Tag: byelection

  • ಹುಣಸೂರು ಉಪಚುನಾವಣೆಯಲ್ಲಿ ಜಿಟಿಡಿ ಬೆಂಬಲ ಯಾರಿಗೆ? – ಟೆನ್ಷನ್‍ನಲ್ಲಿ ಅಭ್ಯರ್ಥಿಗಳು

    ಹುಣಸೂರು ಉಪಚುನಾವಣೆಯಲ್ಲಿ ಜಿಟಿಡಿ ಬೆಂಬಲ ಯಾರಿಗೆ? – ಟೆನ್ಷನ್‍ನಲ್ಲಿ ಅಭ್ಯರ್ಥಿಗಳು

    ಮೈಸೂರು: ಹುಣಸೂರು ಬೈ ಎಲೆಕ್ಷನ್‍ನಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರ ಬೆಂಬಲ ಯಾರಿಗೆ ಎಂಬುದು ಸದ್ಯಕ್ಕೆ ಹುಣಸೂರಿನ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆ. ಮತದಾನಕ್ಕೆ ಇನ್ನೂ 7 ದಿನ ಮಾತ್ರ ಬಾಕಿ ಇದೆ. ಆದರೂ ಜಿಟಿಡಿ ಮೌನ ಮಾತ್ರ ಮುರಿಯುತ್ತಿಲ್ಲ. ಇದು ಅಭ್ಯರ್ಥಿಗಳ ಟೆನ್ಷನ್ ಹೆಚ್ಚಿಸಿದೆ.

    ಹುಣಸೂರು ಬೈ ಎಲೆಕ್ಷನ್‍ನಲ್ಲಿ ಜಿ.ಟಿ ದೇವೇಗೌಡರ ಮತ್ತು ಅವರ ಪುತ್ರ ಜಿ.ಡಿ ಹರೀಶ್ ಗೌಡ ಪಾತ್ರ ದೊಡ್ಡದಿದೆ. ಇವರು ಮನಸ್ಸು ಮಾಡಿದರೆ ಕನಿಷ್ಟ 10 ಸಾವಿರ ಮತಗಳನ್ನು ಯಾವುದೇ ಪಕ್ಷಕ್ಕೆ ಆದರೂ ಹಾಕಿಸುವ ಶಕ್ತಿ ಇದೆ. ಜಿಟಿಡಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನನಗೂ ಈ ಚುನಾವಣೆಗೂ ಸಂಬಂಧ ಇಲ್ಲ. ನಾನು ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ ಎಂದು ಘೋಷಿಸಿ ಹುಣಸೂರು ಕಡೆಗೆ ತಲೆ ಹಾಕಿಯೂ ಮಲಗುತ್ತಿಲ್ಲ.

    ದಳಪತಿಗಳ ಮೇಲೆ ಮುನಿಸಿಕೊಂಡಿರುವ ಜಿಟಿಡಿ, ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಹೀಗಾಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಬೆಂಬಲಿಸುತ್ತಾರೆ ಎಂದುಕೊಳ್ಳಲಾಗಿತ್ತು. ಒಂದು ಹಂತದಲ್ಲಿ ತಮ್ಮ ಪುತ್ರನಿಗೆ ಹುಣಸೂರಿನಲ್ಲಿ ಬಿಜೆಪಿ ಟಿಕೆಟ್ ಕೊಡಿಸಲು ಯತ್ನಿಸಿದ್ದರು. ಆದರೆ, ಇದು ಫಲ ಕೊಡಲಿಲ್ಲ. ಹೀಗಾಗಿ ನಾನು ನ್ಯೂಟ್ರಲ್ ಎಂದು ಹೇಳಿ ತಮ್ಮ ಕ್ಷೇತ್ರದ ಓಡಾಟದಲ್ಲಿ ಮಗ್ನರಾಗಿದ್ದಾರೆ.

    ಯಾವಾಗ ಜಿಟಿಡಿ ಬಿಜೆಪಿಗೂ ಬೆಂಬಲ ನೀಡಲ್ಲ ಎಂದು ಹೇಳಿದರೋ ಆಗ ಕಾಂಗ್ರೆಸ್‍ಗೂ ಆಸೆ ಚಿಗುರಿತ್ತು. ತಕ್ಷಣ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದಾಗಿ ಜಿಟಿಡಿಗೆ ಕರೆ ಮಾಡಿ ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೇಳಿದ್ದರು. ಸಿದ್ದರಾಮಯ್ಯ ಕರೆ ಮಾಡಿದ್ದು ಬಹಿರಂಗವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಕೂಡ ಜಿಟಿಡಿಗೆ ಕರೆ ಮಾಡಿ ಎಚ್. ವಿಶ್ವನಾಥ್ ಬೆಂಬಲಿಸುವಂತೆ ಕೇಳಿ ಕೊಂಡರು. ಇಬ್ಬರಿಗೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಹೇಳಿರುವ ಕಾರಣ ಕುತೂಹಲ ಹೆಚ್ಚಿದೆ.

    ಈ ನಡುವೆ, ಜಿಟಿಡಿ ಅವರನ್ನು ಕನ್ವಿನ್ಸ್ ಮಾಡುವ ಕೊನೆ ಯತ್ನವನ್ನು ಸಂಸದ ಪ್ರಜ್ವಲ್ ರೇವಣ್ಣ ನಡೆಸಿದರು. ಆದರೆ, ದಳಪತಿಗಳ ಜೊತೆಗೆ ಮನಸ್ಸು ಮುರಿದುಕೊಂಡಿರುವ ಜಿಟಿಡಿ ನಾನಾಗಲಿ, ನನ್ನ ಮಗನಾಗಲಿ ಪ್ರಚಾರಕ್ಕೆ ಬರಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ. ಹೀಗಾಗಿ, ದಳಪತಿಗಳು ಜಿಟಿಡಿ ಮೇಲಿನ ಆಸೆ ಬಹುತೇಕ ಬಿಟ್ಟಿದ್ದಾರೆ. ಜಿಟಿಡಿ ಬೆಂಬಲ ಇಲ್ಲದೆ ತಮ್ಮ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸುವುದು ಕಷ್ಟ ಎಂದು ಗೊತ್ತಿದ್ದರು ಅದನ್ನು ತೋರ್ಪಡಿಸಿಕೊಳ್ಳದೆ ಜಿಟಿಡಿ ಹೆಸರು ಎತ್ತದೆ ಪ್ರಚಾರ ಮಾಡುತ್ತಿದ್ದಾರೆ.

    ಜಿಟಿಡಿಯ ಒಂದು ನಿರ್ದೇಶನಕ್ಕಾಗಿ ಅವರ ಬೆಂಬಲಿಗರು ಕಾಯುತ್ತಿದ್ದಾರೆ. ಜಿಟಿಡಿ ಇಂತಹ ಪಕ್ಷಕ್ಕೆ ಮತ ಹಾಕಿ, ಹಾಕಿಸಿ ಎಂದು ಸಂದೇಶ ರವಾನೆ ಮಾಡಿದ್ದೆ ನಿಜವಾದರೆ ಅವರು ಯಾವ ಪಕ್ಷದ ಹೆಸರು ಹೇಳಿರುತ್ತಾರೋ ಆ ಪಕ್ಷ ಗೆಲುವಿನ ದಡ ಸೇರುವುದು ನಿಶ್ಚಿತ. ಏಕೆಂದರೆ ಹುಣಸೂರಲ್ಲಿ ಜಿಟಿಡಿ ಮತ್ತು ಅವರ ಪುತ್ರ ಹರೀಶ್ ಗೌಡ ಗೆ ಇಂತಹದೊಂದು ದೊಡ್ಡ ಬೆಂಬಲದ ಗುಂಪಿದೆ.

  • ಭವಿಷ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ: ಶ್ರೀರಾಮುಲು

    ಭವಿಷ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ: ಶ್ರೀರಾಮುಲು

    ದಾವಣಗೆರೆ: ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಒಂದು ಕಡೆ ನಾನು ಈ ಸರ್ಕಾರವನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ನಾನು ಯಾವ ಸರ್ಕಾರ ಉಳಿಸುತ್ತೇನೆ ಎಂದು ಹೇಳಿದ್ದೆ ಎಂದು ಹೇಳುತ್ತಾರೆ. ಇಲ್ಲಿ ದ್ವಂದ್ವ ನೀತಿಯಿಂದ ಚುನಾವಣೆ ರಾಜಕಾರಣ ಪ್ರಾರಂಭವಾಗಿದೆ. ಈ ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರುವುದಿಲ್ಲ. ಈಗ ಬಿಜೆಪಿ ದೇಶದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ನಮ್ಮ ಸರ್ಕಾರ 105 ಸೀಟ್ ಗೆದ್ದರೂ ಅಧಿಕಾರಕ್ಕೆ ಬರಲು ಆಗಲಿಲ್ಲ. ಶಾಸಕರು ರಾಜೀನಾಮೆ ಕೊಟ್ಟ ಕಾರಣ ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಶಾಸಕರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿಯವರು ಚುನಾವಣೆಯಲ್ಲಿ ಕೋಟ್ಯಂತರ ರೂ. ಹಣ ಚೆಲ್ಲುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮುಲು ಅವರು, ಇದೆಲ್ಲ ಬಡಾಯಿಗೋಸ್ಕರ ಮಾತನಾಡುವಂತ ಮಾತುಗಳಿದು. ಬುಧವಾರ ಹುಣಸೂರಿನಲ್ಲಿ ಕಾಂಗ್ರೆಸ್‍ನ ಕೋಟ್ಯಂತರ ರೂ. ಸೀಜ್ ಆಯಿತು. ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿ ಅದರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹತ್ತು ವರ್ಷದ ಭ್ರಷ್ಟಾಚಾರದ ಹಣ ಇಡೀ 15 ಕ್ಷೇತ್ರದಲ್ಲಿ ಓಡಾಡುತ್ತಿದೆ ಎಂದು ತಿರುಗೇಟು ನೀಡಿದರು.

    ನಾನು ಬುಧವಾರ ಮಾಜಿ ಪ್ರಧಾನಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ತಮ್ಮ ಮಗನ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಉಪಚುನಾವಣೆ ನಂತರ ಮಧ್ಯಂತರ ಚುನಾವಣಾ ಬರುತ್ತೆ ಎನ್ನುವುದು ಸರಿಯಲ್ಲ. ಈಗ ವಾತಾವರಣ ಬೇರೆ ಇದೆ. ಅವರು ಹಿರಿಯರು, ನಾನು ಅವರಿಗೆ ಟೀಕೆ ಮಾಡುವುದಿಲ್ಲ. ನನ್ನ ಪ್ರಕಾರ ಯಾವುದೇ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.

    ನಾನು ಸಿದ್ದರಾಮಯ್ಯ ಅವರನ್ನು ಅತ್ಯಂತ ಗೌರವದಿಂದ ವಿನಂತಿ ಮಾಡಿಕೊಳ್ಳುತ್ತೇನೆ. ಏಕೆಂದರೆ ಇಂದು ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕರು. ಶ್ರೀರಾಮುಲು ಅವರು ಖುರ್ಚಿಗೆ ಅಂಟಿಕೊಂಡು ಇರುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಖುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸುವುದು ನನ್ನ ಆದ್ಯತೆ. ನಾನು ಇದನ್ನು ಮಾಡಿಯೇ ಮಾಡುವೆ. ಅನಗತ್ಯವಾಗಿ ನನ್ನ ವಿರುದ್ಧ ವಾಗ್ದಾಳಿ ಸರಿಯಲ್ಲ ಎಂದು ತಿಳಿಸಿದರು.

    ಇದೇ ವೇಳೆ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಅವರು, ನಾನು ಡಿಕೆಶಿ ಅಂತಹವರನ್ನು ನೋಡಿದ್ದೇನೆ. ದೊಡ್ಡ ಶ್ರೀಮಂತರೆ ಯಾವ ರೀತಿ ಆಗಿದ್ದಾರೆ ಎಂಬ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಡಿಕೆಶಿ ಅವರು ಬುಗುರಿ ರೀತಿ ಅಲ್ಲ ಬೇರೆ ರೀತಿ ಆಡಿಸಿದರೂ ಜನರು ಅವರನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಅವರು ಮಾಡಿದ ಕೆಲಸಗಳನ್ನು ಜನರು ಗಮನಿಸಿದ್ದಾರೆ. ಈಗಾಗಲೇ ಅವರು ಪಶ್ಚಾತಾಪ ಪಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.

  • ಕೆಆರ್ ಪೇಟೆಯಲ್ಲಿಂದು ಒಂಟೆತ್ತುಗಳ ಪ್ರತ್ಯೇಕ ಪ್ರಚಾರ – ಕಾಂಗ್ರೆಸ್ ಪರ ಡಿಕೆ, ಜೆಡಿಎಸ್ ಪರ ಹೆಚ್‍ಡಿಕೆ ಕ್ಯಾಂಪೇನ್

    ಕೆಆರ್ ಪೇಟೆಯಲ್ಲಿಂದು ಒಂಟೆತ್ತುಗಳ ಪ್ರತ್ಯೇಕ ಪ್ರಚಾರ – ಕಾಂಗ್ರೆಸ್ ಪರ ಡಿಕೆ, ಜೆಡಿಎಸ್ ಪರ ಹೆಚ್‍ಡಿಕೆ ಕ್ಯಾಂಪೇನ್

    ಮಂಡ್ಯ: ಕೆಆರ್ ಪೇಟೆ ಉಪಚುನಾವಣೆಯನ್ನು ಬಿಜೆಪಿ ಸ್ವಾಭಿಮಾನ ಮತ್ತು ಅಭಿವೃದ್ಧಿಯ ಹೆಸರು ಹೇಳಿಕೊಂಡು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಬ್ಬರದಿಂದ ಪ್ರಚಾರ ಮಾಡುತ್ತಿದೆ. ಈ ಪ್ರಚಾರದಿಂದ ಆಗುತ್ತಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಇಬ್ಬರೂ ಒಕ್ಕಲಿಗ ಸಮುದಾಯ ಐಕಾನ್‍ ನನ್ನು ತಮ್ಮ ತಮ್ಮ ಪಕ್ಷಗಳ ಪರವಾಗಿ ಕೆಆರ್ ಪೇಟೆ ಅಖಾಡಕ್ಕೆ ಧುಮುಕುತ್ತಿದ್ದಾರೆ.

    ಕೆಆರ್ ಪೇಟೆಯ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಲು ಸ್ವಾಭಿಮಾನ ಮತ್ತು ಅಭಿವೃದ್ಧಿಯ ಎರಡು ಮಂತ್ರಗಳನ್ನು ಜಪ ಮಾಡುತ್ತಾ ಮತದಾರರನ್ನು ಒಲಿಸಿಕೊಳ್ಳಲು ಅಬ್ಬರದ ಪ್ರಚಾರ ಮಾಡುತ್ತಿವೆ. ಈಗಾಗಲೇ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಲವು ಘಟಾನುಘಟಿಗಳು ಕೆಆರ್ ಪೇಟೆ ಅಖಾಡಕ್ಕೆ ಇಳಿದು ಅಬ್ಬರ ಪ್ರಚಾರವನ್ನು ನಡೆಸುತ್ತಿವೆ.

    ಈ ಮಧ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಮುಖ ನಾಯಕರು ಕೆಆರ್ ಪೇಟೆ ಅಖಾಡಕ್ಕೆ ಧುಮುಕದೇ ಇರುವುದು ಸದ್ಯ ಎರಡು ಪಕ್ಷಗಳಿಗೂ ಪ್ರಚಾರದಲ್ಲಿ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಡ್ಯಾಮೆಜ್ ಕಂಟ್ರೋಲ್ ಮಾಡಲು ಇಂದು ಜೆಡಿಎಸ್‍ನ ಒಕ್ಕಲಿಗ ಐಕಾನ್ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಇಂದು ಕೆಆರ್ ಪೇಟೆ ಅಖಾಡಕ್ಕೆ ಧುಮುಕಲಿದ್ದಾರೆ. ಈ ಹಿಂದೆ ಜೋಡೆತ್ತುಗಳು ಎಂದು ಕೈ ಎತ್ತಿದ್ದ ಹೆಚ್‍ಡಿಕೆ ಹಾಗೂ ಡಿಕೆಶಿ ಈಗ ಒಂಟೆತ್ತುಗಳಾಗಿ ತಮ್ಮ ಅಭ್ಯರ್ಥಿಗಳ ಪರ ಒಂದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

    ಸದ್ಯ ಬಿಜೆಪಿ ಅಬ್ಬರ ಪ್ರಚಾರದ ನಡುವೆ ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಂಚ ಮಟ್ಟಿಗೆ ಸೊರಗಿರುವುದಂತೂ ಸುಳ್ಳಲ್ಲ. ಜೆಡಿಎಸ್ ಪಕ್ಷದಿಂದ ಇಲ್ಲಿಯವರೆಗೆ ಮಾಜಿ ಸಚಿವ ರೇವಣ್ಣ, ಮಂಡ್ಯ ಸ್ಥಳೀಯ ನಾಯಕರು ಹಾಗೂ ನಿಖಿಲ್ ಪ್ರಚಾರ ಮಾಡಿದ್ದು ಬಿಟ್ಟರೆ ಪ್ರಮುಖ ಐಕಾನ್‍ಗಳು ಎಂಟ್ರಿ ಕೊಟ್ಟಿರಲಿಲ್ಲ. ಇದರಿಂದ ಚುನಾವಣಾ ಪ್ರಚಾರದಲ್ಲಿ ಹಿನ್ನಡೆಯಾಗುತ್ತಿರುವುದನ್ನು ಎಚ್ಚೆತ್ತ ನಾಯಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೆಆರ್ ಪೇಟೆ ಅಖಾಡಕ್ಕೆ ಇಂದು ಇಳಿಸಲಿದ್ದಾರೆ. ಇಂದು ಕೆಆರ್ ಪೇಟೆಯ ಕಿಕ್ಕೇರಿ ಹೋಬಳಿ ಸೇರಿದಂತೆ ಹಲವು ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪ್ರಚಾರ ನಡೆಸಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನ ಪ್ರಚಾರ ಮಾಡಿದ್ದು ಬಿಟ್ಟರೆ ಬೇರೆ ಯಾರು ಕೂಡ ಅಷ್ಟರ ಮಟ್ಟಿಗೆ ಪ್ರಚಾರ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಲೀಡರ್ ಡಿ.ಕೆ ಶಿವಕುಮಾರ್ ಅವರನ್ನು ಇಂದು ಅಖಾಡಕ್ಕೆ ಧುಮುಕಿಸಿ ಮತಬೇಟೆ ಆಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇಂದು ಡಿಕೆ ಕಾಂಗ್ರೆಸ್ ಅಭ್ಯರ್ಥಿ ಪರ ಶಿಳನೆರೆ ಹೋಬಳಿ ಸೇರಿದಂತೆ ಇತರೆ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.

  • ಜೆಡಿಎಸ್‍ನವರು ಕೋತಿಯಂತೆ, ಒಂದ್ಕಡೆ ಇರಲ್ಲ-ಇಂಥಾವ್ರನ್ನ ಕಟ್ಕೊಂಡು ಎಲ್ಲಿ ಸಾಯೋಣ: ಮಾಜಿ ಡಿಸಿಎಂ

    ಜೆಡಿಎಸ್‍ನವರು ಕೋತಿಯಂತೆ, ಒಂದ್ಕಡೆ ಇರಲ್ಲ-ಇಂಥಾವ್ರನ್ನ ಕಟ್ಕೊಂಡು ಎಲ್ಲಿ ಸಾಯೋಣ: ಮಾಜಿ ಡಿಸಿಎಂ

    ಮೈಸೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರು ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ್ದಾರೆ.

    ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಪರಮೇಶ್ವರ್, ಜೆಡಿಎಸ್‍ನವರು ಕೋತಿಯಂತೆ. ಒಂದು ಕಡೆ ಇರೋದೇ ಇಲ್ಲ. ಮರದಿಂದ ಮರಕ್ಕೆ ಕೋತಿಗಳ ರೀತಿ ಜಿಗಿಯುತ್ತಲೇ ಇರುತ್ತಾರೆ. ಇದೆಲ್ಲ ನಮ್ಮೂರಿನ ಕಡೆ ಮಾಮೂಲಿ. ಅದೇ ರೀತಿ ಜೆಡಿಎಸ್‍ನವರ ಕತೆಯಾಗಿದೆ. ಬೆಳಗ್ಗೆ ಒಂದು, ಸಂಜೆ ಒಂದು ಮಾತು. ಇಂತಹ ಜೆಡಿಎಸ್‍ನವರನ್ನು ಕಟ್ಟಿಕೊಂಡು ನಾವೆಲ್ಲೋಗಿ ಸಾಯೋಣ ಎಂದು ವ್ಯಂಗ್ಯವಾಡಿದ್ದಾರೆ.

    ಅಲ್ಲದೆ ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಜೆಡಿಎಸ್‍ನವರು ಇರಲ್ಲ. ಅವರ ಜೊತೆಗಾದರೂ ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೂ ಕೇಳಲ್ಲ. ಇಂತವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆ ಜೆಡಿಎಸ್‍ನವರನ್ನು ತಿರಸ್ಕರಿಸಿ ಎಂದು ಪರಮೇಶ್ವರ್ ಕರೆ ನೀಡಿದರು.

    ಇದೇ ವೇಳೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಇದನ್ನು ನಾನು ನಿಮಗೆ ಬರೆದು ಕೊಡುತ್ತೇನೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರ: ಉಪಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರ ನಡೆಯಲಿದೆ. ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಒಂದೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕ್ಷೇತ್ರದ ಮತದಾರರ ಮನಗೆಲುವುದಕ್ಕೆ ಇಬ್ಬರು ನಾಯಕರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ ಸುಧಾಕರ್ ಬಿಜೆಪಿ ಪಕ್ಷದಿಂದ ಅಖಾಡಕ್ಕಿಳಿದಿದ್ದು, ಜೆಡಿಎಸ್‍ನಿಂದ ರಾಧಾಕೃಷ್ಣ ಹಾಗೂ ಕಾಂಗ್ರೆಸ್‍ನಿಂದ ಎಂ ಅಂಜಿನಪ್ಪ ಅಖಾಡದಲ್ಲಿದ್ದಾರೆ. ಈಗಾಗಲೇ ಶತಾಯಗತಾಯ ಗೆಲ್ಲಲೆಬೇಕು ಎಂದು ಪಣ ತೊಟ್ಟಿರುವ ಸುಧಾಕರ್, ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ ಸಹ ಎರಡು ಬಾರಿ ಚಿಕ್ಕಬಳ್ಳಾಪುರಕ್ಕೆ ಬಂದು ಸುಧಾಕರ್ ಪರ ಪ್ರಚಾರ ನಡೆಸಿ, ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಸೇರಿದಂತೆ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದರು. ಈಗ ಮೂರನೇ ಬಾರಿ ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪ ಮಂಚೇನಹಳ್ಳಿ ಪಟ್ಟಣದಲ್ಲಿ 3 ಗಂಟೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ.

    ಇತ್ತ ಜೆಡಿಎಸ್‍ನಿಂದ ಬೆಳ್ಳಂಬೆಳಗ್ಗೆಯೇ ಚುನಾವಣಾ ಅಖಾಡಕ್ಕೆ ಧುಮಕಲಿರುವ ಎಚ್.ಡಿ ಕುಮಾರಸ್ವಾಮಿ, ಮೊದಲಿಗೆ ನಂದಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬಿಜೆಪಿ ಅಭ್ಯರ್ಥಿ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಸರ್ಕಲ್‍ನಲ್ಲಿ ಬಹಿರಂಗ ಭಾಷಣ ಮಾಡಿ, ತದನಂತರ ಪ್ರತಿಷ್ಠೆಯ ವಿಷಯವಾಗಿರುವ ಮಂಚೇನಹಳ್ಳಿಗೆ ತೆರಳಲಿದ್ದು, ಅಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಎಚ್.ಡಿ ಕುಮಾರಸ್ವಾಮಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇಡೀ ದಿನ ಕ್ಷೇತ್ರದ್ಯಾಂತ ಎಚ್‍ಡಿಕೆ ಪ್ರಚಾರ ನಡೆಸಲಿದ್ದಾರೆ.

    ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಮುಂದೆಯೇ ಮಂಚೇನಹಳ್ಳಿಯಲ್ಲಿ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ಸ್ವಾಗತ ಕೋರಿ ಸನ್ಮಾನಿಸುವುದಕ್ಕೆ ಸುಧಾಕರ್ ಸಿದ್ಧರಾಗಿದ್ದಾರೆ.

  • ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಿ.ಟಿ ರವಿ, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

    ಪ್ರಚಾರದ ವೇಳೆ, ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಬೆಂಬಲಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪಕ್ಷಾತೀತವಾಗಿ ಬಿಜೆಪಿ ಪಕ್ಷ ಸೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಅತಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸ್ವಾಭಿಮಾನದ ಅಲೆಯಿದ್ದು, ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸವಾಲು ಹಾಕಿದಾಗಲೇ ಜನರ ಸ್ವಾಭಿಮಾನ ರೊಚ್ಚಿಗೇಳುವಂತೆ ಮಾಡಿದೆ. ಹೀಗಾಗಿ ದೊಡ್ಡ ನಾಯಕರಾದ ಡಿಕೆಶಿ ದೊಡ್ಡದಾಗಿ ಯೋಚನೆ ಮಾಡಬೇಕು. ಅದು ಬಿಟ್ಟು ಸಣ್ಣತನ ಪ್ರದರ್ಶನ ಮಾಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ಒನ್ ಸೈಡ್ ಮ್ಯಾಚ್ ಎಂಬ ಪರಿಸ್ಥಿತಿ ಇದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕಾಗಿ ಪೈಪೋಟಿಗಿಳಿದಿವೆ ಎಂದರು.

    ಅಲ್ಲದೆ ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಪಂಚೆ ಶಲ್ಯದಷ್ಟು ಸರಳವಾಗಿಲ್ಲ. ಅವರ ಪಂಚೆ ಹಾಗೂ ಶಲ್ಯಕ್ಕೆ ಅವರ ಐಷಾರಾಮಿ ಜೀವನ ಮಿಸ್ ಮ್ಯಾಚ್ ಆಗುತ್ತಿದೆ. ಸಿದ್ದರಾಮಯ್ಯ ಪ್ರತಿ ದಿನ ಹಾಕುವ ಗಾಗಾಲ್ಸ್ ನ ಬೆಲೆ ಏನು? ಎಂದು ಪ್ರಶ್ನೆ ಮಾಡಿದರು.

    ಯಡಿಯೂರಪ್ಪ ಅವರ ರಾಜೀನಾಮೆ ಕೇಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಒಂದು ಸೀಟು ಬಂದಾಗಲೇ ಸಿದ್ದರಾಮಯ್ಯ ನೈತಿಕತೆ ಇದ್ದಿದ್ರೆ ಅಂದೇ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ನಾನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯಷ್ಟು ದೊಡ್ಡ ಲೀಡರ್ ಅಲ್ಲ. ಈಗಲೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲವರು ಕೃಪಾಕಟಾಕ್ಷದಿಂದ ನಾಯಕರಾದರೆ, ಕೆಲವರು ವಂಶಪಾರಂಪರ್ಯವಾಗಿ ನಾಯಕರಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಗುದ್ದು ನೀಡಿದರು.

  • ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕೆ. ಕುಟುಂಬ ರಾಜಕಾರಣದಿಂದಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಸೋತರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರ ಪುಟ್ಟಸ್ವಾಮಿ ಚುನಾವಣಾ ಪ್ರಚಾರ ಸಭೆಗೆ ಇಳಿದಿದ್ದರು. ಈ ವೇಳೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ರೇವಣ್ಣ ಅಘೋಷಿತ ಸಿಎಂ, ಸಂಬಂಧಿಗಳಾದ ತಮ್ಮಣ್ಣ ಹಾಗೂ ಸಾರಾ ಮಹೇಶ್ ಸಚಿವರಾದರು. ಹೀಗಾಗಿ ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವಗಳಿಗೆ ಅವಮಾನ ಮಾಡಿದೆ ಎಂದರು.

    ಅಲ್ಲದೆ ಪಕ್ಷವನ್ನು ನಂಬಿದ ಜನರೇ ಜೆಡಿಎಸ್ ಬಗ್ಗೆ ಅಸಹ್ಯಪಡುತ್ತಿದ್ದು, ನಿಖಿಲ್ ಹಾಗೂ ಎಚ್.ಡಿ ದೇವೇಗೌಡ ಅವರನ್ನು ಸೋಲಿಸಿದರು. ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎರಡು ಭಾಗಗಳಾಗಿವೆ. ಉಪಚುನಾವಣಾ ಪ್ರಚಾರಕ್ಕೆ ಮೂಲ ಕಾಂಗ್ರೆಸ್ಸಿಗರು ಬರುತ್ತಿಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗಳಿಸಲಿದ್ದು, ಇದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದರೂ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

  • ರಾಜೀನಾಮೆ ಏಕೆ ಕೊಟ್ರಿ- ಗ್ರಾಮಸ್ಥರಿಂದ ವಿಶ್ವನಾಥ್‍ಗೆ ತರಾಟೆ

    ರಾಜೀನಾಮೆ ಏಕೆ ಕೊಟ್ರಿ- ಗ್ರಾಮಸ್ಥರಿಂದ ವಿಶ್ವನಾಥ್‍ಗೆ ತರಾಟೆ

    ಮೈಸೂರು: ವೋಟ್ ಹಾಕಿ ಗೆಲ್ಲಿಸಿದ್ದೀವಿ. ನಮ್ಮ ಕಷ್ಟ-ಸುಖ ಕೇಳಲು ನೀವು ಬಂದ್ರಾ ಎಂದು ಮತ ಕೇಳಲು ಹೋದ ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರನ್ನು ಎರಡು ಗ್ರಾಮಗಳಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಮತ ಕೇಳಲು ಹೋಗಿದ್ದರು. ಈ ವೇಳೆ ಹುಣಸೂರು ಮೈಸೂರು ರಸ್ತೆಯ ಕೊಳಗಟ್ಟ ಗ್ರಾಮದ ಗ್ರಾಮಸ್ಥರು ಹಾಗೂ ಶ್ರವಣಹಳ್ಳಿ ಗ್ರಾಮದ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.

    ಮತ ಕೇಳಲು ಬಂದ ವಿಶ್ವನಾಥ್ ಅವರಿಗೆ ಗ್ರಾಮಸ್ಥರು, ಇದುವರೆಗೂ ನೀವು ನಮ್ಮ ಕಷ್ಟ- ಸುಖ ಕೇಳಲು ಬಂದಿದ್ದೀರಾ? ನಾವು ನಿಮಗೆ ಮತ ಹಾಕಿದ್ದೆವು. ಆದರೆ ನೀವು ರಾಜೀನಾಮೆ ನೀಡಿದ್ದಿರಿ. ನೀವು ಯಾಕೆ ರಾಜೀನಾಮೆ ಕೊಟ್ರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

    ಎಚ್. ವಿಶ್ವನಾಥ್ ಎಷ್ಟೇ ಹೇಳಿದರೂ ಗ್ರಾಮಸ್ಥರು ಅವರ ಮಾತು ಕೇಳದೆ ಜೋರಾಗಿ ಗಲಾಟೆ ಮಾಡುತ್ತಿದ್ದರು. ಬಳಿಕ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹಾಗೂ ಕೆಲ ಗ್ರಾಮಸ್ಥರು ಜನರನ್ನು ಸಮಾಧಾನಪಡಿಸಿದರು.

  • ಕೆ.ಆರ್ ಪೇಟೆಯಲ್ಲಿ ಸದ್ದು ಮಾಡ್ತಿಲ್ಲ ಜೆಡಿಎಸ್ – ‘ದಳಪತಿ’ ಐಕಾನ್‍ಗಳು ಪ್ರಚಾರದಿಂದ ದೂರ

    ಕೆ.ಆರ್ ಪೇಟೆಯಲ್ಲಿ ಸದ್ದು ಮಾಡ್ತಿಲ್ಲ ಜೆಡಿಎಸ್ – ‘ದಳಪತಿ’ ಐಕಾನ್‍ಗಳು ಪ್ರಚಾರದಿಂದ ದೂರ

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಉಪಚುನಾವಣೆಯ ರಣ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲಬೇಕಿದ್ದ ಜೆಡಿಎಸ್ ಐಕಾನ್‍ಗಳು ಮಾತ್ರ ಇನ್ನೂ ಪತ್ತೆ ಇಲ್ಲ.

    ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಪೈಕಿ ಕೆ.ಆರ್ ಪೇಟೆ ಉಪ ಕಣವೂ ಸಹ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರವನ್ನೇ ರೂಪಿಸುತ್ತಿವೆ. ಈ ಪೈಕಿ ಜೆಡಿಎಸ್ ಮಾತ್ರ ಎಲ್ಲೋ ಒಂದು ಹಿಂದಕ್ಕೆ ಬಿದ್ದ ಹಾಗೆ ಇದೆ.

    ಕೆ.ಆರ್ ಪೇಟೆ ಉಪ ಕಣದ ಜೆಡಿಎಸ್ ಅಭ್ಯರ್ಥಿ ಪರ ಸದ್ಯ ಮಾಜಿ ಸಚಿವ ರೇವಣ್ಣ ಪ್ರತಿನಿತ್ಯ ಪ್ರಚಾರದ ಮಾಡುತ್ತಿದ್ದರೆ, ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡ ಪುಟ್ಟರಾಜು ಆಗೊಮ್ಮೆ ಈಗೊಮ್ಮೆ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿ ಜೆಡಿಎಸ್ ಐಕಾನ್‍ಗಳಾದ ಹೆಚ್.ಡಿ ದೇವೇಗೌಡರು ಮತ್ತು ಹೆಚ್.ಡಿ ಕುಮಾರಸ್ವಾಮಿ ಮಾತ್ರ ಇದುವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

    ಮಂಡ್ಯ ಜಿಲ್ಲೆ ಎಂದರೆ ಸದ್ಯ ದೇವೇಗೌಡ್ರು, ಕುಮಾರಸ್ವಾಮಿ ಎಂಬತಾಗಿತ್ತು. ಅದರಲ್ಲೂ ಕೆ.ಆರ್ ಪೇಟೆ ಕ್ಷೇತ್ರದ ಜನರು ದೊಡ್ಡಗೌಡರು ಮತ್ತು ಕುಮಾರಸ್ವಾಮಿ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದಾರೆ. ಹೀಗಿರುವಾಗ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರ ಪರವಾಗಿ ಪ್ರಚಾರ ಮಾಡಲು ಇದುವರೆಗೂ ಕಾಣಿಸಿಕೊಂಡಿಲ್ಲ. ಇದರಿಂದ ಜನರು ಈ ಇಬ್ಬರು ಜೆಡಿಎಸ್ ಐಕಾನ್‍ಗಳು ಯಾಕೆ ಇನ್ನೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

  • ಎಲೆಕ್ಷನ್ ಹೀಟ್ ಅಕ್ರಮ ಮದ್ಯ ಮಾರಾಟ – ರಾತ್ರಿ ಬನ್ನಿ ಎಷ್ಟು ಬೇಕಾದ್ರೂ ಎಣ್ಣೆ ಕೊಡ್ತೀವಿ

    ಎಲೆಕ್ಷನ್ ಹೀಟ್ ಅಕ್ರಮ ಮದ್ಯ ಮಾರಾಟ – ರಾತ್ರಿ ಬನ್ನಿ ಎಷ್ಟು ಬೇಕಾದ್ರೂ ಎಣ್ಣೆ ಕೊಡ್ತೀವಿ

    – ಬಾರ್ ಮಾಲೀಕರ ಭರ್ಜರಿ ಆಫರ್

    ಬೆಂಗಳೂರು: ಉಪಚುನಾವಣೆಯ ಕಾವು ಹೆಚ್ಚಾದಂತೆ, ಮತದಾರರ ಬೇಟೆಗೆ ಅಖಾಡ ಸಜ್ಜಾಗಿದೆ. ಎಲೆಕ್ಷನ್ ಟೈಂನಲ್ಲಿ ಈಗ ಎಣ್ಣೆ ಕಿಕ್ಕು ಸಖತ್ ಸೌಂಡ್ ಮಾಡುತ್ತಿದೆ. ಬೈ ಎಲೆಕ್ಷನ್ ಅಖಾಡದಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಎಣ್ಣೆ ಭರಾಟೆ ಹೇಗೆ ನಡೆಯುತ್ತಿದೆ ಎಂಬುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

    ಬೈ ಎಲೆಕ್ಷನ್ ಅಖಾಡದ ಕಿಕ್ ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮಧ್ಯೆ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ, ಸಖತ್ ಎಣ್ಣೆ ವ್ಯೂಹ ಹೆಣೆಯಲಾಗುತ್ತಿದೆ. ಬಾರ್ ಗಳ ಎಣ್ಣೆ ಮೇಲೆ ಅಬಕಾರಿ ಹೆಚ್ಚು ಕಣ್ಣು ಇಟ್ಟಿರುವುದರಿಂದ ಈಗ ಎಲೆಕ್ಷನ್ ಎಣ್ಣೆ ಸೇಲ್‍ಗೆ ಹೊಸ ದಾರಿ ಹುಡುಕಿಕೊಂಡಿರುವುದು ಪಬ್ಲಿಕ್ ಟಿವಿಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

    ಸ್ಥಳ : ಮಾಗಡಿ ರೋಡ್
    ಬಾರ್ & ರೆಸ್ಟೋರೆಂಟ್

    ಮಾಗಡಿ ರೋಡ್ ಪಕ್ಕದಲ್ಲಿಯೇ ಇರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಇದು. ಚುನಾವಣಾ ಸಂದರ್ಭದಲ್ಲಿ ಅಬಕಾರಿ ನಿಯಮಗಳನ್ನು ಬಾರ್ ಗಳು ಪಾಲಿಸಬೇಕು. ದಿನಕ್ಕೆ ಎಷ್ಟು ಕೇಸ್ ಮಾರಾಟ ಆಗುತ್ತೆ ಎಂಬ ಮಾಹಿತಿಯನ್ನು ನೀಡಬೇಕು. ಆದರೆ ಇದ್ಯಾವುದನ್ನೂ ಪಾಲಿಸದ ಬಾರ್ ಮಾಲೀಕರು, ಚುನಾವಣೆಗೆ ಎಣ್ಣೆ ಸಪ್ಲೈ ಮಾಡುತ್ತೀರಾ ಎಂದು ಕೇಳಿದ್ದೇ ತಡ, ನಾವು ಅಬಕಾರಿಗೆ ಮಾರಾಟದ ಲೆಕ್ಕ ಕೊಡದೇ ನಿಮಗೆ ಮಾರುತ್ತೇವೆ ಡೋಂಟ್ ವರಿ, ಎಷ್ಟು ಕೇಸ್ ಬೇಕಾದರೂ ಕೊಡುತ್ತೇವೆ. ನಾವು ಕೊಡುವ ಬಾಟಲ್ ಮೇಲೆ ಇರುವ ಸೀಲ್ ಕಿತ್ತಾಕಿ, ನಿಮ್ಮ ಮನೆಗಳಲ್ಲಿ ಇಷ್ಟಿಷ್ಟು ಕೇಸ್ ಎಂದು ಇಟ್ಟುಕೊಳ್ಳಿ ಮತದಾರರಿಗೆ ಹಂಚಿ ಎಂದು ಸಲಹೆ ನೀಡುತ್ತಾರೆ.

    ಪ್ರತಿನಿಧಿ : 10 ಕೇಸ್ ಎಣ್ಣೆ ಬೇಕಿತ್ತಲ್ಲ
    ಮಾಲೀಕ : ಯಾವುದು
    ಪ್ರತಿನಿಧಿ : ಟೋಬ್ಯಾಕ್
    ಮಾಲೀಕ : ಯಾವುದು ಕೋಲ್ಡಾ
    ಪ್ರತಿನಿಧಿ : ಹು ಎಲೆಕ್ಷನ್ ಇತ್ತಲ್ಲ ಹಾಗಾಗಿ
    ಮಾಲೀಕ : ಗೊತ್ತಾಯ್ತು ಹಂಚುವುದಕ್ಕೆ
    ಪ್ರತಿನಿಧಿ : ಹು ಸರ್ ಬೇಕಿತ್ತು
    ಮಾಲೀಕ : ಎರಡು ದಿನ ರಜೆ ಇದೇ ಇವತ್ತೇ ತಗೊಂಡು ಹೋಗಿ ಇಟ್ಟುಕೊಂಡು ಬಿಡಿ
    ಪ್ರತಿನಿಧಿ : ಭಾನುವಾರ ಬೇಕಿರೋದು
    ಮಾಲೀಕ : ಸಂಜೆ ಬನ್ನಿ ನಂಬರ್ ಕೊಟ್ಟೋಗಿ
    ಪ್ರತಿನಿಧಿ : ನಂಬರ್ ಕೊಡ್ತೀವಿ. ಹೇಗೆ ಎಲೆಕ್ಷನ್ ಟೈಂನಲ್ಲಿ ಸಿಗುತ್ತಾ
    ಮಾಲೀಕ : ಸಿಗುತ್ತೆ ಆದರೆ ಪ್ಯಾಕೇಟ್ ಮೇಲಿರುವ ಲೇಬಲ್ ಕಿತ್ತಾಕಿ
    ಪ್ರತಿನಿಧಿ : ಹೌದಾ
    ಮಾಲೀಕ : ಲೇಬಲ್ ಕಿತ್ತಾಕಿ ಹಂಚಿ ಇಂತಹ ಬಾರು ಎಂದು ಗೊತ್ತಾಗಲ್ಲ
    ಪ್ರತಿನಿಧಿ : ಹೌದಾ ಹಾಗೇ ಮಾಡಬಹುದಾ
    ಮಾಲೀಕ : ಹಾಗೇ ಮಾಡಿ. ಜಾಸ್ತಿ ಕೇಸ್ ನಿಮ್ಮ ಕ್ಲೋಸ್ ಆಗಿ ಇರೋರು ಮನೇಲಿ ಹಂಚಿ
    ಪ್ರತಿನಿಧಿ : ಹಂಚಬಹುದು
    ಮಾಲೀಕ : ನಿಮ್ಮ ನಂಬರ್ ಕೊಟ್ಟು ಹೋಗಿ ಸಂಜೆ ಬನ್ನಿ
    ಪ್ರತಿನಿಧಿ : ನಿಮ್ಮ ನಂಬರ್ ಹೇಳಿ ಕಾಲ್ ಮಾಡ್ತೀನಿ

    ಸ್ಥಳ : ಮಹಾಲಕ್ಷ್ಮಿ ಲೇಔಟ್ ರೋಡ್
    ಎಂಆರ್‌ಪಿ ಶಾಪ್

    ಮಹಾಲಕ್ಷ್ಮಿ ಲೇಔಟ್ ರೋಡ್‍ನಲ್ಲಿ ಇರುವ ಎಂಆರ್‌ಪಿ ಶಾಪ್‍ನಲ್ಲಿ ಕೇವಲ ಪಾರ್ಸಲ್ ನೀಡುವುದು ಎಂದು ಪಬ್ಲಿಕ್ ಟಿವಿ ತಂಡ ಹೋದರೆ ಅಲ್ಲಿ ಕುಡಿಯೋದಕ್ಕೆ ಅವಕಾಶ ಕೂಡ ಮಾಡಿಕೊಡಲಾಗುತ್ತಿದೆ. ಜೊತೆಗೆ ನಾಲ್ಕು ಕೇಸ್ ಬಿಯರ್ ಬೇಕು ಚುನಾವಣಾ ನೀತಿ ಸಂಹಿತೆ ಇದೆ ಏನು ಮಾಡುವುದು ಎಂದು ಕೇಳಿದರೆ. ಹೌದು ನೀತಿ ಸಂಹಿತೆ ಇದೆ ಅಷ್ಟೊಂದು ಕೊಡುವುದಕ್ಕೆ ಆಗಲ್ಲ. ರಾತ್ರಿ 10 ಗಂಟೆ ಮೇಲಾದರೆ ನೋಡೋಣ. ಇದು ಎಂಆರ್‌ಪಿ ಆದರೂ ಇಲ್ಲಿಯೇ ಕುಡಿಯಬಹುದು ಎಂದು ಹೇಳುತ್ತಾರೆ.

    ಬಾರ್ ಗಳಲ್ಲಿ ಮಾತ್ರವಲ್ಲ ಈ ಎಲೆಕ್ಷನ್ ಎಣ್ಣೆ ವ್ಯಾಪಾರ, ಡಾಬಾಗಳಲ್ಲಿ ಊಟದ ಜೊತೆ ಈಗ ಎಲೆಕ್ಷನ್ ಸ್ಪೆಷಲ್ ಎಣ್ಣೆ ಪ್ಯಾಕೇಜ್ ಭರ್ಜರಿಯಾಗಿ ನೀಡಲಾಗುತ್ತಿದೆ. ಆಯಾಯ ಕ್ಷೇತ್ರದ ಮತದಾರರನ್ನು ಸೆಳೆಯುವುದಕ್ಕೆ ಈ ಗಿಫ್ಟ್ ನೀಡಲಾಗುತ್ತಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಗಡಿ ರೋಡ್ ಉದ್ದಕ್ಕೂ ಇರುವ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಲೆಕ್ಷನ್ ಬೆನ್ನಲ್ಲೆ ಎಣ್ಣೆ ಕಿಕ್‍ಗೆ ಹಾಡುಹಗಲೇ ಕುಡುಕರಿಂದ ಡಾಬಗಳಂತೂ ಹೌಸ್‍ಫುಲ್ ಆಗಿದೆ. ನೀತಿ ಸಂಹಿತೆ ಜಾರಿಯಲ್ಲಿದರೂ ಈ ಪರಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ ಅಂದರೆ ಬಹುತೇಕ ಇದಕ್ಕೆ ಸ್ಪಾನ್ಸರ್ಸ್ ಕೂಡ ಸ್ಥಳೀಯ ನಾಯಕರು ಎನ್ನುವ ಅನುಮಾನ ಶುರುವಾಗಿದೆ.

    ಪ್ರತಿನಿಧಿ : ಏನಿದೆ
    ಮಾಲೀಕ : ಚಿಕನ್ ಫ್ರೈ, ಚಿಕನ್ ಕೂರ್ಮಾ, ಮಟನ್ ರೈಸ್
    ಪ್ರತಿನಿಧಿ : ಎಷ್ಟು ಸಿಂಗಲ್ ಪರೋಟ
    ಮಾಲೀಕ : ಸಿಂಗಲ್ ಪರೋಟ ಸಾಕ
    ಪ್ರತಿನಿಧಿ : ಸಾಕು ಮತ್ತೆ ಏನು ಸಿಗುತ್ತೆ
    ಮಾಲೀಕ : ಏನು ಬೇಕು ಹೇಳಿ
    ಪ್ರತಿನಿಧಿ : ಎಣ್ಣೆ ಸಿಗುತ್ತಾ
    ಮಾಲೀಕ : ಹು ಸಿಗುತ್ತೆ
    ಪ್ರತಿನಿಧಿ : ಫೋನ್ ಪೇ ಆಗುತ್ತಾ
    ಮಾಲೀಕ : ಒಳಗಡೆ ಕ್ಯಾಶ್ ಕೊಡಬೇಕು
    ಪ್ರತಿನಿಧಿ : ಹೌದಾ ಪರೋಟ ತಗೋಬೇಕಾ
    ಮಾಲೀಕ : ಪರೋಟಗೆ ಏನಾದ್ರು ಬೇಕಾ
    ಪ್ರತಿನಿಧಿ : ಎಣ್ಣೆ ಬೇಕಿತ್ತು

    ಸ್ಥಳ : ಕಂಠೀರವ ಸ್ಟೇಡಿಯಂ ರೋಡ್
    ಎಂಆರ್‌ಪಿ ಶಾಪ್

    ಕೆಲವು ಬಾರ್ ಗಳಲ್ಲಿ ಕೇಸ್ ಗಟ್ಟಲೆ ಎಣ್ಣೆ ಬೇಕು ಎಂದರೆ, ಇಲ್ಲ ಸರ್ ಕೊಡುವುದಕ್ಕೆ ಆಗಲ್ಲ ಎಲೆಕ್ಷನ್ ಇದೆ ಕೊಡಲ್ಲ ಎಂದು ಹೇಳುತ್ತಾರೆ. ಬೇರೆ ಶಾಪ್ ಎಂಆರ್‌ಪಿನಲ್ಲಿ ಕೇಳಿ ಕೊಡುತ್ತಾರೆ. ನಾವು ಕೊಡಲ್ಲ ಎಂದು ನಿಯಮಗಳನ್ನು ಪಾಲಿಸುತ್ತಿದ್ದಾರೆ.

    ಪ್ರತಿನಿಧಿ : ಎಣ್ಣೆ ಬೇಕಿತ್ತಲ್ಲ ಸರ್ ನಾಲ್ಕು ಕೇಸ್
    ಸಿಬ್ಬಂದಿ : ಈವಾಗ ಸಿಗಲ್ಲ ಸರ್
    ಪ್ರತಿನಿಧಿ : ಯಾಕ್ ಸರ್
    ಸಿಬ್ಬಂದಿ : ಎಲೆಕ್ಷನ್ ಇದೆಯಲ್ಲ
    ಪ್ರತಿನಿಧಿ : ಇದ್ದರೇನು ಕೊಡಿ ಸರ್ ಮದುವೆ ಇದೆ
    ಸಿಬ್ಬಂದಿ : ಕೊಡಲ್ಲ ಸರ್ ಪ್ರಾಬ್ಲಂ ಆಗಿದೆ
    ಪ್ರತಿನಿಧಿ : ಮತ್ತೇ ಹೇಗೆ
    ಸಿಬ್ಬಂದಿ : ಬೇರೆ ಕಡೆ ಸಿಗುತ್ತೆ ನೋಡಿ
    ಪ್ರತಿನಿಧಿ : ಎಲ್ಲಿ ಸರ್
    ಸಿಬ್ಬಂದಿ : ಮುಂದೆ ಹೋಗಿ ಸಿಗುತ್ತೆ