Tag: C M B. S. Yeddyurappa

  • ಸಿಎಂ ಬಿಎಸ್‍ವೈಯನ್ನು ಭೇಟಿ ಮಾಡಿದ ಬಿಎಸ್‍ಪಿಯ ಎನ್.ಮಹೇಶ್

    ಸಿಎಂ ಬಿಎಸ್‍ವೈಯನ್ನು ಭೇಟಿ ಮಾಡಿದ ಬಿಎಸ್‍ಪಿಯ ಎನ್.ಮಹೇಶ್

    ಬೆಂಗಳೂರು: ಮಾಜಿ ಸಚಿವ ಎನ್ ಮಹೇಶ್ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕೊಳ್ಳೇಗಾಲದ ಬಿಎಸ್‍ಪಿ ಶಾಸಕರಾಗಿರುವ ಎನ್.ಮಹೇಶ್ ಅವರ ಈ ಭೇಟಿ ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.

    ರಾಜುಗೌಡ, ಗೋವಿಂದ ಕಾರಜೋಳ, ಉದಾಸಿ ಅವರ ಜೊತೆ ತೆರಳಿ ಬಿಎಸ್‍ವೈರನ್ನು ಎನ್ ಮಹೇಶ್ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದರು. ಸಿಎಂ ಭೇಟಿ ಮಾಡಿದ ಬಳಿಕ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಅಲ್ಲಿಂದ ತೆರಳಿದರು.

    ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರಾಗಿದ್ದ ಎನ್.ಮಹೇಶ್ ಅವರನ್ನು ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆದರೆ ಆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಎನ್ ಮಹೇಶ್ ಅವರು, ಮಾಹಿತಿಯ ಕೊರತೆಯಿಂದ ನಾನು ಸದನಕ್ಕೆ ಹಾಜರಾಗಲು ಆಗಿರಲಿಲ್ಲ. ನಾನು ಪಕ್ಷದ ನಾಯಕರ ಸೂಚನೆ ಮೇರೆಗೆ ತಟಸ್ಥನಾಗಿದ್ದೆ ಎಂದಿದ್ದರು.

    ಪಕ್ಷದ ಉಚ್ಛಾಟನೆ ಕುರಿತು ಮಾತನಾಡಿದ ಅವರು, ನಾಯಕರು ಈ ಬಗ್ಗೆ ಸೂಕ್ತ ನಿರ್ಧಾರ ಮಾಡುತ್ತಾರೆ. ಎಲ್ಲವೂ ಮುಂದೆ ಸರಿಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಇದೇ ವೇಳೆ ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, ಈ ಸುದ್ದಿಗಳು ನಾನ್‍ಸೆನ್ಸ್ ಎಂದಿದ್ದರು. ಆದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಎನ್ ಮಹೇಶ್ ಗೈರು ಹಾಜರಿ ಆಗಿದ್ದ ಬಗ್ಗೆ ಅನುಮಾನಗಳು ಮೂಡಿತ್ತು.

    ಪಕ್ಷದಿಂದ ಉಚ್ಛಾಟನೆ ಆಗಿದ್ದರು ಕೂಡ ಎನ್. ಮಹೇಶ್ ಅವರು ಶಾಸಕರಾಗಿಯೇ ಮುಂದುವರಿಯುತ್ತಾರೆ. ಆದ್ದರಿಂದ ಬಿಜೆಪಿ ನಾಯಕರಿಂದ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಲಾಗಿತ್ತು ಎಂಬ ಮಾತು ಕೇಳಿ ಬಂದಿದೆ. ಇದರ ನಡುವೆಯೇ ಎನ್ ಮಹೇಶ್ ಅವರು ಸಿಎಂರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.