Tag: C. K. Jaffer Sharief

  • ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಬೆಂಗಳೂರು: ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

    ಮೌಲಾನ ಅಬ್ದುಲ್ ಕಲಾಮ್ ಆಝಾದ್ ಅವರ `ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಕೃತಿಯನ್ನು ಜಾಫರ್ ಶರೀಫ್ ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದರು. ಆ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪ್ರಣವ್ ಮುಖರ್ಜಿಯನ್ನು ಪುಸ್ತಕದ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಪುಸ್ತಕದ ಲೋಕಾರ್ಪಣೆಗೆ ಮುನ್ನ ಜಾಫರ್ ಶರೀಫ್ ಇಹಲೋಕ ತ್ಯಜಿಸಿದರು.

    ಈ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರಣವ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಜಾಫರ್ ಶರೀಫ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಜಾಫರ್ ಶರೀಫ್ ಕುಟುಂಬದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಾಂತಿಕಾರಿ ಬದಲಾವಣೆಯ ಹರಿಕಾರ ಜಾಫರ್ ಷರೀಫ್

    ಕ್ರಾಂತಿಕಾರಿ ಬದಲಾವಣೆಯ ಹರಿಕಾರ ಜಾಫರ್ ಷರೀಫ್

    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಕೇಂದ್ರ ರೈಲ್ವೇ ಇಲಾಖೆ ಸಚಿವರಾಗಿದ್ದ ವೇಳೆ ಇಲಾಖೆಯಲ್ಲಿ  ಕ್ರಾಂತಿಕಾರಿ ಬದಲಾವಣೆ ಮಾಡಿದ್ದರು. ಅದರಲ್ಲೂ ರಾಜ್ಯದಲ್ಲಿ ರೈಲು ಸಂಪರ್ಕ ವ್ಯವಸ್ಥೆ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರು.

    ಸಚಿವರಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಹಲವು ನಾಯಕರು ನೆನಪಿಸಿಕೊಂಡಿದ್ದು, ಜಾಫರ್ ಷರೀಫ್ ನಿಧನಕ್ಕೆ ರಾಯಚೂರಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ. ಷರೀಫ್ ಅವರು ಸಚಿವರಾಗಿದ್ದ ವೇಳೆ ರಾಯಚೂರು ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ ನೀಡಿದ್ದರು. ಅಲ್ಲದೇ ಬ್ರಾಡ್ ಗೇಜ್ ವ್ಯವಸ್ಥೆಯನ್ನು ಜಾರಿಗೆ ಮಾಡಿದ್ರು. ಕೋಲ್ಹಾಪುರ ಬೆಂಗಳೂರು ನಡುವೆ ಓಡಾಡುವ ರೈಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿದ್ದರು.

    ರಾಯಬಾಗ ಬಳಿ ಶೇಡಬಾಳ ರೈಲು ನಿಲ್ದಾಣವನ್ನು ಬ್ರಾಡ್ ಗೇಜ್‍ಗೆ ಬದಲಾಯಿಸಿಲು ಅಡಿಗಲ್ಲು ಹಾಕಿದ್ದರು. ಅವರು ಈ ಭಾಗದ ಜನರೊಂದಿಗೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಜಾಫರ್ ಷರೀಫ್‍ರನ್ನ ಈ ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ.

    ಜಾಫರ್ ಷರೀಫ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್‍ಕೆ ಪಾಟೀಲ್, ದೇಶಕ್ಕೆ ಜಾಫರ್ ಷರೀಫ್‍ರ ಕೊಡುಗೆ ಅಪಾರ. ಅವರ ಧೀಮಂತ ನಡೆ, ಮಾತುಗಳು ಈಗಲೂ ನೆನಪಿವೆ. ಅಲ್ಪಸಂಖ್ಯಾತರಿಂದ ಹಿಡಿದು ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು ಸಂತಾಪ ಸೂಚಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಜಾಫರ್ ಷರೀಫ್ ಅವರು ಮಕ್ಕಳ ಜೊತೆ ಆಟ ಆಡುತ್ತಿದ್ದರು. ವಿದ್ಯಾರ್ಥಿ ದಿನಗಳಿಂದ ಎಲ್ಲಾ ಸಮಯದಲ್ಲೂ ಹೆಚ್ಚು ಪ್ರೋತ್ಸಾಹ ನೀಡಿದ್ದರು. ಯೂತ್ ಕಾಂಗ್ರೆಸ್ ಅಧ್ಯಕ್ಷನಾದ ದಿನದಿಂದ ಅವರ ಜೊತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಅವರ ಸಾವು ಆಘಾತ ಉಂಟುಮಾಡಿದೆ. ಅಂಬರೀಶ್, ಅನಂತ ಕುಮಾರ್ ಜೊತೆ ಜಾಫರ್ ಹೋಗಿರುವುದು ನಾಡಿಗೆ ದೊಡ್ಡ ನಷ್ಟ ಎಂದರು.

    ರಾಜಕೀಯದ ಅವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಷರೀಫ್, ಪಿವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ಷರೀಫ್ ಅವರ ಅಂತಿಮ ದರ್ಶನಕ್ಕೆ ಶಿವಾಜಿನಗರದ ಸ್ವಗೃಹದಲ್ಲಿ ಅವಕಾಶ ನೀಡಲಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ವಿಧಿವಿಧಾನ ನಡೆಸಿ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv