Tag: cabinet expansion

  • ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

    ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

    ಬೆಳಗಾವಿ: ಸಿಡಿ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸಚಿವರಿಗೆ ಶುಭಾಶಯ ಕೋರಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಣಯಕ್ಕೆ ಬೆನ್ನಲುಬಾಗಿ ನಿಲ್ಲುತ್ತೇವೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ ಅದನ್ನ ಪಕ್ಷದವರು ಸರಿ ಪಡಿಸುತ್ತಾರೆ ಎಂದರು. ಇದೇ ವೇಳೆ ಸಿಡಿ ಬಾಂಬ್ ಕುರಿತು ಮಾತನಾಡಿದ ಅವರು, ಸಿಡಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಈ ರೀತಿಯ ಸಿಡಿಗಳು ಬರ್ತವೆ ಹೋಗುತ್ತವೆ. ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ಈ ರೀತಿ ಮಾತನಾಡಬಾರದು. ಏನು ಸಿಡಿ ಇವೆ ಗೊತ್ತಿಲ್ಲ, ರಾಜಕಾರಣದ ಅವರ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರುತ್ತವೆ. ಅದರ ಬಗ್ಗೆ ಮಾತಾಡಬಾರದು ಎಂದರು.

    ಕಷ್ಟದಲ್ಲಿರುವ ರಾಜಕಾರಣಿಗಳಿಗೆ ನೈತಿಕ ಸ್ಥೈರ್ಯ ನೀಡಬೇಕು. ಅವರನ್ನು ಡ್ಯಾಮೇಜ್ ಮಾಡಬಾರದು, ಬರೀ ರಾಜಕಾರಣ ಮಾಡಬೇಕು. ಯಡಿಯೂರಪ್ಪನವರು ಬ್ಲ್ಯಾಕ್ ಗೆ ಹೆದರುವ ರಾಜಕಾರಣಿ ಅಲ್ಲ. ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ಮನುಷ್ಯ. ಯಾವ ಸಿಡಿ ಇಲ್ಲ, ಎನೂ ಇಲ್ಲ ಎಂದು ತಿಳಿಸಿದರು.

    ಅಸಮಾಧಾನಿತ ಕೆಲ ಶಾಸಕರು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸೋತವರಿಗೆ ಕೊಡ್ತಾರೆ, ಬಿಡ್ತಾರೆ ಗೊತ್ತಿಲ್ಲ. ಯೋಗೇಶ್ವರ್ ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು, ಕಷ್ಟಪಟ್ಟು ಆರೋಗ್ಯ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಮಾಡುವುದು ಯಾಕೆ ಬೇಕಿತ್ತು? ಬಿಜೆಪಿ ಸರ್ಕಾರ ರಚಿಸಲು ತಮ್ಮ ಮನೆಯ ಮೇಲೆ 9 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಕಡೆಯಿಂದ ಸಿ.ಪಿ.ಯೋಗೇಶ್ವರ್ ಅಂದು ಸಾಲ ತಂದಿದ್ದರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ರಮೇಶ್ ಅಸಮಾಧಾನಿತ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ. ಈ ಸರ್ಕಾರದ ರಚನೆಯಲ್ಲಿ ಯೋಗೇಶ್ವರ್ ಪಾತ್ರ ಬಹಳ ದೊಡ್ಡದಿದೆ ಎಂದು ಯೋಗೇಶ್ವರ್ ಪರ ರಮೇಶ್ ಬ್ಯಾಟಿಂಗ್ ಮಾಡಿದರು. ಅಲ್ಲದೆ ಭ್ರಷ್ಟರಿಗೆ ರಮೇಶ್ ಸಾಥ್ ಕೊಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಮಾತಾಡಿರುವುದು ನಮಗೆ ಆಶೀರ್ವಾದ, ಅದರ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ.

    ನಾಯಕತ್ವ ಬದಲಾವಣೆ ಆದರೆ ನಿಮ್ಮ ನಿಲುವೇನು ಎಂಬುದರ ಕುರಿತು ಉತ್ತರಿಸಿದ ಅವರು, ನಾವು ಯಡಿಯೂರಪ್ಪ ಪರವಾಗಿ ಇರುತ್ತೇವೆ. ಹಾದಿ ಬೀದಿಯಲ್ಲಿ ಮಾತನಾಡಲು ಆಗಲ್ಲ, ಎಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇವೆ. ಯೋಗೇಶ್ವರ್ ಮುಖ್ಯವಾಗಿದ್ದವರು ಎಂದಿದ್ದಾರೆ.

    ಶಾಸಕ ಮುನಿರತ್ನ ನೂರಕ್ಕೆ ನೂರರಷ್ಟು ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂದುಕೊಂಡದ್ದೆ. ಮುನಿರತ್ನ ಈಗ ನರ್ವಸ್ ಆಗಬಾರದು ಮುಂದಿನ ದಿನಗಳಲ್ಲಿ ಹೈಕಮಾಂಡ್ ಜತೆಗೆ ಮಾತನಾಡಿ ಮಂತ್ರಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರ ಪರವಾಗಿ ಪ್ರಯತ್ನ ಮಾಡುತ್ತೇವೆ. ಮುನಿರತ್ನ ಜೊತೆ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಬಾಂಬ್ ಟೀಮ್ ನ ಕ್ಯಾಪ್ಟನ್ ಅಲ್ಲ, ಕೊನೆಯ ಹದಿನೇಳನೆಯವನು. ಮುನಿರತ್ನ ಮತ್ತು ನಾಗೇಶ್ ಡ್ರಾಪ್ ಆಗ್ತಾರೆ ಎಂದು ನನಗೆ ಕಲ್ಪನೆ ಇರಲಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

    ಸಿ.ಪಿ.ಯೋಗೇಶ್ವರ್ ಹದಿನೈದು ದಿನ ಕುಟುಂಬ ಬಿಟ್ಟು ನಮ್ಮ ಜತೆಗಿದ್ದರು. 2023ರ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಆಗ ಅವರ ಹಕ್ಕು ಚಲಾಯಿಸಿ ಸರಿಯಾಗಿ ಸಚಿವರಾಗುವುದು ಒಳ್ಳೆಯದು. ಈಗಿನ ಸಂದರ್ಭಗಳನ್ನ ನೋಡಿ ತಿಳಿದುಕೊಳ್ಳಬೇಕು ಎಂದು ಅಸಮಾಧಾನ ಶಾಸಕರಿಗೆ ಟಾಂಗ್ ನೀಡಿದ್ದಾರೆ.

    ಜಿ.ಪಂ, ತಾ.ಪಂ ಚುನಾವಣೆ ಆದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಹೈಕಮಾಂಡ್ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಬೆಳಗಾವಿ, ಬೆಂಗಳೂರಿಗೆ ಸರ್ಕಾರ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರದ ಕುರಿತು ಮಾತನಾಡಿ, ರೇಣುಕಾಚಾರ್ಯ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇಟ್ಟುಕೊಂಡು ಕೂರುವ ಬದಲು ಬಿಡುಗಡೆ ಮಾಡಿದರೆ ಒಳ್ಳೆಯದು. ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆಯುತ್ತಾರೆ ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ.

  • ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್, ಕ್ರಿಮಿನಲ್ ಕೇಸ್ ಹಾಕುವ ಧೈರ್ಯ ಸಿಎಂಗೆ ಇದೆಯೇ- ಸಿದ್ದು ಪ್ರಶ್ನೆ

    ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್, ಕ್ರಿಮಿನಲ್ ಕೇಸ್ ಹಾಕುವ ಧೈರ್ಯ ಸಿಎಂಗೆ ಇದೆಯೇ- ಸಿದ್ದು ಪ್ರಶ್ನೆ

    ಬೆಂಗಳೂರು: ಸಿಡಿ ತೋರಿಸಿ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪದ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಹರಿಹಾಯ್ದಿದ್ದಾರೆ.

    ಸರಣಿ ಟ್ವೀಟ್ ಮಾಡಿರುವ ಅವರು, ಸಿಡಿ ತೋರಿಸಿ ಸಿಎಂ ಬೆದರಿಸಿ, ಕೆಲವರು ಮಂತ್ರಿ ಹುದ್ದೆ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸುತ್ತಿದ್ದಾರೆ. ಬ್ಲಾಕ್‍ಮೇಲ್ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಧೈರ್ಯ ಮುಖ್ಯಮಂತ್ರಿಗಳಿಗಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ, ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೆಲವರಿಗೆ ಈಗೀಗ ಸತ್ಯ ಗೊತ್ತಾಗ್ತಿದೆ ಎಂದು ಮತ್ತೊಂದು ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದ್ದರೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಳಿ ಗೋಗರೆಯುವ, ಕೈಕಾಲು ಹಿಡಿಯುವ ಅಗತ್ಯವಿರುತ್ತಿರಲಿಲ್ಲ. ಕೆಲವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಅಂತ ಗೊತ್ತಿದ್ರೂ ಸುಳ್ಳು ವಾಗ್ದಾನ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೊತಿರೋದು ಎಂದು ಆರೋಪಿಸಿದ್ದಾರೆ.

  • ಅಸಮಾಧಾನ ಇದ್ದವರು ದೆಹಲಿಯ ವರಿಷ್ಠರ ಜೊತೆ ಮಾತಾಡಲಿ: ಸಿಎಂ ಬಿಎಸ್‍ವೈ

    ಅಸಮಾಧಾನ ಇದ್ದವರು ದೆಹಲಿಯ ವರಿಷ್ಠರ ಜೊತೆ ಮಾತಾಡಲಿ: ಸಿಎಂ ಬಿಎಸ್‍ವೈ

    – ಹಗುರುವಾಗಿ ಮಾತಾಡಬೇಡಿ ಸಿಎಂ ವಾರ್ನಿಂಗ್

    ಬೆಂಗಳೂರು: ಅಸಮಾಧಾನ ಇದ್ದವರು ಬೇಕಾದ್ರೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡೋದಕ್ಕೆ ನನ್ನ ಅಭ್ಯಂತರವಿಲ್ಲ. ಸಚಿವ ಸ್ಥಾನ ವಂಚಿತರು ಹಗುರವಾಗಿ ಮಾತನಾಡೋದು ಬೇಡ ಎಂದು ಅತೃಪ್ತರಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

    ಇಂದು ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಯಾವುದೇ ಶಾಸಕರು ವಿರೋಧ ಇದ್ರೆ ದೆಹಲಿಗೆ ಹೋಗಲಿ. ವರಿಷ್ಠರಿಗೆ ದೆಹಲಿಗೆ ಹೋಗಿ ದೂರು ಕೊಡಲಿ. ಇಲ್ಲಿ ಮಾತಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಶಾಸಕರು ಮಾಡೋದು ಬೇಡ. ವರಿಷ್ಠರು ಸರಿ ತಪ್ಪು ಯಾವುದು ಅಂತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.

    ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಳ್ಳುವದರ ಜೊತೆ ಸಿಡಿ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ, ಅರವಿಂದ್ ಬೆಲ್ಲದ್, ರೇಣುಕಾಚಾರ್ಯ, ಸಿದ್ದು ಸವದಿ, ಎಸ್.ಎ.ರಾಮದಾಸ್ ಸೇರಿದಂತೆ ಹಲವರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಈ ನಡುವೆ ಎಂಎಲ್‍ಸಿ ಹೆಚ್. ವಿಶ್ವನಾಥ್, ಸಿಎಂ ಕೊಟ್ಟ ಮಾತು ತಪ್ಪುವ ಮೂಲಕ ವಚನಭ್ರಷ್ಟರಾಗಿದ್ದಾರೆ. 17 ಜನರ ಭಿಕ್ಷೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರೋದನ್ನ ಮರೆತ ಹಾಗೆ ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ‘ಮೆಗಾಸಿಟಿ’ ಬಾಂಬ್!

    ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ‘ಮೆಗಾಸಿಟಿ’ ಬಾಂಬ್!

    – ಬೆಂಗಳೂರು, ಬೆಳಗಾವಿಗೆ ಸರ್ಕಾರ ಸೀಮಿತ ಆಗ್ತಿದೆ
    – ಸಂಘಟನೆ, ನಾಯಕತ್ವದ ವಿರುದ್ಧ ಮಾತನಾಡಲ್ಲ

    ಬೆಂಗಳೂರು: ದೆಹಲಿಗೆ ತೆರಳುವ ಮುನ್ನ ಸಿಎಂ ಆಪ್ತ, ಶಾಸಕ ಎಂ.ಪಿ.ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹಗರಣದ ಬಾಂಬ್ ಸಿಡಿಸಿದ್ದಾರೆ. ಬುಧವಾರ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಮುಂದೆ ಸ್ಫೋಟಕ ವಿಷಯ ಹಂಚಿಕೊಳ್ಳಲಿದ್ದೇನೆ ಅಂತ ಹೇಳಿದ್ದರು.

    ನೂತನ ಸಚಿವ ಸಿ.ಪಿ.ಯೋಗೇಶ್ವರ್ ಮೆಗಾಸಿಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿವೆ. ಎಲ್ಲವನ್ನ ಇಂದು ದೆಹಲಿ ನಾಯಕರಿಗೆ ನೀಡಲಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಐವರು ಎಂಎಲ್‍ಸಿ ಗಳು ಸಚಿವರಾಗಿದ್ದು, ಕೇವಲ ಒಬ್ಬರಿಂದ ಸರ್ಕಾರ ರಚನೆಯಾಗಿಲ್ಲ. ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿತ್ತು ಎಂದು ಗರಂ ಆಗಿದ್ದಾರೆ.

    ಏನೂ ಇಲ್ಲದ ವೇಳೆ ಪಕ್ಷದ ಟಿಕೆಟ್ ನೀಡಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದರು. ಆದ್ರೆ ಮಧ್ಯ ಕರ್ನಾಟಕ ಮತ್ತು ದಾವಣಗೆರೆ ಜಿಲ್ಲೆಯ ಯಾರಿಗಾದ್ರೂ ಅವಕಾಶ ನೀಡಿ ಅಂತ ಕೇಳಿಕೊಳ್ಳಲಾಗಿತ್ತು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸಂಪುಟ ಸೀಮಿತವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗಕ್ಕೂ ಅನ್ಯಾಯವಾಗಿದೆ. ಸಚಿವ ಸ್ಥಾನ ಸಿಗದಕ್ಕೆ ಮನಸ್ಸಿಗೆ ನೋವಾಗಿದೆ. ಸಂಘಟನೆಯಿಂದ ಮೇಲೆ ಬಂದವನು ನಾನು. ಯಡಿಯೂರಪ್ಪ ನಾಯಕತ್ವ, ಪಕ್ಷದ ವಿರುದ್ಧ ನಾನು ಯಾವತ್ತು ಮಾತಾಡಲ್ಲ ಎಂದು ಹೇಳಿದರು.

    ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಎಂಎಲ್‍ಸಿ ಹೆಚ್.ವಿಶ್ವನಾಥ್, ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಯೋಗೇಶ್ವರ್ ವಿರುದ್ಧ 420 ಕೇಸ್ ಇದೆ. ಸಾವಿರಾರು ಜನರಿಗೆ ನಿವೇಶನ ನೀಡೋದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.

  • ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಬಾಗಲಕೋಟೆ: ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೀಗ ತೆರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಸಹ ಸೋಶಿಯಲ್ ಮೀಡಿಯಾದಲ್ಲಿ ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಸಿದ್ದು ಸವದಿ ಪೋಸ್ಟ್: ಹಿರಿತನ, ಪಕ್ಷ ನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಣ ಹೋದರು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕಾಗಿ ಮತ್ತು ಪಕ್ಷದ ಬಲವರ್ಧನೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದೇವೆ. ಯಾವುದೇ ಗಾಡ್ ಫಾದರ್ ಬೆಂಬಲವಿಲ್ಲದೆ ಪಕ್ಷವನ್ನು ಎಲ್ಲಾ ಹಂತದಲ್ಲಿ ಅಧಿಕಾರಕ್ಕೆ ತರುವ ಪಕ್ಷದ ಆದೇಶಗಳನ್ನು ಮನಸಾ ಪೂರ್ವಕ ಪಾಲನೆ ಮಾಡುವ ಮತ್ತು ಪಕ್ಷಕ್ಕಾಗಿ ಯಾವತ್ಯಾಗಕ್ಕೂ ಸಿದ್ಧರಿರುವವರಿಗೆ ಯಾವುದೇ ಸ್ಥಾನಮಾನ ಕೊಡುತ್ತಿಲ್ಲ.

    ಕೇವಲ #ಹೌದಪ್ಪ ಗಳಿಗೆ ಈ ದಿನಗಳಲ್ಲಿ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದ್ದನು ನೋಡಿ ನೋವಾಗುತ್ತಿದೆ. ಇದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಹೊತ್ತು ಬಂದಂತೆ ಕೊಡೆ ಹಿಡಿಯುವವರಿಗೆ ಮಣೆ ಹಾಕುವುದನ್ನು ಬಿಟ್ಟು ಸ್ವಲ್ಪ ಪಕ್ಷ ನಿಷ್ಟರನ್ನು ಸಹಿತ ಪರಿಗಣಿಸಿದರೆ ನಿಮಗೂ ಗೌರವ ಮತ್ತು ಪಕ್ಷಕ್ಕೂ ಒಳ್ಳೆಯದಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿ ಕೊನೆಗೆ ಜೈ ಬಿಜೆಪಿ ಅಂತ ಹೇಳಿದ್ದಾರೆ.

  • ನಾಳೆ ದೆಹಲಿಗೆ ತೆರಳುವ ಮುನ್ನ ರೇಣುಕಾಚಾರ್ಯ ಮೆಗಾ ಬಾಂಬ್!

    ನಾಳೆ ದೆಹಲಿಗೆ ತೆರಳುವ ಮುನ್ನ ರೇಣುಕಾಚಾರ್ಯ ಮೆಗಾ ಬಾಂಬ್!

    ಬೆಂಗಳೂರು: ಸಚಿವ ಸ್ಥಾನ ತಪ್ಪಿದ್ದಕ್ಕೆ ಶಾಸಕ ರೇಣುಕಾಚಾರ್ಯ ತೀವ್ರ ಬೇಸರಗೊಂಡಿದ್ದು, ವರಿಷ್ಠರ ಭೇಟಿ ಮಾಡಲು ನಾಳೆ ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದಾರೆ. ಇದಕ್ಕೂ ಮುನ್ನ ಮೆಗಾ ಬಾಂಬ್ ಸ್ಫೋಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಾಳೆ ಬೆಳಗ್ಗೆ 8.20ರ ಫ್ಲೈಟ್‍ನಲ್ಲಿ ರೇಣುಕಾಚಾರ್ಯ ದೆಹಲಿಗೆ ತೆರಳಲಿದ್ದಾರೆ. ಇದೇ ವೇಳೆ ನೂತನ ಸಚಿವರೊಬ್ಬರ ವಿರುದ್ಧ ಮೆಗಾ ಬಾಂಬ್ ಸಿಡಿಸಲಿದ್ದಾರೆ ಎನ್ನಲಾಗಿದೆ. ಹಲವರು ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ಈ ಕುರಿತು ಹೈಕಮಾಂಡ್ ಗೆ ದೂರು ನೀಡಲು ದೆಹಲಿ ಯಾತ್ರೆ ನಡೆಸುತ್ತಿದ್ದಾರೆ. ರೇಣುಕಾಚಾರ್ಯ ಅವರ ಬಾಂಬ್ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ನಾಳೆ ಬಿಜೆಪಿಯಲ್ಲಿ ಆ ಬಾಂಬ್ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಸೋತವರಿಗೆ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕುಷವಾಗಿ ಚಚಿ೯ಸುತ್ತೇನೆ.

    ಜಾತಿ…

    Posted by MP Renukacharya on Wednesday, January 13, 2021

    ಈ ಕುರಿತು ಫೇಸ್ಬುಕ್‍ನಲ್ಲಿ ಸಹ ಬರೆದುಕೊಂಡಿರುವ ಅವರು, ಸಚಿವ ಸ್ಥಾನ ಸಿಗಲಿಲ್ಲವೆಂದು ಸಹಜವಾಗಿ ಅಘಾತವಾಗಿದೆ. ನಾಯಕತ್ವ ಮತ್ತು ಪಕ್ಷದ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದೇನೆ. ಮುಂದೆಯೂ ಇಡುತ್ತೇನೆ. ನನ್ನ ಹೋರಾಟ ಪಕ್ಷ ಮತ್ತು ನಾಯಕತ್ವದ ವಿರುದ್ಧವಲ್ಲ. ಈಗ ಸರ್ಕಾರದಲ್ಲಾಗಿರುವ ತಪ್ಪು ವ್ಯವಸ್ಥೆಯ ವಿರುದ್ಧ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೆದ್ದ ಶಾಸಕರಿಗೆ ಮತ್ತು ಮತದಾನ ಮಾಡಿದ ಮತದಾರರಿಗೆ ಮಾಡಿದ ಅವಮಾನವಿದು. ಕರ್ನಾಟಕ ಸರ್ಕಾರ ಕೇವಲ 2 ಜಿಲ್ಲೆಗೆ ಮಾತ್ರ ಸೀಮಿತವಾಗಬಾರದು. ನಾಯಕತ್ವ ಮತ್ತು ಸಂಘಟನೆ ನನಗೆ ಎಲ್ಲಾ ಸ್ಥಾನ-ಮಾನ ನೀಡಿದೆ ಎಂದಿದ್ದಾರೆ.

    ಸಚಿವ ಸ್ಥಾನ ಸಿಗಲಿಲ್ಲವೆಂದು ಸಹಜವಾಗಿ ಅಘಾತವಾಗಿದೆ. ನಾಯಕತ್ವ ಮತ್ತು ಪಕ್ಷದ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಿನಿ ಮುಂದೆಯು…

    Posted by MP Renukacharya on Wednesday, January 13, 2021

    ಸೋತವರಿಗೆ, ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕುಷವಾಗಿ ಚರ್ಚಿಸುತ್ತೇನೆ. ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿರುವುದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವ ಜನಾಂಗದ ಮತದಾರರಿಗೆ ಮಾಡಿದ ಅಪಮಾನ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

  • ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಕ್ಕಿಲ್ಲ: ಸಾರಾ ಮಹೇಶ್

    ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಕ್ಕಿಲ್ಲ: ಸಾರಾ ಮಹೇಶ್

    – ಬಿಎಸ್‍ವೈ ಟೀಕಿಸುವ ಸಣ್ಣ ನೈತಿಕತೆಯೂ ಅವರಿಗಿಲ್ಲ

    ಚಾಮರಾಜನಗರ: ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ಟೀಕಿಸುವ ಸಣ್ಣ ನೈತಿಕತೆಯೂ ಇವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೆಸರು ಹೇಳದೆ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂವಿಧಾನಿಕ ಸ್ಥಾನ ಹೊಂದಬಾರದು ಎಂಬ ಹೈಕೋರ್ಟ್ ತೀರ್ಪಿದ್ದರೂ ನೀವು ಪರಿಷತ್ ಸದಸ್ಯರಾಗಿರೋದು ತಪ್ಪು. ವಿಶ್ವನಾಥ್ ಅವರನ್ನು ನಲವತ್ತು ವರ್ಷ ಕಾಂಗ್ರೆಸ್ ಮದ್ವೆಯಾಗಿತ್ತು. ನಾವು ಕೂಡುವಳಿ ಮಾಡ್ಕೊಂಡಿದ್ವಿ, ನೀವು ದಿನದ ವ್ಯಾಪಾರಕ್ಕೆ ತೆಗೆದುಕೊಂಡಿದ್ದೀರಿ, ನಿಮ್ಮ ಕತೆ ಏನಾಗುತ್ತೋ ಎಂದು ಆಗಲೇ ಬಿಜೆಪಿಗೆ ಎಚ್ಚರಿಸಿದ್ದೆ ಎಂದು ಪರೋಕ್ಷವಾಗಿ ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಿದೆ. ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು, ಮನ, ಧನ ನೀಡಿ ಆಶ್ರಯ ಕೊಟ್ಟ ಜೆಡಿಎಸ್ ಗೆ ದ್ರೋಹ ಮಾಡಿದ್ದೀರಿ. ಜೆಡಿಎಸ್ ಕಾರ್ಯಕರ್ತರ ನಿಟ್ಟುಸಿರು ನಿಮ್ಮನ್ನ ಸುಮ್ಮನೆ ಬಿಡುತ್ತಾ ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಮಾತಿಗೆ ತಪ್ಪಿದವರೆಂದು ಹೇಳಲು ಇವರಿಗೆ ನೈತಿಕತೆ ಇಲ್ಲ. ಬಿಜೆಪಿಗೆ ಹೋಗಿದ್ದ ಹದಿನೇಳು ಜನರಲ್ಲಿ ಹದಿನಾರು ಜನರಿಗೆ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಹೈಕೋರ್ಟ್ ತೀರ್ಪಿಗಿಂತ ಯಡಿಯೂರಪ್ಪ ದೊಡ್ಡವರಲ್ಲ. ಅಧಿಕಾರ ಇಲ್ಲದೇ ನಾನೂ ಬಿಜೆಪಿಯಲ್ಲಿ ಬಿಎಸ್‍ವೈ ಅವರೊಂದಿಗೆ ಬಾವುಟ ಕಟ್ಟಿದ್ದೇನೆ. ಅಲ್ಲೇನು ನಡೆಯುತ್ತೆ ನನಗೂ ಗೊತ್ತು ಎಂದು ಹೇಳಿದರು.

    ನನ್ನ ಉಸಿರು ಇರೋ ತನಕ ಅವರ ಹೆಸರು ಹೇಳಲ್ಲ, ಅದಕ್ಕೇ ಪರೋಕ್ಷವಾಗಿ ಟೀಕೆ ಮಾಡಿದ್ದೇನೆ. ದೇವೇಗೌಡರು ದೇವರಾದರೆ, ಕುಮಾರಸ್ವಾಮಿ ರಾಕ್ಷಸರಾಗಿ ಬಿಟ್ಟರೆ ಎಂದು ಪ್ರಶ್ನಿಸಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ದುಡ್ಡು ಕೊಟ್ಟಿರಲಿಲ್ಲವಾ, ವಿಶ್ವನಾಥ್ ಒಬ್ಬ ದುರಂತ ನಾಯಕ ಎಂದು ಕುಟುಕಿದರು.

  • ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿದವರಿಗೆ ಸಚಿವ ಸ್ಥಾನ- ಯತ್ನಾಳ್ ಹೊಸ ಬಾಂಬ್

    ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿದವರಿಗೆ ಸಚಿವ ಸ್ಥಾನ- ಯತ್ನಾಳ್ ಹೊಸ ಬಾಂಬ್

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಚಿವ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ, ಪ್ರಾಮಾಣಿಕತನವನ್ನು ಸಿಎಂ ಪರಿಗಣಿಸಲಿಲ್ಲ. ಕಳೆದ ಮೂರು ತಿಂಗಳಿಂದ ಈ ಮೂವರು ಸಿಡಿ ಇಟ್ಟುಕೊಂಡು ಸಿಎಂ ಯಡ್ಡಿಯೂರಪ್ಪನವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹೀಗಾಗಿ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಬ್ಬರು ಸಿಡಿ ಜೊತೆ ಸಿಎಂ ಪುತ್ರ ವಿಜಯೇಂದ್ರಗೆ ಹಣ ನೀಡಿ ಸಿಎಂ ಕಾರ್ಯದರ್ಶಿ ಆಗಿದ್ದಾರೆ. ಇದು ಅಪವಿತ್ರ ಸಂಪುಟ ವಿಸ್ತರಣೆ. ಸಿಎಂ ವೀರಶೈವ ಲಿಂಗಾಯತ ಸಮಾಜ ತಲೆ ತಗ್ಗಿಸುವಂಥ ಕೆಲಸ ಮಾಡಿದ್ದಾರೆ ಎಂದು ಸಿಎಂ ಯಡ್ಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ಅಸಮಧಾನ ಸ್ಫೋಟಿಸಿದ್ದಾರೆ.

    ವೀರಶೈವ ಲಿಂಗಾಯತ ಸಮಾಜ ನಿಮ್ಮ ಹಿಂದೆ ಇಲ್ಲ. ಇಡೀ ವೀರಶೈವ ಸಮಾಜ ನಮ್ಮ ಹಿಂದಿದೆ. ಕೇಂದ್ರ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಿ. ಇವತ್ತಿನಿಂದ ನಿಮ್ಮ ಅಂತ್ಯ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಮತ್ತೆ ಮೋದಿಯವರ ನೇತೃತ್ವದಲ್ಲಿ ಹೊಸ ಯುಗ ಪ್ರಾರಂಭವಾಗುತ್ತೆ ಎಂಬ ವಿಶ್ವಾಸ ವಿದೆ ಎಂದು ಸಿಎಂ ಯಡ್ಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಡಿಯೂರಪ್ಪ, ವಿಜಯೇಂದ್ರ ಕಾಂಗ್ರೆಸ್ ಮುಖಂಡರನ್ನು ಖರೀದಿ ಮಾಡಿದ್ದಾರೆ. ಕಾಂಗ್ರೆಸ್ ಸತ್ತಿದೆ, ವಿರೋಧ ಪಕ್ಷ ಇಲ್ಲ. ಎಲ್ಲವೂ ಹೊಂದಾಣಿಕೆ ಇದೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್, ಕೆ.ಜೆ.ಜಾರ್ಜ್ ಇವರು ಯಡಿಯೂರಪ್ಪನವರ ಜೊತೆ ಇದ್ದಾರೆ. ಹಿಂದೂಗಳ ದೇವರನ್ನ ಅಪಮಾನ ಮಾಡಿದವರು ಇಂದು ಸಚಿವರಾಗುತ್ತಿದ್ದಾರೆ. ರಾಮನ ಬಗ್ಗೆ, ಸೀತೆಯ ಬಗ್ಗೆ ಅಸಹ್ಯಕರವಾಗಿ ಸಂದೇಶ ಕಳುಹಿಸಿದವರು ಇಂದು ಮಂತ್ರಿ ಆಗುತ್ತಿರುವುದು ದುರ್ದೈವ. ಇದು ಅಂತ್ಯ ಕಾಲ, ವಿನಾಶ ಕಾಲೆ ವಿಪರೀತ ಬುದ್ಧಿ. ಈ ಕೆಲಸದಲ್ಲಿ ಯಡಿಯೂರಪ್ಪ ಹೋಗುತ್ತಿದ್ದಾರೆ ಎಂದು ಗುಡುಗಿದ್ದಾರೆ.

  • ಸಚಿವ ಸ್ಥಾನ ನೀಡದಿದ್ದರೆ ಸೂಕ್ತ ನಿರ್ಧಾರ ಕೈಗೊಳ್ತೇನೆ- ರೆಬೆಲ್ ಆಗುವ ಸುಳಿವು ನೀಡಿದ ರೇಣುಕಾಚಾರ್ಯ

    ಸಚಿವ ಸ್ಥಾನ ನೀಡದಿದ್ದರೆ ಸೂಕ್ತ ನಿರ್ಧಾರ ಕೈಗೊಳ್ತೇನೆ- ರೆಬೆಲ್ ಆಗುವ ಸುಳಿವು ನೀಡಿದ ರೇಣುಕಾಚಾರ್ಯ

    – ಬೆಂಗಳೂರು, ಬೆಳಗಾವಿಗೆ ಮಾತ್ರ ಸಚಿವ ಸ್ಥಾನ ಸೀಮಿತನಾ?
    – ದಾವಣಗೆರೆ ಆರು ಜನ ಶಾಸಕರನ್ನು ಕೊಟ್ಟಿಲ್ವಾ?

    ದಾವಣಗೆರೆ: ಮುಖ್ಯಮಂತ್ರಿಗಳಿಂದ ಈ ವರೆಗೆ ಯಾವುದೇ ಕರೆ ಬಂದಿಲ್ಲ. ಸಂಜೆ ವರೆಗೆ ಕಾದು ನೋಡುತ್ತೇನೆ. ಸಚಿವ ಸ್ಥಾನ ನೀಡದಿದ್ದರೆ ಸೂಕ್ತ ಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ರೆಬೆಲ್ ಆಗುವ ಸುಳಿವು ನೀಡಿದ್ದಾರೆ.

    ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾಗಬೇಕು ಎಂಬುದು ಜನರ ಅಪೇಕ್ಷೆ. ಸಿಎಂ ಅವರಿಂದ ಈವರೆಗೆ ಯಾವುದೇ ಕರೆ ಬಂದಿಲ್ಲ. ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕ, ಅವಕಾಶ ಕೊಡಲೇ ಬೇಕು ಎಂಬ ಬೇಡಿಕೆ ಇದೆ. ಸಚಿವ ಸ್ಥಾನದ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ಇಲ್ಲ. ಕಾದು ನೋಡುತ್ತೇನೆ, ಸಂಜೆವರೆಗೆ ಕಾದು ನಂತರ ಪ್ರತಿಕ್ರಿಯಿಸುತ್ತೇನೆ ಎಂದು ರೇಣುಕಾಚಾರ್ಯ ಅವರು ಸಂಜೆವರೆಗೆ ತಮ್ಮ ನಿರ್ಧಾರ ಕಾಯ್ದಿರಿಸಿದ್ದಾರೆ.

    ಸಚಿವ ಸ್ಥಾನ ನೀಡದಿದ್ದಲ್ಲಿ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸಾಮಾಜಿಕವಾಗಿ ಭೌಗೋಳಿಕವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾದರೆ ನಮಗೆ ನೋವು ಆಗುತ್ತೆದೆ. ದಾವಣಗೆರೆ ಆರು ಜನ ಶಾಸಕರನ್ನು ಕೊಟ್ಟಿಲ್ವಾ, ಕೇವಲ ಬೆಂಗಳೂರು-ಬೆಳಗಾವಿಗೆ ಮಾತ್ರ ಸೀಮಿತವೇ? ಬೇರೆ ಜಿಲ್ಲೆಗಳು ಇಲ್ಲವೇ? ದಾವಣಗೆರೆಗೆ ಆನ್ಯಾಯವಾಗಿದೆ, ಭೌಗೋಳಿಕವಾಗಿ ಸಹ ಅನ್ಯಾಯವಾಗಿದೆ ಎಂದು ಸಿಎಂ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ.

  • ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಮತ್ತಷ್ಟು ಸ್ಟ್ರಾಂಗ್ – ಬಿಎಸ್‍ವೈ ಅಧಿಕಾರ ಅಬಾಧಿತ

    ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಮತ್ತಷ್ಟು ಸ್ಟ್ರಾಂಗ್ – ಬಿಎಸ್‍ವೈ ಅಧಿಕಾರ ಅಬಾಧಿತ

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ಸರ್ಕಸ್ ತೆರೆಗೆ ದಿನಾಂಕ ನಿಗದಿಯಾಗಿದೆ. ತಮ್ಮ ಲೆಕ್ಕಾಚಾರದಂತೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇತ್ತ ಉಪ ಚುನಾವಣೆಯಲ್ಲಿ ಗೆದ್ದು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು ಯಡಿಯೂರಪ್ಪರನ್ನ ಮತ್ತಷ್ಟು ರಾಜಕೀಯವಾಗಿ ಬಲಿಷ್ಠರನ್ನಾಗಿಸಿದೆ.

    ಇತ್ತ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕೇಳಿ ಬಂದಿದ್ದರೂ, ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ಬಿಜೆಪಿ ಹೈಕಮಾಂಡ್ ಪ್ರಸ್ತಾಪ ಮಾಡಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾಗ ಹಲವು ಶಾಸಕರು ದೂರು ಕೊಟ್ಟಿದ್ದರು. ಹಾಗಾಗಿ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯ, ತೊಡಕುಗಳನ್ನು ನಿವಾರಿಸಿಕೊಳ್ಳಿ ಎಂದು ಶಾಸಕರ ದೂರು-ದುಮ್ಮಾನಗಳನ್ನು ಪ್ರಸ್ತಾಪಿಸಿ ಬಿಎಸ್‍ವೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದಷ್ಟು ಸಲಹೆ-ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಮುಂದಿನ ಮೂರು ಉಪ ಚುನಾವಣೆಗಳಲ್ಲಿ ಜಯ ಗಳಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳಿ. ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮುನ್ನ ಸಚಿವರು ಮತ್ತು ಪಕ್ಷದ ಕೋರ್ ಕಮೀಟಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಅಮಿತ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಎಲ್ಲರ ವಿಶ್ವಾಸ ಗಳಿಸಿಕೊಂಡು ಆಡಳಿತ ನಡೆಸೋದಾಗಿ ಯಡಿಯೂರಪ್ಪನವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೊಟ್ಟ ಮಾತು ಉಳಿಸಿಕೊಂಡ ಬಿಎಸ್‍ವೈ: ಸಿಎಂ ಬಿಎಸ್‍ವೈ ರಾಜ್ಯ ರಾಜಕೀಯದಲ್ಲಿ ವಿಭಿನ್ನ ಹಾದಿಯಲ್ಲಿ ಸಾಗುವ ಮೂಲಕ ಎಲ್ಲರ ಗಮನ ಸೆಳೆದವರು. ಕಾಂಗ್ರೆಸ್‍ನಲ್ಲಿ ಅತೃಪ್ತಿ ಹೊಂದು ಬಿಜೆಪಿಗೆ ಸೇರ್ಪಡೆಯಾದ ಎಲ್ಲಾ ವಲಸಿಗರಿಗೆ ಮಂತ್ರಿ ಸ್ಥಾನ ನೀಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಭಾನುವಾರ ಹೈಕಮಾಂಡ್ ಜೊತೆ ಸಿಎಂ ಬಿಎಸ್‍ವೈ ಸಭೆ ನಡೆಸಿದ್ದು, ಹೈಕಮಾಂಡ್ ಸಂಪುಟ ವಿಸ್ತರಣೆಗೆ 3 ಷರತ್ತು ಬದ್ಧ ಅನುಮತಿ ನೀಡಿದೆ. ಈ ಬೆನ್ನೆಲ್ಲೇ ಯಡಿಯೂರಪ್ಪನವರು ವಲಸಿಗರಿಗೆ ಮಂತ್ರಿ ಸ್ಥಾನ ಕೊಡುವುದು ಖಚಿತಗೊಳಿಸಿದ್ದಾರೆ. ಹೀಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಬಿಎಸ್‍ವೈ ಹಿರಿಮೆ, ಹೆಗ್ಗಳಿಕೆ ಹೆಚ್ಚಾಗಿದೆ.