Tag: cabinet expansion

  • ಸಚಿವ ಸಂಪುಟ ಬೆಳಗಾವಿ-ಬೆಂಗ್ಳೂರಿಗೆ ಸೀಮಿತ, ಮಧ್ಯಕರ್ನಾಟಕಕ್ಕೆ ಅನ್ಯಾಯ: ತಿಪ್ಪಾರೆಡ್ಡಿ ಕಿಡಿ

    ಸಚಿವ ಸಂಪುಟ ಬೆಳಗಾವಿ-ಬೆಂಗ್ಳೂರಿಗೆ ಸೀಮಿತ, ಮಧ್ಯಕರ್ನಾಟಕಕ್ಕೆ ಅನ್ಯಾಯ: ತಿಪ್ಪಾರೆಡ್ಡಿ ಕಿಡಿ

    ಚಿತ್ರದುರ್ಗ: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಈ ಸಚಿವ ಸಂಪುಟ ಬೆಳಗಾವಿ ಹಾಗೂ ಬೆಂಗಳೂರಿಗೆ ಸೀಮಿತವಾಗಿದೆ, ಮಧ್ಯಕರ್ನಾಟಕ್ಕೆ ಅನ್ಯಾಯ ಆಗಿದೆ ಎಂದು ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿದ್ದರೂ ನಾನು ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಲ್ಲದೇ ಪಕ್ಷದ ವಿರುದ್ಧ ರೆಬೆಲ್ ಆಗಿ ವರ್ತಿಸಿಲ್ಲ. ಆದರೆ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು ಚಿತ್ರದುರ್ಗದಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಗ್ರಾಮ ಪಂಚಾಯ್ತಿ ಹಾಗೂ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದ್ದೇನೆ ಎಂದು ತಾವು ಪಕ್ಷಕ್ಕಾಗಿ ಶ್ರಮ ಪಟ್ಟ ಬಗ್ಗೆ ತಿಪ್ಪಾರೆಡ್ಡಿ ತಿಳಿಸಿದರು.

    6 ಬಾರಿ ಶಾಸಕರಾಗಿರುವ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಸೋತವರಿಗೆ ಹಾಗೂ ಆಕಾಂಕ್ಷೆ ಇಲ್ಲದವರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಸಚಿವರಿಗೆ ಮತ್ತೆ ಮುಂದುವರಿಸಿದ್ದಾರೆ. ಅದರ ಬದಲು ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ನಮ್ಮಂತಹ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು ಎಂದು ಹೇಳಿದರು.

    ಈ ನಿಟ್ಟಿನಲ್ಲಿ ಹೈಕಮಾಂಡ್ ಹಾಗೂ ಸಿಎಂ ಬಿಎಸ್‍ವೈ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಕಲ್ಪಿಸುವ ಭರವಸೆ ಇದೆ. ಹೀಗಾಗಿ ಕಾದು ನೋಡುತ್ತೇನೆ ಹೊರತು ಯಾವುದೇ ಕಾರಣಕ್ಕೂ ನಾನು ಪಕ್ಷಕ್ಕೆ ದ್ರೋಹ ಮಾಡಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲವೆಂದು ಸ್ಪಷ್ಟಪಸಿದರು.

  • ಇನ್ಮುಂದೆ ನಾನು ಸಚಿವ ಸ್ಥಾನ ಕೇಳಲ್ಲ – ರೇಣುಕಾಚಾರ್ಯ ಗೇಮ್ ಚೇಂಜ್

    ಇನ್ಮುಂದೆ ನಾನು ಸಚಿವ ಸ್ಥಾನ ಕೇಳಲ್ಲ – ರೇಣುಕಾಚಾರ್ಯ ಗೇಮ್ ಚೇಂಜ್

    – ನಾವು ಬಂಡಾಯಗಾರರಲ್ಲ : ರಾಜುಗೌಡ
    – ಮಂತ್ರಿ ಸ್ಥಾನ ಸಿಗದಿದ್ದರೂ ಬಿಜೆಪಿ ಪರ ಕೆಲಸ

    ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂಚೆ ಒಂದು ವಿದ್ಯಮಾನ. ಸಂಪುಟ ವಿಸ್ತರಣೆ ಆದ ನಂತರ ಮತ್ತೊಂದು ವಿದ್ಯಮಾನ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಲೇಬೇಕು ಅಂತ ಬೇಡಿಕೆ ಇಟ್ಟಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಂಪುಟ ವಿಸ್ತರಣೆ ಆದ ತಕ್ಷಣವೇ ಮಾತಿನ ವರಸೆಯೇ ಬದಲಾವಣೆ ಮಾಡಿದ್ದು, ನನಗೆ ಸಚಿವ ಸ್ಥಾನ ಬೇಡ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ರಾಗ ಬದಲಿಸಿದ್ದಾರೆ.

    ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿ ಮಾತನಾಡಿದ ರೇಣುಕಾಚಾರ್ಯ ನಾನು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ತಿಳಿಸಿದರು. ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಯ ಪಟ್ಟಿಯಲ್ಲಿ ಸೋತ ಯೋಗೇಶ್ವರ್ ಹೆಸರು ಬಂದ ಕೂಡಲೇ ರೇಣುಕಾಚಾರ್ಯ ರೆಬಲ್ ಚಟುವಟಿಕೆ ಪ್ರಾರಂಭ ಮಾಡಿದ್ರು. ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಮಾಡಬೇಡಿ ಅಂತ ಬಹಿರಂಗವಾಗಿ ಯೋಗೇಶ್ವರ್ ವಿರುದ್ದ ಮಾತಾಡಿದ್ರು. ಯೋಗೇಶ್ವರ್ ಪರ ಮಾತಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ ಕೂಡಾ ನಿಮ್ಮ ಸ್ಥಾನ ಬಿಟ್ಟುಕೊಡಿ ಅಂತ ನೇರವಾಗಿಯೇ ಹೇಳಿದ್ರು. ಈ ಎಲ್ಲ ಗೊಂದಲ ದಿಂದ ಬಿಜೆಪಿ ಹೈಕಮಾಂಡ್ ಮೂಲ ಶಾಸಕರ ಮಂತ್ರಿ ಪಟ್ಟಿಯನ್ನು ತಡೆಹಿಡಿದು ಕೇವಲ ವಲಸಿಗರಿಗೆ ಮಾತ್ರ ಇವತ್ತು ಮಂತ್ರಿ ಮಾಡಿತು. ಹೊಸ ಸಚಿವರ ಪ್ರಮಾಣ ವಚನ ಆದ ಕೂಡಲೇ ರೇಣುಕಾಚಾರ್ಯ ಯೂಟರ್ನ್ ಹೊಡೆದು ನಾನು ಪಕ್ಷದ ಶಿಸ್ತಿನ ಸಿಪಾಯಿ ಅಂತಿದ್ದಾರೆ.

    ರೇಣುಕಾಚಾರ್ಯ ಅಂಡ್ ಟೀಂ ನ ಆಸೆ ಈಡೇರಿದ ಕೂಡಲೇ ಬಂಡಾಯದ ಚಟುವಟಿಕೆಗಳು ನಿಂತಂತೆ ಕಾಣುತ್ತಿದೆ. ಸ್ವತಃ ರೇಣುಕಾಚಾರ್ಯ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ನಾವು ಯಾವತ್ತು ಬಂಡಾಯ ಸಭೆ ಮಾಡಲೇ ಇಲ್ಲ. ನಮಗೆ ಯಾರು ಶತ್ರುಗಳು ಅಲ್ಲ ಅಂತ ಯೋಗೇಶ್ವರ್ ವಿಚಾರಕ್ಕೆ ಪರೋಕ್ಷ ಉತ್ತರ ಕೊಟ್ಟರು. ನಾವು ಪಕ್ಷ ಮತ್ತು ಸಿಎಂ ಹೇಳಿದಂತೆ ಕೇಳುತ್ತೇವೆ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

    ಮಧ್ಯ ಕರ್ನಾಟಕ ಭಾಗಕ್ಕೆ ಮತ್ತೆ ಮಂತ್ರಿ ಸ್ಥಾನ ಕೇಳ್ತೀರಾ ಸರ್ ಅಂದ್ರೆ ಅದೆಲ್ಲ ಮುಗಿದು ಹೋದ ಅಧ್ಯಾಯ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳೋದಿಲ್ಲ ಅಂತ ತಿಳಿಸಿದ್ರು. ಕೆಲಸ ಆದ ಮೇಲೆ ಎಲ್ಲರೂ ಹೀಗೆ. ಯೋಗೇಶ್ವರ್‍ಗೆ ಸ್ಥಾನ ತಪ್ಪಿಸುವ ರೇಣುಕಾಚಾರ್ಯ ಅಂಡ್ ಟೀಂ ಕೆಲಸ ಯಶಸ್ವಿಯಾದಂತೆ ಕಾಣ್ತಿದೆ. ಹೀಗಾಗಿ ರೆಬಲ್ ಟೀಂ ಕೂಡಾ ಕೂಲ್ ಆದಂತೆ ಕಾಣುತ್ತಿದೆ.

    https://twitter.com/MPRBJP/status/1224730594208145408

    ನಾವು ಬಂಡಾಯಗಾರರಲ್ಲ: ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ತಪ್ಪಲು ಪರೋಕ್ಷವಾಗಿ ಕಾರಣರಾಗಿದ್ದ ಶಾಸಕ ರಾಜುಗೌಡ ಮತ್ತೆ ನಾವು ಬಂಡಾಯಗಾರರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಾವು ಬೇಡಿಕೆ ಇಟ್ಟಿದ್ದೇವೆ. ಅದನ್ನ ಯಾರು ಬಂಡಾಯ ಎನ್ನಬೇಡಿ ಅಂತ ಮನವಿ ಮಾಡಿದ್ದಾರೆ.

    ರಾಜಭವನದಲ್ಲಿ ಮಾತನಾಡಿದ ಶಾಸಕ ರಾಜುಗೌಡ, ನನಗೆ ಸಚಿವ ಸ್ಥಾನ ಕೊಡಿ ಅಂತ ನಾನು ಯಾರಿಗೂ ಒತ್ತಡ ಹಾಕಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ಕೊಡಿ ಅಂತ ಮಾತ್ರ ಕೇಳಿದ್ದು ಅಷ್ಟೇ. ಆದರೆ ನಾವೇ ಮೂಲ ಶಾಸಕರಿಗೆ ಸ್ಥಾನ ತಪ್ಪಿಸಿದೆವು ಅನ್ನೋದು ಸುಳ್ಳು ಅಂದರು. ಅಷ್ಟೇ ಅಲ್ಲ ನಾವು ಯಾರಿಗೂ ಸಚಿವ ಸ್ಥಾನ ಕೊಡಬೇಡಿ ಅಂತ ಹೇಳಿಲ್ಲ ಎನ್ನುವ ಮೂಲಕ ಯೋಗೇಶ್ವರ್ ಗೆ ಸ್ಥಾನ ತಪ್ಪಲು ನಾನು ಕಾರಣ ಅಲ್ಲ ಅಂದರು.

    ಹೈಕಮಾಂಡ್ ನಿರ್ದೇಶನದಂತೆ ಸಂಪುಟ ವಿಸ್ತರಣೆ ಆಗಿದೆ. ಈಗ ಆಗಿರುವ 10 ಜನ ಮಂತ್ರಿಗಳು ಬಿಜೆಪಿಯವರು. ಈಗ ಕೊಡದೇ ಇದ್ದರು ಮುಂದೆ ವಿಸ್ತರಣೆ ಮಾಡಿದರೆ ಕಲ್ಯಾಣ ಕರ್ನಾಟಕಕ್ಕೆ ಸ್ಥಾನ ಕೊಡಲೇಬೇಕು ಅಂತ ಮತ್ತೆ ಒತ್ತಡ ಹಾಕಿದ್ರು. ಒಂದು ವೇಳೆ ಬಿಜೆಪಿ ಸ್ಥಾನ ಕೊಡಲಿಲ್ಲ ಅಂದ್ರೆ ಬಿಜೆಪಿ ಶಾಲು ಹಾಕಿಕೊಂಡು, ಬಿಜೆಪಿಗೆ ಜೈ ಎಂದು ಮೋದಿ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

  • ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಕ್ಲಾಸ್

    ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಕ್ಲಾಸ್

    ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ ಯಡಿಯೂರಪ್ಪ ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಸಿಎಂ ಪಾಠ ಮಾಡಿದ್ದಾರೆ.

    ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮಗೊಳಿಸುತ್ತೇನೆ ಎಂದು ಹೇಳಿದ್ದಾರೆ.

    ಖಾತೆಗಳು ಹಂಚಿಕೆ ನಾಳೆ ಆಗಬಹುದು, ಎರಡ್ಮೂರು ದಿನ ಆಗಲೂಬಹುದು. ಖಾತೆಗಳಿಗಾಗಿ ತಾಳ್ಮೆಯಿಂದ ಕಾಯಿರಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಯಡಿಯೂರಪ್ಪನವರ ಈ ಎಚ್ಚರಿಕೆಯ ಸಂದೇಶಕ್ಕೆ ಆಯ್ತು ಎಂದು ನೂತನ ಸಚಿವರು ಸಮ್ಮತಿ ನೀಡಿದ್ದಾರೆ.

    ನೂತನ ಸಚಿವರಾಗಿ 10 ಮಂದಿ ಇಂದು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಿ.ಆರ್.ವಾಲಾ ಅವರು, ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ ಸುಧಾಕರ್, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಕೆ. ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ ಪಾಟೀಲ್ ಪ್ರಮಾಣ ವಚನ ಬೋಧಿಸಿದರು. 10 ಮಂದಿಯೂ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಯಡಿಯೂರಪ್ಪ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.

  • ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್

    ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್

    – ರಾಜಭವನಕ್ಕೆ ಸಚಿವರ ಪಟ್ಟಿ ರವಾನೆ

    ಬೆಂಗಳೂರು: 10 ಜನ ನೂತನ ಸಚಿವರ ಪಟ್ಟಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ರಿಲೀಸ್ ಮಾಡಿದ್ದು, ಲಿಸ್ಟ್‌ನಲ್ಲಿ ಶಾಸಕ ಎಸ್.ಟಿ.ಸೋಮಶೇಖರ್  ಟಾಪ್‍ನಲ್ಲಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ನೂತನ ಸಚಿವರ ಅಧಿಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದ ಮಹೇಶ್ ಕುಮಟಹಳ್ಳಿ ಅವರನ್ನು ಬಿಟ್ಟು 10 ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ನೀಡಲಾಗಿದೆ. ಈ ಮೂಲಕ  ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ನಾರಾಯಣಗೌಡ ಹಾಗೂ ಶ್ರೀಮಂತ್ ಪಾಟೀಲ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ರಾಜಭವನದಲ್ಲಿ ನಾಳೆ ನೂತನ ಸಚಿವ ಪ್ರಮಾಣ ವಚನ ನಡೆಯುವ ಹಿನ್ನೆಲೆಯಲ್ಲಿ ರಾಜಭವನದ ಹೊರಗೆ ಸಿದ್ಧತೆ ಪ್ರಾರಂಭವಾಗಿದೆ. ರಾಜಭವನದ ಸುತ್ತ ಬ್ಯಾರಿಗೇಡ್ ಅಳವಡಿಸಲಾಗುತ್ತಿದೆ. ಎಲ್‍ಇಡಿ ಪರದೆ ಅಳವಡಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಕಳುಹಿಸಿದ ಲಿಸ್ಟ್‌ನಲ್ಲಿ  ಎಸ್.ಟಿ.ಸೋಮಶೇಖರ್ ಟಾಪ್‍ನಲ್ಲಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ನಂಬರ್ 2 ಸ್ಥಾನದಲ್ಲಿದ್ದಾರೆ. ರಾಜಭವನಕ್ಕೆ ಕಳುಹಿಸಿದ ಪಟ್ಟಿಯಲ್ಲಿ ನಂಬರ್ ಗೇಮ್ ನಡೆದಿ ಎಂಬ ಮಾತುಗಳು ಕೇಳಿ ಬಂದಿದೆ. ಇದನ್ನೂ ಓದಿ:  10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    ಆಪರೇಷನ್ ಕಮಲದ ನಂಬರ್ ಬರೀ 8 ಇದ್ದಾಗ ರಮೇಶ್ ಜಾರಕಿಹೊಳಿ ಟಾಪ್ ಲೀಡರ್. ಆದರೆ 8 ನಂಬರ್ ಇಟ್ಕೊಂಡು ಸರ್ಕಾರ ಬೀಳಿಸಲು ಆಗಿರಲಿಲ್ಲ. ಆಗ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರಿನ 4 ಶಾಸಕರ ನೇತೃತ್ವ ವಹಿಸಿದ್ದರು. ಬೆಂಗಳೂರಿನ 4 ನಂಬರ್ ಸಿಕ್ಕಿದ್ದರಿಂದಲೇ ಆಪರೇಷನ್ ಕಮಲ ಸಕ್ಸಸ್ ಆಗಿತ್ತು. ಆ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರು ಎಸ್.ಟಿ.ಸೋಮಶೇಖರ್ ಅವರನ್ನು ನಂಬರ್ 1 ಸ್ಥಾನಕ್ಕೇರಿಸಿ, ರಮೇಶ್ ಜಾರಕಿಹೊಳಿ ಅವರನ್ನು ನಂಬರ್ 2 ಸ್ಥಾನಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಪ್ರತ್ಯೇಕವಾಗಿ ಬಂದ ಆನಂದ್ ಸಿಂಗ್ ಅವರಿಗೆ 3ನೇ ಸ್ಥಾನ, ಸುಧಾಕರ್ ಅವರಿಗೆ 4 ಸ್ಥಾನ ಕೊಡಲಾಗಿದೆ. ನಂತರ ಟೀಂ ಆಧಾರದ ಮೇಲೆ ಸ್ಥಾನ ಕೊಟ್ಟು ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಲಾಗಿದೆ ಎನ್ನಲಾಗಿದೆ.

  • 10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    – ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್
    – ಮಂತ್ರಿ ಸ್ಥಾನ ಕೈತಪ್ಪಿ ಉಮೇಶ್ ಕತ್ತಿ ಬೇಸರ

    ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ನೀಡುವ ವಿಚಾರ ಸಿಎಂ ಯಡಿಯೂರಪ್ಪ ಅವರ ಸರ್ಕಾರಕ್ಕೆ ತಲೆ ನೋವಾಗಿದೆ. ಯಾವ ಸದನದ ಸದಸ್ಯರು ಅಲ್ಲದ ಯೋಗೇಶ್ವರ್ ಅವರಿಗೆ ಆಪರೇಷನ್ ಕಮಲದ ಯಶಸ್ಸಿಗೆ ದುಡಿದ್ದರು ಎಂಬ ಏಕೈಕ ಕಾರಣಕ್ಕಾಗಿ ಮಂತ್ರಿಗಿರಿ ದಯಪಾಲಿಸಲು ಸಿದ್ಧತೆ ನಡೆದಿತ್ತು. ಆದರೆ ಇದಕ್ಕೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದು ಮಾಜಿ ಸಚಿವ ಹೆಚ್.ವಿಶ್ವನಾಥ್ ಎನ್ನಲಾಗಿದೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ಹೆಚ್.ವಿಶ್ವನಾಥ್ ಅವರು ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ರವಾನಿಸಿದ್ದರು. ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಮೋಸ ಕಾರಣ. ಎಲೆಕ್ಷನ್ ಖರ್ಚಿಗೆ ಹಣ ಪಡೆದು ಅದನ್ನು ಹಂಚದೇ ಮೋಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬರಲು ನಮ್ಮ ತ್ಯಾಗ ದೊಡ್ಡದು. ಆದರೆ ನಮಗೆ ಯೋಗೇಶ್ವರ್ ಮೋಸ ಮಾಡಿಬಿಟ್ಟರು. ಇಂಥವರಿಗೆ ಮಂತ್ರಿ ಸ್ಥಾನ ನೀಡಿದ್ರೆ ಹೇಗೆ? ನಮಗೆ ಹೇಗೆ ಅನ್ನಿಸಬೇಕು ಹೇಳಿ ಎಂದು ಪತ್ರದಲ್ಲಿ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ನಾನು ಹೈಕಮಾಂಡ್ ಬುಕ್ ಮಾಡ್ಕೊಂಡಿದ್ದೇನೆ ಎಂದು ಆಪ್ತರ ಬಳಿ ಸಿ.ಪಿ.ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಇದು ಸತ್ಯನಾ ಎಂದು ವಿಶ್ವನಾಥ್ ಹೈಕಮಾಂಡ್‍ಗೆ ಪ್ರಶ್ನೆ ಮಾಡಿದ್ದರು. ಈ ಪತ್ರ ನೋಡಿದ ಕೂಡಲೇ ಅಮಿತ್ ಶಾ, ಪಕ್ಷದ ಮೂಲ ನಿವಾಸಿಗಳ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

    ಇತ್ತ ಯೋಗೇಶ್ವರ್ ವಿಚಾರ ಮಿಂತ್ರಮಂಡಳಿಯಲ್ಲಿಯೂ ಬಿರುಕಿಗೆ ಕಾರಣವಾಗಿದೆ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಏಕೆ ಕೊಡ್ತೀರಿ ಎಂದು ವಿಶ್ವನಾಥ್ ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ. ಆದ್ರೆ, ಕುಮಟಳ್ಳಿ ಮಾತ್ರ, ಯೋಗೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್ ಆಗಿದ್ದಾರೆ. ಟ್ವೀಟ್ ಮೂಲಕ, ಹೇಳಿಕೆ ಮೂಲಕ ಯೋಗೇಶ್ವರ್ ವಿರುದ್ಧ ಕೆಂಡಕಾರಿದ್ದಾರೆ. ಇದು ಬಂಡಾಯ ಅಲ್ಲ ಎನ್ನುತ್ತಲೇ, ಸೋತವರಿಗೆ ಮಂತ್ರಿಗಿರಿ ನೀಡುತ್ತಾ ಹೋದ್ರೆ ಪಕ್ಷಕ್ಕೆ ಮುಜುಗರ ಆಗುತ್ತೆ ಎಂದಿದ್ದಾರೆ.

    ಯೋಗೇಶ್ವರ್ ಬೆಂಬಲಕ್ಕೆ ನಿಂತ ಡಿಸಿಎಂ ಅಶ್ವಥ್‍ನಾರಾಯಣ್ ಅವರಿಗೂ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಯೋಗೇಶ್ವರ್ ಮೇಲೆ ಪ್ರೀತಿ ಇದ್ದವರು ತಮ್ಮ ಸ್ಥಾನವನ್ನೇ ಅವರಿಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ನಾಳೆಯ ಪದಗ್ರಹಣ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.

    ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಉಮೇಶ್ ಕತ್ತಿ, ಹೈಕಮಾಂಡ್ ನಡೆಯಿಂದ ಬೇಸರಗೊಂಡಿದ್ದಾರೆ. ಇದೇ ಬೇಸರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೊಟ್ರೆ ಕೊಡ್ಲಿ ಬಿಟ್ರೆ ಬಿಡ್ಲಿ ಅಂತ ಹೇಳಿದರು. ಸಂಜೆ ಸಿಎಂ ಕರೆದು ಮಾತನಾಡಿದ್ದರು. ಆದರೆ ಕೋಪ ಕರಗಿರಲಿಲ್ಲ. ಸಚಿವ ಸ್ಥಾನ ಕೈತಪ್ಪಿದ ಬೇಸರದಲ್ಲಿರುವ ಸಿಪಿ ಯೋಗೇಶ್ವರ್ ಅವರನ್ನು ಸಿಎಂ ಪುತ್ರ ವಿಜಯೇಂದ್ರ ಸಮಾಧಾನ ಮಾಡುವ ಯತ್ನ ಮಾಡಿದ್ದರು. ಮಾಧ್ಯಮಗಳಲ್ಲಿ ಮಾತ್ರ 10+3 ಅಂತ ಬಂತು. ಈಗ ಕೇವಲ ಹತ್ತು ಜನರಿಗೆ ಅವಕಾಶ ಅಂತ ಬರುತ್ತಿದೆ. ನಾಳೆ ಬೆಳಗ್ಗೆ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಆದ್ರೆ ಪಕ್ಷದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತ್ರ, ವಿಜಯೇಂದ್ರ ಅವರನ್ನು ಹಲವರು ಭೇಟಿ ಮಾಡಿದ ತಕ್ಷಣ, ಲಾಬಿ ಅಂತಾ ಅರ್ಥ ಅಲ್ಲ. ನಾಳೆಯವರೆಗೂ ಕುತೂಹಲ ಉಳಿಯಲಿ ಎಂದರು.

  • ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    – ಸಂಪುಟ ವಿಸ್ತರಣೆಗೆ ಟ್ವಿಸ್ಟ್ ಕೊಟ್ಟ ಹೈಕಮಾಂಡ್
    – ರಾಜಭವನಕ್ಕೆ ಸಂಭಾವ್ಯ ಸಚಿವರ ಪಟ್ಟಿ ರವಾನೆ

    ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದಲ್ಲಿ ಎದ್ದಿದ್ದ ಅಸಮಾಧಾನ ತಣ್ಣಗಾಯಿತು ಅಂತಾ ಅಂದ್ಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮತ್ತೆ ಶಾಕ್ ನೀಡಿದೆ.

    ಪಕ್ಷದಲ್ಲಿನ ಸಣ್ಣ ಪುಟ್ಟ ಅಸಮಾಧಾನವನ್ನೇ ನೆಪವಾಗಿಸಿಕೊಂಡ ಹೈಕಮಾಂಡ್, ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಮೂಗು ತೂರಿಸಿದೆ. 10+3 ಫಾರ್ಮುಲಾ ಸದ್ಯಕ್ಕೆ ಬೇಡ, ಮೂವರು ಮೂಲ ಶಾಸಕರನ್ನು ನಾವು ಹೇಳುವವರೆಗೂ ಮಂತ್ರಿ ಮಾಡಬೇಡಿ ಎಂದು ಖಡಕ್ಕಾಗಿ ಹೇಳಿದೆ. ಈ ಮೂಲಕ ಗುರುವಾರದ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್ ಕೊಟ್ಟಿದೆ. ಇದರೊಂದಿಗೆ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಮಂತ್ರಿ ಆಸೆಗೆ ಕೊಕ್ಕೆ ಬಿದ್ದಿದೆ. ಹೀಗಾಗಿ ನಾಳೆ ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಮಿತ್ರಮಂಡಳಿಯ 10 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಹೈಕಮಾಂಡ್ ಆದೇಶದಂತೆ ಇಂದು ಸಂಜೆ ಸಿಎಂ ಯಡಿಯೂರಪ್ಪ, 10 ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಟ್ಟಿದ್ದಾರೆ. ನಾಳೆಯ ಪ್ರಮಾಣ ವಚನ ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ಮೂಲಗಳ ಪ್ರಕಾರ, ನಾಳೆಯೇ ಖಾತೆ ಹಂಚಿಕೆ ನಡೆಯಲ್ಲ. ಮುಂದಿನ ವಾರ ಸಿಎಂ ದೆಹಲಿಗೆ ತೆರಳುತ್ತಿದ್ದು, ಆ ಬಳಿಕವಷ್ಟೇ ಖಾತೆ ಹಂಚಿಕೆ ನಡೆಯಲಿದೆ. ಈ ಮಧ್ಯೆ ಸಂಭಾವ್ಯ ಸಚಿವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಸಚಿವ ಸ್ಥಾನ ಕೊಡುತ್ತಿರುವುದಕ್ಕೆ ಸಿಎಂಗೆ ಧನ್ಯವಾದ ಹೇಳಿದರು.

    ಬಿಎಸ್‍ವೈಗೆ ಶಾ ಫೋನ್:
    ಬುಧವಾರ ಬೆಳಗ್ಗೆ 9:30ರವರೆಗೂ ಎಲ್ಲಾ ಸರಿಯಾಗೇ ಇತ್ತು. ಸಿಎಂ ಯಡಿಯೂರಪ್ಪ ಪಾಳಯದಲ್ಲಿ ಮಂತ್ರಿ ಮಂಡಲ ವಿಸ್ತರಣೆಯ ಹುರುಪಿತ್ತು. ಆದರೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ಯಡಿಯೂರಪ್ಪ ಸೇರಿ ಎಲ್ಲಾ ಬಿಜೆಪಿಗರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

    ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ನಾಳೆ 10 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿ. ಪಕ್ಷದ ಮೂವರು ಮೂಲ ಶಾಸಕರು ಸಚಿವರಾಗುವದು ಬೇಡ. ಪಕ್ಷದಲ್ಲಿ ಸದ್ಯಕ್ಕೆ ಅಸಮಾಧಾನ ಜೋರಾಗಿದೆ. ಆಮೇಲೆ ನೋಡೋಣ ಎಂದು ಸೂಚನೆ ನೀಡಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಈ ವಿಚಾರವಾಗಿ ಆಪ್ತರಾದ ಉಮೇಶ್ ಕತ್ತಿ, ಯೋಗೇಶ್ವರ್ ಬಳಿ ಕೋಪಾತಾಪ ವ್ಯಕ್ತಪಡಿಸಿದ ಸಿಎಂ, ಈಗಾಗಲೇ 10+3 ಅಂತಾ ಹೇಳಿಬಿಟ್ಟಿದ್ದೇನೆ. ಮೂವರಿಗೆ ಹೇಳಿಬಿಟ್ಟಿದ್ದೇ. ಮೊದಲು ಅನುಮತಿ ಕೊಟ್ಟು ಈಗ ಬೇಡ ಅಂತಿದ್ದಾರೆ. ಈಗ ನನ್ನ ಮಾತಿಗೆ ಕಿಮ್ಮತ್ತಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತೆ. ಸಂಜೆ ತನಕವೂ ಕಾಯಿರಿ ನೋಡೋಣ, ಆಗದಿದ್ದರೆ ತಿಂಗಳ ಬಳಿಕ ಮಾಡ್ತೀನಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ‘ಮೂಲ’ಕ್ಕೆ ಪೆಟ್ಟು ಕೊಟ್ಟಿತೇಕೆ ಹೈಕಮಾಂಡ್?
    ಕಾರಣ 1 > ಮೂಲ ಬಿಜೆಪಿಗರಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಆತಂಕ
    ಕಾರಣ 2 > ಸೋತವರಿಗೆ ಮಂತ್ರಿಗಿರಿ ಕೊಟ್ಟರೆ ಗೊಂದಲ ಉಂಟಾಗುತ್ತದೆ
    ಕಾರಣ 3 > ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ
    ಕಾರಣ 4 > ಜಾತಿವಾರು ಮಂತ್ರಿಗಿರಿ ಹಂಚಿಕೆಯಲ್ಲಿ ಅಸಮತೋಲನ
    ಕಾರಣ 5 > ಭಿನ್ನಮತದಿಂದ ಬಜೆಟ್ ಅಧಿವೇಶನದ ಮೇಲೆ ಪರಿಣಾಮ ಬೀರಬಹುದು

  • ಸಂಪುಟ ಅಥವಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಸ್ಫೋಟವಾಗುತ್ತೋ ನೋಡೋಣ: ಬಿವೈ ವಿಜಯೇಂದ್ರ

    ಸಂಪುಟ ಅಥವಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಸ್ಫೋಟವಾಗುತ್ತೋ ನೋಡೋಣ: ಬಿವೈ ವಿಜಯೇಂದ್ರ

    ಹಾಸನ: ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಪೋಟವಾಗುತ್ತೋ, ಇಲ್ಲಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಆಗುತ್ತೋ ನೋಡೋಣ ಎಂದು ಸಿಎಂ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿ ಸವಾಲು ಹಾಕಿದ್ದಾರೆ.

    ನಗರದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಕೆಲ ಶಾಸಕರು ಪ್ರತ್ಯೇಕ ಸಭೆ ಸೇರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರವರ ಅಭಿಪ್ರಾಯ ಹೇಳಲು ಸಭೆ ಸೇರಿದ್ದಾರೆ. 6 ರಂದು ಸಿಎಂ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಮತ್ತು ರಾಷ್ಟ್ರಾಧ್ಯಕ್ಷರು ಸಂಪುಟದ ಗೊಂದಲವನ್ನು ಬಗೆಹರಿಸಲಿದ್ದಾರೆ ಎಂದರು.

    ಉಪಚುನಾವಣೆಯಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡಬೇಕು. ಹೀಗಾಗಿ ಎಲ್ಲಾ ಶಾಸಕರಿಗೂ ಇದರ ಅರಿವಿದೆ. ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ, ಕರಾವಳಿ ಕರ್ನಾಟಕ ಎಲ್ಲರಿಗೂ ಸಂತೃಪ್ತಿ ಆಗುವ ನಿಟ್ಟಿನಲ್ಲಿ ಸರ್ಕಾರ ರಚನೆ ಆಗಲಿದೆ. ಗುರುವಾರ ಎಲ್ಲ ಸಮಸ್ಯೆ ಬಗೆ ಹರಿಯಲಿದೆ. ಎಲ್ಲರೂ ಸಮಾಧಾನ ಆಗುವ ರೀತಿ ಸಂಪುಟ ವಿಸ್ತರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟ ವಿಜಯೇಂದ್ರ ಅವರು, ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಫೋಟವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆದ್ದಾರೆ. ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಫೋಟವಾಗುತ್ತೋ, ಇಲ್ಲಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಆಗುತ್ತೋ ನೋಡೋಣ ಎಂದರು.

  • ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾ? ಪುನಾರಚನೆಯಾ ಅನ್ನೋ ಗೊಂದಲ ಬಗೆಹರಿದಿದೆ. ಗುರುವಾರ ನಡೆಯೋದು ವಿಸ್ತರಣೆ ಮಾತ್ರ, ಪುನಾರಚನೆಯಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಪೂರ್ಣ ಒಪ್ಪಿಗೆ ಕೊಟ್ಟಿದೆ. ಸಂಪುಟದಿಂದ ಯಾರನ್ನೂ ಕೈಬಿಡದೇ ವಿಸ್ತರಣೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್ ಆಗಿದ್ದಾರೆ.

    ಸಚಿವ ಸಂಪುಟ ಸಂಕಷ್ಟಗಳ ಮಧ್ಯೆಯೂ ಹಾಲಿ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಈ ಮೂವರು ಸಚಿವರನ್ನೂ ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಸಂಪುಟ ಪುನಾರಚನೆ ಬದಲು ವಿಸ್ತರಣೆ ನಡೆಯುವುದರಿಂದ ಮೂವರೂ ಸಚಿವರು ಸೇಫಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

    ಡಿಸಿಎಂ ಲಕ್ಷ್ಮಣ ಸವದಿಯವರು ಪರಿಷತ್ ಗೆ ಆಯ್ಕೆಯಾಗಲಿರುವ ಕಾರಣದಿಂದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವ್ರಿಗೆ ಸಂಪುಟದಿಂದ ಕೊಕ್ ಕೊಡುವ ಸಾಧ್ಯತೆ ಇತ್ತು. ಒಂದೊಮ್ಮೆ ಲಕ್ಷ್ಮಣ ಸವದಿಯವರನ್ನು ವಿಧಾನ ಪರಿಷತ್ ಸಭಾನಾಯಕರಾಗಿ ಮಾಡಿದರೂ ಹಾಲಿ ಸಭಾನಾಯಕರಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಂದುವರಿಯಲಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ರಿಗೂ ಕೈಬಿಡದಿರಲು ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಇನ್ನು ಬೆಳಗಾವಿಯಲ್ಲಿ ಸಚಿವರ ಸಂಖ್ಯೆ ಕಡಿಮೆ ಮಾಡಲು ಸಚಿವೆ ಶಶಿಕಲಾ ಜೊಲ್ಲೆಯವ್ರಿಗೂ ಕೊಕ್ ಕೊಡುವ ಸಾಧ್ಯತೆ ಇತ್ತು. ಆದರೆ ಮಹೇಶ್ ಕುಮಟಳ್ಳಿಯವರು ಸಂಪುಟ ಸೇರ್ಪಡೆ ಇಲ್ಲದ ಹಿನ್ನೆಲೆಯಲ್ಲಿ ಹಾಗೂ ಮಹಿಳಾ ಕೋಟಾದಿಂದ ಒಬ್ಬರೇ ಸಚಿವೆಯಾಗಿರುವ ಕಾರಣದಿಂದ ಶಶಿಕಲಾ ಜೊಲ್ಲೆಯವರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಸಾಹುಕಾರ್​ಗೆ ಚೆಕ್‍ಮೇಟ್ ಕೊಟ್ಟ ಬಿಜೆಪಿ ಹೈಕಮಾಂಡ್!

    ಸಾಹುಕಾರ್​ಗೆ ಚೆಕ್‍ಮೇಟ್ ಕೊಟ್ಟ ಬಿಜೆಪಿ ಹೈಕಮಾಂಡ್!

    ಬೆಂಗಳೂರು: ಮಿತ್ರ ಮಂಡಳಿಯ ನಾಯಕ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ಈ ಕುರಿತು ಸಿಎಂ ಯಡಿಯೂರಪ್ಪರಿಗೆ ಖಡಕ್ ಸಂದೇಶವನ್ನು ರವಾನಿಸಿದೆ ಎಂದು ತಿಳಿದು ಬಂದಿದೆ.

    ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ತಮಗೆ ಜಲಸಂಪನ್ಮೂಲ ಖಾತೆಯೇ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸಿಎಂ ಸಹ ಹೈಕಮಾಂಡ್ ಮುಂದೆ ರಮೇಶ್ ಜಾರಕಿಹೊಳಿಯವರ ಬೇಡಿಕೆಯ ಪಟ್ಟಿಯನ್ನು ಇರಿಸಿದ್ದರು. ಪಟ್ಟಿಯನ್ನು ಪರಿಶೀಲಿಸಿದ ಹೈಕಮಾಂಡ್ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಖಾತೆ ನೀಡಬಾರದು. ಅದರ ಬದಲಾಗಿ ಬೇರೆ ಯಾವುದಾದರೂ ಒಂದು ಖಾತೆಯನ್ನು ನೀಡಿ ಎಂಬ ಸಂದೇಶವನ್ನು ರವಾನಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ನಿರ್ವಹಿಸುತ್ತಿದ್ದ ಖಾತೆಯನ್ನು ಪಡೆಯಬೇಕೆಂಬ ಹಂಬಲ ಹೊಂದಿದ್ದ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆಗೆ ಸಿಗೋದು ಅನುಮಾನ ಎನ್ನಲಾಗುತ್ತಿದೆ.

    ಹೈಕಮಾಂಡ್ ಕಳುಹಿಸಿದ ಸಂದೇಶ ನೋಡಿ ಸಿಎಂ ಸಹ ಮೌನಕ್ಕೆ ಜಾರಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಜಲಸಂಪನ್ಮೂಲ ಖಾತೆ ಸಿಗದಿದ್ರೆ ರಮೇಶ್ ಜಾರಕಿಹೊಳಿಯವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಕಮಲ ಅಂಗಳದಲ್ಲಿ ಹುಟ್ಟಿಕೊಂಡಿದೆ. ಮತ್ತೆ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸ್ತಾರಾ ಅಥವಾ ಕೊಟ್ಟ ಖಾತೆ ಪಡೆದು ಸುಮ್ಮನಾಗ್ತಾರಾ ಎಲ್ಲದಕ್ಕೂ ಗುರುವಾರ ಸ್ಪಷ್ಟ ಉತ್ತರ ಸಿಗಲಿದೆ.

  • ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

    ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

    ಕಾರವಾರ: ಪಕ್ಷಾಂತರ ಮಾಡಿದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬ ಕಾಲ ಬಂದಾಗ ನಮಗೆ ಮೋಸ ಮಾಡಿದರು ಎಂದು ಸಿದ್ದರಾಮಯ್ಯನವರೇ ಮಾತನಾಡಿದ್ದರು. ಇಂದು ಅವರಿಗೆ ಯಾವ ಬೇಸರವಾಗಿದೆಯೋ ಗೊತ್ತಿಲ್ಲ. ಅವರು ಬೇಸರ ಮಾಡಿಕೊಳ್ಳುವುದು ಬೇಡ, ಜನ ನಮ್ಮನ್ನು ಮಾನ್ಯ ಮಾಡಿದ್ದಾರೆ. ಅವರನ್ನು ಅಮಾನ್ಯ ಮಾಡಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಟಾಂಗ್ ಕೊಟ್ಟರು.

    ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಶಿವರಾಮ್ ಹೆಬ್ಬಾರ್ ಉಪಚುನಾವಣೆಯಲ್ಲಿ ಸೋತವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸಚಿವ ಸಂಪುಟ ವಿಸ್ತರಣೆ ಫೆ. 6ರಂದು ಆಗಲಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಅದರಂತೆ ಆಗುತ್ತದೆ, ಯಾವುದೇ ವಿಷಯವಾದರೂ ಸಿಎಂಗೆ ಕೇಳಿ ಎಂದು ಪ್ರತಿಕ್ರಿಯಿಸಿದರು.