ನವದೆಹಲಿ: ಹಲವಾರು ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಭಾರತದ ಚುನಾವಣಾ ಆಯೋಗವು (Election Commission of India) ಕೇರಳ (Kerala), ಪಂಜಾಬ್ (Punjab) ಮತ್ತು ಉತ್ತರ ಪ್ರದೇಶದ (Uttar Pradesh) 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Bypolls) ಮತದಾನದ ದಿನಾಂಕವನ್ನು ಬದಲಾಯಿಸಿದೆ.
ಕಲ್ಪಾಠಿ ರಥೋತ್ಸವ (ನವೆಂಬರ್ 13-15), ಕಾರ್ತಿಕ ಪೂರ್ಣಿಮಾ (ನವೆಂಬರ್ 15) ಮತ್ತು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ (ನವೆಂಬರ್ 15) ದಂತಹ ಹಬ್ಬಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷಗಳು ಮತದಾನದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿದ್ದವು. ಅಲ್ಲದೇ ಈ ಹಬ್ಬಗಳು ಈ ರಾಜ್ಯಗಳಲ್ಲಿನ ಮತದಾರರ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷಗಳು ಹೇಳಿದ್ದವು. ಇದರಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಸಮಿತಿಯ ಮೂಲಗಳು ತಿಳಿಸಿವೆ.
ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಬೇಕಿದ್ದ ಉಪಚುನಾವಣೆಗೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಯವರಿಂದ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.
– ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳನ್ನ ಮುಚ್ಚುವುದೇ ಮೋದಿ ಸಾಧನೆ
– ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಸಿಎಂ ಭರ್ಜರಿ ಪ್ರಚಾರ
ಬೆಂಗಳೂರು: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯಾ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ಸಿದ್ದರಾಮಯಯ್ಯ ಅವರು ನಂದಗುಡಿಯಲ್ಲಿ ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ, ಅನರ್ಹ ಶಾಸಕ ಎಂಟಿವಿ ನಾಗರಾಜ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಂಟಿಬಿ ನಾಗರಾಜ್ ಒಟ್ಟು ಆಸ್ತಿ ಮೌಲ್ಯ 1,195 ಕೋಟಿ ರೂ.
ಹೊಸಕೋಟೆ ಉಪಚುನಾವಣೆಯನ್ನು ಇಲ್ಲಿನ ಯಾವ ಮತದಾರನೂ ಬಯಸಿರಲಿಲ್ಲ. ಎಂಟಿಬಿ ನಾಗರಾಜ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿದ್ದರ ಫಲ ಕ್ಷೇತ್ರ ಮತ್ತೊಂದು ಚುನಾವಣೆ ಎದುರಿಸುವಂತಾಗಿದೆ. ಅವರಿಗೆ ಹೊಸಕೋಟೆ ಕ್ಷೇತ್ರದಲ್ಲಿ 4 ಬಾರಿ ಪಕ್ಷ ಟಿಕೆಟ್ ನೀಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಇದರ ನಂತರವೂ ಪಕ್ಷ ಬಿಡಲು ಕಾರಣವೇನು? ಅಕ್ರಮ ದುಡ್ಡಿನ ಹೆದರಿಕೆಯಾ? ಈ ಬಗ್ಗೆ ಮತದಾರರು ಅವರನ್ನು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಪಕ್ಷ ಬಿಡುವ ಮೊದಲು ಎಂಟಿಬಿ ನಾಗರಾಜ್ ನಮ್ಮನೆಗೆ ಬಂದಿದ್ದರು. ಯಾಕೆ ಪಕ್ಷ ಬಿಡ್ತೀಯಪ್ಪ? ಎಂದು ಕೇಳಿದ್ದೆ. ಅದಕ್ಕೆ ಪಕ್ಷ ಬಿಟ್ಟು ನಿಮ್ಮ ಜೊತೆ ಬರುತ್ತೇನೆ ಎಂದು ನಾನು ಶಾಸಕ ಸುಧಾಕರ್ ಅವರಿಗೆ ಮಾತುಕೊಟ್ಟಿದ್ದೇನೆ ಎಂದಿದ್ದರು. ಕಾಂಗ್ರೆಸ್ ಬಿಡುವ ಮುನ್ನ ಜನರನ್ನು ಕೇಳಿದ್ದರೋ? ಇವರನ್ನು ಗೆಲ್ಲಿಸಿದ್ದು ಸುಧಾಕರ್ ಅವರೋ ಅಥವಾ ಹೊಸಕೋಟೆ ಜನತೆಯೋ ಎಂದು ಪ್ರಶ್ನಿಸಿದರು.
ಸ್ವಾರ್ಥಕ್ಕಾಗಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರಿಗೆ ಮತ ನೀಡಿದರೆ ಅಂಥವರು ಜನರ ಪರವಾಗಿ ಕೆಲಸ ಮಾಡುತ್ತಾರಾ? ರಾಜಕೀಯ ಪಕ್ಷಗಳು ಉಳಿದಿರುವುದು ಜನರಿಂದ, ಕಾರ್ಯಕರ್ತರಿಂದಲೇ ಹೊರತು ನಾಯಕರುಗಳಿಂದ ಅಲ್ಲ. ಸಾವಿರ ಪಕ್ಷಗಳನ್ನು ಉಳಿಸುವ, ಬೆಳೆಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ ಎಂಬುದನ್ನು ಮರೆಯಬಾರದು ಎಂದು ಗುಡುಗಿದರು.
ದೇಶದ ಸರ್ವೋಚ್ಛ ನ್ಯಾಯಾಲಯವೇ ಎಂಟಿಬಿ ನಾಗರಾಜ್ ಅವರನ್ನು ಅನರ್ಹ ಎಂದು ಹೇಳಿದೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ಕೇಳಲು ಬರುತ್ತಾರೆ. ಪಕ್ಷಾಂತರ ಮಾಡಿದವರೆಲ್ಲ ರಾಜಕೀಯದಲ್ಲಿ ಇರಲು ನಾಲಾಯಕ್ ಅಂತ ಸುಪ್ರೀಂಕೋರ್ಟ್ ಹೇಳಿದ ಮೇಲೆ ಜನತೆ ಅವರಿಗೆ ಮತ ನೀಡಬೇಕೆ ಎಂದು ಪ್ರಶ್ನಿಸಿದರು.
ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಸ್ಥಾಪಿಸಿದ ಬಿಎಸ್‍ಎನ್‍ಎಲ್, ಬಿಇಎಂಎಲ್, ಹೆಚ್‍ಎಂಟಿ, ಏರ್ ಇಂಡಿಯಾ ಸಂಸ್ಥೆಗಳನ್ನು ಒಂದೊಂದಾಗಿ ಬಾಗಿಲು ಹಾಕಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳ ಬಾಗಿಲು ಹಾಕಿಸಿದ್ದೊಂದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಾಗಲಿದೆ ಎಂದು ಕುಟುಕಿದರು.
ನಮ್ಮದು ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ನಂಬಿರುವ ಪಕ್ಷ. ಎಂಟಿಬಿ ನಾಗರಾಜ್ ಸೇರಿರುವುದು ಸಮಾಜ ಒಡೆಯುವ ಕೋಮುವಾದಿ ಪಕ್ಷವನ್ನು. ಸಮಾಜ ಕಟ್ಟುವ ಕೈ ಬೆಂಬಲಿಸಬೇಕೋ ಅಥವಾ ಸಮಾಜ ಒಡೆಯುವ ಕೈ ಬೆಂಬಲಿಸಬೇಕೋ ಎಂದು ಯೋಚಿಸಿ ಮತ ನೀಡಿ. ಅನರ್ಹರನ್ನು ಸೋಲಿಸಿ, ಅರ್ಹರನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.
ನವದೆಹಲಿ: ಸುಪ್ರೀಂ ಕೋರ್ಟ್ ವಿಚಾರಣೆಯಿಂದ ಮುಂದೂಡಲ್ಪಟ್ಟಿದ್ದ ಕರ್ನಾಟಕ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.
ನ.11ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನ.18ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ನ.21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಗಣನೆ ಆಗಲಿದೆ.
ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ. ಹೀಗಾಗಿ ಆಯೋಗ ಇಂದು ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.
ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಚುನಾವಣಾ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ ಹಾಜರಾಗಿ, ಖಾಲಿ ಇರುವ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುವುದು ನಮ್ಮ ಕೆಲಸ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಈಗ ಚುನಾವಣೆ ನಿಲ್ಲಿಸಿದ್ರೆ ಜನಪ್ರತಿನಿಧಿಗಳು ಇಲ್ಲದಂತಾಗುತ್ತದೆ. ಈಗ ಚುನಾವಣೆಗೆ ತಡೆ ನೀಡಬೇಡಿ, ನಾವೇ ಮುಂದೂಡುತ್ತೇವೆ ಎಂದು ತಿಳಿಸಿದ್ದರು. ಚುನಾವಣಾ ಆಯೋಗದಿಂದ ಈ ಅಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಅನರ್ಹರ ಶಾಸಕರ ಅರ್ಜಿ ವಿಚಾರಣೆಯನ್ನು ತ್ರಿಸದಸ್ಯ ಪೀಠ ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಈ ಮೊದಲು ಮುಂದೂಡಲ್ಪಟ್ಟ ಕ್ಷೇತ್ರಗಳಿಗೆ ಅ.21 ರಂದು ಉಪಚುನಾವಣೆ ನಡೆಸಿ ಅ.24 ರಂದು ಮತ ಎಣಿಕೆ ನಡೆಸಲಾಗುವುದು ಚುನಾವಣಾ ಆಯೋಗ ತಿಳಿಸಿತ್ತು.
ಬೆಂಗಳೂರು: ಭಾರೀ ಕುತುಹಲ ಕೆರಳಿಸಿದ್ದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಬಿಜೆಪಿ ಚುನಾವಣೆ ಸಮಿತಿಯು ಇಂದು ಘೋಷಣೆ ಮಾಡಿದೆ.
ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾದವ್ ಅವರಿಗೆ ಕೊನೆಗೂ ಚಿಂಚೋಳಿ ಟಿಕೆಟ್ ಸಿಕ್ಕಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ್ ಅವರಿಗೆ ಕುಂದಗೋಳದ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಜಾಧವ್ ಪುತ್ರನಿಗೆ ಬಿಜೆಪಿ ಟಿಕೆಟ್- ಇದ್ಯಾವ ಡಿಎನ್‍ಎ ಎಂದು ಕಾಲೆಳೆದ ಪ್ರಿಯಾಂಕ್ ಖರ್ಗೆ!
ಪುತ್ರ ಅವಿನಾಶ್‍ಗೆ ಟಿಕೆಟ್ ನೀಡಬೇಕು ಎಂದು ಉಮೇಶ್ ಜಾಧವ್ ಪಟ್ಟು ಹಿಡಿದಿದ್ದರು. ಇತ್ತ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್ ಕೈತಪ್ಪುತ್ತೆ ಎಂದು ಅರಿತ ಸುನೀಲ್ ವಲ್ಯಾಪುರೆ ಅವರು, ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ಆದರೆ ರಾಜಕಾರಣದಲ್ಲಿ ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ರಾಜಕೀಯದಲ್ಲಿ ಕುಟುಂಬ ರಾಜಕಾರಣ ಕೆಲವೊಮ್ಮೆ ಅನಿವಾರ್ಯ: ಚಿಂಚೋಳಿ ಬಿಜೆಪಿ ಟಿಕೆಟ್ ಆಕಾಂಕ್ಷಿ
ಕುಂದಗೋಳ ಉಪ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಎಸ್.ಐ. ಚಿಕ್ಕನಗೌಡರ್ ಅವರು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ 2013 ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಪರಾಭವಗೊಂಡಿದ್ದರು. ಎಸ್.ಐ. ಚಿಕ್ಕನಗೌಡರ್ ಅವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಿದ್ದು, ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ.
ಶಿವಮೊಗ್ಗ: ಹಣ ಬಲದಿಂದ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ಆಗಿರುವುದು ಉದಾಹರಣೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ರಾಮನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಬಿ.ವೈ.ರಾಘವೇಂದ್ರ, ಈ ಹಿಂದೆ ಜೆಡಿಎಸ್ ನಾಯಕರು ಶಿವಮೊಗ್ಗಕ್ಕೆ ಬಂದಾಗ ಕೊನೆ ಗಳಿಗೆ ಏನು ಮಾಡ್ತೀವಿ ಅಂತಾ ಹೇಳಿ, ಈಗ ಅದೇ ರೀತಿ ನಡೆದುಕೊಂಡಿದ್ದಾರೆ. ಇದು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಾಠವಾಗಲಿದೆ ಎಂದು ತಿಳಿಸಿದ್ರು.
ಶಿಕಾರಿಪುರ, ಸೊರಬ, ಸಾಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದೇವೆ. ಜೆಡಿಎಸ್ ಮುಖಂಡರು ಹಣ ಮತ್ತು ತೋಳ್ ಬಲದಿಂದ ನಮ್ಮ ಕಾರ್ಯಕರ್ತರನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನಾಡಿನ ಜನತೆ ಎಲ್ಲವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಈ ಮೊದಲು ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಸಚಿವ ಡಿಕೆ ಶಿವಕುಮಾರ್ ಸಹೋದರರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದರೆ ರಾಮನಗರ ಅಭ್ಯರ್ಥಿ ಬಿಜೆಪಿ ಸೇರ್ಪಡೆ ಆಗಿರುವುದು ಪಕ್ಷದ ಮೇಲೆ ಹಾಗೂ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಗರಂ ಆದ ಬಿಎಸ್‍ವೈ ಉತ್ತರಿಸದೇ ಮೈಕ್ ತಳ್ಳಿ ಹೋದರು.
ಬೆಂಗಳೂರು: ಕರ್ನಾಟಕ ಉಪ ಚುನಾವಣೆಗೆ ಸ್ಫೋಟಕ ತಿರುವು ಸಿಕ್ಕಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಎಲ್. ಚಂದ್ರಶೇಖರ್ ಚುನಾವಣೆ ಹಿಂದೆ ಸರಿಯುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ವೇಳೆ ಮಾತನಾಡಿದ ಎಲ್.ಚಂದ್ರಶೇಖರ್, ನಾನು ಪಕ್ಷದ ಅಭ್ಯರ್ಥಿಯಾಗಿದ್ದರೂ, ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಮನಗರದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಜನ ಹಿತಕ್ಕಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೆ. ಚುನಾವಣಾ ವೆಚ್ಚವನ್ನು ಪಕ್ಷವೇ ನೋಡಿಕೊಳ್ಳುತ್ತೇವೆ. ನೀವು ಅಭ್ಯರ್ಥಿಯಾಗಿ ಸಾಕು, ನಮ್ಮ ಎಲ್ಲ ನಾಯಕರು ನಿಮ್ಮ ಪರವಾಗಿ ಬಂದು ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದರು. ನಾನು ಫೋನ್ ಮಾಡಿದ್ರೆ ಕಾಲ್ ರಿಸೀವ್ ಮಾಡಲ್ಲ ಅಂದ್ರೆ ನನ್ನನ್ನು ಎಷ್ಟು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುವುದು ಗೊತ್ತಾಯಿತು. ಹಾಗಾಗಿ ಪಕ್ಷದಿಂದ ಹೊರ ಬಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದು ಎಲ್.ಚಂದ್ರಶೇಖರ್ ಹೇಳಿದರು.
ಇಂದು ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿಂದೆ ಸರಿದ ಕಾರಣ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಆಯ್ಕೆಯಾಗುವದು ಬಹುತೇಕ ಖಚಿತವಾಗಿದೆ. ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದು, ಬೇರೆ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.
ಮೈಸೂರು: ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಕಳಲೆ ಕೇಶವಮೂರ್ತಿ 21,334 ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿಜಯದ ನಗೆ ಬೀರಿದ್ದಾರೆ.
ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್‍ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.
ಆರಂಭಿಕ ಹಂತದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಕಳಲೆ ಕೇಶವಮೂರ್ತಿ ಅಂತಿಮವಾಗಿ 2013ರ ಸೋಲಿಗೆ ಸೇಡು ತೀರಿಸಿಕೊಂಡರು.
2013 ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಪ್ರಸಾದ್ 50, 784 ಮತಗಳನ್ನು ಗಳಿಸಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ 41,843 ಮತಗಳನ್ನು ಪಡೆದಿದ್ದರು.
ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಶ್ರೀನಿವಾಸಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜೆಡಿಎಸ್‍ನಲ್ಲಿದ್ದ ಕಳಲೆ ಕೇಶವಮೂರ್ತಿ ಜೆಡಿಎಸ್‍ಗೆ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಕಾರಣ ಪರೋಕ್ಷವಾಗಿ ಕಳಲೆ ಗೆಲುವಿಗೆ ಕಾರಣವಾಗಿದೆ.
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನ ಬಳಿಕ ತೆರವಾಗಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬುಧವಾರ ನಡೆಯಬೇಕಿದ್ದು, ಆದ್ರೆ ಕೇಂದ್ರ ಚುನಾವಣಾ ಆಯೋಗ ಇದನ್ನು ರದ್ದುಗೊಳಿಸಿದೆ.
ಯಾಕಂದ್ರೆ ಈ ಕ್ಷೇತ್ರದಲ್ಲಿ ಉಪ ಚುನಾವಣೆಗಾಗಿ ಹಣದ ಹೊಳೆಯೇ ಹರಿದಿತ್ತು. ಈ ಸಂಬಂಧ ಮಹತ್ವದ ದಾಖಲೆಗಳು ಸಿಕ್ಕ ಹಿನ್ನೆಲೆಯಲ್ಲಿ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
ಶುಕ್ರವಾರವಷ್ಟೇ ಆದಾಯ ತೆರಿಗೆ ಇಲಾಖೆ ಅಣ್ಣಾ ಡಿಎಂಕೆ ಸರ್ಕಾರದ ಆರೋಗ್ಯ ಸಚಿವ ವಿಜಯ್ ಭಾಸ್ಕರ್ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ಕೈಗೊಂಡಿತ್ತು. ಈ ವೇಳೆ ಪಕ್ಷದ ಪರವಾಗಿ ಒಬ್ಬೊಬ್ಬ ಮತದಾರನಿಗೆ ತಲಾ 4 ಸಾವಿರ ರೂಪಾಯಿ ಹಂಚಿರುವ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿತ್ತು.
ಬರೋಬ್ಬರೀ 89 ಕೋಟಿ ರೂಪಾಯಿಯಷ್ಟು ಹಣವನ್ನು ಚೆಲ್ಲಿದ್ದಾರೆ ಅನ್ನೋದ್ರ ಬಗ್ಗೆ ದಾಖಲೆಗಳು ಲಭ್ಯವಾಗಿದ್ದವು. ಸಚಿವರ ಆಪ್ತರ ಬಳಿಯಿಂದ 5 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದ ಆಯೋಗ ಉಪ ಚುನಾವಣೆ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಈ ನಡುವೆ ವಿಚಾರಣೆಗೆ ಹಾಜರಾಗಿ ಖುದ್ದು ವಿವರಣೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಸಚಿವ ವಿಜಯ್ ಭಾಸ್ಕರ್‍ಗೆ ಸಮನ್ಸ್ ಜಾರಿ ಮಾಡಿದೆ.
ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 62 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಶ್ರೀನಗರ: ದೇಶಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಕೆಲ ಸಣ್ಣ ಪುಟ್ಟ ಅಹಿತಕರ ಘಟನೆ ಹೊರತುಪಡಿಸಿ, ಬಹುತೇಕ ಎಲ್ಲಾ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.
ಶ್ರೀನಗರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ವೇಳೆ ಗಡಿಭದ್ರತಾ ಯೋಧರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯ ವೇಳೆ ಮೂವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಕಾಶ್ಮೀರದ ಬುದ್ಗಾಮ್ ಮತ್ತು ಗಂದರ್ಬಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಮತಗಟ್ಟೆಗೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಗಡಿ ಭದ್ರತಾ ಯೋಧರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಬುದ್ಗಾಮ್ ನ ಚರಾರ್-ಇ- ಷರೀಫ್ ಬಳಿಯ ಪಕೇರ್ಪೋರಾ ಮತಗಟ್ಟೆ ಬಳಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಡಿ ಭದ್ರತಾ ಪಡೆ ಯೋಧರ ಮೇಲೆ ಕಲ್ಲುಗಳನ್ನು ತೂರಿದ್ದು ಈ ಹಿನ್ನೆಲೆಯಲ್ಲಿ ಯೋಧರು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದು ಇದರಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
ಮೊದಲ ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಯೋಧರು ಸೂಚನೆ ನೀಡಿದರು. ಆದ್ರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಯೋಧರ ವಿರುದ್ಧ ಕಲ್ಲುಗಳನ್ನು ತೂರಿದ್ದರಿಂದ ಯೋಧರು ಪ್ರತಿದಾಳಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಿಂದ ಇಬ್ಬರು ಮೃತಪಟ್ಟಿದ್ದು, ಮೃತರನ್ನು 20 ವರ್ಷದ ಮೊಹಮ್ಮದ್ ಅಬ್ಬಾಸ್ ಮತ್ತು 15 ವರ್ಷದ ಫೈಜಾನ್ ಅಹಮದ್ ಎಂದು ಗುರುತಿಸಲಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ಬಿರ್ವಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ಯೋಧರು ಗುಂಡಿನ ದಾಳಿ ನಡೆಸಿದ್ದು, ಅಲ್ಲಿ ನಿಸ್ಸಾರ್ ಅಹಮ್ಮದ್ ಎಂಬಾತ ಮೃತಪಟ್ಟಿದ್ದಾನೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ಶ್ರೀನಗರ, ಬುದ್ಗಾಮ್ ಮತ್ತು ಗುಂದರ್ಬಲ್ ಈ ಮೂರು ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಅಸ್ಸಾಂ, ಕರ್ನಾಟಕ, ರಾಜಸ್ಥಾನ ದೆಹಲಿ, ಪಶ್ಚಿಮ ಬಂಗಾಳ ಮೊದಲಾದ ಕಡೆಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.