ಬೆಂಗಳೂರು: ಕಾಂಗ್ರೆಸ್ ಮುಖಂಡ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸೋಮೇಶ್ವರ ನಗರದಲ್ಲಿ ನಡೆದಿದೆ.
ಸಿದ್ದಾಪುರ ನಿವಾಸಿ ಆಗಿರುವ ಸಯ್ಯದ್ ರಿಯಾಜ್ ಚಿಕ್ಕಪೇಟೆ ಕಾಂಗ್ರೆಸ್ ಕಮಿಟಿ ಕಾಯದರ್ಶಿಯಾಗಿದ್ದಾರೆ. ರಿಯಾಜ್ ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಜ್ವಾನ್ ಪರ ಕೆಲಸ ಮಾಡಿ ಫಲಿತಾಂಶದ ಬಳಿಕ ಸಿದ್ದಾಪುರದ ಕಚೇರಿಗೆ ಬಂದಿದ್ದರು.
ರಿಜ್ವಾನ್ ಜಯದ ಸಂಭ್ರಮಾಚರಣೆ ಹುಡುಗರ ಬಳಿ ಹಂಚಿಕೊಳ್ಳಲು ರಿಯಾಜ್ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಡಿಯೋ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ರಿಯಾಜ್ ಮೇಲೆ ಮಚ್ಚು-ಲಾಂಗುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ರಿಯಾಜ್ ಸೋಮೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸಿದ್ದಾರೆ.
ಬೆಂಗಳೂರು: ಉಪಚುನಾವಣೆಯಲ್ಲಿ ಸೋಲು ಕಂಡ ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ನಾಲ್ಕೈದು ದಿನಗಳಲ್ಲಿ ಗುಡ್ ನ್ಯೂಸ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಉಪಚುನಾವಣೆಯಲ್ಲಿ ಸೋತ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ‘ಡೋಂಟ್ ವರಿ’ ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ ನನ್ನ ಜೊತೆ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲ ಅನರ್ಹ ಶಾಸಕರಿಗೂ ಈ ಹಿಂದೆ ಮಾತು ಕೊಟ್ಟಂತೆ ಸ್ಥಾನ ಮಾನ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ
ಇನ್ನು ನಾಲ್ಕೈದು ದಿನದಲ್ಲಿ ದೆಹಲಿಗೆ ಹಾರಲಿರುವ ಬಿಎಸ್‍ವೈ ಅಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅದರಲ್ಲೂ ಸಚಿವರಾಗಿದ್ದು ರಾಜೀನಾಮೆ ಕೊಟ್ಟ ಎಂಟಿಬಿ ಕೈಯನ್ನು ಬಿಜೆಪಿ ಬಿಡಲಾರದು ಎನ್ನಲಾಗಿದೆ. ಬಹುತೇಕ ಇಡೀ ಅಪರೇಷನ್‍ನ ಉಸ್ತುವಾರಿಯನ್ನು ವಹಿಸಿದ್ದ ವಿಶ್ವನಾಥ್‍ರನ್ನು ಹಿಂದೆ ಸರಿಸುವ ಪ್ರಮೇಯ ಬಹುಶಃ ಬಿಜೆಪಿ ಮಾಡಲಾರದು ಎನ್ನಲಾಗಿದೆ. ಹಾಗಾಗಿ ನಾಲ್ಲೈದು ದಿನದಲ್ಲಿ ಸೋತಿರುವ ಎಂಟಿಬಿ ಹಾಗೂ ವಿಶ್ವನಾಥ್‍ಗೂ ಗುಡ್ ನ್ಯೂಸ್ ಸಿಗಬಹುದು ಎನ್ನುವ ನಿರೀಕ್ಷೆಯಿದೆ.
ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಿಂದ ಎಂಟಿಬಿ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.
ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಸೋತಿದ್ದಾರೆ. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದಾರೆ.
ಎಂಟಿಬಿ ನಾಗರಾಜ್ ಅವರು ಮತ ಎಣಿಕಾ ಕೇಂದ್ರಕ್ಕೆ ಹೋಗದೇ ಮಗನನ್ನು ಕಳುಹಿಸಿದ್ದರು. ಬೆಳಗ್ಗೆ 9 ಗಂಟೆ ನಂತರ ಟ್ರೆಂಡ್ ನೋಡಿ ಹೋಗೋಣ ಎಂದುಕೊಂಡಿದ್ದ ಎಂಟಿಬಿಗೆ ಮುನ್ನಡೆಯ ಟ್ರೆಂಡ್ ಸಿಗಲೇ ಇಲ್ಲ. ಕೌಂಟಿಂಗ್ ಸೆಂಟರ್ ನಿಂದ ಮಗನ ಮೂಲಕ ಮಾಹಿತಿ ಪಡೆಯುತ್ತಿದ್ದ ಅವರು ಒಂದು ಸುತ್ತಲ್ಲೂ ಮೇಲುಗೈ ಸಾಧಿಸದೇ ಸೋತಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಡೆ ಸುತ್ತಗಳ ಎಣಿಕೆಯಲ್ಲಿ ಜಯಬೇರಿ ಬಾರಿಸಿದ್ದ ಎಂಟಿಬಿ ಈ ಬಾರಿಯೂ ಅದೇ ರೀತಿ ಗೆಲುವು ಸಿಗುತ್ತಾ ಎಂದು ಕಾಯುತ್ತಿದ್ದ ಎಂಟಿಬಿಗೆ ಈ ಫಲಿತಾಂಶ ನೋಡಿ ಆಘಾತಗೊಂಡಿದ್ದಾರೆ. ಸೋಲಿಗೆ ಕಾರಣರಾದ ಶರತ್ ಬಚ್ಚೇಗೌಡ ಬಗ್ಗೆ ಫೋನ್ ಮೂಲಕವೇ ಬಿಜೆಪಿ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರತಿ ದಿನ ಬೆಂಬಲಿಗರಿಂದ ಗಿಜುಗುಡುತ್ತಿದ್ದ ಎಂಟಿಬಿ ನಿವಾಸದಲ್ಲಿ ಇಂದು ನಿರವ ಮೌನ ಆವರಿಸಿದೆ. ಎಂಟಿಬಿ ಸಂತೈಸಲು ಯಾರೂ ಇಲ್ಲ. ಯಾರೂ ಬಂದಿಲ್ಲ. ಒಬ್ಬರೇ ಕೂತು ಸೋಲಿನ ಪರಾಮರ್ಶೆಯನ್ನು ಮಾಡುತ್ತಿದ್ದಾರೆ.
ಮೈಸೂರು: ನನ್ನ ಗೆಲುವು ನಿಶ್ಚಿತ ಎಂದು ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಸಾಯಿ ಬಾಬಾ ದರ್ಶನ ಪಡೆದರು. ಮಂಜುನಾಥ್ ಅವರು ತಮ್ಮ ಕುಟುಂಬ ಸಮೇತ ಸಾಯಿ ಬಾಬಾ ದೇವಸ್ಥಾನಕ್ಕೆ ಆಗಮಿಸಿ ಬೆಳ್ಳಿ ಪಾದವನ್ನು ಕಾಣಿಕೆಯಾಗಿ ನೀಡಿದ್ದಾರೆ. ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಅರ್ಚನೆ, ಹಾಲಿನ ಅಭಿಷೇಕ ಮಾಡಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಜುನಾಥ್, ನನ್ನ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. ಅಲ್ಲದೆ ಕ್ಲುಲ್ಲಕ ಕಾರಣಕ್ಕೆ ಜಗಳವಾಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಾನು ಗೆದ್ದ ಬಳಿಕ ಸಂಭ್ರಮಾಚರಣೆ ಮಾಡಿ ಕೇಸ್ ಹಾಕಿಸಿಕೊಳ್ಳಬೇಡಿ. ಭಾನುವಾರ ಕೂಡ ಮೂರು ಜನ ಹೊಡೆದಾಡಿ ಆಸ್ಪತ್ರೆ ಸೇರಿದ್ದಾರೆ. ಎಲ್ಲರೂ ಕೂಡ ಸಮಯೋಚಿತದಿಂದ ವರ್ತಿಸಿ ಎಂದು ತಮ್ಮ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು.
ಇದೇ ವೇಳೆ ಸರ್ಕಾರ ಇದೆ ಎಂದು ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಮಂಜುನಾಥ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ಮತದಾನ ಮಾಡಲು ಬಂದು ತನ್ನ ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಮತ ಚಲಾಯಿಸಿ ಮಾಧ್ಯಮಗಳ ಜೊತೆ ಮಾತನಾಡಿ ಹರ್ಷಿಕಾ, ಪ್ರತಿ ಬಾರಿ ನಾನು ನನ್ನ ತಂದೆ ಜೊತೆ ಬಂದು ವೋಟ್ ಮಾಡುತ್ತಿದ್ದೆ. ಆದರೆ 2 ತಿಂಗಳ ಹಿಂದೆ ತಂದೆ ನಿಧನರಾದರು. ಈ ಬಾರಿ ವೋಟ್ ಮಾಡಲು ಇಷ್ಟವಿಲ್ಲ ಎಂದು ನಾನು ಕಾರಣ ಕೊಡಬಹುದಿತ್ತು. ಪ್ರಜೆಯಾಗಿ ನಾವು ನಮ್ಮ ಹಕ್ಕನ್ನು ಚಲಾಯಿಸಲೇಬೇಕು. ನಮ್ಮ ದೇಶದಲ್ಲಿ ನಮಗೆ ಈಗ ಹಕ್ಕು ನೀಡಿದ್ದಾರೆ. ಸಾಕಷ್ಟು ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೊರಗೆ ಬರಲು ಬಿಡುವುದಿಲ್ಲ. ರಾಜರ ಆಳ್ವಿಕೆ ಇದೆ. ಅವನಿಗೆ ಗಲ್ಲು ಹಾಕಿ ಎಂದರೆ ಗಲ್ಲು ಹಾಕುತ್ತಾರೆ. ಅಂತಹದರಲ್ಲಿ ನಮಗೆ ಹಕ್ಕು ನೀಡಿದ್ದಾರೆ. ಬಂದು ಮತ ಚಲಾಯಿಸಿ ನಮ್ಮ ನಾಯಕರನ್ನು ಗೆಲ್ಲಿಸಿ. ಇದಕ್ಕೆ ಒಂದು ಕಾರಣ ಕೊಟ್ಟು ಸುಮ್ಮನೆ ಮನೆಯಲ್ಲಿ ಇರಬೇಡಿ ಎಂದರು.
ಇಂದು ಬೆಳಗ್ಗೆಯಿಂದ ನನ್ನ ಮನಸ್ಸು ತುಂಬಾ ಭಾರವಾಗಿತ್ತು. ಮತ ಮಾಡಲು ನಾನು ಇಂದು ತಡವಾಗಿ ಬಂದೆ. ಏಕೆಂದರೆ ಚುನಾವಣೆ ಎಂದು ಬಂದಾಗ ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ನನ್ನ ತಂದೆ ನೆನಪಾಗುತ್ತಾರೆ. ಏಕೆಂದರೆ ಚುನಾವಣೆ ಇದ್ದರೆ ನನ್ನ ತಂದೆ ಬೆಳಗ್ಗೆ ಎದ್ದ ತಕ್ಷಣ ನಾವು ಮತ ಚಲಾಯಿಸಬೇಕು ಎದ್ದೇಳಿ ಹೋಗೋಣ ಎಂದು ಎಲ್ಲರಿಗೂ ಮೊದಲೇ ತಯಾರಾಗಿ ನಮಗೆ ಕಾಯುತ್ತಿದ್ದರು. ಆದರೆ ಇಂದು ನಮ್ಮನ್ನು ಈ ರೀತಿ ಕರೆಯುವುದಕ್ಕೆ ನನ್ನ ತಂದೆ ಇರಲಿಲ್ಲ. ಇದು ನಮ್ಮ ಹಕ್ಕು. ನಾವು ಇದನ್ನೇ ಮಾಡಲೇಬೇಕು ಎಂದು ಹೇಳಿದೆ ಎಂದು ಹರ್ಷಿಕಾ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಇದ್ದುಕೊಂಡು ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಿಮಗೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರಿಗೆ ಮತದಾನ ಮಾಡಿ. ಇಂದು ಸುಮಾರು ಕಂಪನಿಗಳಿಗೆ ರಜೆ ಕೊಟ್ಟಿದಾರೆ. ಅವರೆಲ್ಲರು ಬಂದು ಮತದಾನ ಮಾಡಿ. ಯಾರಿಗೂ ವೋಟ್ ಮಾಡಿಲ್ಲ ಎಂದರೆ ನಾವೇ ಮುಂದೆ ಕಷ್ಟಪಡಬೇಕಾಗುತ್ತೆ. ವೈಯಕ್ತಿಕ ಕೆಲಸ ಇದೆ ಎಂದು ಮತ ಚಲಾಯಿಸುವುದನ್ನು ಮರೆಯಬಾರದು. ಎಲ್ಲರಿಗೂ ವೈಯಕ್ತಿಕ ಕೆಲಸ ಇರುತ್ತದೆ. ನನಗೂ ವೈಯಕ್ತಿಕ ಕೆಲಸ ಇದೆ. ಆದರೂ ಸಹ ನಾನು ಮತ ಚಲಾವಣೆಗೆ ಬಂದಿದ್ದೇನೆ. ನೀವು ಕೂಡ ಮತ ಚಲಾಯಿಸಿ ಎಂದು ಹರ್ಷಿಕಾ ಮತದಾರರಲ್ಲಿ ಮನವಿ ಮಾಡಿಕೊಂಡರು.
ಬೆಂಗಳೂರು: ಮತದಾನ ಆರಂಭವಾದ ಕೆಲವೇ ಕ್ಷಣಗಳಲ್ಲಿ ನಕಲಿ ಮತದಾನದ ಹಾವಳಿ ಶುರುವಾಗಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಳ್ಳಂಬೆಳಗ್ಗೆಯೇ ಫ್ರಾಕ್ಸಿ ವೋಟ್ ಹಾವಳಿ ಶುರುವಾಗಿದೆ. ನಾಗದೇವನಹಳ್ಳಿ ರೋಟರಿ ವಿದ್ಯಾಲಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿ ಮತದಾರ ಚಾಲೆಂಜ್ ವೋಟ್ (ಚಹರೆ ಮತ್ತು ಗುರುತು ಹೋಲಿಕೆ ಆಗದಿದ್ದಲ್ಲಿ) ಮಾಡಲು ಮುಂದಾಗಿದ್ದಾರೆ.
ಮನ್ಸೂಖ್ ಪಟೇಲ್ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ನಕಲಿ ಮತದಾನ ಮಾಡಿರುವ ಸಂಶಯ ವ್ಯಕ್ತವಾಗುತ್ತಿದ್ದು, ಚುನಾವಣಾ ಅಧಿಕಾರಿಗಳು ಈ ತಪ್ಪಿಗೆ ಸೂಕ್ತ ಉತ್ತರ ಕೊಡುತ್ತಿಲ್ಲ.
ಕ್ರಮ ಸಂಖ್ಯೆ 1034 ವೋಟರ್ ಐಡಿಗೆ ನಕಲಿ ಮತದಾನ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಮನ್ಸೂಖ್ ಪಟೇಲ್ ಟೆಂಡರ್ ವೋಟಿಂಗ್ (ಮತಪತ್ರದ ಮೂಲಕ ಮತದಾನ ಮಾಡೋದು. ಈ ಪತ್ರವನ್ನು ಚುನಾವಣಾ ಆಯೋಗ ಸೀಲ್ ಮಾಡಿ ತನ್ನ ಬಳಿ ಇಟ್ಟುಕೊಳ್ಳುತ್ತದೆ. ನ್ಯಾಯಾಲಯದ ಸೂಚನೆ ಮೇರೆಗೆ ಈ ಪತ್ರವನ್ನು ತೆರೆಯಲಾಗುತ್ತದೆ)ಗೆ ಪಟ್ಡು ಹಿಡಿದಿದ್ದಾರೆ. ಟೆಂಡರ್ ವೋಟ್ ಮಾಡಲೇ ಬೇಕು ಎಂದು ಮನ್ಸೂಖ್ ಹಠ ಮಾಡುತ್ತಿದ್ದಾರೆ.
ಇದೇ ವೇಳೆ ಭಾನು ವಿದ್ಯಕೇಂದ್ರದಲ್ಲಿ ಲೈಟ್ ಸರಿ ಆಗಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟಿಂಗ್ ಮಿಷನ್ ಸರಿಯಾಗಿ ಕಾಣುತ್ತಿಲ್ಲ. ಯಾರಿಗೋ ಹಾಕೋ ಮತ ಯಾರಿಗೋ ಹಾಕುವಂತೆ ಆಗುತ್ತಿದೆ ಎಂದು ಮತದಾರರು ಆಕ್ರೋಶಗೊಂಡಿದ್ದಾರೆ. ಅದಷ್ಟು ಬೇಗ ಲೈಟಿಂಗ್ ವ್ಯವಸ್ಥೆ ಮಾಡಿ ಮತದಾರರು ಆಗ್ರಹಿಸಿದ್ದಾರೆ.
ಹಾಸನ: ಹಣ ಹಂಚುವುದಕ್ಕೆ ಬಂದಿದ್ದಾರೆ ಎಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದಂಡಿಗನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ನಂಬಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕೆ.ಆರ್ ಪೇಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆದಿದ್ದು, ಬಿಜೆಪಿಯ ನಾರಾಯಣಗೌಡ ಮತ್ತು ಜೆಡಿಎಸ್ ನ ಕೆಬಿ ಚಂದ್ರಶೇಖರ್ ನಡುವೆ ಮಹಾಯುದ್ಧವೇ ನಡೆಯುತ್ತಿದೆ. ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಕದನ ಕಣ ರಂಗೇರಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ನಡುವೆ ಕೆ.ಆರ್ ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಗಲಾಟೆ ನಡೆದು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದರ ಬೆನ್ನಲ್ಲಿಯೇ ಕೆಲ ಗಂಟೆಗಳ ನಡುವೆ ಹಾಸನ ಜಿಲ್ಲೆಯಲ್ಲಿಯೂ ಗಲಾಟೆ ನಡೆದು ಇಬ್ಬರು ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ.
ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಆಕಸ್ಮಿಕವಾಗಿ ಬೆಂಗಳೂರಿನ ವಿಜಯನಗರ ಮೂಲದ ರವೀಂದ್ರ ಎಂಬವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದ ಸ್ನೇಹಿತನ ಮನೆಗೆ ತನ್ನ ಸಹಪಾಠಿಗಳೊಂದಿಗೆ ಬಂದಿದ್ದರು. ರವೀಂದ್ರ ಬಂದಿರುವ ವಿಚಾರವನ್ನು ಜೆಡಿಎಸ್ ಕಾರ್ಯಕರ್ತರು ಸೂರಜ್ ರೇವಣ್ಣನವರಿಗೆ ದೂರವಾಣಿ ಮುಖಾಂತರ ತಿಳಿಸಿದ್ದರು. ರವೀಂದ್ರ ಕೆ.ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರವಾಗಿ ಹಣ ಹಂಚಲು ಬಂದಿದ್ದಾರೆ ಎಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಮತ್ತು ಹೊರಬಂದಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮತ್ತು ಗಂಭೀರವಾಗಿ ಗಾಯಗೊಂಡ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಸಹಪಾಠಿಗಳಾದ ಆನಂದ್ ಮತ್ತು ಸಂತೋಷ್ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಪ್ಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲತೆ ಕಂಡಿದ್ದರೂ, ಕೈ ಮೀರಿ ಹೋಗಿದ್ದರಿಂದ ಡಿಎಆರ್ ತುಕಡಿಯನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧ ಸ್ಥಳದಲ್ಲಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣನೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಗೊಳ್ಳುವ ತನಕ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ವಿಜಯಪುರ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏನು ಮಲ್ಲಿಕಾ ಶೆರಾವತ್, ರಾಖಿ ಸಾವಂತ್, ಸನ್ನಿ ಲಿಯೋನ್‍ನಾ ಎಂದು ಕಾಂಗ್ರೆಸ್ ಬೆಳಗಾವಿ ಕಾರ್ಯಕರ್ತೆ ವಾಗ್ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಮಾಧ್ಯಮಗಳಲ್ಲಿ ನಮ್ಮನ್ನು ಸ್ವಲ್ಪ ಹೈಲೆಟ್ ಮಾಡಿ ತೋರಿಸಿ. ಯಾವಾಗಲೂ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ನನ್ನು ತೋರಿಸುತ್ತೀರಾ. ಅವಳೇನು ಮಹಾರಾಣಿ ನಾ? ಅಥವಾ ಲಕ್ಷ್ಮಿ¸ ಏನು ಮಲ್ಲಿಕಾ ಶೆರಾವತ್, ರಾಖಿ ಸಾವಂತ್ ಹಾಗೂ ಸನ್ನಿ ಲಿಯೊನ್ ನಾ? ಲಕ್ಷ್ಮಿ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಹಾಯದಿಂದ ಎಲ್ಲ ಕೆಲಸವನ್ನು ಮಾಡಿಸಿಕೊಂಡಿದ್ದಾಳೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಕಾರ್ಯಕರ್ತೆ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಪರವು ವಾಗ್ದಾಳಿ ನಡೆಸಿದ್ದಾರೆ. ಗಜಾನನ ಮಂಗಸೂಳಿ ಡಮ್ಮಿ ಕ್ಯಾಂಡಿಡೇಟ್. ಮಂಗಸೂಳಿ ಪರವಾಗಿ ಎಲ್ಲಿಯೇ ಪ್ರಚಾರಕ್ಕೆ ಹೋದರು ಜನರು ತಂದೆ- ತಾಯಿಯನ್ನೆ ಹೊರಗಡೆ ಇಟ್ಟಿದ್ದಾನೆ ಎಂದು ಹೇಳುತ್ತಾರೆ. ಅವನ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ನಮಗೆ ಹಣ ಕೊಡುತ್ತಿಲ್ಲ ಸುಮ್ಮನೆ ಪಕ್ಷದಲ್ಲಿದ್ದೇವೆ ಎಂದು ಪ್ರಚಾರಕ್ಕಾಗಿ ಓಡಾಡುತ್ತಿದ್ದೇವೆ ಎಂದು ತಮ್ಮ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ಣ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವು ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ಗೋಕಾಕ್ ಕ್ಷೇತ್ರದ ಧೂಪದಾಳ ಗ್ರಾಮದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಯಾರಿಗೂ ಕೆಟ್ಟದ್ದನ್ನು ಬಯಸಿದವರಲ್ಲ. ಅವರನ್ನು ಹತ್ತಿರದಿಂದ ನೋಡಲು ಆರಂಭಿಸಿದಾಗಿನಿಂದ ಅವರಲ್ಲಿರುವ ಮುಗ್ಧತೆ ಅರ್ಥವಾಯಿತು. ರಮೇಶ್ ಜಾರಕಿಹೊಳಿ ಅವರನ್ನು ನಾನು ಗೋವಿಗೆ ಹೋಲಿಸುತ್ತೇನೆ. ಗೋವು ಹಾಲು ಕೊಡುತ್ತದೆಯೇ ಹೊರತು, ವಿಷ ಕೊಡುವುದಿಲ್ಲ. ಕೆಲವರು ಹಾಲು ಕುಡಿದು ವಿಷ ಕೊಡುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಅಂತಹ ವ್ಯಕ್ತಿಯಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಸಚಿವರಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನಾವು 17 ಮಂದಿ ಶಾಸಕರು ಮುಂಬೈನ ಹೋಟೆಲ್ ಸ್ನೇಹಿತರು. ಈ ಲಿಸ್ಟ್ ನಲ್ಲಿ ಅನರ್ಹ ಶಾಸಕ ಆರ್.ಶಂಕರ್ ಅವರು ಕೂಡ ಇದ್ದಾರೆ. ಅವರು ಕೂಡ ಸಚಿವರಾಗುತ್ತಾರೆ ಎಂದು ತಿಳಿಸಿದರು.
ನೀವು ಕುರುಕ್ಷೇತ್ರ ಸಿನಿಮಾ ನೋಡಿದ್ದೀರಾ? ಎಷ್ಟು ಜನ ನೋಡಿದ್ದೀರಾ ಕೈ ಎತ್ತಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಜನರು ಕೈ ಎತ್ತುತ್ತಿದ್ದಂತೆ ನಿಮ್ಮ ದುಡ್ಡು ನನಗೆ ಬಂದಿದೆ ಎಂದರು. ಬಳಿಕ ಮಾತು ಮುಂದುವರಿಸಿ, ಬಿ.ಎಸ್.ಯಡಿಯೂರಪ್ಪ ಅವರು ಕರ್ಣ ಇದ್ದಂತೆ. ಸಿಎಂ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ. ಅವರು ಕೊಟ್ಟ ಮಾತನ್ನು ಎಂತಹ ಸಂದರ್ಭದಲ್ಲಾದರೂ ಉಳಿಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಅವರನ್ನು ನಂಬಿ 17 ಜನ ಶಾಸಕರು ಬಿಜೆಪಿಗೆ ಸೇರಿದ್ವಿ ಎಂದರು.
17 ಜನ ಶಾಸಕರಲ್ಲಿ ಯಾರೂ ದಡ್ಡರಿಲ್ಲ. ಒಬ್ಬರಿಗಿಂತ ಒಬ್ಬರು ಮೇಧಾವಿಗಳಿದ್ದಾರೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದೇನೆ ಎಂದು ಹೇಳಿದರು.