Tag: CAA protest

  • ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ

    ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ

    ಬೆಂಗಳೂರು: ರಾಜ್ಯದೆಲ್ಲೆಡೆ ಇಂದು ಪೌರತ್ವ ಕಾಯ್ದೆ ಖಂಡಿಸಿ ಜನ ಬೀದಿಗಿಳಿಯಲಿದ್ದಾರೆ. ಆದರೆ ಪೊಲೀಸರು ಈಗಾಗಲೇ ಕಂಡೀಷನ್ ಹಾಕಿದ್ದಾರೆ.

    ಪೌರತ್ವ ಕಾಯ್ದೆ ಬಗ್ಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆದರೆ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯಲಿದೆ. ಕಾಯ್ದೆ ಖಂಡಿಸಿ ಹತ್ತಾರು ಸಂಘಟನೆಗಳು, ಸಾವಿರಾರು ಜನ ರೋಡಿಗಿಳಿಯಲಿದ್ದಾರೆ. ಆದರೆ ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದ್ದು, ಅದಕ್ಕೂ ಮೀರಿ ಪ್ರತಿಭಟನೆ ನಡೆಸಿದ್ರೆ ಕಾನೂನು ಕ್ರಮ ಗ್ಯಾರೆಂಟಿ ಅಂತ ಪೊಲೀಸರು ಗುಡುಗಿದ್ದಾರೆ. ಅಲ್ಲದೆ ಪೊಲೀಸರು ಗುರುತಿಸಿದ ಸರ್ಕಲ್‍ನಲ್ಲೇ ಪ್ರತಿಭಟನೆ ನಡೆಸಬೇಕು. ಅದು ಬಿಟ್ಟು ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ.

    ಪೌರತ್ವ ಕಾಯ್ದೆ ಖಂಡಿಸಿ ಇಂದು ಬೀದರ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಂದತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ವತಃ ಎಸ್ ಪಿ ಟಿ. ಶ್ರಿಧರ್ ಸ್ಪಷ್ಟನೆ ನೀಡಿದ್ದು, ಬಂದ್ ಇಲ್ಲ, ರ‍್ಯಾಲಿಯೂ ಇಲ್ಲ. ಬರೀ ಪ್ರತಿಭಟನೆ ಇದೆ ಎಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಸ್ ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕಾರವಾರದ ಭಟ್ಕಳದಲ್ಲಿ ಮುಸ್ಲಿಂ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಲಿದೆ. ಸೆಕ್ಷನ್ 144 ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಷರತ್ತುಬದ್ಧ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭಟ್ಕಳ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಇಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪ್ರತಿಭಟನೆ ನಾಳೆಗೆ ಮುಂದೂಡಿಕೆಯಾಗಿದೆ. ಸಿ.ಎಂ ಇಬ್ರಾಹಿಂ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಮುಖಂಡರೊಂದಿಗೆ ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಚಾಮರಾಜನಗರದಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ ಅಂತ ಪೊಲೀಸ್ ಇಲಾಖೆ ಹೇಳಿದೆ. ಇತ್ತ ಬೆಳಗಾವಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಬಳಿಕ ಕಲ್ಲು ತೂರಾಟ ಮಾಡಿದ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.

    ಕಲಬುರಗಿ, ಮೈಸೂರು, ರಾಮನಗರ, ಗದಗ ಸೇರಿದಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದೆ. ಪೊಲೀಸರು ಈಗಾಗಲೇ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಪ್ರತಿಭಟನೆ ಅಂತ ಕಾನೂನು ಕೈಗೆ ತೆಗೆದುಕೊಳ್ಳುವ ಮುನ್ನ ಎಚ್ಚರವಾಗಿರಿ.

  • ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ-ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯಿಸಿದೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಎಂ.ಕೆ.ಮಸೂದ್, ಮಂಗಳೂರಿನ ಗೋಲಿಬಾರ್ ಘಟನೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದು, ಆವತ್ತು ಕಫ್ರ್ಯೂ ವಿಧಿಸಿ, ಫೈರಿಂಗ್ ಮಾಡಿದ್ದಾರೆ. ಕಫ್ರ್ಯೂ ವಿಧಿಸಿರುವ ಬಗ್ಗೆ ಜನರಿಗೆ ತಿಳಿಸದೇ ಫೈರ್ ಮಾಡಿದ್ದು ಯಾಕೆ? ಕಫ್ರ್ಯೂ ವಿಧಿಸಿದ್ದ ಬಗ್ಗೆ ಜನತೆಗೆ ಯಾವುದೇ ಮಾಹಿತಿ ನೀಡದ ಪೊಲೀಸರು ಗೋಲಿಬಾರ್ ನಡೆಸುವ ಬಗ್ಗೆಯೂ ಜನತೆಯನ್ನು ಎಚ್ಚರಿಸಿಲ್ಲ. ಹೀಗಾಗಿ ಈ ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಶಿಕ್ಷಿಸಬೇಕು. ನಿಜವಾದ ವಿಚಾರ ಹೊರ ಬರಬೇಕಾದ್ರೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಸಿಎಎ ವಿರುದ್ಧ ಸೆಂಟ್ರಲ್ ಕಮಿಟಿಯಡಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತೇವೆ. ಕ್ರಿಸ್ಮಸ್ ಹಿನ್ನೆಲೆ ಡಿ.28ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ. ಜ.4 ರಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟಿಸುತ್ತೇವೆ. ಪ್ರತಿಭಟಿಸಲು ಖಂಡಿತವಾಗಿಯೂ ಪ್ರಜಾಪ್ರಭುತ್ವದಲ್ಲಿ ಆಸ್ಪದವಿದೆ. ಹೀಗಾಗಿ ಅನುಮತಿ ಸಿಗುವ ನಂಬಿಕೆ ಇದೆ ಎಂದರು. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮತ್ತು ಗಾಯಾಳು ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಈಗ ಸರ್ಕಾರ ಮೃತರ ಕುಟುಂಬಸ್ಥರಿಗೆ ಘೋಷಿಸಿದ 10 ಲಕ್ಷ ರೂ. ಅವರ ಸಂಸಾರ ನಿರ್ವಹಣೆಗೆ ಸಾಕಾಗೋದಿಲ್ಲ. ಹೀಗಾಗಿ ಹೆಚ್ಚಿನ ಪರಿಹಾರ ಸರ್ಕಾರ ಘೋಷಿಸಬೇಕು. ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಎಂ.ಕೆ.ಮಸೂದ್ ಆಗ್ರಹಿಸಿದರು.

  • ಭಟ್ಕಳದಲ್ಲಿ ಪೌರತ್ವ ವಿರೋಧಿ ಹೋರಾಟ

    ಭಟ್ಕಳದಲ್ಲಿ ಪೌರತ್ವ ವಿರೋಧಿ ಹೋರಾಟ

    ಕಾರವಾರ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ವಿರೋಧಿಸಿ ಭಟ್ಕಳದಲ್ಲಿ ತಂಜೀಂ ಸಂಸ್ಥೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಭಟ್ಕಳದಾದ್ಯಾಂತ ಇಂದು ಸಂಜೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    ಜಿಲ್ಲೆಯಲ್ಲಿ 144 ಸೆಕ್ಷನ್ ಇದ್ದ ಕಾರಣ ಸಂಘಟನೆ ಕರೆದಿದ್ದ ಪ್ರತಿಭಟನೆಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಶನಿವಾರದಿಂದ ಕಲಂ 144 ಸಡಿಲಿಕೆ ಮಾಡಿದ್ದು ಸೋಮವಾರ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಷರತ್ತುಬದ್ಧ ಪರವಾನಿಗೆ ನೀಡಿದೆ.

    ಮಂಗಳೂರಿನಂತೆ ಅಹಿತಕರ ಘಟನೆ ಆಗದಂತೆ ಭಟ್ಕಳ ನಗರದ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಿದೆ. ಆರು ಡಿ.ಆರ್, ಮೂರು ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜನೆ ಮಾಡಿದ್ದು, 500 ಪೊಲೀಸರನ್ನು ನಗರದಾದ್ಯಂತ ಇಂದು ಸಂಜೆಯಿಂದ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಯು ಭಟ್ಕಳ ನಗರದ ಅಂಜಮನ್ ಗ್ರೌಂಡ್ ನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರೌಂಡ್ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಯು ಕೇವಲ ಭಟ್ಕಳದಲ್ಲಿ ಅಲ್ಲದೇ ಜಿಲ್ಲೆಯ ದಾಂಡೇಲಿಯಲ್ಲಿ ಸಹ ನಡೆಯಲಿದೆ. ದಾಂಡೇಲಿ ಸಂವಿಧಾನ ಬಚಾವ್ ಆಂದೋಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

    ಪ್ರತಿಭಟನೆಗೆ ಅವಕಾಶ ನೀಡುವಂತೆ ತಂಜೀಂ ಸಂಘಟನೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕೋರಿತ್ತು. ಒಂದು ವೇಳೆ ಪರವಾನಗಿ ದೊರೆಯದಿದ್ದರೂ ಭಟ್ಕಳದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತೇವೆ ಎಂದು ತಂಜೀಂ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಭಟ್ಕಳಕ್ಕೆ ಭೇಟಿ ನೀಡಿ ತಂಜಿಂ ಸಂಘಟನೆಗೆ ಷರತ್ತುಬದ್ಧ ಅನುಮತಿ ನೀಡಿದ್ದು ಒಂದು ವೇಳೆ ಅಹಿತಕರ ಘಟನೆ ನಡೆದರೆ ಸಂಘಟನೆಯೇ ಹೊಣೆ ಎಂದು ಷರತ್ತು ವಿಧಿಸಿದ್ದಾರೆ.

  • ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ- 400 ಮೀಟರ್ ಉದ್ದದ ನಾಡಧ್ವಜದ ರಂಗು

    ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ- 400 ಮೀಟರ್ ಉದ್ದದ ನಾಡಧ್ವಜದ ರಂಗು

    ರಾಮನಗರ: ಪೌರತ್ವ ತಿದ್ದುಪಡಿ ವಿರೋಧಿಸಿ ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಮುಸ್ಲಿಂ ಹಾಗೂ ಹಿಂದುಗಳು ಜಾತ್ಯಾತೀತವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ 400 ಮೀಟರ್ ಉದ್ದದ ಕನ್ನಡದ ಬಾವುಟ ರಂಗು ಪಡೆದುಕೊಂಡು ಪ್ರತಿಭಟನೆ ರ್ಯಾಲಿಯುದ್ದಕ್ಕೂ ಸಾಗಿತು.

    ನಗರದ ಬೆಂಗಳೂರು- ಮೈಸೂರು ರಸ್ತೆಯ ಶೇರು ಸರ್ಕಲ್ ನಿಂದ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಭಾಗಿಯಾಗಿದ್ದರು. ಇನ್ನೂ ಶೇರು ಸರ್ಕಲ್ ನಿಂದ ಹೊರಟ ಪ್ರತಿಭಟನಾ ರ್ಯಾಲಿ ಹೆದ್ದಾರಿಯಲ್ಲಿ ಸಾಗಿ ಸಾತನೂರು ಸರ್ಕಲ್ ನಿಂದ ಹಳೇ ಕೋರ್ಟ್ ತನಕ ಸಾಗಿತು. ಪ್ರತಿಭಟನಾಕಾರರು ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

    ಶೇರು ಸರ್ಕಲ್ ನಿಂದಲೇ ಕನ್ನಡದ ಬಾವುಟವನ್ನು ಪ್ರತಿಭಟನಾಕಾರರು ಹಿಡಿದುಕೊಂಡು ಸಾಗಿದ್ರು. ಬರೋಬ್ಬರಿ 400 ಮೀಟರ್ ಗೂ ಉದ್ದವಾದ ಬಾವುಟವು ಪ್ರತಿಭಟನೆಯಲ್ಲಿ ಆಕರ್ಷಣೀಯವಾಗಿತ್ತು. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗುಲಾಬಿ ನೀಡುವ ಮೂಲಕ ಹಿಂದೂ- ಮುಸ್ಲಿಂ ಭಾಯ್ ಭಾಯ್ ಎಂದು ಘೋಷಣೆ ಕೂಗುತ್ತಿದ್ದರು.

    ಪ್ರತಿಭಟನೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಭಾಗವಹಿಸಿದ್ದರು. ಅಲ್ಲದೇ ರ್ಯಾಲಿಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರ ಜೊತೆ ನಡೆದು ಸಾಗಿದ್ದಲ್ಲದೇ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರನ್ನು ಹುರಿದುಂಬಿಸಿದರು.

    ಇದೇ ವೇಳೆ ಮಾತನಾಡಿದ ಶಾಸಕ ಜಮೀರ್ ಅಹಮದ್, ಕೇಂದ್ರ ಸರ್ಕಾರ ಎನ್‍ ಆರ್ ಸಿ, ಸಿಎಎ ತರುವ ಮೂಲಕ ದೇಶದಲ್ಲಿ ಮುಸ್ಲಿಮರ ವಿರೋಧಿ ನೀತಿಯನ್ನು ತಾಳುತ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಬಾಳ್ವೆ ನಡೆಸುತ್ತಿದ್ದು ತಮ್ಮ ಬೇಳೆ ಬೇಯಿಸಿಕೊಳ್ಳಲು ಪೌರತ್ವ ಕಾಯ್ದೆ ತಿದ್ದುಪಡಿ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತ ವೈಫಲ್ಯವನ್ನ ಮುಚ್ಚಿಟ್ಟುಕೊಳ್ಳಲು ಈ ರೀತಿಯಾಗಿ ಜನರ ದಾರಿಯನ್ನ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

  • ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹತ್ತು ಮಂದಿಯನ್ನು ಬಲಿ ಪಡೆದುಕೊಂಡಿದೆ. ನಿನ್ನೆಯಿಂದ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

    ಫಿರೋಝ್ ಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್, ಮೀರಠ್ ನಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಯೋಗಿ ಆದಿತ್ಯನಾಥ್ ವದಂತಿಗಳಿಗೆ ಕಿವಿಗೊಡದೆ ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಡುವಂತೆ ಮನವಿ ಮಾಡಿದ್ದಾರೆ.

    ಸುಳ್ಳು ಸುದ್ದಿ ಹಬ್ಬುವವರನ್ನ ಹಿಂಸಾತ್ಮಕ ಪ್ರತಿಭಟನೆ ಮಾಡುವುವರನ್ನ ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

    ಈ ಮಧ್ಯೆ, ಯಾವೊಬ್ಬ ಪ್ರತಿಭಟನಾಕಾರನೂ ಪೊಲೀಸರ ಗುಂಡಿಗೆ ಬಲಿಯಾಗಿಲ್ಲ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ. ಒಂದೇ ಒಂದು ಬಾರಿಯೂ ನಾವು ಶೂಟ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಗುಂಡಿನ ದಾಳಿ ನಡೆದಿದೆ ಎಂದಾಗಿದ್ದಲ್ಲಿ ಅದು ಪ್ರತಿಭಟನಾಕಾರರ ಕಡೆಯಿಂದಲೇ ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

    ಶುಕ್ರವಾರ ಲಕ್ನೊ, ವಾರಾಣಾಸಿ, ಬರೋಲಿ, ಗೋರಕಪುರ್, ಬದೋಹಿ, ಸಂಬಾಲ್ ನಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

  • CAA ವಿರೋಧಿಸಿ ಪ್ರತಿಭಟನೆ – SIT ತನಿಖೆಗೆ ಮುಂದಾದ ಸರ್ಕಾರ

    CAA ವಿರೋಧಿಸಿ ಪ್ರತಿಭಟನೆ – SIT ತನಿಖೆಗೆ ಮುಂದಾದ ಸರ್ಕಾರ

    ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಸಂಧರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳನ್ನು ತನಿಖೆ ನಡೆಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿರುವ ಸಿಎಂ ಸರ್ಬಾನಂದ ಸೋನೊವಾಲ್ ಹಿಂಸಾಚಾರದಲ್ಲಿ ಭಾಗಿಯಾಗಿ ಶಾಂತಿ ಕದಡಿದವರನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಸ್ಸಾಂ ಜನರೊಂದಿಗೆ ಉಳಿಯಲಿದೆ ಇದಕ್ಕಾಗಿ ನಾವು ಯಾವ ಶಾಸನಗಳನ್ನು ಬೇಕಾದರು ಜಾರಿಗೆ ತರುತ್ತೇವೆ. ಅಸ್ಸಾಂ ಒಪ್ಪಂದ ಆರನೇ ಷರತ್ತು ಜಾರಿಗೆ ತರಲು ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದು ಸಿಎಂ ಸರ್ಬಾನಂದ ಸೋನೊವಾಲ್ ಅಸ್ಸಾಂ ಜನರಿಗೆ ಅಭಯ ನೀಡಿದ್ದಾರೆ.

    ಶುಕ್ರವಾರದಿಂದ ಇಂಟರ್ನೆಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಗಾ ವಹಿಸಿದ್ದು ಶಾಂತಿ ಕದಡುವ ಪೋಸ್ಟ್ ಹಾಕುವ ಮುನ್ನ ಎಚ್ಚರಿಕೆ ಇರಲಿ, ಜನರು ಜಾಗರೂಕರಾಗಿ ಎಂದು ಮನವಿ ಮಾಡಿದ್ದಾರೆ.

    ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಶೇರ್ ಮಾಡುವ ಮುನ್ನ ಎಚ್ಚರಿಕೆ ಇರಲಿ ಶಾಂತಿ ಸುವ್ಯವಸ್ಥೆ ಕದಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಸ್ಸಾಂ ಪೊಲೀಸ್ ಟ್ವೀಟ್ ಮಾಡಿದ್ದಾರೆ.

    CAA ವಿರೋಧಿಸಿ ಅಸ್ಸಾಂನಲ್ಲಿ ಬೃಹತ್ ಪ್ರತಿಭಟನೆಗಳು ನಡೆದು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಈ ವೇಳೆ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿತ್ತು ಈ ಹಿನ್ನೆಲೆ 24 ಗಂಟೆಗಳ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಗುವಾಹಟಿ ಹೈಕೋರ್ಟ್ ಸೂಚನೆ ಹಿನ್ನೆಲೆ ಇಂಟರ್ನೆಟ್ ಸಂಪರ್ಕ ನೀಡಲಾಗಿದೆ.

  • ಬಿಎಸ್‍ವೈ ಸಿಎಂ ಆದ ಬಳಿಕ ಎರಡನೇ ಗೋಲಿಬಾರ್ – ಸಿದ್ದರಾಮಯ್ಯ ಟೀಕೆ

    ಬಿಎಸ್‍ವೈ ಸಿಎಂ ಆದ ಬಳಿಕ ಎರಡನೇ ಗೋಲಿಬಾರ್ – ಸಿದ್ದರಾಮಯ್ಯ ಟೀಕೆ

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ಪರಿವರ್ತನೆಯಾಗಿದ್ದು, ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಟೀಕೆ ಮಾಡಿದ್ದಾರೆ.

    ಯಡಿಯೂರಪ್ಪ ಮೊದಲನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಬ್ಬರು ರೈತರು ಬಲಿಯಾಗಿದ್ದು, ಇದೀಗ ಎರಡನೇ ಬಾರಿ ಸಿಎಂ ಆದಾಗಲೂ ಇಬ್ಬರು ಅನಮಾಯಕ ಯುವಕರು ಬಲಿಯಾಗಿದ್ದಾರೆ ಎಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೊಲೀಸರ ಗೋಲಿಬಾರ್‌ಗೆ ಖಂಡನೆ – ಏತಕ್ಕಾಗಿ ಬಲಿ ಅಂತ ಹೆಚ್‍ಡಿಕೆ ಪ್ರಶ್ನೆ

    ಟ್ವೀಟ್ ನಲ್ಲೇನಿದೆ..?
    ಮೊದಲಬಾರಿ ಬಿಎಸ್‍ವೈ ಅವರು ರಾಜ್ಯದ ಮುಖ್ಯಮಂತ್ರಿಯಾದಾಗ ಇಬ್ಬರು ರೈತರು ಗುಂಡಿಗೆ ಆಹುತಿಯಾದರು. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಇಬ್ಬರು ಅಮಾಯಕ ಯುವಕರು ಗುಂಡಿಗೆ ಬಲಿಯಾಗಿದ್ದಾರೆ. ಬಿಜೆಪಿ ಮೂಲತ: ರೈತ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಬರೆದುಕೊಂಡು ಬಿಎಸ್‍ವೈಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ  #IndiaAgainstCAA #RevokeSec144 ಎಂದು ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

    ದೇಶಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮಂಗಳೂರಿನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಕೊನೆಗೆ ಅಶ್ರುವಾಯು ಸಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಸದ್ಯ ನಿಷೇಧಾಜ್ಞೆ ಜಾರಿಯಿಂದಾಗಿ ಮಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ.

  • ಸಿಎಎ ವಿರುದ್ಧ ಪ್ರತಿಭಟನೆ- ಮುಸ್ಲಿಮರಿಗೆ ಸಿಎಂ ಅಭಯ

    ಸಿಎಎ ವಿರುದ್ಧ ಪ್ರತಿಭಟನೆ- ಮುಸ್ಲಿಮರಿಗೆ ಸಿಎಂ ಅಭಯ

    – ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
    – ಕಾಂಗ್ರೆಸ್ ನಾಯಕರಿಗೆ ಸಿಎಂ ಎಚ್ಚರಿಕೆ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲೂ ಪ್ರತಿಭಟನೆ, ಮುಷ್ಕರಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿಗಳು ಬೆಳ್ಳಂಬೆಳಗ್ಗೆ ಮಹತ್ವದ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.

    ಮುಖ್ಯಮಂತ್ರಿಗಳ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳು:
    * ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿ ಕ್ರಮ ವಹಿಸಬೇಕು.
    * ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಸೂಕ್ತ ಮತ್ತು ಹೆಚ್ಚು ಭದ್ರತೆ ಕೊಡಬೇಕು.
    * ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡುವರ ಬಗ್ಗೆ ಎಚ್ಚರ ವಹಿಸಬೇಕು.
    * ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕು.
    * ಈಗಾಗಲೇ ಪೌರತ್ವದಿಂದ ಬೇರೆ ರಾಜ್ಯಗಳಲ್ಲಿ ಪ್ರತಿಭಟನೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಆ ರೀತಿಯ ವಾತಾವರಣ ಸೃಷ್ಟಿ ಆಗೋದು ಬೇಡ.
    * ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕ್ರಮ ವಹಿಸಬೇಕು.
    * ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಬೇಕು.
    * ಈ ಮೂರು ದಿನಗಳಲ್ಲಿ ಕಾನೂನು ಕ್ರಮಗಳ ಬಗ್ಗೆ ನಿತ್ಯ ಎರಡು ಬಾರಿ ವರದಿ ಕೊಡಬೇಕು.

    ಸಿಎಂ ಅಭಯ: ಸಿಎಎ ಕಾಯ್ದೆ ವಿರೋಧಿಸುತ್ತಿರುವ ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ. ತಮ್ಮ ನಿವಾಸದ ಎದುರು ಮಾತಾಡಿದ ಮುಖ್ಯಮಂತ್ರಿಗಳು ಸಿಎಎ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ. ಮುಸ್ಲಿಮರು ಕಾಯ್ದೆಯಿಂದಾಗಿ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದ ಮುಸ್ಲಿಮರ ರಕ್ಷಣೆ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    ಈ ಮೂಲಕ ಸಿಎಂ, ಮುಸ್ಲಿಂ ಸಮುದಾಯದಲ್ಲಿ ಮನೆ ಮಾಡಿರುವ ಅನುಮಾನ, ಆತಂಕಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಇದೇ ವೇಳೆ ಪ್ರತಿಭಟನೆ ಹಿಂದೆ ಕಾಂಗ್ರೆಸ್ ನಾಯಕರ ಕಿತಾಪತಿ, ಕೈವಾಡಗಳಿವೆ. ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಪ್ರಚೋದನೆ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ನೇರವಾಗಿ ಎಚ್ಚರಿಕೆ ನೀಡಿದರು.