಿರೋಧ ವ್ಯಕ್ತವಾದ ಕಾರಣ ವಚನಾನಂದ ಶ್ರೀ, ತಮ್ಮ ಭಕ್ತರಲ್ಲಿ ಕ್ಷಮೆ ಕೇಳಿದರು. ವೇದಿಕೆ ಮೇಲೆ ಆಡಿದ ಮಾತುಗಳಲ್ಲಿ ತಪ್ಪಿದ್ದರೆ ನಿಮ್ಮ ಮಗ ಅಂದ್ಕೊಂಡು ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ ಸಂಜೆ ಮತ್ತೆ ಉಲ್ಟಾ ಹೊಡೆದ ಪಂಚಮಸಾಲಿ ಶ್ರೀಗಳು,  ಸಿಎಂ ಯಡಿಯೂರಪ್ಪ ಹೆಸರೇಳದೇ ಕಿಡಿಕಾರಿದರು.

    ಅಧಿಕಾರ ಬೇಕು ಅಂದಾಗ ಓಡೋಡಿ ಬಂದು ನಮ್ಮ ಆಶೀರ್ವಾದ ಕೇಳುತ್ತೀರಿ. ನೀವು ಪವರ್ ಫುಲ್ ಆಗಲು ಸಮಾಜದ ಪವರ್ ಬೇಕು. ಆದರೆ ಸಮಾಜಕ್ಕೆ ಪವರ್ ಹಂಚಿಕೆ ಮಾಡಿ ಎಂದಾಗ ನಿಮಗೆ ಸಿಟ್ಟು ಬರುತ್ತೆ. ಇದು ಒಳ್ಳೆಯ ಸಂದೇಶವಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ಬೆಂಬಲಕ್ಕೆ ವಾಲ್ಮೀಕಿ ಮತ್ತು ಬೋವಿ ಶ್ರೀಗಳು ಇದ್ದಾರೆ. ನಾವೆಲ್ಲಾ ಸ್ವಾಮೀಜಿಗಳು ಒಂದೇ ಎಂದು ಹೇಳಿ ಸಿಎಂಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದರು.

    ಪಂಚಮಸಾಲಿ ಶ್ರೀಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು ವ್ಯಕ್ತವಾಗುತ್ತಿದೆ. ಕೆಲವರು ವಚನಾನಂದ ಸ್ವಾಮೀಜಿ ಪರ ಮಾತನಾಡಿದ್ದು, ಇನ್ನೂ ಕೆಲವರು ಶ್ರೀಗಳ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಪಂಚಮಸಾಲಿ ಮಠಾಧೀಶರ ಬೆಂಬಲಕ್ಕೆ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಧಾವಿಸಿದ್ದಾರೆ. ಹರಜಾತ್ರೆಯಲ್ಲಿ ಇಬ್ಬರು ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಿನ್ನೆ ವಚನಾನಂದ ಸ್ವಾಮೀಜಿಗಳು ಮಾಡಿದ್ದು ಸರಿ ಇದೆ. ನಮ್ಮ ಈ ಎರಡು ಸಮುದಾಯಗಳಿಂದ ಈಗ 21 ಜನ ಶಾಸಕರಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸೋಣ ಎಂದು ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.

    ನಿಡುಮಾಮಿಡಿ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿಗಳನ್ನ ಬೆದರಿಸೋ ತಂತ್ರ ಒಳ್ಳೆಯದಲ್ಲ. ಸಂಖ್ಯಾಬಲದಿಂದ, ಅಧಿಕಾರ ಬಲದಿಂದ ಸಿಎಂರನ್ನು ನಿಯಂತ್ರಣ ಮಾಡುತ್ತೇವೆ ಎಂಬುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ನಿನ್ನೆಯ ಘಟನೆಗೆ ಕ್ಷಮೆಯಾಚಿಸುತ್ತೇವೆ ಎಂದರು. ಯಡಿಯೂರಪ್ಪ ಇಲ್ಲ ಅಂದ್ರೆ ಏನೂ ಇಲ್ಲ ಅನ್ನೋದು ಜನರಿಗೆ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು. ಈ ನಡುವೆ ನಿನ್ನೆ ಘಟನೆಯಿಂದ ಮುನಿಸಿಕೊಂಡ ಮಾಜಿ ಸಚಿವ ಮುರುಗೇಶ ನಿರಾಣಿ, ದಾವಣಗೆರೆಯಲ್ಲಿ ಇದ್ದರೂ ಸಿಎಂ ಸ್ವಾಗತಕ್ಕೆ ಆಗಮಿಸಿರಲಿಲ್ಲ.

    ಇತ್ತ ನಿನ್ನೆ ಸ್ವಾಮೀಜಿಗಳ ಮೇಲೆ ಗರಂ ಆಗಿದ್ದನ್ನು ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, 15-16 ಜನರನ್ನು ಮಂತ್ರಿ ಮಾಡಲು ಏನು ಮಾಡ್ಬೇಕಪ್ಪಾ ಎಂಬ ಚಿಂತೆಯಲ್ಲಿದ್ದೇನೆ. ಹೀಗಿದ್ದಾಗ ಎಲ್ಲರನ್ನು ಮಂತ್ರಿ ಮಾಡಿ ಎಂದರೆ ಆಗಲ್ಲ. ಕಷ್ಟ ಆಗುತ್ತೆ ಅನ್ನೋದನ್ನು ತಿಳಿಸಿದ್ದೇನೆ. ಕೆಲವೊಂದು ಘಟನಾವಳಿಗಳು ನಡೆದಾಗ ಅದನ್ನು ಎದುರಿಸೋದು ಅನಿವಾರ್ಯವಾಗಿದೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯಲಿದ್ದೇನೆ ಎಂದು ತಿಳಿಸಿದರು.

  • ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ

    ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ

    ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ರಾಜ್ಯ ರಾಜಕೀದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಎಲ್ಲಾ ಸಮುದಾಯದ ಶಾಸಕರು ಅವರ ಶಕ್ತಿಯಾನುಸಾರ ಸಚಿವಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನಡೆದ ಘಟನೆಗೆ ಭಕ್ತರಲ್ಲಿ ವಚನಾಂದ ಸ್ವಾಮೀಜಿಗಳು ಕ್ಷಮೆ ಕೋರಿದ್ದಾರೆ.

    ಸಂಪುಟ ವಿಸ್ತರಣೆ ಕಾರಣ ಆಯಾ ಸಮುದಾಯದ ಶಾಸಕರುಗಳಿಗೆ ಅವರ ಸಮುದಾಯದ ಪೀಠಾಧಿಪತಿಗಳು ಬೆಂಬಲ ನೀಡುತ್ತಿದ್ದಾರೆ. ಬುಧವಾರ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಆಯೋಜಿಸಿದ್ದ ಹರಜಾತ್ರೆ ಮಹೋತ್ಸವದಲ್ಲೂ ಸಚಿವ ಸಂಪುಟದಲ್ಲಿ ಸಮುದಾಯದ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಗುರುಪೀಠದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಸಿಡಿಮಿಡಿಗೊಂಡ ಸಿಎಂ ಬಿಎಸ್‍ವೈ ಅವರು, ಸ್ವಾಮೀಜಿ ನೀವು ಸಲಹೆ ಕೊಡಿ, ಆದರೆ ಧಮ್ಕಿ ಹಾಕಬೇಡಿ ಎಂದಿದ್ದರು. ಆ ಬಳಿಕ ಶಾಸಕ ಮುರುಗೇಶ್ ನಿರಾಣಿಮೇಲೆ ಕೆಂಡಾಮಂಡಲವಾಗಿದ್ದರು.

    ನಿನ್ನೆ ನಡೆದ ಘಟನೆಯಿಂದ ಇಂದು ನಡೆದ ಜಾತ್ರೆಯಲ್ಲಿ ಸ್ವಲ್ಪ ಭಕ್ತರ ಆಗಮನ ಕೂಡ ಕ್ಷೀಣಿಸಿತ್ತು. ಇಂದು ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಪಂಚಮಸಾಲಿ ಗುರುಪೀಠದೊಂದಿಗೆ ತಾವು ಸದಾ ಇರುವುದಾಗಿ ಹೇಳಿ, ಎರಡು ಸಮುದಾಯಗಳು ಸಂಘಟಿತರಾಗಿ, ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ 51 ಸ್ಥಾನಗಳನ್ನು ಗೆಲ್ಲಬೇಕೆಂದರು ಕರೆ ನೀಡಿದರು.

    ಆ ಬಳಿಕ ಮಾತನಾಡಿದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರು, ನಿನ್ನೆ ಅಥವಾ ಇಂದಿನ ಕಾರ್ಯಕ್ರಮದಲ್ಲಿ ಏನಾದರು ನಮ್ಮಿಂದ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರಲ್ಲಿ ಮನವಿ ಮಾಡಿದರು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‍ವೈ ಎದುರು ಸಮುದಾಯದ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮುದಾಯ ಕೈಬಿಡುತ್ತದೆ ಎಂದಿದ್ದ ಸ್ವಾಮೀಜಿಗಳು, ಇಂದು ಸ್ವಲ್ಪ ತಮ್ಮ ವರಸೆಯನ್ನು ಬದಲಿಸಿದ್ದರು.

  • ವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ವಿಸ್ತರಣೆ- ಅರ್ಹ ಶಾಸಕರಿಗೆ ಸಿಎಂ ಭರವಸೆ

    ವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ವಿಸ್ತರಣೆ- ಅರ್ಹ ಶಾಸಕರಿಗೆ ಸಿಎಂ ಭರವಸೆ

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಸನ್ನಿವೇಶ, ಸಂದರ್ಭಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆಯಾ ಎಂಬ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಅರ್ಹ ಶಾಸಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ವಿದೇಶ ಪ್ರವಾಸಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಮಾತಾಡಿದ ಮುಖ್ಯಮಂತ್ರಿಗಳು, ನಾಳೆ ಅಮಿತ್ ಶಾ ಭೇಟಿಗೆ ಸಮಯ ಕೇಳಿದ್ದೇನೆ. ಅಮಿತ್ ಶಾ ಒಪ್ಪಿದರೆ ನಾಳೆಯ ಕಾರ್ಯಕ್ರಮ ರದ್ದು ಮಾಡಿ ದೆಹಲಿಗೆ ಹೋಗಿ ಬರುತ್ತೇನೆ. ಅಮಿತ್ ಶಾ ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕ ಪಡೆದು ಬರುತ್ತೇನೆ ಅಂದರು.

    ಸ್ವಿಟ್ಜರ್ಲೆಂಡ್‍ನ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಗೆ ಪ್ರಧಾನಿಯವರ ಜೊತೆ ನಾನೂ ತೆರಳಲು ನಿರ್ಧರಿಸಿದ್ದೇನೆ. ಆದರೆ ದಾವೋಸ್ ಗೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ವಿದೇಶ ಪ್ರವಾಸ, ದೆಹಲಿ ಚುನಾವಣೆಗಳಿಗೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ. ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇವೆ. ಮಾತು ಕೊಟ್ಟಂತೆ ಎಲ್ಲ ಶಾಸಕರಿಗೂ ಸಚಿವರಾಗಿ ಮಾಡ್ತೇವೆ. ಶಾಸಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಇದೇ ವೇಳೆ ಅರ್ಹರಿಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟರು.

  • ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತೆ: ಸೋಮಶೇಖರ್ ರೆಡ್ಡಿ

    ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತೆ: ಸೋಮಶೇಖರ್ ರೆಡ್ಡಿ

    -ಜನಾರ್ದನ ರೆಡ್ಡಿ ಇದ್ದಿದ್ರೆ ಶ್ರೀರಾಮುಲುಗೆ ಬಲ ಬರ್ತಿತ್ತು
    -ಈಗಲೂ ನಾವೇ ಸ್ಟ್ರಾಂಗ್
    -ವಿಭಜನೆ ಬೇಡ, ಬಳ್ಳಾರಿ ಅಖಂಡವಾಗಿರಲಿ

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಸಕ್ರಿಯ ರಾಜಕಾರಣದಲ್ಲಿದಿದ್ರೆ ಸಚಿವ ಶ್ರೀರಾಮುಲುಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ಇನ್ನೂ ಬೇಗ ಶ್ರೀರಾಮುಲು ಡಿಸಿಎಂ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಇಂದು ಜನಾರ್ದನ ರೆಡ್ಡಿ ನಮ್ಮ ಜೊತೆಯಲ್ಲಿದಿದ್ದರೆ ನಮಗೆ ಯಾವ ಹಿನ್ನಡೆ ಆಗುತ್ತಿರಲಿಲ್ಲ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿ ಉನ್ನತ ಮಟ್ಟದಲ್ಲಿ ಶ್ರೀರಾಮುಲು ಬೆಳೆದಿದ್ದಾರೆ. ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತಿರುತ್ತದೆ. ಕೆಳಗೆ ಇದ್ದೋರು ಮೇಲೆ ಬರಬೇಕು. 2008ರಲ್ಲಿ ಪ್ರಬಲರಾಗಿದ್ವಿ, ಈಗಲೂ ನಾವು ಸ್ಟ್ರಾಂಗ್ ಇದ್ದೇವೆ. ನಮ್ಮನ್ನು ಭಗವಂತ ವೀಕ್ ಮಾಡಬೇಕೇ ಹೊರತು ಬೇರೆಯವರಲ್ಲ ಎಂದಿದ್ದಾರೆ.

    ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡುವ ಕುರಿತು ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ. ಶ್ರೀರಾಮುಲು ಡಿಸಿಎಂ ಆಗುವ ವಿಶ್ವಾಸ ನಮಗೆ ಇದೆ. ಇದೇ ವೇಳೆಯಲ್ಲಿ ಬಳ್ಳಾರಿ ಜಿಲ್ಲಾ ವಿಭಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಇಲ್ಲ. ಸಿಎಂ ಯಡಿಯೂರಪ್ಪ ಅವರು ಚುನಾವಣೆ ನಂತರ ಜಿಲ್ಲೆ ವಿಭಜನೆ ಬಗ್ಗೆ ಮಾತನಾಡೋಣ ಅಂದಿದ್ದಾರೆ. ಜಿಲ್ಲೆ ಅಖಂಡವಾಗಿರೋದು ನನ್ನ ನಿಲುವು ಎಂದು ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯನ್ನು ಒಡೆಯೋದು ಬೇಡ ಎಂದು ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇವೆ. ಶಾಸಕರಾದ ಕರುಣಾಕರ್ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಜಿಲ್ಲೆ ಅಖಂಡವಾಗಿರಲಿ ಎಂದಿದ್ದೇವೆ. ಜೊತೆಗೆ ಸಿಎಂ ಕರೆದಿದ್ದ ಅಂದಿನ ಸಭೆಗೆ ಬಂದವರಲ್ಲಿ ಶೇ.9ಂ ಜನ ಜಿಲ್ಲೆ ವಿಭಜನೆ ಬೇಡ ಎಂದಿದ್ದಾರೆ. ಆದ್ರೆ ಆನಂದ್ ಸಿಂಗ್ ಮತ್ತು ಇನ್ನೊಬ್ಬ ಎಂಎಲ್ ಸಿ ಇಬ್ಬರೇ, ಬೇಕು ಅಂದಿದ್ದಾರೆ ಎಂದು ತಿಳಿಸಿದ್ದಾರೆ.

  • ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬಿಎಸ್‍ವೈ

    ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬಿಎಸ್‍ವೈ

    ಬೆಂಗಳೂರು: ಮೈತ್ರಿ ಸರ್ಕಾರ ಉರುಳಿದ ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿಎಸ್ ಯಡಿಯೂರಪ್ಪ ಅವರು ಸಂಪುಟ ರಚನೆ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಹೈಕಮಾಂಡ್ ಭೇಟಿಗೆ ತೆರಳಿರುವ ಬಿಎಸ್‍ವೈ ಅವರು ಕೇಂದ್ರದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

    ಉತ್ತರ ಕರ್ನಾಟಕದ ಭಾಗದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದ ಬಿಎಸ್‍ವೈ ಅವರು ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಲ್ಲಿ ಸಿಲುಕಿರುವ ಗ್ರಾಮಗಳಲ್ಲಿನ ಜನರ ರಕ್ಷಣೆಗೆ ಹಾಗೂ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದರು. ಆ ಬಳಿಕ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿದರು.

    ಸಂಪುಟ ವಿಸ್ತರಣೆಯ ಕುರಿತು ಪೂರ್ವ ನಿಗಧಿಯಂತೆ ಇಂದು ಸಂಜೆ ವೇಳೆಗೆ ಬಿಎಸ್‍ವೈ ಅವರು ತಮ್ಮ ನಿವಾಸದಿಂದ ದೆಹಲಿಗೆ ತೆರಳಲು ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತ. ಸ್ವಾತಂತ್ರ್ಯ ನಂತರ ಪ್ರಧಾನಿ ಮೋದಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಗತ ಮಾಡುತ್ತಾರೆ. ‘ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹಿ ಚಲೇಗಾ, ನಹಿ ಚಲೇಗಾ’ ಎಂದು ಹೋರಾಟ ಮಾಡಿ ಶ್ಯಾಮ್ ಪ್ರಸಾದ್ ಮುಖರ್ಜಿ ಹುತಾತ್ಮರಾದರು. ಇಂದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಇದಕ್ಕಾಗಿ ಮತ್ತೊಮ್ಮೆ ನಾನು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.

    ಕೇಂದ್ರ ನಾಯಕರನ್ನು ಭೇಟಿ ಮಾಡಲಿರುವ ಬಿಎಸ್ ಯಡಿಯೂರಪ್ಪ ಅವರು, ಸಚಿವ ಸಂಪುಟ ರಚನೆ ಮಾತ್ರವಲ್ಲದೇ, ರಾಜ್ಯದ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳಲ್ಲಿ ರಾಜ್ಯಕ್ಕೆ ಸಿಗಬೇಕಾದ ಬಾಕಿ ಅನುದಾನ ಸಂಬಂಧ ಕೇಂದ್ರದ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಸಿಎಂ ಬಿಎಸ್‍ವೈ ದೆಹಲಿಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷೇತರ ಶಾಸಕ ನಾಗೇಶ್ ಅವರು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಬಿಎಸ್‍ವೈ ದೆಹಲಿಗೆ ಕೊಂಡ್ಯೊಯುತ್ತಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಗೇಶ್ ಅವರ ಹೆಸರು ಕೂಡ ಸೇರಿದೆ ಎಂಬ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿಯೇ ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

  • ಸಂಪುಟ ವಿಸ್ತರಣೆ ಮೊದಲೇ ಆಪರೇಷನ್ ಕಮಲ – ರಹಸ್ಯ ಮಾತುಕತೆಯಲ್ಲಿ ಜಾರಕಿಹೊಳಿ ಬ್ರದರ್ಸ್!

    ಸಂಪುಟ ವಿಸ್ತರಣೆ ಮೊದಲೇ ಆಪರೇಷನ್ ಕಮಲ – ರಹಸ್ಯ ಮಾತುಕತೆಯಲ್ಲಿ ಜಾರಕಿಹೊಳಿ ಬ್ರದರ್ಸ್!

    ಬೆಂಗಳೂರು: ಪಂಚರಾಜ್ಯ ಚುನಾವಣೆಗಳ ಬಳಿಕ ಬಿಜೆಪಿ ಆಪರೇಷನ್ ಕಮಲ ಕೈಬಿಟ್ಟಿದೆ ಎಂಬ ಮಾತಿನ ನಡುವೆಯೇ ಮತ್ತೆ ಆಪರೇಷನ್ ಕಮಲ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು, ಮಾಜಿ ಸಚಿವ ಹಾಗೂ ಹಾಲಿ ಸಚಿವ ಜಾರಕಿಹೊಳಿ ಸಹೋದರೊಂದಿಗೆ ರಹಸ್ಯ ಮಾತುಕತೆಯಲ್ಲಿ ಭಾಗವಹಿಸಿರುವ ಫೋಟೋ ವೈರಲ್ ಆಗಿದೆ.

    ಕಾಂಗ್ರೆಸ್ ಪಕ್ಷದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ವೈಮನಸ್ಸು ಮುಂದುವರಿದಿದೆ. ಇದರ ನಡುವೆಯೇ ರಾಜ್ಯ ಪ್ರಮುಖ ಸಮುದಾಯವಾದ ವಾಲ್ಮೀಕಿ ಸಮುದಾಯದ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಚರ್ಚೆಯಲ್ಲಿ ರಮೇಶ್ ಜಾರಕಿಹೊಳಿ ಮಾತ್ರವಲ್ಲದೇ ಸತೀಶ್ ಜಾರಕಿಹೊಳಿ ಅವರು ಕೂಡ ಭಾಗವಹಿಸಿದ್ದರು. ಈ ವೇಳೆ ಆಪರೇಷನ್ ಕಮಲ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಈ ಹಿಂದೆ ಆಪರೇಷನ್ ಕಮಲ ಮಾಡಲು ವಿಫಲವಾಗಿದ್ದ ಬಿಜೆಪಿ, ಸದ್ಯ ಕಾಂಗ್ರೆಸ್ ಮುಖಂಡರ ಮೂಲಕವೇ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ. ಶಾಸಕ ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದವರೇ ಆದ ಕಾರಣ ಅವರ ಮುಂದಾಳತ್ವದಲ್ಲಿ ಚರ್ಚೆ ನಡೆಸಲಾಗಿದೆ. ಚರ್ಚೆ ವೇಳೆ ಕಾಂಗ್ರೆಸ್ ಪಕ್ಷದಿಂದ ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಜಾರಕಿಹೊಳಿ ಸಹೋದರರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಕಳೆದ 2 ದಿನಗಳ ಹಿಂದೆ ಸಭೆ ನಡೆದಿದೆ ಎಂಬ ಮಾಹಿತಿ ಲಭಿಸಿದ್ದು, ಈ ವೇಳೆ ಹಲವು ಬಿಜೆಪಿ ಶಾಸಕರು ಹಾಜರಿರುವುದನ್ನು ಫೋಟೋದಲ್ಲಿ ಕಾಣಬಹುದು.

    ಒಂದೊಮ್ಮೆ ಸಚಿವ ಸಂಪುಟ ನಡೆದರೂ ಅಥವಾ ಸಂಪುಟ ವಿಸ್ತರಣೆ ಆಗದೆ ಇದ್ದರು ಏನು ಮಾಡಬೇಕೆಂಬ ಮಾತುಕತೆ ನಡೆದಿದೆ. ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನ ಹೊಂದಿರುವ ಶಾಸಕರನ್ನು ಬಿಜೆಪಿಗೆ ಕರೆತರುವುದು ಅಥವಾ ಸಂಪುಟ ವಿಸ್ತರಣೆ ಆಗದಿದ್ದರೆ ಕೈ ಬಂಡಾಯ ಶಾಸಕರನ್ನು ಬಿಜೆಪಿಯತ್ತ ಸೆಳೆಯುವುದು ಹಾಗೂ ಅವರನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುವುರ ಬಗ್ಗೆ ಚರ್ಚೆ ಎನ್ನಲಾಗಿದೆ.

    ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಕೂಡ ನಾಳೆ ಸಂಪುಟ ವಿಸ್ತರಣೆ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಹೈಕಮಾಂಡ್‍ಗೆ ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಇಲ್ಲ ಎನ್ನಲಾಗಿದ್ದು, ಇಲ್ಲಿ ಜಾರಕಿಹೊಳಿ ಬ್ರದರ್ಸ್‍ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ. ಅಲ್ಲದೇ ಆಪರೇಷನ್ ಯಶಸ್ವಿಯಾದರೆ ಉತ್ತರ ಕರ್ನಾಟದ ಶ್ರೀರಾಮುಲು ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ಹಾಗೂ ಜಾರಕಿಹೊಳಿ ಸಹೋದರಿಗೆ ಸಚಿವ ಸ್ಥಾನ ಹಾಗೂ ಶಾಸಕರಿಗೆ ಮುಂದಿನ ಚುನಾವಣೆಯ ಖರ್ಚು-ವೆಚ್ಚ ಭರಿಸುವ ಭರವಸೆ ಹಾಗೂ ನಿಗಮ, ಮಂಡಳಿ ಅಧ್ಯಕ್ಷಗಿರಿಯ ನೀಡುವ ಆಶ್ವಾಸನೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv