Tag: CAA Clash

  • ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ನವದೆಹಲಿ : ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪೂರ್ವ ನಿರ್ಧರಿತ ಸಂಚು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ 18 ಎಫ್‍ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು 108 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೊಬೈಲ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಂಧಿತರ ಮೊಬೈಲ್ ಪರಿಶೀಲನೆ ವೇಳೆ ವಾಟ್ಸಪ್‍ ನಲ್ಲಿ ಗಲಭೆ ನಡೆಸಲು ಚರ್ಚೆ ಮಾಡಿರುವುದು ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿ ಸ್ಥಳೀಯರೊಂದಿಗೆ ಹೊರಗಿನವರ ಕೈವಾಡವಿದ್ದು, ಘಟನೆಯಲ್ಲಿ ಬಳಕೆಯಾದ ಕಲ್ಲುಗಳು ಮತ್ತು ದೇಸಿ ಗನ್ ಗಳನ್ನು ಉತ್ತರ ಪ್ರದೇಶ ಬಿಹಾರದಿಂದ ತರಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಹಿಂಸಾಚಾರ ಸೃಷ್ಟಿಸುವ ದೃಷ್ಟಿಯಿಂದಲೇ ದೆಹಲಿ ಹೊರಗಿನ ನಾಗರಿಕರ ಜೊತೆ ಚರ್ಚಿಸಿ ಕಲ್ಲುಗಳನ್ನು ನಿಗದಿತ ಸ್ಥಳಗಳಲ್ಲಿ ಸಾಗಿಸಿ ಗಲಭೆ ಸೃಷ್ಟಿಸಲಾಗಿದೆ.

    ಈ ಬೆಳವಣಿಗೆ ನಡುವೆ ಆಪ್ ಕೌನ್ಸಿಲರ್ ತಾಹೀರ್ ಅವರ ಮನೆಯ ಟೆರೇಸ್‍ನಲ್ಲಿ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿವೆ. ಮಾಧ್ಯಮವೊಂದಕ್ಕೆ ಸ್ಥಳೀಯರು ಕೊಟ್ಟ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದಾಗ ಟೆರೇಸ್ ಮೇಲೆ ಪೆಟ್ರೋಲ್ ಬಾಂಬ್‍ಗಳು ಸಿಕ್ಕಿವೆ. ತಾಹೀರ್ ಹುಸ್ಸೇನ್ ಮನೆಯಲ್ಲಿ ಹಲವು ಶಸ್ತ್ರಾಸ್ತ್ರಗಳಿವೆ. ಅವರ ಮನೆಯಲ್ಲಿ ನೂರಾರು ಧಂಗೆಕೋರರು ಒಟ್ಟಾಗಿ ಸಭೆ ಸೇರಿದ್ದರು ಎನ್ನಲಾಗಿದೆ. ಅಲ್ಲಿಂದ ಬೇರೆಯವರ ಮನೆಯ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ನಡುವೆ ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್ ಶರ್ಮಾ ಆರೋಪಿಸಿದ್ದಾರೆ. ಆದರೆ ಅಂಕಿತ್ ಶರ್ಮಾ ಸಾವಿನಲ್ಲಿ ತಮ್ಮ ಹೆಸರು ಕೇಳಿಬರುತ್ತಲೇ ಹುಸ್ಸೇನ್ ಬೇರೆಯದೇ ರೀತಿ ಮಾತನಾಡಿದ್ದು, ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದು, ನಮ್ಮ ಮನೆಗೂ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಮನೆಯಿಂದ ನೂಕಿದ್ದರು ಎಂದಿದ್ದಾರೆ.