Tag: ByteDance

  • ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ವಾಷಿಂಗ್ಟನ್: ಅಮೆರಿಕದ (USA) ಫೈಟರ್ ಜೆಟ್‌ಗಳು ತಮ್ಮ ವಾಯುನೆಲೆಯ ಮೇಲೆ ಹಾರಾಡುತ್ತಿದ್ದ ಚೀನಾ (China) ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಎರಡು ದೈತ್ಯ ಮಿಲಿಟರಿ ರಾಷ್ಟ್ರಗಳ ನಡುವೆ ಶೀತಲ ಸಮರ ಶುರುವಾಗಿದೆ.

    ಈ ನಡುವೆ ಎಲ್ಲಾ ಸರ್ಕಾರಿ ಡಿವೈಸ್‌ಗಳಿಂದ ಟಿಕ್‌ಟಾಕ್ (TikTok) ಅನ್ನು ಡಿಲೀಟ್ ಮಾಡುವಂತೆ ಅಮೆರಿಕ ವೈಟ್‌ಹೌಸ್ 30 ದಿನಗಳ ಗಡುವು ನೀಡಿದೆ. ಅಮೆರಿಕದ ರಕ್ಷಣಾ ಇಲಾಖೆಗಳು ಈಗಾಗಲೇ ಟಿಕ್‌ಟಾಕ್ ನಿರ್ಬಂಧಿಸಿವೆ. ಇದೀಗ ರಾಷ್ಟ್ರವ್ಯಾಪಿ ನಿಷೇಧಕ್ಕೆ ಮುಂದಾಗಿದ್ದು, ಇದು ಸರ್ಕಾರಿ ದತ್ತಾಂಶಗಳನ್ನು ರಕ್ಷಿಸುವಲ್ಲಿ ಮತ್ವದ ಹೆಜ್ಜೆ ಎಂದು ಹೇಳಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    joe biden 1

    ಜೋ ಬೈಡನ್ (Joe Biden) ಹಾಗೂ ಕಮಲಾ ಹ್ಯಾರಿಸ್ (Kamala Harris) ನೇತೃತ್ವದ ಆಡಳಿತವು ಡಿಜಿಟಲ್ ಮೂಲ ಸೌಕರ್ಯಗಳ ರಕ್ಷಣೆಗೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಜೊತೆಗೆ ಅಮೆರಿಕದ ಜನರ ಸುರಕ್ಷತೆ ಹಾಗೂ ಗೌಪ್ಯತೆ ರಕ್ಷಿಸಲು ವಿದೇಶಿ ಆಪ್‌ಗಳ ಪ್ರವೇಶ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೆಡರಲ್ ಏಜೆನ್ಸಿಯ (Federal Agencies) ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ಚೀನಾ ಮೂಲದ ಟಿಕ್‌ಟಾಕ್ ಆಪ್ ರಾಷ್ಟ್ರವ್ಯಾಪಿ ನಿಷೇಧಿಸಲು ಯುಎಸ್ ವಿದೇಶಾಂಗ ವ್ಯವಹಾರಗಳ ಸಮಿತಿಯು ಅಧ್ಯಕ್ಷ ಜೋ ಬೈಡನ್ ಅವರಿಗೆ ಅಧಿಕಾರ ನೀಡಲು ಒಮ್ಮತದ ನಿರ್ಧಾರ ಕೈಗೊಂಡು ಮತ ಹಾಕಿದೆ. ಈಗಾಗಲೇ ಮಸೂದೆ ಮಂಡಿಸಿದ್ದು, ಈ ಮಸೂದೆ ಅಂಗೀಕಾರವಾದರೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆಡಳಿತಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ವಿದೇಶಾಂಗ ಸಮಿತಿ ಅಧ್ಯಕ್ಷ ಮೆಕ್‌ಕಾಲ್ ಹೇಳಿದ್ದಾರೆ.

    Joe Biden

    ಸುಮಾರು 10 ಕೋಟಿ ಜನರು ಬೈಟ್‌ಡ್ಯಾನ್ಸ್ ಲಿ. (Byte Dance LT.) ಒಡೆತನದ ಟಿಕ್‌ಟಾಕ್ ಬಳಕೆದಾರರಿದ್ದಾರೆ. ಜೊತೆಗೆ ಹದಿಹರೆಯದ ವಯಸ್ಸಿನ 3ನೇ ಎರಡು ಭಾಗದಷ್ಟು ಮಂದಿ ಟಿಕ್‌ಟಾಕ್ ಬಳಸುತ್ತಿದ್ದು, ಇದರಿಂದ ಡೇಟಾ ಬಳಕೆಯ ಮೇಲೆ ನಿಯಂತ್ರಣ ಪಡೆಯಬಹುದಾಗಿದೆ. ಟಿಕ್‌ಟಾಕ್ ಡೌನ್‌ಲೋಡ್ ಮಾಡಿದರೆ, ಚೀನಾವು ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಹಿಂಬಾಗಿಲು ತೆರೆದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಭದ್ರತಾ ಪರಿಶೀಲನೆಯ ಭಾಗವಾಗಿ ಡೇಟಾ ಗೌಪ್ಯತಾ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವೈಟ್‌ಹೌಸ್ ತಿಳಿಸಿದೆ.

  • ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಬೀಜಿಂಗ್‌: ಭಾರತ ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಟಿಕ್‌ಕಂಪನಿಯ ಮಾತೃಸಂಸ್ಥೆಗೆ 6 ಶತಕೋಟಿ ಡಾಲರ್‌(ಅಂದಾಜು 45 ಸಾವಿರ ಕೋಟಿ ರೂ.) ನಷ್ಟ ಉಂಟಾಗಲಿದೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌, ಟಿಕ್‌ಟಾಕ್‌ ಕಂಪನಿಯ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ಗೆ ಭಾರತದ ಸರ್ಕಾರದ ನಿರ್ಧಾರದಿಂದಾಗಿ 6 ಶತಕೋಟಿ ಡಾಲರ್‌ ನಷ್ಟ ಉಂಟಾಗಲಿದೆ. ಭಾರತ, ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ ಎಂದು ಟ್ವೀಟ್‌ ಮಾಡಿದೆ.

    ವಿಶೇಷ ಏನೆಂದರೆ ಟಿಕ್‌ಟಾಕ್‌ಗೆ ಭಾರತದಿಂದ ಹೆಚ್ಚು ಆದಾಯ ಏನು ಬರುವುದಿಲ್ಲ. ಆದರೆ ಅತಿ ಹೆಚ್ಚು ಡೌನ್‌ಲೋಡ್‌ ಮಾಡಿದ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು 1 ಶತಕೋಟಿ ಡಾಲರ್‌ ಹಣವನ್ನು ಹೂಡಿಕೆ ಮಾಡಿತ್ತು. 2018ರಿಂದ ಆರಂಭಗೊಂಡ ಟಿಕ್‌ಟಾಕ್‌ ಅನ್ನು ಭಾರತದಲ್ಲಿ 20 ಕೋಟಿ ಜನ ಬಳಕೆ ಮಾಡುತ್ತಿದ್ದರು.

    ಬೈಟ್‌ಡ್ಯಾನ್ಸ್‌ ಕಂಪನಿ ಚೀನಾದಲ್ಲಿ ಟೌಟಿಯಾವೊ ಹೆಸರಿನಲ್ಲಿ ಸುದ್ದಿ ಸಂಸ್ಥೆಯನ್ನು ತೆರೆದಿದೆ. ಇದರ ಜೊತೆಗೆ ಬುಝ್‌ ವಿಡಿಯೋ, ವಿಗೋ ವಿಡಿಯೋ, ಹೆಲೋ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

    ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

    ಚೆನ್ನೈ: ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ.

    ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ನಲ್ಲಿ ಟಿಕ್ ಟಾಕನ್ನು ತೆಗೆದು ಹಾಕಲಾಗಿತ್ತು. ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ಸೂಚನೆ ಮೇರೆಗೆ ಇಂದು ಮದ್ರಾಸ್ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾ.ಎಸ್‍ಎಸ್ ಸುಂದರ್ ಹಾಗೂ ನ್ಯಾ. ಎನ್ ಕಿರುಬಕರನ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತು.

    ಟಿಕ್‍ಟಾಕ್ ಪರವಾಗಿ ಹಿರಿಯ ವಕೀಲ ಐಸಾಕ್ ಮೋಹನ್‍ಲಾಲ್ ವಿಚಾರಣೆಗೆ ಹಾಜರಾಗಿ, ಅಶ್ಲೀಲ/ ನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡದಂತೆ ಆಪ್‍ನಲ್ಲಿ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ಹಿಂದಿನ ವಿಚಾರಣೆಯ ಸಮಯದಲ್ಲಿ ಕೋರ್ಟ್ ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ನಾವು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಅರವಿಂದ್ ದತಾರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಆನ್‍ಲೈನ್ ಭಾಷಣಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಸಂವಿಧಾನ ವಾಕ್ ಸ್ವಾತಂತ್ರ್ಯಕ್ಕೆ ಅನುಮತಿ ನೀಡಿದೆ. ನ್ಯಾಯಾಂಗದ ಮೂಲಕ ಬಳಕೆದಾರರ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಅಪ್ಲಿಕೇಶನ್ ನಿಷೇಧ ಮಾಡದೇ ಬಳಕೆದಾರರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.

    ಈ ವೇಳೆ ಅರ್ಜಿದಾರರು ಚೀನಾ ದೇಶದ ಅಪ್ಲಿಕೇಶನ್ ಇದಾಗಿದ್ದು, ಇದರಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ ಎಂದು ಮತ್ತೊಂದು ಅಂಶವನ್ನು ಉಲ್ಲೇಖಿಸಿ ನಿಷೇಧವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು.

    ಎರಡು ಕಡೆಯ ವಾದಗಳನ್ನು ಅಲಿಸಿದ ಕೋರ್ಟ್ ಗ್ರಾಹಕರಿಗೆ ರಕ್ಷಣೆ ನೀಡಬೇಕೆಂದು ಟಿಕ್ ಟಾಕ್ ಕಂಪನಿಗೆ ಸೂಚಿಸಿತು. ಅದರಲ್ಲೂ ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಬೇಕೆಂದು ಹೇಳಿ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಇದನ್ನು ಓದಿ: ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ಏನಿದು ಪ್ರಕರಣ?
    ಟಿಕ್ ಟಾಕ್ ಆ್ಯಪ್ ಪೊರ್ನೋಗ್ರಫಿಗೆ ಕಾರಣವಾಗುತ್ತಿದೆ, ಮಕ್ಕಳನ್ನು ದುರುಪಯೋಗ ಪಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಅರ್ಜಿದಾರರು ಆ್ಯಪ್ ನಿಷೇಧಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಪ್ ನಿಷೇಧಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು.

    ಈ ಆದೇಶಕ್ಕೆ ತಡೆ ನೀಡಬೇಕೆಂದು ಟಿಕ್‍ಟಾಕ್ ಕಂಪನಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡದ ಕಾರಣ ಸರ್ಕಾರ ಈ ಆಪ್ ನಿಷೇಧಿಸುವಂತೆ ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಸೂಚಿಸಿತ್ತು.

    ಏ.22ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.

  • ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ನವದೆಹಲಿ: ಭಾರತದಲ್ಲಿ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದ್ದು, ಇದರಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ರೂ. ನಷ್ಟವಾಗುತ್ತಿದೆ.

    ಟಿಕ್ ಟಾಕ್ ನಿಷೇಧ ಸಂಬಂಧ ಸುಪ್ರಿಂ ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 20 ಲಕ್ಷ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಅಲ್ಲದೆ ಕಂಪನಿಯ 250ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಟಿಕ್‍ಟಾಕ್ ನಿಷೇಧ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ಭಾರತದಲ್ಲಿ 3 ಕೋಟಿ ಜನರು ಟಿಕ್‍ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿದ್ದರೆ, ವಿಶ್ವದಲ್ಲಿ 100 ಕೋಟಿ ಮಂದಿ ಈ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆ. ವಿಡಿಯೋ ಪೇಜ್‍ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಟಿಕ್‍ಟಾಕ್ ಆದಾಯಗಳಿಸುತ್ತಿದೆ.

    ನಿಷೇಧ ಯಾಕೆ?
    ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

    ಮದ್ರಾಸ್ ಹೈ ಕೋರ್ಟ್  ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿತ್ತು. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿತ್ತು.