Tag: C. N. Ashwath Narayan

  • ಕೋವಿಡ್ ಔಷಧ ಸಂಶೋಧನೆಯಲ್ಲಿ 45 ಸ್ಟಾರ್ಟ್‌ಅಪ್‍ಗಳ ಅವಿರತ ಶ್ರಮ

    ಕೋವಿಡ್ ಔಷಧ ಸಂಶೋಧನೆಯಲ್ಲಿ 45 ಸ್ಟಾರ್ಟ್‌ಅಪ್‍ಗಳ ಅವಿರತ ಶ್ರಮ

    – 5 ನಿಮಿಷದಲ್ಲೇ ಕೊರೊನಾ ಟೆಸ್ಟ್
    – ಸಂಶೋಧಕರ ಜತೆ ಡಾ.ಅಶ್ವತ್ಥನಾರಾಯಣ ಚರ್ಚೆ

    ಬೆಂಗಳೂರು: ರಾಜ್ಯ ಜೈವಿಕ ತಂತ್ರಜ್ಞಾನ ಇಲಾಖೆಯ ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ನಲ್ಲಿ ಇರುವ 45 ಸ್ಟಾರ್ಟ್‌ಅಪ್‍ಗಳು ಕೋವಿಡ್-19 ಸೋಂಕಿಗೆ ಔಷಧ ಕಂಡುಹಿಡಿಯುವ ಮತ್ತು ತ್ವರಿತವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದೆ. ಅಂತಹ ಕೆಲವು ಸಂಸ್ಥೆಗಳ ಪ್ರತಿನಿಧಿಗಳ ಜತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಸಂವಾದ ನಡೆಸಿ, ಅವರಿಗೆ ಬೆಂಬಲ ಸೂಚಿಸಿದರು.

    ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ಗೆ ಗುರುವಾರ ಭೇಟಿ ನೀಡಿದ ಅವರು ಕೋವಿಡ್ ಟೆಸ್ಟ್ ಹಾಗೂ ಕೊರೊನಾ ಔಷಧ ಅನ್ವೇಷಣೆ ಕಾರ್ಯದಲ್ಲಿ ತೊಡಗಿರುವ ಸಂಶೋಧಕರ ಜತೆ ಸಂವಾದ ನಡೆಸಿದರು. ಅಲ್ಲದೆ ಎಸ್‍ಎನ್ ಲೈಫ್‍ಸೈನ್ಸಸ್, ಕಫ/ಸ್ವ್ಯಾಬ್ ಮಾದರಿಯಿಂದ ಆರ್‌ಎನ್‌ಎ ಬೇರ್ಪಡಿಸುವ ಪ್ರೋಗ್ರಾಂಬಲ್ ರೊಬೊಟಿಕ್ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    “ಕೋವಿಡ್-19 ಸೋಂಕಿಗೆ ಔಷಧ ಕಂಡುಹಿಡಿಯುವುದರ ಜತೆಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ಸೋಂಕು ಪತ್ತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಟಾರ್ಟ್ ಅಪ್‍ಗಳು ಕ್ಲಿನಿಕಲ್ ಟೆಸ್ಟ್ ಹಂತದಲ್ಲಿದ್ದರೆ, ಇನ್ನು ಕೆಲವು ಸಂಶೋಧನೆ ಮುಗಿಸಿ ನಿಯಂತ್ರಣ ಪ್ರಾಧಿಕಾರಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಒಟ್ಟಿನಲ್ಲಿ ಕರ್ನಾಟಕದ ಸಂಸ್ಥೆಗಳು ಈ ಸೋಂಕಿನ ವಿರುದ್ಧ ಹೋರಾಡಲು ಜಗತ್ತಿಗೆ ಪರಿಹಾರ ಸೂಚಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ” ಎಂದು ಹೇಳಿದರು.

    5 ನಿಮಿಷದ ಪರೀಕ್ಷೆ:
    “ಜೈವಿಕ ತಂತ್ರಜ್ಞಾನ ಕ್ಷೇತ್ರದ ಕಂಪನಿಯೊಂದು ಕೇವಲ 5 ನಿಮಿಷದಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡುವ ಯಂತ್ರ ಸಿದ್ಧಪಡಿಸಿದೆ. ಮತ್ತೊಂದು ಕಂಪನಿ ಸೋಂಕು ಪತ್ತೆ ಜತೆಗೆ ಸ್ಯಾಂಪಲ್ ಅನ್ನು ತಕ್ಷಣವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯಂತ್ರ ಸಂಶೋಧಿಸಿದೆ. ಅದೇ ರೀತಿ ಹಲವು ಕಂಪನಿಗಳು ನಾನಾ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ ವ್ಯಾಪ್ತಿಯಲ್ಲಿ ಸ್ಟಾರ್ಟ್‍ಅಪ್‍ಗಳು ಇಂತಹ ಯಶಸ್ಸು ಸಾಧಿಸುತ್ತಿರುವುದು ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಅತ್ಯಂತ ಉತ್ತಮ ಬೆಳವಣಿಗೆ. ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಆರ್ಥಿಕ ವಹಿವಾಟು ಮುಂದುವರಿಸಲು 5 ನಿಮಿಷದ ಪರೀಕ್ಷೆಯಿಂದ ಸಾಧ್ಯವಾಗಲಿದೆ” ಎಂದರು.

    “ಈಗಾಗಲೇ ಸೋಂಕು ಪತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕಂಪನಿಗಳು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ್ದು, ಇದೀಗ ಕೋವಿಡ್ ಸೋಂಕು ಪರೀಕ್ಷೆಗೆ ಸೋಂಕಿತರ ಗಂಟಲು ದ್ರವ ನೀಡುವಂತೆ ಕೇಳಿಕೊಂಡಿವೆ. ಈ ಪ್ರಯೋಗ ಯಶಸ್ವಿಯಾದರೆ ಸ್ಥಳೀಯವಾಗಿ ಸಿದ್ಧಪಡಿಸಿದ ತಂತ್ರಜ್ಞಾನದಿಂದಲೇ ಸೋಂಕು ಪತ್ತೆ ಮಾಡಬಹುದು ಎಂದು ಹೇಳಿವೆ. ಆದರೆ ಪಾಸಿಟಿವ್ ಬಂದಿರುವ ರೋಗಿಯ ಗಂಟಲು ದ್ರವವನ್ನು ಸಂಗ್ರಹಿಸುವುದು ಮತ್ತು ಪ್ರಯೋಗದ ಬಳಿಕ ವಿಲೇವಾರಿ ಮಾಡುವುದು ಅತ್ಯಂತ ಸವಾಲಿನ ಕೆಲಸ. ಇದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಂಪನಿಗೆ ಅಗತ್ಯವಿರುವ ಗಂಟಲು ದ್ರವ ಮಾದರಿಯನ್ನು ಒದಗಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

    ಸಮಿತಿ ರಚನೆ:
    ಈ ಸ್ಟಾರ್ಟ್‌ಅಪ್ ಕಂಪನಿಗಳು ಇನ್ನಷ್ಟು ಪರಿಣಾಕಾರಿಯಾಗಿ ತಮ್ಮ ಸಂಶೋಧನಾ ಕಾರ್ಯ ಮುಂದುವರಿಸಲು ಸರ್ಕಾರದಿಂದಲೂ ಸಾಕಷ್ಟು ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸ್ಥಳದಲ್ಲೇ ಇದ್ದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಸೂಚಿಸಿದರು.

    ಒಂದೇ ಬಾರಿಗೆ 8 ಮಾದರಿ ಪರೀಕ್ಷೆ:
    “ಎಸ್‍ಎನ್ ಲೈಫ್‍ಸೈನ್ಸ್ ಪ್ರೋಗ್ರಾಂಬಲ್ ರೊಬೊಟಿಕ್ ಯಂತ್ರವು ಕಫ/ಸ್ವ್ಯಾಬ್‍ಗಳ ಕ್ಲಿನಿಕಲ್ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ಕೆಲಸ ಮಾಡುತ್ತದೆ. ಏಕಕಾಲದಲ್ಲಿ ಎಂಟು ಮಾದರಿಗಳ ಟೆಸ್ಟ್ ಮಾಡುವುದು ಈ ಯಂತ್ರದ ವಿಶೇಷತೆ. ಜತೆಗೆ ಪ್ರತಿ ಮಾದರಿಯ ಆರ್‍ಎನ್‍ಎ ಪ್ರತ್ಯೇಕಿಸುವ ವೆಚ್ಚವು 500 ರೂ.ನಿಂದ 150ಕ್ಕೆ ಇಳಿಕೆಯಾಗಲಿದೆ” ಎಂದರು.

    ಎಸ್‍ಎನ್ ಲೈಫ್‍ಸೈನ್ಸಸ್, ನಿಯೋಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್, ಹೈಬ್ರಿನೋಮಿಕ್ಸ್ ಲೈಫ್ ಸೈನ್ಸಸ್ ಅಂಡ್ ಡಯಾಗ್ನಾಸ್ಟಿಕ್ಸ್ ಎಲ್‍ಎಲ್ ಪಿ (ಎಚ್‍ಎಲ್ ಡಿ) ಹಾಗೂ ಗೆಲೊರಿ ಟಿಎಕ್ಸ್ ಫಾರ್ಮಾಸಿಟಿಕಲ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯವರು ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಬಿಬಿಸಿ ಎಂ.ಡಿ ಡಾ.ಜಿತೇಂದ್ರ ಕುಮಾರ್, ಡಾ.ಶರತ್ ಚಂದ್ರ, ವಿಶಾಲ ರಾವ್ ಸೇರಿದಂತೆ ಇತರ ವಿಜ್ಞಾನಿಗಳು ಹಾಜರಿದ್ದರು.

    ಸಭೆ ಬಳಿಕ ಡಿಸಿಎಂ ಅಶ್ವತ್ಥನಾರಾಯಣ ಅವರು ಸೆಂಟರ್ ಫಾರ್ ಹೂಮನ್ ಜೆನೆಟಿಕ್ಸ್ ಮತ್ತು ಬಯೊ ಇನ್ಫಾರ್ಮೇಟಿಕ್ಸ್ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆಗೆ ಭೇಟಿ ನೀಡಿ ಪ್ರಯೋಗಾಲಯಗಳನ್ನು ವೀಕ್ಷಿಸಿದರು.

  • ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ: ಡಾ.ಅಶ್ವತ್ಥನಾರಾಯಣ

    ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಸತಿ ಸಹಿತ ಕೌಶಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಕೌಶಲ ಕೇಂದ್ರ ಸ್ಥಾಪನೆ ಸಂಬಂಧ ಡಾ.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭಾಗವಹಿಸಿದ್ದರು.

    ಉದ್ದಿಮೆಗಳಿಗೆ ಎದುರಾಗಿರುವ ಮಾನವ ಸಂಪನ್ಮೂಲ ಸಮಸ್ಯೆ ನಿವಾರಣೆ ಹಾಗೂ ಯುವಜನರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವುದು ಈ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದ್ದು, ಶಿವಮೊಗ್ಗ ನಗರ ಅಥವಾ ಸಮೀಪದಲ್ಲೇ ಜಾಗ ಹುಡುಕಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು. ಜಿಲ್ಲಾಧಿಕಾರಿ ಕೂಡ ಇದಕ್ಕೆ ಒಪ್ಪಿದರು.

    ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೆಗೆ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕೌಶಲ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ದಾಂಡೇಲಿಯಲ್ಲಿ ವಿಟಿಯು ಕೌಶಲ ಕೇಂದ್ರ ಇದ್ದು, ಶಿವಮೊಗ್ಗದಲ್ಲಿ ಇನ್ನೋವೇಶನ್ ಹಬ್ ರೀತಿಯಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲೇ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು.

    ಎಲ್ಲ ಪದವೀಧರರಿಗೂ ತರಬೇತಿ:
    ಎಂಜನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೇ ಅರ್ಧದಲ್ಲೇ ಕಲಿಕೆ ಬಿಟ್ಟವರಿಗೂ ಕೌಶಲ ತರಬೇತಿ ನೀಡುವ ಚಿಂತನೆ ಇದೆ. ವಿಟಿಯು ಮೂಲಕ ಕೇಂದ್ರದಲ್ಲಿ 1-3 ವಾರಗಳಿಂದ 5 ತಿಂಗಳವರೆಗಿನ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಡಿಆರ್‍ಎಫ್ ಮತ್ತು ಸಿಎಸ್‍ಆರ್ ಹಣದಿಂದ ಈ ಕೇಂದ್ರ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

  • ರಾಯಚೂರು ಐಐಐಟಿಗೆ ನೂರೆಂಟು ವಿಘ್ನ: ಶೈಕ್ಷಣಿಕ ವರ್ಷದಿಂದ ತರಗತಿ ಆರಂಭ?

    ರಾಯಚೂರು ಐಐಐಟಿಗೆ ನೂರೆಂಟು ವಿಘ್ನ: ಶೈಕ್ಷಣಿಕ ವರ್ಷದಿಂದ ತರಗತಿ ಆರಂಭ?

    ರಾಯಚೂರು: ಜಿಲ್ಲೆಗೆ ಐಐಐಟಿ ಘೋಷಣೆಯಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ತರಗತಿಗಳು ಆರಂಭವಾಗುವುದು ಯಾವಾಗ, ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕ, ಅನುದಾನ ಬಿಡುಗಡೆ ಎಲ್ಲವೂ ಮರೀಚಿಕೆಯಾಗೆ ಉಳಿದಿದೆ.

    ರಾಯಚೂರು ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ನಿಟ್ಟಿನಲ್ಲಿ ಐಐಟಿಗಾಗಿ ಐತಿಹಾಸಿಕ ಹೋರಾಟವನ್ನೇ ಜಿಲ್ಲೆಯ ಜನ ನಡೆಸಿದರು. ಆದರೆ ಐಐಟಿ ಸಿಗಲಿಲ್ಲ ಬದಲಾಗಿ ಮೂರು ವರ್ಷಗಳ ಕೆಳಗೆ ಐಐಐಟಿಯನ್ನು ರಾಯಚೂರಿಗೆ ಕೇಂದ್ರ ಸರ್ಕಾರ ಘೋಷಿಸಿತ್ತು. ಮೂರು ವರ್ಷ ಕಳೆದರೂ ರಾಯಚೂರಿನಲ್ಲಿ ತರಗತಿಗಳು ಆರಂಭವಾಗಿಲ್ಲ.

    ಹೈದರಾಬಾದ್‍ನ ಕಾಂಡಿಯಾ ಐಐಟಿ ಕ್ಯಾಂಪಸ್‍ನಲ್ಲಿ ಬಿಟೆಕ್ ಆರಂಭಿಸಲಾಗಿದ್ದು, 35 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲಿ ರಾಯಚೂರು ಐಐಐಟಿಗಾಗಿ ವಿಶೇಷಾಧಿಕಾರಿಯನ್ನ ನೇಮಿಸಲಾಗಿದೆ. ಇದು ಬಿಟ್ಟರೆ ರಾಯಚೂರಿನಲ್ಲಿ ಯಾವುದೇ ಬೆಳವಣಿಗೆಗಳು ಚುರುಕಾಗಿ ನಡೆಯುತ್ತಿಲ್ಲ.

    ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ವರ್ಷವೇ ತರಗತಿಗಳನ್ನು ಆರಂಭಿಸಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಅಲ್ಲದೆ ಹೆಚ್‍ಕೆಆರ್ ಡಿಬಿಯ ಎರಡು ಕೋಟಿ ಅನುದಾನದಲ್ಲಿ ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಎಂಜಿನಿಯರಿಂಗ್ ಕಾಲೇಜಿಗೆ ಒದಗಿಸಲು ರೂಪಿಸಲಾದ ಯೋಜನೆಯೂ ಪೂರ್ಣಗೊಂಡಿಲ್ಲ.

    ಐಐಐಟಿ ಕ್ಯಾಂಪಸ್ ನಿರ್ಮಿಸಲು ಅಂತಿಮಗೊಳಿಸಿರುವ ರಾಯಚೂರು ತಾಲೂಕಿನ ವಡವಟ್ಟಿ ಸೀಮಾಂತರದ 65 ಎಕರೆ ಜಮೀನಿನಲ್ಲಿ ದಲಿತ ಕುಟುಂಬಗಳು ಬೇಸಾಯ ಮಾಡುತ್ತಿವೆ. 1978 -79ರಲ್ಲಿ ಸರ್ಕಾರದಿಂದಲೇ ಜಮೀನು ಪಡೆದು ಸುಮಾರು 10 ಕುಟುಂಬಗಳು 40 ಎಕರೆ ಪ್ರದೇಶದಲ್ಲಿ ಉಳುಮೆ ಮಾಡುತ್ತಿವೆ. ಈಗ ರೈತರಿಗೆ ತೋರಿಸಿರುವ ಭೂಮಿ ಕಲ್ಲು ಗುಡ್ಡಗಳಿಂದ ಕೂಡಿರುವುದರಿಂದ ರೈತರು ಜಮೀನುಗಳನ್ನ ಬಿಟ್ಟುಕೊಡಲ್ಲ ಅಂತ ಹಠ ಹಿಡಿದಿದ್ದಾರೆ. ಹೀಗಾಗಿ ಜಮೀನು ವಶಪಡಿಸಿಕೊಳ್ಳುವ ಪ್ರಕ್ರೀಯೆ ಇನ್ನೂ ಬಗೆಹರಿದಿಲ್ಲ. ಉನ್ನತ ಶಿಕ್ಷಣ ಸಚಿವ ಡಿಸಿಎಂ ಡಾ.ಅಶ್ವಥನಾರಾಯಣ ಅವರು ಇತ್ತೀಚೆಗೆ ರಾಯಚೂರಿಗೆ ಭೇಟಿ ನೀಡಿದಾಗ ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಏನೇ ಸಮಸ್ಯೆಗಳಿದ್ದರೂ ಮೊದಲು ರಾಯಚೂರಿನಲ್ಲೇ ಐಐಐಟಿ ತರಗತಿಗಳನ್ನು ಆರಂಭಿಸಿ, ಇನ್ನೊಂದೆಡೆ ಕಟ್ಟಡ, ಸಿಬ್ಬಂದಿ ನೇಮಕ ಸೇರಿದಂತೆ ಇತರ ಸೌಲಭ್ಯಗಳನ್ನ ಒದಗಿಸುವ ಕೆಲಸ ಪರ್ಯಾಯವಾಗಿ ಸಾಗಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಪತ್ರಕರ್ತರ ಸಹಕಾರ ಸಂಘದ ಬಲವರ್ಧನೆಗೆ ಸರ್ಕಾರ ಬದ್ಧ: ಡಾ.ಅಶ್ವತ್ಥನಾರಾಯಣ

    ಪತ್ರಕರ್ತರ ಸಹಕಾರ ಸಂಘದ ಬಲವರ್ಧನೆಗೆ ಸರ್ಕಾರ ಬದ್ಧ: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಪತ್ರಕರ್ತರ ಸಹಕಾರ ಸಂಘ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ವೃತ್ತಿ ಜೀವನಕ್ಕೆ ಪೂರಕವಾಗಿದೆ. ಇಂಥ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ನೆರವು ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಪತ್ರಕರ್ತರ ಸಂಘದ 70ನೇ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಅಶ್ವತ್ಥನಾರಾಯಣ ಅವರು, ಸಹಕಾರ ಸಂಘಗಳ ಆಶ್ರಯದಲ್ಲಿ ಅದರ ಸದಸ್ಯರು ಬದುಕು ಕಟ್ಟಿಕೊಳ್ಳಬೇಕು. ವೃತ್ತಿ ಜೀವನಕ್ಕೆ ಪೂರಕವಾಗುವುದೇ ಇಂಥ ಸಂಘಗಳ ಉದ್ದೇಶವಾಗಬೇಕು. ಪತ್ರಕರ್ತರ ಸಂಘ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿ ಇಷ್ಟು ವರ್ಷ ಉಳಿದಿರುವುದು ಬಹಳ ಸಂತೋಷದ ವಿಚಾರ. ಸಂಘದ ಸದಸ್ಯರಿಗೆ ತುರ್ತುಸಾಲ, ವೈಯಕ್ತಿಕ ಸಾಲ ಒದಗಿಸುವ ಮೂಲಕ ಸ್ವಾಭಿಮಾನದ ಬದುಕಿಗೆ ನೆರವಾಗುತ್ತಿದೆ. ಇಂಥ ಸಹಕಾರ ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ ಎಂದರು.

    ಸಮಾಜಕ್ಕೆ ಆತ್ಮೀಯವಾಗಿರುವ ಮಾಧ್ಯಮಗಳಿಗೆ ಶಕ್ತಿ ತುಂಬದಿದ್ದರೆ ಕಷ್ಟವಾಗುತ್ತದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ತರಲು ಮಾಧ್ಯಮದಿಂದಲೇ ಸಾಧ್ಯ. ಜವಾಬ್ದಾರಿ ಅರಿತು ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಸಮಾಜದ ರಕ್ಷಣೆ ಸಾಧ್ಯ. ಸೃಜನಶೀಲತೆ ಹಾಗೂ ಉತ್ತಮ ಚಿಂತನಾ ಕ್ರಮದ ಜತೆಗೆ ನಿಷ್ಪಕ್ಷಪಾತ ನಿಲುವು ಇದ್ದಾಗ ಒಳ್ಳೆಯ ಕೊಡುಗೆ ನೀಡಬಹುದು ಎಂದು ಹೇಳಿದರು.

    ಡಿಜಿಟಲ್ ಮಾಧ್ಯಮದ ಪಾತ್ರ ದೊಡ್ಡದು:
    ಡಿಜಿಟಲ್ ಮೀಡಿಯಾ ಈಗ ಎಲ್ಲರಿಗೂ ಮುಕ್ತವಾಗಿದ್ದು, ದೊಡ್ಡ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಶಕ್ತಿ ತುಂಬುತ್ತಿದೆ. ಈ ದಾರಿಯಲ್ಲಿ ಜಗತ್ತು ವೇಗವಾಗಿ ಸಾಗುತ್ತಿದ್ದು, ನಾವು ಸಹ ಇದನ್ನು ಅಳವಡಿಸಿಕೊಳ್ಳಬೇಕು. ಡಿಜಿಟಲ್ ಮಾಧ್ಯಮಗಳಲ್ಲಿ ಅನುಕೂಲದ ಜತೆಗೆ ಅನಾನುಕೂಲವೂ ಇದ್ದು, ಎಚ್ಚರಿಕೆಯಿಂದ ನಿಭಾಯಿಸಬೇಕು. ನಿರಾಧಾರವಾಗಿ ಬರೆದರೆ ಮಾತ್ರ ಸಮಸ್ಯೆ ಆಗುವುದು. ಮುಂದಿನ ದಿನದಲ್ಲಿ ಸೈಬರ್ ಕಾನೂನಿನಲ್ಲಿ ಸಾಕಷ್ಟು ಸುಧಾರಣೆ ಆಗಲಿದ್ದು, ಆನ್‍ಲೈನ್ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ ಎಂದರು.

    ಸಮಾರಂಭದಲ್ಲಿ ಡಾ.ನಿರ್ಮಲಾನಂದ ಸ್ವಾಮೀಜಿಗಳು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಸ್ಮರಣ ಸಂಚಿಕೆ ಸಂಪಾದಕ ರಘುನಾಥ ಚ.ಹ, ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ತುಮಕೂರು: ಮಂಗಳೂರು ಸೈಕೋ ಬಾಂಬರ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆತ ಹುಸಿ ಬಾಂಬ್ ಹವ್ಯಾಸಿ ಎಂಬುದು ಗೊತ್ತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸವಾಲು, ಸಮಸ್ಯೆ, ಆತಂಕ ನಮಗೆ ಗೊತ್ತಿದೆ. ಸಾವು ನೋವು ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಈಗಲೇ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಆರೋಪಿಯನ್ನು ಬಂಧಿಸಿದರೂ ಇದು ಪೊಲೀಸರ ರಿಹರ್ಸಲ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳು ಅವರ ಸ್ಥಾನಕ್ಕೆ ಗೌರವ ತರುವಂತಹದಲ್ಲ. ಅವರೂ ರಾಜ್ಯವನ್ನು ಆಳಿದವರು, ಇತ್ತಿಚೆಗೆ ನಿಯಂತ್ರಣ ಕಳಕೊಂಡು ಏನೇನೋ ಮಾತನಾಡುತಿದ್ದಾರೆ ಎಂದು ಲೇವಡಿ ಮಾಡಿದರು.

    ಯಾವುದೋ ಒಂದು ಧರ್ಮದ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಿಲ್ಲಿಸಲಿ, ದ್ವೇಷ, ಮತ್ಸರ, ವೈನಸ್ಸು ಬೆಳೆಯುತ್ತ ಹೋದರೆ ಸಮಾಜಕ್ಕೆ ಮಾರಕವಾಗುತ್ತದೆ. ವಿರೋಧ ಪಕ್ಷಗಳು ಸಮಾಜ ಒಡೆದು ಬೆಂಕಿ ಹತ್ತಿಸುವ ಕೆಲಸ ಮಾಡುತಿವೆ. ಇದನ್ನು ಬಿಟ್ಟು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

    ಸಿಎಎ ವಿರೋಧಿಸುವವರಿಗೆ ಮನುಷ್ಯತ್ವ ಇಲ್ಲ. ಮುಸ್ಲಿಮರನ್ನು ದೇಶದಿಂದ ಓಡಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳನ್ನು ಹೇಳಲು ಅವರಿಗೆ ಹೇಗೆ ಮನಸ್ಸು ಬರುತ್ತದೋ ಗೊತ್ತಿಲ್ಲ. ಅವರಿಗೆ ಮನುಷ್ಯತ್ವ ಬೇಡವೇ ಎಂದು ಪ್ರಶ್ನಿಸಿದರು.

    ಮುಖ್ಯಮಂತ್ರಿಗಳು ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ. ಡಿಸಿಎಂ ಹುದ್ದೆ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ಧ ಎಂದರು.

  • ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲ, ತಾಲೂಕಿಗೊಂದು ಕಾಲೇಜು ಮಾಡಿಕೊಂಡರೆ ಹೇಗೆ- ಡಿಕೆಶಿ ವಿರುದ್ಧ ಡಿಸಿಎಂ ಕಿಡಿ

    ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲ, ತಾಲೂಕಿಗೊಂದು ಕಾಲೇಜು ಮಾಡಿಕೊಂಡರೆ ಹೇಗೆ- ಡಿಕೆಶಿ ವಿರುದ್ಧ ಡಿಸಿಎಂ ಕಿಡಿ

    ಬೆಂಗಳೂರು: ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ, ಇವರು ತಾಲೂಕಿಗೊಂದು ಕಾಲೇಜು ಹಾಕಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ  ಅವರು ಕಿಡಿ ಕಾರಿದ್ದಾರೆ.

    ಮೆಡಿಕಲ್ ಕಾಲೇಜು ಸ್ಥಳಾಂತರದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಟ್ಟಹಾಸ ಮರೆದು ಮೆಡಿಕಲ್ ಕಾಲೇಜು ಕನಕಪುರಕ್ಕೆ ಹಾಕಿಸಿಕೊಂಡಿದ್ದರು. ಜನರ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿದ್ದರು. ಹೀಗಾಗಿ ಮೆಡಿಕಲ್ ಕಾಲೇಜು ಸ್ಥಳಾಂತರಿಸಲಾಗಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಇಂತಹ ಸಂದರ್ಭದಲ್ಲಿ ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ಹಾಕಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ? ಈ ಕೆಲಸವನ್ನು ದೊಡ್ಡ ಸಾಧನೆ ಎಂದು ಡಿಕೆಶಿ ತಿಳಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದು ಇಡೀ ರಾಜ್ಯಕ್ಕೆ, ಕೇವಲ ಕನಕಪುರಕ್ಕೆ ಅಲ್ಲ. ಇನ್ನಾದರೂ ಅವರು ಅರ್ಥ ಮಾಡಿಕೊಳ್ಳಲಿ, ತಿಳುವಳಿಕೆ ಬರಲಿ ಎಂದು ಹರಿಹಾಯ್ದರು.

    ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ವಿಚಾರಗಳು ಇರಬೇಕು. ಟಿಪ್ಪು ಸುಲ್ತಾನ್ ಸಮಾಜಕ್ಕೆ ಏನು ಮಾಡಿದ್ದಾರೆ, ಅವರಿಂದ ಆಗಿರುವ ತೊಂದರೆಗಳೇನು ಎನ್ನುವುದನ್ನು ತಿಳಿಸಬೇಕು. ಸಮಾಜಕ್ಕೆ ಪದೇ ಪದೆ ದಿಕ್ಕು ತಪ್ಪಿಸುವ ಜನರಿಗೆ ಇದನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ಟಿಪ್ಪು ಮಾಡಿರುವ ಘನಕಾರ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇತಿಹಾಸದಲ್ಲಿ ಒಳ್ಳೆಯ ಸೈನಿಕ ಇರಬಹುದು, ಆದರೆ ನಮ್ಮ ಸಂಸ್ಕೃತಿ, ನಾಡಿಗೆ ತೊಂದರೆ ಆಗಿದೆ. ಸಾವಿರಾರು ಜನರ ಮಾರಣಹೋಮ ಆಗಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ತಿರುಗೇಟು ನೀಡಿದರು.